ಕೆಂಪಾದ ಸಂಜೆ, ಮಡುಗಟ್ಟಿದ ಮೋಡ, ಹನಿಹಾಕಿದ ಮಳೆ, ದೂರದಲ್ಲಿ ಕಾಣದಂತೆ ಮಿಣುಕುತ್ತಿದ್ದ ಮಿಂಚು, ಕಿವಿಯಾನಿಸಿದಷ್ಟೂ ಕಿರಿದಾಗುತ್ತಿದ್ದ ಗುಡುಗು, ಜೊತೆಯಲ್ಲಿ ಕೇಳುತ್ತಿದ್ದ ಹಾಡು, ಮನತುಂಬಿದ ಭಾವ, ತುಟಿಯಂಚಿನ ಗುನುಗುವಿಕೆ, ತೊನೆದು ತೂಗಿದ ಮನದ ಆಸೆ ಎಲ್ಲ ಸೇರಿ ಒಂದಷ್ಟು ಸಾಲನ್ನು ಹುಟ್ಟುವಂತೆ ಮಾಡಿದವು…
ರಿಮ್ ಜಿಮ್ ಗಿರೆ ಸಾವನ್, ಸುಲಗ್ ಸುಲಗ್ ಗಾಯೇ ಮನ್
ಭೀಗೆ ಆಜ್ ಇಸ್ ಮೌಸಮ್ ಮೇ, ಲಗಿ ಕೈಸಿ ಯೇ ಅಗನ್…
ಹನಿಯಾಗಿ ಬೀಳೋ ಮಳೆಗೆ ಕಣ್ಮುಚ್ಚಿ ಮುಖ ಕೊಟ್ಟಾಗ ಈ ಹಾಡನ್ನೇ ಗುನುಗೋಣ ಅನ್ನಿಸುತ್ತೆ.. ಪ್ರಿಯತಮೆಯ ಕೈ ಹಿಡಿದು ಕಾಯಲಾರದ ವಿರಹದ ತಳಮಳಕ್ಕೆ ಸಾಕ್ಷಿಯಾಗೋಣ ಅನ್ನಿಸುವಷ್ಟು ಕಾಡುತ್ತೆ ಈ ಗೀತೆ.. ಬದುಕಿನ ಭಾವಗಳನ್ನು ಅಕ್ಷರಗಳಲ್ಲಿ ಮುದ್ದಾಡೊಣ ಅನ್ನಿಸಿದಾಗ ಕವಿತೆಗಳು ಹುಟ್ಟುತ್ತವಂತೆ… ಆ ಭಾವನೆಯನ್ನು ಅನುಭವಿಸುತ್ತಾ ಆನಂದಿಸುವ ಆಶಯದಲ್ಲಿ ಕವಿತೆಗಳಿಗೆ ಸಂಗೀತದ ಕಂಕಣ ಕಟ್ಟುತ್ತಾರೇನೊ ಅನ್ನಿಸುತ್ತೆ… ಅಂತಹುದೇ ಭಾವನೆಗಳ ಮಳೆಗೆ ರಾಗದ ಕೊಡೆ ಹಿಡಿದಾಗ ಬಂದ ಶೃತಿ ಈ ರಿಮ್ ಜಿಮ್ ಗಿರೆ ಸಾವನ್.. ಮನ್ಜಿಲ್ ಅನ್ನೋ ಚಿತ್ರದ ಗೀತೆ.. ತುಂಬ ಹಳೇ ಹಾಡು.. ಇಂದಿನ ಹಾಡುಗಳಷ್ಟು ಯಾಂತ್ರಿಕತೆ ಇರದ, ಮನಸ್ಸಿಗೊಂದು ಹಿತವಾದ ಆನಂದ ನೀಡೋ, ಮನಸಲ್ಲಿ ಸದಾ ಹಚ್ಚ ಹಸಿರಾಗಿ ಉಳಿಯೋ ನೂರಾರು ಹಾಡುಗಳಲ್ಲಿ ಇದೂ ಒಂದು.. ಹಾಡು ಹಳೆಯದಾದರೇನು, ಭಾವನೆಗಳು ಹೊಸತೇ ಅಲ್ಲವೇ…
ಹಾಡುಗಳಿಗೂ, ನಮ್ಮ ಬದುಕಿಗೂ ಅದೆಂತದ್ದೊ ಗಂಟು ಬೆಸೆದಂತೆ.. ಅವರವರ ಅಭಿರುಚಿಗೆ ತಕ್ಕಂತೆ ಹಾಡುಗಳು, ನಮ್ಮ ಮನಸ್ಥಿತಿಗೆ ಅನುಗುಣವಾಗಿರುವ ಹಾಡುಗಳು ಇನ್ನು ಅನೇಕಾನೇಕ ವಿಧಗಳಲ್ಲಿ ಹಾಡುಗಳು ಬದುಕಿನ ಭಾಗವಾಗುತ್ತದೆ.. ಖುಷಿಯಲ್ಲಿ ಕೇಳುವ ಹಾಡುಗಳು ನೂರಾರು.. ಆದರೆ ಆ ಸಮಯದಲ್ಲಿ ಹಾಡಿನ ಸಾಹಿತ್ಯ ಮುಖ್ಯವೆನಿಸುವುದಿಲ್ಲ.. ಅದೇ ಮನಸ್ಸಿನ ದುಃಖವನ್ನು ಹಾಡು ಕೇಳುತ್ತ ಹೊರ ಹಾಕೋದಾದರೆ ಆ ಹಾಡಿನ ಸಾಹಿತ್ಯ ಮರೆಯೋದೇ ಇಲ್ಲ.. ಇನ್ನು ಪ್ರೇಮಗೀತೆಗಳು, ಅಲ್ಲಿ ಸಾಹಿತ್ಯ ಮತ್ತು ಸಂಗೀತ ಎರಡೂ ಬಹುಮುಖ್ಯ ಪಾತ್ರ ವಹಿಸುತ್ತೆ.. ಎಲ್ಲ ಪ್ರೇಮಗೀತೆಗಳೂ ಮನಸ್ಸು ಮುಟ್ಟಲಾರದು.. ಮನಮುಟ್ಟಿದ ಹಾಡುಗಳನ್ನು ಎಷ್ಟೋ ವರ್ಷಗಳ ನಂತರ ಕೇಳಿದರೂ ಹಾಡಿನ ಜೊತೆ ನಾವೂ ಗುನುಗುತ್ತೇವೆ… ಇನ್ನು ನಮ್ಮ ಸುತ್ತಮುತ್ತಲಿನ ಘಟನೆಗಳಿಗನುಗುಣವಾಗಿ, ವಾತಾವರಣಕ್ಕನುಗುಣವಾಗಿ, ನಾವಿರುವ ಪರಿಸ್ಥಿತಿಗನುಗುಣವಾಗಿ ಹಾಡುಗಳ ಇಚ್ಛೆ ಬದಲಾಗುತ್ತಾ ಹೋಗುತ್ತದೆ… ದೂರದೂರಿಗೆ ಪ್ರಯಾಣಿಸುತ್ತಿದ್ದೇವೆಂದರೆ ಬಸ್ಸಿನ ಕಿಟಕಿಯ ಸೀಟಿನಲ್ಲಿ ಕೂತು ತಂಪಾದ ಗಾಳಿಗೆ ಮುಖ ನೀಡುತ್ತಾ ಕಣ್ಮುಚ್ಚಿ ನಗುವಾಗ ಮನಸ್ಸು ತೇರಾ ಯೇರಿ ಅಂಬರದಾಗೆ ನೇಸರ ನಗುತಾನೆ ಎಂದು ಹಾಡಲು ಇಚ್ಛಿಸುತ್ತೆ… ಅದೇ ಪ್ರೇಮಿಗೆ ಮನಸ್ಸಿನ ಆಸೆಯ ಹಾಸಿಗೆ ಹಾಸುವ ನಿವೇದನೆಗೆ ಹೊರಟರೆ ಮೆರಿ ಮೆಹೆಬೂಬ್ ಖಯಾಮತ್ ಹೋಗಿ, ಆಯೇ ರುಸ್ ವಾ ತೆರಿ ಗಲಿಯೋಮೆ ಮೊಹಬ್ಬತ್ ಹೋಗಿ ಎಂಬ ಸುಂದರ ಕಾವ್ಯದ ಶೃತಿ ಮಿಡಿಯುತ್ತದೆ.. ಹೀಗೆ ಭಾವನೆಗೆ ತಕ್ಕ ಬದುಕಿನ ಗೀತೆ.. ಅದು ಕೆಲವೊಮ್ಮೆ ಭಾವಗೀತೆ, ಇನ್ನೊಮ್ಮೆ ಚಿತ್ರಗೀತೆ…
ಚಿತ್ರಗೀತೆಗಳ ವಿಷಯಕ್ಕೆ ಬಂದರೆ ನಾವು ಮೊದಲು ಅದನ್ನು ಹಳೆಯ ಚಿತ್ರಗೀತೆಗಳು ಮತ್ತು ಹೊಸ ಚಿತ್ರಗೀತೆಗಳು ಎಂದು ವಿಭಾಗಿಸಿಬಿಡುತ್ತೇವೆ ಮತ್ತು ಎರಡನ್ನೂ ತೂಕಕ್ಕೆ ಹಾಕಿ ಯಾವುದು ಉತ್ತಮ ಎಂದು ತೂಗಿ ಅಳೆಯಲು ಪ್ರಾರಂಭಿಸಿಬಿಡುತ್ತೇವೆ, ಹಲವರಿಗೆ ಹಳೆ ಹಾಡು ಇನ್ನು ಕೆಲವರಿಗೆ ಹೊಸ ಮಾಧುರ್ಯ, ಒಂದಷ್ಟು ಜನರಿಗೆ ಹಾಡು ಯಾವುದಾದರೇನು ಹಾಡಿನ ಎನರ್ಜಿ ಮುಖ್ಯ ಅಷ್ಟೇ… ಆದರೆ ಸಾಹಿತ್ಯವನ್ನು ಹೋಲಿಸಿ ನೋಡಿದರೆ ಹೊಸ ಚಿತ್ರಗೀತೆಗಳಿಗಿಂತ ಹಳೆಯ ಹಾಡುಗಳು ಒಂದು ಕೈ ಮೇಲಿದೆ ಎನ್ನಬಹುದೇನೊ.. ಯಾವ ಭಾಷೆಯನ್ನೇ ತೆಗೆದುಕೊಳ್ಳಿ, ಮನಮುಟ್ಟೋ ಗೀತೆಗಳು ಎಂದರೆ ಹಳೆಯ ಹಾಡುಗಳು.. ಮಾಧುರ್ಯ ಪ್ರಧಾನ ಗೀತೆಗಳು ಹೆಚ್ಚು.. ಆದರೆ ಹಲವು ಜನರಿಗೆ ಮಧುರ ಗೀತೆಗಳನ್ನು ಕೇಳುವುದೇ ಹುಚ್ಚು.. ಆದರೆ ಕೆಲವರಿಗೆ ತುಂತುರು ಅಲ್ಲಿ ನೀರ ಹಾಡು ಎಂದರೆ ಹಲವು ಜನರಿಗೆ ಪ್ರಾಣ ಹಿಂಸೆಯಂತೆ.. ಆದರೆ ಅಂತಹ ಹಾಡಿಗೊಂದು ಸರಿಸಮಾನ ಮತ್ತೊಂದು ಗೀತೆಯನ್ನು ತೋರಿಸಬಲ್ಲರೇ..?? ಸ್ವಲ್ಪ ಕಷ್ಟವೆಂದೇ ಹೇಳಬೇಕು.. ಮಧುರಗೀತೆಗಳ ಬೆನ್ನು ಬಿದ್ದವರಿಗೆ ಡಿಸ್ಕೊ ಇಷ್ಟವಾಗದು.. ಇಷ್ಟ ಆದರೂ ಎಲ್ಲ ಸಮಯದಲ್ಲೂ ಅಲ್ಲ.. ಹೀಗೆ ಅಭಿರುಚಿಗೆ ತಕ್ಕಂತೆ ಹಾಡುಗಳು…
ಇನ್ನು ಭಾವವೀಣೆ ಮೀಟುವ ಗೀತೆಗಳೆಂದರೆ ಭಾವಗೀತೆಗಳು. ಬದುಕಿನಲ್ಲಿ ಹೊತ್ತ ಭಾವಗಳ ಸಾಮ್ರಾಜ್ಯದ ನಾಡಗೀತೆಯಂತೆ ಇರುವ ಗೀತೆಗಳು.. ಆ ಗೀತೆಗಳು ಹೇಗೇಗೋ ಹುಟ್ಟಿವೆ.. ಒಂದು ಕಡೆ ಹಸಿರು ಕಂಡ ಹಸುಳೆಯ ಖುಷಿ ಹಾಡಾಗಿದ್ದರೆ, ಮತ್ತೊಂದು ಕಡೆ ಕಣ್ಣುಮಂಜಾಗಿಸೋ ಸಾವಿನ ನೋವು ಹಾಡಾಗಿದೆ, ಒಲವಿನ ತುಡಿತ, ನೆನಪಿನ ಪಯಣ, ಬದುಕಿನ ಸಿಹಿ ಕಹಿಗಳು ಎಲ್ಲವೂ ಒಂದೊಂದು ತತ್ವ ಪದಗಳಂತೆ ಪದ್ಯಗಳಾಗಿವೆ.. ಇಂತಹ ಗೀತೆಗಳನ್ನೆಲ್ಲ ಸೇರಿಸಿ ನಾವು ಭಾವಗೀತೆಗಳು ಎಂದು ಕರೆದಿದ್ದೇವೆ.. ಇವು ಮಾಧುರ್ಯ ಪ್ರಧಾನ ಗೀತೆಗಳು, ಕೇಳುತ್ತ ಕುಳಿತರೆ ಮನಸ್ಸಿಗೆ ಒಂದು ಹೆಸರಿಡದ ಅನುಭೂತಿ ಉಂಟಾಗುತ್ತದೆ.. ಅದಕ್ಕೆ ಒಂದು ಹೆಸರಿಡಬೇಕು ಎಂದೂ ಸಹ ಅನ್ನಿಸಲಾರದು.. ಈ ಭಾವಗೀತೆಗಳಿಗೆ ಭಾವಗೇತೆಗಳೇ ಸಾಟಿ…
ಹಾಡಿನಲ್ಲಿ ಇನ್ನೂ ಹತ್ತು ಹಲವು ಬಗೆಗಳಿವೆ.. ಜಾನಪದ ಗೀತೆಗಳು, ಭಕ್ತಿ ಗೀತೆಗಳು, ದೇಶಭಕ್ತಿ ಗೀತೆಗಳು, ಗಝಲ್ ಹೀಗೆ ಒಂದೇ ಎರಡೇ.. ಇವುಗಳಲ್ಲಿ ಇರುವ ಪ್ರಮುಖ ವ್ಯತ್ಯಾಸವೆಂದರೆ ಇವುಗಳು ನೀಡುವ ಅನುಭವ.. ಒಂದೊಂದು ಬಗೆ ಕೇಳುವಾಗಲೂ ಸಹ ಒಂದೊಂದು ರೀತಿಯಲ್ಲಿ ನಮ್ಮ ಮನಸ್ಸು ಪ್ರತಿಕ್ರೀಯಿಸುತ್ತೆ.. ಒಬ್ಬ ವ್ಯಕ್ತಿಯ ಸ್ವಭಾವವನ್ನು ಆತ ಕೇಳುವ ಹಾಡಿನ ಆಧಾರದ ಮೇಲೆ ಹೇಳಬಹುದು, ಹಾಗೆಯೇ ಒಬ್ಬ ಕವಿಯ ಸಾಹಿತ್ಯದ ಆಧಾರದ ಮೇಲೆ ಆತನ ಚಿಂತನೆಯನ್ನು ಹೇಳಬಹುದು.. ಉದಾಹರಣೆಗೆ ಪಾಪ್ ಸಂಗೀತವನ್ನು ಇಷ್ಟಪಡುವ ವ್ಯಕ್ತಿಯನ್ನು ಮತ್ತು ಭಾವಗೀತೆಗಳನ್ನು ಇಷ್ಟಪಡುವ ವ್ಯಕ್ತಿಯನ್ನು ಹೋಲಿಸಿ ನೋಡಿ. ಅವರ ವಿಚಾರಗಳಿಗೂ ಮತ್ತು ಅವರು ಇಷ್ಟಪಡುವ ಹಾಡುಗಳಿಗೂ ಏನೋ ಸಂಬಂಧವಿದೆ ಅನ್ನಿಸುತ್ತೆ.. ಹಾಗೆಯೇ ನಡುವಳಿಕೆಗಳು ಸಹ ಹಾಗೆಯೇ ಇರುವದನ್ನು ಕಾಣಬಹುದು ಇದಕ್ಕೆ ಹೊರತಾಗಿರುವವರ ಸಂಖ್ಯೆ ಬಹಳ ಕಡಿಮೆ ಎನ್ನಬಹುದೇನೋ.. ಹೀಗೆ ಈ ಗೀತೆಗಳು, ಅದರ ಸಾಹಿತ್ಯ, ಸಾಹಿತ್ಯದಲ್ಲಿನ ಉದ್ದೇಶ ಹೀಗೆ ಎಲ್ಲವೂ ಸಹ ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ… ಅವರವರ ಭಾವಕ್ಕೆ ತಕ್ಕಂತೆ ಭಾವಗೀತೆ ಎನ್ನಬಹುದೇನೋ…
ಕೆಲವೊಮ್ಮೆ ಪ್ರಸಕ್ತ ವಿದ್ಯಮಾನಗಳು, ಅದಕ್ಕೆ ತಕ್ಕಂತ ಸಾಹಿತ್ಯವುಳ್ಳ ಹಾಡುಗಳು ಎಲ್ಲವೂ ಮನಸ್ಸಿಗೆ ಬೇಸರ ತರುತ್ತವೆ.. ತಾಯಿ ಮಮತೆಯ, ತಂದೆ ಪ್ರೀತಿಯ ಪಡೆದ ನಾವುಗಳೇ ಪುಣ್ಯವಂತರು ಎಂಬ ಹಾಡು ಕೇಳಿ ಸಂಭ್ರಮಿಸಿದ ಮನಸ್ಸು ಅಪ್ಪಾ ಲೂಸಾ.. ಅಮ್ಮ ಲೂಸಾ ಎಂದು ಹಾಡಿದಾಗ ಕೇಳಲು ನೋವಾಗುತ್ತದೆ.. ಎಲ್ಲ ಹಾಡುಗಳೂ ಇದೇ ರೀತಿಯವು ಎಂದು ಹೇಳುವ ಉದ್ದೇಶವಲ್ಲ, ಉತ್ತಮ ಹಾಡುಗಳು ಸಹ ಇದೆ, ಆದರೆ ಸ್ವೀಕರಿಸಲು ಕಷ್ಟಕರವಾಗುವ ಸಾಹಿತ್ಯವಿದ್ದರೆ ಕೇಳುವುದಾದರೂ ಹೇಗೆ.. ಹಾಡುಗಳು ಕೇವಲ ಮನೋರಂಜನೆಗೆ ಮಾತ್ರ ಮೀಸಲಾಗಿರಬೇಕೆ..? ಒಂದು ವೇಳೆ ಮೀಸಲಾಗಿದ್ದರೂ ಇದ್ಯಾವ ರೀತಿಯ ಮನೋರಂಜನೆ..?? ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡುತ್ತೆ.. ಅಂತಹ ಹಾಡುಗಳ ಸಂಖ್ಯೆ ಆದಷ್ಟು ಕಡಿಮೆಯಾಗಲಿ.. ಉತ್ತಮ ಹಾಡುಗಳು ಹೆಚ್ಚಾಗಲಿ ಎಂದು ಆಶಿಸುತ್ತೆ.. ಜೊತೆಗೆ ಒಳ್ಳೆಯ ಹಾಡನ್ನು ಕೇಳುತ್ತ ಮೈಮರೆಯುತ್ತೆ.. ಯಾಕೆಂದರೆ ಹಾಡೆಂದರೆ ನಾದ ವಿನೋದದ ಸುಧೆಯಲ್ಲವೇ… ಹೌದು ಹಾಡು ಯಾವುದಾದರೇನು ಹಾಡು ಹಾಡೇ..
ಅದೇನೇ ಇರಲಿ ಭಾವನೆಗಳ ಗುಚ್ಛದೊಳಗೆ ಸೇರಿ, ಹೊಸ ಹೊಸ ರೂಪ ತಳೆಯೊ ಹತ್ತು ಹಲವು ಹಾಡುಗಳು ಅಚ್ಚಳಿಯದೇ, ನಮ್ಮ ಮನಸಲ್ಲಿ ಉಳಿದಿವೆ.. ಒಂದಿರುಳು ಕನಸಲ್ಲಿ ಕೇಳಿದ ಮಾತುಗಳಂತೆ ಮನಸಲ್ಲಿ ಮಸುಕಾದ ಹಾಡುಗಳು ಎಷ್ಟೋ ಇದೆ.. ಅವುಗಳೆಲ್ಲವನ್ನೂ ನೆನಪು ಮಾಡಿಕೊಂಡು ಹೇಳಲು ಸಾಧ್ಯವಿಲ್ಲ.. ಆದರೆ ನೋವಲ್ಲಿ, ನಲಿವಲ್ಲಿ, ಹಗಲು ಇರುಳೆಂಬ ನೆರಳು ಬೆಳಗಿನಾಟದಲ್ಲೆಲ್ಲ ಕಡೆ ಹಾಡುಗಳು ಪಾತ್ರ ವಹಿಸುತ್ತವೆ… ಅದಕ್ಕೇ ಅಲ್ಲವೇ ಎದೆಯ ನೋವು ಹಾಡಾಗಿ ಹೊಮ್ಮಿದರೆ ಭಾವಕ್ಕೆ ಬಂಧಮುಕ್ತಿ ಎಂದು ಕವಿ ಹೇಳಿದ್ದು, ಹಾಡಿದ್ದು…??