ಅಂಕಣ

ಪ್ಯಾರಿಸ್ ದಾಳಿಯಿಂದ ಹುಟ್ಟೋ ಪ್ರಶ್ನೆಗಳು..

ಓದುಗ ಮಿತ್ರರೇ..

Violence begins with the fork ಎಂದು ಮಹಾತ್ಮ ಗಾಂಧಿ ಒಂದೆಡೆ ಹೇಳುತ್ತಾರೆ.. ಈ ಮಾತು ನೂರಕ್ಕೆ ನೂರು ಸತ್ಯ.. ಹಿಂಸೆಯ ಮೂಲ ಕವಲೊಡೆವ ಆಲೋಚನೆಗಳು, ಸಿದ್ಧಾಂತಗಳು ಮತ್ತು ಭಿನ್ನಾಭಿಪ್ರಾಯಗಳು.. ಇವುಗಳು ಒಂದು ಚರ್ಚೆಗೆ ಮೂಲವಾದರೆ ಮಾತಿನಲ್ಲಿ ಮುಗಿಯುತ್ತದೆ.. ಮತ್ತು ಮುಂದುವರಿದರೆ ಜಗಳ ಮೀರಿದರೆ ಹೊಡೆದಾಟ, ಕೈ ತಪ್ಪಿ ಹೋದರೆ ಹಿಂಸೆ.. ಹೀಗೆ ಭಿನ್ನಾಭಿಪ್ರಾಯಗಳು ಹಿಂಸೆಗೆ ತಿರುಗಿದರೆ ಅದು ಸಾವು ನೋವುಗಳಿಗೆ ನಾಂದಿ ಹಾಡುತ್ತದೆ.. ಆ ಸಾವು ಕೇವಲ ವ್ಯಕ್ತಿಯ ಸಾವಲ್ಲ.. ಅಮಾಯಕರ, ಯಾವುದೇ ತಪ್ಪು ಮಾಡದವರ, ತಮ್ಮ ಪಾಡಿಗೆ ತಾವಿರುವ ಬದುಕುಗಳ ಸಾವು.. ಸುಂದರ ಸಮಾಜದ ಸಾವು.. ನಮ್ಮದಲ್ಲದ ದೇಶದಲ್ಲಿಂದು ಅದೇ ಸಾವು ನೋವುಗಳು ಸಂಭವಿಸಿದೆ.. ಸುಂದರ ನಾಳೆಗಳು ಕತ್ತಲೆಯಲ್ಲಿ ಕರಗಿ ಹೋಗುತ್ತಿವೆ.. ಸತ್ತವರೂ ಮನುಷ್ಯರೇ.. ಸಾಯಿಸಿದವರೂ ಸಹ ಮನುಷ್ಯತ್ವ ಇರದ ಮನುಷ್ಯರು.. ಮನುಜ ಮನುಜನನ್ನೇ ಕೊಳ್ಳುತ್ತಾ ವಿಜಯೋತ್ಸವ ಆಚರಿಸಲು ಹೊರಟಿದ್ದಾನೆ.. ನಮಗೆ ಇಂದು ಬೇಕಾಗಿರುವುದು ವಿಶ್ವಶಾಂತಿ… ಜೊತೆ ಜೊತೆಗೆ ನೆಮ್ಮದಿಯ ಬದುಕು.. ಸುಂದರ ಕನಸು.. ಕಲಿಗಾಲದ ಸ್ಪಷ್ಟ ಕಲ್ಪನೆ ನೀಡುತ್ತಿದೆಯಾ ಎಂದು ಅನ್ನಿಸುವಷ್ಟರ ಮಟ್ಟಿಗೆ ಜಗತ್ತಿನಲ್ಲಿ ಹಿಂಸಾಚಾರ ನಡೆಯುತ್ತಿದೆ.. ಇದಕ್ಕೆಲ್ಲ ಒಂದು ಅಂತ್ಯಬೇಕು…

ಪ್ಯಾರಿಸ್ ಒಮ್ಮೆ ಉಗ್ರ ಕಂಪನಕ್ಕೆ ಒಳಗಾಯಿತು.. ಸುಮಾರು ನೂರೈವತ್ತು ಜನರ ಮಾರಣ ಹೋಮ ಏಕಕಾಲಕ್ಕೆ… ಗಂಭೀರವಾಗಿ ಗಾಯಗೊಂಡವರು, ಸಣ್ಣ ಪುಟ್ಟ ಪ್ರಮಾಣದಲ್ಲಿ ಗಾಯಗೊಂಡವರು ಅದೆಷ್ಟಿದ್ದಾರೋ.. ಒಟ್ಟಿನಲ್ಲಿ ರಕ್ತದ ಓಕುಳಿ ಹರಿದಿದ್ದಂತೂ ಸತ್ಯ.. ಪ್ಯಾರಿಸ್ ನ ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯಾಟ ನಡೆಯುತ್ತಿತ್ತು ಅಲ್ಲಿ ನಡೆದ ಆತ್ಮಾಹುತಿ ಬಾಂಬ್ ಸ್ಪೋಟಕ್ಕೆ ೫೦ ಜನ ಬಲಿಯಾಗಿದ್ದಾರೆ.. ಮತ್ತೊಂದೆಡೆ ಸಂಗೀತ ಕಛೇರಿ ನಡೆಯುತ್ತಿದ್ದ ಜಾಗದಲ್ಲಿ ಗುಂಡಿನ ಮಳೆ ಗೈದಿದ್ದಾರೆ.. ಇಲ್ಲಿ ಬಲಿಯಾದವರು ಸುಮಾರು ೧೦೦ ಜನ.. ಫುಟ್ಬಾಲ್ ಪಂದ್ಯಾಟ ವೀಕ್ಷಿಸಲು ಬಂದಿದ್ದ ಫ್ರಾನ್ಸ್ ಅಧ್ಯಕ್ಷರು ಮತ್ತು ಜರ್ಮನಿಯ ವಿದೇಶಾಂಗ ಸಚಿವರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.. ನಗರದ ತುಂಬಾ ರಕ್ತದೋಕುಳಿ, ಉಗ್ರರ ಅಟ್ಟಹಾಸ, ಸತ್ತ ಜೀವಗಳು, ತಮ್ಮವರನ್ನು ಕಳೆದುಕೊಂಡ ಹೃದಯಗಳ ಆಕ್ರಂದನ, ಕಣ್ಣೀರಿನಿಂದ ಒದ್ದೆಯಾದ ಭೂಮಿ ಮತ್ತು ಸೂತಕದ ಛಾಯೆ ಮಾತ್ರ.. ಇದರ ಹೊಣೆ ಹೊತ್ತವರು ಐಸಿಸ್ ಉಗ್ರ ಸಂಘಟನೆ. ಸಾವನ್ನು ಪ್ರೀತಿಸ ಹೊರಟವರು, ಕ್ರಾಂತಿಯೆಂದು ಕೊಲೆಗಾರರಾದವರು, ಜಗತ್ತು ಸುರಿಸುವ ಕಣ್ಣೀರನ್ನು ನೋಡಿ  ನಮ್ಮ ವಿಜಯವೆಂದು ಬೀಗುವವರು.. ಒಟ್ಟಿನಲ್ಲಿ ಇಡೀ ಜಗತ್ತು ನೆನ್ನೆಯ ಮಾರಣ ಹೋಮಕ್ಕೆ ಕಣ್ಣೀರಿಟ್ಟಿತು..

ಪ್ಯಾರಿಸ್ ದಾಳಿಯಲ್ಲಿ ಸತ್ತ ಜೀವಗಳಿಗಿಂತ ಹೆಚ್ಚು ವೇದನೆ ಅನುಭವಿಸುತ್ತಿರುವದು ಉಳಿದ ಜೀವಗಳು.. ತಂದೆಯನ್ನು ಕಳೆದುಕೊಂಡ ಮಕ್ಕಳು, ತಮ್ಮದೇ ಕೂಸು ಹೆಣವಾಗಿ ಮಲಗಿದ್ದನ್ನು ನೋಡಲಾಗದ ಹೆತ್ತವರು, ಅಣ್ಣನನ್ನು ಕಳೆದುಕೊಂಡ ತಂಗಿ.. ಹೀಗೆ ಹತ್ತು ಹಲವು ಸಂಬಂಧಗಳು ಸಾವಿನಲ್ಲಿ ಕಡಿದು ಹೋದವು.. ಮನುಷ್ಯತ್ವ ಮರೆಯಾದ ಮನೆಯೋಡೆಯನೊಬ್ಬ ಸೌಹಾರ್ದ ಕುಟುಂಬವನ್ನು ನಾಶ ಮಾಡಿದಂತೆ ಪ್ಯಾರಿಸ್ ಕಾಣುತ್ತಿತ್ತು.. ಜಗತ್ತಿನ ಎಲ್ಲ ನಾಯಕರು, ಅವರ ಹಿಂದೆ ಇದ್ದ ಜನತೆ, ಜನತೆಯ ಒಬ್ಬೊಬ್ಬ ಸದಸ್ಯನೂ ಸತ್ತವರ ಆತ್ಮಕ್ಕೆ, ನೊಂದವರ ಬದುಕಿಗೆ ಕಂಬನಿ ಮಿಡಿದಿದ್ದಾರೆ.. ನಿಜ.. ಆ ಸಾವಿನ ನೋವನ್ನು ಭರಿಸುವ ಶಕ್ತಿ ಅವರಿಗೆ ಸಿಗಲಿ.. ಮತ್ತೆ ಇಂತಹ ಸಾವು, ಮತ್ತಷ್ಟು ನೋವು ಬಾರದಿರಲಿ… ನಾಳೆಯ ಸೂರ್ಯ ನೆಮ್ಮದಿಯನ್ನು ತರಲಿ..

ಇಂಥ ದಾಳಿಗಳು ಹೊಸತಾ..?? ಉಗ್ರರ ರುದ್ರತಾಂಡವ ಹೊಸತಾ..?? ಸಾವು ನೋವುಗಳು ಹೊಸತಾ..?? ಖಂಡಿತ ಅಲ್ಲ.. ೨೬/೧೧ ರ ಮುಂಬೈ ದಾಳಿಯ ಕಣ್ಣೀರಿನ ತೇವ ಇನ್ನೂ ಆರಿಲ್ಲ, ಅಮೇರಿಕಾದ ವಾಣಿಜ್ಯ ಕೇಂದ್ರದ ಮೇಲಾದ ದಾಳಿಯ ವಾಸನೆ ಇನ್ನೂ ಹೋಗಿಲ್ಲ, ಇರಾಕ್, ಇರಾನ್, ಅಫ್ಘಾನಿಸ್ತಾನ್, ಸಿರಿಯಾ ಗಳಲ್ಲಿ ಪ್ರತೀ ದಿನ ಉಗ್ರರ ಅಟ್ಟಹಾಸ ಸಾಗುತ್ತಲೇ ಇದೆ.. ವಿಶ್ವದಲ್ಲಿ ಉಗ್ರರ ಆರ್ಭಟಕ್ಕೆ ನಲುಗುತ್ತಿರುವ ದೇಶಗಳು, ಸಾಯುತ್ತಿರುವ ಜೀವಗಳು, ಅದಕ್ಕಾಗಿ ಕಂಬನಿ ಮಿಡಿಯುತ್ತಿರುವ ಜೀವಗಳ ಸಂಖ್ಯೆ ಎಷ್ಟು ಕೋಟಿ ಎಂದು ಲೆಕ್ಕ ಹಿಡಿಯಲೂ ಸಾಧ್ಯವಿಲ್ಲ.. ಅವರನ್ನು ನಿರ್ನಾಮ ಮಾಡಲು ಇತ್ತ ಹೆಜ್ಜೆಗಲೂ ದಿಟ್ಟವಾದದ್ದೇ.. ಆದರೆ ಉಗ್ರರು ಮತ್ತೆ ಮತ್ತೆ ಹುಟ್ಟುತ್ತಲೇ ಇದ್ದಾರೆ, ಅಮಾಯಕ ಜನ ಸಾಯುತ್ತಲೇ ಇದ್ದಾರೆ.. ಸಾವಿನ ಮೇಲೆ ಸಮಾಧಿ ಕಟ್ಟಿ ಸ್ಥಾಪಿಸುವ ಈ ಸಾಮ್ರಾಜ್ಯದ ಉದ್ದೇಶವಾದರೂ ಏನು..?? ಯಾವ ಪುರುಷಾರ್ಥಕ್ಕಾಗಿ ಈ ಮಾರಣಹೊಮಗಳು..?? ಉಗ್ರರು ಈ ಪಾಟಿ ಹುಟ್ಟಲು ಕಾರಣಗಳೇನು ಎಂದು ಆಲೋಚಿಸಿದರೆ ಮೊದಲು ನಮ್ಮ ಮುಂದೆ ಬಂದು ನಿಲ್ಲುವುದೇ ಧರ್ಮ.. ಧರ್ಮಸ್ಥಾಪನೆ ಮತ್ತು ಧರ್ಮರಕ್ಷಣೆ…

ಧರ್ಮಸ್ಥಾಪನೆ ಮತ್ತು ಧರ್ಮರಕ್ಷಣೆ ಎಂದರೆ ಕೊಲೆಗೈಯ್ಯುವುದೇ..?? ಅಮಾಯಕರ ರಕ್ತಪಾತವೇ..?? ಯಾವ ಧರ್ಮ ಜಗತ್ತಿನ ಶಾಂತಿ ಕದಡಿ ಧರ್ಮವನ್ನು ಸ್ಥಾಪಿಸಿ ಎಂದು ಬೋಧಿಸಿದೆ..?? ಯಾವ ಧರ್ಮ ನಿನ್ನನ್ನು ನೀನು ಸಾಯಿಸಿಕೊಂಡು ಧರ್ಮವನ್ನು ರಕ್ಷಿಸು ಎಂದು ಪ್ರತಿಪಾದಿಸಿದೆ..?? ಯಾವ ಧರ್ಮವೂ ಹೀಗೆ ಬೋಧಿಸಿಲ್ಲ, ಪ್ರತಿಪಾದಿಸಿಯೂ ಇಲ್ಲ.. ಎಲ್ಲ ಧರ್ಮಗಳೂ ಎತ್ತಿ ಹಿಡಿದದ್ದು ಜಗತ್ತಿನ ಶಾಂತಿಯನ್ನೇ.. ಧರ್ಮಗಳ ಉದ್ದೇಶ ಜನಹಿತವೇ ಹೊರತು, ಜನರಹಿತ ಮಾಡುವ ಮಾರಣಹೊಮವನ್ನಲ್ಲ.. ಆದರೆ ಇವು ಈ ಉಗ್ರ ಸಂಘಟನೆಗಳಿಗೆ ಅರಿವಾಗದು.. ಅವರ ಧರ್ಮವೇ ಬೇರೆ.. ಒಂದು ಸ್ವಾರ್ಥ ಸಾಧನೆಗೆ ಹೊರಟಿರುವ ಇವುಗಳು ದೇವರು, ಧರ್ಮ ಎಂದು ನೆಪ ಹೇಳಿಕೊಂಡು ಜನರಿಂದ ಸಾವಿನ ಚಂದಾವಸೂಲಿ ಮಾಡುತ್ತಿವೆ.. ಅದರ ಅರಿವಿಲ್ಲದ ಎಷ್ಟೋ ಜನ ಯುವಕರು ತಮಗೇ ಅರಿವಿಲ್ಲದೆ ಅವರ ಜೊತೆ ಸೇರಿ ಹೋಗುತ್ತಿದ್ದಾರೆ.. ಒಮ್ಮೆ ಸೇರಿದ ನಂತರ ಅವರಿಗೆ ಹೊರಜಗತ್ತಿನ ಅರಿವೇ ಇರದಂತಾಗಿ, ಮತ್ತೆ ಆ ಜಗತ್ತನ್ನು ನೋಡುವ ಹೊತ್ತಿಗೆ ಅವರ ಮನಸ್ಸಿನಲ್ಲಿ ಒಂದು ವಿಚಿತ್ರ ಧ್ಯೇಯಗಳು ಹುಟ್ಟಿಬಿಡುತ್ತವೆ.. ಜಗತ್ತು ತಪ್ಪಾಗಿ ಕಾಣುತ್ತದೆ.. ಜನರು ತಪ್ಪಾಗಿ ಕಾಣುತ್ತಾರೆ.. ಆಗ ಹುಟ್ಟುವ ಉಗ್ರತೆ ಉಗ್ರಗಾಮಿಯನ್ನಾಗಿಸುತ್ತದೆ… ತಮಗೆ ಉಪದೇಶ ನೀಡಿದ ಮುಖಂಡನೇ ಗುರುವಾಗುತ್ತಾನೆ.. ಆತನ ಮಾತುಗಳು ವೇದವಾಕ್ಯವಗುತ್ತದೆ.. ಆತ ಸಾಯಿ ಎಂದರೆ ಸಾಯಬೇಕು, ಸಾಯಿಸು ಎಂದರೆ ಸಾಯಿಸಬೇಕು… ಇದು ಧರ್ಮವೇ..?? ಧರ್ಮರಕ್ಷಣೆಯೆ..??

ಒಂದು ಖೇದಕರ ವಿಷಯವೆಂದರೆ ಇದಕ್ಕೆ ಬಲಿಯಾಗುತ್ತಿರುವದು ಯುವ ಜನತೆ.. ಉಗ್ರಗಾಮಿಗಳಾಗಿ ಹೊರಬೀಳುತ್ತಿರುವ ಯುವಕರನ್ನು ನೋಡಿದರೆ ಬೇಸರಕ್ಕಿಂತ ಹೆಚ್ಚಾಗಿ ಭಯವೇ ಆಗುತ್ತಿದೆ.. ಒಂದು ದೇಶದ ಶಕ್ತಿ ಎಂದರೆ ಆ ದೇಶದ ಯುವಜನತೆ.. ಬಿಸಿರಕ್ತದ ಯುವಕರು ಹಸಿರಕ್ತದ ದಾಹಿಗಳಾಗಿ ಬದಲಾಗುತ್ತಿರುವುದನ್ನು ನೋಡಿದರೆ ನೆಮ್ಮದಿಯ ನಾಳೆಗಳು ರಕ್ತಸಿಕ್ತವಾಗುತ್ತೇನೊ ಅನ್ನಿಸುವುದಂತೂ ನಿಜ.. ಒಂದು ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ ಎಂದರೆ ಅದಕ್ಕೆ ಯುವಕರ ಕೊಡುಗೆ ಅಪಾರ.. ನೂರು ಯುವಕರು ಸಾವಿರ ಆನೆಗಳಿಗೆ ಸರಿಸಾಟಿಯಾಗಿ ನಿಲ್ಲಬಲ್ಲರು.. ಆ ತಾಕತ್ತು ಅವರಲ್ಲಿದೆ.. ಹೊಸ ಆಲೋಚನೆ, ಐಡಿಯಾಲೊಜಿ, ಹೊಸ ಪ್ರತಿಭೆ ಎಲ್ಲವೂ ಇರುವುವುದು ಯುವ ಸಮೂಹದಲ್ಲಿ.. ಐ ಆಮ್ ದಿ ಚೇಂಜ್ ಎಂದು ಹೆಜ್ಜೆ ಇಡಬೇಕಾದ ಯುವಜನತೆ ಐ ಆಮ್ ದಿ ಎಂಡ್ ಎನ್ನುವ ಕಡೆ ಸಾಗಿದರೆ ದೇಶ, ದೇಶದ ಅಭಿವೃದ್ಧಿ ಎಲ್ಲವೂ ಮಣ್ಣುಪಾಲು.. ಒಂದು ಕುಟುಂಬಕ್ಕೆ ಆ ಕುಟುಂಬದ ಮಗನೋ ಅಥವಾ ಮಗಳೋ ಆಸರೆಯಾಗುತ್ತಾರೆ.. ಹಾಗೆ ದೇಶಕ್ಕೆ ಯುವಜನತೆ… ಒಬ್ಬ ಸಾಫ್ಟ್ ವೇರ್ ಇಂಜಿನಿಯರ್ ಉತ್ತಮ ಸಾಫ್ಟ್ ವೇರ್ ನೀಡಬೇಕೇ ಹೊರತು ವೈರಸ್ ಅಲ್ಲ.. ಡಾಕ್ಟರ್ ಒಬ್ಬನಿಗೆ ಜೀವ ನೀಡಬೇಕೆ ಹೊರತು ರೋಗವನ್ನಲ್ಲ.. ಹಾಗೆಯೇ ಒಬ್ಬ ಯುವಕ ಅಥವಾ ಯುವತಿ ಸಮಾಜಕ್ಕೆ ಹೊಸ ಚೈತನ್ಯ ನೀಡುವ ಶಕ್ತಿಯಾಗಬೇಕೇ ಹೊರತು ಸಮಾಜ ನಾಶ ಮಾಡುವ ಉಗ್ರಗಾಮಿಯಲ್ಲ..

ಜಗತ್ತು ಮುಂದುವರಿದಿದೆ.. ವಿಜ್ಞಾನ ತಂತ್ರಜ್ಞಾನದಲ್ಲಿ ಮಾನವ ಪ್ರಗತಿ ಸಾಧಿಸಿದ್ದಾನೆ.. ಆದರೆ ಅದೇ ತಂತ್ರಜ್ಞಾನ ಇಂದು ಕೆಲವೊಮ್ಮೆ ಕೆಲವು ಕಡೆ ಮುಳುವಾಗಿದೆ.. ಬಂದೂಕು, ಬಾಂಬ್ ಗಳು ಅವರ ಕೈಗೆ ಅತೀ ಸುಲಭದಲ್ಲಿ ಸಿಗುತ್ತಿದೆ.. ಅದಕ್ಕಿಂತ ಹೆಚ್ಚಿನದಾಗಿ ಅವರೇ ಅದನ್ನು ತಯಾರಿಸುವ ಪರಿಣಿತಿ ಹೊಂದಿದ್ದಾರೆ.. ಒಂದು ಪ್ರದೇಶಕ್ಕೆ ಧಾಳಿ ಮಾಡಬೇಕೆಂದರೆ ಶಸ್ತ್ರಾಸ್ತ್ರ ಸಾಗಣೆ ಮಾಡಬೇಕು ಎಂದೇನಿಲ್ಲ.. ಅದನ್ನು ತಯಾರಿಸಲು ಬೇಕಾಗುವ ಕಚ್ಚಾವಸ್ತುಗಳನ್ನು ಸಾಗಿಸಿದರೆ ಸಾಕು.. ಉಳಿದಿದ್ದನ್ನು ಅವರೇ ತಯಾರಿಸಿಕೊಳ್ಳುತ್ತಾರೆ.. ಇದೆಲ್ಲ ಕಲೆಯನ್ನು ಅವರು ಸ್ವಂತ ಸಂಪಾದಿಸಿದ್ದಲ್ಲ.. ನಮ್ಮ ನಿಮ್ಮಂತೆಯೇ ಕಲಿತ ಜನರು ಅವರ ಜೊತೆ ಸೇರಿ ಅಥವಾ ಅಂಥವರ ಸಹಾಯದಿಂದ ಆದದ್ದು… ಗೆಳೆಯರೆ.. ಈ ವರ್ಷ ರಾಷ್ಟ್ರೀಯ ವಿಜ್ಞಾನ ದಿನವನ್ನು ” ಸೈನ್ಸ್ ಫಾರ್ ಬ್ಯುಲ್ಡಿಂಗ್ ನೇಶನ್ ” ಅಥವಾ ” ರಾಷ್ಟ್ರ ನಿರ್ಮಾಣಕ್ಕಾಗಿ ವಿಜ್ಞಾನ ” ಎಂಬ ಘೋಷ ವಾಕ್ಯದ ಅಡಿಯಲ್ಲಿ ಆಚರಿಸಲಾಯಿತು.. ಒಂದು ರಾಷ್ಟ್ರ ಇತರ ದೇಶಗಳಿಗೆ ಮಾದರಿ ಆಗಿದೆಯೆಂದರೆ ಅದು ಸಾಮಾಜಿಕ, ಆರ್ಥಿಕ, ಧಾರ್ಮಿಕವಾಗಿ ಅಷ್ಟೇ ಅಲ್ಲ ವೈಜ್ಞಾನಿಕವಾಗಿಯೂ ಮುಂದುವರಿದಿರಬೇಕು.. ಇದರ ಜೊತೆ ಜೊತೆಗೆ ಶಾಂತಿ ಸೌಹಾರ್ದತೆ ಇರಲೇ ಬೇಕು.. ಆಗಲೇ ಒಂದು ದೇಶ ಜಗತ್ತಿಗೆ ಮಾದರಿಯಾಗುತ್ತದೆ.. ಆದರೆ ಇಂದು ವಿದ್ಯಾವಂತ ಯುವಕರೇ ದಾರಿ ತಪ್ಪುತ್ತಿದ್ದಾರೆ.. ಕಲಿತ ವಿದ್ಯೆ ಬದುಕನ್ನು ಕಟ್ಟಬೇಕು, ಕುಟುಂಬವನ್ನು ಪೋಷಿಸಬೇಕು, ಸಮಾಜದಲ್ಲಿನ ಮನುಷ್ಯರ ಅಂತರವನ್ನು ಮುಚ್ಚಬೇಕು, ರಾಜ್ಯದ ಹಿತ ಕಾಪಾಡಬೇಕು, ಸಧೃಡ ಮತ್ತು ಸಮೃದ್ಧ ರಾಷ್ಟ್ರ ನಿರ್ಮಾಣಕ್ಕಾಗಬೇಕು.. ಅದು ರಾಷ್ಟ್ರ ನಿರ್ನಾಮಕ್ಕಲ್ಲ..

ಒಂದು ವಸ್ತುವನ್ನಾಗಲಿ ಪಡೆಯಲು ಅಥವಾ ಒಂದು ಉದ್ದೇಶವನ್ನು ಈಡೇರಿಸಿಕೊಳ್ಳಲು ಎರಡು ಮಾರ್ಗಗಳಿವೆ.. ಒಂದು ಶಾಂತಿ ಮತ್ತೊಂದು ಕ್ರಾಂತಿ.. ಶಾಂತಿ ಮಾರ್ಗವೆಂದರೆ ವಿನಂತಿಯಿಂದ ಕೇಳಿ ಪಡೆದುಕೊಳ್ಳುವದು.. ಅದಕ್ಕೆ ತಾಳ್ಮೆ ಮುಖ್ಯ.. ಅದಕ್ಕಾಗಿ ಸತ್ಯಾಗ್ರಹಗಳು, ಚಳುವಳಿಗಳು ಎಲ್ಲ ನಡೆಯುತ್ತದೆ.. ಆದರೆ ಕ್ರಾಂತಿ ಹಾಗಲ್ಲ..ಬೇಕಾಗಿದ್ದನ್ನು ಕಿತ್ತುಕೊಳ್ಳುವುದು.. ರಕ್ಷಣೆಗಾಗಿ ವಿನಂತಿಸಿ ಕಳುಹಿಸುವದು ಶಾಂತಿಯಾದರೆ, ಹೆದರಿಸಿ ಓಡಿಸುವದು ಕ್ರಾಂತಿ.. ಆದರೆ ಒಂದು ಮಾತ್ರ ನಿಜ, ಕ್ರಾಂತಿಯೆಂದರೆ ಕೊಲೆ ಮಾಡುವುದಲ್ಲ.. ಹೆಣಗಳ ಅಡಿಪಾಯದಲ್ಲಿ ಸಾಮ್ರಾಜ್ಯ ಸ್ಥಾಪನೆ ಮಾಡುವುದಲ್ಲ.. ಆದರೆ ಇಂದು ಈ ಉಗ್ರವಾದ ಕ್ರಾಂತಿಯ ಹೆಸರಿನಲ್ಲಿ ಕೊಲೆಗೈಯ್ಯುತ್ತಿದೆ.. ಉಗ್ರವಾದ ಒಂದೇ ಅಲ್ಲ.. ಸಮಾಜದಲ್ಲಿ ಎಷ್ಟೋ ಸಂಘಟನೆಗಳು ಕ್ರಾಂತಿಯ ಹೆಸರಿನಲ್ಲಿ ಕೊಲೆಗಳನ್ನೆಸಗುತ್ತಿವೆ.. ಇದಕ್ಕೆಲ್ಲ ಕೊನೆ ಇಲ್ಲವೇ..?? ಖಂಡಿತವಾಗಿಯೂ ಇದೆ.. ಅದಕ್ಕೆ ಬದಲಾವಣೆ ಮುಖ್ಯ.. ನಾವುಗಳು ಬದಲಾಗಬೇಕು.. ನಮ್ಮಲ್ಲಿರುವ ಎಷ್ಟೋ ಜನರ ನಿಲುವುಗಳು ಬದಲಾಗಬೇಕು.. ನಮ್ಮ ಒಳಗಡೆ ಸಾಯುತ್ತಿರುವ ಮಾನವೀಯತೆಗಳು ಚಿಗುರಬೇಕು.. ಇಂದು ಚೂರಿ ಇರಿದವರೇ ಮುಂದೆ ಬಾಂಬ್ ಸಿಡಿಸುವ ಮನಸ್ಥಿತಿಗೆ ಬದಲಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.. ಅಂತಹ ಮನಸ್ಸುಗಳು ಮಾರಬೇಕು.. ಮಾರಿ ಮತ್ತೆ ಮನುಜರಾಗಬೇಕು.. ಜನನೀ ಜನ್ಮಭೂಮಿಶ್ಚ ಸ್ವರ್ಗಾದಪೀ ಗರೀಯಸಿ ಎಂಬ ಮಾತು ಎಂದಿಗೂ ಸತ್ಯ.. ತಾಯಿ ಮತ್ತು ತಾಯ್ನಾಡು ಎಂದಿಗೂ ಸ್ವರ್ಗಕ್ಕಿಂತ ಮಿಗಿಲು.. ತಾಯಿಗೆ ನಾವು ಮಾತ್ರ ಮಕ್ಕಳು, ತಾಯ್ನಾಡಿಗೆ ದೇಶದ ತುಂಬಾ ಮಕ್ಕಳು.. ಜಗತ್ತಿಗೆ ಎಲ್ಲರೂ ಮಕ್ಕಳೇ..

ಏನು ಪ್ರಪಂಚವಿದು..! ಏನು ಥಾಳಾ ಧಾಳಿ

ಏನದ್ಭುತಾರಶಕ್ತಿನಿರ್ಘಾತ ..!

ಮಾನವನ ಗುರಿಯೇನು.? ಬೆಲೆಯೇನು..? ಮುಗಿವೇನು..?

ಏನರ್ಥವಿದಕೆಲ್ಲ..? – ಮಂಕುತಿಮ್ಮ..

ಎಂಬ ಡಿ.ವಿ.ಜಿ ಯವರ ಮಾತು ಈಗಿನ ಪರಿಸ್ಥಿತಿಗೆ ಸರಿಯಾಗಿ ಹೊಂದಿಕೊಳ್ಳುತ್ತದೇನೊ ಅನ್ನಿಸುತ್ತದೆ.. ನಮ್ಮ ಗುರಿ ಯಾವುದೆಂಬ ನಿಶ್ಚಿತವೇ ನಮಗಿಲ್ಲದಂತಾಗಿದೆಯಾ..? ನಮ್ಮ ನಡೆ ತಪ್ಪುತ್ತಿದ್ದೇವಾ..?? ಯಾವುದರ ಸ್ಪಷ್ಟ ಕಲ್ಪನೆ ನಮಗಿಲ್ಲದಂತಾಗಿದೆ.. ಪ್ಯಾರಿಸ್ ನಲ್ಲಿ ಆದ ಉಗ್ರರ ದಾಳಿಯಿಂದ ಹುಟ್ಟಿರುವ ಪ್ರಶ್ನೆಗಳು ಹಲವಾರು.. ಖಂಡಿತವಾಗಿಯೂ ಇದು ಖಂಡಿಸುವ ಘಟನೆಯೇ.. ಉಗ್ರಗಾಮಿಗಳ ಮಟ್ಟಹಾಕಲೇಬೇಕು.. ಅವರಿಗೆ ಸರಿಯಾದ ಶಿಕ್ಷೆ ಆಗಲೇಬೇಕು.. ದುಷ್ಟ ಶಿಕ್ಷೆ, ಶಿಷ್ಟ ರಕ್ಷೆ ಆಗದಿದ್ದರೆ ಸಮಾಜ ಹಳಿ ತಪ್ಪುತ್ತದೆ.. ಆದರೆ ಅಮಾಯಕರ ರಕ್ತ ಹರಿದು ಭುವಿ ಕೆಂಪಾಗಬಾರದು.. ಅದರ ಜೊತೆಗೆ ಹುಟ್ಟುತ್ತಿರುವ ಹೊಸ ಹೊಸ ಉಗ್ರರ ಸಂಖ್ಯೆ ಇಲ್ಲವಾಗಬೇಕು.. ಅದಕ್ಕೆ ಜಾಗೃತಿ ಮುಖ್ಯ.. ಅದಕ್ಕಾಗಿ ನಾವೆಲ್ಲರೂ ಒಂದಾಗಬೇಕು.. ನಮ್ಮ ನಮ್ಮ ಭಿನ್ನಾಭಿಪ್ರಾಯಗಳಿಗೆ, ನಮ್ಮೊಳಗಿನ ದ್ವೇಷಕ್ಕೆ ಮಂಗಳ ಹಾಡಿ ಒಂದಾಗಲೇಬೇಕು.. ಇದು ನಮ್ಮ ನಾಳಿನ ಉತ್ತಮ ಸಮಾಜಕ್ಕಾಗಿ.. ರಾಷ್ಟ್ರ ನಿರ್ಮಾಣಕ್ಕಾಗಿ..

-ಚಿರಾಗ್ ಚಂದ್ರ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!