ಅಂಕಣ

ಸೆಕ್ಯುಲರ್ ಮೈತ್ರಿ ಗೆದ್ದರಷ್ಟೇ ಸಾಕೇ?

ಬಿಹಾರ  ವಿಧಾನಸಭಾ ಚುನಾವಣೆಯಂತೆಯೇ ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿಯೂ ಸೆಕ್ಯುಲರ್ ಮೈತ್ರಿಕೂಟ ಗೆಲುವು ಸಾಧಿಸಲಿದೆ ಎಂಬುದು ಕೆಲವರ ಕನಸು. ಆದರೆ, ಮೈತ್ರಿಕೂಟ ಗೆದ್ದರಷ್ಟೇ ಸಾಕೇ? ಉತ್ತಮ ಆಡಳಿತ ನೀಡಲು ಬಲಿಷ್ಠ ನಾಯಕತ್ವ ಬೇಡವೇ? ಮೋದಿ ಸೋಲಿಸುವುದಕ್ಕಿಂತ ಹೆಚ್ಚಾಗಿ, ಬಲಿಷ್ಠವಾಗಿ ಬೆಳೆಯಲು, ಬಲಿಷ್ಠ ಪ್ರಧಾನಿಯನ್ನು ಕೊಡಲು ಸೆಕ್ಯುಲರ್ ಪಕ್ಷಗಳು ಯೋಚಿಸುವ ಅಗತ್ಯವಿದೆ.

ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಐದನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದಲ್ಲಿ ಬಿಜೆಪಿ ವಿರೋಧಿಗಳ ಬೃಹತ್ ಒಡ್ಡೋಲಗವೇ ನೆರೆದಿತ್ತು. ಕೆಲ ರಾಷ್ಟ್ರೀಯ ಮಾಧ್ಯಮಗಳು ಹಾಗೂ ಇಂಗ್ಲಿಷ್ ಪತ್ರಿಕೆಗಳಂತೂ ಬಿಹಾರ ವಿಧಾನಸಭಾ ಚುನಾವಣೆ ಮುಂಬರುವ ದಿನಗಳ ದಿಕ್ಸೂಚಿ, 2019ರ ಲೋಕಸಭಾ ಚುನಾವಣೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಷರಾ ಬರೆದಿವೆ.

ಅಂದ ಹಾಗೆ, ಬಿಹಾರ ಚುನಾವಣೆಯಲ್ಲಿ ಸೆಕ್ಯುಲರ್ ಮಹಾಮೈತ್ರಿಕೂಟ ಹಾಗೂ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟದ ನಡುವೆ ನಿಕಟ ಸ್ಪರ್ಧೆ ಇರಲಿದೆ ಎಂದು ಬಹುತೇಕ ಮಾಧ್ಯಮಗಳ ಸಮೀಕ್ಷೆಗಳು ತಿಳಿಸಿದ್ದವು. ಆದರೆ, ಬಿಹಾರದ ಮತದಾರ ನಿತೀಶ್ ಕುಮಾರ್ ನೇತೃತ್ವದ ಸರ್ಕಾರಕ್ಕೆ ಮೂರನೇ ಎರಡರಷ್ಟು ಭರ್ಜರಿ ಬಹುಮತ ಗಳಿಸಿದೆ. ಎದುರಲ್ಲೇ ಇದ್ದ ಬಿಹಾರ ಚುನಾವಣೆಯ ಫಲಿತಾಂಶವನ್ನೇ ನೆಟ್ಟಗೆ ಲೆಕ್ಕ ಹಾಕಲು ವಿಫಲವಾದ ಮಾಧ್ಯಮಗಳು ಈಗ 2019ರ ಲೋಕಸಭಾ ಚುನಾವಣೆಯ ಭವಿಷ್ಯ ನುಡಿಯುತ್ತಿರುವುದು ಆಸಕ್ತಿಕರವಾಗಿದೆ.

ಮಾಧ್ಯಮಗಳ ಲೆಕ್ಕಾಚಾರ ಏನೇ ಇರಲಿ, ರಾಜಕೀಯ ಪಕ್ಷಗಳು ಮಾತ್ರ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸದೆಬಡಿಯಬೇಕಾದರೆ ಮೈತ್ರಿಯೇ ಮಹಾಮಂತ್ರ ಎಂಬ ನಿರ್ಧಾರಕ್ಕೆ ಬಂದಿವೆ. ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲೂ ಸೆಕ್ಯುಲರ್ ಮೈತ್ರಿಗೆ ಪಕ್ಷಗಳು ಮುಂದಾಗುವ ಸಾಧ್ಯತೆ ಇದೆ. ಬಿಹಾರದಂತೆ ಉತ್ತರ ಪ್ರದೇಶದ ಪರಿಸ್ಥಿತಿ ಸ್ಪಷ್ಟವಾಗಿಲ್ಲ. ಏನಾಗಲಿದೆಯೋ ಗೊತ್ತಿಲ್ಲ.

ಮೋದಿ ವಿರುದ್ಧ 2019ರ ಚುನಾವಣೆಯಲ್ಲಿ ಸಂಘಟಿತ ಸೆಕ್ಯುಲರ್ ರಂಗವೊಂದು ರಚನೆಯಾಗಲಿದೆ ಎಂಬುದರಲ್ಲಿ ಯಾರಲ್ಲಿಯೂ ಅನುಮಾನ ಉಳಿದಿಲ್ಲ. ಆದರೆ, ಆ ರಂಗ ಯಾವ ರೀತಿಯಲ್ಲಿರಲಿದೆ? ಅದರ ಸ್ವರೂಪ ಏನು? ‘ಮೋದಿ ಹಟಾವೋ’ ಎಂಬುದೊಂದೇ ಅದರ ಉದ್ದೇಶವಾಗಿರಲಿದೆಯೇ? ಮೋದಿ ಕುಳಿತಿದ್ದನ್ನು, ನಿಂತಿದ್ದನ್ನು, ವಿದೇಶಕ್ಕೆ ಹೋಗಿದ್ದನ್ನು, ಮಾತನಾಡಿದ್ದನ್ನು, ಮಾತನಾಡದೇ ಇರುವುದನ್ನೆಲ್ಲಾ ಪ್ರತಿಪಕ್ಷಗಳು ಟೀಕಿಸುತ್ತಿರುವುದನ್ನು ನೋಡಿದರೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಆಡಳಿತದ ದಿನಗಳು ನೆನಪಾಗುತ್ತಿವೆ.

ಕಾಂಗ್ರೆಸ್ಸಿಗರು ‘ಇಂಡಿಯಾ ಈಸ್ ಇಂದಿರಾ, ಇಂದಿರಾ ಈಸ್ ಇಂಡಿಯಾ’ (ಭಾರತ ಎಂದರೆ ಇಂದಿರಾ, ಇಂದಿರಾ ಎಂದರೆ ಭಾರತ) ಎನ್ನುತ್ತಿದ್ದರು. ಮತ್ತೊಂದೆಡೆ ಪ್ರತಿಪಕ್ಷಗಳು ‘ಇಂದಿರಾ ಹಠಾವೋ – ದೇಶ್ ಬಚಾವೋ’ (ಇಂದಿರಾ ತೊಲಗಿಸಿ, ದೇಶ ಉಳಿಸಿ) ಎನ್ನುತ್ತಿದ್ದರು. ತುರ್ತು ಪರಿಸ್ಥಿತಿ ಹೇರಿಕೆಯ ನಂತರವಂತೂ ‘ಇಂದಿರಾ ಹಠಾವೋ’ ಪ್ರತಿಪಕ್ಷಗಳ ಏಕೈಕ ಅಜೆಂಡಾ ಆಗಿ ಪರಿವರ್ತನೆಯಾಗಿತ್ತು. ಆದರೆ, ಇಂದಿರಾರನ್ನು ಅಧಿಕಾರದಿಂದ ಕಿತ್ತೆಸೆದ ನಂತರ ಮುಂದೆ ಯಾವ ರೀತಿ ಅಧಿಕಾರ ನಡೆಸಬೇಕು? ಎಂಬ ಚಿಂತನೆ ಮಾತ್ರ ಯಾರಲ್ಲೂ ಇರಲಿಲ್ಲ.

ಬಲಪಂಥೀಯರು, ಎಡಪಂಥೀಯರು, ನಡು ಪಂಥೀಯರು, ಕ್ರಾಂತಿಕಾರಿಗಳು, ಸೌಮ್ಯವಾದಿಗಳು, ವಿದೇಶಿ ಹೂಡಿಕೆ ಸ್ವಾಗತಿಸುವವರು, ಸ್ವದೇಶಿ ಮಂತ್ರ ಜಪಿಸುವವರೆಲ್ಲಾ ಜನತಾ ದಳ ಎಂಬ ವೇದಿಕೆಯಡಿ ಬಂದು ಗೆಲುವು ಸಾಧಿಸಿಯೇ ಬಿಟ್ಟರು. ನಂತರ ನಡೆದದ್ದೆಲ್ಲಾ ವಿಚಿತ್ರ ಪ್ರಹಸನ. ಇಂದಿರಾ ಪುತ್ರ ಪ್ರೇಮವನ್ನು ವಿರೋಧಿಸಿದವರೇ ಸರ್ಕಾರದಲ್ಲಿ ತಮ್ಮ ಮಕ್ಕಳು ಮೆರೆಯಲು ಬಿಟ್ಟರು. ಇಂದಿರಾ ಸುತ್ತ ಇದ್ದ ಭ್ರಷ್ಟರನ್ನು ಬೈದು ಅಧಿಕಾರಕ್ಕೆ ಬಂದವರು ತಾವೇ ಭ್ರಷ್ಟರಾದರು. ಒಗ್ಗಟ್ಟಂತೂ ಇರಲೇ ಇಲ್ಲ. ದಿಕ್ಕು ದೆಸೆ ಇಲ್ಲದ ಆಡಳಿತ ನೋಡಿಸ ಬೇಸತ್ತ ಜನ, ಮರು ಚುನುವಣೆಯಲ್ಲೇ ಇಂದಿರಾರನ್ನು ಭರ್ಜರಿ ಬಹುಮತದಿಂದ ಮತ್ತೆ ಅಧಿಕಾರಕ್ಕೆ ತಂದರು.

ಯಾವುದೇ ಮೈತ್ರಿ ಸರ್ಕಾರ ಯಶಸ್ವಿಯಾಗಬೇಕಾದರೆ ಪ್ರಧಾನ ಮಂತ್ರಿಯಾಗಿರುವವರು ಗೌರವಾನ್ವಿತ ಸಂಖ್ಯಾಬಲ ಹೊಂದಿರುವ ಪಕ್ಷದವರಾಗಿರಬೇಕಿರುವುದು ಅನಿವಾರ್ಯ. ಚಂದ್ರಶೇಖರ್, ಹೆಚ್.ಡಿ. ದೇವೇಗೌಡ, ಐ.ಕೆ. ಗುಜ್ರಾಲ್ ಅವರು ತಕ್ಕ ಬಹುಮತ ಹೊಂದಿರದ ಪಕ್ಷದವರಾಗಿರದ ಕಾರಣ ಅವಮಾನಕರವಾಗಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ಅಷ್ಟೇ ಏಕೆ, 200ಕ್ಕೂ ಹೆಚ್ಚು ಸಂಸದರನ್ನು ಹೊಂದಿದ್ದ ಕಾಂಗ್ರೆಸ್ ಪಕ್ಷದಿಂದ 2009ರಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರೇ, ಮೈತ್ರಿ ಸರ್ಕಾರದ ಅನಿವಾರ್ಯತೆ ಕೈ ಕಟ್ಟಿ ಹಾಕಿದೆ ಎಂದು ಬಹಿರಂಗವಾಗಿ ಹೇಳಿದ್ದರು.

ಇನ್ನು ಮೋದಿ ವಿರೋಧಿ ಬಣದಲ್ಲಿ ಸಶಕ್ತ ಪ್ರಧಾನಿಯಾಗುವವರು ಯಾರಿದ್ದಾರೆ? ಕಾಂಗ್ರೆಸ್ ಪಕ್ಷವೊಂದೇ ದೇಶಾದ್ಯಂತ ಬೆಂಬಲವನ್ನು ಹೊಂದಿದೆ. ಉಳಿದ ಎಲ್ಲಾ ಪಕ್ಷಗಳು ಒಂದು ಇಲ್ಲವೇ ಎರಡು ರಾಜ್ಯಕ್ಕೆ ಸೀಮಿತವಾಗಿವೆ. ನಿತೀಶ್ ಕುಮಾರ್, ಮಾಯಾವತಿ, ಜಯಲಲಿತ. ಮಮತಾ ಬ್ಯಾನರ್ಜಿ ಮತ್ತಿತರರು ತಮ್ಮ ಪಕ್ಷಕ್ಕೆ 50ಕ್ಕೂ ಹೆಚ್ಚು ಸ್ಥಾನ ತಂದುಕೊಡುವುದು ಕನಸಿನ ಮಾತು. ಇನ್ನು ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿಯವರಿಗೆ ಜೋತು ಬೀಳುವುದು ಅನಿವಾರ್ಯ ಎಂದುಕೊಂಡಿದೆ. ಯಾವುದೋ ಚುನಾವಣೆಯಲ್ಲಿ ಭರ್ಜರಿ ಜಯ ದೊರೆತರೆ ಅದರ ಶ್ರೇಯವನ್ನು ರಾಜಕುಮಾರನ ಮುಡಿಗೇರಿಸಿ ಅಧ್ಯಕ್ಷ ಸ್ಥಾನಕ್ಕೆ ತರೋಣ ಎಂದು ಕಾಂಗ್ರೆಸ್ ಕಾಯುತ್ತಿರುವಂತಿದೆ. ಆ ಶುಭ ಘಳಿಗೆ ಇನ್ನೂ ಬಂದಿಲ್ಲ. ಕಾಂಗ್ರೆಸ್ ಮತ್ತೊಮ್ಮೆ ಮೋದಿ ವರ್ಸಸ್ ರಾಹುಲ್ ಎಂಬ ಸಂಘರ್ಷ ನೋಡಲು ಬಯಸುತ್ತದೆ ಎಂಬುದಂತೂ ಅನುಮಾನ.

ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಗಳಿಸಿರುವ ಮತಗಳ ಪ್ರಮಾಣ ಶೋಚನೀಯವಾಗಿದೆ. ಒಂದುಕಾಲದಲ್ಲಿ ಮತ ಗಳಿಕೆಯಲ್ಲಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿರುತ್ತಿದ್ದ ಕಾಂಗ್ರೆಸ್ ಈಗ ಮೂರು, ನಾಲ್ಕು, ಐದನೇ ಸ್ಥಾನಕ್ಕೆ ಹೋಗುತ್ತಿದೆ. ಅದರ ಭದ್ರ ಕೋಟೆಗಳು ಧ್ವಂಸವಾಗುತ್ತಿವೆ. 2019ರ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಲು ಅದು ಗಂಭೀರ ಸಿದ್ಧತೆ ನಡೆಸಿರುವ ಸೂಚನೆಗಳಂತೂ ಇದುವರೆಗೆ ಕಂಡು ಬಂದಿಲ್ಲ.

ಇಂತಹ ಪರಿಸ್ಥಿತಿ ಮುಂದುವರೆದರೆ, 2019ರಲ್ಲಿ ಮೋದಿ ವಿರುದ್ಧ ಸೆಕ್ಯುಲರ್ ಮೈತ್ರಿ ಕಟ್ಟಿಕೊಂಡು ವಿರೋಧಿ ಬಣಗಳು ಅಧಿಕಾರಕ್ಕೆ ಬಂದರೂ, ಯಾರೊಬ್ಬರಿಗೂ ನಿರ್ಣಾಯಕ ಸ್ಥಾನಗಳು ಇರುವುದಿಲ್ಲ ಎಂಬುದು ಸ್ಪಷ್ಟ. ಮೋದಿ  ಮಣಿಸಿ ದುರ್ಬಲ ಮೈತ್ರಿಕೂಟವೊಂದನ್ನು ರಚಿಸಿಕೊಂಡು ಸರ್ಕಾರ ನಡೆಸುವುದು ಎಂದರೆ ತುರ್ತು ಪರಿಸ್ಥಿತಿಯ ನಂತರ ಜನತಾ ದಳದ ಸರ್ಕಾರ ನಡೆಸಿದಂತೆ. ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದಲ್ಲಿ ಉಪಸ್ಥಿತರಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಆರ್.ಜೆ.ಡಿ. ಅಧ್ಯಕ್ಷ ಹಾಗೂ ಮೇವು ಹಗರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಲಾಲು ಪ್ರಸಾದ್ ಅವರನ್ನು ಅಭಿಮಾನದಿಂದ ಆಲಂಗಿಸಿಕೊಂಡಿದ್ದರು. ಎಲ್ಲಿಯ ಭ್ರಷ್ಟಾಚಾರ ವಿರೋಧಿ ಆಂದೋಲನ – ಎಲ್ಲಿಯ ಲಾಲು ಆಲಂಗಿನ?! ಆದರೆ, ಮೋದಿ ವಿರೋಧವೊಂದನ್ನೇ ಲಾಂಛನ ಮಾಡಿಕುಂಡು ಪ್ರತಿಪಕ್ಷಗಳು ಹೊರಟರೆ ಇಂತಹ ಹತ್ತಾರು ಅಪವಿತ್ರ ಮೈತ್ರಿಯ ಆಲಿಂಗನಗಳು ಕಂಡು ಬರಲಿವೆ.ಅಂದ ಹಾಗೆ, ರಾಜಕೀಯದಲ್ಲಿ ಅಪವಿತ್ರ ಆಲಿಂಗನ ಎಂಬುದು ಇದೆಯೇ? ಇರಲಿಕ್ಕಿಲ್ಲ.  ಆದರೆ, ದುರ್ಬಲ ಪ್ರಧಾನಿಯನ್ನು ಮತ್ತೆ ಕಾಣುವುದು ಮಾತ್ರ ಭಾರತಕ್ಕೆ ಧೃತರಾಷ್ಟ್ರಾಲಿಂಗನವಾಗಲಿದೆ.

-Shrinivas

srinivas.sa@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!