‘ಕರ್ಮ’ ಎಂಬ ಪುಸ್ತಕದಿಂದ ಕನ್ನಡ ಕಾದಂಬರಿ ಲೋಕಕ್ಕೆ ಪರಿಚಯವಾದವರು ಕರಣಂ ಪವನ ಪ್ರಸಾದ. ಇದರ ಯಶಸ್ಸು ಎಷ್ಟಿತ್ತೆಂದರೆ ಭೈರಪ್ಪನವರ ಪರಂಪರೆಯಿಂದ ಭರವಸೆಯ ಲೇಖಕರೊಬ್ಬರು ಹುಟ್ಟಿದರೆಂದು ಓದುಗರೆಲ್ಲರೂ ತುಂಬಾ ಸಂತೋಷ ಪಟ್ಟಿದ್ದರು. ಇವರ ಎರಡನೇ ಪ್ರಯತ್ನವೇ ‘ನನ್ನಿ’. ಸ್ವಾಭಾವಿಕವಾಗಿ ಹೆಚ್ಚು ಕುತೂಹಲ, ನಿರೀಕ್ಷೆ ಹುಟ್ಟಿಸಿದ ಈ ಪುಸ್ತಕ ಇತ್ತೀಚಿಗಷ್ಟೇ ಬಿಡುಗಡೆಯಾಗಿದ್ದು. ಹೆಸರು ವಿಶಿಷ್ಟವಾಗಿರುವಂತೆ ಪುಸ್ತಕವೂ ಕೂಡ ವಿಶೇಷವಾಗಿದೆ.
ಚಳಿಯ ಕೊರೆಯುವ ದಿನಗಳಲ್ಲಿ, ತಣ್ಣನೆಯ ನೀರಿನಲ್ಲಿ ಕಾಲಿಟ್ಟು ಬಿಟ್ಟರೆ ಒಮ್ಮೆಲೇ ಮಿಂಚು ಸಂಚಾರವಾದಂತಾಗಿ ಹಿಂತೆಗೆದುಕೊಂಡು ಬಿಡೋಣ ಅನಿಸುತ್ತದೆ. ಆದರೆ ಹಾಗೆಯೇ ಒಂದೆರಡು ಹೆಜ್ಜೆ ಇಟ್ಟು ಮುಂದುವರಿದು ಅಪ್ಪಿಕೊಂಡರೆ ಬೆಚ್ಚನೆಯ ಅನುಭವವಾಗುತ್ತದೆ. ‘ನನ್ನಿ’ ಯಲ್ಲಿ ಕೂಡ ಹಾಗೆಯೇ…. ಅಪರಿಚಿತ,ಅಪರೂಪದ ಕಥಾಹಂದರದಲ್ಲಿ ಓದುಗ ಪಯಣಿಸುತ್ತಾನೆ. ಚರ್ಚಿನ,ಮಿಷನರಿಗಳ ವ್ಯವಸ್ಥೆಯ ನೋಟವನ್ನು ನನ್ ಒಬ್ಬರ ಕಣ್ಣುಗಳಿಂದ ನೋಡುವುದು ಅಚ್ಚರಿಯೆನಿಸುತ್ತದೆ. ಸೇವೆಯ ಸುತ್ತಲೂ ಸುತ್ತುವ ಕಥೆ ಪ್ರತಿ ಪ್ರಕ್ರಿಯೆಯ ಅಂತರಾಳವನ್ನು ಅರಿಯುವಲ್ಲಿ ಹೆಚ್ಚು ನಿಷ್ಠೆ ತೋರಿದೆ. ಸತ್ಯಾನ್ವೇಷಣೆಯೇ ಮೂಲವಾಗಿರುವ ಈ ಕಾದಂಬರಿಯು ನನ್ ಒಬ್ಬರಿಗೆ ಮಾತ್ರವಲ್ಲದೆ ಪ್ರತಿಯೊಬ್ಬರ ಜೀವನದ ತತ್ವಗಳ ಮೇಲೆ ಪ್ರಶ್ನೆಯೆತ್ತುತ್ತದೆ. ಈ ಪುಸ್ತಕದಲ್ಲಿ ಹೆಚ್ಚು ತರ್ಕಕ್ಕೆ ಒಡ್ಡಿರುವ, ಅಡಿಪಾಯವಾಗಿ ಬಳಸಿರುವ ‘ಸತ್ಯಕ್ಕೆ ಹತ್ತಿರವಾದರೂ ,ದೂರವಾದರೂ ಸಾವು’ ಎಂಬ ಮಾತು ಮತ್ತೆ ಮತ್ತೆ ಯೋಚಿಸುವಂತೆ ಮಾಡುತ್ತದೆ.
ಕಾಳೀಘಾಟಿನಲ್ಲಿ ಬರುವ ಬಡತನದ ಚಿತ್ರಣ ನೈಜವಾಗಿದ್ದು ಮತಾಂತರದ ಸಮಯದ ಕಲ್ಪನೆ ನೀಡುತ್ತದೆ. ಇದರಲ್ಲಿ ಲೇಖಕರ ಶ್ರಮ ಮತ್ತು ಅನುಭವ ವ್ಯಕ್ತವಾಗುತ್ತದೆ. ಇನ್ನೂ ದಿಟ್ಟವಾಗಿ ಪ್ರತಿಬಿಂಬಿಸಿರುವ ದೇವರ ಹೆಸರಿನಲ್ಲಿ ನಡೆಯುವ ಸೇವಾಸಂಸ್ಥೆಯ ಒಳಹೊರಗು, ಆಚಾರ ವಿಚಾರಗಳು ಕಥೆಯ ಬೆಳವಣಿಗೆಗೆ ಉತ್ತಮ ಆಯಾಮವನ್ನು ನೀಡಿದೆ. ‘ಫಾಬ್ರಿಗಾಸ್’ಪಾತ್ರದಿಂದ ಸತ್ಯಾನ್ವೇಷಣೆಯ ದಿಕ್ಕನ್ನು ನಿಷ್ಠುರವಾಗಿ ಮತ್ತು ನಿಷ್ಪಕ್ಷಪಾತವಾಗಿ ತೆಗೆದುಕೊಂಡು ಹೋಗಿರುವುದು ಶ್ಲಾಘನೀಯ. ಮುಖ್ಯಪಾತ್ರವನ್ನು ನಾಯಕಿಯಂತಲ್ಲದೇ ಸಹಜವಾಗಿ ದೌರ್ಬಲ್ಯಗಳನ್ನು , ತೊಳಾಟವನ್ನು, ತಪ್ಪುಗಳನ್ನು ಕೂಡ ಬಿಂಬಿಸಿ ರೂಪಿಸಿದ್ದಾರೆ. ಇದರಿಂದಾಗಿ ಪಾತ್ರದ ಕಲ್ಪನೆ ನೈಜತೆಗೆ ಹತ್ತಿರವಾಗಿಯೂ,ವಸ್ತು ವಿಚಾರ ತುಲನೆಗೆ ಸಮಂಜಸವಾಗಿಯೂ ಇದೆ. ಧಾರ್ಮಿಕ ಸಂಘಟನೆಗಳಲ್ಲಿರುವ ಮೂಢನಂಬಿಕೆಗಳು ಅದರಲ್ಲಿನ ಅಸಹಾಯಕ ಕ್ಷಣಗಳು ಇದರ ಉತ್ತಮ ಅಂಶ.
ಕಾದಂಬರಿಯು ಸತ್ಯದ ನೆಲೆಯಲ್ಲಿ ಬರೆಯಲಾಗಿದೆ ಎಂದು ಹಿನ್ನುಡಿಯಲ್ಲಿ ಸ್ಪಷ್ಟ ಪಡಿಸಿರುವುದರಿಂದ ಇದೊಂದು ಓದಿ ಮರೆಯುವ ಸಾಮಾನ್ಯ ಕಥೆ ಅನಿಸುವುದಿಲ್ಲ. ಸ್ವತಂತ್ರ ನಿರೂಪಣೆಯಿಂದಲೋ ಕಥೆಯ ಭೂಮಿಕೆ ವಿಭಿನ್ನವಾಗಿರುವದರಿಂದಲೋ, ಇಂಗ್ಲಿಷ್ ನ ನೆರಳಿನಿಂದಲೋ ಓದುವಾಗ ನಿರೂಪಣೆಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಮುಗಿದಾಗ ಪ್ರಶ್ನೆಗಳು, ಅಚ್ಚರಿಗಳು ತುಂಬಿ ಸರಿ-ತಪ್ಪುಗಳ ತುಲನೆಯಲ್ಲಿ ಜಾರುತ್ತೇವೆ.
‘ಕರ್ಮ’ ದ ಅನುಭೂತಿಯಿಂದ ನಿರೀಕ್ಷೆ ಹೆಚ್ಚಿಸಿದ ಕೃತಿಯಾದರೂ ಅದರ ಯಾವುದೇ ಎಳೆಯೂ ಕಾಣದೆ ಸಂಪೂರ್ಣ ವಿಭಿನ್ನವಾಗಿ ಸ್ವತಂತ್ರವಾಗಿದೆ. ಚರ್ಚಿನ ಕಿಟಕಿಯಲ್ಲಿ ಇಣುಕಿ ಅಲ್ಲಿನ ನೈಜತೆ ಹೇಳಿ, ಅದರೊಂದಿಗೆ ಮನಸಿನಾಳದ ಸತ್ಯಾನ್ವೇಷಣೆಗೆ ತೊಡಗಿ ಸಾಕಷ್ಟು ಪ್ರಶ್ನೆ ಮೂಡಿಸುವ ಕೃತಿ ಚೆನ್ನಾಗಿದೆ. ಯಾವುದೇ ನಿಲುವಿಗೆ ಅಂಟಿಕೊಳ್ಳದೆ ಕೇವಲ ಅನ್ವೇಷಣೆಯ ದಾರಿಯಲ್ಲಿ ಸಾಗುವ ನನ್ನಿಯ ಜೊತೆಗಿನ ಪಯಣ ಅದ್ಭುತವಾಗಿದೆ. ಕನ್ನಡದ ಓದುಗರಿಗೆ ಒಳ್ಳೆಯ,ಸತ್ವಯುತ,ನವೀನ ಕಾದಂಬರಿಯೊಂದು ಕಳೆದುಹೋಗಲು,ಚಿಂತಿಸಲು ದೊರಕಿದೆ.