ಅಂಕಣ

ಮತಾಂತರದ ಅವಾಂತರ ಹೀಗೂ ಇರತ್ತೆ!

ಭಾರತದಲ್ಲಿ ನಡೆಯುತ್ತಿರುವ ಮತಾಂತರಗಳ ಬಗ್ಗೆ “ಸೀತಾರಾಮ್ ಗೋಯಲ್” ಅವರ “ಹುಸಿ ಜಾತ್ಯಾತೀತವಾದ” (ಅನುವಾದಿತ ಕೃತಿ) ಪುಸ್ತಕವನ್ನು ಓದಿದ್ದೆ. ಈ ಪುಸ್ತಕ, ಸ್ವತಂತ್ರ-ಪೂರ್ವ ಭಾರತದಲ್ಲಿ ಮತ್ತು ಸ್ವತಂತ್ರ್ಯೋತ್ತರ ಭಾರತದಲ್ಲಿ ಆದ ಕ್ರಿಶ್ಚಿಯನ್ ಮತಾಂತರಗಳ ಬಗ್ಗೆ ಆಳವಾದ ಬೆಳಕು ಚೆಲ್ಲುತ್ತದೆ. ಮತಾಂತರಕ್ಕೆ ಎಲ್ಲಿಂದ ಹಣ ಬರುತ್ತದೆ? ಹೇಗೆ ಬರುತ್ತದೆ? ಮತಾಂತರ ಮಾಡಲು ಮತಾಂತರಿಗಳು ಎಂಥ ಆಮಿಷಗಳನ್ನು ಒಡ್ಡುತ್ತಾರೆ? ಮತಾಂತರ ತಡೆಯುವಲ್ಲಿ ನಮ್ಮ ಸರಕಾರದ ವೈಫಲ್ಯಗಳೇನು? ರಾಜಕೀಯವಾಗಿ ಕ್ರಿಶ್ಚಿಯನ್ ಮಿಶನರಿಗಳು ಹೇಗೆ ಭಾರತದಲ್ಲಿ ನಿಯಂತ್ರಣ ಸಾಧಿಸಿವೆ? ಯಾವ-ಯಾವ ಕಾನೂನುಗಳು ಮತಾಂತರವನ್ನು ತಡೆಯಲು ಯಶಸ್ವಿಯಾದವು ಮತ್ತು ಕಾಲಕ್ರಮೇಣ ಹೇಗೆ ಆ ಕಾನೂನುಗಳನ್ನು ಕುತಂತ್ರದಿಂದ ವ್ಯವಸ್ಥಿತವಾಗಿ ಬಗ್ಗು ಬಡಿಯಲಾಯಿತು? ಎಂಬ ಹಲವಾರು ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿ ಪುಸ್ತಕವಾಗಿಸಿದ್ದಾರೆ. ನಿಜವಾಗಿಯೂ ಭಾರತದಲ್ಲಿ ಇಷ್ಟು ಘೋರ ಮಟ್ಟದಲ್ಲಿ ಕ್ರಿಶ್ಚಿಯನ್ ಮತಾಂತರ ನಡೆಯುತ್ತಿದೆ ಎಂದು ತಿಳಿದು ಬೆರಗಾಗಿದ್ದೆ. ಜೊತೆಗೆ ಮತಾಂತರ ಪ್ರಕ್ರಿಯೆಯ ಬಗ್ಗೆ ಕುತೂಹಲ ಹೆಚ್ಚಾಗಿತ್ತು. ನನ್ನ ಕುತೂಹಲ ಇನ್ನೂ ಹೆಚ್ಚಿಸುವ ಮತ್ತು ತುಂಬಾ ಕಳವಳಕಾರಿಯಾದ ಒಂದು ಘಟನೆ ಈ ಬಾರಿಯ ಅಗಷ್ಟ್ 15ರಂದು ನಡೆಯಿತು.

ಸ್ವತಂತ್ರ ದಿನೋತ್ಸವದ ಆಚರೆಣೆಗೆಂದು ನಮ್ಮೂರಿಗೆ ತೆರಳುತ್ತಿದ್ದೆ. ಬೆಂಗಳೂರಿನಿಂದ ಹಾವೇರಿ ತಲುಪಿದಾಗ ಸಮಯ ಸರಿಯಾಗಿ ಮುಂಜಾನೆ 6 ಘಂಟೆ 30 ನಿಮಿಷವಾಗಿತ್ತು, ಹಾವೇರಿಯಿಂದ ನಮ್ಮ ಹಳ್ಳಿಗೆ ಹೋಗಲು ಬಸ್‍‍ಗಾಗಿ ಕಾಯುತ್ತಿದ್ದೆ. ಬೇಗನೆ ಮನೆ ತಲುಪಿ ನನ್ನ ಹಳ್ಳಿಯ, ನನ್ನ ಕಲಿತ ಶಾಲೆಯ ಸ್ವತಂತ್ರ್ಯೋತ್ಸವದಲ್ಲಿ ಭಾಗಿಯಾಗಲು ಕಾತುರನಾಗಿದ್ದೆ. ಅದೇ ಸಮಯಕ್ಕೆ ಹಾವೇರಿಯಿಂದ ಶಿರಶಿಗೆ ಹೋಗುವ ಬಸ್, ಡೀಪೋದಿಂದ ನಿಲ್ದಾಣಕ್ಕೆ ಆಗಮಿಸಿತು. ಬಸ್ಸನ್ನೇರಿ ಬಾಗಿಲಿಗೆ ಹತ್ತಿರವಿರುವ ಕಿಟಕಿಯ ಪಕ್ಕದ ಸೀಟಿನಲ್ಲಿ ಕುಳಿತೆ. ಕೆಲವೇ ನಿಮಿಷಗಳಲ್ಲಿ ಒಬ್ಬ ಯುವಕ ಒಂದು ದೊಡ್ಡ ರಟ್ಟಿನ ಡಬ್ಬ ಮತ್ತು ತುಂಬಾ ಭಾರವೆನಿಸುವ ಒಂದು ಚೀಲದೊಂದಿಗೆ ಬಸ್ಸನ್ನೇರಿದ. ತನ್ನ ಲಗೇಜುಗಳನ್ನು ನಾನು ಕುಳಿತ ಸೀಟ್‍ನ ಪಕ್ಕದಲ್ಲಿರಿಸಿ, ನನ್ನ ಪಕ್ಕದಲ್ಲಿ ಕುಳಿತ. ಅವನ ಬಟ್ಟೆ ತುಂಬಾ ಹೊಲಸಾಗಿತ್ತು ಮತ್ತು ಅವನ ವೇಷ-ಭೂಷಣ ಹಳ್ಳಿಗಾಡಿನ ಜನಾಂಗದವನಂತಿತ್ತು. ಸಾಮಾನ್ಯವಾಗಿ ಸಹ-ಪ್ರಯಾಣಿಕರನ್ನು ಮಾತನಾಡಿಸುವ ಹವ್ಯಾಸವಿರುವ ನಾನು, ಅವನನ್ನು ಮಾತನಾಡಿಸಲು ಸ್ವಲ್ಪ ಕಳವಳವಾಯಿತು. ಅವನಿಗೆ ಕನ್ನಡ ಬರುತ್ತದೆಯೋ ಇಲ್ಲವೋ ಎಂಬುದು ನನ್ನ ಕಳವಳಕ್ಕೆ ಮುಖ್ಯ ಕಾರಣವಾಗಿತ್ತು. ಏನಾದರೂ ಆಗಲಿ ಎಂದು, “ಆ ಡಬ್ಬದಲ್ಲಿ ಏನಿದೆ?” ಎಂದು ಪ್ರಶ್ನೆ ಮಾಡಿಯೇ ಬಿಟ್ಟೆ. ಆ ಯುವಕ “ದೇವರ ಫೋಟೋಗಳಿವೆ” ಎಂದು ಉತ್ತರಿಸಿದ. ಭಾಷೆ ಹಳ್ಳಿಗಾಡಿನದೇ ಆಗಿತ್ತು. ನಾನು ಮುಂದುವರೆದು, “ಯಾವ ದೇವರ ಫೋಟೋಗಳು?” ಎಂದು ಮತ್ತೆ ಪ್ರಶ್ನಿಸಿದೆ. ಅವನು, “ಎಲ್ಲ ದೇವರ ಫೋಟೋಗಳೂ ಇವೆ. ಗಣಪತಿ, ಕೃಷ್ಣ, ಶಿವ, ಆದಿಶಕ್ತಿ, ಹನುಮಂತ……” ಎಂದು ಉತ್ತರಿಸಿದ. ನಾನು “ಓಹ್..!!” ಎಂದು ಸುಮ್ಮನಾದೆ. ಅವನು ಮತ್ತೆ ಮುಂದುವರಿದು, “ನಾನು ಇವನ್ನೆಲ್ಲ ಶಿರಶಿಯ ಮಾರಿಕಾಂಬ ಜಾತ್ರೆಯಲ್ಲಿ ಮಾರಲು ಒಯ್ಯುತ್ತಿದ್ದೇನೆ. ನಮ್ಮೂರು ಚೆನ್ನಗಿರಿ ಹತ್ತಿರ ಒಂದು ಹಳ್ಳಿ. ಪ್ರತೀ ಜಾತ್ರೆಯಲ್ಲೂ ನಾನು ಶಿರಶಿಗೆ ಹೋಗಿ ಫೋಟೋಗಳನ್ನು ಮಾರುತ್ತೇನೆ” ಎಂದ. ನಾನು ಹುಬ್ಬೇರಿಸಿ ಮುಗುಳ್ನಗುತ್ತಾ “ಹೂಂ..” ಎಂದೆ.

ಸ್ವಲ್ಪ ಸಮಯದ ನಂತರ ಬಸ್ಸಿನ ಸಾಕಷ್ಟು ಸೀಟುಗಳು ಭರ್ತಿಯಾಗಿದ್ದವು. ಬಸ್ ಹೊರಡಲು ಶುರುವಾಯಿತು. ಆ ಯುವಕ ತನ್ನ ಜೇಬಿನಿಂದ ಮೊಬೈಲ್ ತೆಗೆದ. ನಾನು ಬೆರಗಾದೆ! “ಅಬ್ಭಾ ಇವನ ಹತ್ತಿರ ಮೊಬೈಲ್ ಕೂಡ ಇದೆ!” ಎಂದುಕೊಂಡೆ. ಹಾಗೇ ಕುತೂಹಲದಿಂದ ಅವನ ಮೊಬೈಲ್ ಸ್ಕ್ರೀನಿನತ್ತ ಕಣ್ಣಾಡಿಸಿದೆ. ಅಲ್ಲಿ ನನಗೆ ಕಾಣಿಸಿದ್ದು “ಶಿಲುಬೆಗೇರಿದ ಏಸುವಿನ ವಾಲ್-ಪೇಪರ್”. ತಕ್ಷಣ ನನಗೆ “ಸೀತಾರಾಮ್ ಗೋಯಲ್‍ರ, ಹುಸಿ ಜಾತ್ಯಾತೀತವಾದ” ಪುಸ್ತಕವೇ ಕಣ್ಣೆದುರಿಗೆ ಬಂತು! ಆ ಪುಸ್ತಕವನ್ನು ತೀರಾ ಇತ್ತೀಚೆಗೆ ಓದಿರುವುದರಿಂದ, ಅದರಲ್ಲಿನ ಆಘಾತಕಾರಿ ಅಂಶಗಳು ಆಗಾಗ ನನ್ನ ಮನಸ್ಸಿನಲ್ಲಿ ಸುಳಿದು ತುಂಬಾ ಕಳವಳವನ್ನುಂಟು ಮಾಡುತ್ತಿದ್ದವು. ಅಂತಹ ಅಂಶಗಳು ನನಗಿಲ್ಲಿ ಕಾಣಸಿಗಬಹುದೇ? ಎಂದು ಕುತೂಹಲದಿಂದ, ಸ್ವಲ್ಪ ಸತ್ಯಾನ್ವೇಷಣೆಗೆ ಮುಂದಾದೆ. ಆಗ ನಮ್ಮಿಬ್ಬರ ಮಧ್ಯೆ ನಡೆದ ಸಂಭಾಷಣೆ ಹೀಗಿದೆ.

(ನಾವು ನಮ್ಮ ಹೆಸರನ್ನು ಪರಸ್ಪರ ವಿನಿಮಯ ಮಾಡಿಕೊಂಡಿರಲಿಲ್ಲ)

ನಾನು : ಚೆನ್ನಗಿರಿ ಎಲ್ಲಿ ಬರುತ್ತೆ?

ಯುವಕ : ದಾವಣಗೆರೆ ಜಿಲ್ಲೆ.

ನಾನು : ಚೆನ್ನಗಿರಿ, ಇದು ತಾಲೂಕೇ?.

ಯುವಕ : ಹೌದು, ನಮ್ಮೂರು ಚೆನ್ನಗಿರಿ ತಾಲುಕಿನ ನಲ್ಲೂರು ಎಂಬ ಹಳ್ಳಿ.

(ಕ್ಷಮಿಸಿ ಹಳ್ಳಿಯ ಹೆಸರು ನೆನಪಿಲ್ಲ. ನಲ್ಲೂರು ಇರಬಹುದು ಎಂದು ಊಹಿಸುತ್ತಿದ್ದೇನೆ. ಖಾತ್ರಿಯಾಗಿ ಹೇಳಲಾರೆ)

ನಾನು : ನೀವು ಕ್ರೈಸ್ತ ಜನಾಂಗಕ್ಕೆ ಸೇರಿದವರೇ?

ಯುವಕ : ಹೌದು. (ನಗುತ್ತಾ)

ನಾನು : (ಸ್ವಲ್ಪ ಧೈರ್ಯ ಮಾಡಿ) ನಿಮ್ಮ ತಂದೆ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದರೇ? ಅಥವಾ ನಿಮ್ಮ ಹಿರಿಯರ ಕಾಲದಿಂದಲೂ ನೀವು ಕ್ರೈಸ್ತರೇ?

ಯುವಕ : ಇಲ್ಲ ನಾವು ಮೂರು ತಿಂಗಳಿನ ಹಿಂದೆ ಕ್ರೈಸ್ತರಾದೆವು.

(ನನ್ನ ಕುತೂಹಲ ಹೆಚ್ಚಾಯಿತು. “ಮತಾಂತರ ಈ ದಿನಗಳಲ್ಲೂ ನಡೆಯುತ್ತಿದೆಯೇ?” ಎಂದು ಕೌತುಕನಾದೆ)

ನಾನು : ನೀವೊಬ್ಬರೇ ಕ್ರೈಸ್ತರಾದಿರೇ? (ಸುಮ್ಮನೇ ಮುಗ್ಧತೆಯಿಂದ ಕೂಡಿದ ಕುತೂಹಲಕ್ಕೆ ಕೇಳುತ್ತಿರುವವನಂತೆ ಕೇಳಿದೆ)

ಯುವಕ : ಇಲ್ಲ, ಐದಾರು ತಿಂಗಳಿನಿಂದ ನಮ್ಮ ಸಂಬಂಧೀಕರನ್ನೂ ಸೇರಿಸಿ ನಮ್ಮೂರಿನ ಹಲವಾರು ಜನರು ಕ್ರೈಸ್ತ ಧರ್ಮಕ್ಕೆ ಸೇರುತ್ತಲಿದ್ದರು. ಮೂರು ತಿಂಗಳ ಹಿಂದೆ ನಮ್ಮ ಮನೆಯವರೆಲ್ಲರೂ ಕ್ರೈಸ್ತಾರದೆವು. ಈಗ ನಮ್ಮ ಹಳ್ಳಿಯೇ ಇಡೀಯಾಗಿ ಕ್ರೈಸ್ತ ಧರ್ಮವನ್ನು ಅನುಸರಿಸುತ್ತಿದೆ. (ಎಂದು ಹೆಮ್ಮೆಯಿಂದ ಹೇಳಿದ!!).

ನನಗೆ ಕುತೂಹಲದ ಜೊತೆಗೆ ಕೋಪವೂ ಬಂತು. ನನ್ನ ಕೋಪ ಆ ವ್ಯಕ್ತಿಯ ಮೇಲಾಗಿರಲಿಲ್ಲ. ಏಕೆಂದರೆ ಮತಾಂತರಿಗಳು ಯಾವುದೋ ಆಮಿಷ ಒಡ್ಡಿ, ಮತ್ತು ಹಳ್ಳಿಗಾಡಿನ ಜನರ ಮುಗ್ಧತೆಯನ್ನು ದುರುಪಯೋಗ ಪಡೆಸಿಕೊಂಡು, ಅವರ ತಲೆಯಲ್ಲಿ ಇಲ್ಲಸಲ್ಲದ್ದನ್ನು ತುಂಬಿ, ಅವರನ್ನು ಸಾಮೂಹಿಕವಾಗಿ ಮತಾಂತರ ಮಾಡಿದ್ದಾರೆ ಎಂದು ನನಗನ್ನಿಸಿತು. ಆ ರೀತಿಯ ಹಲವಾರು ಘಟನೆಗಳನ್ನು ನಾನಾಗಲೇ ಮೇಲೆ ಹೇಳಿದ ಪುಸ್ತಕದಲ್ಲಿ ಓದಿದ್ದರಿಂದ ನನ್ನ ತಲೆಯಲ್ಲಿ ತಕ್ಷಣ ಅಂಥ ವಿಚಾರವೇ ಬಂದಿತು.

ನಾನು : ಓ.. ಹೌದೆ..!! ಏಕೆ? (ನಯವಾಗಿಯೇ ಕೇಳಿದೆ).

ಯುವಕ : ನಾವು ಜೀವನದಲ್ಲಿ ಸಾಕಷ್ಟು ಪಾಪಗಳನ್ನು ಮಾಡುತ್ತೇವೆ. ಆ ದೇವರು ನಮ್ಮನ್ನು ಎಲ್ಲ ಕಷ್ಟದಿಂದ ಪಾರು ಮಾಡಬಲ್ಲ. ದೇವರು ನಮಗಾಗಿ ಸಾಕಷ್ಟು ನೋವು ಅನುಭವಿಸಿದ್ದಾನೆ. ನಮ್ಮ ಉದ್ಧಾರಕ್ಕಾಗಿ ದೇವರು ನಮಗೆ ಧನ ಸಹಾಯ ಮಾಡುತ್ತಾನೆ (ಎಂದು ಸಾಕಷ್ಟು ಮಾತುಗಳನ್ನು ಹೇಳುತ್ತಾ ಸಾಗಿದ..)

ನಾನು : ನಿಮ್ಮ ಮಾತು ನಿಜ.. ಆದರೆ ಹೀಗೆ ಕೇಳುತ್ತಿದ್ದೇನೆಂದು ತಪ್ಪು ತಿಳಿಯಬೇಡಿ. ಸುಮ್ಮನೇ ಕುತೂಹಲದಿಂದ ಕೇಳುತ್ತಿದ್ದೇನೆ. ದೇವರು ಎಲ್ಲ ಧರ್ಮದಲ್ಲಿಯೂ ಇದ್ದಾನಲ್ಲವೇ? ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲ ಧರ್ಮದ ದೇವರೂ ಮಾನವನ ಕಷ್ಟಕ್ಕೆ ಸ್ಪಂದಿಸುತ್ತಾನಲ್ಲವೇ? ನೀವು ಕ್ರೈಸ್ತರಾಗುವ ಅನಿವಾರ್ಯತೆ ಏನಿತ್ತು?

ಯುವಕ : ಇಲ್ಲ.. ಎಲ್ಲ ದೇವರೂ ಅವನಂತಲ್ಲ. ಅವನು ನಮಗಾಗಿ ಅಳುತ್ತಾನೆ. ಅವನು ನಮ್ಮನ್ನು ಬೇರೆ ಎಲ್ಲ ದೇವರಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಾನೆ. ಅಷ್ಟೇ ಏಕೆ? ಅವನು ನಮಗಾಗಿ ಶಿಲುಬೆಯನ್ನೇ ಏರಿದ್ದಾನೆ.

ನಾನು : (ಏನು ಹೇಳಬೇಕೋ ತಿಳಿಯದೇ ಸುಮ್ಮನೇ ಅವನನ್ನೇ ನೋಡುತ್ತಿದ್ದೆ. ಅವನು ಮತ್ತೆ ಮುಂದುವರೆಸಿದ)

ಯುವಕ : ನಿಮಗೆ ಕೆಲವು ನಿಜ ಘಟನೆಗಳನ್ನು ಹೇಳುತ್ತೇನೆ. ನಾವು ಹಿಕ್ಕಿ-ಪಿಕ್ಕಿ ಜನಾಂಗಕ್ಕೆ ಸೇರಿದವರು. ನನಗೀಗ ಎರಡು ಮಕ್ಕಳು. ನನ್ನ ಹೆಂಡತಿ ಮೊದಲ ಡಿಲೆವರಿಯಲ್ಲಿ ಗಂಡು ಮಗುವನ್ನು ಹೆತ್ತಳು. ಆದರೆ ಡಿಲೆವರಿಯಾಗುವಷ್ಟರಲ್ಲಿಯೇ ಅವಳು ಸತ್ತು ಹೋದಳು! ಆಗ ಆಸ್ಪತ್ರೆಯ ಡಾಕ್ಟರ್ ಹೇಳಿದರು, “ಚರ್ಚಿಗೆ ಹೋಗಿ ಏಸುವಿನಲ್ಲಿ ಪ್ರಾರ್ಥಿಸು. ಅವನೊಬ್ಬನೇ ಈಗ ನಿನ್ನ ಸಹಾಯಕ್ಕೆ ಬರುವಂಥವನು. ಅವನು ಮನಸ್ಸು ಮಾಡಿದರೆ ಯಾರನ್ನು ಬೇಕಾದರೂ ಸಾವಿನಿಂದ ಪಾರು ಮಾಡಬಲ್ಲ. ನೀನು ಅಲ್ಲಿ ಹೋಗಿ ಪ್ರಾರ್ಥಿಸಿದರೆ ನಿನ್ನ ಹೆಂಡತಿಗೆ ಮತ್ತೆ ಜೀವ ಬರಬಹುದ” ಎಂದರು. ನಾನು ಅಳುತ್ತಾ ಹೋಗಿ ಯೇಸುವಿನ ಮುಂದೆ ನಿಂತೆ. ಚರ್ಚಿನ ಫಾದರ್ ನನ್ನ ಸಹಾಯಕ್ಕಾಗಿ ಬಂದರು. ಅವರು ಹೇಳಿದಂತೆ ಏಸುವಿನಲ್ಲಿ ಪ್ರಾರ್ಥಿಸಿದೆ. ಪ್ರಾರ್ಥನೆ ಮುಗಿಸಿ ಮರಳಿ ಆಸ್ಪತ್ರೆಗೆ ಹೋಗಿ ನೋಡಿದಾಗ ಪವಾಡ ಸದೃಶ್ಯವಾಗಿ ನನ್ನ ಹೆಂಡತಿಗೆ ಮತ್ತೆ ಜೀವ ಬಂದಿತ್ತು!! ಎರಡನೇ ಮಗುವಿನ ಡಿಲೆವರಿಯಲ್ಲಿಯೂ ಅವಳು ಸತ್ತಿದ್ದಳು. ಆಗಲೂ ಹೀಗೆಯೇ ಯೇಸು ಅವಳಿಗೆ ಮತ್ತೆ ಜೀವ ನೀಡಿದ! ಆಗ ಅವನ ಲೀಲೆಗೆ ಶರಣಾಗಿ ನಾವೆಲ್ಲರೂ ಮತಾಂತರ ಹೊಂದಿದೆವು.

(ಇಷ್ಟು ಕೇಳುವಷ್ಟರಲ್ಲಿ, ಮತಾಂತರಕ್ಕಾಗಿ ಎಷ್ಟು ಕೀಳು ಮಟ್ಟದ ದಾರಿ ಹುಡುಕಿದ್ದಾರೆ ಎಂದು ನನ್ನ ಕೋಪ ನೆತ್ತಿಗೇರಿತ್ತು. ಆದರೆ ನನಗೆ ಇನ್ನೂ ಒಂದು ಮುಖ್ಯವಾದ ಸಂಶಯವಿತ್ತು. ತಾಳ್ಮೆಯಿಂದ ನನ್ನ ಪ್ರಶ್ನೆ ಮುಂದುವರಿಸಿದೆ.)

ನಾನು : ಆ ಆಸ್ಪತ್ರೆಯನ್ನು ಚರ್ಚಿನವರೇ ನಡೆಸುತ್ತಾರೆಯೇ?

ಯುವಕ : ಹೌದು. ನಮಗಾಗಿ ಆಸ್ಪತ್ರೆ, ಶಾಲೆಗಳನ್ನು ನಿರ್ಮಿಸಿ ನಮ್ಮನ್ನು ಕಾಪಾಡಬೇಕೆಂದು ಹೇಳಿ ಅವರನ್ನು ಏಸು ಕಳುಹಿಸಿದ್ದಾನೆ. ನಮ್ಮದು ಬೈಬಲ್ ಎಂಬ ಪುಸ್ತಕವಿದೆ. ಇಷ್ಟು ದಪ್ಪ ಇದೆ (ಹುಬ್ಬೇರಿಸಿ ಕೈಯಿಂದ ಅದರ ಗಾತ್ರವನ್ನು ತೋರಿಸುತ್ತಾ). ಜಗತ್ತಿನಲ್ಲಿ ದೇವರ ಬಗ್ಗೆ ಇರುವ ಪುಸ್ತಕಗಳನ್ನೂ ಮನುಷ್ಯರು ಬರೆದಿದ್ದಾರೆ. ಆದರೆ ಈ ಪುಸ್ತಕವನ್ನು ಏಸುವೇ ತನ್ನ ಕೈಯಾರೆ ಬರೆದಿದ್ದಾನೆ. ಅವನು ಅದರಲ್ಲಿ ಮನುಷ್ಯರು ಹೇಗೆ ಬದುಕಬೇಕೆಂದು ಹೇಳಿದ್ದಾನೆ. ಅವನ ಆಜ್ಞೆಯಂತೆ ಚರ್ಚಿನವರು ನಮ್ಮನ್ನು ಕಾಪಾಡಲು ಬಂದಿದ್ದಾರೆ.

ಇಷ್ಟು ಮಾತುಕತೆ ಆಗುವಷ್ಟರಲ್ಲೇ ನನ್ನ ಹಳ್ಳಿ ಬಂದಿತು. ಮನಸ್ಸಿನಲ್ಲಿ ಕೋಪ, ಅಸಹನೆ ತುಂಬಿಕೊಂಡಿದ್ದರೂ ಮುಗುಳ್ನಗುತ್ತಾ ಆ ಯುವಕನಿಗೆ ಕೈಬೀಸಿ ಕೆಳಗಿಳಿದು ಮನೆಯತ್ತ ಹೆಜ್ಜೆ ಹಾಕಲು ಶುರು ಮಾಡಿದೆ. ಮನಸ್ಸಿನಲ್ಲಿ ವಿಭಿನ್ನ ವಿಚಾರಗಳ ಯುದ್ಧವೇ ಶುರುವಾಯಿತು. “ಇಲ್ಲಿ ಮತಾಂತರಕ್ಕೆ ಮುಖ್ಯ ಕಾರಣವೇನು?” ಎಂದು ಆಲೋಚಿಸುತ್ತಾ ಹೋದಂತೆ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಮೂಡಿದವು. ಹಳ್ಳಿಗಾಡಿನ ಜನರ ಮುಗ್ಧತೆಯೇ? ಕ್ರಿಶ್ಚಿಯನ್ ಮಿಶಿನರಿಗಳ ಮತಾಂಧತೆಯೇ? ನಮ್ಮ ಮಣ್ಣಿನ ಜನರನ್ನು ನಾವೇ ಅಸ್ಪೃಶ್ಯರನ್ನಾಗಿ ಮಾಡಿ ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದ್ದೇವೆಯೇ? ಅಥವಾ ಇತಿಹಾಸ ಕಾಲದಿಂದ ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದ ಹಳ್ಳಿಗಾಡಿನ ಜನ ತಮ್ಮದೇ ಸಂಕುಚಿತ ಮನೋಭಾವದಿಂದ ಮುಖ್ಯವಾಹಿನಿಗೆ ಬಾರದೇ ಇದ್ದಿದ್ದಕ್ಕೆ ಹೀಗಾಗುತ್ತಿದೆಯೇ? ಮತಾಂತರವನ್ನು ತಡೆಯುವ ಸಲುವಾಗಿ, ಶಾಂತಿ ಮತ್ತು ನೆಮ್ಮದಿಯಿಂದ ಕೂಡಿದ ಅವರ ಹಳ್ಳಿಗಾಡಿನ ಸಂಸ್ಕೃತಿಯನ್ನು ನಾಶ ಮಾಡಿ, ಒತ್ತಾಯಪೂರ್ವಕವಾಗಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಸರಿಯೇ? ಹಳ್ಳಿಗಾಡಿನ ಸಂಸ್ಕೃತಿಯೂ ಭಾರತದ ವೈವಿಧ್ಯಮಯ ಸಂಸ್ಕೃತಿಯ ಅವಿಭಾಜ್ಯ ಅಂಗವೇ ಅಲ್ಲವೇ? ಮತಾಂತರವನ್ನೂ ತಡೆಗಟ್ಟಿ ನಮ್ಮ ವೈವಿಧ್ಯಮಯ ಸಂಸ್ಕೃತಿಯನ್ನು ಉಳಿಸಲು ಏನು ಮಾಡಬೇಕು? ಎಂದು ಎಲ್ಲೆಲ್ಲೋ ಸಾಗುತ್ತಿದ್ದ ನನ್ನ ವಿಚಾರ ಲಹರಿ ಮನೆ ಬರುತ್ತಿದ್ದಂತೆ ವಾಸ್ತವ ಪ್ರಪಂಚಕ್ಕೆ ಮರಳಿತು. ನನಗೆ ಹೆಚ್ಚು ಆಘಾತವಾದ ಅಂಶವೆಂದರೆ. ಹಿಕ್ಕಿ-ಪಿಕ್ಕಿ ಜನಾಂಗವನ್ನು ಹೊಂದಿದ ಇಡೀ ಹಳ್ಳಿಗೆ ಹಳ್ಳಿಯೇ ಮತಾಂತರವಾಗಿದೆ ಎಂಬುದು!

ಇದಾದ ಹಲವು ದಿನಗಳ ನಂತರ, 2011’ರ ಜನಗಣತಿಯ ಬಗ್ಗೆ ಇಂಡಿಯನ್-ಎ‍ಕ್ಸ್‍ಪ್ರೆಸ್ ಆನ್-ಲೈನ್ ಪತ್ರಿಕೆಯ ವೆಬ್-ಸೈಟ್‍ನಲ್ಲಿ ವರದಿಯೊಂದನ್ನು ನೋಡಿದೆ. (http://indianexpress.com/article/opinion/columns/census-christians-conversions/). ಈ ವರದಿಯ ಪ್ರಕಾರ 1991 ರಿಂದ 2011’ರ ವರೆಗೆ ಭಾರತದಲ್ಲಿ ಪ್ರತಿವರ್ಷ ಸರಾಸರಿ 1,70,000 ಕ್ರೈಸ್ತೇತರನ್ನು ಕ್ರೈಸ್ತ ಮತಕ್ಕೆ ಮತಾಂತರಿಸಲಾಗಿದೆ. ಇದು ಕೇವಲ ಜನಗಣತಿಯ ಆಧಾರದ ವರದಿ. ಬಹುಪಾಲು ಜನಗಣತಿ ಪಟ್ಟಣ ಮತ್ತು ಹಳ್ಳಿಗಳಲ್ಲಿ ನಡೆಯುತ್ತದೆ. ಆದರೆ ಮತಾಂತರ ಯಥೇಚ್ಛವಾಗಿ ನಡೆಯುತ್ತಿರುವುದು ಗುಡ್ಡಗಾಡಿನ ಪ್ರದೇಶದಲ್ಲಿ. ಅಲ್ಲಿಯ ಜನರು ಇನ್ನೂ ಸಮಾಜದ ಮುಖ್ಯವಾಹಿನಿಯಿಂದ ದೂರವೇ ಇದ್ದಾರೆ. ಅಂಥ ಸಾಕಷ್ಟು ಪ್ರದೇಶಗಳು ಜನಗಣತಿಯಲ್ಲಿ ಸೇರಿರದೇ ಇರಬಹುದು. ಅಂದರೆ ವಾಸ್ತವದಲ್ಲಿ ಮತಾಂತರದ ಅಂಕಿ-ಅಂಶಗಳು ಇದಕ್ಕಿಂತ ಪ್ರತಿಕೂಲವಾಗಿರಬಹುದು. ಇದೇ ಪತ್ರಿಕಾ ವರದಿಯಲ್ಲಿ ತಿಳಿಸಿರುವಂತೆ, ಭಾರತದ ಗೃಹ ಸಚಿವಾಲಯದ 2011-12ರ ವಾರ್ಷಿಕ ವರದಿಯ ಪ್ರಕಾರ, “ಮುಖ್ಯವಾದ 958 ಸರಕಾರೇತರ ಸಂಸ್ಥೆಗಳಲ್ಲಿ ಕಡಿಮೆ ಎಂದರೂ 515 ಸಂಸ್ಥೆಗಳು ಕ್ರಿಶ್ಚಿಯನ್ ಮಿಶಿನರಿಗೆ ಸೇರಿದ ಸಂಸ್ಥೆಗಳಾಗಿವೆ. ಈ 515 ಸಂಸ್ಥೆಗಳಿಗೆ ಒಂದು ವರ್ಷದಲ್ಲಿ 2000 ಕೋಟಿಗೂ ಹೆಚ್ಚು ವಿದೇಶೀ ದೇಣಿಗೆ ಹರಿದು ಬಂದಿದೆ! ಇನ್ನು ದೇಶದ ಎಲ್ಲ ಸರಕಾರೇತರೆ ಸಂಸ್ಥೆಗಳಿಗೆ ಒಂದು ವರ್ಷದಲ್ಲಿ ಹರಿದು ಬಂದ ಒಟ್ಟಾರೆ ವಿದೇಶೀ ದೇಣಿಗೆ ಬರೊಬ್ಬರಿ 11,000 ಕೋಟಿ!! ಈ ವಿದೇಶೀ ಹಣದಲ್ಲಿ ಬಹುಪಾಲು ಹಣವನ್ನು ಕ್ರಿಶ್ಚಿಯನ್ ಮತಾಂತರಕ್ಕೆಂದೇ ಬಳಸಲಾಗುತ್ತಿದೆ”. ಇಷ್ಟೆಲ್ಲ ಆಗುತ್ತಿರುವುದನ್ನು ಕಂಡೂ ನಾವು ಸುಮ್ಮನಿದ್ದರೆ ನಮ್ಮ ಅವನತಿ ಖಂಡಿತ. ಎಲ್ಲರೂ ಒಗ್ಗಟ್ಟಾಗಿ ಮತಾಂತರದ ವಿರುದ್ಧ ವ್ಯವಸ್ಥಿತ ಹೋರಾಟ ಮಾಡಬೇಕಾದುದು ಭಾರತದ ತುರ್ತು ಅವಶ್ಯಕತೆಗಳಲ್ಲೊಂದು.

-ವೀರಣ್ಣ ಹಾಲಣ್ಣನವರ್

veerannahaveri@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!