ಅಂಕಣ

ಮಾಮ್ (MOM) ಮಂಗಳನ ಕಕ್ಷೆ ಸೇರಿ ಒಂದು ವರ್ಷದಲ್ಲಿ!

ಮಂಗಳ ಗ್ರಹ ಇನ್ನೊಂದು ಗ್ರಹಕ್ಕೆ ಹೋಲಿಸಿದರೆ ಪೃಥ್ವಿಗೆ ಅತೀ ಹತ್ತಿರವಾಗಿರುವಂತಹದ್ದು. ಆದ್ದರಿಂದ ಮಂಗಳ ಗ್ರಹದ ಬಗ್ಗೆ ಮೊದಿಲಿನಿಂದಲೂ ಒಂದು ಕುತೂಹಲ ಇದ್ದೇ ಇತ್ತು. ೧೯೬೦ರಕ್ಕಿಂತಲೂ ಮುಂಚೆಯಿಂದ ಮಂಗಳಕ್ಕೆ ಹೋಗುವ ಪ್ರಯತ್ನ ನಡೆಯುತ್ತಲೇ ಇದೆ. ಅದೆಷ್ಟು ಮಾನವರಹಿತ ಉಪಗ್ರಹಗಳಾದವೋ, ಅಂತರಿಕ್ಷ ನೌಕೆಗಳಾದವೋ ಎಲ್ಲವೂ ಒಂದಲ್ಲಾ ಒಂದು ಹೊಸ ರೀತಿಯ ಮಾಹಿತಿಯನ್ನು ಕೊಡುತ್ತಲೇ ಇವೆ. ಹಿಂದಿನ ವರ್ಷ MoM ( Mars Orbieter Mission) ಮಂಗಳ ಗ್ರಹದ ಕಕ್ಷೆಯನ್ನು ಮುಟ್ಟಿದಾಗಿನಿಂದ ಭಾರತವೂ ಈ ಪ್ರಯತ್ನದಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ.  ಮೊನ್ನೆ ಸೆಪ್ಟೆಂಬರ್ ೨೪ಕ್ಕೆ ಭಾರತದ ಹೆಮ್ಮೆಯ ಮಂಗಳ ಯಾನದ ಬಾಹ್ಯಾಕಾಶ ನೌಕೆ ಮಂಗಳ ಗ್ರಹದ ಕಕ್ಷೆಯಲ್ಲಿ ಸುತ್ತಲು ಶುರು ಮಾಡಿ ಒಂದು ವರ್ಷವಾಯಿತು.
ಒಂದು ವರ್ಷದಲ್ಲಿ MOM ಕೃತಕ ಉಪಗ್ರಹದಿಂದ ಏನೇನು ಮಾಹಿತಿ ಲಭ್ಯವಾಯಿತು ಅದರ ಪ್ರಯೋಜನಗಳೇನು? MOM ಐದು ರೀತಿಯ ಉಪಕರಣಗಳನ್ನು ಕೊಂಡೊಯ್ದಿದ್ದು (MCC- ಕ್ಯಾಮರಾ, MSM – ಮೀಥೇನ್ ಸಂವೇದಕ, LAP- ಫೋಟೊಮೀಟರ್ , MENCA- ಸೂಕ್ಮ.ರೀತಿಯತೂಕ ಮಾಪನ, TIS- ಉಷ್ಣತೆಯ ಅಧ್ಯಯನಕ್ಕಾಗಿ ಸಾಧನ) ಅದರಿಂದ ಸಾಕಷ್ಟು ಮಾಹಿತಿಯನ್ನು ಒಂದು ವರ್ಷದಿಂದ ಕಳಿಸುತ್ತಿದೆ. ಮಂಗಳದಿಂದ ಬಂದ ಆ ಮಾಹಿತಿಗಳನ್ನು ಭಾರತೀಯ ಅಂತರಿಕ್ಷ ಮಾಹಿತಿ ಕೇಂದ್ರವು ಸ್ವೀಕರಿಸಿ, ಪರಿಶೀಲಿಸಿ ನಂತರ ಅದನ್ನು ಬೇರೆ ಬೇರೆ ವಿಭಾಗಗಳಿಗೆ ವರ್ಗಾಯಿಸಲಾಗುತ್ತದೆ. ಮಂಗಳಯಾನದಲ್ಲಿರುವ ಮಾನವರಹಿತ ಉಪಗ್ರಹದ ಉಪಕರಣಗಳು ಭೂವಿಜ್ಞಾನ, ಆಕೃತಿವಿಜ್ಞಾನ, ವಾತಾವರಣದಲ್ಲಿ ಆಗುವ ಪ್ರಕ್ರಿಯೆ, ಮೇಲ್ಮೈನಲ್ಲಾಗುವ ತಾಪಮಾನದ ಬದಲಾವಣೆ ಮತ್ತು ಮಂಗಳದ ವಾತಾವರಣದಿಂದ ಹೊರಗಡೆ ಬರುವ ವಿಧಾನಗಳ ಬಗ್ಗೆ ಮಾಹಿತಿಗಳನ್ನು ಕೊಡುತ್ತಿರುತ್ತದೆ. ಅದನ್ನು ವಿಜ್ಞಾನಿಗಳು ಸಂಗ್ರಹಿಸಿ ವಿಶ್ಲೇಷಿಸಿ ಅಧ್ಯಯನ ನಡೆಸುತ್ತಾರೆ.
MCC ( Mars Colour Camera) ಹಲವಾರು ದೈಶಿಕ ರೆಸುಲ್ಯೂಶನ್’ನಲ್ಲಿ ತೆಗೆದ ಚಿತ್ರಗಳು ಅನನ್ಯ ಮಾಹಿತಿಗಳನ್ನು ಭೂಮಿಗೆ ರಾವಾನಿಸಿದೆ. ಚಿತ್ರಗಳ ಅಧ್ಯಯನ ಇಸ್ರೋದ ಬೇರೆ ಬೇರೆ ಅಂಗ ಸಂಸ್ಥೆಗಳಲ್ಲಿ ನಡೆಯುತ್ತಿದ್ದು ಅನೇಕ ಹೊಸ ಮಾಹಿತಿಗಳು ಲಭ್ಯವಾಗಿವೆ. ಮಾಹಿತಿಗಳನ್ನು ಹಾಗೂ ಚಿತ್ರಗಳನ್ನು ಪರಿಷ್ಕರಿಸಿ ಇಸ್ರೋದ ಅಂಗ ಸಂಸ್ಥೆಯಾದ ‘ಅಂತರಿಕ್ಷ ಉಪಯೋಗ ಕೇಂದ್ರ’ವು ೧೩೯ ಪುಟಗಳ ‘ಮಂಗಳದ ವೈಜ್ಞಾನಿಕ ಅಟ್ಲಾಸ್’ ಬಿಡುಗಡೆ ಮಾಡಿದೆ. ಇದನ್ನು ಓದಿದರೆ MOM ನ ಸಾಧನೆಯನ್ನು ಅರಿಯಬಹುದು. ಕೆಲವೊಂದು ಹತ್ತಿರದಿಂದ ತೆಗೆದ ಚಿತ್ರಗಳು ಬಹಳ ಆಶ್ಚರ್ಯಕಾರಿಯಾಗಿದೆ. ಮಂಗಳದ ಧ್ರುವಗಳಲ್ಲಿ ಇಂಗಲಾಮ್ಲಗಳು ಮಂಜಿನ ರೂಪದಲ್ಲಿ ಶೇಖರಣೆಯಾಗಿ ನಂತರ ಬಿಸಿಲಿಗೆ ಆವಿಯಾಗುವ ಪ್ರಕ್ರಿಯೆಗಳ ಬಗ್ಗೆ ಮಾಹಿತಿಗಳು ಸಿಕ್ಕಿವೆ. ಅದೇ ಅಲ್ಲದೆ ‘ಲಾಡೊನ್ ವೆಲ್ಲಿ’ಯ ಚಿತ್ರಗಳು ಒಂದು ಕಾಲದಲ್ಲಿ ಮಂಗಳದ ನೆಲದಲ್ಲಿ ಪ್ರವಾಹ ಆಗಿದ್ದರ ಬಗ್ಗೆ ದೃಢೀಕರಿಸುತ್ತವೆ. ನಾಸಾ ಮಂಗಳದಲ್ಲಿ ನೀರು ಇದೆ ಎಂದು ಸ್ಟಷ್ಟಪಡಿಸುವುದಕ್ಕಿಂತ ಮುಂಚೆಯೇ ನಮ್ಮ, MOM ನ ಮಾಹಿತಿಗಳು ನೀರಿರುವ ಬಗ್ಗೆ ಸಾಕಷ್ಟು ಮಾಹಿತಿ ನೀಡಿವೆ.
ಇನ್ನು ಮಂಗಳದಿಂದ ಬಂದ ಚಿತ್ರಗಳಲ್ಲಿ ಅಲ್ಲಿನ ವಾಯುಗುಣದ ಬದಲಾವಣೆ, ಮೋಡಗಳು, ಮೇಲ್ಮೈನಲ್ಲಿರುವ ಧೂಳಿನ ಬಗ್ಗೆ ಉಪಯುಕ್ತ ಮಾಹಿತಿಯಿದೆ. 1000-2000 ಕಿ.ಮೀ. ಅಂತರದಲ್ಲಿ ತೆಗೆದ ಚಿತ್ರಗಳು ಗಾಳಿ ಬೀಸುತ್ತಿರುವುದನ್ನು ಹಾಗೆಯೇ ಅದರ ದಿಕ್ಕನ್ನೂ ತೋರಿಸುತ್ತಿವೆ. ಇದು ಅಲ್ಲಿ ವಾತಾವರಣ ಇದೇ ಅನ್ನುವ ಪುಷ್ಟಿ ಅಲ್ಲದೆ ಇದರ ಆಳವಾದ ಅಧ್ಯಯನ ವಿಜ್ಞಾನಿಗಳಿಗೆ ಬೇಕಾದ ಮಹತ್ವದ ಮಾಹಿತಿಯಾಗಿ ಪರಿವರ್ತನೆಗೊಳ್ಳಲಿದೆ.
ಹಾಗೆಯೇ ಜೀವಸ್ಥಾನಕ್ಕೆ ಅನೂಕೂಲವಾಗಲು ಬೇಕಾದ ಮಾಹಿತಿಗಳಲ್ಲಿ ಒಂದಾದ ಮೇಲ್ಮೈ ಅಲ್ಬಿಡೊ ( ಸೌರ ಕಾಂತೀಯ) ವೈಪರೀತ್ಯಗಳ ಬಗ್ಗೆಯೂ ಸಾಕಷ್ಟು ವಿಷಯ ಕಕ್ಷೆಯಿಂದ 72000 ಕಿ.ಮೀ. ದೂರದಿಂದ ತೆಗೆದ ಫೋಟೊಗಳಲ್ಲಿ.ಲಭಿಸಿದೆ. ಥರ್ಮಲ್ ಕ್ಯಾಮರಾದಿಂದ ಅಲ್ಲಿಯ ತಾಪಮಾನದ ವಿಪರೀತತೆಯ ಬಗ್ಗೆ ಅರಿವಾಗಿದೆ, ಮಂಗಳದ ಸರಾಸರಿ ತಾಪಮಾನ -65 ಸೆಲ್ಸಿಯಸ್ (ಕನಿಷ್ಠ -143 ಗರಿಷ್ಠ 20 ಸೆಲ್ಸಿಯಸ್ ). ಮೀಥೇನ್ ಸೆನ್ಸಾರ್ ಗಳು ಮಂಗಳದ ಭೂ ಸಂಯೋಜನೆಯ ಬಗ್ಗೆ ಒಂದು ವರ್ಷದಲ್ಲಿ ಸಾಕಷ್ಟು ಮಾಹಿತಿಯನ್ನು ನೀಡಿವೆ. ಅದರ ಪ್ರಕಾರ ಮಂಗಳದ ಕೆಲವು ಭಾಗ ಕಲ್ಲು ಹಾಗೂ ಶಿಲೆಗಳಿಂದಾಗಿದ್ದರೆ ಇನ್ನು ಕೆಲವು ಭಾಗ ಮರಳಿನಿಂದಾಗಿದೆ.
ಮಂಗಳದ ಮೇಲ್ಭಾಗದ ಹತ್ತಿರದಿಂದ ಹೆಚ್ಚು ರೆಸುಲ್ಯೂಷನ್ನಿನಲ್ಲಿ (periapsis) ತೆಗೆದ ಚಿತ್ರಗಳು ಮಂಗಳದ ಆಕೃತಿಗಳ (morphological) ವೈಶಿಷ್ಟ್ಯವನ್ನು ಸಂಗ್ರಹಿಸಿದೆ. ಅಗ್ನಿಪರ್ವತಗಳು ಅದರ ಚಟುವಟಿಕೆಗಳು ಹಾಗೆಯೇ ಅದರ ಸುತ್ತಲೂ ಆವರಿಸಿರುವ ನೀರಾವಿಯಿಂದ ಮೋಡಗಳ ಚಿತ್ರಗಳು ಲಭ್ಯವಾಗಿವೆ. ಈ ತರಹದ ಆಕೃತಿಗಳ ವಿವರವನ್ನು ಮಂಗಳದ ಮೇಲ್ಮಟ್ಟದ ದೃಷ್ಟಿಯಿಂದ ಹಾಗೂ ವಾತಾವರಣದಲ್ಲಿ ಆಗುವ ಪ್ರಕ್ರಿಯೆಗನುಗುಣವಾಗಿ ವಿಂಗಡಿಸಲಾಗಿದೆ. ಇದರಿಂದ ಸಾಕಷ್ಟು ವಿವರಣೆ ಮುಂಬರುವ ದಿನಗಳಲ್ಲಿ ಸಿಗಬಹುದು.
MOM ಕಳಿಸಿರುವ ಮಾಹಿತಿಗಳು ಮಂಗಳದ ಹೊರನೋಟ, ನೀರು ಹಾಗೂ ಧೂಳಿರುವ ಸಂಕೇತಗಳು, ಮಂಗಳ ಗ್ರಹದ ಮೂರು ಬಣ್ಣಗಳು, ಅಗ್ನಿಪರ್ವತಗಳ ಮುಖಗಳು, ಕಾಲುವೆಗಳು, ಮಣ್ಣಿನ ರೂಪಲಕ್ಷಣಗಳು, ಗಾಳಿಯ ರೇಖೆಗಳು, ಮಂಗಳದ ಹೊರಪದರಿನ ಲಕ್ಷಣಗಳು, ಜ್ವಾಲಾಮುಖಿಯ ರೂಪವೈಖರಿಗಳು ಅದಷ್ಟೇ ಅಲ್ಲದೆ ಮಂಗಳದ ಉಪಗ್ರಹಗಳು, ಹವಾಮಾನ ಹಾಗೂ ತಾಪಮಾನಗಳ ಬಗ್ಗೆ ಸಂಬಂಧಿಸಿದ್ದಾಗಿದೆ. ನಾಸಾದಿಂದ ಒಂದು ಮಾಹಿತಿ ಬಂದರೂ ಅದು ಜಗತ್ತಿಗೇ ಸುದ್ದಿಯಾಗುತ್ತದೆ. ನಮ್ಮ ಭಾರತದ MOM ಮಂಗಳದ ಬಗ್ಗೆ ಅದೆಷ್ಟು ನವೀನ ಮಾಹಿತಗಳನ್ನ ಜಗತ್ತಿಗೆ ಕೊಟ್ಟಿದೆ! ಒಂದು ವರ್ಷದ ಅದರ ಸಾಧನೆ ಅಪಾರ. ಮಂಗಳಗ್ರಹದ ಈ ಕಾರ್ಯಾಚರಣೆಗೆ ನಮ್ಮ ತಂತ್ರಜ್ಞಾನದ ಗೆಲುವಾಗಿದೆ. ಭಾರತದ ತಂತ್ರಜ್ಞಾನದ ಸಾಮರ್ಥ್ಯವನ್ನು MOM ನಿಂದ ಅಳೆದರೆ ನಮ್ಮ ಬಗ್ಗೆ ಹೆಮ್ಮೆಯಾಗುತ್ತದೆ. MOM ಮುಂದಿನ ದಿನಗಳಲ್ಲಿ ಕಳಿಸುವ ಅಪೂರ್ವ ಮಾಹಿತಿಗೆ ಕಾಯೋಣ, ಇದು ನಮ್ಮ ನಿಮ್ಮೆಲ್ಲರ ಸ್ವತ್ತು!
Vikram Joshi

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!