ಅಂಕಣ

ಪ್ರಾಥಮಿಕ ಶಿಕ್ಷಣ ಸಮಾಜವನ್ನು ಜಾಗೃತಗೊಳಿಸುವ ಪ್ರಮುಖ ಸಾಧನ

ಜಾಗತೀಕರಣದ ಮುಖವಾಡ ಹೊತ್ತ ಬಹುದೇಶಿ ಕಂಪನಿಯೊಂದರ ಹೊಸ ಜಾಹಿರಾತು ಹೀಗಿದೆ ನಿಮ್ಮ ಪ್ರೀತಿಯ ನಾಯಿಗೆ ಬಹಳ ಇಷ್ಟವಾದ ಆಹಾರ, ರುಚಿ ಮತ್ತು ಪೌಷ್ಠಿಕಾಂಶದಲ್ಲಿ ಹಿಂದಿಗಿಂತಲೂ ದ್ವಿಗುಣ. ಎಷ್ಟು ಸೋಜಿಗ! ಇದನ್ನ ನಾವು ತಿಂದು ಪರೀಕ್ಷಿಸೋಹಾಗಿಲ್ಲ, ನಮ್ಮ ನಾಯಿಗೆ ಹಾಕಿ ಪ್ರಯೋಗಮಾಡಬಹುದು. ಹಾಕಿದ್ದನ್ನ ತಿನ್ನುವ ಮೂಕ ಪ್ರಾಣಿ ಏನು ಹೇಳೀತು? ಆ ಕಂಪನಿ ಈ ರೀತಿ ಜಾಹಿರಾತು ಕೊಟ್ಟರೆ ಮಾರುಕಟ್ಟೆಯಲ್ಲಿ ತನ್ನ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಾಗಬಹುದು ಎನ್ನುವ ವಿಶ್ವಾಸಕ್ಕೆ ನಮ್ಮ ಸಮಾಜದ ಅಜಾಗೃತ ಸ್ಥಿತಿಯೇ ಕಾರಣವಿರಬಹುದು ಅಥವಾ ಸಮಾಜವನ್ನು ಜಾಗೃತಗೊಳಿಸುವ ಸಾಧನದಬಳಕೆಯಲ್ಲಿ ವೈಫಲ್ಯವಿರಬಹುದು.

ಇಲಾಖೆಯೊಂದರ ಕಛೇರಿಯ ದ್ವಿತಿಯ ದರ್ಜೆ ಸಹಾಯಕ ಆಗಲು ಎಷ್ಟೆಲ್ಲಾ ಅರ್ಹತೆ ಬೇಕು. ನಿಗದಿಪಡಿಸಿದ ವಿದ್ಯಾರ್ಹತೆ, ನಿಗದಿಪಡಿಸಿದ ಅಂಕ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಡೆದ ಶೇಕಡಾ, ಕಟ್’ಆಫ್ ಇತ್ಯಾದಿ ಎಲ್ಲದರಲ್ಲೂ ಉತ್ತೀರ್ಣರಾದಮೇಲೆ ಸಂದರ್ಶನ, ಒಂದು ವೇಳೆ ಮೀಸಲಾತಿಯಲ್ಲಿ ಬಂದಿದ್ದರೆಪ್ರಮಾಣಪತ್ರಗಳು, ಸಿಂಧುತ್ವ ಎಲ್ಲಾ ಆದಮೇಲೆ appointment letter ಲೆಟರ್ ಕೊಡಲು ಲಂಚಕ್ಕಾಗಿ ಕೈಯೊಡ್ಡುವ ಭ್ರಷ್ಟ ಅಧಿಕಾರಿಗಳು ಹೀಗೆ ಇಷ್ಟೆಲ್ಲಾ ಹರಸಾಹಸ ಪಡಬೇಕು. ಆದರೆ ಅದೇ ಇಲಾಖೆಯ ಸಚಿವಾಲಯದ ಸಚಿವರಾಗೋಕೆ ಅರ್ಹತಾಪಟ್ಟಿ ಇಷ್ಟು ದೊಡ್ಡದಾಗಿಲ್ಲ. ಹುಚ್ಚನಾಗಿರಬಾರದು ಅನ್ನೋಒಂದು ವಿಷಯ ಬಿಟ್ಟರೆ ಎಲ್ಲಾ ಅರ್ಹತಾ ಮಾನದಂಡಗಳು ಅಸಮಂಜಸ. ಚುನಾವಣೆ ಫಲಿತಾಂಶ ಬಂದ 24 ಗಂಟೆಯೊಳಗೆ appointment letter ಗೆದ್ದ ರಾಜಕಾರಣಿಗಳ ಕೈಸೇರುತ್ತೆ !

ಎಸ್.ಎಸ್.ಎಲ್.ಸಿ ಫಲಿತಾಂಶ ಮತ್ತು ಈ ಬಾರಿಯ ಚುನಾವಣಾ ಫಲಿತಾಂಶ ಎರಡು ಮೂರು ದಿನಗಳ ಅಂತರದಲ್ಲಿ ಪ್ರಕಟವಾದವು, ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕೆಲವು ವಿದ್ಯಾರ್ಥಿಗಳು ಅರ್ಥಹೀನ ಕಾರಣಗಳಿಗೆ ಆತ್ಮಹತ್ಯೆಗೆ ಶರಣಾದರು. ತಾರುಣ್ಯದಲ್ಲಿ ಪ್ರಾಯಶ್ಚಿತ್ತದ ಪ್ರಭಾವ ಹೆಚ್ಚು ಅದು ಬಹಳಅಪಾಯಕಾರಿ ಹಂತ. ಆದರೆ ಚುನಾವಣಾ ಫಲಿತಾಂಶ ಬಂದು ಎಷ್ಟೋ ರಾಜಕಾರಣಿಗಳು ಸೋತರು ಅವರ ಸೋಲಿಗೆ ಅರ್ಥವುಳ್ಳ ಮತ್ತು ಸ್ಪಷ್ಟ ಕಾರಣಗಳಿದ್ದವು, ಆ ಕಾರಣಗಳು ಅವರು ಭ್ರಷ್ಟರು ಎಂದು ಸಾರಿಹೇಳುತ್ತಿದ್ದರೂ ಒಬ್ಬ ರಾಜಕಾರಣಿಯೂ ಆತ್ಮಹತ್ಯೆಗೆ ಶರಣಾಗಲಿಲ್ಲ, ಏಕೆ? ರಾಜಕಾರಣಿಗಳಲ್ಲಿಪ್ರಾಯಶ್ಚಿತ್ತದ ಅರಿವು ಇರುವುದಿಲ್ಲವೇ? ಪ್ರಜಾಪ್ರಭುತ್ವದಲ್ಲಿ ಜವಾಬ್ದಾರಿಗಳ ಹಂಚಿಕೆ ಎಲ್ಲಾ ಆಡಳಿತ ಪದ್ಧತಿಗೂ ಆದರ್ಶಪ್ರಾಯವಾಗಿದೆ. ಆದರೆ ಆ ಜವಾಬ್ದಾರಿಗಳನ್ನು ಎಷ್ಟರಮಟ್ಟಿಗೆ ನಿರ್ವಹಿಸಲಾಗುತ್ತಿದೆ ಎಂದು ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಾಡುವ ಕೆಲಸ ಅತ್ಯಲ್ಪವಾಗಿದೆ. ಇದೇ ನಮ್ಮಪ್ರಜಾಪ್ರಭುತ್ವದ ಸಾತ್ವಿಕ ಗುಣದೋಷ.

ದೇಶದ ಇಂದಿನ ಸಮಸ್ಯೆಗಳನ್ನು ಗಮನಿಸಿದರೆ ಇವು ಇಂದಿನವಲ್ಲ ಸ್ವತಂತ್ರ ಭಾರತದ ಉಗಮದಿಂದಲೇ ಮರುಕಳಿಸುತ್ತಾ ಬಂದಿವೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ಬುದ್ಧಿಜೀವಿಗಳು, ಸಾಮಾಜಿಕ ಮೌಲ್ಯದ ಕುಸಿತ ಇದಕ್ಕೆ ಮುಖ್ಯವಾದ ಕಾರಣ ಎಂದರು. ಸಾಮಾಜಿಕ ಮೌಲ್ಯರೂಪುಗೊಳ್ಳುವುದು ಶಿಕ್ಷಣದ ಮೂಲಕ, ಶಾಲೆ ಸಮಾಜದ ಕೇಂದ್ರಬಿಂದು ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ನಮ್ಮ ಹಿಂದಿನ ತಲೆಮಾರಿಗೆ ಸರಿಯಾದ ಪ್ರಾಥಮಿಕ ಶಿಕ್ಷಣ ದೊರೆತಿದ್ದರೆ ಇಂದು ಭಾರತ  ಭ್ರಷ್ಟಾಚಾರ ರಹಿತ ದೇಶವಾಗುತ್ತಿತ್ತು. ಪ್ರಪಂಚದ ಎಲ್ಲಾ ದೇಶಗಳಿಗೂ ಎಲ್ಲಾ ಕ್ಷೇತ್ರದಲ್ಲೂ ಮಾದರಿದೇಶವಾಗಿ ಪರಿಣಮಿಸುತ್ತಿತ್ತು. ಭಾರತದಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿಲ್ಲ ಎಂದು ಅರ್ಥವಲ್ಲ. ಭಾರತದಲ್ಲಿ ಅತ್ಯುತ್ತಮ ಶಿಕ್ಷಣ ದೊರೆಯುತ್ತಿದೆ. ಎಷ್ಟೋ ಮಹಾವಿದ್ಯಾಲಯಗಳಿವೆ, ಎಷ್ಟೋ ವಿಶ್ವವಿದ್ಯಾಲಯಗಳಿವೆ ಇವು ಜಾಗತಿಕ ಮಟ್ಟಕ್ಕೆ ಯಾವುದೇ ಕೊರತೆ ಇರದೆ ಎಲ್ಲಾ ವಿಷಯಗಳ ಬೋಧನೆ ನಡೆಸುತ್ತಿವೆ. ಆದರೆಸಮಸ್ಯೆ ಇರುವುದು ಪ್ರಾಥಮಿಕ ಹಂತದಲ್ಲಿ. ಶಾಲೆಯೊಂದು ದೇಗುಲ, ಕೈಮುಗಿದು ಒಳಗೆ ಬಾ ಎಂಬ ಫಲಕ ಪ್ರತಿ ಶಾಲೆಯಲ್ಲಿದೆ. ಭಾರತ ಹಳ್ಳಿಗಳ ದೇಶ ಹೆಚ್ಚಿನ ಜನಸಂಖ್ಯೆ ಹಳ್ಳಿಗಳಲ್ಲಿದೆ ಆದರೆ ಹಳ್ಳಿಗಳ ಶಾಲೆಗಳು ಭಯಾನಕವಾಗಿವೆ. ಇವು ಮುಂಜಾನೆ ಶಾಲೆ ಮತ್ತು ರಾತ್ರಿ ಇನ್ನೇನೋ ಆಗಿ double role playಮಾಡುತ್ತಿವೆ. ಗ್ರಾಮೀಣ ಶಾಲೆಗಳಲ್ಲಿ ಶಿಕ್ಷಕರ ಮತ್ತು ಮೂಲ ಸೌಕರ್ಯಗಳ ಕೊರತೆ ಇದೆ ಎಂಬುದು ದಿನ ನಿತ್ಯ ಮಾಧ್ಯಮದಲ್ಲಿ ಕಾಣುತ್ತೇವೆ. ಪ್ರಾಥಮಿಕ ಶಿಕ್ಷಣ, ಮಕ್ಕಳು ಕೂಡುವ ನೆಲದಿಂದ ಹಿಡಿದು ಶಿಕ್ಷಕರ ವರೆಗೂ ಕಳಪೆ ಗುಣಮಟ್ಟ ಹೊಂದಿದೆ. ಸರ್ಕಾರವೂ ಪೂರಕವೆಂಬಂತೆ ಒಂದು ಹೊತ್ತಿನ ಊಟದ ಆಸೆತೋರಿಸಿ ಮಕ್ಕಳನ್ನು ಶಾಲೆಗೆ ಕರೆತರುವ ಪ್ರಯತ್ನ ನಡೆಸಿದೆ ಆದರೆ ಬದುಕಿನ ಸಾರ ಮತ್ತು ಜೀವನದ ಮೌಲ್ಯ ಒಂದು ಹೊತ್ತಿನ ಊಟದಲ್ಲಿ ಅಡಗಿಲ್ಲ.

ಭಾರತ ಇಂದು ಎದುರಿಸುತ್ತಿರುವ ಜನಸಂಖ್ಯೆ, ನಿರುದ್ಯೋಗ, ಭ್ರಷ್ಟಾಚಾರ ಮತ್ತು ಅನಕ್ಷರತೆ ಇತ್ಯಾದಿ ಸಮಸ್ಯೆಗಳಿಗೆ ಕಳಪೆ ಮಟ್ಟದ ಅಥವಾ ಪರಿಣಾಮಕಾರಿಯಲ್ಲದ ಪ್ರಾಥಮಿಕ ಶಿಕ್ಷಣ ಪ್ರಮುಖ ಕಾರಣವಾಗಿದೆ. ಇದು ಹೀಗೇ ಮುಂದುವರೆದರೆ ಕೇವಲ ಒಂದು ಭಾಷೆ ಗೊತ್ತಿರುವ ಅಥವಾ ಒಂದು ವಿಷಯ ಗೊತ್ತಿರುವಅರೆ ಅಕ್ಷರಸ್ಥರ ಸಂಖ್ಯೆ ಹೆಚ್ಚಾಗಿ ಮುಂದಿನ ತಲೆಮಾರಿಗೆ ಅದೂ ಒಂದು ಸಮಸ್ಯೆಯಾಗಿ ಕಾಡುವುದು ನಿಜ. ಮಾತೃಭಾಷೆ, ಕೆಲವು ಗಣಿತದ ಮೂಲಕ್ರಿಯೆಗಳು, ಪ್ರಮೇಯಗಳು ಮತ್ತು ವಿಜ್ಞಾನದ ವ್ಯಾಖ್ಯಾನಗಳು ಮನುಷ್ಯನನ್ನು ಅಕ್ಷರಸ್ಥನನ್ನಾಗಿ ಮತ್ತು ಸ್ವಾವಲಂಬಿಯಾಗಿ ಮಾಡುವುದಿಲ್ಲ. ಇವು ಕೇವಲ ಅವನಮೆದುಳಿನ ತರಬೇತಿಗೆ ಸಂಬಂಧಿಸಿದವು ಮಾತ್ರ. ಮುಂದುವರೆಯುತ್ತಿರುವ ಜಗತ್ತಿನೊಡನೆ ಬೆಳೆಯಲು ಈ ರೀತಿಯ ಶಿಕ್ಷಣ ಸಹಕಾರಿಯಾಗುವುದಿಲ್ಲ. ಇವುಗಳ ಜೊತೆಗೆ ಮೌಲ್ಯ ಶಿಕ್ಷಣ, ಕಂಪ್ಯೂಟರ್ ಶಿಕ್ಷಣ, ಓದ್ಯೋಗಿಕ ಮೌಲ್ಯವಿರುವ ಶಿಕ್ಷಣ, ಸಂವಿಧಾನದ ಪರಿಕಲ್ಪನೆಗಳು ಮತ್ತು ಭಾಷೆಗಳು ಮತ್ತು ಸಾಹಿತ್ಯಇತ್ಯಾದಿಗಳನ್ನು ಮಕ್ಕಳ ಮನಸ್ಸಿಗೆ ಬೇಸರ ಮೂಡದಂತೆ ಹಲವಾರು ವಿಧಾನಗಳ ಬಳಕೆಯಿಂದ ಅರ್ಥಮಾಡಿಸಬಹುದಾಗಿದೆ ಮತ್ತು ಇದು ಆ ಮಗುವಿನ ಭವಿಷ್ಯದಲ್ಲಿ ಸ್ವಾವಲಂಬಿಯಾಗಲು ದಾರಿಮಾಡಿಕೊಡುತ್ತವೆ. ಸರ್ಕಾರಿ ಇಲಾಖೆಗಳಾವುವು ಅವುಗಳು ಯಾವ ಯೋಜನೆ ಮೂಲಕ ಯಾವ ಅಭಿವೃದ್ಧಿಕಾರ್ಯಕ್ರಮಗಳನ್ನು ನಡೆಸುತ್ತಿವೆ, ಯಾವ ಮಾಹಿತಿಗೆ ಯಾವ ಇಲಾಖೆಗೆ ಸಂಪರ್ಕಿಸಬೇಕೆಂಬ ಮಾಹಿತಿಯ ಕೊರತೆ ಯುವಜನಾಂಗಕ್ಕಿದೆ. ಸರ್ಕಾರಿ ಇಲಾಖೆಗಳ ಮಾಹಿತಿಯನ್ನು ಪಠ್ಯಕ್ರಮದಲ್ಲಿ ಅಳವಡಿಸಬಾರದೇಕೆ?

ಈ ಹಂತದಲ್ಲಿ ಈ ವಿಷಯಗಳನ್ನು ಕಲಿಯದ ಕಾರಣ ವಿದ್ಯಾರ್ಥಿ ತನ್ನ ಉನ್ನತ ವ್ಯಾಸ೦ಗದಲ್ಲಿ ತೊಂದರೆಗೆ ಸಿಲುಕಬಹುದು ಅಂದರೆ ಇಂಜಿನಿಯರಿಂಗ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಭಾರತ ಸಂವಿಧಾನ (Indian Constitution), ಆಂಗ್ಲಮಾಧ್ಯಮದಿಂದ ಬಂದ ವಿದ್ಯಾರ್ಥಿಗಳಿಗೆ ಕನ್ನಡಭಾಷೆ, ಕನ್ನಡಮಾಧ್ಯಮದಿಂದ ಬಂದ ವಿದ್ಯಾರ್ಥಿಗಳಿಗೆ English ನಿಜವಾಗಲೂ boring and Terrific subjects ಆಗಿವೆ. ಇವುಗಳನ್ನು ಕಲಿಯುವಲ್ಲಿ ಸೋತ ವಿದ್ಯಾರ್ಥಿ ನಾಳೆ ಉತ್ತಮ ಕೆಲಸ ಪಡೆಯುವಲ್ಲಿ ಹೇಗೆ ಸಫಲನಾಗುತ್ತಾನೆ? ಕೇಂದ್ರ ಸರ್ಕಾರ ನಡೆಸುವ ಎಲ್ಲಾ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆಗಳು ಹಿಂದಿ ಮತ್ತುಆ೦ಗ್ಲಭಾಷೆಯಲ್ಲಿರುತ್ತವೆ. ಇದು ಭಾಷೆ ಗೊತ್ತಿರದ ಜ್ಞಾನವಂತ ಉದ್ಯೋಗಾಸಕ್ತನ ಆತ್ಮವಿಶ್ವಾಸವನ್ನು ಕೊಲ್ಲುತ್ತದೆ. ಪಾಲಕರು ಖಾಸಗೀ ಶಾಲೆಗಳಿಗೆ ಮುಗಿಬೀಳಲು ಸರ್ಕಾರಿ ಶಾಲೆಗಳ ಈ ರೀತಿಯ ಗುಣಮಟ್ಟವಿಲ್ಲದ ಪ್ರಾಥಮಿಕ ಶಿಕ್ಷಣದ ಸ್ಥಿತಿಗತಿಗಳೇ ಕಾರಣ. ಖಾಸಗೀ ಶಾಲೆಗಳಿಗೆ ಹೆಚ್ಚಿನ ಶುಲ್ಕನೀಡಬೇಕಿರುವುದರಿಂದ ಹೆಚ್ಚು ಆದಾಯ ಹೊಂದಿದ ಕುಟುಂಬದ ಮಕ್ಕಳಿಗೆ ಮಾತ್ರ ಈ ಅವಕಾಶವಿರುತ್ತದೆ. ಉನ್ನತ ಶಿಕ್ಷಣದಲ್ಲಿಯೂ (Medical and Engineering) ಅಷ್ಟೇ. ಉತ್ತಮ Course ಮಾಡಿದ ವಿದ್ಯಾರ್ಥಿಗೆ ಉತ್ತಮ ಕೆಲಸ ದೊರೆಯುತ್ತದೆ. ಸಮಾಜದಲ್ಲಿ ಬಡವ ಬಡವನಾಗಿ, ಶ್ರೀಮಂತ ಇನ್ನೂಶ್ರೀಮಂತನಾಗುತ್ತಾನೆ. ನಮ್ಮ ಹಿಂದಿನ ತಲೆಮಾರಿನ ಕಾಲದಿಂದಲೂ ಭಾರತ ಮುಂದುವರೆಯುತ್ತಿರುವ ದೇಶ, ಅಭಿವೃದ್ಧಿ ಶೀಲ ರಾಷ್ಟ್ರ ಎಂಬ ವಾಕ್ಯ ಬದಲಾಗಿಲ್ಲ. ಎಂದಿಗೂ ಭಾರತ ಮುಂದುವರೆದ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವುದಿಲ್ಲವೇ?

ಪ್ರ್ರಾಥಮಿಕ ಶಿಕ್ಷಣ ಅಂದರೆ ಮಕ್ಕಳು ತಮ್ಮ 13 ರಿಂದ 14 ವರ್ಷದೊಳಗೆ ಪಡೆಯುವ ಶಿಕ್ಷಣ. ಮನೋವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು 6 ರಿಂದ 12 ವರ್ಷದೊಳಗಿನ ಮಕ್ಕಳಲ್ಲಿ ಭಾಷಾವಿಕಾಸ ತೀವ್ರವಾಗಿರುತ್ತದೆ ಮತ್ತು ಹೊಸ ವಿಷಯಗಳನ್ನು ಕಲಿಯುವಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ ಎಂದು ಪ್ರಯೋಗಗಳಮೂಲಕ  ಸಾಬೀತುಪಡಿಸಿದ್ದಾರೆ. ಆದರೆ ಮಕ್ಕಳಲ್ಲಿರುವ ಆ ಶಕ್ತಿಯನ್ನು ಪ್ರಾಥಮಿಕ ಶಿಕ್ಷಣ ಮೊಟಕುಗೊಳಿಸುತ್ತಿದೆ. ಈ ವಯಸ್ಸಿನಲ್ಲಿನ ಮಕ್ಕಳಿಗೆ 2 ಅಥವಾ ಹೆಚ್ಚು ಭಾಷೆ ಕಲಿಯುವ ಸಾಮರ್ಥ್ಯವಿರುತ್ತದೆ. ಈ ಹಂತದಲ್ಲಿ ಮಕ್ಕಳಲ್ಲಿ ಭಾಷೆಯ ಬೆಳವಣಿಗೆ ಆಗದಿದ್ದರೆ ಮುಂದಿನ ದಿನಗಳಲ್ಲಿ ಹೊಸಭಾಷೆ ಕಬ್ಬಿಣದಕಡಲೆಯೇ ನಿಜ. ಆಗ ಸಹಜವಾಗಿಯೇ ವಿದ್ಯಾಭ್ಯಾಸ ಕುಂಠಿತವಾಗುತ್ತದೆ. ಉನ್ನತ ವಿದ್ಯಾಭ್ಯಾಸ ಮತ್ತು ವಿಜ್ಞಾನ, ತಂತ್ರಜ್ಞಾನ ಎಲ್ಲಾ ಕ್ಷೇತ್ರದಲ್ಲಿ ನಡೆಯುವ ಜಾಗತಿಕ ವಿದ್ಯಮಾನಗಳ ಬೆಳವಣಿಗೆ ತಿಳಿದುಕೊಳ್ಳುವಲ್ಲಿ ಅಶಕ್ತರಾಗಬಹುದು. ಮಕ್ಕಳಿಗೆ ಈ ವಯಸ್ಸಿನಿಂದಲೇ ಮಾತೃಭಾಷೆಯ ಜೊತೆಗೆ ಜಾಗತೀಕರಣಕ್ಕೆಸಜ್ಜುಗೊಳಿಸುವ ಆಂಗ್ಲಭಾಷೆಯನ್ನು ಸರ್ಕಾರಿ ಶಾಲೆಗಳಲ್ಲಿ ಯಾಕೆ ಪರಿಣಾಮಕಾರಿಯಾಗಿ ಕಲಿಸಬಾರದು? ಹಿಂದೆ ವಿದೇಶಿಯರು ವಸಾಹತು ಎಂಬ ತಕ್ಕಡಿಯಿಂದ ನಮ್ಮನ್ನು ಅಳೆದು ಆಳಿದರು, ಇಂದು ಜಾಗತೀಕರಣ ಎಂಬ ಜಾಲವನ್ನು ಬೀಸಿ ತಮ್ಮ ಆಳ್ವಿಕೆಗೆ ಬುನಾದಿಯನ್ನು ತೋಡುತ್ತಿದ್ದಾರೆ, ಅದಕ್ಕೆ ತಕ್ಕ ಉತ್ತರಕೊಡಲು ನಾವು ಮತ್ತು ನಮ್ಮ ಮುಂದಿನ ಪೀಳಿಗೆ ಸಜ್ಜಾಗಬಾರದೇ? ಇಂದಿನ ನಮ್ಮ ಎಷ್ಟೋ ಶಿಕ್ಷಕರು English ನ್ನು ವೈರಿಯಾಗಿ ಕಾಣುತ್ತಾರೆ ಏಕೆಂದರೆ ಅವರಲ್ಲಿ ಆ ಭಾಷೆಯ ಜ್ಞಾನವಿಲ್ಲ ಇದಕ್ಕೆ ಅವರು ಮಾತೃಭಾಷೆಯ ಮೇಲೆ ತಮಗಿರುವ  ಅಭಿಮಾನ ಎನ್ನುವ ಉತ್ತರ ನೀಡಿ ಜಾರಿಕೊಳ್ಳುತ್ತಾರೆ, ತಮ್ಮನ್ನುತಾವೇ ಕ್ಷಮಿಸಿಕೊಂಡು ಬೀಗುತ್ತಾರೆ.

ಕನ್ನಡ ನಮ್ಮ ಮಾತೃಭಾಷೆ, ನಮ್ಮ ತಾಯಿಇದ್ದಂತೆ ಇದು ಶತಸಿದ್ದ. English ನಮ್ಮ ಅಕ್ಕ-ತಂಗಿಯರಾಗೋ, ಸ್ನೇಹಿತರಾಗೋ ಇರಲಿ. ಲಾಭವಿರುವಾಗ ಅದರೊಡನೆ ವೈರತ್ವ ಬೆಳೆಸಿಕೊಳ್ಳುವುದು ಏಕೆ? ಸಾಹಿತ್ಯ ಒಂದನ್ನು ಬಿಟ್ಟು ವಿಜ್ಞಾನ, ಗಣಿತ ಮತ್ತು ತಂತ್ರಜ್ಞಾನಕ್ಕೆ ಯಾವುದೇ ಭಾಷೆ ಇಲ್ಲ ಅವು ತನ್ನದೇ ಆದಭಾಷೆಯನ್ನು ಹೊಂದಿವೆ ಆ ಭಾಷೆಯಿಂದಲೇ ಆ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಎಂಬುದರ ಬಗ್ಗೆ ನಮಗೆ ಅರಿವಿರಬೇಕು.

ಪ್ರಾಥಮಿಕ ಶಿಕ್ಷಣದ ಹಿಂದುಳಿಯುವಿಕೆಗೆ ಕಾರಣಗಳು ಗೊತ್ತು. ಎಷ್ಟೋ ಸಮೀಕ್ಷೆಗಳು ಭಯಾನಕ ಅಂಕಿ ಅಂಶಗಳನ್ನು ಹೊರಚೆಲ್ಲಿದವು ಆದರೆ ಆ ಸಮೀಕ್ಷೆಗಳು there is a cat, there is a cat ಎಂದು ಸಾರಿದವು but they haven’t given the idea, how to bell the cat. ಮಕ್ಕಳು ಶಾಲೆಯಿಂದಹೊರ ಉಳಿಯದಂತೆ ಎಷ್ಟೋ ಯೋಜನೆಗಳು ಬಂದು ಹೋದವು ಆದರೆ ವಾಸ್ತವತೆ ಬದಲಾಗಿಲ್ಲ. New Broom Sweeps Well ಎಂಬ ಗಾದೆಯಂತೆ ಪ್ರತಿ ಹೊಸ ಯೋಜನೆಗಳು ಚೆನ್ನಾಗಿ ಗುಡಿಸುತ್ತವೆ ಆದರೆ ಕಸದ ಹರಡಿಕೆ ಕಡಿಮೆಯಾದಂತೆ ಕಾಣುವುದಿಲ್ಲ. ಇದು ಬೇರಿನಿಂದ ಗುಣಪಡಿಸಬೇಕಾದಂತಹಖಾಯಿಲೆ. ಕೇವಲ ಹೊಸ ಔಷಧ ಅಷ್ಟು ಕೆಲಸಮಾಡುವುದಿಲ್ಲ. ಹಿಂದೆ ಹೇಳಿದಂತೆ ಪ್ರ್ರಾಥಮಿಕ ಹಂತದ ಶಿಕ್ಷಣ ಸುಧಾರಣೆ ಹೊಂದಬೇಕು. ಇದು ಕಂಪ್ಯೂಟರ್ ಯುಗ ಮುಗಿದು ಮುಂದಿನ ಅತ್ಯಾಧುನಿಕ ಯುಗ ಪ್ರಾರಂಭದ ಕಾಲ, ತ್ಯಾಜ್ಯ ಕಸವನ್ನು ವಿಲೇವಾರಿ ಮಾಡುವ ಮತ್ತು ನಿರ್ವಹಣೆ ಮಾಡುವ, ಕಸದಿಂದಲೂಉತ್ಪನ್ನಗಳನ್ನೂ ತಯಾರಿಸುವ, ಕಸದಬಗ್ಗೆಯೇ ಅಧ್ಯಯನ ಮಾಡುವ, ತ್ಯಾಜ್ಯ ವಸ್ತುಗಳ ನಿರ್ವಹಣಾ ಶಾಸ್ತ್ರವೂ ಪರಿಚಯವಾಗುತ್ತಿರುವ ಕಾಲವಿದು ಆದರೆ ನಮ್ಮ ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ಇರಲಿ ವಿದ್ಯುತ್ ಸೌಕರ್ಯವೇ ಇಲ್ಲ. ಶೌಚಾಯಲವೆಂದರೇನು ಗೊತ್ತಿಲ್ಲ.

ಭಾಷೆ ಮತ್ತು ಕೌಶಲಗಳನ್ನು ಕಲಿಸಲು ಸಾಮರ್ಥ್ಯವಿಲ್ಲದ ಕೆಲವು ಶಿಕ್ಷಕರು ಈ ಭಾಗದ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಬೇರೆ ಜಿಲ್ಲೆಗಳಲ್ಲಿ ಮುಂದುವರೆದಿದ್ದಾರೆ, ಅಲ್ಲಿಯ ವಾತಾವರಣವೇ ಹಾಗೆ. ಪಾಲಕರು ಮನೆಯಲ್ಲಿ ಕಲಿಸಬೇಕು, ಎಷ್ಟೋ ಪಾಲಕರು ಅನಕ್ಷರಸ್ಥರು. ನಮ್ಮ ಶಾಲೆಯಲ್ಲಿ ಮೊದಲನೇಪೀಳಿಗೆಯವರು ಕಲಿಯಲು ಬರುತ್ತಾರೆ, ಅನುವಂಶೀಯತೆ, ಹೀಗೆ ಇನ್ನೂ ವಿಚಿತ್ರವಾದ ಕಾರಣಕೊಟ್ಟು ತಪ್ಪನ್ನು ಮಕ್ಕಳ ಮೇಲೆ ಹೇರುತ್ತಾರೆ. ಮಗು ಕನಿಷ್ಟ 8 ತಾಸು ನಿದ್ರೆ ಮಾಡಿದರೆ, ಸ್ನೇಹಿತರೊಡನೆ 3 ರಿಂದ 4 ತಾಸು ಆಟದಲ್ಲಿ, ಹೆಚ್ಚೆಂದರೆ 4 ರಿಂದ 5 ತಾಸುಗಳು ಮಾತ್ರ. ಮನೆಯಲ್ಲಿ ಕುಟುಂಬದ ಜೊತೆಕಳೆಯುತ್ತಾನೆ. ಶಾಲೆಯಲ್ಲಿಯೇ 8 ತಾಸು ಕಳೆಯುತ್ತಾನೆ. ಶಾಲೆಯೇ ಅವನ ವ್ಯಕ್ತಿತ್ವ ಮತ್ತು ಭವಿಷ್ಯ ರೂಪಿಸುವ ಮುಖ್ಯ ಸಾಧನ. ಆದ್ದರಿಂದ ಮಗು ಕಲಿಕೆಯಲ್ಲಿ ಹಿಂದುಳಿದಿದೆ ಎಂದರೆ ಇದಕ್ಕೆ ಪಾಲಕರು ಹೊಣೆಯಲ್ಲ, ಶಿಕ್ಷಕರು ಮತ್ತು ಶಿಕ್ಷಣ ವ್ಯವಸ್ಥೆಯೇ ಹೊಣೆ. ಮಗುವಿನ ಭವಿಷ್ಯ ಅವನ ಶಿಕ್ಷಕರ ನೆರಳಿನಲ್ಲಿಅಡಕವಾಗಿರುತ್ತದೆ ಮತ್ತು ಮಗು ದೇಶದ ಭವಿಶ್ಯದ ಸೂಚಕವಾಗಿದೆ.

 ಶಿಕ್ಷಣ ಇಷ್ಟು ಮುಖ್ಯವೆಂದಮೇಲೆ ಸರ್ಕಾರ ಇದಕ್ಕೆ ಖರ್ಚು ಮಾಡಲೇಬೇಕು. ಪ್ರಾಥಮಿಕ ಶಿಕ್ಷಣ ಸುಧಾರಣೆ ಕಾಣಬೇಕು. ಪ್ರತಿ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಣ ದೊರೆಯಬೇಕು, ನುರಿತ ಬೋಧನಾ ಸಿಬ್ಬಂಧಿಯನ್ನು ನೇಮಿಸಬೇಕು. ಆಂಗ್ಲ ಭಾಷೆಯನ್ನು ಪರಿಣಾಮಕಾರಿಯಾಗಿ ಬೋಧಿಸಬೇಕು. ಬದುಕನ್ನುಹಸನುಮಾಡುವ ಶಕ್ತಿ ಶಿಕ್ಷಣಕ್ಕಿದೆ ಕೇವಲ ಶಿಕ್ಷಣದಿಂದಲೇ ಸಮಾಜದ, ದೇಶದ ಪ್ರಗತಿ ಸಾಧ್ಯ ಎಂದಮೇಲೆ ಅದಕ್ಕೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಬೇಕು. ಇಲ್ಲಿ ಚೀನೀ ಯಾತ್ರಿಕ ಹ್ಯೂ ಎನ್ ತ್ಸಾ೦ಗ್’ನ ಮಾತು ನೆನೆಪಾಗುತ್ತದೆ keeping the main thing, the main thing, is the main thing.ಮುಖ್ಯವಾದದ್ದನ್ನು ಮುಖ್ಯವಾಗಿ ನೋಡುವುದೇ, ಮುಖ್ಯ ಸ್ಥಾನ ಕೊಡುವುದೇ ಮುಖ್ಯ ಸಂಗತಿ. ಆದರೆ ದೇಶದ ನಾಯಕರ ಸ್ಥಿತಿ ನಾನೇ ಮುಖ್ಯ, ನನಗಿಂತ ಮುಖ್ಯವಾದುದು ಯಾವುದಿಲ್ಲ ಎಂಬ ಧೋರಣೆ ಹೊತ್ತು ಹುಚ್ಚಾಗಿ ಕುಣಿಯುತ್ತಿದೆ. ಸರ್ಕಾರಿ ಶಾಲೆಗಳು ಖಾಸಗೀ ಶಾಲೆಗಳಿಗೆ ಮಾದರಿಯಂತೆ ಇರಬೇಕು.ಸರ್ಕಾರ ಇದಕ್ಕೆ ಖರ್ಚು ಮಾಡಲೇಬೇಕು If the Education is worth, Government should pay for it. ಒಂದು ವೇಳೆ ಸರ್ಕಾರಿ ಶಾಲೆಗಳಿಂದ ವಂಚಿತರಾಗಿದ್ದರೆ ಆಗ ಖಾಸಗೀ ಶಾಲೆಗಳತ್ತ ನೋಡಬಹುದು. ಶಾಲೆ ಚುನಾವಣೆ ಮತಗಟ್ಟೆಯಾಗಿ ಮಾತ್ರ ಬೇಕು ಆದರೆ ಒಂದು ಉತ್ತಮ ತಲೆಮಾರನ್ನುಮತ್ತು ದೇಶದ ಭವಿಷ್ಯವನ್ನು ನಿರ್ಮಿಸುವ  ಕಾರ್ಖಾನೆಯಾಗಿ ಬೇಡವೇ? ಪ್ರಾಥಮಿಕ ಶಿಕ್ಷಣದ ಮೂಲಕ ಮಾತ್ರ ದೇಶದ ಪ್ರಗತಿ ಸಾಧಿಸಲು ಮತ್ತು ದೇಶದ ಅಭಿವೃದ್ಧಿಯನ್ನು ಕಾಡುವ ಸಮಸ್ಯೆಗಳನ್ನು ನಿರ್ಮೂಲನೆ ಮಾಡಲು ಸಾಧ್ಯ. ಪ್ರಾಥಮಿಕ  ಶಿಕ್ಷಣ ಅಷ್ಟು ಮುಖ್ಯವಾದದ್ದು ಅಂದಮೇಲೆ ಅದನ್ನು ಇಷ್ಟರ ಮಟ್ಟಿಗೆ ಏಕೆನಿರ್ಲಕ್ಷಿಸಬೇಕು? ಗೆದ್ದ ನಾಯಕರು  ಈ ವಿಷಯವಾಗಿ ಚಿಂತಿಸುವುದಿಲ್ಲ ಯಾಕೆಂದರೆ ಓಟುಗಳಿಸಿ ಗೆದ್ದ ಎಷ್ಟೋ ನಾಯಕರು ಅನಕ್ಷರಸ್ಥರು. ಪ್ರತಿ ಪಾಠದ ನಂತರ home work ಇರುತ್ತದೆ, ಓಟು ಕಸಿದು ಗೆದ್ದ ನಾಯಕರಿಗೆ ಈ home work ಯಾಕಿಲ್ಲ?

ಗೌತಮ್ ಪಿ ರಾಠಿ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!