ಅಂಕಣ

ಸಂಸ್ಕೃತ-ಸಂಸ್ಕೃತಿ ಅವಳಿ ಗ್ರಾಮಗಳು

ಭಾರತ ದೇಶದ ಮೂಲ ಭಾಷೆ, ಅಂದರೆ ಸನಾತನ ಕಾಲದಿಂದಲು ಜೀವಿಸಿ ಬಂದಿರುವ ಭಾಷೆಯೆಂದರೆ ಸಂಸ್ಕೃತ! ಕಾಲ ಹರೆದು ಬಂದಂತೆ, ಭಾಷೆಗಳು ಹಲವಾದವು ಮತ್ತು ಆ ವಿವಿದತೆಯಲ್ಲಿಯೇ ನಮ್ಮ ಗುರುತಾಯಿತು. ಆದರೆ ಇಂದಿಗೂ ಸಹ ನಮ್ಮ ದೇಶದ ಎಲ್ಲಾ ಭಾಷೆಗಳಿಗೂ ದೇವ ಭಾಷೆಯಾದ ಸಂಸ್ಕೃವೇ ಮೂಲವೆಂದು ಎಲ್ಲಾ ಭಾಷಾಪರಿಣಿತರು ಮತ್ತು ಇತಿಹಾಸಕಾರರು ಒಪ್ಪುತ್ತಾರೆ. ಅದೇನೆ ಇರಲಿ, ದೇವ ಭಾಷೆಯಾದ ಸಂಸ್ಕೃತವಿಂದು ಪಂಡಿತರ ಭಾಷೆಯಾಗಿದೆ. ಜನ ಸಾಮಾನ್ಯರ ಮಧ್ಯದಲ್ಲಿ ದಿನ ನಿತ್ಯ ಆಡುವ ಸರಳ ನುಡಿ ಭಾಷೆಯಾಗಿ ಅದು ಇಂದು ಇಲ್ಲ. ಇಂತಹ ಕಾಲ ಘಟ್ಟದಲ್ಲಿ ನಮ್ಮ ಇಡೀ ದೇಶಕ್ಕೆ ಹೆಮ್ಮೆ ತರುವ ವಿಸ್ಮಯ ಓಂದು ನಮ್ಮ ಕರ್ಣಾಟಕದಲ್ಲಿಯೇ ಇದೆ! ಅದೇನಪ್ಪಾ ಅಂದರೆ, ಶಿವಮೊಗ್ಗ ಜಿಲ್ಲೆಯಲ್ಲಿ ಇರುವ ಸಂಸ್ಕೃತ-ಸಂಸ್ಕೃತಿ ಅವಳಿ ಗ್ರಾಮಗಳು. ’ಮತ್ತೂರು’ ಮತ್ತು ’ಹೊಸಹಳ್ಳಿ’ ಎಂಬ ಈ ಎರಡೂ ಗ್ರಾಮಗಳಲ್ಲಿ ಜನರು ಸಂಸ್ಕೃತದಲ್ಲಿಯೇ ಸಂಭಾಷಣೆ ಮಾಡುತ್ತಾರೆ ಎಂಬುದು ಒಂದು ವಿಶಿಷ್ಟ ಸಂಗತಿಯೇ ಸರಿ.

ಮತ್ತೂರು ಗ್ರಾಮವು ’ಸಂಸ್ಕೃತ’ ಗ್ರಾಮವೆಂದು ಮತ್ತು ಹೊಸಹಳ್ಳಿ ಗ್ರಾಮವು ’ಗಮಕ’ ಗ್ರಾಮವೆಂದು ಪ್ರಸಿದ್ಧಿ ಹೊಂದಿವೆ. ಹೆಸರಲ್ಲಿಯೇ ಗ್ರಾಮದ ಜೀವಾಳವನ್ನು ನಾವು ಅರಿಯ ಬಹುದು, ಮತ್ತು ಆ ಎರಡೂ ಹೆಸರುಗಳು ಈ ಅವಳಿ ಗ್ರಾಮಗಳಿಗೆ ಅನ್ವರ್ಥ ನಾಮವಾಗಿ ಒದಗಿಬಂದಿವೆ. ಹೆಸರು ಹಾಗಿರಲಿ, ಎರಡೂ ಗ್ರಾಮದ ಜನರು ಸಂಸ್ಕೃತದಲ್ಲಿ ಸಂಭಾಷಣೆ ಮಾಡುವುದೂ ಅಲ್ಲದೆ, ’ಗಮಕ’ ಇತ್ಯಾದಿ ಜಾನಪದ ಕಲೆಗಳನ್ನು ಉಳಿಸಿ ಬೆಳಸಿಕೊಂಡು ಬರುತ್ತಿದ್ದಾರೆ.
ಎರಡೂ ಗ್ರಾಮಗಳ ನಡುವಿನಲ್ಲಿ ತುಂಗಾನದಿಯ ಹೊಳೆ ಹರಿಯುತ್ತದೆ. ನೀವು ಆ ಅವಳಿ ಗ್ರಾಮಕ್ಕೆ ಭೇಟಿ ನೀಡಿದ್ದಲ್ಲಿ ಒಂದು ಸಿನೆಮಾ ಸ್ಟೂಡಿಯೋ ಅಥವ ’ಸೆಟ್ಟಿಂಗ್ಸ್’ನ ದೃಶ್ಯ ನಿಮ್ಮ ಅನುಭವಕ್ಕೆ ಬರುತ್ತದೆ; ಅಷ್ಟು ಸ್ವಚ್ಛವಾಗಿ ಕಣ್ಣು ತಂಪಾಗುವಂತೆ ಗ್ರಾಮವನ್ನು ಬೆಳೆಸುತ್ತಾ ಬಂದಿದ್ದಾರೆ. ಸುಮಾರು 5000 ಜನ ಈ ಗ್ರಾಮಗಳಲ್ಲಿ ವಾಸಿಸುತ್ತಿರ ಬಹುದು. ’ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು’ ಎಂಬ ಗಾದೆ ಮಾತಿನಂತೆ, ಸಣ್ಣ ಯುಗಳ-ಗ್ರಾಮವಾದರು ಇದರ ಖ್ಯಾತಿ ಎಲ್ಲೆಡೆ ಹರಡುತ್ತಿದೆ. ಹೂವಿನ ಸುಗಂಧ ಗಾಳಿ ಹರಿದಲ್ಲಿ ಮಾತ್ರ ತೋರ್ಪಡುತ್ತದೆ, ಆದರೆ ಸಜ್ಜನರ ಸೌಜನ್ಯ, ಮಾತು, ಮತ್ತು ನಡವಳಿಕೆ ಎಲ್ಲೆಡೆ ಹರುಡತ್ತದೆ. ಅಂತೆಯೇ ಈ ಯುಗಳ-ಗ್ರಾಮದ ಭಾಷೆ, ಸಂಸ್ಕೃತ, ಮತ್ತು ಜೀವನ ನಮ್ಮೆಲರಿಗೆ ಸ್ಫೂರ್ತಿದಾಯಕವಾಗಿದೆ.

ಮತ್ತೂರು ಮತ್ತು ಹೊಸಹಳ್ಳಿ ಗ್ರಾಮದ ಪ್ರತಿಯೊಬ್ಬರ ವೇಷ-ಭೂಷಣಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಗಂಡಸರಿಗೆ ಪಂಚೆ ಮತ್ತು ಶಲ್ಯ ಮತ್ತು ಹೆಂಗಸರಿಗೆ ಸೀರೆ, ಇವೇ ದಿನ ನಿತ್ಯದ ಉಡುಪಾಗಿವೆ. ಇಲ್ಲಿನ ಜನಕ್ಕೆ ಖಾಸಗೀ ಜೀವನದ ಹಕ್ಕುಗಳು, ಅಭಿವ್ಯಕ್ತಿ ಸ್ವಾತಂತ್ರದ ಧ್ವನಿಗಳು, ಮತ್ತು ವಿಭಕ್ತ ಕುಟುಂಬದ ಕಲ್ಪನೆ ಇಲ್ಲವಾಗಿದೆ. ಇಡೀ ಗ್ರಾಮವೇ ಒಂದು ಕುಟುಂಬವೋ ಎಂಬಂತೆ ತೋರ್ಪಡುತ್ತದೆ. ಭಾರತದ ಮೂಲ ಕುಟುಂಬ ಪದ್ಧತಿಯ ಸಾಕಾರ ರೂಪವಾಗಿ ಅವಿಭಕ್ತ ಕುಟುಂಬಗಳು ಇಲ್ಲಿ ಇನ್ನೂ ನಮ್ಮ ದರ್ಶನಕ್ಕಿವೆ. ಸ್ವಚ್ಛ-ಗ್ರಾಮ, ಅವಿಭಕ್ತ ಕುಟುಂಬಗಳು, ಸಂಸ್ಕೃತದಲ್ಲಿ ವ್ಯವಹರಿಸುವ ವೈಶಿಷ್ಟ್ಯತೆ, ಮತ್ತು ಸಜ್ಜನ-ಸುಸಂಸ್ಕೃತ ನಡವಳಿಕೆ ಇವೇ ಈ ಯುಗಳ=ಗ್ರಾಮದ ಅಸ್ಮಿತೆಗಳು.
ಮತ್ತೂರಿನ ಕೃಷ್ಣ ಮೂರ್ತಿಗಳು ಸಂಸ್ಕೃತದ ಪಾಂಡಿತ್ಯಕ್ಕೆ ಹೆಸರಾದರೆ, ಹೊಸಹಳ್ಳಿಯ ಕೇಶವ ಮೂರ್ತಿಗಳು ’ಗಮಕ’ವಾಚನಕ್ಕೆ ಹೆಸರಾಗಿದ್ದಾರೆ. ಎರಡೂ ಗ್ರಾಮಗಳ ವಿಶಿಷ್ಟ ಬಲ-ಸಾಮರ್ಥ್ಯಗಳ ಸ್ವರೂಪವಾಗಿ ಭಾರತದ ಜನದ ಗ್ರಾಮ್ಯಾಕಾಶದಲ್ಲಿ ಎರಡು ತಾರೆಗಳಂತೆ ಇವರುಗಳು ತೋರ್ಪಡಿಸುತ್ತಿದ್ದಾರೆ. ದುರದೃಷ್ಟವಶಾತ್ ಇಂದು ಮತ್ತೂರಿನ ಕೃಷ್ಣ ಮೂರ್ತಿಗಳು ನಮ್ಮೊಡನೆ ಇಲ್ಲ. ಅದೇನೆ ಇರಲಿ ಈ ಯುಗಳ ಗ್ರಾಮಗಳ ಕೊಡುಗೆಗಳನ್ನು ನೆನೆಯದೆ ಇರಲು ಸಾಧ್ಯವಿಲ್ಲ. ಸಂಸ್ಕೃತ ಭಾಷೆ ಮತ್ತು ಭಾರತೀಯ ಸಂಸ್ಕೃತಿಯನ್ನು ತಲೆ ಮಾರುಗಳು ಕಾಪಾಡುವಂತೆ ಜೋಪಾನವಾಗಿ ಕಾಪಾಡಿಕೊಂಡು ಬರುತ್ತಿದ್ದಾರೆ.

ಇಲ್ಲಿನ ಜನರು ಮುಖ್ಯವಾಗಿ ಅಡಿಕೆ ಬೆಳೆಯಿಂದ ಜೀವನೋಪಾಯದ ದಾರಿ ಮಾಡಿಕೊಂಡಿದ್ದಾರೆ. ಇನ್ನು ಸ್ವಲ್ಪ ಬೇರೆ ಬೆಳೆಗಳೂ ಇವೆ. ಇನ್ನು ಇಲ್ಲಿ ಸಂಸ್ಕೃತ ಪಾಠಶಾಲೆ, ಗಮಗ ಪಾಠಶಾಲೆ ಮತ್ತು ಗುರುಕುಲಗಳಿವೆ. ಮತ್ತೂರು ಗ್ರಾಮವನ್ನು ಪ್ರವೇಶ ಮಾಡುತ್ತಿದ್ದಂತೆಯೆ ಅಲ್ಲಿಗೆ ನಿಮ್ಮನ್ನು ಸ್ವಾಗತ ಮಾಡಲು ಸಂಸ್ಕೃತದಲ್ಲೇ “स्वागतं” ಎಂದು ಬೋರ್ಡ್ ಹಾಕಿದ್ದಾರೆ. ಇಲ್ಲಿನ ಸಂಸ್ಕೃತ ಶಾಲೆಯ ಮಧ್ಯದಲ್ಲಿ ಒಂದು ಬೃಹದಾಕಾರದ ಸರಸ್ವತೀ ದೇವಿಯ ಮೂರ್ತಿಯೊಂದಿರುವುದು ಅಲ್ಲಿನ ವಿಶೇಷ ಆಕರ್ಷಣೆಯಾಗಿದೆ. ಇನ್ನು ಅದ್ಭುತವಾದ ದೇವಾಲಯಗಳನ್ನು ಕೂಡ ನಾವು ಇಲ್ಲಿ ಕಾಣಬಹುದು. ಇಲ್ಲಿನ ಜನ ಪ್ರಧಾನವಾಗಿ ಸಂಕೇತಿ-ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಸಂಸ್ಕೃತವಲ್ಲದೆ ಇಲ್ಲಿ ಕನ್ನಡ ಮತ್ತು ಸಂಕೇತಿ ಭಾಷೆಗಳ ಪ್ರಯೋಗವೂ ಉಂಟು. ಒಂದು ಊಹೆಯ ಪ್ರಕಾರ ಇಲ್ಲಿನ ಜನ ಸುಮಾರು 600 ವರ್ಷಗಳ ಹಿಂದೆಯೇ ತಮಿಳುನಾಡು ಮತ್ತು ಕೆರಳ ಪ್ರದೇಶಗಳಿಂದ ಒಲಸೆ ಬಂದದ್ದು ಎಂದು ಹೇಳುತ್ತಾರೆ. ಇಲ್ಲಿನ ಮಕ್ಕಳಿಗೆ ಸುಮಾರು 8-10 ವಯಸ್ಸಿನಿಂದಲೇ ವೇದಾಧ್ಯಯನ ಮಾಡಿಸುತ್ತರೆ. ಇನ್ನು ಇಲ್ಲಿನ modern ಜೀವನದ ಪರಿಚಯ ಬೇಕಿದ್ದಲಿ, ಸಂಶಯವಿಲ್ಲದೆ ಪ್ರತಿ ಮನೆಗು ಒಬ್ಬ software engineer ಎಂಬಂತೆ ಎಲ್ಲಾ ಮನೆಗಳಲ್ಲು ’techie’ಗಳನ್ನು ಕಾಣಬಹುದು. ಆಧುನಿಕ ಶಿಕ್ಷಣದಲ್ಲಿಯೂ ಕೂಡ ಇವರಾರಿಗೂ ಕಮ್ಮಿ ಇಲ್ಲ. ಇಲ್ಲಿ ಯಾವ ಪೋಲಿಸ್ ಕೇಸ ಕೂಡ ದಾಖಲಾಗೊಲ್ಲ, ಮತ್ತು ಇಲ್ಲಿಯ ತನಕ ಇಲ್ಲಿ ಯಾವ ಆಸ್ತಿ ವಿವಾದವೂ ಹುಟ್ಟಿಲ್ಲ. ಕಳ್ಳ-ಚಾಕರರ ಭಯವಿಲ್ಲಿ ಯಾರಿಗೂ ಇಲ್ಲ. ಇಲ್ಲಿ ಪ್ರತಿ ಓಣಿಯು, ಪ್ರತಿ ಬೀದಿಯು, ಮತ್ತು ಇಡೀಯ ಗ್ರಾಮವು ಒಂದು ಕುಟುಂಬವಿದ್ದಂತೆಯೇ. ಎಲ್ಲರು ಎಲ್ಲ ಮನೆಗಳಿಗೂ ಓಡಾಡುತ್ತಾರೆ. ನನ್ನ ಮನೆ ತನ್ನ ಮನೆ ಎಂಬ ಭಾವನೆ ಇಲ್ಲ. ನಮ್ಮ ಭಾರತೀಯ ಕೌಟುಂಬಿಕ ಜೀವನ ಮೌಲ್ಯಗಳ ಆಪ್ತ ನಿದರ್ಶನ ಇದಾಗಿದೆ.

ಇಲ್ಲಿನ ವಿದ್ಯಾರ್ಥಿಗಳು ಅಂದರೆ ಮತ್ತೂರು ಶಾಲೆಯ ಹುಡುಗರು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿ ಬಾರಿಯೂ ಜಿಲ್ಲಾ ಮಟ್ಟದಲ್ಲಿ ಉತ್ತಮ ಶ್ರೇಣಿಯನ್ನು ಪಡೆದು ತಮ್ಮ ಶಾಲೆಯಿಂದ ಉತ್ತೀರ್ಣಗೊಳ್ಳುತ್ತಾರೆ. ವೇದಾಧ್ಯಯನ ಮತ್ತು ಸಂಸ್ಕೃತ ಪಠನ ಸಂಭಾಷಣಗಳಿಂದ ಇರವು ವಿದ್ಯೆಯಲ್ಲಿ ಅಂದರೆ ನೆನಪಿನ ಶಕ್ತಿ, ಏಕಾಗ್ರತೆ, ಮತ್ತು ಬುದ್ಧಿವಂತಿಕೆಯ ಮತ್ತಿತರ ಆಯಾಮಗಳಲ್ಲಿ ನಿಪುಣರಾಗಿದ್ದಾರೆ. ಒಂದು ಸುಭಾಷಿತ ಹೀಗೆ ಹೇಳುತ್ತದ :- विद्या ददाति विनयं विनयाद्याति पात्रताम् ।
पात्रत्वाद्धनमाप्नोति धनाद्धर्मं ततः सुखम् ॥
ಅರ್ಥ:- ವಿದ್ಯೆಯಿಂದ ವಿನಯ ದೊರಕುತ್ತದೆ, ವಿನಯದಿಂದ ಬೆಲೆ, ಬೆಲೆಯಿಂದ ಸಂಪತ್ತು, ಮತ್ತು ಸಂಪತ್ತಿನಿಂದ ಸುಖ. ಈ ಯುಗಳ ಗ್ರಾಮಗಳು ಈ ಸುಭಾಷಿತಕ್ಕೆ ಒಂದು ಜೀವಂತ ನಿದರ್ಶನವಾಗಿದೆ. ಸಂಸ್ಕೃತ-ಸಂಸ್ಕೃತಿ-ಸಂಸ್ಕ್ರಾರಗಳ ಹೊಳೆಯು ತುಂಗಾ ನದಿಯ ದಡದಲ್ಲಿ ವರ್ಷಗಳಿಂದಲು ಹರೆದು ಬಂದಿದೆ,

ಸಾವಿರ ವರುಷದ ಜೀವನ ದರ್ಶನ ಸಂಸ್ಕೃತ ಜೀವನ ಸಮ್ಯಕ್ ಜೀವನ
ಸಂಧ್ಯಾರಾಧನ ಋತಮಯ ಚೇತನ ಸಾತ್ವಿಕ ಬಾಳ್ವೆಗೆ ಮೌಲ್ಯದ ಚಿಂತನ |
ಕಲೆಗಳ ಪೋಷಣ ವಿದ್ಯಾರಾಧನ ಗಾಯನ ನಾಟ್ಯದ ದೈವಾರಾಧನ
ತುಂಗಾ ನದಿಗಿದು ತಾರಾ ದರ್ಶನ ಭಾರತ ಮೇಳನ ರತ್ನ ಪ್ರದರ್ಶನ ||

ಶಿವಮೊಗ್ಗದ ಕಡೆ ನಾವು ಪ್ರಯಾಣ ಮಾಡಲು ಹೊರೆಟಾಗ ಒಮ್ಮೆ ಮತ್ತೂರು-ಹೊಸಹಳ್ಳಿಗೆ ಭೇಟಿ ನೀಡೋಣ. ಸಂಸ್ಕೃತ-ಸಂಸ್ಕೃತಿ-ಸಂಸ್ಕ್ರಾರ ಭರಿತ ಜೀವನದ ಚಾಲ್ತಿಯನ್ನು ವೀಕ್ಷಿಸೋಣ.

Anup Vittal

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!