ಅಂಕಣ

ಅವನೊಬ್ಬ ದೇಶಭಕ್ತನೇ ಅಲ್ವಾ…?

ನಮ್ಮ ದೇಶದ ಹಣೆಬರಹವೇ ಇಷ್ಟೆಂದು ಕಾಣುತ್ತದೆ. ನಮಗೆ ಪಠ್ಯಪುಸ್ತಕದಿಂದ (ಅದು ಕೂಡ ಸರ್ಕಾರದ ತಮಗೆ ಬೇಕಾದಂತೆ ಬರೆಸುತ್ತದೆ ನೆನಪಿರಲಿ) ಹಿಡಿದು ಯಾವ ದಿಕ್ಕಿನಿಂದಲೂ ಸರಿಯಾದ ಇತಿಹಾಸ ಸಿಗುವುದಿಲ್ಲ. ನಾವಾಗಿ ಇತಿಹಾಸವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಯಾರಾದರೂ ತಿಳಿದವರು ಅದನ್ನು ಹೇಳಿದರೆ ನಮಗೆ ಇರುವ ಅಲ್ಪಜ್ಞಾನವೇ ನಿಜವೆಂದು ನಂಬಿ ಅವರನ್ನು ಹತ್ತಿಕ್ಕಲು ಪ್ರಯತ್ನಿಸುತ್ತೇವೆ. ಒಟ್ಟಿನಲ್ಲಿ ನಾವು ಪಾಲಿಸುವ ಆದರ್ಶ, ಅನುಸರಿಸುವ ವ್ಯಕ್ತಿತ್ವ ಎಲ್ಲವೂ ಒಂದು ರೀತಿಯ ಭ್ರಮೆ ಆಗಿರುತ್ತದೆ. ಇಷ್ಟೆಲ್ಲ ಉದ್ದುದ್ದ ಬರೆಯಲು ಕಾರಣ, ಮೊನ್ನೆ ನವೆಂಬರ್ 15ರಂದು ಹಿಂದೂ ಮಹಾಸಭಾ ನಾಥೂರಾಮ್ ಗೋಡ್ಸೆಯನ್ನು ಗಲ್ಲಿಗೇರಿಸಿದ ದಿನವನ್ನು “ಬಲಿದಾನ್ ದಿವಸ್” ಎಂದು ಆಚರಿಸಿ, ಗೋಡ್ಸೆ ಹೆಸರಿನಲ್ಲಿ ವೆಬ್ಸೈಟ್ ಕೂಡ ತೆರೆದು ಅದರ ಮೂಲಕ ಗೊಡ್ಸೆ ಒಬ್ಬ ದೇಶಭಕ್ತ ಮತ್ತು ಗಾಂಧಿಯನ್ನು ಕೊಲ್ಲುವ ಹಿಂದಿನ ಉದ್ದೇಶವೇನಿತ್ತೆಂಬುದನ್ನು ಜಗತ್ತಿಗೆ ಹೇಳಲು ಹೊರಟರು. ಈ ಬಾರಿ ಕಾಂಗ್ರೆಸ್‍ಗಿಂತಲೂ ಮೊದಲು ಬಿಜೆಪಿ ಅರೆಸ್ಸೆಸ್ಸೇ ಇದನ್ನು ಖಂಡಿಸಿತು. ಗೋಡ್ಸೆಯನ್ನು ವೈಭವೀಕರಿಸುವುದು ಇಡಿ ದೇಶಕ್ಕೆ ಮಾತ್ರವಲ್ಲದೆ ಹಿಂದುತ್ವಕ್ಕೆ ಮಾಡುವ ಅವಮಾನ ಎಂದು ಹೇಳುವ ಮೂಲಕ ಕಾಂಗ್ರೆಸ್ ಮತ್ತು ಬುದ್ಧಿಜೀವಿಗಳಿಗೆ ಕೆಲಸ ಕಡಿಮೆ ಮಾಡಿತು. ಆದರೂ ಮಹಾಸಭಾಕ್ಕೆ ಬಿಜೆಪಿ ಕುಮ್ಮಕ್ಕು ಇದೆ ಎಂದು ತಮ್ಮ ಹರಕು ಬಾಯಿಯನ್ನು ಹರಿಯಬಿಟ್ಟರು ಈ ಕಾಂಗ್ರೆಸ್ಸಿನವರು. ಪಾಪ, ಇನ್ನಾದರೂ ಗಾಂಧಿ ಹತ್ಯೆಯ ಆರೋಪದಿಂದ, 1948ರಿಂದ ಇಲ್ಲಿಯವರೆಗೆ ಜನರ ಮನಸ್ಸಿನಲ್ಲಿ ಬೇರೂರಿರುವ ಸಂದೇಹದಿಂದ ಹೊರಬರುವ ಪ್ರಯತ್ನ ಅರೆಸ್ಸೆಸ್, ಬಿಜೆಪಿಯವರದ್ದು.

ಅಷ್ಟಕ್ಕೂ ಗೋಡ್ಸೆ ಗಾಂಧೀಜಿಯನ್ನು ಕೊಂದದ್ದು ಸರಿ ಎಂದು ಒಪ್ಪಲು ಹೇಗೆ ಸಾಧ್ಯವಿಲ್ಲವೋ, ಗೋಡ್ಸೆ ದೇಗುಲ ನಿರ್ಮಿಸಿ ಪೂಜೆ ಸಲ್ಲಿಸುವುದು ಎಷ್ಟು ಮೂರ್ಖತನವೋ, ಅವನನ್ನು ದೇಶಭಕ್ತನೇ ಅಲ್ಲ ಎನ್ನುವುದು, ಉಗ್ರರ ಜೊತೆ ಹೋಲಿಕೆ ಮಾಡುವುದೂ ಅಷ್ಟೇ ವಿಷಾದಕರ. ಹಿಂದೂ ಮಹಾಸಭಾ ಹೇಳಿದಂತೆ ಅವನು ದೇಶಭಕ್ತಿಯಲ್ಲಿ ಗಾಂಧೀಜಿಗಿಂತ ಯಾವುದರಲ್ಲೂ ಕಡಿಮೆ ಇರಲಿಲ್ಲ. ಅವನನ್ನು “ಹಿಂದೂ ಉಗ್ರವಾದಿ”, ಉನ್ಮಾದಿ ಎಂದು ಕರೆಯಲು ನಮಗೆ ಯಾವ ಹಕ್ಕಿದೆ? ಗಾಂಧೀಜಿಯನ್ನು ಕೊಂದ ಎನ್ನುವುದು ಬಿಟ್ಟರೆ ನಮಗೆ ಅವನ ಬಗ್ಗೆ ಏನು ಗೊತ್ತಿದೆ? ಹೋಗಲಿ, ಗಾಂಧೀಜಿ ಹಾಗೂ ಅವರ ಮೌಲ್ಯಗಳ ಬಗ್ಗೆ ಏನು ಗೊತ್ತಿದೆ? ಗಾಂಧೀಜಿ ಮತ್ತು ಗೋಡ್ಸೆ ಇಬ್ಬರೂ ಅಖಂಡ ಭಾರತದ ಕನಸು ಕಂಡವರು, ಜಾತಿ ಪದ್ಧತಿಯನ್ನು ಖಂಡಿಸಿದವರು, ಮದ್ಯಪಾನ, ಮತಾಂತರದ ವಿರೋಧಿಗಳು, ಗಾಂಧೀಜಿ ಭಗವದ್ಗೀತೆಯ ಜೊತೆ ಕುರಾನ್ ಇಟ್ಟು ಪ್ರಾರ್ಥಿಸಿದರೆ, ಗೋಡ್ಸೆ ಸಾಯುವ ತನಕ ಭಗವದ್ಗೀತೆಯನ್ನು ಇಟ್ಟುಕೊಂಡು ಅದನ್ನು ತಿಳಿದುಕೊಂಡವನು. ಇಬ್ಬರೂ ಸರಳ ಜೀವಿಗಳು, ನಿಸ್ವಾರ್ಥತೆಯಿಂದ ಭಾರತ ಮಾತೆಯನ್ನು ಪೂಜಿಸಿದವರು. ಇಬ್ಬರಲ್ಲೂ ಇಷ್ಟೆಲ್ಲ ಸಾಮ್ಯತೆ ಇದ್ದರೂ ಗಾಂಧೀಜಿಯನ್ನು ಕೊಲ್ಲುವಷ್ಟು ದ್ವೇಷ ಹುಟ್ಟಿಕೊಳ್ಳಲು ಕಾರಣವೇನು?

ಗಾಂಧೀಜಿಯ ತತ್ವಗಳನ್ನು ಅತ್ಯಂತ ಶ್ರದ್ಧೆಯಿಂದ ಪಾಲಿಸಿದ ಮೊದಲಿಗರಲ್ಲಿ ಗೋಡ್ಸೆ ಕೂಡ ಒಬ್ಬ. ಗಾಂಧೀಜಿ ಕೈಗೊಂಡ ಅಸಹಕಾರ ಚಳುವಳಿಯಲ್ಲಿಯೂ ಗೋಡ್ಸೆ ಪಾಲ್ಗೊಂಡಿದ್ದ ಎಂದರೆ ನೀವು ನಂಬಲಿಕ್ಕಿಲ್ಲ. ನಮ್ಮ ದೇಶದಲ್ಲಿ ಸಿಖ್, ಜೈನ, ಬೌದ್ಧ ಮತ್ತು ಹಿಂದು ಎಂದು ಒಡೆದುಹೋಗಿದ್ದ ಎಲ್ಲರೂ ಒಂದೆ ಎಂದು ಸ್ಪಷ್ಟವಾಗಿ ಮೊದಲು ಸಾರಿದ್ದು ಸಾವರ್ಕರ್. ಅವರ ಒಂದು ಕರೆಗೆ ಮದನ್ ಲಾಲ್ ಧಿಂಗ್ರ್‍ರಂತಹ ಅದೆಷ್ಟೊ ಯುವಕರು ಪ್ರಾಣ ಕೊಡಲು ಸಿದ್ಧರಿದ್ದರು. ಎಲ್ಲರನ್ನೂ ಓಲೈಸಿಕೊಂಡು ಹೋಗುವ ಪ್ರವೃತ್ತಿಯ ಗಾಂಧೀಜಿಗಿಂತಲೂ ಇವರಲ್ಲಿ ಭಾರತದ ಸ್ವಾತಂತ್ರ್ಯದ ಪರಿಕಲ್ಪನೆ ಚೆನ್ನಾಗಿಯೆ ಇತ್ತಲ್ಲದೆ ಹಿಂದುತ್ವದ ಬೇರು ನಮ್ಮ ದೇಶದಲ್ಲಿ ಹೇಗೆ ಬೆಸೆದುಕೂಂಡಿದೆ ಎಂದೂ ಪ್ರತಿಪಾದಿಸಿದವರು. ಸಹಜವಾಗಿಯೇ ಗೋಡ್ಸೆಯಂತಹ ಅನೇಕ ಯುವಕರು ಸಾವರ್ಕರ್ ಅವರಿಂದ ಪ್ರೇರಿತರಾದರು. ಇದರ ಪರಿಣಾಮವೇ ಗೋಡ್ಸೆ “ಅಗ್ರಣಿ” ಎಂಬ ಪತ್ರಿಕೆ ಆರಂಭಿಸಿದ.ಮುಂದೆ ಅದಕ್ಕೆ “ಹಿಂದೂ ರಾಷ್ಟ್ರ” ಎಂಬ ಹೆಸರೂ ಇಟ್ಟ. “ಹಿಂದೂ ರಾಷ್ಟ್ರದಳ” ಎಂಬ ಸಂಘಟನೆಯನ್ನೂ ಕಟ್ಟಿ ಯುವಕರನ್ನು ಒಂದುಗೂಡಿಸಿ ಅವರಿಗೆ ಕಠಿಣ ತರಬೇತಿ ನೀಡಿದ. ಇಷ್ಟು ಸಾಕಲ್ಲವೆ ಅವನ ದೇಶಪ್ರೇಮ ಮತ್ತು ಬುದ್ಧಿವಂತಿಕೆಯ ಪರಿಚಯ ನೀಡಲು. ಇನ್ನು ನಮ್ಮ ದೇಶ ಇಬ್ಭಾಗವಾದಾಗ ಅದೆಷ್ಟೋ ಹಿಂಸಾಚಾರ , ಗಲಭೆಗಳು ನಡೆಯಿತು.ಸರ್ಕಾರ ಕೂಡ ಪರಿಸ್ತಿತಿಯನ್ನು ಎದುರಿಸಲಾಗದೆ ಸೋತಿತ್ತು. ಆಗ ಇದೇ ಗೋಡ್ಸೆ ಜಾತಿ ಧರ್ಮವನ್ನು ಲೆಕ್ಕಿಸದೇ ತನ್ನ ತಂಡದೊಂದಿಗೆ ನಿರಾಶ್ರಿತರ ಸಹಾಯಕ್ಕೆ ಶ್ರಮಿಸಿದ್ದ. ದೇಶಸೇವೆಗಾಗಿ ಕಠಿಣ ಬ್ರಹ್ಮಚರ್ಯವನ್ನೂ ಪಾಲಿಸಿ, ಕೆಳಜಾತಿಯವರೊಂದಿಗೆ ಬ್ರಾಹ್ಮಣರ ಸಾಮೂಹಿಕ ಭೋಜನವನ್ನೂ ಏರ್ಪಡಿಸಿ ಸಮಾಜ ಸುಧಾರಣೆಗೂ ಪ್ರಯತ್ನಿಸಿದ ಸೌಮ್ಯ ಸ್ವಭಾವದವನು ಈ ಗೋಡ್ಸೆ. ಕೊಲೆಗೂ ಮುನ್ನ, ತನ್ನ 2 ಇನ್ಶುರೆನ್ಸ್ ಪಾಲಿಸಿಗಳನ್ನು ತಮ್ಮನ ಹೆಂಡತಿ ಹಾಗೂ ಸ್ನೇಹಿತ ಆಪ್ಟೆಯ ಹೆಂಡತಿಯ ಹೆಸರಿಗೆ ಬರೆದಿಡುವಷ್ಟು ಮುಗ್ಧ ಮನಸ್ಸಿನವನಾಗಿದ್ದನು ಈ ಗೋಡ್ಸೆ. ಆದರೆ ಈ ದೇಶಪ್ರೇಮವೆಂಬುದು ಇದೆಯಲ್ಲ, ಎಂತಹ ಸುಶೀಲ ವ್ಯಕ್ತಿತ್ವದವರನ್ನೂ ಭಾವುಕರನ್ನಾಗಿ ಮಾಡುತ್ತದೆ ಎಂಬುದಕ್ಕೆ ಇವನೇ ಸಾಕ್ಷಿ.

ಅಂದು ಕೆಂಪುಕೋಟೆಯಲ್ಲಿ ನಿಂತು ಗೋಡ್ಸೆ ಎಂಬ ವ್ಯಕ್ತಿ ತಾನೇಕೆ ಗಾಂಧೀಯನ್ನು ಕೊಂದೆ ಎಂದು ಈ ರೀತಿಯ ವಿವರಣೆ ನೀಡುತ್ತಾನೆ. “ಹಿಂದೂ ಮುಸಲ್ಮಾನರಲ್ಲಿ ಒಗ್ಗಟ್ಟು ತರಬೇಕು ಎಂದು ಬಯಸಿದ ನಿಜವಾದ ವ್ಯಕ್ತಿ ಮಹಾತ್ಮ ಗಾಂಧೀ. ಆದರೆ ಬ್ರಿಟೀಷರ ಒಡೆದು ಆಳುವ ನೀತಿಯ ಪರಿಣಾಮ ನಮ್ಮ ಸ್ವಾತಂತ್ಯ್ರ ಚಳುವಳಿಯಿಂದ ದೂರವೇ ಉಳಿದಿದ್ದ ಮುಸ್ಲಿಂ ಬಾಂಧವರನ್ನು ಸೆಳೆಯಲು, ಅವರನ್ನು ಅತಿಯಾಗಿ ಮುದ್ದಿಸಲು ಶುರುವಿಟ್ಟುಕೊಂಡರು. ಅದಕ್ಕಾಗಿಯೆ ಎಲ್ಲೋ ಟರ್ಕಿಯ ಖಲೀಫನಿಗಾಗಿ ಇಲ್ಲಿ ಒಂದು ಖಿಲಾಫತ್ ಚಳುವಳಿ ಮಾಡಿದರು. ಇದನ್ನೇ ಬಳಸಿಕೊಂಡು ಮಹ್ಮದ್ ಆಲಿ ಜಿನ್ನ ಅವರ ಮೇಲೆ ಸಾಕಷ್ಟು ಒತ್ತಡ ತರುತ್ತಾ ಹೋದ. ಪಾಕಿಸ್ತಾನ ನಿರ್ಮಾಣ ಆಗುವುದಾದರೆ ಅದು ನನ್ನ ಹೆಣದ ಮೇಲೆ ಎಂದು ಹೇಳಿದ್ದ ಗಾಂಧೀಜಿ, ಮುಸ್ಲಿಂ ಲೀಗ್ ಹಾಗೂ ಹಿಂದೂ ಸಂಘಟನೆಗಳ ನಡುವೆ ಜಟಾಪಟಿ ಆರಂಭವಾಗುತ್ತಿದ್ದಂತೆ ದೇಶ ಇಭ್ಬಾಗವಾಗಲಿ ಬಿಡಿ ಎಂದುಬಿಟ್ಟರು. ಅವರ ಆಧ್ಯಾತ್ಮ, ಅಹಿಂಸಾ ತತ್ವ ನೆಲಕಚ್ಚಿದರೂ, ತಮ್ಮ ಸಿದ್ದಾಂತ ಬದಲಿಸಲಿಸುವ, ನಾಯಕ್ತ್ವವನ್ನು ಬೇರೆಯವರಿಗೆ ಬಿಟ್ಟುಕೊಡುವ ಮನಸ್ಸೂ ಮಾಡಲಿಲ್ಲ. ಮುಸ್ಲಿಂ ಲೀಗ್ ಕೇವಲ ಮುಸ್ಲಿಂ ರಕ್ಷಣೆಗೆ ಇರುವುದಾಗಿ ಘೋಷಿಸಿದಾಗಲೂ, ಕಾಂಗ್ರೆಸ್ಸ್ ಹಿಂದೂ ರಕ್ಷಣೆಗೆ ನಿಲ್ಲುತ್ತದೆ ಎಂಬುದಾಗಿ ಹೇಳಲಿಲ್ಲ, ದೇಶದ ಹಿತಕ್ಕಾಗಿ ಕೂಡ ಅವರು ತಮ್ಮ ಅಹಂ ಹಾಗೂ ಸ್ವಾರ್ಥ ಬಿಟ್ಟುಕೊಡಲು ತಯಾರಿರಲಿಲ್ಲ. ಬದಲಾಗಿ ಕ್ರಾಂತಿಕಾರಿಗಳು ನೆತ್ತರು ಹರಿಸಿದ ಈ ದೇಶವನ್ನೇ ಇಬ್ಭಾಗವಾಗಿಸಿ, ಪಾಕಿಸ್ತಾನವೆಂಬ ರಾಕ್ಶಸನನ್ನು ಪಕ್ಕದಲ್ಲೆ ಸೃಷ್ಟಿಸಿ ಮುಗಿಯದ ಸಮಸ್ಯೆ ತಂದಿಟ್ಟರು . ಸ್ವಾತಂತ್ಯಾನಂತರ ಹಿಂದಿ ನಮ್ಮ ರಾಷ್ಟ್ರಭಾಷೆಯಾಗಬೇಕೆಂದು ಪ್ರತಿಯೊಬ್ಬ ಭಾರತೀಯನೂ ಆಸೆಪಟ್ಟರೆ, ಯಾರೋ ಒಬ್ಬ ಮುಸ್ಲಿಂ ವಿರೋಧಿಸಿದ ಎಂಬ ಕಾರಣಕ್ಕೆ ಉರ್ದು ಪರ ಧೋರಣೆ ತಳೆದರು. ಭಾರತೀಯರಲ್ಲಿ ದೇಶಭಕ್ತಿಯ ಕಿಚ್ಚು ಹೆಚ್ಚಿಸಿದ “ವಂದೆ ಮಾತರಂ” ಮುಸ್ಲಿಂ ಭಾಂಧವರಿಗೆ ನೋವುಂಟುಮಾಡಬಹುದೇನೊ ಎಂಬ ಕಾರಣಕ್ಕೆ ಅದನ್ನು ರಾಷ್ಟ್ರಗೀತೆಯಾಗಿಸಲಿಲ್ಲ ನಮ್ಮ ಮಹಾತ್ಮ. ಪಾಕಿಸ್ತಾನ ನಿರ್ಮಾಣವಾಗುತ್ತಿದ್ದಂತೆ ಎರಡು ಮಿಲಿಯನ್ ಹಿಂದುಗಳ ನರಮೇಧ, ಹೆಂಗಸರ ಮಾನಹಾನಿ, ಒಕ್ಕಲೆಬ್ಬಿಸುವಿಕೆ ನಡೆಯಿತು. ಅಲ್ಲಿಂದ ಬಂದ ರೈಲುಗಳಲ್ಲಿ ಹಿಂದೂಗಳ ಹೆಣದ ರಾಶಿಯನ್ನೇ ತುಂಬಿ ಕಳುಹಿಸಿತು ದುರುಳ ಪಾಕಿಸ್ತಾನ. ಸಾವಿರಾರು ಜನ ನಿರಾಶ್ರಿತರು ಅಂದು ಕೊರೆಯುವ ಚಳಿಯಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ ರಾಷ್ಟ್ರಪಿತನ ಮುಂದೆ ಬಂದು ನಿಂತು “ಇರಲಿಕ್ಕೊಂದು ಜಾಗ ಕೊಡಿ” ಎಂದು ಎಂತಹ ಕಟುಕನ ಹೃದಯವೂ ಕರಗುವಂತೆ ಗೋಗೆರೆದರು. ಅವರಿಗೆ ಒಂದು ಸೂರು ಕಲ್ಪಿಸುವ ವ್ಯವಸ್ಥೆ ಮಾಡುವುದು ಬಿಟ್ಟು, ಅವರು ಮಸೀದಿಯಲ್ಲಿ ಆಶ್ರಯ ಪಡೆದುಕೊಂಡಿದ್ದನ್ನೇ ಅಪರಾಧದಂತೆ ಕಂಡು, ಅವುಗಳನ್ನು ತೆರವು ಮಡುವಂತೆ ಒತ್ತಾಯಿಸಿ ಗಾಂಧೀಜಿ ಉಪವಾಸ ಕೈಗೊಂಡರು”.

ಅತ್ತ ಪಾಕಿಸ್ತಾನದಲ್ಲಿ ಒಂದೇ ಒಂದು ದೇವಾಲಯವನ್ನೊ ಬಿಡದೆ ಮುಸ್ಲಿಮರು ಅಂಗಡಿ, ಮಸೀದಿಗಳನ್ನಾಗಿ ಮಾಡಿದ್ದರೂ ಅದರ ಬಗ್ಗೆ ಮಾತ್ರ ಚಕಾರವೆತ್ತಲಿಲ್ಲ. ಸ್ವಾತಂತ್ರ್ಯ ಸಿಕ್ಕಿದ ಮರುಕ್ಷಣವೇ ನಮ್ಮ ಮೇಲೆ ಯುದ್ಧಕ್ಕೆ ನಿಂತ ಪಾಕಿಸ್ತಾನಕ್ಕೆ ವಿಭಜನೆಗೆ ಸಂಬಂಧಿಸಿದಂತೆ ಬಾಕಿ 55 ಕೋಟಿ ರೂಪಾಯಿ ಕೊಡುವುದಿಲ್ಲ ಎಂದು ಹೇಳಿದರು ಸರ್ದಾರ್ ಪಟೇಲರು. ಕೂಡಲೆ ಅದನ್ನು ನೀಡಲೇಬೇಕೆಂದು ಅನಿರ್ದಿಷ್ಟಾವಧಿ ಉಪವಾಸ ಕೈಗೊಂಡರು ಗಾಂಧೀಜಿ! . ಅಣಕವೇನೆಂದರೆ, ಗಾಂಧೀಜಿಯ ಚಿತಾಭಸ್ಮವನ್ನು ಕೂಡ ಸಿಂಧೂ ನದಿಯಲ್ಲಿ ವಿಸರ್ಜಿಸಲು ಪಾಕ್ ಸರ್ಕಾರ ಅವಕಾಶ ನೀಡಲಿಲ್ಲ. ಬಂಗಾಳದಲ್ಲಿ Direct Action Day ಎಂದು ಹಿಂದೂಗಳ ರಕ್ತದ ಕೋಡಿ ಹರಿಸಿದ್ದ ಸುಹ್ರಾವರ್ಧಿಯನ್ನು ಧಿಕ್ಕರಿಸುವ ಬದಲು ಜೊತೆಗೆ ಕೂರಿಸಿಕೊಂಡು ರಕ್ಷಿಸಿದರು ಗಾಂಧೀಜಿ! ಅವರ ಮನಸ್ಸು ಎಲ್ಲವನ್ನು ಕ್ಷಮಿಸುವಷ್ಟು ದೊಡ್ದದಿತ್ತು. ಆದರೆ ಅವರ ಈ ಸನ್ಯಾಸತ್ವಕ್ಕೆ ಬಲಿಯಾದದ್ದು ಮಾತ್ರ ಹಿಂದುಗಳೆ.

ಇನ್ನು ಅವರಿಂದಲೇ ನಮಗೆ ಸ್ವಾತಂತ್ಯ ಸಿಕ್ಕಿತು ಎಂಬುದು ಇತಿಹಾಸದ ಅತಿದೊಡ್ಡ ವಂಚನೆ. ಅಲ್ಲಿ ಇಂಗ್ಲೆಂಡಿನಲ್ಲಿ ಚರ್ಚಿಲ್ ಸೋತುಹೋಗಿ ನಂತರ ಗೆದ್ದುಬಂದ ಸರ್ಕಾರ ಬ್ರಿಟೀಷ್ ಆಡಳಿತವನ್ನು ಹಿಂಪಡೆಯಲು ನಿರ್ಧರಿಸಿತು. ಭಾರತಕ್ಕೆ ನಿಜವಾದ ನಾಯಕ ಹಾಗೂ ರ್ರಾಷ್ಟ್ರಪಿತ ಎಂದರೆ ಕ್ರಾಂತಿಕಾರಿ ಸುಭಾಶ್ ಚಂದ್ರ ಬೋಸರೆ ಹೊರತು ಗಾಂಧೀಜಿಯಲ್ಲ. ಹೈದರಾಬಾದ್ ರಜ಼ಾಕರು ದಿಲ್ಲಿಯ ಮೇಲೆ ದಾಳಿಯಿಕ್ಕುತ್ತೇವೆ ಎಂದು ಧಮಕಿ ಹಾಕಿದಾಗಲು ಸರ್ಕಾರ ಏನೂ ಕ್ರಮ ಕೈಗೊಳ್ಳದೆ ಇರಲು ಗಾಂಧೀಜಿಯ ವ್ಯಾಮೋಹವೇ ಕಾರಣವಲ್ಲವೆ? ಅಂಥಹ ಗಾಂಧೀಜಿಯನ್ನು ನಾನು ಕೊಂದ ನಂತರ ತಾನೆ ಭಾರತದ ಸೈನ್ಯ ನುಗ್ಗಿ ಹೈದರಬಾದನ್ನು ವಿಲೀನಗೊಳಿಸಲು ಸಾಧ್ಯವಾದದ್ದು? ಗಾಂಧೀಜಿಯನ್ನು ಕೊಂದ ಮರುಕ್ಷಣವೇ ನಾನು ಗಳಿಸಿದ ಜನಗಳ ಪ್ರೀತಿ,ಗೌರವ ಎಲ್ಲವೂ ನಾಶವಾಗಿ, ಅದೇ ಜನಗಳು ನನ್ನನ್ನು ದ್ವೇಷಿಸುತ್ತರೆ, ಪತ್ರಿಕೆಗಳು ಹಳಿಯಲು ಶುರುವಿಟ್ಟುಕೊಳ್ಳುತ್ತದೆ ಎಂದು ನನಗೆ ಗೊತ್ತಿದ್ದರೂ, ಈ ದೇಶದ ಒಳಿತಿಗಾಗಿ ನಾನು ನನ್ನನ್ನೇ ಸಮರ್ಪಣೆ ಮಾಡುವ ನಿರ್ಧಾರ ಕೈಗೊಂಡೆ. ನನ್ನ ದೇಶವನ್ನು ಇಬ್ಭಾಗ ಮಾಡುವ ಅಧಿಕಾರ ಈ ದೇಶದ ಯಾವ ಮಹಾನ್ ನಾಯಕನಿಗೊ ಇಲ್ಲ. ಬಾಪೂಜಿ ಈ ಅಪರಾಧ ಮಾಡಿದರು ಮತ್ತು ಅದಕ್ಕಾಗಿ ಯಾವ ನ್ಯಾಯಲಯವೂ ಶಿಕ್ಷೆ ನೀಡುವಂತಿರಲಿಲ್ಲವಾದ್ದರಿಂದ ನಾನೇ ಈ ಕೆಲಸ ಮಾಡಿದೆ. ಇಷ್ಟಾಗಿಯೊ ಅವರ ಬಗ್ಗೆ ನನಗೆ ಗೌರವವಿದೆ ಮತ್ತು ಅವರು ಮಾಡಿದ ತ್ಯಾಗಕ್ಕೆ, ಜನರಲ್ಲಿ ತಂದ ಹೊಸ ಜಾಗೃತಿಗೆ ನಾನು ತಲೆಬಾಗುತ್ತೇನೆ. ಅವರಿಗೆ ಗುಂಡು ಹಾರಿಸುವ ಮೊದಲು ನಮಸ್ಕರಿಸಿದ್ದೇನೆ. ಅವರ ಕರುಣೆ, ಪ್ರೀತಿ ಎಲ್ಲವೂ ಮುಸ್ಲಿಂ ಪರವಾಗಿತ್ತೇ ಹೊರತು, ಹಿಂದುಗಳ ವಿರುದ್ಧ ನಡೆದ ಹಿಂಸೆಗೆ ಅವರ ಮನಸ್ಸು ಕರಗಲಿಲ್ಲ ಬದಲಾಗಿ ಸಿಕ್ಕಿದ್ದು ಅಸಹನೆ, ಉಪವಾಸ ಮತ್ತು ಹಿಂದುತ್ವವನ್ನೆ ನಾಶಪಡಿಸುವಂತಹ ಆಜ್ಞೆಗಳು. ಒಂದು ಮತಭ್ರಾಂತ ಸಮೂಹವನ್ನು ಸಲುಹಿ, ಹಿಂದುಗಳಿಗೆ ರಕ್ಷಣೆ ಒದಗಿಸದ ಒಬ್ಬ ನಾಯಕನ ಅಂತ್ಯದ ಮೂಲಕ ನಮ್ಮ ಶತ್ರು ದೇಶಕ್ಕೆ ಬಲವಾದ ಉತ್ತರ ಕೊಡಲು ನನ್ನ ಪ್ರಾಣವನ್ನು ತ್ಯಜಿಸಲು ನಿರ್ಧರಿಸಿದೆ.ಮುಂದೆ ಎಂದಾದರೂ ಈ ಸತ್ಯ ಜನಗಳಿಗೆ ಗೊತ್ತಾಗುತ್ತದೆ.” ಈ ರೀತಿ ಅದು ಇನ್ನೆಷ್ಟೊ ವಿಚಾರಗಳನ್ನು ಮನಕಲಕುವಂತೆ ಕೋರ್ಟಿನ ಮುಂದಿಟ್ಟಾಗ ಅನೇಕರ ಕಣ್ಣಲ್ಲಿ ನೀರಿತ್ತೆ ಹೊರತು ಗೋಡ್ಸೆ ಹೇಳಿದ್ದು ಸರಿಯಿಲ್ಲ ಎಂದು ಹೇಳುವವರು ಯಾರೂ ಇರಲಿಲ್ಲ. ಏಕೆಂದರೆ ಮಹಾತ್ಮನ ಬಗ್ಗೆ ಅವನು ಹೇಳಿದ ಅಷ್ಟೂ ವಿಚಾರಗಳು ಸತ್ಯವೇ ಆಗಿದ್ದವು. ಅವನು ಕೊಲೆ ಮಾಡಿದ್ದು ತಪ್ಪು ಎನ್ನಬಹುದಿತ್ತೆ ವಿನಃ ಅವನ ವಾದ ತಪ್ಪು ಎಂದು ಆಕ್ಷೇಪಿಸಲು ಯಾರಿಂದಲೂ ಸಾಧ್ಯವಿರಲಿಲ್ಲ.

ಗಾಂಧೀಜಿ ವಿಶ್ವಕ್ಕೆ ಶಾಂತಿ ಮಂತ್ರ ಉಪದೇಶಿಸಿದ ಮಹಾನ್ ಸಂತ ಎಂಬುದಲ್ಲಿ ಎರಡು ಮಾತಿಲ್ಲ. ಆದರೆ, ನಮ್ಮ ಮನೆ ದೋಚುವಾಗಲೂ ನಾವು ಶಾಂತಿ ಮಂತ್ರ ಪಠಿಸಲು ಸಾಧ್ಯವೇ? ಎಲ್ಲ ಸಂದರ್ಭದಲ್ಲೂ ಕೇವಲ ಅಹಿಂಸೆ ಎಂದರೆ ದೇಶ ಹರಿದು ಹಂಚುವುದಿಲ್ಲವೇ? ಅದಿರಲಿ, ತಮ್ಮ ಜೊತೆ ಕೂಡಿಸಿಕೊಂಡಿದ್ದ ಜಿನ್ನಾ‍ನಂಥಹ ನಾಯಕರಿಗೆ ಮತ್ತೆ ಅವರ ಅನುಯಾಯಿಗಳಿಗೇಕೆ ಈ ಶಾಂತಿ ಮಂತ್ರ, ಅಹಿಂಸೆ ಬೋಧಿಸಲಿಲ್ಲ? ತಮ್ಮ ಮಕ್ಕಳನ್ನೆ ಸಾಕಿ ಸಲುಹಿದ ಆರ್ಯ ಸಮಾಜದ ಸ್ವಾಮೀಜಿಯನ್ನು ಕೊಂದ ಮುಸ್ಲಿಂ ಮತಭ್ರಾಂತನನ್ನು ಸಹೋದರನೆಂದು ಅಪ್ಪಿದರು, ಅವರ ಪ್ರಯೋಗ, ಹಠಮಾರಿತ ಏನಿದ್ದರೂ ಹಿಂದುಗಳ ಮೇಲಿತ್ತಾ? ಗೊತ್ತಿಲ್ಲ.. ಹಿಂದು-ಮುಸ್ಲಿಂ ಯಾವತ್ತಿಗೂ ಸಹಬಾಳ್ವೆ ನಡೆಸಲು ಸಾಧ್ಯವೇ ಇಲ್ಲ ಎಂದು ಗಾಂಧೀಜಿ ಮನಗಂಡರೂ, ಈ ವಿಭಜನೆಯಲ್ಲಿಯಾದರೂ ಗಟ್ಟಿ ನಿರ್ಧಾರ ಕೈಕೊಂಡು, ಪಾಕಿಸ್ತಾನ ಮುಸ್ಲಿಂ ದೇಶ, ಭಾರತ ಹಿಂದು ದೇಶವಾಗಿರಲಿ ಎಂದು ಘೋಷಿಸಿದರಾ? ಅದೂ ಇಲ್ಲ. ಇದರಿಂದ ಮುಸ್ಲಿಂ ಸಮುದಾಯದಲ್ಲಿ ಒಂದು ಅಭದ್ರತೆಯ ಭಾವನೆ ಹುಟ್ಟಿಕೊಂಡಿತು. ಈಗ ನೋಡಿ ದೇಶದ ಒಳಗೂ ದಂಗೆ, ಹೊರಗೂ ಯುದ್ಧ. ಒಂದು ದೇಶದ ಸರ್ವೋಚ್ಚ ನಾಯಕನಾದವನಿಗೆ ಒಂದು ದೂರದೃಷ್ಟಿಯೆಂಬುದು ಇರಬೇಕು. ನೆಹೆರೂ ಮೇಲಿನ ಪ್ರೀತಿಗೆ ಬಿದ್ದೊ, ಕಾಂಗ್ರೆಸ್ಸ್‍ ಮತ್ತು ಈ ದೇಶದ ಚುಕ್ಕಾಣಿಯನ್ನು ಸರ್ದಾರ್ ಪಟೇಲರಂಥವರನ್ನು ಬಿಟ್ಟು , ಒಬ್ಬ ಲಂಪಟನ, ಹೊಣೆಗೇಡಿಯ ಕೈಗೆ ಇತ್ತರು.ಅದರಿಂದ ಈಗಲೂ ಈ ದೇಶ, ಕಾಂಗ್ರೆಸ್ ನಾಯಕರ ಭಜನೆ ಮಾಡುತ್ತ, ಜಾತಿ-ಮತಗಳ ನಡುವೆ ವಿಷ-ಬೀಜ ಬಿತ್ತುವವರನ್ನು ಒಡಲಲ್ಲಿ ಇಟ್ಟುಕೊಳ್ಳುವಂತಾಗಿದೆ. ಗಾಂಧೀಜಿ ನಿಸ್ವಾರ್ಥ ನಾಯಕರೆಂದ ಮೇಲೆ ಚುನಾವಣೆಯಲ್ಲಿ ಸುಭಾಶ್ ಚಂದ್ರ ಬೋಸರ ವಿರುದ್ಧವೇಕೆ ಪ್ರಚಾರ ಮಾಡಿದರು? ಅವರ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಿ ಎಂದು ಕಾಂಗ್ರೆಸ್ಸಿಗೆ ತಾಕೀತು ಮಾಡಿದ್ದಿದ್ದರೆ, ಅವರ ಮಾತನ್ನು ಅಲ್ಲಗೆಳಿತುವ ಶಕ್ತಿ ಯಾರಿಗೂ ಇರಲಿಲ್ಲ. ಆದರೆ ಬೋಸ್, ಸಾವರ್ಕರ್‍ನಂಥಹ ನಾಯಕರು ಶಕ್ತಿಶಾಲಿಯಾಗಿ ಬೆಳೆದರೆ ಅವರು ಮತ್ತವರ ಹಿಂಬಾಲಕ ಕಾಂಗ್ರೆಸ್ಸ್ ಮೂಲೆಗುಂಪು ಆಗುತ್ತದೆ ಎಂಬ ಭಯ ಗಾಂಧೀಜಿಯನ್ನು ಕಾಡಿತ್ತೆ? ಗೊತ್ತಿಲ್ಲ. ಆದರೆ ಗಾಂಧೀಜಿ ಕೊಲೆಯ ಆಪಾದನೆಯನ್ನು ವೀರ್ ಸಾವರ್ಕರ್ ಮೇಲೆ ಹೊರಿಸಿ ಅವರ ರಾಜಕೀಯ ಶಕ್ತಿ ಕುಂದುವಂತೆ ನೆಹೆರು ಸಂಚು ಮಾಡಿದ್ದು ಮಾತ್ರ ನಿಜ.ಅಷ್ಟಕ್ಕೂ, ನಮಗೆ ಸ್ವಾತಂತ್ರ್ಯ ದೊರಕುವಲ್ಲಿ ಗಾಂಧೀಜಿ ಮತ್ತವರ ಸತ್ಯಾಗ್ರಹದ ಪಾತ್ರ ಎಷ್ಟು, ಈ ದೇಶ ನಿಭಾಯಿಸಲು ಬ್ರಿಟೀಷರ ಅಸಮರ್ಥತೆ, ಸುಭಾಷ್ ಚಂದ್ರರ ಐ.ಎನ್.ಎ.ಯ ಕೊಡುಗೆ, ಅಂದಿನ ಭಾರತೀಯ ಸೇನೆ,ನೌಕಾದಳಯಲ್ಲಿ ಹೆಚ್ಚಾದ ಪ್ರತಿಭಟನೆ ಇವೆಲ್ಲ ಸರಿಯಾಗಿ ತಿಳಿದುಕೊಂಡರೆ, ಗಾಂಧೀಭಕ್ತರಿಗೆ ನಮ್ಮ ರಾಷ್ಟ್ರಪಿತರ ಪರಿಚಯ ಸರಿಯಾಗಿ ಆಗಬಹುದು.

ಆಗಿನ ಕಾಲಕ್ಕೆ ಕಾನೂನು ಸಚಿವರಾದ ಅಂಬೇಡ್ಕರ್ ಅವರು ಗೋಡ್ಸೆಗೆ ಮರಣಂಡನೆಯಿಂದ ಜೀವಾವಧಿ ಶಿಕ್ಷೆಗೆ ಪರಿವರ್ತಿಸಿ ಗಾಂಧೀಜಿಯ ಅಹಿಂಸಾವಾದವನ್ನು ಎತ್ತಿ ಹಿಡಿಯುವಂತ ಪ್ರಯತ್ನ ಮಾಡಿದರು. ಆಗ ನಾಥೂರಾಮ ಏನು ಹೇಳಿದ ಗೊತ್ತೆ? “ನನಗೆ ಖಂಡಿತ ಪ್ರಾಣಭಿಕ್ಷೆ ಸಿಗದಂತೆ ನೋಡಿಕೊಳ್ಳಿ.. ಅದರ ಮೂಲಕ ಗಾಂಧೀಜಿಯ ಅತಿರೇಕದ ಅಹಿಂಸಾವಾದ ಎಷ್ಟು ಅಸಮಂಜಸ ಹಾಗೂ ಅದನ್ನು ಗಾಂಧೀವಾದಿಗಳೇ ಸೇರಿ ನೇಣು ಹಾಕಿದರು ಎಂಬುದು ಇಡೀಯ ಜಗತ್ತಿಗೇ ಗೊತ್ತಾಗಲಿ” ಎಂದಿದ್ದನು. ಅವನ ವಿಚಾರದಲ್ಲಿ ಇದ್ದ ನಿಖರತೆ ಕಂಡು ನಿಬ್ಬೆರಗಾಗದವರಿರಲಿಲ್ಲ! ಇಂದು ಅವನನ್ನು ವಾಚಾಮಗೋಚರ ಬಯ್ಯುವವರು ತಿಳಿದುಕೊಳ್ಳಬೇಕಾದ ಅಂಶವೆಂದರೆ, ಅವನ ಅಂದಿನ ಮಾತು ಇಂದಿಗೂ ಅಕ್ಷರಶಃ ನಿಜವಾಗಿರುವುದು. ಗೋಡ್ಸೆ ಚಿತ್ಪಾವನ ಬ್ರಾಹ್ಮಣ ಎಂಬ ಒಂದೇ ಕಾರಣಕ್ಕೆ ಅವತ್ತು ಮಹರಾಷ್ಟ್ರ ಒಂದರಲ್ಲೆ ಸಾವಿರಾರು ಚಿತ್ಪಾವನ ಬ್ರಾಹ್ಮಣರ ಹತ್ಯೆ ಮಾಡಲಾಗಿತ್ತು. ಅವರ ಆಸ್ಥಿ ಲೂಟಿ ಮಾಡಲಾಯಿತು. ಅದೆಷ್ಟೊ ವರ್ಷಗಳ ಕಾಲ “ಗೋಡ್ಸೆ” ಪದ unparliamentary ಆಗಿತ್ತು. RSS. ಹಿಂದೂ ಮಹಾಸಭಾದ ಕಚೇರಿಗಳು ದ್ವಂಸವಾದವು. ಕೊನೆಗೆ ಸರ್ಕಾರ ಅದೆಷ್ಟು ಹೀನವಾಗಿ ನಡೆದುಕೊಂಡಿತೆಂದರೆ, ಅವರ (ಗೋಡ್ಸೆ ಮತ್ತು ನಾರಾಯಣ ಆಪ್ಟೆ) ಚಿತಾಭಸ್ಮವನ್ನು ಕೂಡಾ ಅವರ ಕುಟುಂಬಕ್ಕೆ ಒಪ್ಪಿಸದೇ ನದಿಗೆ ಚೆಲ್ಲಿದರು. ಕೆಲವು ಲೇಖಕರು ಗೋಡ್ಸೆ ಮತ್ತು ಸಾವರ್ಕರ್ ಅವರು ಸಲಿಂಗಕಾಮಿಗಳು ಎನ್ನುವಂತೆ ಚಿತ್ರಿಸಿದರು. . ಅದನ್ನು ತೆಗೆಸಲು, ಗೋಡ್ಸೆಯ ವಿಚಾರ ತುಂಬಿದ ಪುಸ್ತಕ ಪ್ರಕಟಿಸಲು ಅವನ ತಮ್ಮ ಗೋಪಾಲ ಗೋಡ್ಸೆ ಸರ್ಕಾರದ ವಿರುದ್ಧ ಹೋರಾಡಬೇಕಾಗಿ ಬಂತು. ನಾರಾಯಣ ಆಪ್ಟೆ ಜೈಲಿನಲ್ಲಿ ಬರೆದ ಮಹಾನ್ ಪುಸ್ತಕವಂತೂ ಅವನ ಮನೆಯವರಿಗೆ ಒಪ್ಪಿಸಲೇ ಇಲ್ಲ. ಎಂಥಾ ಅನ್ಯಾಯ! ಇದು ಸ್ವಾಮಿ ನಮ್ಮ ದೇಶದ ಅಭಿವ್ಯಕ್ತಿ ಸ್ವಾತಂತ್ರ್ಯ…! ಗಾಂಧೀ ಹತ್ಯೆಯ ಅಧ್ಯಯನದ ಪ್ರಕಾರ, ಅಂದು ನಡೆದ ದುರ್ಘಟನೆ ಜನರನ್ನು ಸ್ತಂಭೀಭೂತಗೊಳಿಸಿ, ಮುಸ್ಲಿಂ ಭಾಂಧವರ ಬಗೆಗೆ ಹೆಚ್ಚುತಿದ್ದ ದ್ವೇಷವನ್ನು ಶಾಶ್ವತವಾಗಿ ಅಳಿಸಿಹಾಕಿತು! ಆದರೆ ಈ ವಾದಗಳನ್ನು ಕೇಳುವಾಗ ಮಾತ್ರ ಗಾಂಧೀವಾದಿಗಳು ಕಿವಿ ಮುಚ್ಹುತ್ತಾರೆ.

ಒಬ್ಬ ಟಿಪ್ಪುವಿನ ಪರ ವಿಷಯ ಎತ್ತಿದರೆ, ಅದು ಪ್ರಗತಿಪರ ಚಿಂತನೆ. ಅದರ ಬಗ್ಗೆ ಇತಿಹಾಸದ ಸಮಗ್ರ ಅಧ್ಯಯನ ಆಗಬೇಕು. ಅದೇ ಟಿಪ್ಪು ಹಿಂದು ವಿರೋಧಿಯಾಗಿದ್ದನಲ್ಲವೆ ಎಂದರೆ ಅವರಿಗೆ ಕೋಮುವಾದಿ ಪಟ್ಟ. ಒಬ್ಬ ಸೊಹ್ರಾಬುದ್ದೀನ್, ಯಾಕೂಬ್ ಮೆಮೊನ್ ಬಗ್ಗೆ ಮಾತನಾಡಿದರೆ, “ಅವರು ಅಮಾಯಕರು ಅಥವ ದಾರಿ ತಪ್ಪಿದ ಬಡ ಯುವಕರು” ಎಂಬ ಬಣ್ನ ಬಣ್ಣದ ಮಾತುಗಳು. ಅದೆನ್ನೆಲ್ಲ ನಾವು ಮರೆತು ಶಾಂತಿಯಿಂದ ಬಾಳಬೇಕು ಎನ್ನುವ ಉದಾರವಾದ. ಆಯಿತು ಸರಿಯೆ. ಆದರೆ ಒಬ್ಬ ಗೋಡ್ಸೆ ಬಗ್ಗೆ ಮಾತನಾಡಿದರೆ, (ನೆಹೆರು ಕುಟುಂಬ ಅಥವ ಗಾಂಧೀಜಿ ವಿರುದ್ದ ಕೂಡ) ಮಾತ್ರ ಅದು ಹಿಂದು ಉಗ್ರವಾದಕ್ಕೆ ಕುಮ್ಮಕ್ಕು, ವಿಚಾರಹೀನತೆ, ದೇಶದ್ರೋಹ, ಅದನೆಲ್ಲ ಕಟ್ಟಿಕೊಂಡೂ ಈಗೇನು ಆಗಬೇಕಿದೆ ಎನ್ನುವ ಮಾತುಗಳೆಕೆ? ಆಮಿರ್ ಖಾನ್ ಈ ದೇಶ ಬದುಕಲು ಯೋಗ್ಯವಲ್ಲ ಎಂದು ಸಾರ್ವಜನಿಕವಾಗಿ ಹೇಳಿದರೂ, ಅವನ ದೇಶಭಕ್ತಿಯ ವಿರುದ್ದ ಚಕಾರವೆತ್ತಬಾರದಂತೆ. ಅವನ ಅಭಿಪ್ರಾಯಕ್ಕೆ ಬೆಲೆ ಕೊಡಬೇಕಂತೆ, ಅವನನ್ನು ವಿರೋಧಿಸುವವರು ದೇಶಪ್ರೇಮವನ್ನು ಗುತ್ತಿಗೆ ಪಡೆದವರಂತೆ ಆಡುತ್ತಿದ್ದೇವಂತೆ. ಹಾಗಾದರೆ ಗೋಡ್ಸೆಯ positive part ಯಾಕೆ ನಿಮಗೆ ಕಾಣುತ್ತಿಲ್ಲ. ಕೊಲೆ ಮಾಡಿದ ಎನ್ನುವ ಕಾರಣಕ್ಕೆ ಅವನ ಮನಸ್ಥಿತಿಯೇ ಸರಿಯಿಲ್ಲ ಎನ್ನುವುದು ಯಾವ ನ್ಯಾಯ? ಬಹುಶಃ ಗಾಂಧೀಜಿ ಬದುಕಿದ್ದರೂ ಗೋಡ್ಸೆಯನ್ನು ಯಾವತ್ತೋ ಕ್ಷಮಿಸುತ್ತಿದ್ದರೋ ಏನೊ, ಆದರೆ ಅವರ ಹೆಸರು ಹೇಳುವ ಸೋಗಳಾಡಿಗಳು ಮಾತ್ರ ಇಂದಿಗೂ ಅದನ್ನು ಒಪ್ಪಲು ತಯಾರಿಲ್ಲ. ಒಂದು ವೇಳೆ ಗೋಡ್ಸೆ ಒಬ್ಬ ಮುಸ್ಲಿಂ ಆಗಿ ಈ ಕೆಲಸ ಮಾಡಿದಿದ್ದರೆ ಅವನಿಗೂ ಒಂದು ಉನ್ನತ ಸ್ಥಾನವನ್ನು ಇತಿಹಾಸದಲ್ಲಿ ಕಲ್ಪಿಸಿ, ಕೊಲೆಗಡುಕರಿಗೂ ಕ್ಷಮೆ ನೀಡುವುದು ಗಾಂಧೀಜಿಯದೇ ತತ್ವ ಎಂಬ ಸ್ಪಷ್ಟನೆ ಕೊಟ್ಟು ಅವನ “ಜಯಂತಿ”ಯನ್ನು “ಬಲಿದಾನ ದಿವಸ್” ಎಂದು ಅಧಿಕೃತವಾಗಿ ಘೋಷಿಸುತ್ತಿದ್ದರೋ ಏನೊ. ಗೊತ್ತಿಲ್ಲ! ಹೇಳ ಹೊರಟರೆ ಇನ್ನೂ ಅದೆಷ್ಟೋ ವಿಷಯಗಳುಂಟು ಬಿಡಿ.

ಪ್ರಮೋದ್ ಬಾಳಿಗಾ ಕೆ

kpramod.baliga@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!