ಅಂಕಣ

ಅಂಗವೈಕಲ್ಯತೆ ಕೇವಲ ಬಾಹ್ಯ ದೇಹಕ್ಕೆ ಮಾತ್ರ ಮನಸ್ಸಿಗಲ್ಲ.

ಚಪ್ಪಲಿ ಹರಿದು ಹೋಗಿತ್ತು. ಮಂಗಳೂರಿನ ಪೇಟೆಗೆ ಹೋಗುವಾಗ ಚಪ್ಪಲಿಯನ್ನು ಹೊಲಿಸಲು ತೆಗೆದುಕೊಂಡು ಹೋಗಿದ್ದೆ. ಹಾಗೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ಗೆ ಹೋಗುವ ಹಾದಿಯಲ್ಲಿ ತನ್ನ ಎರಡು ಕಾಲುಗಳನ್ನು ಕಳೆದುಕೊಂಡು ಇರುವವನು ಚಪ್ಪಲಿ ಹೊಲಿಯುವ ಅಂಗಡಿ ಇಟ್ಟುಕೊಂಡಿರುವದನ್ನು ನೋಡಿದೆ. ಅವನ ಜೀವನೋಪಾಯಕ್ಕೆ ನನ್ನ ಚಿಕ್ಕ ಸಹಾಯ ಆಗಬಹುದು ಎಂದೆನಿಸಿ ಅವನ ಹತ್ತಿರವೇ ಚಪ್ಪಲಿ ಹೊಲಿದು ಕೊಡಲು ಹೇಳಿದೆ. ಬಾಯಿ ಸುಮ್ಮನೇ ಕೂರುತ್ತದೆಯೇ?ಖಂಡಿತ ಇಲ್ಲ. ಅವರ ಜೀವನದ ಸ್ಥಿತಿಗತಿಯ ಬಗ್ಗೆ ಹಾಗೆ ವಿಚಾರಿಸುತ್ತಾ ಕುಳಿತೆ. ಎರಡು ಕಾಲುಗಳಿಲ್ಲದಿದ್ದರೂ ಯಾರ ಹಂಗಿಲ್ಲದೇ ಸ್ವಾಭಿಮಾದ ಬದುಕನ್ನು ನಡೆಸುತ್ತಿರುವದನ್ನು ನೋಡಿ ಹೆಮ್ಮೆ ಎನಿಸಿತು. ತನ್ನ ಅಂಗವೈಕಲ್ಯತೆಯಿಂದ ನೊಂದಿ ಯಾರ ಅನುಕಂಪಗಳಿಗೆ ಮೊರೆ ಹೋಗದೆ ಯಾರ ಅಧೀನತೆಯಲ್ಲಿರದೆ ಸ್ವತಂತ್ರವಾಗಿ ಜೀವನ ನಡೆಸುತ್ತಿರುವದು ನಿಜಕ್ಕೂ ಆಶ್ಚರ್ಯವೆನಿಸುತ್ತದೆ. ದೇವರು ನಮಗೆ ಒಳ್ಳೆಯ ಆರೋಗ್ಯ ಹಾಗೂ ಸೌಕರ್ಯಗಳನ್ನು ಕೊಟ್ಟಿದ್ದರೂ ದೇವರು ಅದು ಕೊಡಬಾರದಿತ್ತೆ ಇದು ಕೊಡಬಾರದಿತ್ತೆ ಎಂದು ಗೊಣಗುತ್ತಲೇ ಇರುತ್ತೇವೆ. ಆದರೆ ಇಂತಹ ವ್ಯಕ್ತಿಗಳು ನಮ್ಮ ಮನಸಿನ ಕಣ್ಣನ್ನು ತೆರೆಸಿ ಅವರ ಜೀವನದ ಅನುಭವಗಳಿಗೆ ನಾವು ಕುಬ್ಜರು ಎನ್ನುವ ಸಂಗತಿಯನ್ನು ಎಚ್ಚರಿಸುತ್ತಾರೆ.

ಇವರ ಹೆಸರು ಎರಿಸ್ವಾಮಿ(ಮೂರ್ತಿ) ಅಂತಾ. ಮಂಗಳೂರಿನ ಆರ್ ಟಿ ಒ ಕಛೇರಿಯ ಹತ್ತಿರ ಚಪ್ಪಲಿ ಹೊಲಿಯವ ಅಂಗಡಿ ಹಾಕಿಕೊಂಡು ಬದುಕನ್ನು ನಡೆಸುತ್ತಿದ್ದಾರೆ. ಅವರಿಗೆ ಪುಟ್ಟ ಅಂಗಡಿಯೇ ಮನೆಯಾಗಿದೆ ಮನೆಯೇ ಅಂಗಡಿಯಾಗಿದೆ. ಪೋಲಿಯೊ ರೋಗವು ಇವರ ಕಾಲುಗಳನ್ನು ಚಿಕ್ಕ ವಯಸ್ಸಿನಲ್ಲೇ ಕಸಿದುಕೊಂಡಿದೆ. ಆದರೂ ಸ್ವಾಭಿಮಾನದಿಂದ ಇವರು ನಡೆಸುತ್ತಿರುವ ಬದುಕು ಅವರನ್ನು ಉತ್ತುಂಗಕ್ಕೆ ಏರಿಸಿದೆ. ಇವರು ಮೂಲತಃ ಬಳ್ಳಾರಿಯವರು. ಇವರು ಚಿಕ್ಕವಿದ್ದಾಗಿನಿಂದಲೇ ಪೋಲಿಯೋದಿಂದ ತಮ್ಮ ಕಾಲುಗಳನ್ನು ಕಳೆದುಕೊಂಡರು.ಹೆತ್ತವರು ಕೂಡ ಅವರ ಅಂಗವೈಕಲ್ಯತೆಯನ್ನು ನೋಡಿ ದೂರ ಮಾಡಿದರು.ಇದರಿಂದ ಬೇಸತ್ತು ಊರನ್ನು ಬಿಟ್ಟು ತಮ್ಮ ಜೀವನದ ಹಾದಿಯನ್ನು ಹುಡುಕುತ್ತಾ ಚಿಕ್ಕ ಮಂಗಳೂರಿನ ಕಡೂರಿಗೆ ಬಂದರು.

ಅಲ್ಲಿ ಭಿಕ್ಷೆ ಬೇಡಿ ಬಂದ ಹಣದಿಂದ ತಮ್ಮ ಜೀವನವನ್ನು ನಡೆಸುತ್ತಾ ತೊಡಗಿದರು. ಒಮ್ಮೆ ಯಾರೋ ಒಬ್ಬರು ಅವರಿಗೆ ಭಿಕ್ಷೆ ಹಾಕಿ ಯಾಕೆ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದೀಯಾ. ನಿನ್ನ ಕೈಲಾಗುವಂತ ಕೆಲಸ ಮಾಡಿ ಜೀವನ ನಡೆಸು ಎಂದು ಸಲಹೆ ನೀಡಿದರಂತೆ. ಇವರಿಗೆ ಅವರು ಹೇಳಿದ್ದು ಸರಿ ಎನಿಸಿ ನನ್ನ ಕೈಲಾಗುವಂತ ಕೆಲಸ ಮಾಡಿ ಜೀವನ ನಡೆಸುವ ಉಪಾಯಗಳನ್ನು ಹುಡುಕಲು ಶುರುಮಾಡಿದರಂತೆ.

ಆಗ ಅವರಿಗೆ ಕಂಡದ್ದು ಚಪ್ಪಲಿ ಹೊಲಿಯುವ ಅಂಗಡಿ. ಈ ಕೆಲಸವನ್ನು ತಾನು ಕಲಿಯಬಹುದು ಎಂದು ಯೋಚನೆ ಮಾಡಿ ಅಲ್ಲೇ ಪಕ್ಕದಲ್ಲಿರುವ ಚಪ್ಪಲಿ ಅಂಗಡಿಯವನ ಹತ್ತಿರ ತನಗೆ ಚಪ್ಪಲಿ ಹೊಲಿಯುವದನ್ನು ಕಲಿಸಿಕೊಡಲು ವಿನಂತಿಸಿಕೊಂಡರಂತೆ. ಅವರಿಂದ ಚಪ್ಪಲಿ ಹೊಲಿಯುವದನ್ನು ಕಲಿತರು.ಮೊದ ಮೊದಲು ಕಷ್ಟವಾದರೂ ತಮ್ಮ ಛಲ ಬಿಡದೇ ಚಪ್ಪಲಿ ಹೊಲಿಯುವ ತಂತ್ರಗಾರಿಕೆಯಲ್ಲಿ ಪಂಟರಾದರು. ತಾವು ಭಿಕ್ಷೆ ಬೇಡಿ ಬಂದ ಹಣದಲ್ಲಿ ಚಪ್ಪಲಿ ಹೊಲಿಯಲು ಬೇಕಾಧ ವಸ್ತುಗಳನ್ನು ಕೊಂಡುಕೊಂಡರು.. ಹಾಗೆ ಸ್ನೇಹಿತನ ಸಲಹೆಯ ಮೇರೆಗೆ ಮಂಗಳೂರಿಗೆ ಬಂದು ಒಂದು ಮೂರು ತಿಂಗಳು ಮತ್ತೆ ಭಿಕ್ಷೆ ಬೇಡಿ ಆ ಹಣದಿಂದ ಚಪ್ಪಲಿ ಹೊಲಿಯುವ ಸಣ್ಣ ಅಂಗಡಿಯನ್ನು ಪುಟ್ ಪಾತ್ನಲ್ಲಿ ಹಾಕಿಕೊಂಡರು. ಅವರು ಚಪ್ಪಲಿ ಹೊಲಿಯುವ ಕಾಯಕದಿಂದ ದುಡಿದ ಹಣದಲ್ಲೇ ಓಡಾಡಲು ವೀಲ್ ಚೇರ್ ಸಹ ತೆಗೆದುಕೊಂಡರಂತೆ.

ದಿನಕ್ಕೆ ಏನಿಲ್ಲ ಎಂದರೂ 300 ರೂಪಾಯಿಯಂತು ದುಡಿಯುತ್ತಾರಂತೆ.

ಅವತ್ತು ಆ ವ್ಯಕ್ತಿ ಹೇಳಿದ ಮಾತುಗಳು ಇಂದು ನನಗೆ ಸ್ವಂತಿಕೆಯ ಬದುಕನ್ನು ನೀಡಿದೆ. ಈ ಕಾಯಕ ನನಗೆ ಊಟ, ತಿಂಡಿ, ನಿದ್ರೆ, ನೆಮ್ಮದಿಯ ಬದುಕಿಗೆ ಎಂದೂ ಕೊರತೆ ಮಾಡಿಲ್ಲ ಎಂದು ಹೇಳುತ್ತಾರೆ. ಅವರು ಬದುಕು ಕಟ್ಟಿಕೊಂಡ ಅನುಭವದ ಮಾತುಗಳು ನಿಜಕ್ಕೂ ಕೇಳುಗರ ಕಣ್ಣಲ್ಲಿ ನೀರು ಹರಿಸುತ್ತದೆ. ಹೆತ್ತವರು ಅವರನ್ನು ದೂರಮಾಡಿದ್ದರೂ ತಾನು ದುಡಿದ ಹಣದಲ್ಲಿ ತನ್ನ ಅಣ್ಣನ ಮಕ್ಕಳ ಓದಿಗೆ ಹಣವನ್ನು ಕಳುಹಿಸುತ್ತಾರಂತೆ. ತಂದೆ ತಾಯಿಗಳು ಬೇಡ ಎಂದು ತಿರಸ್ಕಾರ ಮಾಡಿದ್ದರೂ ಎದೆಗುಂದದೇ ತಮ್ಮದೇ ಆದ ರೀತಿಯಲ್ಲಿ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವಲ್ಲಿ ಬಹಳ ಮಟ್ಟಿಗೆ ಯಶಸ್ವಿಯಾಗಿದ್ದಾರೆ. ದುಡಿದು ಗಳಿಸಬೇಕೆಂಬ ಹಂಬಲ ಅವರನ್ನು ಇಂದು ಭಿಕ್ಷಾಟನೆಯಿಂದ ಮುಕ್ತಿ ಗೊಳಿಸಿದೆ. ಅಂಗವೈಕಲ್ಯತೆ ಇದ್ದರೂ ಅದನ್ನು ತುಳಿದು ಛಲದಿ ಚಪ್ಪಲಿ ಹೊಲಿಯುವ ಕಾಯಕವನ್ನು ಕಲಿತು ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡ ಎರಿಸ್ವಾಮಿಯವರಿಗೆ ನನ್ನದೊಂದು ಸಲಾಮ್.

ಅಂಗವೈಕಲ್ಯತೆ ದೇಹಕ್ಕೆ ಬರುತ್ತದೆ. ಆದರೆ ಮನಸು ಅನ್ನುವದು ಇದೆಯಲ್ಲ ಅದು ಮನಸ್ಸು ಮಾಡಿದರೇ ಯಾವುದೂ ಅಸಾಧ್ಯವಲ್ಲ. ಅಂಗವೈಕಲ್ಯತೆ ಕೇವಲ ಬಾಹ್ಯ ದೇಹಕ್ಕೆ ಮಾತ್ರ ಮನಸ್ಸಿಗಲ್ಲ. ಮನಸ್ಸಿದ್ದರೆ ಮಾರ್ಗ ಅನ್ನುವದು ನೂರಕ್ಕೆ ನೂರರಷ್ಟು ಸತ್ಯ.. ತಮ್ಮ ಅಂಗವೈಕಲ್ಯತೆಯನ್ನು ಸೋಲಿಸಿ ಸ್ವೇಚ್ಛೆಯ ಬದುಕನ್ನು ರೂಪಿಸಿಕೊಂಡು ಇಂತಹ ಅನೇಕ ಜನರು ನಮ್ಮ ಸಮಾಜಕ್ಕೆ ಮಾದರಿಯಾಗಿದ್ದಾರೆ. ಬದುಕುವ ಛಲವೇ ದುಡಿಮೆಗೆ ದಾರಿಯನ್ನು ತೋರಿಸುತ್ತದೆ. ಮನೋಬಲದ ಶಕ್ತಿ ಅಂಗವೈಕಲ್ಯತೆಯನ್ನು ಸೋಲಿಸಿ ಬದುಕಿಗೆ ಹೊಸ ತಿರುವಿಗೆ ನಮ್ಮನ್ನು ಕರೆದೊಯ್ಯುತ್ತದೆ.. ಮನೋಸಂಕಲ್ಪವು ಅಂಗವೈಕಲ್ಯತೆಯ ಬೇಲಿಯನ್ನು ಮುರಿದು ಬದಲಾವಣೆಯ ಬದುಕಿಗೆ ಮುನ್ನುಡಿಯಾಗುತ್ತದೆ. ಅಂಗವೈಕಲ್ಯತೆ ಇದ್ದರೂ ಮೌಂಟ್ ಎವರೆಸ್ಟ್ ಏರಿ ತಮ್ಮ ಸಾಧನೆಯನ್ನು ಹಲವರು ಜಗತ್ತಿಗೆ ತೋರಿಸಿದ್ದಾರೆ. ತನ್ನಿಂದಲೂ ಸಾಧ್ಯ ಅನ್ನುವ ಅವರ ಸಕಾರಾತ್ಮಕ ಭಾವನೆ ಅವರ ಜೀವನದ ಇಚ್ಛೆಗಳನ್ನು ನೆರವೇರಿಸಿದೆ. ನಾವು ನಮಗೆ ಬಾಹ್ಯ ದೇಹಕ್ಕೆ ಶಕ್ತಿ ಬರಲು ಪೌಷ್ಟಿಕ ಆಹಾರಗಳನ್ನು ತೆಗೆದುಕೊಳ್ಳುತ್ತೇವೋ ಹಾಗೆ ನಮ್ಮ ಅಂತಃಕರಣದ ಸಧೃಡತೆಗೆ ಸಕಾರಾತ್ಮಕ ಮನೋಬಲ ಹಾಗೂ ಉತ್ಸಾಹವನ್ನು ತುಂಬುತ್ತಿರಬೇಕು. ನಮ್ಮ ಬದುಕಿನ ಬದಲಾವಣೆಗೆ ನಮ್ಮ ಮನೋಬಲ ಕಾರಣವಾಗಿರುತ್ತದೆಯೇ ಹೊರತು ಬಾಹ್ಯ ಶಕ್ತಿಯಲ್ಲ. ನಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಗಳು ಇದ್ದಷ್ಟೂ ನಾವು ಸೋಲುತ್ತಲೇ ಇರುತ್ತೇವೆ.. ನಮ್ಮ ಬದುಕನ್ನು ನಾವು ಪ್ರೀತಿಸಲು ಹಾಗೂ ಉತ್ತೇಜನಕ್ಕೆ ಮನೋಬಲವು ತುಂಬಾ ಅವಶ್ಯಕ. ಜೀವಮಾನದ ಕೆಲವು ನಿರ್ಣಯಗಳಂತೂ ನಮ್ಮ ಮನೋಸ್ತೈರ್ಯವನ್ನೇ ಅವಲಂಭಿಸಿದೆ. ಕ್ಯಾನ್ಸರ್ ನಂತಹ ಭಯಂಕರ ರೋಗಗಳಿಂದ ಬಳಲುತ್ತಿರುವವರು ಮನೋಬಲದಿಂದ ಹೆಚ್ಚು ಕಾಲ ಬದುಕುತ್ತಾರೆಯೇ ವಿನಃ ಔಷಧಗಳಿಂದಲ್ಲ.

ಏನೇ ಇರಲಿ ನಮ್ಮ ಬದುಕಿನ ಬೀಳುಗಳಲ್ಲಿ ಮನೋಬಲವನ್ನು ಕಳೆದುಕೊಳ್ಳದೆ ಬದಲಾವಣೆಗೆ ಹರಿಕಾರರಾಗೋಣ……

Madhura Hegde
madhuhegede@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!