ಅಂಕಣ ಭಾವತರಂಗ

ಕಲ್ಲಿಗೆ ಪೆಟ್ಟು ಬಿದ್ದಷ್ಟೂ ಅದು ಮೂರ್ತಿಯಾಗುವುದು

ಕೆಲವರಿಗೆ ಈ ಬದುಕೆಂಬ ಸಂತೆಯಲ್ಲಿ ಇಲ್ಲಗಳದ್ದೇ ಚಿಂತೆ. ನಮ್ಮ ಬಯಕೆಗಳೆಲ್ಲ ಯಾವತ್ತೂ ನಮ್ಮ ವ್ಯಾಪ್ತಿ ಪ್ರದೇಶದ ಹೊರಗಿರುತ್ತದೆ. ಈ ಬಯಕೆಗಳು ಒಂದೋ ನಮ್ಮ ರೇಂಜಲ್ಲಿರುವುದಿಲ್ಲ. ಇಲ್ಲಾ  ನಮ್ಮ ರೇಂಜಲ್ಲಿರುವ ಬಯಕೆಗಳು ನಮಗೆ ಸಿಗುವುದಿಲ್ಲ. ಒಟ್ಟಿನಲ್ಲಿ ನಮಗೆ ಸುಖವಿರುವುದಿಲ್ಲ. ಬಹುಶಃ ಇದಕ್ಕೆಯೇ ಇರಬೇಕು ಹಿರಿಯರು ಹೇಳಿದ್ದು “ಇರದುದರೆಡೆಗೆ ತುಡಿವುದೇ ಜೀವನ” ಅಂತ.

ಕೆಲವರಿರುತ್ತಾರೆ. ಲೈಫಲ್ಲಿ ಅವರಿಗೆ ಏನು ಸಿಕ್ಕಿದರೂ ನೆಮ್ಮದಿ ಸಿಗುವುದಿಲ್ಲ. ಬೆಳ್ಳಿ ಕೊಟ್ರೆ ಚಿನ್ನ ಬೇಕು, ಚಿನ್ನ ಕೊಟ್ರೆ ವಜ್ರ ಬೇಕು, ಅದೂ ಸಿಕ್ಕಿದರೆ ಕಾರು, ಹಣ, ಬಂಗಲೆ ಇತ್ಯಾದಿ ಇತ್ಯಾದಿ. ಕೆಲವರೆಲ್ಲ ಇದನ್ನೆಲ್ಲಾ  ಬರುವಾಗಲೇ ಪಡೆದುಕೊಂಡು ಬರುತ್ತಾರೆ. ಇದು ಅವರ ಪೂರ್ವ ಜನ್ಮದ ಪುಣ್ಯದ ಫಲ ಎನ್ನಲಾಗದು. ಅವರ ತಂದೆ-ತಾಯಿ ಹಿರಿಯರ ಪುಣ್ಯದ ಫಲವೂ ಆಗಿರಬಹುದು. ಮತ್ತೆ ಕೆಲವರು ಇರುವ ಶ್ರಮವನ್ನೆಲ್ಲಾ ಇನ್ವೆಸ್ಟ್ ಮಾಡಿ ಮೇಲಿನದ್ದನ್ನೆಲ್ಲಾ ಸಂಪಾದಿಸುತ್ತಾರೆ. ಉಳಿದವರು ಮೇಲಿನೆರಡು ವರ್ಗದವರ ಬಗ್ಗೆ ಮಾತನಾಡುತ್ತಾ, ಅಸೂಯೆ ಪಡುತ್ತಾ, ತನಗಿಲ್ಲವಲ್ಲಾ ಎಂದು  ಕೊರಗುತ್ತಾ ಬಡವರಾಗಿಯೇ ಸಾಯುತ್ತಾರೆ.

“ಏ, ಅವ ನಮ್ಮ ಶಾಂತಾರಾಮನ ಮಗ ಅಲ್ವಾ.. ನನ್ನ ಜೊತೆಗೇನೇ ಆಟದ ಟೆಂಟಿನಲ್ಲಿ ಕಡ್ಲೆ ಮಾರುತ್ತಿದ್ದ, ಈಗ ನೋಡು ಲಕ್ಷಾಧೀಶ್ವರನಾಗಿದ್ದಾನೆ.  ಮತ್ತೊಬ್ಬ ನಾನು ಮಾಣಿಯಾಗಿದ್ದ ಹೋಟೇಲಿನಲ್ಲಿ ಪಾತ್ರ ತೊಳೆಯುತ್ತಿದ್ದ. ಈಗ ಬರೀ ಹತ್ತು ವರ್ಷಗಳಲ್ಲಿ ಕೋಟ್ಯಾಧಿಪತಿಯಾಗಿದ್ದಾನೆ” ಅಂತ ಹಲವರು ನಮ್ಮ ಬಳಿ ಹುಬ್ಬೇರಿಸುವುದನ್ನು ನಾವು ಅದೇಷ್ಟೋ ಜನರಲ್ಲಿ ನೋಡಿದ್ದೇವೆ. “ಅರೆ.. ಒಟ್ಟಿಗೇ ಕೆಲಸ ಮಾಡುತ್ತಿದ್ದವ ಈಗ ಕೋಟ್ಯಾಧಿಪತಿಯಾಗಿದ್ದಾನಂತೆ, ಇವನ್ಯಾಕಿನ್ನೂ ಹಾಗೇ ಇದ್ದಾನೆ?” ಅಂತ ನಮಗೆ ಆ ಕ್ಷಣಕ್ಕೆ ಪ್ರಶ್ನೆಯೇಳುತ್ತದೆ. ಕೆಲವರಲ್ಲಿ ನಾನು ನೇರವಾಗಿ ಕೇಳಿದ್ದೇನೆ. ಅದಕ್ಕೆ ಜನ ಕಾಮನ್ನಾಗಿ “ಏಯ್.. ಅದೆಲ್ಲ ಅವರ ಲಕ್ಕ್ ಮಾರ್ರೆ, ಅವರವರ ಸ್ಟಾರ್ ಮಾರ್ರೆ..” ಅಂತ ಉತ್ತರಿಸಿದ್ದಾರೆ. ನಾನ್ ಹೇಳೋದು ಕೇಳಿ. ಲಾಟರಿ ಗೀಟರಿ ಹೊಡೆದರೆ ಅದನ್ನು ಅಕ್ಕ್ ಅನ್ನಬಹುದು. ಆದರೆ ಅಂತಹಾ ಯಾವುದೇ ಲಾಟರಿಯಿಲ್ಲದೆ ಪರಿಶ್ರಮದಿಂದ ಹಂತಹಂತವಾಗಿ ಮೇಲೆ ಬಂದವರ ಬಗ್ಗೆ ಬರೀ ಲಕ್ಕ್ ಅನ್ನಲಾಗದು. ಲಕ್ಕ್ ಪಾರ್ಷಿಯಲ್ ಇರಬಹುದು. ಆದರೆ ಹಾರ್ಡ್’ವರ್ಕ್ ಎನ್ನುವುದು ಇಲ್ಲದೆ ಯಾವ ಲಕ್ಕೂ ಫಲ ನೀಡದು. ಹಾಗೊಂದು ವೇಳೆ ನೀಡಿದರೂ ಅದು ಬಹುಕಾಲ ಬಾಳದು.

ನೀವು ಯಾವ ಯಶಸ್ವೀ ಪುರುಷರ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅವರ್ಯಾರೂ ಕೂಡ ಹಾರ್ಡ್ವರ್ಕ್, ಡೆಡಿಕೇಶನ್ ಹತಾಶೆಗಳಿಲ್ಲದೆ ಗೆದ್ದವರಲ್ಲ. ಬಿಲ್ ಗೇಟ್ಸ್ ಹತ್ತನೆ ತರಗತಿ ಫ಼ೇಲಾದಾಗ ಒಮ್ಮೆ ಖಂಡಿತವಾಗಿಯೂ ಬೇಸರಿಸಿಕೊಂಡಿರಬಹುದು. ಆದರೆ ಆ ಒಂದು ಸೋಲಿಗೆ ಅವ ಖಂಡಿತಾ ಕೊರಗಿರಲಿಕ್ಕಿಲ್ಲ. ಕೊರಗಿದ್ದಿದ್ದರೆ ಇವತ್ತು ಮೈಕ್ರೋಸಾಫ಼್ಟ್ ಎಂಬ ದಿಗ್ಗಜ ಸಾಫ಼್ಟ್’ವೇರ್ ಕಂಪನಿ ಸ್ಥಾಪಿಸಿ ಜಗತ್ತಿನ ಅತೀ ಶ್ರೀಮಂತನೆಂಬ ಹೆಗ್ಗಳಿಕೆ ಸಾಧಿಸಲು ಅವನ ಕೈಯಲ್ಲಿ ಅಗುತ್ತಿರಲಿಲ್ಲ. ರಿಚರ್ಡ್ ಬ್ರಾನ್ಸನ್ ಅಂತ ಒಬ್ಬ ಇದ್ದಾನೆ. ಅವನೂ ಅಷ್ಟೇ. ಹೆಚ್ಚು ಓದಿಕೊಂಡವನಲ್ಲ. ಆದರೆ ಭಯಂಕರ ಧೈರ್ಯವಂತ. ಶ್ರಮಜೀವಿ. ಕೆಲಸ  ಎಂತಾದ್ದೇ ಇರಲಿ, ಹಾರ್ಡ್ವರ್ಕ್, ಶ್ರದ್ಧೆಯ ಮೂಲಕ ಅದನ್ನು ಸಾಧಿಸುವ ಕಲೆ ಮಾತ್ರ ಅವನಿಗೆ ಚೆನಾಗಿ ಗೊತ್ತು. ಆದ್ದರಿಂದಲೇ  ಅವನ ಹೆಸರಿನಲ್ಲಿ ಇವತ್ತು ವಿಶ್ವದಾದ್ಯಂತ ಐನೂರಕ್ಕೂ ಹೆಚ್ಚು ಬೇರೆ ಬೇರೆ ವಲಯಕ್ಕೆ ಸಂಬಂಧಿಸಿದ ಕಂಪನಿಗಳಿರುವುದು. ಮರ್ವಾನ್ ಅತ್ತಪತ್ತು ಎಂಬ ಶ್ರೀಲಂಕಾದ ಕ್ರಿಕೆಟರ್ ಬಗ್ಗೆ ಕೇಳಿರುತ್ತೀರಿ ನೀವು. ತನ್ನ ಸಣ್ಣ ಪ್ರಾಯದಲ್ಲೇ ಪ್ರಥಮ ದರ್ಜೆ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದವ ಈತ. ಆದರೆ ಪ್ರಥಮ ದರ್ಜೆಯ ಪಂದ್ಯದಲ್ಲಿ ಬಂದಂತಹ ಆಟ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬರಲಿಲ್ಲ. ಸೊನ್ನೆ ಸುತ್ತಿದ. ಬಂದಷ್ಟೇ ವೇಗದಲ್ಲಿ ತಂಡದಿಂದ ಹೊರಬಿದ್ದ. ಪ್ರಥಮ ದರ್ಜೆಯ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವುದು, ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವುದು, ಅಲ್ಲಿ ವಿಫಲನಾಗುವುದು. ಹೊರದಬ್ಬಲ್ಪಡುವುದು. ಒಂದಲ್ಲ ಎರಡಲ್ಲ, ನಿರಂತರ ಏಳು ವರ್ಷ ಇದೇ ನಡೆದಿದ್ದು ಆತನ ಕ್ರಿಕೆಟ್ ಬಾಳ್ವೆಯಲ್ಲಿ. ಆಯ್ಕೆಗಾರರು ನೀನು ನಾಲಾಯಕ್ ಅಂದರು. ದೇಶದ ಜನರೆಲ್ಲಾ ಶೇಮ್ ಶೇಮ್ ಅಂದರು. ಪಾಪ. ಅತ್ತಪತ್ತುಗೆ ಎಷ್ಟು ಬೇಸರವಾಗಿರಬಹುದು? ಅದರೂ ಎದೆಗುಂದಲಿಲ್ಲ. ಅವನ ಆಟದ ಮೇಲೆ, ಸಾಮರ್ಥ್ಯದ ಮೇಲೆ ಅವನಿಗೆ ಸಂಪೂರ್ಣ ನಂಬಿಕೆಯಿತ್ತು.  ಮತೊಮ್ಮೆ ಉತ್ತಮ ಆಟವಾಡಿ ರಾಷ್ಟ್ರೀಯ ತಂಡಕ್ಕೆ ’ಇದು ನಿನಗೆ ಕಡೇಯ ಛಾನ್ಸ್’ ಎಂಬ ಕಂಡೀಶನಿನ ಮೇಲೆ ಆಯ್ಕೆಯಾದ. ಮತ್ತೆ ಆತ ನಿವೃತ್ತಿಯಾಗುವವರೆಗೂ ಹಿಂದಿರುಗಿದ್ದೇ ಇಲ್ಲ. ತನ್ನ ಆಯ್ಕೆಯನ್ನು ಸಮರ್ಥಿಸುವಂತಹಾ ಆಟವಾಡಿ ಶ್ರೀಲಂಕಾ ತಂಡದ ನಾಯಕನಾಗುವಲ್ಲಿವರೆಗೆ ಮುಂದುವರೆದ. ಕಡೆಗೆ ಗೌರವದ ನಿವೃತ್ತಿಯನ್ನೂ ಹೊಂದಿದ.

ಈ ಮೂರೂ ನೈಜ ಕಥೆಗಳು ಏನು ಹೇಳುತ್ತದೆಯೆಂದರೆ ಕಷ್ಟವಿಲ್ಲದೆ ಎಲ್ಲೂ ಸುಖವಿಲ್ಲ. ಜೀವನ ಬೇವು-ಬೆಲ್ಲ, ಕಹಿಯೂ ಇದೆ ಸಿಹಿಯೂ ಇದೆ. ನಾವು ಮಾಡಬೇಕಿರುವುದು ಒಂದೇ. ಹಾರ್ಡ್ವರ್ಕ್! ಯಾರೂ ಮಾಡದ ಸಾಧನೆಯೊಂದನ್ನು ಮಾಡಬೇಕಾದರೆ ಲಕ್ಕ್, ಹಾರ್ಡ್ವಕಿನ ಜೊತೆಗೆ ಒಂದಷ್ಟು ರಿಸ್ಕ್ ತೆಗೆದುಕೊಳ್ಳುವ ಧೈರ್ಯ ಮಾಡಬೇಕು. ಕೆಲಸವದೆಂತಾದ್ದೇ ಇರಲಿ, ಎದೆಯೊಡ್ಡುವ ಛಲ ಬೆಳೆಸಿಕೊಳ್ಳಬೇಕು. ನನ್ನಿಂದ ಇದು ಸಾಧ್ಯವಿದೆಯೇ ಇಲ್ಲವೇ ಎಂಬ ದ್ವಂದ್ವಕ್ಕೆ ಎಡೆ ಮಾಡದೆ ಈಜಲು ಇಳಿಯಬೇಕು. ಸ್ವಲ್ಪ ದಿನದ ಪ್ರಾಕ್ಟೀಸಿನ ಬಳಿಕ ಈಜು ತನ್ನಿಂತಾನೇ ಬರುತ್ತದೆ.

ಆದರೆ ನಮ್ಮ ಸಮಸ್ಯೆಯೇನೆಂದರೆ ನಮ್ಮ ಕೆಪಾಸಿಟಿಯ ಬಗ್ಗೆಯೇ ನಮಗೆ ತಿಳಿದಿರುವುದಿಲ್ಲ. ಅದರ ಬಗ್ಗೆ ತಿಳಿಯುವ ಪ್ರಯತ್ನವನ್ನೂ ಮಾಡುವುದಿಲ್ಲ. ಬದಲಿಗೆ ಇನ್ನೊಬ್ಬರ ಕೆಪಾಸಿಟಿಯನ್ನಳೆಯುವುದರಲ್ಲೇ ಮಗ್ನರಾಗಿ ಬಿಡುತ್ತೇವೆ. ಅವನಿಗೆ ಮಾತ್ರ ದೇವರು ಹುಟ್ಟುವಾಗಲೇ ಎಲ್ಲವನ್ನು ಕೊಟ್ಟ. ನನಗೆ ಕಷ್ಟವೊಂದನ್ನು ಬಿಟ್ಟು ಬೇರೇನನ್ನೂ ಕೊಡಲಿಲ್ಲ ಅಂತ ದೇವರಿಗೇ ಹಿಡಿಶಾಪ ಹಾಕುತ್ತೇವೆ. ಅವ ಇಷ್ಟಪಟ್ಟಿದ್ದೆಲ್ಲವನ್ನೂ ಅನುಭವಿಸುತ್ತಿರಬೇಕಾದರೆ ಇವ ಕಷ್ಟ ಕೋಟಲೆಗಳನ್ನು ದಾಟಲಾಗದೆ ಕೊರಗುತ್ತಿರುತ್ತಾನೆ.  ನಿತ್ಯವೂ ಯಾತನೆ, ದುಃಖ. ಮತ್ತು ಕಷ್ಟ ಕಷ್ಟ ಕಷ್ಟ….ಹೀಗೆ ಕೊರಗುವವರಿಗೆ  ನಾನು ಒಂದು ಮಾತು ಹೇಳುತ್ತೇನೆ. ಹುಟ್ಟುವಾಗಲೇ ಎಲ್ಲವನ್ನೂ ಪಡೆದುಕೊಂಡು ಬಂದಿರುತ್ತಾರಲ್ಲ, ಅದಲ್ಲ ನಿಜವಾದ ಗ್ರೇಟು. ಏನೇನೂ ಇಲ್ಲದೆ ಶ್ರಮದ ಹಾದಿಯ ಮೂಲಕ  ಶೂನ್ಯದಿಂದ ಸಾವಿರ ಸಂಪಾದಿಸುತ್ತಾರಲ್ಲ, ಕಷ್ಟವೆಂಬ ಬಾಣಾಲೆಯಲ್ಲಿ ಬೆಂದು ಯಶಸ್ಸೆಂಬ ಕುದುರೆಯನ್ನೇರುತ್ತಾರಲ್ಲ…ಅದು ನಿಜವಾದ ಗ್ರೇಟು.

ಒಂದು ಸಣ್ಣ ಕಥೆ ಕೇಳಿ. ದೇವಸ್ಥಾನದ ಒಳಗಿರುವ ಎರಡು ಕಲ್ಲುಗಳು ಮಾತನಾಡುತ್ತಿರುತ್ತವೆ. ಒಂದು ಕಲ್ಲು ಕೇಳುತ್ತದೆ. “ನಾವಿಬ್ಬರೂ ಒಂದೇ ಜಾತಿಗೆ ಸೇರಿದವರು. ಆದರೆ ಜನ ನನ್ನನ್ನು ನಿತ್ಯವೂ ತುಳಿದು ಸಾಗುತ್ತಾರೆ. ನಿನಗೆ ಮಾತ್ರ ಹೂಹಾರ ಹಾಕಿ ಕೈಮುಗಿದು ಪೂಜಿಸುತ್ತಾರೆ. ಯಾಕೀ ತಾರತಮ್ಯ?”. ಅದಕ್ಕೆ ಮತ್ತೊಂದು ಕಲ್ಲು ಹೇಳುತ್ತದೆ., “ನೋಡೂ.. ಈ ದೇವಸ್ಥಾನ ಮಾಡುವಾಗ ಕಲ್ಲಿನ ಕೆಲಸ ಮಾಡುವವ  ನಿನಗೆ ಕಡಿಮೆ ಪೆಟ್ಟು ಕೊಟ್ಟಿದ್ದಾನೆ.ನೋವು ಎಂದರೆ ಏನು ಅಂತಾನೆ ಗೊತ್ತಿಲ್ಲ ನಿನಗೆ, ಆದ್ದರಿಂದ ಜನ ನಿನ್ನನ್ನು ಮೆಟ್ಟಿಲುಗಳನ್ನಾಗಿ ಮಾಡಿ ನಿತ್ಯವೂ ತುಳಿಯುತ್ತಾರೆ. ನಾನು ಹಾಗಲ್ಲ,  ಎಷ್ಟು ಪೆಟ್ಟು ತಿಂದಿದ್ದೇನೋ ನನಗೇ ಗೊತ್ತು.  ಛಂದ ಮಾಡಬೇಕೆನ್ನುವ ಉತ್ಸಾಹದಲ್ಲಿ ನನ್ನ ಇಂಚಿಂಚನ್ನು ಕೆತ್ತಿದಾಗ ಅದೆಲ್ಲವನ್ನೂ ತಾಳ್ಮೆಯಿಂದ ಸಹಿಸಿದ್ದಕ್ಕಾಗಿ ಜನ ನನ್ನನ್ನು ಮೂರ್ತಿಯಾಗಿ ಪ್ರತಿಷ್ಠಿಸ್ಥಾಪಿಸಿ ಪೂಜಿಸುತ್ತಾರೆ”

ಈ ಕಥೆ ಕೇವಲ ಕಾಲ್ಪನಿಕ ಅನಿಸಬಹುದು, ಆದರೆ ಅದು ಹೇಳುವ ಜೀವನ ಪಾಠ ಮಾತ್ರ ಸಾರ್ವಕಾಲಿಕ. ನಾವು ಆಲಸ್ಯದಿಂದ ಮಲಗಿದರೆ  ಜನ ನಮ್ಮನ್ನು ಕಲ್ಲನ್ನು ತುಳಿದಂತೆ ತುಳಿಯುತ್ತಾರೆ. ಬರುವ ನೋವು, ಸವಾಲುಗಳನ್ನೆಲ್ಲಾ ಸಹಿಸಿಕೊಂಡು ಪರಿಶ್ರಮಪಟ್ಟು ಜೀವನವನ್ನು ಛಂದ ಮಾಡಿಕೊಂಡರೆ  ಜನ ಗೌರವದಿಂದ ನಮಸ್ಕರಿಸುತ್ತಾರೆ. ಪೆಟ್ಟು ಬಿತ್ತೆಂದು ಕೊರಗಬಾರದು ಯಾಕಂದ್ರೆ ಪೆಟ್ಟು ಬಿದ್ದಷ್ಟೂ ಕಲ್ಲು ಮೂರ್ತಿಯಾಗುವುದು!

  • Anashku

    bhavataranga.readoo@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!