ಪ್ರಚಲಿತ ಸಂಪಾದಕೀಯ

ದೇಶೋಯಂ ಕ್ಷೋಭ ರಹಿತೋ ಸಜ್ಜನಾ ಸಂತು ನಿರ್ಭಯಾಃ

ಶಾಂತವಾಗಿದ್ದ ರಾಜ್ಯದ ಮೂಲೆ ಮೂಲೆಯಲ್ಲೂ ಅಶಾಂತಿ ಭುಗಿಲೇಳುತ್ತಿದೆ. ತಕ್ಕ ಮಟ್ಟಿಗೆ ಸೌಹಾರ್ಧತೆಯಿಂದ ಬದುಕುತ್ತಿದ್ದ  ಜನರ ಮನೆ-ಮನಸ್ಸುಗಳು ಕ್ಷುಲ್ಲಕ ಕಾರಣಕ್ಕಾಗಿ ಒಡೆಯುತ್ತಿದೆ. ನಮ್ಮನ್ನಾಳುವವರ, ಜವಾಬ್ದಾರಿಯುತ ಸ್ಥಾನದಲ್ಲಿರುವವರ ಪ್ರತಿಷ್ಠೆ, ಹಠ ಸಾಧನೆಗಾಗಿ ಅಮಾಯಕರ ಜೀವ ಉರುಳುತ್ತಿದೆ.   ಅಷ್ಟರ ಮಟ್ಟಿಗೆ  ‘ಟಿಪ್ಪು ಜಯಂತಿ’ ತನ್ನ ಸಾರ್ಥಕತೆಯನ್ನು ಪಡೆದುಕೊಳ್ಳುತ್ತಿದೆ.

ಆದರೆ ಈ ಗಲಭೆ, ಬಂದಿನಿಂದಾಗಿ ಲಾಭ ಮಾಡಿಕೊಳ್ಳುತ್ತಿರುವವರಾರು? ಬವಣೆ ಪಡುತ್ತಿರುವವರಾರು? ದೇವರಿಗೇ ಗೊತ್ತು.

ಪೋಲೀಸರು.. ಬಹುಷಃ ಗಲಭೆಗಳು ಸಂಭವಿಸಿದಾಗ ಅತ್ಯಂತ ಕಷ್ಟವನ್ನನುಭವಿಸುವವರು ನಮ್ಮ ಪೋಲೀಸರು. ಮೇಲಾಧಿಕಾರಿಗಳ ಆಜ್ಞೆ ಬಂತೆಂದರೆ ಎಲ್ಲೆಂದರಲ್ಲಿಗೆ ಹೊರಡಲು ತಯಾರಿರಬೇಕು. ಒಂದೋ ಎರಡು ಬಟ್ಟೆ ಬರೆಗಳನ್ನು ಹಿಡಿದುಕೊಂಡು ಬಸ್ಸು ಹತ್ತಿದರೆ ಮುಗಿಯುತು, ಎಷ್ಟು ದಿನ ಅದೇ ಪ್ಯಾಂಟೋ, ಅದೇ ಶರ್ಟೋ ಎನ್ನದೆ, ಸ್ನಾನ ಯಾವಾಗ ಮಾಡುವುದೋ ಎಂದು ತಲೆಕೆಡಿಸಿಕೊಳ್ಳದೆ ಇಪ್ಪತ್ತ ನಾಲಕ್ಕು ಘಂಟೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯಬೇಕು. ನಾವ್ಯಾವತ್ತೂ ಆ ಬಗ್ಗೆ ಯೋಚಿಸೋದೇ ಇಲ್ಲ, ಅವರು ಹೋಗುವ ಊರುಗಳಲ್ಲಿ ಟಾಯ್ಲೆಟುಗಳೂ ಇರುವುದಿಲ್ಲ. ಬಂಧ್ ಇದೆಯೆಂದರೆ ಹತ್ತಿರ ಹೋಟೇಲುಗಳೂ ತೆರೆದಿರುವುದಿಲ್ಲ, ಇವರಿಗೆ  ಎರಡು ಹೊತ್ತಿನ  ಊಟಕ್ಕೂ ಪರಿತಪಿಸಬೇಕಾದ ಸ್ಥಿತಿ. ಮತ್ತೆ,   ಕೆಲವೊಂದು ಗ್ರಾಮೀಣ ಭಾಗಗಳ ಸ್ಟೇಷನ್ನುಗಳು ಹಳೇ ಕಾಲದ ಬಸ್ಸು ತಂಗುದಾಣಗಳಂತಿರುತ್ತವೆ. ಒಮ್ಮೆಲೇ ಬಂದ ನೂರಾರು ಸಂಖ್ಯೆಯ ಪೋಲೀಸರಿಗೆ  ಅಲ್ಲಿ ವಿಶ್ರಾಂತಿ, ಸ್ನಾನ ಮಾಡುವ ಮಾತನ್ನು ಬಿಡಿ, ಚೆಯರ್ ಹಾಕಿ ಕುಳಿತುಕೊಳ್ಳಲೂ ನೆಟ್ಟಗೆ ವ್ಯವಸ್ಥೆಯಿರುವುದಿಲ್ಲ.  ಅಂತಹಾ ಸಮಯದಲ್ಲಿ ಯಾರಾದರೂ(ನಿರಪರಾಧಿಯೂ ಆಗಿರಬಹುದು) ಸಿಕ್ಕಿ ಬಿದ್ದರೆ  ಪೋಲೀಸರ ಸಹನೆಯ ಕಟ್ಟೆಯೊಡೆದು ರಾಕ್ಷಸೀ ರೂಪ ಪಡೆದುಕೊಳ್ಳದೇ ಇರುತ್ತದಾ?ಅಂತಹಾ ಅಸಹನೀಯ ವ್ಯವಸ್ಥೆಗೆ ಕಾರಣವಾಗುವ ನಮ್ಮ ಸರಕಾರ, ವಿರೋಧ ಪಕ್ಷಗಳು ಮತ್ತು ಸ್ವತಃ ನಾವುಗಳು ಪೋಲೀಸರನ್ನು ಬೈಯ್ಯುವುದು ಸರಿ ಕಾಣುತ್ತದಾ? ಪೋಲೀಸರೂ ಮನುಷ್ಯರೆಂಬುದು ನೆನಪಿರಲಿ.

ಒಂದು ಕಡೆ ಗಲಭೆ ಸಂಭವಿಸಿ ಲಾಟಿ ಚಾರ್ಜ್ ಆಯಿತೆಂದು ಇಟ್ಟುಕೊಳ್ಳಿ. ಸಿಬ್ಬಂಧಿಗಳ ಕೊರತೆಯಿಂದ ಗಲಭೆ ನಿಯಂತ್ರಣ ಕಷ್ಟವಾಯಿತು ಎಂದುಕೊಳ್ಳಿ. ನಾವು ದೂರುವುದು ಯಾರನ್ನು?ಪೋಲೀಸರನ್ನಲ್ಲವೇ? ಪರಿಸ್ಥಿತಿ ಕೈ ಮೀರಿ ಹೋಗುವಾಗ ಏನೂ ಮಾಡಲಾಗದ ತಪ್ಪಿಗೆ  ಅಮಾನತು ಶಿಕ್ಷೆ ಬೇರೆ. ಆಯ್ತು, ಲಾಟಿಚಾರ್ಜ್ ಮಾಡಿ ಗಲಭೆಯನ್ನು ನಿಯಂತ್ರಣಕ್ಕೆ ತಂದರು ಎಂದುಕೊಳ್ಳಿ,ಆವಾಗ ಅಲ್ಲಿ ಯಾವುದೋ ರಾಜಕೀಯ ನಾಯಕನಿಗೆ ಏಟು ಬಿದ್ದೋ ಇನ್ನೇನೋ ಆದರೂ ಅದಕ್ಕೂ ಪೋಲೀಸರೇ ಜವಾಬ್ದಾರಿ, ಅದಕ್ಕೂ ಅಮಾನತು ಶಿಕ್ಷೆ, ಇಲ್ಲದಿದ್ದರೆ ಆ ಪೋಲೀಸ್ ಆ ಊರಿನಲ್ಲಿರುವವರೆಗೂ ಗ್ರೆಡ್ಜ್ಜು, ಕಿರಿಕಿರಿ. ಇವೆಲ್ಲದರ ನಡುವೆ ಎಷ್ಟೋ ಪೋಲೀಸರು ಕಲ್ಲು ತೂರಾಟಕ್ಕೊಳಗಾಗಿ, ತಲೆಗೆ ಮೈಗೆಲ್ಲಾ ಏಟು ಮಾಡಿಕೊಂಡಿರುತ್ತಾರೆ. ಒಟ್ಟಿನಲ್ಲಿ ಅವರಿಗೂ, ಅವರ ಮನೆಯವರಿಗೂ ಇಬ್ಬರಿಗೂ ನೆಮ್ಮದಿಯಿಲ್ಲ.  ನಮ್ಮ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಅವರ ಅವಸ್ಥೆ ಅವ್ಯವಸ್ತೆ, ಅಸ್ತವ್ಯಸ್ತಗಳಿಂದ ಕೂಡಿರುತ್ತದೆ. ಯಾರಿಗೆ ಬೇಕು ಆ ಕೆಲಸ ಹೇಳಿ? ಯಾರದೋ ತಪ್ಪು ಇನ್ಯಾರಿಗೋ ಶಿಕ್ಷೆ!

ಬಂದ್, ಗಲಭೆಗಳೆಲ್ಲಾ ಹಠಾತ್ತನೆ ಆಗುವುದು. ಆ ದಿನ ಎಲ್ಲೋ ಮದುವೆ, ಮುಂಜಿ ಮತ್ತೊಂದು ಮಗದೊಂದು ಕಾರ್ಯಕ್ರಮಗಳು ಅರೇಂಜಾಗಿರುತ್ತದೆ. ಎಷ್ಟೋ ಹಣವನ್ನು ಖರ್ಚು ಮಾಡಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿರುತ್ತಾರೆ. ಈ ಬಂಧ್’ನಿಂದಾಗಿ ಅವರಿಗೂ ತೊಂದರೆ. ನಮ್ಮ ಮನೆ  ಕಾರ್ಯಕ್ರಮ ನಾವಂದುಕೊಂಡಂತೆ ಆಗಲಿಲ್ಲವೆಂದು ಆ ಮನೆಯವರಿಗೆ, ನಮ್ಮವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಗಲಿಲ್ಲವಲ್ಲಾ ಎಂದು ನೆಂಟರಿಷ್ಟರಿಗೆ ಬೇಸರ. ಅದರೊಟ್ಟಿಗೆ ಅನ್ನಾಹಾರ, ಹಣ ಇತಾದಿ ಕಷ್ಟ ನಷ್ಟಗಳು.  ಮತ್ತೆ ಶಾಲಾ ಕಾಲೇಜುಗಳಿಗೆ ಹೋಗುವುದೋ ಬೇಡವೋ ಎಂಬ ಗೊಂದಲದೊಂದಿಗೇ ಹೊರಟ ವಿದ್ಯಾರ್ಥಿಗಳು ಇನ್ನೆಲ್ಲೋ ಬಂದು ಸಿಕ್ಕಿಬೀಳುತ್ತಾರೆ. ಹಾಗೆ ಸಿಕ್ಕಿ ಬಿದ್ದವರಿಗಷ್ಟೇ ಗೊತ್ತು ಅದರ ಕಷ್ಟ. ಸಾರ್ವಜನಿಕರಿಗೂ ಆಸ್ಥಿಪಾಸ್ತಿ ನಷ್ಟದ ಹೊರೆ.

ಇನ್ನೊಂದು ಬಹುಮುಖ್ಯ  ವಿಷಯವೇನೆಂದರೆ ಕೋಮು ಗಲಭೆಗಳು ಸಂಭವಿಸಿದಾಗ ಹೆಚ್ಚಿನ ಕೇಸುಗಳಲ್ಲಿ  ಸಾಯುವುದು ಅಮಾಯಕರು. ಅಷ್ಟಕ್ಕೆಲ್ಲಾ ಕಾರಣರಾದವರು ಯಾವುದೇ ಭಯವಿಲ್ಲದೆ,ಪಶ್ಚಾತ್ತಾಪವಿಲ್ಲದೆ ಬದುಕುತ್ತಾರೆ.  ಯಾರೋ ಇಬ್ಬರು ಕ್ರಿಕೆಟ್ ಆಡಿ ವಾಪಾಸು ಬರುತ್ತಿರುವಾಗ ಹಿಂದಿನಿಂದ ಬಂದ ಗುಂಪೊಂದು ಬೇರೆ ಧರ್ಮದವರೆಂದು ಭಾವಿಸಿ ಇಬ್ಬರಲ್ಲಿ ಒಬ್ಬನನ್ನು ಇರಿದು ಕೊಂದರಂತೆ. ಮತ್ತೊಬ್ಬನನ್ನೂ ಇರಿದರು. ಕೊಂದವರು ಯಾರೆಂದು ಗೊತ್ತಾಗಿಲ್ಲ. ಆದರೆ ಅನ್ಯಧರ್ಮದವರೆಂದು ಭಾವಿಸಿ ಇರಿದಾಗ ಅವರಲ್ಲೊಬ್ಬ ತಮ್ಮದೇ ಧರ್ಮದವನೆಮ್ದು ಗೊತ್ತಾಗಿ ಆತನನ್ನು ಬಿಟ್ಟಿದ್ದಾರೆ.   ವಿಪರ್ಯಾಸವೆಂದರೆ ಅವರಿಬ್ಬರಲ್ಲಿ  ಒಬ್ಬ ಹಿಂದುವೂ ಇದ್ದ ಮತ್ತೊಬ್ಬ ಮುಸಲ್ಮಾನನೂ ಇದ್ದ. ಸೌಹಾರ್ಧತೆಯಿಂದ ಕ್ರಿಕೆಟ್ ಆಡಿ ಬರುತ್ತಿದ್ದ ಆ ಇಬ್ಬರು ಧರ್ಮ ದ್ವೇಷದ ಬೆಂಕಿಗೆ ಬಲಿಯಾದರು.  ಕೊಂದಿದ್ದು ಯಾರೇ ಇರಬಹುದು. ಆದರೆ ಅವರ ಧರ್ಮಾಂಧತೆಯಿಂದಾಗಿ ಒಂದು ಜೀವ ಬಲಿಯಾಗಿದ್ದು, ಮತ್ತೊಬ್ಬ ಗಾಯಗೊಂಡಿದ್ದು ಮಾತ್ರ ಅತ್ಯಂತ ದುರದೃಷ್ಟಕರ ಸಂಗತಿ.

ನಮ್ಮ ದೇಶದಲ್ಲಿ ಭಯದಲ್ಲಿ ಜೀವನ ನಡೆಸುವಂತಹಾ ಪರಿಸ್ಥಿತಿ ಸದ್ಯಕ್ಕೆ ಖಂಡಿತವಾಗಿಯೂ ಇಲ್ಲ. ಅಸಹಿಷ್ಣತೆ ಎನ್ನುವುದಂತು ಇಲ್ಲವೇ ಇಲ್ಲ. ಆದರೆ ಧರ್ಮದ ಹೆಸರಿನಲ್ಲಿ, ರಾಜಕೀಯದ ಲಾಭದ ಲೆಕ್ಕಾಚಾರದಲ್ಲಿ, ಅಸಹಿಷ್ಣತೆಯ ನೆಪವೊಡ್ಡಿ ಅಶಾಂತಿ, ಗಲಭೆ ಹುಟ್ಟಿಸುವಂತಹ ಹುನ್ನಾರ ನಡೆಯುತ್ತಿರುವುದಂತೂ ಸ್ಪಷ್ಟ. ನಮ್ಮನ್ನಾಳುವ ಕೆಲವರು ತಮ್ಮ ಸ್ಥಾನದ ಜವಾಬ್ದಾರಿಯನ್ನು ಮರೆತು,ಪ್ರತಿಷ್ಠೆಗೆ ಜೋತು ಬಿದ್ದು ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದೇ ಇದಕ್ಕೆ ಕಾರಣವೇ ಹೊರತು ಮತ್ತೇನಲ್ಲ. ಇಷ್ಟೆಲ್ಲಾ ಅಪಸವ್ಯಗಳನ್ನು ನೋಡಿದ ಬಳಿಕವಾದರೂ  ಇವರುಗಳು ಪಾಠ ಕಲಿಯಲಿ. ನಾವೂ ಕೂಡಾ  ಇಂತಹಾ ಸಂಧಿಗ್ದ ಪರಿಸ್ಥಿತಿಯಲ್ಲಿ ಬೇಜವಾಬ್ದಾರಿಯಿಂದ ವರ್ತಿಸದಿರೋಣ. ನಮಗೂ ಸಾಮಾಜಿಕ ಜವಾಬ್ದಾರಿಯೆಂಬುದಿದೆಯಲ್ಲಾ?  ಅನಗತ್ಯ ಗಾಳಿ ಸುದ್ದಿಗಳಿಗೆ ಕಿವಿಗೊಡದೆ,ಸಮಯ ಪ್ರಜ್ಞೆ ಮೆರೆದು, ನಮ್ಮನ್ನಾಳುವವರಿಗೆ ಸಮಯ ನೋಡಿ ತಕ್ಕ ಪಾಲಿಸೋಣ.

ನಮ್ಮದು ಎಷ್ಟಾದರೂ ‘ದೇಶೋಯಂ ಕ್ಷೋಭ ರಹಿತೋ ಸಜ್ಜನಾ ಸಂತು ನಿರ್ಭಯಾಃ’ ಎಂದು ಪ್ರಾರ್ಥಿಸುವ ಸಂಸ್ಕೃತಿಯಲ್ಲವೇ? ನಮ್ಮ ಸದ್ಯದ ಪ್ರಾರ್ಥನೆಯೂ ಅದೇ!

Facebook ಕಾಮೆಂಟ್ಸ್

ಲೇಖಕರ ಕುರಿತು

Readoo Staff

Tailored news content, just for you.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!