ಅಂಕಣ

ಗುಬ್ಬಿಗಳೆಲ್ಲ ಹೋದವೆಲ್ಲಿಗೆ?

ಇಂದಿನ ದಿನಗಳಲ್ಲಿ ಒಂದು ಪ್ರಾಯದ ಯುವಕರಿಗೆ-ಯುವತಿಯರಿಗೆ  ಗುಬ್ಬಿಗಳನ್ನು ಕಂಡರೆ ಅದೇನೋ ಒಂದು ಆನಂದವಾಗುವುದು ಸಹಜ. ಗುಬ್ಬಿಗಳಿಗೂ ನನ್ನಂತಹ ಕೆಲವರಿಗೂ ಒಂಥರಾ ಬಿಡಿಸಿಲಾರದ ನಂಟು, ಬಹುಶಃ ನಮ್ಮ ಅಮ್ಮಂದಿರು ಚಿಕ್ಕಂದಿನಲ್ಲಿ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯಲು “ಹೇ ಅಲ್ಲಿ ನೋಡು ಗುಬ್ಬಿ” ಎಂದೋ ಅಥವಾ ಯಾವ್ದೋ ಒಂದು ಒಂದು ವಸ್ತುವನ್ನು ನಮ್ಮಿಂದ ಮರೆಮಾಚಲು ಗಾಳಿಯಲ್ಲಿ ಜೋರಾಗಿ ಕೈಯನ್ನು ಆಚೀಚೆ ಆಡಿಸಿ “ಗುಬ್ಬಿ ಕಚ್ಚಿಕೊಂಡು ಹೋಯ್ತು” ಎಂದ್ಹೇಳಿ ನಮ್ಮನ್ನು ಸಮಾಧಾನ ಮಾಡಿದ್ದರಿಂದಲೋ ನನಗೆ ಈಗಲೂ ಗುಬ್ಬಿಗಳನ್ನ ಕಂಡಾಗ ಅತೀವ ಆನಂದವಾಗುತ್ತೆ. ನಮ್ ದೇಶದಲ್ಲಿ ಈಗೀಗ ಗುಬ್ಬಿಗಳನ್ನು ನೋಡುವುದು ಅಪರೂಪವಾಗಿದೆ, ನಾನು ಮಂಗಳೂರಿನಲ್ಲಿ ಇದ್ದಾಗ, ಜನನಿಬಿಡ ಕೇಂದ್ರ ಮಾರುಕಟ್ಟೆಯಲ್ಲಿ ಇದ್ದ ಎಲೆಕ್ಟ್ರಾನಿಕ್ ಸಾಮಗ್ರಿಗಳ ಅಂಗಡಿಯೊಂದರಲ್ಲಿ ನೋಡಿದ್ದೆ. ಆನಂತರ ಅಲ್ಲೊಂದು ಇಲ್ಲೊಂದು ಗುಬ್ಬಿ ನೋಡಿದ್ದು ಬಿಟ್ರೆ ಮನಸ್ಸಿಗೆ ಮುದ ಕೊಡುವ ಗುಬ್ಬಿಗಳ ಹಿಂಡನ್ನು ನೋಡಿದ್ದು ಕಡಿಮೆ. ಮಂಗಳೂರು ಬಿಟ್ಟಾಯಿತು, ಬೆಂಗಳೂರನ್ನೂ ನೋಡಿದ್ದಾಯಿತು ಆದರೆ ಅಲ್ಲೂ ಗುಬ್ಬಿಗಳನ್ನು ನೋಡಿದ್ದು ಕಡಿಮೆಯೇ ಎನ್ನಬಹುದು. ಸಾಮಾನ್ಯವಾಗಿ ಎಲ್ಲರೂ ಹೇಳುವ ಪ್ರಕಾರ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸೆಲ್ ಫೋನ್ ಬಳಕೆಯಿಂದಾಗಿ ಗುಬ್ಬಿಗಳು ಕಡಿಮೆಯಾಗಿಬಿಟ್ಟಿವೆ ಎಂಬ ತರ್ಕಹೀನ ಕಾರಣವನ್ನೇ ನಾನೂ ನಂಬಿದ್ದೆ. ಆಮೇಲೆ ಆ ವಿಷಯ ಮರತೇ ಹೋಗಿತ್ತು. ಮತ್ತೆ ನನ್ನ ಗುಬ್ಬಿಗಳ ಕುರಿತಂತೆ ಕುತೂಹಲ ಗರಿಗೆದರಿದ್ದು ಇನ್ನೊಂದು ನಗರದಲ್ಲಿ ಹಿಂಡುಗಟ್ಟಲೆ ಗುಬ್ಬಿಗಳನ್ನು ನೋಡಿದಾಗ, ಅದೂ ಜನನಿಬಿಡ ರಸ್ತೆಗಳ ಪಕ್ಕದಲ್ಲಿ, ಶಾಪ್ಪಿಂಗ್ ಮಾಲ್’ಗಳ ಹತ್ತಿರ, ಅಷ್ಟೇ ಯಾಕೆ ನಾನು ದಿನ ಕಛೇರಿಗೆ ಹೋಗುವ ದಾರಿಯಲ್ಲಿ. ಒಮ್ಮೆಯಂತೂ, ನನ್ನ ಸ್ನೇಹಿತನೊಬ್ಬನ ಜೊತೆಯಲ್ಲಿ ವಸ್ತುಪ್ರದರ್ಶನ ಸಮುಚ್ಚಯದ ಹತ್ತಿರ ಗುಬ್ಬಿಯೊಂದನ್ನು ಕಂಡು ನನ್ನ ವಯಸ್ಸನ್ನೂ ಮರೆತು ಅದರ ಜೊತೆ ಸಣ್ಣ ಮಗುವಿನ ಹಾಗೆ ಆಟವಾಡಿದ್ದೆ, ಆಗ ನನ್ನ ಆ ಸ್ನೇಹಿತ “ನೀನು ತುಂಬಾ ಒಳ್ಳೆಯ ಮನಸ್ಸಿನವನು” ಎಂದಾಗ ನಾಚಿಕೆಯೂ ಆಗಿದ್ದು ನಿಜ. ಇರಲಿ ಇದು ಯಾಕೋ ದಾರಿ ತಪ್ಪುತ್ತಿದೆ.

ಮತ್ತೆ ನಮ್ ನಗರಗಳಲ್ಲಿ ಗುಬ್ಬಿಗಳು ಕಾಣೆಯಾಗುತ್ತಿರುವ  ವಿಚಾರಕ್ಕೆ ಬರೋಣ. ಹಾಗೆಯೇ ಗೂಗಲ್ ಮಾಡಿದಾಗ ತಿಳಿದುಬಂದ ವಿಷಯಗಳು ಇವು. ವಿಕಿರಣಗಳು ಎಲ್ಲ ಜೀವಿಗಳಿಗೂ ತೊಂದರೆಯುಂಟು ಮಾಡುವುದು ಸಹಜ, ಆದರೆ ಬರೀ ಗುಬ್ಬಿಗಳೇ ಕಾಣೆಯಾಗಿರುವುದಕ್ಕೆ/ಕಡಿಮೆಯಾಗಿರುವುದಕ್ಕೆ ಇದೇ ಕಾರಣವಲ್ಲ. ಗುಬ್ಬಿಗಳ ಪ್ರಮುಖ ಆಹಾರ ಕ್ರಿಮಿ ಕೀಟಗಳು, ಈ ಹಿಂದೆ ನಮ್ಮ ಮನೆಗಳು ಹೆಚ್ಚಾಗಿ ಮರ-ಮುಟ್ಟುಗಳಿಂದ ಮಾಡಿದ್ದವಾದ್ದರಿಂದ ನಗರಗಳಲ್ಲೂ ಗುಬ್ಬಿಗಳಿಗೆ, ಕಂಬಗಳಲ್ಲಿ ಜಂತಿಯ ಸಂದಿಗಳಲ್ಲಿ ಕ್ರಿಮಿಗಳು ದೊರೆಯುತ್ತಿದ್ದರಿಂದ ನಮ್ ಮನೆಗಳಲ್ಲೂ ಗುಬ್ಬಿಗಳು ಇರುತ್ತಿದ್ದುದು ಸಹಜ. ಈಗೀಗ ನಮ್ಮ ಮನೆಗಳ ಬಹುಪಾಲು ಕಾಂಕ್ರೀಟ್ ಆಗಿರುವುದರಿಂದ ಗುಬ್ಬಿಗಳ ಸಹಜ ಆಹಾರ ದೊರೆಯುತ್ತಿಲ್ಲ. ಮೇಲಾಗಿ ನಮ್ ನಗರಗಳಲ್ಲಿ ನಾವು ಮರಗಳನ್ನು ಉಳಿಸಿಯೇ ಇಲ್ಲ, ಹೀಗಾಗಿ ಗುಬ್ಬಿಗಳಿಗೆ ಆಹಾರ ಸಿಗುವ ಸಾಧ್ಯತೆ ಅತೀ ಕಡಿಮೆ. ಆಮೇಲೆ, ಕೆಲವೊಂದು ಪ್ರಬೇಧಗಳಿಗೆ ಯತೇಚ್ಛ ಆಹಾರ ದೊರೆಯುತ್ತಿರುವುದರಿಂದ ಜೀವಸಂತುಲನೆಯೂ ಸರಿಯಿಲ್ಲದ್ದರಿಂದಲೂ ಗುಬ್ಬಿಗಳು ಕಡಿಮೆಯಾಗಿರಬಹುದು ಎಂದು ಕೆಲವೊಂದು ಅಧ್ಯಯನಗಳು ತಿಳಿಸುತ್ತಿವೆ. ಉದಾಹರಣೆಗೆ ಪಾರಿವಾಳಗಳಿಗೆ ಆಹಾರ ಹಾಕುವವರ ಸಂಖ್ಯೆ ನಗರಗಲ್ಲಿ ಜಾಸ್ತಿ ಇದರಿಂದ ಪಾರಿವಾಳಗಳ ಸಂಖ್ಯೆ ಜಾಸ್ತಿ ಆಗಿ ಗುಬ್ಬಿಗಳ ಸಂಖ್ಯೆಯ ಮೇಲೆ ಪರಿಣಾಮ ಬೀರಿದೆ ಎನ್ನತ್ತದೆ ಸದರಿ ಅಧ್ಯಯನ.

ಜೀವ ವಿಜ್ಞಾನಿಗಳ ಪ್ರಕಾರ ಗುಬ್ಬಿಗಳ ಸಂಖ್ಯೆ ಆ ಪ್ರದೇಶದ ಜೈವಿಕ ಪರಿಸರದ ಮಟ್ಟವನ್ನು ಸೂಚಿಸುತ್ತೆ. ಯಾವುದೇ ಒಂದು ಕಡೇ ಗುಬ್ಬಿಗಳು ಕಡಿಮೆಯಾಗಿದೆ ಅಂದರೆ ಅದರರ್ಥ ಅಲ್ಲಿನ ಪರಿಸರದ ಗುಣಮಟ್ಟ ಸರಿಯಿಲ್ಲವೆಂದೇ ಅರ್ಥ ಎನ್ನುತ್ತಾರೆ ಪರಿಸರ ವಿಜ್ಞಾನಿಗಳು. ಜೆ.ಏನ್.ಯು ನ ಡಾ. ಸೂರ್ಯ ಪ್ರಕಾಶ್’ರವರ ಪ್ರಕಾರ ನಮ್ಮ ದೇಶದಲ್ಲಿ ಗುಬ್ಬಿಗಳ ಸಂಖ್ಯೆ ಪ್ರತಿಶತ ೫೦ ರಷ್ಟು ಕಡಿಮೆಯಾಗಿದೆ. ಇದು ಕೆಲವೊಂದು ರಾಜ್ಯದಲ್ಲಿ ೮೦ ಪ್ರತಿಶತದಷ್ಟೂ ಇದೆ ಎನ್ನುತ್ತಾರವರು.

ಈಗ ಮತ್ತೆ ನಾನಿರುವ ನಗರದ ವಿಚಾರಕ್ಕೆ ಬರೋಣ, ಇಲ್ಲಿ ನಾನು ನೋಡಿದ ಪ್ರಕಾರ ಗುಬ್ಬಿಗಳ ಸಂಖ್ಯೆ ಯಥೇಚ್ಛವಾಗಿಯೇ ಇದೆ. ಇದಕ್ಕೆ ಕಾರಣ ಇಲ್ಲಿನ ಸಸ್ಯಸಂಪತ್ತು. ಇದೊಂದು ಅತೀ ದೊಡ್ಡ ನಗರವಾಗಿದ್ದರೂ, ನೂರಾರು ಹೆಕ್ಟೇರುಗಳಷ್ಟು ದೊಡ್ಡದಾದ ಅನೇಕ ಉಧ್ಯಾನವನಗಳು ಇಲ್ಲಿ ಬೇಕಾದಷ್ಟಿವೆ (ಅದರಲ್ಲೂ ನಗರ ಮಧ್ಯದಲ್ಲೇ!!). ಒಂದಂತೂ ಬರೋಬ್ಬರಿ ೧೬೦೦ ಹೆಕ್ಟೇರ್ ಇದೆಯಂತೆ!! ಇನ್ನು ಸಣ್ಣ ಪುಟ್ಟ ಉಧ್ಯಾನವನಗಳಿಗೆ ಬರವೇ ಇಲ್ಲ, ಪ್ರತಿಯೊಂದು ಗಲ್ಲಿಗೂ ಒಂದು ಸಣ್ಣ ಪಾರ್ಕ್ ಇದ್ದೇ ಇದೆ. ವಿಕಿಪೀಡಿಯಾ ಹೇಳುವ ಪ್ರಕಾರ ಇಲ್ಲಿ ೨೨ ಪ್ರಮುಖ ಉಧ್ಯಾನವನಗಳಿವೆಯಂತೆ (ಇದರಲ್ಲಿ ನಾನು ಒಂದು ೧೦ ಉಧ್ಯಾನವನಗಳಿಗೆ ಭೇಟಿ ಕೊಟ್ಟಿರುವೆ), ಹಾಗಾಗಿ ಇಲ್ಲಿಯ ಜೀವವೈವಿಧ್ಯತೆಗೆ ಯಾವುದೇ ಚ್ಯುತಿ ಬಂದಿಲ್ಲ. ನಾನು ಮೊದಲೇ ಹೇಳಿದ ಹಾಗೆ ಇದೊಂದು ಜಗತ್ತಿನಲ್ಲಿಯೇ ಪ್ರಮುಖ ನಗರ. ಇಲ್ಲಿ ಸಾಧ್ಯವಾಗಿದ್ದು ನಮ್ಮಲ್ಲಿ ಯಾಕೆ ಸಾಧ್ಯವಾಗುವುದಿಲ್ಲ ಎಂದು ನನ್ನಲ್ಲಿ ಯಾವಾಗೂ ಪ್ರಶ್ನೆಯೊಂದು ಪ್ರತೀ ಸಲ ಗುಬ್ಬಿಯನ್ನು ನೋಡಿದಾಗ ಹುಟ್ಟುತ್ತಲೇ ಇರುತ್ತೆ!!

Nagaraj kodihalli

nrajkk@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!