ಅಂಕಣ

ಉದಯವಾಯಿತು ಚೆಲುವ ಕನ್ನಡ ನಾಡು

ಇನ್ನೇನು ನವೆಂಬರ್ ಬಂತು. ನಮ್ಮ ರಸ್ತೆಗಳಲ್ಲಿನ ಧ್ವಜ ಸ್ತಂಭಕ್ಕೆ ಸುಣ್ಣದ ಸೌಭಾಗ್ಯ. ಕನ್ನಡ ಹೋರಾಟಗಾರರ ಬಿಳಿ ಅಂಗಿಗೆ ಇಸ್ತ್ರಿಯ ಸದಾವಕಾಶ. ಕನ್ನಡವನ್ನು ಸದ್ದಿಲ್ಲದೆ ಕೊಲ್ಲುತ್ತಿರುವ ಟಿವಿ ಮಾಧ್ಯಮಗಳಂತೂ ಕರ್ನಾಟಕದ ‘Happy Birthday’ ಗೆ ಕ್ಲಿಪ್ಪಿಂಗ್ಸ್ ತಯಾರಿ ಮಾಡಿಕೊಳ್ಳುತ್ತಿರುತ್ತಾರೆ. ಇದೆಲ್ಲದರ ಮಧ್ಯದಲ್ಲಿ ‘ನವೆಂಬರ್ ಒಂದು’ ಭಾನುವಾರ ಬಂದಿದ್ದಕ್ಕೆ ಸಪ್ಪೆ ಮೋರೆ ಹಾಕಿಕೊಂಡಿರುವ ಒಂದು ಕಾರ್ಮಿಕ ಸಮೂಹ.

ಕೆಲವರಿಗಂತೂ ನವೆಂಬರ್ ಅಂದ್ರೆ ಖುಷಿ. ಅದರಲ್ಲೂ  ಸರ್ಕಾರದ ಕಾರ್ಯಕ್ರಮಗಳನ್ನು ಅಯೋಜಿಸುವ ಕಾಂಟ್ರ್ಯಾಕ್ಟರ್ ಗಳಿಗೆ. ಮತ್ತು  ಅನೇಕ ವರ್ಷಗಳಿಂದ, ಅಧಿಕಾರದಲ್ಲಿರುವ ಸರ್ಕಾರಕ್ಕೆ ಸ್ಟೀಲ್ ಬಕೆಟ್ ಹಿಡಿದು ಪುರಸ್ಕಾರಗಳನ್ನು ಗಿಟ್ಟಿಸುವವರಿಗೆ. ಅಪರೂಪಕ್ಕೆ ತಮ್ಮ ಸಾಧನೆಯನ್ನು ಗುರುತಿಸಿ ಸನ್ಮಾನ ಮಾಡಿದರೆ, ಅಂತಹವರಿಗೆ ಸಾರ್ಥಕತೆಯ ಸಮಾಧಾನ. ಇವೆಲ್ಲದರ ನಡುವೆ ದಿನ ನಿತ್ಯ ಕನ್ನಡವನ್ನು ಕೊಂದು ನವೆಂಬರ್ ಬಂದ ಕೂಡಲೆ ಎಲ್ಲಿಲ್ಲದ ಕನ್ನಡ ಪ್ರೀತಿ ತೋರಿಸುವ ಸೋಗಲಾಡಿಗಳನ್ನು ಕಂಡು ನಿಜವಾದ ಕನ್ನಡ ಪ್ರೇಮಿಗಳಿಗೆ ಸ್ವಲ್ಪ ಕೋಪ.

ಇರಲಿ, ಕರ್ನಾಟಕದ ಇತಿಹಾಸ, ವೈಭವವನ್ನು  ಕಿರುಲೇಖನದಲ್ಲಿ ಬಿಚ್ಚಿಡುವ ಪ್ರಯತ್ನ ಮಾಡುತ್ತೇನೆ.

ಕನ್ನಡದ ಬೆಳವಣಿಗೆಗಾಗಿ ಪ್ರತ್ಯೇಕ ರಾಜ್ಯ/ಸಂಸ್ಥಾನಕ್ಕಾಗಿ ಸ್ವಾತಂತ್ರ್ಯ ಪೂರ್ವದಿಂದಲೇ(1856) ಹೋರಾಟಗಳು ನಡೆಯುತ್ತಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೋರಾಟದ ಭಾಗವಾಗಿ 1890ಯಲ್ಲಿ ಉದಯಿಸಿದ ‘ವಿದ್ಯಾವರ್ಧಕ ಸಂಘ’ ಕರ್ನಾಟಕದ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಅನೇಕ ಸಂಘಸಂಸ್ಥೆಗಳ ಒಕ್ಕೂಟದಂತಿದ್ದ ಕರ್ನಾಟಕ ಏಕೀಕರಣ ಸಮಿತಿಯನ್ನು ಯಾರು ಮರೆಯುವಂತಿಲ್ಲ.

ಈ ಎಲ್ಲ ಸಂಘಟನೆಗಳ ಹಿಂದಿನ ಸೂತ್ರಧಾರಿಯಂತೆ ಮುನ್ನೆಡಿಸಿದವರು ‘ಶ್ರೀ ಆಲೂರು ವೆಂಕಟರಾಯರು’. ಕನ್ನಡದ ಸಾಹಿತ್ಯಕ್ಕೆ, ಕರ್ನಾಟಕದ ಉಗಮಕ್ಕೆ ಆಲೂರು ವೆಂಕಟರಾಯರು ಮಾಡಿದ ಸೇವೆಗೆ ಕರ್ನಾಟಕದ ಜನ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಅದಕ್ಕಾಗಿಯೇ ಅವರನ್ನು ‘ಕನ್ನಡ ಕುಲ ಪುರೋಹಿತ’ ಅಂತ ಕರೆಯುತ್ತಾರೆ. ಶ್ರೀಯುತರು 1912ರಲ್ಲಿ ಬರೆದ ‘ಕರ್ನಾಟಕ ಗತ ವೈಭವ’ ಇಂದಿನ ಅದೆಷ್ಟೋ ಸಾಹಿತ್ಯ ವಿದ್ಯಾರ್ಥಿಗಳಿಗೆ ಆಸರೆ. ಕರ್ನಾಟಕದ ದುರ್ದೈವ; ಅವರ ಹೆಸರನ್ನು ಕೂಡ ನಾವು ನೆನೆಯುವುದಿಲ್ಲ. ಹಾsss… ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯ ಒಂದು ರಸ್ತೆಗೆ ಈಗಿರುವ ಹೆಸರನ್ನು ತೆಗೆದು ‘ಟಿಪ್ಪು ಸುಲ್ತಾನ್ ರಸ್ತೆ’ ಅಂತ ನಾಮಕರಣ ಮಾಡಲು ಹೊರಟಿತ್ತು ಗೊತ್ತಾ ನಮ್ಮ ರಾಜ್ಯ ಸರ್ಕಾರ? ಅದು ‘ಆಲೂರು ವೆಂಕಟರಾಯರ ರಸ್ತೆ’. ಇಂತಹ ಮಹಾಪುರುಷನ ಹೆಸರು ತೆಗೆಯಲು ಮುಂದಾಗಿತ್ತು ಎಂದು ನೆನಪಿಗೆ ಬಂದಾಗೆಲ್ಲಾ ಕಣ್ಣುಗಳು ಕೆಂಪಾಗ್ತವೆ.

ವೆಂಕಟರಾಯರಂತಹ ಅದೆಷ್ಟೋ ಹೋರಾಟಗಾರ ಶ್ರಮದ ಫಲವಾಗಿ 1 ನವೆಂಬರ್ 1956ಕ್ಕೆ ಕನ್ನಡ ಜನರಿಗೆ ಒಂದು ಪ್ರತ್ಯೇಕ ರಾಜ್ಯವಾಯಿತು. ಆ ರಾಜ್ಯದ ಹೆಸರು ‘ಮೈಸೂರು’. ಈ ಹೆಸರು ಮತ್ತೆ “ಕರ್ನಾಟಕ” ಎಂದು ಬದಲಾಗಿದ್ದು 1 ನವೆಂಬರ್ 1973ರಂದು.

ಅಷ್ಟಾಗಿ ಕರ್ನಾಟಕದ ಇತಿಹಾಸ ಕೆಲವು ವರ್ಷಗಳ ಹಿಂದಿನದಲ್ಲ. ಮಹಾಭಾರತದ ‘ಸಭಾಪರ್ವ’ದಲ್ಲಿ “ಕರ್ನಾಟ ಪ್ರದೇಶದ ನಿಲುವಂಗಿ”(ರೇಶ್ಮೆಯ ವಸ್ತ್ರ) ಎಂಬ ಉಲ್ಲೇಖವಿದೆ. ಹರಪ್ಪಾ ನಾಗರಿಕತೆಯಲ್ಲಿ ಬಳಕೆಯಾಗಿದೆ ಎನ್ನಲಾದ ಚಿನ್ನದ ಮೂಲ ನಮ್ಮ ‘ಹಟ್ಟಿ’ಯ ಕಡೆ ಬೆರಳು ತೋರಿಸುತ್ತದೆ. ವಿಶ್ವದ ಮೊದಲ ತಾಮ್ರದ ಗಣಿ ನಮ್ಮ ಕರ್ನಾಟಕದ ‘ಇಂಗಳದಾಳ’. ಬನಾರಸ್ ರೇಶ್ಮೆ ಮತ್ತು ಕರ್ನಾಟಕದ ರೇಶ್ಮೆಗೆ ಮನಸೋಲಲದವರ್ಯಾರು?

ಪೌರಾಣಿಕವಾಗಿಯೂ ನಮ್ಮ ಕರ್ನಾಟಕ ಅತ್ಯಂತ ಮಹತ್ವಪೂರ್ಣವಾದುದು. ಮಹಿಷಾಸುರ ಸಂಹಾರವಾಗಿದ್ದು ಇಲ್ಲೆ, ಅಂಜನಾಪುತ್ರ ಆಂಜನೇಯ ಜನಿಸಿದ್ದು ನಮ್ಮ ನಾಡಿನಲ್ಲಿ(ಕಿಶ್ಕಿಂದ), ಅಯೋಧ್ಯಾಪತಿ ಶ್ರೀರಾಮಚಂದ್ರ ಮೂರ್ತಿ ಲಕ್ಷ್ಮಣ ಸೀತಾ ಸಮೇತರಾಗಿ ಹನುಮಂತನ ಜೊತೆ ಕರುನಾಡಿನಲ್ಲಿ ಅಲೆದಾಡಿದ್ದಾರೆ, ಪಾಂಡವರು ನಡೆದಾಡಿದ ಕುರುಹುಗಳಿಗೆ ಲೆಕ್ಕವಿಲ್ಲ! ತಾಯಿ ಕೊಲ್ಲೂರು ಮುಕಾಂಬಿಕೆ ಮುಕಾಸುರನನ್ನು ಕೊಂದು ಕೊಡಚಾದ್ರಿ ಬೆಟ್ಟದ ಮೇಲೆ ನೆಟ್ಟಿರುವ ತ್ರಿಶೂಲ, ಧೃತರಾಷ್ಟ್ರನ ಆಪ್ತ ಸಲಹೆಗಾರ ವಿದುರ ನೆಟ್ಟಿರುವ ಆಲದ ಮರಕ್ಕೆ ಸಾಕ್ಷಿಯಾಗಿ ವಿದುರಾಶ್ವತ್ಥ.

ಇದೆಲ್ಲಾ ಯಾಕೆ ಕಾಮಧೇನು “ಪುಣ್ಯಕೋಟಿ” ನಮ್ಮ ಕರ್ನಾಟಕ ಪ್ರದೇಶದ ಜನರ ಹಾಲಿನಂತ ಮನಸ್ಸಿಗೆ ಹಿಡಿದ ಕನ್ನಡಿ. “ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ ”:  ಅಂದರೆ ಮನಸ್ಸಿಗೆ ಕಡಿವಾಣ ಹಾಕಿದರೂ ಕೂಡ ಮನಸ್ಸಿಗೆ ಕನ್ನಡದ ಬನವಾಸಿ ದೇಶವೇ ನೆನಪಾಗುತ್ತದೆ ಎನ್ನುತ್ತಾರೆ ಕನ್ನಡದ ಆದಿಕವಿ ಪಂಪ.

ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಕನ್ನಡಿಗರ ಕೊಡುಗೆ ಅಷ್ಟಿಷ್ಟಲ್ಲ. ನರಗುಂದ ಬಾಬಾಸಾಹೇಬ್, ಮುಂಡರಿಗೆ ಬಂಡಾಯ ಸಹೋದರರು, ಕಿತ್ತೂರಿನ ಚೆನ್ನಮ್ಮ, ಮರಾಠ ಸೈನಿಕರಿಗೆ ಪಾಠ ಕಲಿಸಿ ಸ್ವತಃ ಶಿವಾಜಿ ಮಹಾರಾಜರಿಂದ ಪ್ರಶಂಸೆಗಳಿಸಿದ ಬೆಲವಡಿ ಮಲ್ಲಮ್ಮ, ಕ್ಯಾಕರೆ ಸಾಹೇಬನನ್ನು ನೆಲಕ್ಕುರುಳಿಸಿದ ಸಂಗೊಳ್ಳಿರಾಯಣ್ಣ!

ಶಿವಾಜಿಯ ಮಗ ರಾಜರಾಮ ಮೊಘಲರಿಂದ ತೊಂದರೆಗೆ ಸಿಕ್ಕಿಹಾಕಿಕೊಂಡಾಗ ನಮ್ಮ ಚೆನ್ನಮ್ಮ ರಾಜಾರಾಮನಿಗೆ ಆಸರೆ ಕೊಟ್ಟಿದ್ದನ್ನು ಮರೆಯುವುದು ಹೇಗೆ? ಆಲೂರು ವೆಂಕಟರಾಯರು ನಿರ್ವಹಿಸುತ್ತಿದ್ದ ಪುಣೆಯ ವಸತಿ ಗೃಹದಲ್ಲಿ ಹಿಂದೂ ಹೃದಯ ಸಾಮ್ರಾಟ್ ‘ವಿನಾಯಕ ದಾಮೋದರ ಸಾವರ್ಕರ್’ ಕೂಡ ಆಶ್ರಯ ಪಡೆದುಕೊಂಡಿದ್ದು ನಮ್ಮ ಹೆಮ್ಮೆ ಅಲ್ಲದೆ ಮತ್ತೇನು?

ಮೌರ್ಯರು, ನಂದರು, ಶಾತವಾಹನರು, ಕದಂಬರು, ಗಂಗರು, ರಾಷ್ಠ್ರಕೂಟರು, ಚಾಲುಕ್ಯರು, ಹೊಯ್ಸಳರು, ವಿಜಯನಗರದ ಸಾಮ್ರಾಜ್ಯ ಕನ್ನಡ ನಾಡಿನ ಭಾಷೆ, ಸಾಹಿತ್ಯ, ಸಂಸ್ಕೃತಿ, ಲಲಿತಕಲೆ, ಯಕ್ಷಗಾನ, ವಾಸ್ತುಶಿಲ್ಪಕ್ಕೆ ಕೊಟ್ಟಿರುವ ಕೊಡುಗೆ ನಮ್ಮ ಮನಸ್ಸಿನಲ್ಲಿ ಸದಾ ನೆಲಸಿರುತ್ತದೆ.

ಪೋರ್ಚುಗೀಸರ ವಿರುದ್ಧ ಹೋರಾಡಿ, ಮಹಿಳೆಯರನ್ನು ಪುರುಷರ ಜೊತೆ ಸಮಾನವಾಗಿ ಪರಿಗಣಿಸಿದ ಮೊದಲ ರಾಣಿ – ರಾಣಿ ಅಬ್ಬಕ್ಕ… ವಾಹ್, ಅವರ ಕತೆ ಇಂದಿಗೂ ರೋಮಾಂಚನಕಾರಿ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸುಮ್ಸುಮ್ಮನೆ “ರಾಜಶ್ರೀ” ಎಂಬ ಬಿರುದು ಬಂದಿದ್ದಲ್ಲ. ಮಹಿಳೆಯರು ಮತ್ತು ದಲಿತರ ಕಲ್ಯಾಣಕ್ಕಾಗಿ ಶಿಕ್ಷಣವನ್ನು ಎಲ್ಲರಿಗೂ ತಲುಪಿಸಿದವರು ಕೃಷ್ಣರಾಜ ಒಡೆಯರ್. ರಾಜಮನೆತನದ ಹೆಣ್ಣುಮಕ್ಕಳ ಚಿನ್ನವನ್ನು ಅಡವಿಟ್ಟು ‘ಕನ್ನಂಬಾಡಿ ಕಟ್ಟೆ’ ಕಟ್ಟಿಸಿದ ರಾಜವಂಶಕ್ಕೆ ನಮ್ಮ ರಾಜ್ಯದ ಜನತೆ ಚಿರಋಣಿಯಾಗಿದ್ದೇವೆ.

ಒಡೆಯರ್ ಅವರ ಕನಸನ್ನು ವಾಸ್ತವವಾಗಿಸಿದ ನಮ್ಮೆಲ್ಲರ ಧಣಿ ಚಿಕ್ಕಬಳ್ಳಾಪುರದ ಮೋಕ್ಷಗುಂಡಂ ವಿಶ್ವೇಶ್ವರಯ್ಯವರು ಹುಟ್ಟಿದ್ದೂ ನಮ್ಮ ಕನ್ನಡ ನಾಡಿನಲ್ಲೇ.  ಏಷಿಯಾ ಖಂಡದ ಮೊದಲ ಜಲ ವಿದ್ಯುತ್ ಸ್ಥಾವರ ನಮ್ಮ ಕರ್ನಾಟಕದ್ದು. ಇಂದಿನ ಕಾನೂನು ವ್ಯವಸ್ಥೆ ನೋಡಿ ತಲೆ ಚಚ್ಚಿಕೊಳ್ಳಬೇಕೆನಿಸುತ್ತದೆ. ಆದರೆ ಇಡೀ ಜಗತ್ತಿನಲ್ಲಿಯೇ ನ್ಯಾಯಶಾಸ್ತ್ರದ ಮಹತ್ವದ ಗ್ರಂಥ ಎಂದು ಬಣ್ಣಿಸಲಾಗುವ ‘ಮಿತಾಕ್ಷರ’ದ ಕರ್ತೃ ಕನ್ನಡನಾಡಿನ ‘ವಿಜ್ಞಾನೇಶ್ವರ’.

ಕೊನೆಯದಾಗಿ ಚಿತ್ರದುರ್ಗದ ಒನಕೆ ಓಬವ್ವ, ಆಕೆಗೆ ಪರಿಚಯದ ಅವಶ್ಯಕತೆ ಇಲ್ಲ. ಆದರೆ ಕರ್ನಾಟಕವನ್ನು ಪರಿಚಯಿಸುವ ಈ ನನ್ನ ಚಿಕ್ಕ ಪ್ರಯತ್ನಕ್ಕೆ ಆ ಮಹಾತಾಯಿಯ ಸಹಾಯ ಪಡೆಯುತ್ತಿದ್ದೇನೆ. ಗಂಡನಿಗೆ ಊಟ ಬಡಿಸಿ ನೀರು ಇಲ್ಲದಿದ್ದಾಗ ಆಕೆ ಗಂಡಿನಿಗೆ ಹೇಳಿ ಹೋಗಬಹುದಿತ್ತಲ್ಲ, ಊಟ ಮಾಡುತ್ತಿರುವ ಗಂಡನಿಗೆ ಅಡಚಣೆ ಮಾಡಕೂಡದು ಎನ್ನುವುದು ಮೂಢನಂಬಿಕೆ. ಈ ಸಂಪ್ರದಾಯಗಳೆಲ್ಲ ಕೆಲಸಕ್ಕೆ ಬಾರದವು ಎಂದು ಬೊಬ್ಬೆಹೊಡೆಯುವ ಪ್ರಗತಿಪರ ಸಾಹಿತ್ಯ ಚಿಂತಕರಿಗೆ ತಿಳಿಸುವುದು ಏನೆಂದರೆ ಆಕೆಯದ್ದು ಗೊಡ್ಡು ಆಚರಣೆಯಲ್ಲ. ಅದು ಈ ನೆಲದ “ಸಂಸ್ಕೃತಿ”! ಆಕೆ ಸಂಸ್ಕಾರವಂತಳಾಗಿದ್ದಕ್ಕೆಯೇ ಇಂದಿಗೂ ಓಬವ್ವಳನ್ನು ಸ್ಮರಿಸುತ್ತಿರುವುದು.

ಪ್ರೊ ಜಿ. ಪಿ. ರಾಜರತ್ನಂ ಮಾತುಗಳೊಂದಿಗೆ ಮುಕ್ತಾಯ ಹಾಡುತ್ತಿದ್ದೇನೆ. “ನರಕಕ್ಕಿಳ್ಸಿ, ನಾಲ್ಗೆ ಸೀಳ್ಸಿ, ಬಾಯ್ ಒಲ್ಸಾಗಿದ್ರೂನೆ!  ಮೂಗ್ನಲ್ ಕನ್ನಡ್ ಪದವಾಡ್ತೀನಿ ನನ್ನ ಮನಸ್ ನೀ ಕಾಣೆ! “

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಜೈ ಕರ್ನಾಟಕ ಮಾತೆ. ಸಿರಿಗನ್ನಡಂ…

ಮಹೇಶ

ಬೆಂಗಳೂರು

smahesh8468@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!