ಇವತ್ತಿನ ಕಾಲ ಘಟ್ಟದಲ್ಲಿ ಬಿರುಸಿನ ಜೀವನ ಶೈಲಿಯನ್ನು ಎಲ್ಲರು ಬಿರುಸಾಗಿ ಅಪ್ಪಿಕೊಳ್ಳುತ್ತಿದ್ದಾರೆ. ಬಿರುಸು ಅಥವ ವೇಗ ದೇಹಕ್ಕೆ ಖಂಡಿತ ಇಲ್ಲ; ದೇಹ ದಂಡಿಸುವ ಕ್ರಿಯೆಗಳು, ಉದ್ಯಮಗಳು, ಮತ್ತು ಕಾಯಕಗಳು ಶಿಥಿಲವಾಗುತ್ತಿವೆ. ಆದರೆ ಮನಸ್ಸು-ಚಿಂತನೆ-ಆಲೋಚನೆಗಳಿಗೆ ಸಂಬಂಧಿಸಿದಂತೆ ಈ ಯುಗ ಖಂಡಿತವಾಗಿಯು ಎಲ್ಲೆ ಮೀರಿ ವೇಗವಾಗಿ ಹರಿಯುತ್ತಿದೆ. ’ವಿಜ್ಞಾನ ಮತ್ತು ತಂತ್ರಜ್ಞಾನ’ದ ಕ್ಷಿಪ್ರ ಬೆಳವಣಿಗೆಗಳು, ಈ ಮನೋವೇಗ – ಮನಸ್ಸಿನ ಬೆಳವಣಿಗೆಗೆ ಒಂದು ಉದಾಹರಣೆ ಮಾತ್ರ ಮತ್ತು ಈ ವೈಜ್ಞಾನಿಕ ಯುಗ ಎಡ ಮೆದುಳಿನ ಅಸಾಧಾರಣ ಬೆಳವಣಿಗೆಗೆ ಸಾಕ್ಷಿಯಾಗಿದೆ (ಮೆದುಳಲ್ಲಿ ಎರಡು ಭಾಗ – ಎಡ ಮತ್ತು ಬಲ). ’ವಿಜ್ಞಾನ ಮತ್ತು ತಂತ್ರಜ್ಞಾನ’ದ ಬೆಳವಣಿಗೆಗಳು ತನ್ನದೆ ಆದ ಲಾಭಗಳು ಮತ್ತು ವಾಯಿದೆಗಳನ್ನು ಹೊಂದಿದೆ. ಇದರ ನಿದರ್ಶನವಾಗಿ ಔದ್ಯೋಗೀಕರಣ ಮತ್ತು ಜಾಗತೀಕರಣಗಳಬೆಳವಣಿಗೆ ಒಂದು ಕಡೆಯಾದಲ್ಲಿ ಮತ್ತೊಂದು ಕಡೆ ನಿಷ್ಕ್ರಿಯ ಜಡ-ಜೀವನ (ದೇಹದ ಅವಸ್ಥೆ ಜಡವಾಗಿರುವುದು). ಗದ್ದಲ-ಗಲಭೆ ಜೀವನದೊಂದಿಗೆ ಆಲಸ್ಯಮಯ ಜೀವನದ ಪೋಷಣೆ ಕೂಡ ಆಗುತ್ತಿದೆ. ಕಟ್ಟುನಿಟ್ಟಿಲ್ಲದ ಈ ಜೀವನವು ನಮ್ಮ ದೇಹವನ್ನು ಮಾತ್ರ ಭಾಧಿಸುತ್ತಿಲ್ಲ, ಮನಸ್ಸಿನ ಮೇಲೆ ಕೂಡ ತನ್ನ ಪರಿಣಾಮವನ್ನು ಬೀರುತ್ತಿದೆ. ವಿಷಯಾಸಕ್ತಿಯ ಉಚ್ಛ್ರಾಯದ ಬೀಜದಲ್ಲಿ ದುರಾಸೆ ಮತ್ತು ಲೋಭಗಳ ಮೊಳಕೆಯೊಡೆಯುತ್ತವೆ. ಈ ಒಂದು ಮಾರ್ಗಾಂತರದ ಅಭಿವ್ಯಕ್ತಿಯೆಂಬಂತೆ ಮನಸ್ಸಿನ ಒತ್ತಡ, ಕೋಪ, ಭಯ, ದ್ವೇಷ, ಅಪನಂಬಿಕೆಗಳು, ಅಪಮರ್ಯಾದೆಗಳು, ಭಾವನಾತ್ಮಕ ಸಂವೇದನೆಗಳ ಕಳಚುವೆಕೆ, ವಿದ್ರೋಹೀತನಗಳು ಇತ್ಯಾದಿಗಳನ್ನು ಕಾಣಬಹುದು.
ಈ ಸಮಸ್ಯೆಗೆ ಉತ್ತರ ವಿಜ್ಞಾನದ ಅಥವ ತಂತ್ರಜ್ಞಾನದ ತಿರಸ್ಕಾರದಲ್ಲಿ ಇಲ್ಲ; ಆಧುನಿಕ ಜೀವನ ಶೈಲಿಯ ತಿರಸ್ಕಾರದಲ್ಲಿಯೂ ಇಲ್ಲ. ಬಹಿರಂಗ ಶುದ್ಧಿ ತಾತ್ಕಾಲಿಕ ಸಮಾಧಾನ ನೀಡಬಹುದು. ಆದರೆ ಶಾಶ್ವತ ಪರಿಹಾರಕ್ಕಾಗಿ ನಾವೆಲ್ಲರು ಅಂತರಂಗದ ಶುದ್ಧಿ ಮಾಡಲು ಪಣತೊಡಬೇಕು. ಜಗತ್ತಿನ ಪಾಪಗಳು ತೊಳದಹಾಗು ಮತ್ತೆ ಹುಟ್ಟಿಕೊಂಡು ಬರುತ್ತಲೇ ಇರುತ್ತದೆ. ಹೊರ-ಜಗತ್ತಿನ ಪಾಪಾಂಧಕಾರಗಳು ಒಳ ಮನಸ್ಸಿನಿಂದ ತೊಳೆದಲ್ಲಿ ಮತ್ತೆ ಹುಟ್ಟುವ ಸಂಭವವಿಲ್ಲ. ಮನಸ್ಸು ಶುದ್ಧವಾಗಿದ್ದಲ್ಲಿ, ಮನಸ್ಸಿನ ಅಭಿವ್ಯಕ್ತಿಯಾಗಿರುವ ಹೊರ-ಪ್ರಪಂಚದಲ್ಲಿಯೂ ಪಾಪಾಂಧಕಾರಗಳ ಸುಳಿವು ಸಾಸುವೆ ಕಾಳಿನಷ್ಟೂ ಇರುವುದಿಲ್ಲ.
ಹಾಗಾದಲ್ಲಿ ಮನಃಶುದ್ಧಿ ಮಾಡುವುದಾದರೂ ಹೇಗೆ? ಈ ಸವಾಲಿಗೆ ಉತ್ತರವೆಂಬಂತೆ ನಮಗೆ ಯೋಗದ ಪರಿಚಯವಾಗುತ್ತದೆ. ನಮ್ಮ ಸುತ್ತ ನಾವೇ ಸುತ್ತಿಕೊಂಡಿರುವ ಕಾಯಿಲೆ-ಕುತ್ತು-ಬೇನೆಗಳಿಗೆ ’ಯೋಗ’ ಒಂದು ವಿಸ್ತೃತ ಮತ್ತು ಪರಿಪೂರ್ಣ ಔಷಧವಾಗಿ ನಮಗೆ ಕಂಡುಬರುತ್ತದೆ. ಮನಸನ್ನು ತನ್ನ ಸಹಜ-ಶಾಂತ ಸ್ಥಿತಿಗೆ ತೆಗೆದುಕೊಂಡು ಹೋಗುವುದೇ ಯೋಗದ ಆದ್ಯ ಉದ್ದೇಶ. ಮನಸ್ಸನ್ನು ಸಂಕಟ-ಗೊಂದಲಗಳಿಂದ ಪಾರು ಮಾಡುವ ಸಾಧನವೇ ಯೋಗ. ಯೋಗಾಭ್ಯಾಸ ಮಾಡುವವರಿಗೆ ಸದ್ವಿಚಾರದ ಬೆಳವಣಿಗೆಯ ಜೊತೆ ಜೀವನದಲ್ಲಿ ಅಚಲ ವಿಶ್ವಾಸವು ಮೂಡುತ್ತದೆ.
ಯೋಗ ಅಂದರೇನು?
ಕೇವಲ ಆಸನ ಅಥವ ಪ್ರಾಣಾಯಾಮಗಳು ಯೋಗವಲ್ಲ; ಅಥವ ತಂತ್ರ-ಮಂತ್ರಗಳು ಯೋಗವಲ್ಲ; ಕಾವೀ ಉಟ್ಟವರೆಲ್ಲಾ ಯೋಗಿಗಳಲ್ಲ.ಹಾಗಾದರೆ ಯೋಗ ಅಂದರೇನು?
ಯೋಗವನ್ನು ಅರಿಯಲು ಯೋಗ ಎಂಬ ಶಬ್ದದ ಮೂಲಕ್ಕೆ ಹೋಗೋಣ. ಸಂಸ್ಕೃತದ ’ಯುಜ್’ ಎಂಬ ಧಾತು (ಮೂಲ) ಪದದಿಂದ ಬಂದಿರು ಶಬ್ದ ’ಯೋಗ’! ’ಯುಜ್’ ಎಂದರೆ ’ಸೇರುವಿಕೆ’ ಅಥವ ’ಸಂಯೋಜನೆ’ ಅಥವ ’ಒಂದಾಗುವಿಕೆ’ ಎಂದು ಅರ್ಥ. ದೈಹಿಕ ನೆಲೆಯಲ್ಲಿ ಮನಸ್ಸು-ದೇಹಗಳ ಸಂಯೋಜನೆಯಾದಲ್ಲಿ, ಆಧ್ಯಾತ್ಮದ ನೆಲೆಯಲ್ಲಿ ಜೇವಾತ್ಮ ಮತ್ತು ಪರಮಾತ್ಮಗಳ ಐಕ್ಯ.
ರಾಮ ಒಬ್ಬನೆ. ಆದರೆ ಅವನ ಪರಿಚಯ ಹಲವು. ಕೆಲವರಿಗೆ ಅವನು ದೇವರು, ಕೆಲವರಿಗೆ ದಶರಥನ ತಂದೆ; ಕೆಲವರಿಗೆ ಸೀತೆಯ ಗಂಡ, ಇನ್ನೂ ಕೆಲವರಿಗೆ ಅವನು ’ರಾವಣನ ಹಂತಕ’. ಅಂತೆಯೇ ಯೋಗದ ಅರ್ಥ ಒಂದೇ ಆದರು ಮಹಂತರು ಅದನ್ನು ಭಿನ್ನ ಭಿನ್ನವಾಗಿ ವರ್ಣಿಸಿದ್ದಾರೆ.
ಯೋಗದ ವಿಷಯದಲ್ಲಿ ಮಹನೀಯರ ಕೆಲವು ಉಕ್ತಿಗಳು:-
ವಿವೇಕಾನಂದರು ಹೀಗೆಂದಿದ್ದಾರೆ, “ಹಲವಾರು ಜನ್ಮಗಳನ್ನು ಹೊತ್ತು ಸಾಧಿಸುವುದನ್ನು ಓಂದೇ ಜನ್ಮದಲ್ಲಿ, ಅಥವ ಕೆಲವೇ ತಿಂಗಳುಗಳಲ್ಲಾಗಲಿ ದಿನಗಳಲ್ಲಾಗಲಿಸಾಧಿಸುವುದಕ್ಕೆ ಉಪಯುಕ್ತವಾಗುವ ಸಾಧನಯೋಗ”
ಶ್ರೀ ಅರವಿಂದರು, “ಒಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಅಂದರೆ ದೈಹಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ, ಹಾಗು ಆಧ್ಯಾತ್ಮಿಕ ಬೆಳವಿಣಿಗೆಗೆ ಸಾಧನವೇ ಯೋಗ”.
ಇನ್ನು ಯೋಗದ ಮೂಲ ಗ್ರಂಥ ’ಪತಂಜಲಿ ಯೋಗ ಸೂತ್ರಗಳಲ್ಲಿ’ ಮಹರ್ಷಿ ಪತಂಜಲಿಯವರು ಯೋಗದ ಕುರಿತಾಗಿ ಹೀಗೆಂದಿದ್ದಾರೆ, “यॊगः चित्त वृत्ति निरॊध”. ಅಂದರೆ”ನಮ್ಮ ಮನಸ್ಸು (ಚಿತ್ತದ) ಸಹಜ ಪ್ರಕೃತಿಯನ್ನು (ಅಲೆಯ ರೀತಿಯಲ್ಲಿ ಮೂಡುವ ಚಿಂತನೆಯನ್ನು) ನಿಯಂತ್ರಿಸುವುದೇ ಯೋಗ. ’ಯೋಗ ವಾಸಿಷ್ಠದಲ್ಲಿ ವಸಿಷ್ಠರು, “योगः मनः प्रशमनोsपायः।”ಎಂದಿದ್ದಾರೆ (ಅರ್ಥ: ಮನಸ್ಸನ್ನು ಪ್ರಶಮನಗೊಳಿಸುವ ಒಂದು ಉಪಾಯ). ಜೀವನಧರ್ಮಯೋಗವಾಗಿರುವ ಭಗವದ್ಗೀತೆಯಲ್ಲಿ ಸಾಕ್ಷಾತ್ ಶ್ರೀ ಕೃಷ್ಣ ಪರಮಾತ್ಮನು ಹೀಗೆಂದ್ದಿದ್ದಾನೆ, “समत्वं योगमुच्यते।”–’ (ಸಮಸ್ಥಿತಿ’ಯೆ ಯೋಗ).
ಈ ಎಲ್ಲಾ ಮೇಲ್ಕಂಡ ವ್ಯಾಖ್ಯಾನಗಳಿಂದ ನಮಗೆ ಸ್ಪಷ್ಟವಾಗಿ ತೋರುವುದು ಯೋಗವೆಂದರೆ ಮನಸ್ಸಿಗೆ ಸಂಬಂಧಿಸಿದ ವಿಷಯ. ಹಾಗಾದಲ್ಲಿ ಆಸನಗಳು ಯಾಕೆ? ಪ್ರಾಣಾಯಾಮಗಳ ಯೋಜನೆಯಾದರೂ ಏನು?
ಯೋಗದ ಹೊನಲುಗಳು
೧. ರಾಜ ಯೋಗ
೨. ಭಕ್ತಿ ಯೊಗ
೩. ಜ್ಞಾನ ಯೋಗ
೪. ಕರ್ಮ ಯೋಗ
೧. ರಾಜ ಯೋಗ
ಮನಃ ಸಂಯಮ, ಮನೋ ನಿಗ್ರಹ, ಹಾಗು ರಾಜ ಪಥದ ಹಾದಿ ರಾಜ ಯೋಗ. ಇದರಲ್ಲಿ ಎಂಟು
ಆಯಾಮಗಳು :-
1. ಯಮ: ಅಹಿಂಸೆ, ಸತ್ಯ, ಅಸ್ತೇಯ (non-stealing), ಬ್ರಹ್ಮಚರ್ಯ, ಅಪರಿಗ್ರಹ (non-possessiveness) -ಇವೇ
ಐದು ಯಮಗಳು.
2. ನಿಯಮ: ಶೌಚ (ಅಂತರಂಗ-ಬಹಿರಂಗ), ಸಂತೋಷ (bliss), ಸ್ವಾಧ್ಯಾಯ, ಈಶ್ವರ-ಪ್ರಣಿಧಾನ (ದೈವಕ್ಕೆ ಶರಣಾಗತಿ), ತಪಸ್ಸು – ಇವೇ ಐದು ನಿಯಮಗಳು.
3. ಆಸನ: ದೇಹ ದಂಡನೆ ತನ್ಮೂಲಕ ಸ್ಥಿರ-ಸುಖ ಪ್ರಾಪ್ತಿ.
4. ಪ್ರಾಣಾಯಾಮ: ಉಸಿರಾಟದ ಮೂಲಕ ಪ್ರಾಣ ಶಕ್ತಿಯ ಮೇಲ ಹಿಡಿತ.
5. ಪ್ರತ್ಯಾಹಾರ: ಇಂದ್ರಿಯಗಳ ನಿಗ್ರಹ
6. ಧಾರಣ: ಚಿತ್ತೈಕಾಗ್ರತೆ
7. ಧ್ಯಾನ: ಅಂತರ್ಮುಖತೆ
8. ಸಮಾಧಿ: ಜಾಗೃತಿ-ಅರಿವು-ಜ್ಞಾನ-ಆನಂದ
೨. ಭಕ್ತಿ ಯೋಗ
ದೇವರನ ನಾಮ ಸ್ಮರಣೆ, ದೈವಕ್ಕೆ ಶರಣಾಗತಿ, ಹಾಗು ಇಷ್ಟ-ದೇವರಲ್ಲಿ ಲೀನವಾಗುವಿಕೆ ಇವೇ ಭಕ್ತಿ. ಭಾವನೆಗಳ ನಿಗ್ರಹ ಮತ್ತು ಪ್ರಪತ್ತಿಯ ಮೂಲಕ ಭಕ್ತಿಯ ಸಾಧನೆ ಸಾಧ್ಯವಾಗುತ್ತದೆ.
೩. ಜ್ಞಾನ ಯೋಗ
ಬುದ್ಧಿ, ಅರಿವು, ತಿಳುವಳಿಕೆಗಳ ಪ್ರತಿರೂಪವೇಜ್ಞಾನ. ಜ್ಞಾನದ ಮೂಲಕ ಪರಮ ಸತ್ಯವನ್ನು ಅರಿತುಕೊಳ್ಳುವುದು ಜ್ಞಾನ ಯೋಗ,ಜ್ಞಾನಯೋಗದ ಏಣಿಯಲ್ಲಿವಿವೇಕ,ವೈರಾಗ್ಯ ಮತ್ತು ತನ್ಮೂಲಕ ಮುಮುಕ್ಷತ್ವಒಂದರ ಮೇಲೆ ಒಂದು ಎಂಬಂತೆ ಉಬ್ಬ ಜ್ಞಾನ ಯೋಗಿಯು ಹಾದು ಹೋಗುತ್ತಾನೆ.
೪. ಕರ್ಮ ಯೋಗ
ಕರ್ಮವೆಂದರೆ ಮಾಡುವುದು ಅಥವ ಕ್ರಿಯೆ. ಕರ್ಮಯೋಗವೆಂದರೆ ನಿಶ್ಕಾಮ ಕರ್ಮ. ಫಲದ ಅಪೇಕ್ಷೆಯಿಲ್ಲದೆ ಕರ್ಮವನ್ನು (ಕ್ರಿಯೆಯನ್ನು) ಮಾಡುವುದು. ನಿಸ್ವಾರ್ಥ ಸೇವೆ ಎಂಬುದು ಕರ್ಮಯೋಗಕ್ಕೆ ಬಹಳ ಹತ್ತಿರವಾದ ಪದ. ’ಕಾಯಕವೇ ಕೈಲಾಸ’ ಎಂಬ ಭಾವವೂ ಕೂಡ ಇದರಲ್ಲಿಯೇ ಅಡಕವಾಗಿದೆ. ಕೆಲಸದಲ್ಲಿ ಕೇವಲ ಮನಃಪೂರ್ವಕ ಕೆಲಸವಲ್ಲ, ಆತ್ಮಾರ್ಪಣೆ ಕರ್ಮಯೋಗದ ಪ್ರತೀಕವಾಗುತ್ತದೆ.
ಯೋಗವೆಂದರೆ ಅದು ಒಂದು ಮತಕ್ಕೆ ಸಂಬಂಧಿಸಿದ ಗ್ರಹಿಕೆಯಲ್ಲ.ಯೋಗವೆಂದರೆ ಜೀವನ ದರ್ಶನ.ಕೇವಲ ಆಸನ-ಧ್ಯಾನ-ಪ್ರಾಣಾಯಾಮಗಳಿಗೆ ಯೋಗದ ದೃಷ್ಟಿಕೋನ ಸೀಮಿತವಾಗುವುದು ಬೇಡ. ಧರ್ಮದ ನೆಲೆಯಲ್ಲಿ ಜ್ಞಾನದ ಮೂಲಕ, ಕರ್ಮದ ಮೂಲಕ, ಭಕ್ತಿಯ ಮೂಲಕ, ಅಥವ ರಾಜಪಥದ ಮೂಲಕ ಜೀವನ ಸಾಗಿಸುವುದೇ ಯೋಗ. ದೈಹಿಕ ಹಾಗು ಮನಸ್ಸಿನ ಆರೊಗ್ಯಕ್ಕಾಗಿ, ಆತ್ಮ ವಿಶ್ವಾಸ ಹೆಚ್ಚಿಸುವುದಕ್ಕಾಗಿ, ಸತ್ವಗುಣ ಪೋಷಣೆಗಾಗಿ, ಧರ್ಮಮಯ ಜೀವನಕ್ಕಾಗಿ, ಮತ್ತು ಸಮಸ್ತ ಲೋಕದ ಜನರ ಮಧ್ಯೆ ಸ್ನೇಹ-ಸೌಹಾರ್ದತೆ-ಭಾತೃತ್ವದ ಸ್ಥಾಪನೆಗಾಗಿ ಯೋಗದ ಅವಶ್ಯಕತೆ ಇದೆ. ಇಷ್ಟೆಲ್ಲಾ ತಿಳಿದ ಮೇಲೂ ಯೋಗ ಜೀವನವನ್ನು ಅವಲಂಬಿಸದೇ ಇರಲು ಸಾಧ್ಯವೆ? ಸುತಾರಾಂ ಇಲ್ಲ. ಬನ್ನಿ ಯೋಗವನ್ನು ಅವಲಂಬಿಸೋಣ. ಯೋಗ ಜೀವನವನ್ನು ನಮ್ಮದಾಗಿಸೋಣ.
- Anup Vittal, vittal.anup@gmail.com