ಅಂಕಣ

ಪ್ರಸಿದ್ಧ ಅರೆ ಪಂಡಿತರಿಂದಾಗುವ ಅಪಾಯ

ಸಾಮಾನ್ಯ ನಾಗರೀಕರಿಗೆ ಟಿವಿಗಳಲ್ಲಿ ಕಾಣಿಸಿಕೊಳ್ಳುವವರು, ಪತ್ರಿಕೆಗಳಲ್ಲಿ ಅಂಕಣ ಬರೆಯುವವರು ಹಾಗೂ ಪ್ರಸಿದ್ಧರಾದ ವ್ಯಕ್ತಿಗಳು ಆಯಾ ವಿಷಯಗಳಲ್ಲಿ ಬಹಳ ದೊಡ್ಡ ವಿದ್ವಾಂಸರಾಗಿರ್ತಾರೆ ಎನ್ನುವ ತಪ್ಪು ಕಲ್ಪನೆ ಇರುತ್ತದೆ. ಈ ಮಾತು ಧಾರ್ಮಿಕ ವಿಷಯಕ್ಕೂ ಅನ್ವಯಿಸುತ್ತದೆ. ಪುರಾಣ ಪ್ರವಚನಕಾರರು, ವೇದ ವಿದ್ವಾಂಸರು, ಆಗಮಿಕರು, ತಂತ್ರಶಾಸ್ತ್ರಿಗಳು, ಅರ್ಚಕರು, ಪುರೋಹಿತರು, ಶಾಸ್ತ್ರ ವಿದ್ವಾಂಸರು, ಸಂಸ್ಕೃತ ವಿದ್ವಾಂಸರು, ಜ್ಯೋತಿಷಿಗಳು, ಸಿದ್ಧಾಂತಿಗಳು – ಈ ರೀತಿಯಾಗಿ ಅನೇಕ ವಿಭಾಗಗಳಿವೆ. ಆಗಮದ ವಿಷಯ ವೇದ ವಿದ್ವಾಂಸನಿಗೆ ತಿಳಿಯುವುದಿಲ್ಲ . ವೇದದ ಮಂತ್ರ ಆಗಮಿಕನಿಗೆ ಗೊತ್ತಿರುವುದಿಲ್ಲ. ಸಂಸ್ಕೃತ ವಿದ್ವಾಂಸರಿಗೆ ಪೂಜೆ ಗೊತ್ತಿರುವುದಿಲ್ಲ, ಅರ್ಚಕರಿಗೆ ಸಂಸ್ಕೃತ ಗೊತ್ತಿರುವುದಿಲ್ಲ. ಪುರಾಣ ಪ್ರವಚನಕಾರರಿಗೆ ಧರ್ಮಶಾಸ್ತ್ರ ಗೊತ್ತಿರುವುದಿಲ್ಲ, ಶಾಸ್ತ್ರವಿದ್ವಾಂಸರು ಪುರಾಣಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇತ್ಯಾದಿ ಇತ್ಯಾದಿ. ಈ ಭೇದಗಳು ಜನಸಾಮಾನ್ಯರಿಗೆ ಗೊತ್ತಿರುವುದಿಲ್ಲ. ಅವರ ದೃಷ್ಟಿಯಲ್ಲಿ ಪಂಚೆ ಉಟ್ಟುಕೊಂಡು ಇರುವವರೆಲ್ಲರೂ ಒಂದೇ ರೀತಿಯಲ್ಲಿ ಕಾಣಿಸುತ್ತಾರೆ. ಟಿವಿಯಲ್ಲಿ ಕಾಣಿಸುವವರು ಏನೂ ಓದಿಕೊಳ್ಳದೇ ಇದ್ದರೂ ಜನರ ದೃಷ್ಟಿಯಲ್ಲಿ ಅವರು ಸರ್ವಜ್ಞರಾಗಿರ್ತಾರೆ. ಹಾಗಾಗಿ ತಮ್ಮ ಮನಸ್ಸಿನಲ್ಲಿ ಇರುವ (ಧಾರ್ಮಿಕ, ಆಧ್ಯಾತ್ಮಿಕ, ತಾತ್ವಿಕ, ಸಾಂಸ್ಕೃತಿಕ, ದೈವಿಕ, ಲೌಕಿಕ.. ಜ್ಯೋತಿಷ.. ವಾಸ್ತು ಮುಂತಾದ) ಎಲ್ಲಾ ರೀತಿಯ ಸಂದೇಹಗಳ ಪರಿಹಾರಕ್ಕೆ ಜನರು ಇಂಥವರನ್ನೇ ಆಶ್ರಯಿಸುತ್ತಾರೆ. ಹಾಗೂ ಪ್ರಸಿದ್ಧರಾಗಿರುವ ಅಥವಾ ದೊಡ್ಡ ಧಾರ್ಮಿಕ ಸಂಸ್ಥೆಯ ಹುದ್ದೆಯಲ್ಲಿರುವ ಜನರು ಹೇಳಿದ್ದೆಲ್ಲವೂ ಧರ್ಮವೇ ಎಂದು ನಂಬುವ ಅಮಾಯಕತೆ ಜನರಲ್ಲಿ ಇರುತ್ತದೆ.

ಇತ್ತೀಚೆಗೆ ಪ್ರಸಿದ್ಧ ಪುರಾಣ ಪ್ರವಚನಕಾರರೊಬ್ಬರು ಸಭಾಂಗಣವೊಂದರಲ್ಲಿ ನಾಗರೀಕರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಒಬ್ಬ ನಾಗರೀಕರು “ನಮ್ಮ ತಂದೆ ತಾಯಂದಿರ ಶ್ರಾದ್ಧಗಳನ್ನು ಮಾಡಲಿಕ್ಕೆ ಕಷ್ಟವಾಗುತ್ತಿದೆ. ನಗರ ಜೀವನದ ಖರ್ಚುಗಳನ್ನೂ ನಿಭಾಯಿಸಿ ಪಿತೃಕರ್ಮಗಳನ್ನೂ ಮಾಡುವುದು ದುಸ್ತರವಾಗಿದೆ. ಶ್ರಾದ್ಧ ಮಾಡಿಸುವ ಪುರೋಹಿತರಿಗೆ ಕೊಡಬೇಕಾದಷ್ಟು ದಕ್ಷಿಣೆ ಕೊಡುವ ಸಾಮರ್ಥ್ಯ ಇಲ್ಲ. ಇದಕ್ಕೆ ಏನು ಉಪಾಯ.?” ಎಂದು ಕೇಳಿದರು. ಈ ಪ್ರಶ್ನೆಗೆ ಆ ಪ್ರವಚನಕಾರರು “ನೀವು ನಿಮ್ಮ ಪುರೋತರ ವಿರುದ್ಧ ಪ್ರತಿಭಟಿಸಬೇಕು. ಅವರಿಗೆ ದಕ್ಷಿಣೆ ಕಡಿಮೆ ಪಡೆಯುವಂತೆ ಮಾಡಬೇಕು. ಪ್ರತಿಭಟನೆಯೇ ಇದಕ್ಕೆ ಉಪಾಯ” ಎಂದು ಉಡಾಫೆಯಿಂದ ಉತ್ತರಿಸಿದರು. ಇಂತಹ ಅವಿವೇಕದ ಮಾತುಗಳು ಸಮಾಜದಲ್ಲಿ ಒಡಕು ಹುಟ್ಟು ಹಾಕಿ ಅಮಾಯಕ ನಾಗರೀಕರ ಶ್ರದ್ಧೆಯ ನಾಶ ಮಾಡುತ್ತವೆ. ಜನರ ಮನಸ್ಸಿನಲ್ಲಿ ಶ್ರದ್ಧೆಯ ಉತ್ಪತ್ತಿ ಆಗುವುದು ಬಹಳ ಕಷ್ಟ, ಆದರೆ ಶ್ರದ್ಧಾನಾಶ ಬಹಳ ಸುಲಭ. ಈ ಉತ್ತರ ನೀಡಿದವರು “ಅದು ಧರ್ಮ ಶಾಸ್ತ್ರಕ್ಕೆ ಸಂಬಂಧಪಟ್ಟ ಪ್ರಶ್ನೆ. ಅದು ನನ್ನ ಪರಿಣಿತಿಯ ವಿಷಯ ಅಲ್ಲ” ಅಂತ ಹೇಳಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಆದರೆ ಸಮಾಜದಲ್ಲಿ ಗಳಿಸಿಕೊಂಡ ಪ್ರತಿಷ್ಠೆ ಮರ್ಯಾದೆಗಳನ್ನು ಬೆಳೆಸಿಕೊಂಡು ಹೋಗುವ ಭರದಲ್ಲಿ ಯಾರೂ ಹಾಗೆ ಹೇಳುವುದಿಲ್ಲ ಅನ್ನುವುದು ಕಟು ವಾಸ್ತವ.

ಶಾಸ್ತ್ರವಿಹಿತ ಧಾರ್ಮಿಕ ಕರ್ಮಗಳಲ್ಲಿ ಉತ್ಸರ್ಗ(ಸಾಮಾನ್ಯ-ನಿಯಮ), ವಿಕಲ್ಪ (ಪರ್ಯಾಯ-ನಿಯಮ), ಅಪವಾದ(ವಿಶೇಷ-ನಿಯಮ) ಎಂಬ ಭೇದಗಳು ಇವೆ. ಉದಾಹರಣೆಗೆ ಶ್ರಾದ್ಧ ಮಾಡುವ ವಿಧಾನದಲ್ಲಿ ಉತ್ಸರ್ಗ ನಿಯಮದ ಪ್ರಕಾರ ವೈಶ್ವದೇವ, ಪಿಂಡಪಿತೃಯಜ್ಞ.. ಶ್ರಾದ್ಧ ಭೋಜನ, ತರ್ಪಣ ಮುಂತಾದವುಗಳನ್ನು ಮಾಡಿ ಸಾಂಗವಾಗಿ ಮಾಡಬೇಕೆನ್ನುವುದು ಸಾಮಾನ್ಯ-ನಿಯಮ. ಈ ಸಾಮಾನ್ಯ ನಿಯಮದಲ್ಲಿ ಮಾಡುವ ಶಕ್ತಿ ಮತ್ತು ಸಮಯ ಇಲ್ಲದವನು ಪರ್ಯಾಯ ನಿಯಮದ ಮೂಲಕ ಸಂಕ್ಷಿಪ್ತವಾಗಿ ಮಾಡಬಹುದು. ಅದೂ ಕೂಡ ಸಾಧ್ಯ ಇಲ್ಲದವನು ವಿಶೇಷ ನಿಯಮದ ಮೂಲಕ ಇನ್ನೂ ಸಂಕ್ಷಿಪ್ತವಾಗಿ ಅದನ್ನು ಮಾಡಬಹುದು. ಒಟ್ಟು ಎಂಟು ಪ್ರಕಾರದಲ್ಲಿ ಶ್ರಾದ್ಧಗಳನ್ನು ಮಾಡಬಹುದು. ಯಾವುದೇ ಖರ್ಚು ಇಲ್ಲದೇ ಪುರೋಹಿತರನ್ನು ಕರೆಯದೇ ಕೂಡ ಮಾಡಬಹುದು. ಕೊನೆಗೆ ಸೂರ್ಯನ ಕಡೆಗೆ ಮುಖ ಮಾಡಿ ನಿಂತುಕೊಂಡು ಪಿತೃಗಳನ್ನು ಸ್ಮರಿಸಿ “ನನ್ನ ಕೈಯಲ್ಲಿ ಶ್ರಾದ್ಧ ಮಾಡಲಿಕ್ಕೆ ಸಾಧ್ಯವಾಗುತ್ತಿಲ್ಲ.. ಕ್ಷಮಿಸಿ’’ ಅಂತ ಒಮ್ಮೆ ನಮಸ್ಕರಿಸಿದರೂ ಸಾಕು. ಅದೂ ಕೂಡ “ಶ್ರಾದ್ಧ’’ ಎನಿಸಿಕೊಳ್ಳುತ್ತದೆ. ಪಿತೃಗಳಿಗೆ ಅದು ಸಲ್ಲುತ್ತದೆ. ಆ ಶ್ರದ್ಧೆಯಿಂದ ಆ ಶ್ರದ್ಧಾಳುವಿನ ಅಂತಃಕರಣದಲ್ಲಿ ಆಗಬೇಕಾದ ಆಧ್ಯಾತ್ಮಿಕ ವಿಕಾಸ ಆಗಿಯೇ ಆಗುತ್ತದೆ. ಕಡಿಮೆ ಖರ್ಚಿನಲ್ಲಿ ಅಥವಾ ಖರ್ಚಿಲ್ಲದೇ ಮಾಡಿದ ಕರ್ಮಕ್ಕೆ ಫಲ ಕಡಿಮೆ. ಅದು ಅಧರ್ಮ. ಹೆಚ್ಚು ಖರ್ಚು ಮಾಡಿ ಸಾಂಗವಾಗಿ ಮಾಡಿದರೆ ಮಾತ್ರ ಅದು ಧರ್ಮ ಎಂದು ಧರ್ಮಶಾಸ್ತ್ರ ಹೇಳಿಲ್ಲ. ಹಾಗೆ ಹೇಳಲು ಬರುವುದೂ ಇಲ್ಲ. ಅವರವರ ಯೋಗ್ಯತೆಗೆ ತಕ್ಕಂತೆ ಧರ್ಮ ಬದಲಾಗುತ್ತದೆ. ಆದರೆ ಧರ್ಮ ಬದಲಾದರೂ ಧರ್ಮದ ಆಚರಣೆಯ ಫಲದಲ್ಲಿ ವ್ಯತ್ಯಾಸವಾಗುವುದಿಲ್ಲ. ಒಬ್ಬ ವಿದ್ವಾಂಸ, ಶ್ರೀಮಂತ ದೊಡ್ಡ ಯಜ್ಞ ಮಾಡಿದರೆ ಏನು ಫಲವಿದೆಯೋ, ಒಬ್ಬ ನಿರಕ್ಷರಸ್ಥ ಬಡ ಭಕ್ತ ಹಾಡುವ ಭಜನೆಗೂ ಅಷ್ಟೇ ಫಲವಿದೆ. ಧರ್ಮದ ಆಚರಣೆ ಎಲ್ಲರಿಗೂ ಏಕರೂಪವಾಗಿರುವುದು(practically) ಸಾಧ್ಯವಿಲ್ಲ. ಹಾಗಾಗಿ ಅಧಿಕಾರ ಭೇದ ಎಂಬುವುದು ಇದೆ. ಎಲ್ಲರೂ ಒಂದೇ ರೀತಿಯ ಕರ್ತವ್ಯವನ್ನು(ಧರ್ಮವನ್ನು) ಆಚರಿಸುವ ಅಗತ್ಯವಿಲ್ಲ. ಯೋಗ್ಯತೆ, ಅಧಿಕಾರ ಇದ್ದೂ ಕೂಡ ಆ ಅರ್ಹತೆಗೆ ತಕ್ಕಂತೆ ಧರ್ಮವನ್ನು ಆಚರಿಸದೇ ಇದ್ದಾಗ ಮಾತ್ರ ಅದು ಅಧರ್ಮವಾಗುತ್ತದೆ. ಅದೇ ರೀತಿಯಲ್ಲಿ ಧರ್ಮಕರ್ಮಗಳ ಹೊರತಾಗಿ ಉಪಾಸನೆಯಲ್ಲೂ ಕೂಡ ಅಧಿಕಾರ ಭೇಧದ ಅನುಗುಣವಾಗಿ ಉಪಾಸನಾ ಪದ್ಧತಿಯಲ್ಲಿ ಭೇದಗಳಿರುತ್ತವೆ. ಸಾವಿರಾರು ರೂಪಾಯಿಗಳ ಹೂವು-ಹಣ್ಣು ಹಾಲು ಮೊಸರು ಒಟ್ಟುಮಾಡಿ ಅಭಿಷೇಕಾದಿಗಳಿಂದ ರಾಜೋಪಚಾರ ಮಹಾಪೂಜೆ ಮಾಡಿದರೆ ಮಾತ್ರ ದೆವರು ಒಲಿಯುತ್ತಾನೆ. ಬಡವನ ಸಾಮಗ್ರಿಯಿಲ್ಲದ ಪೂಜೆಗೆ ಒಲಿಯುವುದಿಲ್ಲ ಎಂದು ಹೇಳಲು ಬರುವುದಿಲ್ಲ. ಅದೇ ರೀತಿ ಭಗವಂತನ ನಿರ್ಗುಣ ರೂಪ ತಿಳಿದು ಮಾನಸಿಕವಾಗಿ ಅರ್ಚಿಸುವ ಜ್ಞಾನಿಯಾದ ಭಕ್ತನಿಗೆ ಮೂರ್ತಿಪೂಜೆ ಮಾಡುವ ಮಂದಬುದ್ಧಿಯ ಭಕ್ತನಿಗೆ ಸಿಕ್ಕ ಫಲಕ್ಕಿಂತ ಹೆಚ್ಚಿನ ಫಲ ಸಿಗುತ್ತದೆ ಎಂದು ಹೇಳಿದರೆ ಅದು ಹಾಸ್ಯಾಸ್ಪದವಾಗುತ್ತದೆ. ಅಧಿಕಾರವೆಂಬುದು ಕೇವಲ ಆರ್ಥಿಕವಾದದ್ದಲ್ಲ. ಉತ್ತಮ ಅಧಿಕಾರಿಯು ಮಾಡುವ ನಿರ್ಗುಣ ಉಪಾಸನೆಯಷ್ಟೇ ಅಧಮ ಅಧಿಕಾರಿ ಮಾಡುವ ಮೂರ್ತಿಪೂಜೆಯೂ ಶ್ರೇಷ್ಠವಾಗಿರುತ್ತದೆ. ಆದರೆ ಅವರ ಅಧಿಕಾರ ಭೇದಕ್ಕೆ ತಕ್ಕಂತೆ ಉಪಾಸನಾ ವಿಧಾನದಲ್ಲಿ ಭೇದವಿರುತ್ತದೆಯಷ್ಟೇ.

ಈ ಸೂಕ್ಷ್ಮವನ್ನು ತಿಳಿಯದವರು ಉಪಾಸನೆಗಳಲ್ಲಿ ಹಾಗೂ ಕರ್ಮಗಳಲ್ಲಿ ಶ್ರೇಷ್ಠ-ನಿಕೃಷ್ಟಗಳೆಂಬ ವರ್ಗಳನ್ನು ಹುಟ್ಟುಹಾಕಿರುತ್ತಾರೆ. ಹಾಗೆ ಮಾಡಿದರೆ ಶ್ರೇಷ್ಠ, ಹೀಗೆ ಮಾಡಿದರೆ ಶ್ರೇಷ್ಠ ಅಂತೆಲ್ಲ ಶ್ರೇಷ್ಠತೆಯ ಮಾರ್ಕೆಟಿಂಗ್ ನಡೆಯುತ್ತದೆ. ಜನರು ತಮ್ಮ ಅಧಿಕಾರಕ್ಕೆ ತಕ್ಕ ಧರ್ಮವನ್ನು ಆಚರಿಸದೇ ಶ್ರೇಷ್ಠತೆಯ ಪ್ರಲೋಭನೆಗೆ ಒಳಗಾಗಿ. ತಮ್ಮ ಅಧಿಕಾರ ವ್ಯಾಪ್ತಿಗೆ ಒಳಪಡದ ಧರ್ಮವನ್ನು ಆಚರಿಸಲು ಹೋಗಿ ಅನಾಹುತ ಮಾಡಿಕೊಳ್ಳುತ್ತಾರೆ. ಕೆಲ ಆಚರಣೆಗಳಿಗೆ ಶ್ರೇಷ್ಠತೆಯನ್ನು ಆರೋಪಿಸಿ ಜನರನ್ನು ಸೆಳೆದು ತಮ್ಮ ವೈಯಕ್ತಿಕ ಲಾಭ ಮಾಡಿಕೊಳ್ಳುತ್ತಾರೆ. ಕೆಲ ವಿದ್ವಾಂಸರುಗಳು “ಯಾವುದೇ ಕರ್ಮ ಅಥವಾ ಉಪಾಸನೆ ಮಾಡಿದರೂ ಅದರ ಬಗ್ಗೆ ಸಂಪೂರ್ಣವಾಗಿ ತಿಳುವಳಿಕೆ ಪಡೆದು ಮಾಡಬೇಕು. ಅರ್ಥ ಗೊತ್ತಿಲ್ಲದೇ ಮಂತ್ರ ಹೇಳಿ ಪ್ರಯೋಜನವಿಲ್ಲ. ಯಾಕೆ ಮಾಡಬೇಕು ಎಂದು ಗೊತ್ತಿಲ್ಲದೇ ಮಾಡುವುದು ಮೂಢನಂಬಿಕೆ” ಇತ್ಯಾದಿಯಾಗಿ ಹೇಳುವುದರ ಮೂಲಕ ತಾವು ಜ್ಞಾನಿಗಳು ಎಂದು ಬಿಂಬಿಸಿಕೊಳ್ಳುತ್ತಾರೆ. ಆದರೆ ಆ ರೀತಿಯ ಬೋಧನೆ ಜನಸಾಮಾನ್ಯರಿಗೆ ನಷ್ಟ ಉಂಟುಮಾಡುವಂಥದ್ದೇ ಆಗಿದೆ.

ಉದಾಹರಣೆಗೆ:

ಮೂರ್ತಿಪೂಜೆ ಮಾಡುವ ಒಬ್ಬ ಸಾಮಾನ್ಯ ಅಧಿಕಾರಿ “ಪೂಜೆ ಮಾಡಲು ಯಾವ ಯಾವ ಪ್ರಭೇದದ ಹೂವುಗಳನ್ನು ಬಳಸಬೇಕು? ಯಾವ ಪ್ರಭೇದದ ಹೂವುಗಳನ್ನು ಬಳಸಬಾರದು..” ಎಂದು ತನಗಿಂತ ಉತ್ತಮ ಅಧಿಕಾರಿಯನ್ನು, ಜ್ಞಾನಿಯಾದವನನ್ನು ಕೇಳುತ್ತಾನೆ ಎಂದಿಟ್ಟುಕೊಳ್ಳೋಣ. ಆ ಪ್ರಶ್ನೆಗೆ ಜ್ಞಾನಿಯಾದವನು “ಎಲ್ಲ ಹೂವುಗಳೂ ಭಗವಂತನ ಸೃಷ್ಟಿಯೇ.. ಎಲ್ಲ ಹೂವುಗಳೂ ಶ್ರೇಷ್ಠವೇ. ಹೂವಿನಲ್ಲೂ ಭಗವಂತ ಇದ್ದಾನೆ. ನಿನ್ನೊಳಗೂ ಭಗವಂತ ಇದ್ದಾನೆ. ನನ್ನೊಳಗೂ ಭಗವಂತ ಇದ್ದಾನೆ. ಬಂಗಾರದಿಂದ ಮಾಡಿದ ಆಭರಣ ಸಂಪೂರ್ಣ ಬಂಗಾರವೇ ಆಗಿರುತ್ತದೆ. ಹಾಗೆಯೇ ಭಗವಂತನಿಂದ ನಿರ್ಮಿತವಾದ ಈ ಜಗತ್ತು ಪೂರ್ತಿ ಭಗವಂತನೇ ಆಗಿದೆ. ಪೂಜೆ ಮಾಡುವ ಅಗತ್ಯವೇ ಇಲ್ಲ. ಗಿಡದಿಂದ ಹೂವು ಕಿತ್ತು ದೇವರಿಗೆ ಮುಡಿಸುವುದು ಮೂರ್ಖತನ’’ ಎಂದೆಲ್ಲ ತನ್ನ ಜ್ಞಾನವನ್ನು ಪ್ರದರ್ಶಿಸಿದರೆ .. ಆ ಪ್ರಶ್ನೆ ಕೇಳಿದವನ ಸ್ಥಿತಿ ಏನಾಗಬೇಡ,.? ಅವನು ಕಂಗಾಲಾಗಿ ಹೋಗುತ್ತಾನೆ. ಅವನ ಶ್ರದ್ಧೆಯೇ ನಾಶವಾಗಿ ಹೋಗುತ್ತದೆ.

ಈ ಜ್ಞಾನಿ ಹೇಳಿದ ಮಾತು ಸತ್ಯವಾಗಿದ್ದರೂ ಇಂತಹ ಜ್ಞಾನಿಗಳು ಅಪಾಯಕಾರಿಗಳು. ಕೃಷ್ಣನೂ ಕೂಡ ಗೀತೆಯಲ್ಲಿ ಇಂತಹ ಅಪಾಯಕಾರಿ ಜ್ಞಾನಿಗಳ ಬಗ್ಗೆ ಹೇಳಿದ್ದಾನೆ.

ನ ಬುದ್ಧಿಭೇದಂ ಜನಯೇತ್ ಅಜ್ಞಾನಾಂ ಕರ್ಮಸಂಗಿನಾಂ

ಜೋಷಯೇತ್ ಸರ್ವಕರ್ಮಾಣಿ ವಿದ್ವಾನ್ ಯುಕ್ತಃ ಸಮಾಚರನ್ – ಭ.ಗೀ-3-26

ಆತ್ಮಸ್ವರೂಪವನ್ನರಿಯದೇ ಕರ್ಮಗಳ ಆಚರಣೆಯಲ್ಲಿ ಮಗ್ನರಾಗಿರುವ ಕಡಿಮೆ ಬುದ್ಧಿಯ ಅಧಮ ಅಧಿಕಾರಿಗಳಲ್ಲಿ ಜ್ಞಾನಿಯಾದವನು (ನಿಜವಾದ ತತ್ವವನ್ನು ಮುಚ್ಚಿಡುವುದು ತರವಲ್ಲ ಎಂದು ಅದನ್ನು ಉಪದೇಶ ಮಾಡುವ ಭರದಲ್ಲಿ) ಬುದ್ಧಿಭೇದವನ್ನು ಉಂಟು ಮಾಡಬಾರದು. ಕೇಳುಗನ ಗ್ರಹಣಶಕ್ತಿಯು ಅದನ್ನು ಗ್ರಹಿಸೀತೋ ಇಲ್ಲವೋ ಎಂಬುದರ ಕಡೆಗೆ ಗಮನ ಹರಿಸಬೇಕು.

ಆಧ್ಯಾತ್ಮ ವಿಚಾರವನ್ನು ನೇರವಾಗಿ ಗ್ರಹಿಸಲಿಕ್ಕೆ ಸ್ವಲ್ಪ ಮಟ್ಟಿಗಾದರೂ ಚಿತ್ತಶುದ್ಧಿಯ ಅಗತ್ಯವಿರುತ್ತದೆ. ಜನ್ಮಾಂತರಗಳಿಂದ ಪಡೆದುಕೊಂಡು ಬಂದ ವಾಸನಾ ಮತ್ತು ಸಂಸ್ಕಾರ, ಜೀವನದ ಧಾರ್ಮಿಕ ವ್ಯವಹಾರ, ಶೌಚಾದಿ ಆಚರಣೆ, ಬೆಳೆದ ಪರಿಸರ, ಪಡೆದ ತರಬೇತು, ಕಲಿತ ವಿದ್ಯೆ, ತಿನ್ನುವ ಆಹಾರ, ಉಡುವ ಬಟ್ಟೆ ಮುಂತಾದ ಅನೇಕ ಸಂಗತಿಗಳು ಬುದ್ಧಿಯ ಶುದ್ಧತೆಯನ್ನು( ಸಾತ್ವಿಕತೆಯನ್ನು) ಪ್ರಭಾವಿಸುತ್ತವೆ. ಹಾಗಾಗಿ ಮೊದಲು ಉಡುವ ಬಟ್ಟೆ, ತಿನ್ನುವ ಆಹಾರ ಮುಂತಾದ ಎಲ್ಲ ಸಂಗತಿಗಳಲ್ಲಿ ಸಾತ್ವಿಕತೆಯನ್ನು ಹೆಚ್ಚಿಸಿಕೊಂಡಲ್ಲಿ ಬುದ್ಧಿಯೂ ಸಾತ್ವಿಕವಾಗಿ ಆ ವಿಷಯ ಗ್ರಹಿಸಲು ಯೋಗ್ಯವಾಗುವುದು. ಬುದ್ಧಿಯು ಆ ಯೋಗ್ಯತೆಯನ್ನು ಸಂಪಾದಿಸುವವರೆಗೂ ಎಲ್ಲ ರೀತಿಯ ಕರ್ಮಗಳನ್ನು ಉಪಾಸನಾ ವಿಧಾನಗಳನ್ನೂ ತಪ್ಪದೇ ಮಾಡಬೇಕಾಗುತ್ತದೆ.

ಹಾಗಾಗಿ ಜ್ಞಾನಿಯಾದವನು ಅಜ್ಞಾನಿಗೆ ಅಂತಹ ಶುದ್ಧತೆ ಬರಲಿಕ್ಕಾಗಿ “ಕರ್ತವ್ಯ ಕರ್ಮಗಳನ್ನು ಶ್ರದ್ಧೆಯಿಂದ ಆಚರಿಸು, ಆದರೆ ಅವುಗಳಿಂದ ಫಲವನ್ನು ಅಪೇಕ್ಷಿಸಬೇಡ’’ ಎಂದು ಬೋಧಿಸಬೇಕೇ ಹೊರತು ಕರ್ಮಗಳೆಲ್ಲ ವ್ಯರ್ಥ, ಅವುಗಳನ್ನೆಲ್ಲ ಬಿಟ್ಟುಬಿಡು, ಆತ್ಮಚಿಂತನೆ ಪ್ರಾರಂಭ ಮಾಡು’’ ಎನ್ನುವ ಮೂಲಕ ಹಾದಿ ತಪ್ಪಿಸಬಾರದು. ಅದರ ಬದಲಾಗಿ ಜ್ಞಾನಿಯಾದವನು “ತನಗೆ ಸ್ವಂತಕ್ಕೆ ಕರ್ಮಗಳ, ಉಪಾಸನೆಯ ಫಲದ ಆಸೆ ಇಲ್ಲದೇ ಹೋದರೂ” ಮಂದಮತಿಯಾದ ಜನರ ಮಾರ್ಗದರ್ಶನಕ್ಕಾಗಿ ಅವರ ಜೊತೆ ಸೇರಿ ಅವರ ಬುದ್ಧಿಮಟ್ಟಕ್ಕೆ ತಕ್ಕಂತೆ ಕರ್ಮ-ಉಪಾಸನೆಗಳನ್ನು ಮಾಡಬೇಕು.

“ವಿದ್ವಾನ್ ಯುಕ್ತಃ ಸಮಾಚರನ್’’, ವಿದ್ವಾಂಸನು ತಾನು ಜ್ಞಾನ ಪಡೆದು “ಮುಕ್ತನಾಗಿದ್ದರೂ’’ ಅವುಗಳನ್ನು ಮೀರಿದ್ದರೂ, ತನಗಿಂತ ಕಡಿಮೆ ಜ್ಞಾನ ಹೊಂದಿದ ಜನರ ಏಳಿಗೆಗಾಗಿ ಅವರನ್ನು ವಿಹಿತ ಕರ್ಮಾಚರಣೆ ಮಾಡುವಂತೆ ಪ್ರೇರೇಪಿಸಲಿಕ್ಕಾಗಿ ತಾನೂ ಕೂಡ ಅವುಗಳನ್ನು ಆಚರಿಸಬೇಕು.

ಯದ್ ಯದಾಚರತಿ ಶ್ರೇಷ್ಠಃ ತತ್ತದೇವ ಇತರೋ ಜನಃ

ಸ ಯತ್ ಪ್ರಮಾಣಂ ಕುರುತೆ ಲೋಕಃ ತದನುವರ್ತತೆ – ಭಗವದ್ಗೀತೆ 3-21

ಸಮಾಜದಲ್ಲಿ ಶ್ರೇಷ್ಠರೆನಿಸಿಕೊಂಡವನು ಯಾವ ಯಾವ ಕರ್ಮಗಳನ್ನು ಮಾಡುತ್ತಾನೋ ಉಳಿದ ಸಾಮಾನ್ಯ ಜನರೂ ಅವುಗಳನ್ನೇ ಮಾಡಬಯಸುತ್ತಾರೆ. ಶ್ರೇಷ್ಠನೆನಿಸಿಕೊಂಡವನು ಮಾಡುವುದನ್ನೇ ಪ್ರಮಾಣ ಎಂದು ಭಾವಿಸಿ ಲೋಕವು ಅವನನ್ನು ಅನುಸರಿಸುತ್ತದೆ.

ಕರ್ಮ ಕಾಂಡ ಮತ್ತು ಉಪಾಸನಾ ಕಾಂಡ ಇವೆರಡನ್ನೂ ತ್ಯಜಿಸಿ ಜ್ಞಾನ ಕಾಂಡದ ಮಾರ್ಗಿಗಳಾದ ಸನ್ಯಾಸಿಗಳಿಗೆ ಯಾವುದೇ ರೀತಿಯ ಧಾರ್ಮಿಕ ಆಚರಣೆ ಮಾಡುವ ಅಗತ್ಯವಿರುವುದಿಲ್ಲ. ಅವರು ಅವುಗಳನ್ನು ದಾಟಿರುತ್ತಾರೆ. ಆದರೂ ಸಾಮಾನ್ಯಜನರಿಗೆ ಮಾರ್ಗದರ್ಶನ, ಮೇಲ್ಪಂಕ್ತಿ ಹಾಕಿಕೊಡಲಿಕ್ಕಾಗಿ ಸನ್ಯಾಸಿಗಳೂ ಕೂಡ ದೇವರ ಪೂಜೆಯನ್ನು ಮಾಡುತ್ತಾರೆ. ಅನೇಕ ನಿಯಮಗಳನ್ನು ಅನುಸರಿಸುತ್ತಾರೆ. ತಾವು ಮಾಡದೇ ಇದ್ದರೂ ಧಾರ್ಮಿಕ ಅನುಷ್ಠಾನಗಳನ್ನು ಸಾಮೂಹಿಕವಾಗಿ ಆಯೋಜಿಸುತ್ತಾರೆ. ಅದೆಲ್ಲವೂ ಲೋಕದ ಮಾರ್ಗದರ್ಶನಕ್ಕಾಗಿಯೇ ಹೊರತು ಸನ್ಯಾಸಿಗೆ ಅವುಗಳನ್ನೆಲ್ಲ ಮಾಡುವ ಅಗತ್ಯವಿರುವುದಿಲ್ಲ. ಅದು ಅವರ ವೈಯಕ್ತಿಕ ಧರ್ಮದ ಅಂಗವೂ ಅಲ್ಲ. ಆದರೂ ಅವರು ಮಾಡುತ್ತಾರೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಸಮಾಜದಲ್ಲಿ ಜ್ಞಾನಿಗಳೆನಿಸಿಕೊಂಡವರು ತಮ್ಮ ಮಾತು ಮತ್ತು ಆಚರಣೆಯನ್ನು ಸಮಾಜದ ಹಿತ ಕಾಯುವಂತೆ ಇಟ್ಟುಕೊಳ್ಳಬೇಕೇ ವಿನಃ, ಜ್ಞಾನಪ್ರದರ್ಶನದ ಉತ್ಸಾಹದಲ್ಲಿ ಅನಾಹುತ ಉಂಟುಮಾಡಬಾರದು.

ನಾವು ಮೆಟ್ಟಿಲು ಏರಿ ಗುರಿ ಮುಟ್ಟಿದ ಕೂಡಲೇ ಮೆಟ್ಟಿಲನ್ನು ತುಚ್ಛವಾಗಿ ಕಂಡು ಅದನ್ನು ಒಡೆದು ಹಾಕಿದರೆ .. ಇನ್ನೂ ಮೆಟ್ಟಿಲು ಏರಬೇಕಾದವರಿಗೆ ಮೆಟ್ಟಿಲುಗಳೇ ಉಳಿಯುವುದಿಲ್ಲ. ಹಾಗಾಗಿ ನಮಗೆ ಮೆಟ್ಟಿಲುಗಳ ಪ್ರಯೋಜನ ಮುಗಿದು ಹೋಗಿದ್ದರೂ ಬೇರೆಯವರಿಗೆ ಉಪಯೋಗವಾಗಲಿ ಎನ್ನುವ ಕಾರಣಕ್ಕೆ ಮೆಟ್ಟಿಲುಗಳನ್ನು ರಕ್ಷಿಸಬೇಕು. ಹಾಗೆಯೇ ಧರ್ಮ-ಕರ್ಮ, ಉಪಾಸನೆಗಳನ್ನು ಮೀರಿ ಜ್ಞಾನಿಗಳಾಗಿದ್ದರೂ ಸಾಮಾನ್ಯಬುದ್ಧಿಯ ಜನರ ಬುದ್ಧಿಮಟ್ಟಕ್ಕೆ ಅನುಸಾರವಾಗಿ ಅವರಿಗೂ ಅನುಕೂಲ ಆಗಬೇಕು ಎನ್ನವ ಕಾರಣಕ್ಕೆ ಉಪಾಸನಾ ಪರಂಪರೆಗಳನ್ನು, ಆಚರಣೆಗಳನ್ನು, ಸಾಂಪ್ರದಾಯಗಳನ್ನು ರಕ್ಷಿಸಬೇಕು. ಅವುಗಳು ವ್ಯರ್ಥ, ಅವುಗಳ ಹಿಂದಿನ ಮರ್ಮ ತಿಳಿಯದೇ ಆಚರಣೆ ಮಾಡಿ ಏನೂ ಪ್ರಯೋಜನವಿಲ್ಲ. ಎಲ್ಲವನ್ನೂ ತಿಳಿದುಕೊಂಡೇ ಮಾಡಬೇಕು ಅಂತೆಲ್ಲ ಸಂಪ್ರದಾಯ ಹಾಗೂ ಶ್ರದ್ಧೆಯ ನಾಶ ಮಾಡಬಾರದು. “ವಿವರ ತಿಳಿಯದೇ ಏನು ಮಾಡಿದರೂ ವ್ಯರ್ಥ” ಎಂದು ಹೇಳುವುದು ಸರಿಯಲ್ಲ. ಎಲ್ಲರೂ ಎಲ್ಲ ವಿವರಗಳನ್ನೂ ತಿಳಿದುಕೊಳ್ಳುವುದು ಸಾಧ್ಯವಿಲ್ಲ. ಹಾಗಾಗಿ ವಿವರ ತಿಳಿಯದೇ ಆಚರಣೆಯನ್ನೇ ಮಾಡಬಾರದು ಎನ್ನುವ ಕಾರಣಕ್ಕೆ ಆಚರಣೆಗಳನ್ನು ನಿಲ್ಲಿಸಿಬಿಟ್ಟರೆ ನಿಲ್ಲಿಸಿದವನಿಗೆ ಮಾತ್ರವಲ್ಲ.. ಇತರರಿಗೂ ನಷ್ಟವಾಗುತ್ತದೆ. ಸಂಪೂರ್ಣ ವಿವರ ತಿಳಿದು ಆಚರಿಸಿದಾಗ ಹೆಚ್ಚಿನ ಪ್ರಯೋಜನ ಆಗುವುದು ನಿಜ. ಆದರೆ ಅದರ ತಿಳುವಳಿಕೆ ರಹಿತವಾಗಿ ಮಾಡಲೇಬಾರದು ಎನ್ನುವುದು ಸೂಕ್ತವಲ್ಲ. ಮರ್ಮ ತಿಳಿದಿರಲಿ ಅಥವಾ ತಿಳಿಯದೇ ಇರಲಿ.. ಅದರ ಆಚರಣೆ ಮಾಡುತ್ತಾ ಹೋಗುವುದರಿಂದ ಆಗಬೇಕಾದ ಪ್ರಯೋಜನ ಆಗಿಯೇ ಆಗುತ್ತದೆ. .

ಈಗ ಒಬ್ಬ ವ್ಯಕ್ತಿಗೆ ಸಂಧ್ಯಾವಂದನೆ ಏಕೆ ಮಾಡಬೇಕು, ಅದರಿಂದ ಏನೇನು ಪ್ರಯೋಜನ, ಗಾಯತ್ರಿ ಉಪಾಸನೆಯ ಮಹತ್ವ ಏನು ಎಂಬ ತಿಳುವಳಿಕೆ ಇರುವುದಿಲ್ಲ ವೆಂದಿಟ್ಟುಕೊಳ್ಳೋಣ. “ಎಲ್ಲವನ್ನೂ ತಿಳಿದೇ ಮಾಡಬೇಕು. ತಿಳಿಯದೇ ಮಾಡಿದರೆ ಪ್ರಯೋಜನವಿಲ್ಲ’’ ಎಂದು ಆ ವ್ಯಕ್ತಿಗೆ ಬೋಧನೆ ಮಾಡಿದರೆ ಆ ವ್ಯಕ್ತಿ ತಾನು ಮಾಡಬೇಕಾದ ಸಂಧ್ಯಾವಂದನೆಯ ಹಿನ್ನೆಲೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವ ಕಷ್ಟ ತೆಗೆದುಕೊಳ್ಳುವುದಿಲ್ಲ. “ನನಗೆ ಏನೂ ಗೊತ್ತಿಲ್ಲ. ಹಾಗಾಗಿ ನಾನು ಸಂಧ್ಯಾವಂದನೆಯನ್ನು ಮಾಡುವುದೇ ಇಲ್ಲ. ಯಾವಾಗ ಅದರ ಬಗ್ಗೆ ತಿಳಿಯುತ್ತದೋ ಆವಾಗ ಪ್ರಾರಂಭ ಮಾಡ್ತೀನಿ” ಎಂದುಕೊಂಡು ತನ್ನ ಧರ್ಮವನ್ನು ಬಿಟ್ಟುಬಿಡುವ ಸಂಭವವೇ ಹೆಚ್ಚು. ಅವನು ಅದನ್ನು ತಿಳಿದುಕೊಳ್ಳುವ ಸಂದರ್ಭವೂ ಬಾರದೇ ಹೋಗಬಹುದು. ಹಾಗೇನಾದರೂ ಆದಲ್ಲಿ ಆ ವ್ಯಕ್ತಿಯನ್ನು ನೋಡಿ ಕಲಿಯಬೇಕಾದ ಆತನ ಮಕ್ಕಳು ನಮ್ಮಪ್ಪ ಮಾಡುವುದಿಲ್ಲ, ಹಾಗಾಗಿ ನಾವೂ ಮಾಡುವ ಅಗತ್ಯವಿಲ್ಲ ಎಂದು ಭಾವಿಸುತ್ತಾರೆ. ಇದರಿಂದಾಗಿ ಆ ಮಕ್ಕಳಿಗೆ ತುಂಬಲಾರದ ನಷ್ಟ ಉಂಟಾಗುತ್ತದೆ. ಆ ಮಕ್ಕಳಿಗಾದ ನಷ್ಟಕ್ಕೆ ಅವರ ಮಾರ್ಗದರ್ಶನಕ್ಕಾಗಿ ತನ್ನ ಧರ್ಮ ಆಚರಿಸದ ತಂದೆ ಮತ್ತು ಆ ತಂದೆಗೆ “ಎಲ್ಲವನ್ನೂ ತಿಳಿದೇ ಮಾಡಬೇಕು-ಇಲ್ಲವಾದರೆ ಪ್ರಯೋಜನವಿಲ್ಲ’’ ಎಂದು ತಲೆ ಕೆಡಿಸಿದ (ಅರೆ) ಜ್ಞಾನಿಯಾದ ಪಂಡಿತ- ಇಬ್ಬರೂ ಜವಾಬ್ದಾರರಾಗುತ್ತಾರೆ. ನಮಗೆ ಅದರ ಹಿನ್ನೆಲೆ ಗೊತ್ತಿಲ್ಲ ಅನ್ನವು ಕಾರಣಕ್ಕೆ ನಾವು ಧರ್ಮವನ್ನು, ಉಪಾಸನಾ ಪರಂಪರೆಯನ್ನು ಬಿಟ್ಟದ್ದೇ ಆದಲ್ಲಿ ಅದು ಲುಪ್ತವಾಗಿ ಬೇರೆಯವರಿಗೆ ಆಗಬಹುದಾಗಿದ್ದ..ಪ್ರಯೋಜನಕ್ಕೆ ಮಾರ್ಗವೂ ಇಲ್ಲವಾಗುತ್ತದೆ.

ಒಬ್ಬ ವ್ಯಕ್ತಿಗೆ ಧೂಮಪಾನ ಮಾಡುವ ಅಭ್ಯಾಸವಿರುತ್ತದೆ. ಆತನಿಗೆ ತನ್ನ ಆರೋಗ್ಯದ ಬಗ್ಗೆ ಕಾಳಜಿ ಇರುವುದಿಲ್ಲ. ಆರೋಗ್ಯದ ಮಹತ್ವವೂ ಆತನಿಗೆ ಗೊತ್ತಿರುವುದಿಲ್ಲ ಎಂದಿಟ್ಟುಕೊಳ್ಳೋಣ. ಆದರೆ ಆತ No smoking zone ಗೆ ಹೋದ ಕೂಡಲೇ ತನ್ನ ದುರಭ್ಯಾಸವನ್ನು ಹತ್ತಿಕ್ಕಿಕೊಳ್ಳಲೇಬೇಕಾಗುತ್ತದೆ. ಅದು ಆ ಸ್ಥಳದ ಧರ್ಮ. ಅವನಿಗೆ ತನ್ನ ಆರೋಗ್ಯದ ಕಾಳಜಿ ಇಲ್ಲದೇ ಇದ್ದರೂ ಬೇರೆಯವರ ಆರೋಗ್ಯ ರಕ್ಷಣೆಗಾಗಿ ಅವನು ಅಲ್ಲಿ ಆ ಧರ್ಮವನ್ನು ಪಾಲಿಸಲೇಬೇಕು. ಅದು ಧರ್ಮ ಮಾತ್ರವಲ್ಲ. Common sense ನ ವಿಷಯ ಕೂಡ. ಎಲ್ಲ ರೀತಿಯ ಧರ್ಮವೂ ಈ ಕಾಮನ್ ಸೆನ್ಸ್’ನ ಆಧಾರದ ಮೇಲೆಯೇ ನಿಂತಿರುತ್ತದೆ. ಇದೇ ರೀತಿ ನಮಗೆ ನಿರ್ದಿಷ್ಟವಾದ ಕೆಲ ಆಚರಣೆಗಳ ಬಗ್ಗೆ ಮಾಹಿತಿ, ಆಸಕ್ತಿ, ಶ್ರದ್ಧೆ ಮುಂತಾದವುಗಳು ಇಲ್ಲದೇ ಹೋದರೂ (ಪರಂಪರೆಯ ನಾಶದ ರೂಪದಲ್ಲಿ ಮುಂದಿನ ಪೀಳಿಗೆಗೆ) ಬೇರೆಯವರಿಗೆ ನಷ್ಟವಾಗಬಾರದು ಎನ್ನುವ ಕಾಮನ್ ಸೆನ್ಸ್ ಇಟ್ಟುಕೊಂಡು ಆಚರಣೆಗಳನ್ನು ನಡೆಸಬೇಕು. ನಮಗೆ ಆಚರಣೆಯ ಪ್ರಯೋಜನ ತಿಳಿದಿಲ್ಲವೆಂಬ ಕಾರಣದಿಂದ ಅನಾಚಾರ ಮಾಡುವುದು ಸರಿಯಲ್ಲ.

ಸದಾಚಾರದಿಂದ ಚಿತ್ತಶುದ್ಧಿಯಾಗುತ್ತದೆ. ಈ ಸದಾಚಾರ ಜೀವನದ ಪ್ರತಿಯೊಂದು ಕರ್ಮಗಳಲ್ಲೂ ಇದೆ. ಉದಾಹರಣೆಗೆ ಈರುಳ್ಳಿ-ಬೆಳ್ಳುಳ್ಳಿ ಮುಂತಾದ ತಾಮಸಿಕ ಆಹಾರ ಸೇವನೆಯಿಂದ ಸಾತ್ವಿಕತೆಯ ಬೇಳವಣಿಗೆ ಕುಂಠಿತವಾಗುತ್ತದೆ ಎನ್ನುವ ಕಾರಣಕ್ಕೆ ಅಂತಹ ಪದಾರ್ಥಗಳನ್ನು ತಿನ್ನಬಾರದು ಎನ್ನುವುದು ಕಾಮನ್ ಸೆನ್ಸ್. ಈ ನಿಯಮ ಸದಾಚಾರದ ಅಂಗ. ಆದರೆ ಒಂದು ಮನೆಯ ಒಡತಿ ತನಗೆ ಅಂಥದ್ದೆಲ್ಲ ‘’ಮಡಿವಂತಿಕೆ, ಮೂಢನಂಬಿಕೆ’’ ಎಂದು ತೋರುತ್ತದೆ, ತಾನು ಮುಂದುವರಿದ ಜಮಾಜದವಳು” ಎನ್ನುವ ಕಾರಣಕ್ಕಾಗಿ ಪ್ರತೀ ದಿನ ಆ ಪದಾರ್ಥಗಳ ಅಡಿಗೆಯನ್ನೇ ಮಾಡುತ್ತಾಳೆ. ಆಗ ಅದನ್ನು ತಿನ್ನುವ ಆ ಮನೆಯ ಎಲ್ಲ ಸದಸ್ಯರಲ್ಲಿಯೂ ತಾಮಸಿಕ ಗುಣ ಹೆಚ್ಚು ವೃದ್ಧಿಯಾಗಿ ಅವರ ಆಂತರಿಕ ವಿಕಾಸಕ್ಕೆ ಹೊಡೆತ ಬೀಳುತ್ತದೆ. ಈ ರೀತಿ ಒಬ್ಬರ ಅನಾಚಾರ ಅವರ ಸುತ್ತಮುತ್ತಲಿನವರ ಬೆಳವಣಿಗೆಯನ್ನೂ ಹಾಳು ಮಾಡುತ್ತದೆ. ಈ ಕಾಮನ್ ಸೆನ್ಸ್ ಇಟ್ಟುಕೊಂಡು ನಮಗೊಬ್ಬರಿಗಾಗಿ ಮಾತ್ರವಲ್ಲದೇ ನಮ್ಮ ಸುತ್ತಮುತ್ತಲಿನವರಿಗಾಗಿ, ನಮ್ಮ ಸಮಾಜಕ್ಕಾಗಿ ಹಾಗೂ ನಮ್ಮ ಮುಂದಿನ ಪೀಳಿಗೆಯ ಪ್ರಯೋಜನವನ್ನೂ ಗಮನದಲ್ಲಿ ಇಟ್ಟುಕೊಂಡು ಆಚರಣೆಗಳನ್ನು ಆಚರಿಸಬೇಕು. ಈ ಕಾರಣಕ್ಕಾಗಿಯೇ ಧಾರ್ಮಿಕ ನಿಯಮಗಳಲ್ಲಿ ವೈಯಕ್ತಿಕ ಅಭಿಪ್ರಾಯಗಳಿಗೆ ಅವಕಾಶವಿರುವುದಿಲ್ಲ. ಏಕೆಂದರೆ ಧರ್ಮ ಎನ್ನವುದು ವೈಯಕ್ತಿಕ ನಂಬಿಕೆಯಲ್ಲ. ಅದು(ಧಾರ್ಮಿಕ ಸಂಸ್ಕೃತಿಯು) ಸಾಮೂಹಿಕ ಹಾಗೂ ಸಾರ್ವತ್ರಿಕ ಪ್ರಯೋಜನಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದ್ದಾಗಿರುತ್ತದೆ.

ಹಾಗೆಯೇ ಧರ್ಮ, ದೇವರು ಮುಂತಾದವುಗಳನ್ನೆಲ್ಲ ಚಿಕ್ಕ ವಯಸ್ಸಿನ ಮಕ್ಕಳ ತಲೆಯಲ್ಲಿ ತುಂಬಬಾರದು. ಅವರಿಗೆ ಆಸಕ್ತಿ ಇದ್ದರೆ ಅವರೇ ಆ ಮಾರ್ಗಕ್ಕೆ ಬರುತ್ತಾರೆ ಇಲ್ಲವಾದರೆ ಇಲ್ಲ- ಎನ್ನುವ ಅಭಿಪ್ರಾಯವೂ ಕೂಡ ಅಪಾಯಕಾರಿ. ನಾಲ್ಕು ವರ್ಷ ವಯಸ್ಸಿನ ಮಕ್ಕಳಿಗೆ ನಾನು ಶಾಲೆಗೆ ಹೋಗಬೇಕು, ವಿದ್ಯೆ ಕಲಿಯಬೇಕು.. ದೊಡ್ಡವನಾದ ಮೇಲೆ ಹಾಗೆ ಆಗಬೇಕು.. ಹೀಗೆ ಆಗಬೇಕು ಎಂದೆಲ್ಲ ಏನೂ ತಿಳಿದಿರುವುದಿಲ್ಲ. ತಿಳುವಳಿಕೆ ಇಲ್ಲದ ಕಾರಣ ವಿದ್ಯೆಯಲ್ಲಿ ಆಸಕ್ತಿಯೂ ಇರುವುದಿಲ್ಲ. ಆದರೆ ನಾವು ನಾಲ್ಕನೇ ವಯಸ್ಸಿಗೆ ಬಲವಂತವಾಗಿ ವಿದ್ಯಾಭ್ಯಾಸ ಪ್ರಾರಂಭ ಮಾಡಿಸುತ್ತೀವೋ ಇಲ್ಲವೋ..? ಯಾಕೆ ಹಾಗೆ ಮಾಡಬೇಕು..? ಮುಂದೆ ಯಾವತ್ತೋ ಆಸಕ್ತಿ ಬಂದರೆ ಶಾಲೆಗೆ ಹೋಗುತ್ತಾನೆ. ಇಲ್ಲವಾದರೆ ಇಲ್ಲ. ಬಿಟ್ಟುಬಿಡಿ ನೋಡೋಣ. ಆದರೆ ನಾವು ಹಾಗೆ ಮಾಡುವುದಿಲ್ಲ. ಅವನಿಗೆ ಆಸಕ್ತಿ ಬರುವ ವೇಳೆಗೆ ಸಮಯ ಮೀರಿ ಹೋಗಿರುತ್ತದೆ. ಶಾಲೆಗಳಲ್ಲಿ ಪ್ರವೇಶ ಸಿಗುವುದಿಲ್ಲ. ಪ್ರವೇಶ ಸಿಕ್ಕರೂ ಅಲ್ಲಿ ನಡೆಯುವ ಪಾಠಗಳನ್ನು ಗ್ರಹಿಸಲು ಬೇಕಾದ ಎಲಿಮೆಂಟರಿ ಮಟ್ಟದ ಸಿದ್ಧತೆ ಆಗಿರುವುದಿಲ್ಲ. ಅಡಿಪಾಯವೇ ಸರಿಯಾಗಿ ಬೀಳದ ಕಾರಣ ವಿದ್ಯೆ ಕುಂಠಿತವಾಗುತ್ತದೆ. ಅದರ ಪರಿಣಾಮ ಜೀವನ ಪರ್ಯಂತ ಆಗುತ್ತದೆ. ಅದೇ ರೀತಿ ಬಾಲ್ಯದಲ್ಲೇ ಆಚರಿಸಬೇಕಾದ ಧರ್ಮದ ಸಾಮಾನ್ಯ ಆಚರಣೆಗಳನ್ನು ತಂದೆತಾಯಿಗಳು ಮಕ್ಕಳಿಗೆ ರೂಢಿಸಿ ಭಗವಂತನಲ್ಲಿ ಭಯ-ಭಕ್ತಿ ಉಂಟು ಮಾಡಿದಲ್ಲಿ ಮುಂದಿನ ಬೇಳವಣಿಗೆಗೆ ಪೂರಕವಾಗುತ್ತದೆ. ವಯೋ ಸಹಜವಾಗಿ ಬೌದ್ಧಿಕ ಬೆಳವಣಿಗೆ ಆದ ಮೇಲೆ ಭಯ ಹೊರಟುಹೋಗಿ ಭಕ್ತಿ ಬೆಳೆಯುತ್ತದೆ.

ಸದಾಚಾರದ ಪರಿಣಾಮದಿಂದ ಅಂತಃಕರಣದ ವಿಕಾಸ ಚೆನ್ನಾಗಿ ನಡೆದು ಮಹತ್ತರವಾದದ್ದನ್ನು ಗ್ರಹಿಸಲು ಬುದ್ಧಿಯು ಯೋಗ್ಯವಾಗುತ್ತದೆ. ಶಾಲೆಯಲ್ಲಿ ಕಲಿಯುವ ವಿದ್ಯೆಯಿಂದ ಉದ್ಯೋಗ ಎಂಬ ಪ್ರಯೋಜನ ಇದೆ. ಆ ಪ್ರಯೋಜನ ಪ್ರತ್ಯಕ್ಷವಾಗಿ ಕಣ್ಣಿಗೆ ಕಾಣುತ್ತದೆ.ಅದು ಲೌಕಿಕ ಪ್ರಯೋಜನ. ಆದರೆ ಬಾಲ್ಯದಲ್ಲಿ ನೀಡಿದ ಸಂಸ್ಕಾರ, ಆಚರಿಸಿದ ಆಚರಣೆಯಿಂದ ಉಂಟಾದ ಆಂತರಿಕ ವಿಕಾಸ (ಅಲೌಕಿಕ ಪ್ರಯೋಜನ) ಕಣ್ಣಿಗೆ ಗೋಚರವಾಗುವುದಿಲ್ಲ. ಆ ಕಾರಣಕ್ಕೆ ಅದನ್ನು ಅರ್ಥ ಮಾಡಿಕೊಳ್ಳಲು ನಾವು ”ಅಸಮರ್ಥ”ರಾಗಿರುತ್ತೇವೆ. ಹೀಗಾಗಿ ಅಂತಹ ವಿಕಾಸವನ್ನು ಅರ್ಥ ಮಾಡಿಕೊಳ್ಳಲು ಯೋಗ್ಯರಾದ ಋಷಿಗಳು ನಿರ್ದೇಶಿಸಿದ್ದಾರೆ. ಅವುಗಳನ್ನು ಬಾಯಿ ಮುಚ್ಚಿಕೊಂಡು ಹೆಚ್ಚು ಪ್ರಶ್ನಿಸದೇ ಆಚರಿಸುವುದನ್ನು ಮೊದಲು ರೂಢಿ ಮಾಡಿಕೊಳ್ಳಬೇಕು. ಆ ಆಚರಣೆಗಳ ಮಹತ್ವ ಸಮಯ ಕಳೆದಂತೆ ತಾನೇ ಗೊತ್ತಾಗಿಯೇ ಆಗುತ್ತದೆ. ಗೊತ್ತಾಗದೇ ಇದ್ದರೂ ನಷ್ಟವೇನಿಲ್ಲ. ಆಚರಿಸಿದ ಆಚರಣೆಯಿಂದ ಆಗಬೇಕಾದ ಪ್ರಯೋಜನ ಆಗಿಯೇ ಆಗಿರುತ್ತದೆ……

ದತ್ತರಾಜ್ ಡಿ
dattaraj85@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!