ಆವತ್ತು ಅಗಸ್ಟ್ 18-2015 ರ ಬೆಳಿಗ್ಗೆ ಪತ್ರಿಕೆಯೊಂದರ ಪುಟದಲ್ಲಿ ಸೈನಿಕ ಹುತಾತ್ಮನಾದ 10 ನೇ ವರ್ಷದ ಸ್ಮರಣೆಯ ಪ್ರಯುಕ್ತ ಚಿಕ್ಕ ನೆನಪಿನ ಸ್ಮರಣೆಯನ್ನು ಆತನ ತಂದೆ ಪ್ರತಿ ವರ್ಷದಂತೆ ಈ ವರ್ಷದ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ವೀರ ಯೋಧ ಕಾರವಾರದ ವಿನೋದ ಮಹಾದೇವ ನಾಯ್ಕ, ಈ ಸ್ಮರಣೆಯನ್ನು ನೋಡಿದ ಕೂಡಲೆ ಜಿಲ್ಲೆಯ ಯುವ ಬ್ರಿಗೇಡ್ ತರುಣರು ಕಾರವಾರದ ಕಡವಾಡದಲ್ಲಿರುವ ವೀರ ಯೋಧನ ಮನೆಗೆ ಹೊರಟು ನಿಂತರು. ಸೈನಿಕರು ಎಂದರೆ ಪ್ರೀತಿ ಗೌರವ ಮತ್ತು ಹೆಮ್ಮೆ ಯುವಾ ಬ್ರಿಗೇಡಿಗೆ ಯಾವತ್ತು ಇದೆ. ಇನ್ನು ಸೈನಿಕನ ಬಗ್ಗೆ ತಿಳಿದುಕೊಳ್ಳುವುದು ಸೈನಿಕರ ಜೊತೆ ಮಾತನಾಡುವುದ ಯುವಾ ಬ್ರಿಗೇಡಿನ ತರುಣರಿಗೆ ಅತ್ಯಂತ ಪ್ರಿಯವಾದ ಕೆಲಸ.
ಮಧ್ಯಾಹ್ನದ ನಂತರ ಮನೆಗೆ ತಲುಪಿದ ತರುಣರು ಸೈನಿಕನ ಬಗ್ಗೆ ತಿಳಿದುಕೊಳ್ಳಲು ಅತ್ಯಂತ ಉತ್ಸುಕರಾಗಿದ್ದರು. ಹೋದ ತಕ್ಷಣ ನಮ್ಮ ಬಗ್ಗೆ ವಿಚಾರಿಸಿ ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡರು ತಂದೆ ಮಹಾದೇವ ಅವರು ಯೋಧನ ಬಗ್ಗೆ ಮಾತಾಡಲಾರಂಭಿಸಿದರು. ಹೆಸರು ವಿನೋದ ನಾಯ್ಕ ಹುಟ್ಟಿದ್ದು ಕಾರವಾರದಲ್ಲಿ, ಹಿಂದೂ ಹೈಸ್ಕೂಲಿನಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಮುಂದೆ ತನ್ನ ತಂದೆಯ ಅಣತಿಯಂತೆ ಐ.ಟಿ.ಐ. (ಫಿಟ್ಟರ್) ಮುಗಿಸಿದ, ಆಗಲೇ ವಿನೋದನಿಗೆ ಸೈನ್ಯಕ್ಕೆ ಸೇರುವ ಕನಸು ಚಿಗುರೊಡೆದಿತ್ತು. ತನ್ನ ಮಿತರೆಲ್ಲರೊಡನೆ ಚರ್ಚಿಸಿ ಎಲ್ಲರು ಸೈನ್ಯಕ್ಕೆ ಸೇರುವುದೆಂದು ನಿರ್ಧರಿಸಿದರು ಸೇನಾ ಭಾರತಿಯ ರ್ಯಾಲಿಗಾಗಿ ಮಂಗಳೂರಿಗೆ ಹೊರಟು ನಿಂತರು. ಮೊದಲನೆಯ ಪ್ರಯತ್ನದಲ್ಲಿ ವಿಫಲನಾದ ವಿನೋದ, ಎರಡನೇ ಪ್ರಯತ್ನದಲ್ಲಿ ತನ್ನ ಮಿತೃರನ್ನೆಲ್ಲ ಹಿಂದಿಕ್ಕಿ ತಾನೂ ಅಂದುಕೊಂಡಿದನ್ನು ಸಾಧಿಸಿದ, ಅದೇ ಸಮಯಕ್ಕೆ ತನ್ನ ತಂದೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಸಿಕ್ಕ ಕೆಲಸವನ್ನು ಧಿಕ್ಕರಿಸಿ ಸೇನೆಯ ತರಬೇತಿಗಾಗಿ ಬೆಂಗಳೂರಿನ ಸಿ.ಎಮ್.ಪಿ. ಸೆಂಟರ್ (ಕಾಪ್ರ್ಸ ಆಫ್ ಮಿಲಿಟರಿ ಪೊಲಿಸ್) ಹೊರಟು ನಿಂತ. ತಾಯಿ ಹೋಗುವುದೇ ಬೇಡವೆಂದು ಹಟ ಹಿಡಿದು ಕುಳಿತರು, ಇರುವ ಒಬ್ಬ ಮಗನನ್ನು ಗಡಿಯಲ್ಲಿ ಕಳುಹಿಸಿ ತಾವು ಇಲ್ಲಿ ಮಾಡುವುದಾದರು ಏನು ಎಂದರು. ಅದರೆ ತಂದೆ ಮಾತ್ರ ತಣ್ಣನೆಯ ಧ್ವನಿಯಲ್ಲಿ ನಿನ್ನ ಇಚ್ಛೆಗೆ ತಕ್ಕಂತೆ ನೀನು ಮಾಡು ಎಂದು ಹೇಳಿದ್ದರು. ಕೊನೆಗೂ ತಾಯಿ ಮನ ಒಲಿಸಿ ಬೆಂಗಳೂರಿಗೆ ಹೊರಟ ವಿನೋದ…
ಮೊದಲಿನಿಂದಲೂ ದೇಶದ ಬಗ್ಗೆ ಅಪಾರವಾದ ಪ್ರೀತಿಯನ್ನು ಹೊಂದಿದ ವಿನೋದ ಇವತ್ತು ಅದೇ ಭಾರತ ಮಾತೆಯ ಸೇವೆಗೆ ತನ್ನನ್ನು ಸಮರ್ಪಿಸಿದ. ಯಾವುದಕ್ಕೂ ಹೆದರದ ವಿನೋದ ಅತ್ಯಂತ ಸಾಹಸಮಯೀ ಹಾಗೂ ಗುರಿ ಇಡುವುದಕ್ಕೆ ನಿಪುಣನಾಗಿದ್ದ. ಸೇನಾ ತರಬೇತಿಯಲ್ಲಿ ಗುರಿ ಇಡುವುದರಲ್ಲಿ ಪದಕಗಳನ್ನು ಗಳಿಸಿಕೊಂಡಿದ್ದ. ಆತ ಸೇನೆಯಲ್ಲಿ ಸೇವೆ ಸಲ್ಲಿಸಿದ ದಿನಗಳನ್ನು ಸರಿಯಾಗಿ ಲೆಕ್ಕ ಇಟ್ಟಿರುವ ಆತನ ತಂದೆ ಸರಿಯಾಗಿ ನಾಲ್ಕು ವರ್ಷ 48 ದಿನಗಳು ಅಂತ ನಿಖರವಾಗಿ ಹೇಳುತ್ತಾರೆ. ಈ ಒಟ್ಟು ದಿನಗಳಲ್ಲಿ ಅವನು ಮನೆಗೆ ಬಂದಿದ್ದು 4 ದಿನಗಳು ಮಾತ್ರ. ಒಮ್ಮೆ ಮನೆಯಲ್ಲಿರುವ ಕುಟುಂಬದವರು ಮತ್ತು ಬಂಧೂಗಳೆಲ್ಲರೂ ಸೇರುತ್ತಾರೆ ಆತನಿಗೂ ಬರುವಂತೆ ಕೇಳಿಕೊಂಡಾಗ, ಇಲ್ಲಿ ನಡೆಯುವ ಒಂದು ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರು ಬರುತ್ತಿದ್ದಾರೆ ಅವರಿಗೆ ಗಾರ್ಡ ಆಫ್ ಹಾನರ್ ಹಾಗೂ ಅವರಿಗೆ ಕೈ ಮಿಲಾಯಿಸುವ ಅಪರೂಪದ ಕೆಲಸ ನನ್ನದು ಅದಕ್ಕೆ ಬರಲಾಗದು ಅಂತ ಹೆಮ್ಮೆಯಿಂದ ಹೇಳಿಕೊಂಡಿದ್ದನಾತ…
ಆ ಕ್ಷಣ ತಂದೆ ತಾಯಿಗೂ ಹೆಮ್ಮೆಯನ್ನೇ ತಂದಿರುತ್ತದೆ ಬಿಡಿ…
ಸೈನ್ಯದಲ್ಲಿ ಈತನಿಗೆ ಬಂದ ಒಂದಿಷ್ಟು ದುಡ್ಡಿನಿಂದ ತಾನೂ ಒಂದು ಬುಲೆಟ್ ಬೈಕ್ ಅನ್ನು ಕೊಂಡುಕೊಳ್ಳುವುದಾಗಿ ತಂದೆಗೆ ಹೇಳಿದಾಗ, ಬೇಡ ನೀನು ಮನೆಗೆ ಬರುವುದೆ ಅಪರೂಪ ನೀನು ಇಲ್ಲಿಲ್ಲದಿದ್ದಾಗ ಬೈಕ್ ಓಡಿಸುವವರು ಯಾರು ಇಲ್ಲಾ ಅದರ ಬದಲು ಮನೆ ಕಟ್ಟಿಸೊಣ ಮನೆ ಹಳೇಯದಾಗಿದೆ ಅಂದಾಗ ಅಪ್ಪನ ಮಾತಿಗೆ ಒಪ್ಪಿಕೊಂಡಿದ್ದ ಮಗ ಹೊಸ ಮನೆಯ ಗೃಹಪ್ರವೇಶಕ್ಕೆಂದು ಬಂದವ ಮತ್ತೆ ಹೊಸ ಮನೆಗೆ ಬಂದಿದ್ದು ಬಂದಿದ್ದು ತ್ರಿವರ್ಣ ಧ್ವಜ ಹೊದ್ದ ಪೆಟ್ಟಿಗೆಯಲ್ಲೇ!!
ಹೌದು ಅಂದು, 18-08-2005 ಜಮ್ಮುವಿನ ಪೂಂಚ್ ಸೆಕ್ಟರ್ ನಲ್ಲಿ ರಾತ್ರಿ ಪಾಳಿಯಲ್ಲಿ ಬಂಕರ್ ನಲ್ಲಿ ಪೋಸಿಷನ್ ತೊಗೊಂಡು ನಿಂತ ವಿನೋದ ಇನೇನ್ನು ಹದಿನೈದು ನಿಮಿಷ ಆದರೆ ಸ್ವಲ್ಪ ಆರಾಮ ತೆಗೆದುಕೊಂಡು 80 ಕಿ.ಮಿ. ದೂರದ ಪೋಸ್ಟಿನಲ್ಲಿ ಕಾರವಾರದ ಇನ್ನೊಬ್ಬ ಯೋಧನಾದ ಉದಯಕಾಂತ ಬಳಿ ಹೋಗಿ, ತಂಗಿ ಕಳಿಸಿ ಕೊಟ್ಟ ರಾಖಿಯನ್ನು ಕಟ್ಟಿಸಿಕೊಂಡು ಬರುವ ಹಂಬಲ ದೊಂದಿದ್ದ. ಆದರೆ ಕ್ಷಣಮಾತ್ರದಲ್ಲಿ ಗಡಿಯಾಚೆಯಿಂದ ಬಂದ ಗುಂಡು ನೇರ ವಿನೋಧರ ಹಣೆಗೆ ಹೊಕ್ಕಿ ಅವರ ಪ್ರಾಣ ತೆಗೆದೆ ಬಿಟ್ಟಿತ್ತು. ತಂಗಿ ಕಳಿಸಿಕೊಟ್ಟ ರಾಖಿಯನ್ನು ಅಣ್ಣನ ಕೈ ಸೇರದೆ ಅನಾಥವಾಗಿತ್ತು, ಅಣ್ಣ ಭಾರತದ ಗಡಿಯಲ್ಲಿ ಹಿಮದ ನೆಲದಲ್ಲಿ ತಾಯಿಯ ಮಡಿಲನ್ನು ಸೇರಿ ಹೋಗಿದ್ದ, ಆತನ ಹೆಸರು ಇತಿಹಾಸದ ಪುಟ ಸೇರಿಯಾಗಿತ್ತು. ಅಂದು ಸುದ್ದಿ ತಿಳಿದ ಕಾರವಾರದ ಜನತೆ ದಿಗ್ಬ್ರಾಂತರಾದರು. ಆತನ ಅಂತ್ಯ ಸಂಸ್ಕಾರಕ್ಕೆ ಸೇರಿದ ಅಪಾರ ಜನಸ್ತೋಮ ವೀರ ಯೊಧನ ಅಕಾಲ ಮರಣಕ್ಕೆ ಕಂಬನಿ ಮಿಡಿದಿತ್ತು. ಕಾರವಾರದ ಕಡವಾಡ ಆತನ ಸ್ವಗ್ರಾಮದಲ್ಲಿ ಸಕಲ ಸೇನೆ ಹಾಗೂ ಪೊಲಿಸ್ ಗೌರವದೊಂದಿಗೆ ಪಂಚಭೂತದಲ್ಲಿ ಲೀನನಾಗಿ ಹೋದ. ಇರುವ ಒಬ್ಬ ಮಗನನ್ನೂ ಸಹ ಈ ದೇಶಕ್ಕಾಗಿ ಸಮರ್ಪಿಸಿ ಸಂಪೂರ್ಣ ಜೀವನವನ್ನು ಆತನ ನೆನಪಿನಲ್ಲೆ ಕಳೆಯುತ್ತಿರುವ ಆತನ ತಂದೆ-ತಾಯಿಗಳಿಗೆ ಎಷ್ಟು ಧನ್ಯವಾದ ಅವರ ದುಖಃವನ್ನು ತುಂಬಿಕೊಡಲಾರದು.
ಇವುಗಳ ಮಧ್ಯ ಮನೆಗೆ ಮಗನಂತೆ ನಿಂತಿರುವುದು ಆತನ ಮಿತ್ರ ಉದಯಕಾಂತ. ವಿನೋದನ ಪರಿಚಯವಾಗಿದ್ದು ಸೇನಾ ಭಾರತಿಯ ರ್ಯಾಲಿಯಲ್ಲಿ ಇಬ್ಬರೂ ಅಕ್ಕಪಕ್ಕದ ಊರಿನವರು ಇಬ್ಬರೂ ಒಂದಿಷ್ಟು ದಿನ ಕಾಲ ಒಂದೇ ಗಡಿಯಲ್ಲಿ ಸೇವೆ ಸಲ್ಲಿಸಿದವರು. ವಿನೋದ ಜೊತೆಯ ಗೆಳೆತನದ ಕರ್ತವ್ಯವನ್ನು ಚಾಚುತಪ್ಪದೆ ಇಂದಿಗೂ ನಿಭಾಯಿಸುತ್ತಾ ಅವನ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಹಾಗೂ ಹೆಮ್ಮೆಯ ಯೋಧನಾಗಿ ಸೇವೆ ಸಲ್ಲಿಸುತ್ತಿದ್ಧಾನೆ ಉದಯಕಾಂತ, ಇವರಿಗೆ ನಾವು ಎಷ್ಟು ಧನ್ಯವಾದ ಹೇಳಿದರೂ ಸಣ್ಣದಾದೀತು.
ಯಾರೊಬ್ಬರ ಸಾವಿನಲ್ಲೂ ಎಲ್ಲರ ನೆನಪಿಗುಳಿಯುವುದು ಅವರ ಘನತೆ ಮಾತ್ರ. ಬದುಕೇನು ಬಂದಂತೆ ಕಳೆದು ಹೋಗುತ್ತದೆ. ಸೈನಿಕನ ಕಥೆ ಕೇಳಿ ಮೈ ಮರೆತು ಕುಂತ ಯುವ ಬ್ರೀಗೆಡ ತರುಣರು ತಂದಿಟ್ಟ ತಿನಿಸುಗಳನ್ನು ಸ್ವೀಕರಿಸಲು ಹಿಂದೇಟು ಹಾಕುವುದನ್ನು ಕಂಡ ವಿನೋಧರ ತಂದೆಯವರ ಒಂದು ಮಾತಿನಿಂದ ಒಂದು ಹನಿಯೂ ಪ್ಲೇಟಿನಲ್ಲಿ ಬಿಡದೆ ತಿಂದುಬಿಟ್ಟರು. ಹೇಳಿದ್ದೇನು ಗೊತ್ತಾ, “ನೀವು ತಿನ್ನದೇ ಇದ್ದರೇ ನನಗೆ ಬೇಜಾರಾಗತ್ತೆ, ವಿನೋಧನನ್ನೇ ನಿಮ್ಮಲ್ಲಿ ಕಾಣುತ್ತಿದ್ದೇನೆ”. ಭಾರವಾದ ಮನಸ್ಸು ಮತ್ತು ಒದ್ದೆಯಾದ ಕಣ್ಣುಗಳೊಂದಿಗೆ ಮಾತಿಲ್ಲದೆ ಮನೆಗೆ ಹೆಜ್ಜೆ ಹಾಕಿತು ತರುಣರ ತಂಡ…
ವಿನೋದನ ಜೊತೆಗೆ, ವಿನೋದನಂತಹ ಅದೆಷ್ಟು ಸೈನಿಕರನ್ನು ದೇಶಕ್ಕೆಂದು ಕಳುಹಿಸುತ್ತಿರುವ ತಂದೆ ತಾಯಿಗೂ ನಮ್ಮ ಸಲಾಂ ಸಲ್ಲದಿದ್ದರೆ ತಪ್ಪು ನಮ್ಮದೇ.
ಜೈ ಜವಾನ್