ಅಂಕಣ

ಭಾಗ್ಯಗಳು ನಮ್ಮ ದೌರ್ಬಲ್ಯಗಳಾಗದಿರಲಿ ಅಷ್ಟೇ!

ಆಶ್ವಾಸನೆ ಹಾಗೂ ಆಮಿಷ ಇವೆರಡೂ ಇಲ್ಲದ ರಾಜಕೀಯ ಬಹುಶಃ ಎಲ್ಲೂ ಇರಲಿಕ್ಕಿಲ್ಲ! ಇವೆರಡೂ ರಾಜಕಾರಣಿಗಳ ಅಧಿಕಾರದ ದಾಹಕ್ಕೆ ಇರುವ ಅಡಿಗಲ್ಲುಗಳು. ಚುನಾವಣೆ ಸಮೀಪಿಸುತ್ತಿರುವಾಗ ಇಲ್ಲವೇ ಜನರ ಬಳಿ ತೆರಳುವಾಗ ಜನರ ಕಿವಿಗಳ ಬಳಿ ಒಂದಷ್ಟು ಬಣ್ಣದ ಮಾತುಗಳನ್ನಾಡುತ್ತಾ ಅವರನ್ನು ಮರಳುಗೊಳಿಸಿ ತಮ್ಮತ್ತ ಸೆಳೆಯುವುದು ಅಧಿಕಾರದ ಮೆಟ್ಟಿಲೇರಲುಇರುವ ಒಂದು ನಡೆಯಾದರೆ, ಇನ್ನು ಅಧಿಕಾರ ದಕ್ಕಿದ ಬಳಿಕ ಒಂದಷ್ಟು ದುಡ್ಡು, ಸವಲತ್ತುಗಳನ್ನು ಜನರಿಗೆ ಪುಕ್ಸಟ್ಟೆಯಾಗಿ  ಬಿಸಾಡುತ್ತಾ ತನ್ನ ಅಧಿಕಾರದ ಸ್ಥಾನವನ್ನು ಸುಭದ್ರಗೊಳಿಸುವುದು ರಾಜಕಾರಣದ ಇನ್ನೊಂದು ನಡೆ! ಮೊದಲನೆಯ ವಿಧಾನವನ್ನು ‘ಭರವಸೆ’ ಇಲ್ಲವೇ ‘ಆಶ್ವಾಸನೆ’ ಎಂಬ ಹೆಸರಲ್ಲಿ  ಕರೆದರೆ ಇನ್ನು ಎರಡನೇ ವಿಧಾನವನ್ನು ‘ಜನಪರ ಕಾಳಜಿ” ಅಭಿವೃದ್ಧಿ’ ಎಂದು ತಪ್ಪಾಗಿಅರ್ಥೈಸಲಾಗಿದೆ! ಭಾರತದ ರಾಜಕಾರಣದಲ್ಲಿ ತೀರಾ ಸಾಮಾನ್ಯವೆಂಬಂತೆ ಮೇಳೈಸುತ್ತಿರುವ ಈ ಎರಡು ವಿಚಾರಗಳನ್ನು ತಪ್ಪೆಂದು ಹೇಳುವುದು ತುಸು ಕಷ್ಟವಾದರೂ ಇದರಿಂದಾಗಿಯೇ ಜನಸಾಮಾನ್ಯ ತನ್ನತನವನ್ನು ಕಳೆದುಕೊಂಡು ರಾಜಕಾರಣಿಯ ಕೈಗೊಂಬೆಯಾಗುತ್ತಿದ್ದಾನೆ, ಅಧಿಕಾರದ ದುರಪಯೋಗಕ್ಕೆ ಅವಕಾಶವೀಯುತ್ತಿದ್ದಾನೆ ಎಂಬುದನ್ನಂತೂ ನಾವು ಅರಿಯಲೇ ಬೇಕು!

ತಮಿಳುನಾಡಿನ  ಉದಾಹರಣೆಯನ್ನೇ ಗಮನಿಸೋಣ. ಅಲ್ಲಿನ ಮುಖ್ಯಮಂತ್ರಿ ಜಯಲಲಿತಾರವರು ನೂರಾರು ಕೋಟಿಯ ಒಡತಿ. ರಾಜಕಾರಣದ ನಡೆಯಲ್ಲಿ ‘ಬಡವರ ಸೇವೆ’, ‘ಬಡತನದ ನಿರ್ಮೂಲನೆ’ ಎಂಬಿತ್ಯಾದಿ ಪದಗಳನ್ನು ಬಳಸಿಕೊಂಡೇ ಇವರು ಶ್ರೀಮಂತಿಕೆಯ ಶೃಂಗವೇರಿದ್ದು ಎಂಬುದನ್ನು ಕೂಡ ಎಲ್ಲರೂ ಬಲ್ಲರು! (ಬಹುಪಾಲು ಎಲ್ಲಾ ರಾಜಕಾರಣಿಗಳ ಕತೆಯೂ ಇದೇ!) ಬಡವನಮೇಲೆ ಈಕೆಗೆ ನಿಜವಾಗಿಯೂ ಮಮಕಾರವಿರುವುದಾದರೆ ಏಳೆಂಟು ಕುಲಗಳು ಕೂತು ತಿನ್ನುವಷ್ಟು ಸಂಪತ್ತನ್ನು ಈಕೆಯೋರ್ವಳೇ ಶೇಖರಿಸಿರುವುದಾದರೂ ಏತಕ್ಕೆಎಂಬುದೇ ಇಲ್ಲಿ ದೊಡ್ಡ ಪ್ರಶ್ನೆ!ಅಷ್ಟಕ್ಕೂ ಅದು ಆಕೆಗೆ ಸಾಧ್ಯವಾಗಿರುವುದಾದರೂ ಹೇಗೆ ಎಂಬುದು ಇನ್ನೊಂದು ಪ್ರಶ್ನೆ. ಇರಲಿ, ಈ ಬಗ್ಗೆ ನಾವ್ಯಾರೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಆದರೆ ಇತ್ತೀಚೆಗೆ ಇವರ ಈ ‘ಗಳಿಕೆ’ಯಲೆಕ್ಕಾಚಾರಗಳನ್ನು ಕೋರ್ಟ್ ಪ್ರಶ್ನಿಸಿ ‘ಅಮ್ಮಾ’ ನಿನ್ನ ಸಂಪತ್ತುಗಳೆಲ್ಲಾ ಅಕ್ರಮ ಎಂದಾಗ ತಮಿಳುನಾಡಿನಾದ್ಯಾಂತ ನಡೆದದ್ದು ಕೋರ್ಟ್ ವಿರುದ್ಧದ ಪ್ರತಿಭಟನೆಗಳು! ಎಲ್ಲಿಯವರೆಗೆ ಎಂದರೆ ತೀರ್ಪುನೀಡಿದ ನ್ಯಾಯಾಧೀಶನ ಪ್ರತಿಕೃತಿಯೇ ದಹನವಾಗುವವರೆಗೆ ಚಾಚಿತ್ತು ಅಲ್ಲಿನ ಪ್ರತಿಭಟನೆ! ಹಾಗಾದರೆ ನ್ಯಾಯಾಲಯವೊಂದು ಆಕೆಯು ಮಾಡಿದ್ದು ತಪ್ಪು ಎನ್ನುತ್ತಿರಬೇಕಾದರೆ ಅದಕ್ಕೂ ಮೀರಿದ್ದಸತ್ಯವನ್ನು ಈ ಜನಕಂಡುಕೊಂಡದ್ದಾದರೂ ಎಲ್ಲಿ!? ಯಾಕೆ? ಉತ್ತರ ತುಂಬಾ ಸಿಂಪಲ್. ಅದೇನೆಂದರೆ ನ್ಯಾಯ-ಅನ್ಯಾಯಗಳನ್ನು ತೂಗಿ ನೋಡುವ ಜನಸಾಮಾನ್ಯನ ಮನಸುಗಳನ್ನು ಆಕೆ ಅದಾಗಲೇತನ್ನ ಅಂಕೆಯಲ್ಲಿರಿಸಿಕೊಂಡುಬಿಟ್ಟಿದ್ದಾರೆ! ಇನ್ನೂ ನೇರವಾಗಿ ಹೇಳಬೇಕೆಂದರೆ ‘ಸವಲತ್ತುಗಳ’ ಹೆಸರಲ್ಲಿ ಜನಸಾಮಾನ್ಯನ ಯೋಚಿಸುವ ಮನಸುಗಳನ್ನೆಲ್ಲಾ ಈಕೆ ಅದಾಗಲೇ’ಕಾಳು’ಹಾಕಿವಶೀಕರಿಸಿದ್ದಾರೆ! ತನ್ನ ಅಧಿಕಾರಾವಧಿಯುದ್ದಕ್ಕೂ’ಅಮ್ಮಾ’ ಬ್ರಾಂಡ್ನ ಇಡ್ಲಿ, ಅಕ್ಕಿ, ಉಚಿತ ಟಿ.ವಿ, ಎಂದೆನ್ನುತ್ತಾ ಪುಕ್ಸಟ್ಟೆ ಕೊಡುಗೆಗಳ ಮೂಲಕ ತಮಿಳುನಾಡಿನ ಬಹುಸಂಖ್ಯೆಯ ಜನರನ್ನು ಈಕೆ ತನ್ನಕೈಯಲ್ಲೇ ಇರಿಸಿಕೊಂಡಿರುವುದು ಇವರು ಮಾಡಿದ ಮೊದಲ ಸಾಧನೆ! ಇವರ ಈ ಕೊಡುಗೆಗಳಿಂದಲೇ  ಜಯಲಲಿತಾ ಅಧಿಕಾರದಲ್ಲಿದ್ದರೆ ಇನ್ನಷ್ಟು ಮಗದಷ್ಟು ಇಂತಹ ‘ಪುಕ್ಸಟೆಗಳು’ ಬರುತ್ತಲೇಇರುತ್ತವೆ ಎಂಬ ಒಂದು ಆಸೆ ಅಲ್ಲಿನ ಜನತೆಗೆ! ಆದ್ದರಿಂದಲೇ ಅಲ್ಲಿ ಜಯಲಲಿತಾ ಚಿಟಿಕೆ ಹೊಡೆದರೆ ಜನ ಸೇರುವುದು, ಅತ್ತರೆ ರಕ್ತ ಹರಿಯುವುದು, ಕೋಟಿ ಕೋಟಿ ಸಂಪತ್ತು ಶೇಖರಣೆಯಾದರೂಜೈಕಾರ ಹಾಕುತ್ತಿರುವುದು!! ಆದರೆ ಇದರ ಹಿಂದೆ ಇರುವ ರಾಜಕಾರಣದ ಸ್ವಾರ್ಥದ ಹಿತಾಸಕ್ತಿಯಾಗಲೀ ರಾಜ್ಯದ ಬೊಕ್ಕಸ ಬರಿದಾಗುವ ವಿಚಾರಗಳಾಗಲಿ ನಮ್ಮ ತಲೆಗೆ ಹೋಗುವುದೇ ಇಲ್ಲ!

ಇದು ಪಕ್ಕದ ತಮಿಳುನಾಡಿನ ಕತೆಯಾದರೆ ಇತ್ತ ನಮ್ಮ ಕರ್ನಾಟಕ ಸರಕಾರದ  ಸಾಧನೆಗಳು ಕೂಡ ಇದೇ ರೇಖೆಯಲ್ಲಿ ಗೋಚರಿಸುತ್ತಿದೆ! ದಿನ ಬೆಳಗಾದರೆ  ಒಂದೊಂದು ‘ಭಾಗ್ಯ’ಗಳ ಸರಮಾಲೆ ಜನ ಸಾಮಾನ್ಯನ ಮಡಿಲು ಸೇರುತ್ತಿವೆ! ಜಾತಿ ಧರ್ಮಗಳನ್ನೆಲ್ಲಾ ಅಳೆದು ತೂಗಿ ಹೊಸ ಹೊಸ ‘ಪುಕ್ಸಟ್ಟೆ’ ಪ್ಯಾಕೇಜುಗಳ ಮೂಲಕ  ಜನ ಸಾಮಾನ್ಯನನ್ನು ತನ್ನೊಳಗೆ ಸೆಳೆಯುವ ಜಿದ್ದಿಗೆಬಿದ್ದಂತಿದೆ ಇಲ್ಲಿ ನಮ್ಮ ಸರಕಾರ! ಸಾಲದಕ್ಕೆ ಸರಕಾರದ ಈ ಸಾಧನೆಗಳನ್ನು[?]ಕೊಂಡಾಡಲು ‘ಅನ್ನ ಕೊಟ್ಟ ಅಣ್ಣ’ ಎಂಬ ಶೀರ್ಷಿಕೆಯ ಆಳೆತ್ತರದ ಕಟೌಟ್ಗಳು  ಕೂಡ ರಾಜ್ಯದ ನಾನಾ ಕಡೆಗಳಲ್ಲಿಅದಾಗಲೇ ಗೋಚರಿಸಲು ಪ್ರಾರಂಭಿಸಿವೆ! ಅಂದರೆ  ತಮಿಳಿನ ‘ಅಮ್ಮ’ ಬ್ರಾಂಡ್ನ ಹಾಗೆ ಇಲ್ಲಿ ‘ಅಣ್ಣ’ ಬ್ರಾ೦ಡೊ೦ದು ಸದ್ದಿಲ್ಲದೆ ಜನರ ತಲೆಯೊಳಗಿಳಿಸುವ ಪ್ರಯತ್ನವೇನೋ ಅನ್ನಿಸುತ್ತಿದೆ! ಯಾವಅರ್ಥದಲ್ಲಿ ಈ ಶಬ್ದವನ್ನು ಸೇರಿಸಿದರೋ ಗೊತ್ತಿಲ್ಲ. ಸಾಮಾನ್ಯವಾಗಿ ಉದ್ಯೋಗ ನೀಡಿ ಆ ಮೂಲಕ ಅನ್ನವನ್ನು ಸಂಪಾದಿಸಲು ದಾರಿ ತೋರಿದವರನ್ನು ಒಂದರ್ಥದಲ್ಲಿ ಅನ್ನಕೊಟ್ಟವರು ಎಂದೆನ್ನಬಹುದು.ಆದರೆ ಈ ನಮ್ಮ ರಾಜ್ಯ ಸರಕಾರದಿಂದ ಅದ್ಯಾವ ಉದ್ಯೋಗ ಮೇಳಗಳು ನಡೆದಿವೆ ಎಂಬುದಕ್ಕೆಉತ್ತರ ಸಿಗುತ್ತಿಲ್ಲ! ಅದೆಷ್ಟು ಮಂದಿ ನಿರುದ್ಯೋಗಿಗಳು ಈ ಕಾಲಾವಧಿಯಲ್ಲಿ ಉದ್ಯೋಗ  ಪಡೆದಿದ್ದಾರೆಎಂಬುದೂ ಗೊತ್ತಾಗುತ್ತಿಲ್ಲ! ಅಸಲಿಗೆ ಖಾಲಿ ಬಿದ್ದಿರುವ ಹುದ್ದೆಗಳಿಗೆ ನೇಮಕಾತಿ ನಡೆಸುವಲ್ಲೇ ಈ ಸರಕಾರ ಮೀನಾಮೇಷ ಎಣಿಸುತ್ತಿದೆ! ಭರ್ತಿಯಾಗದ ಶಿಕ್ಷಕರ ಹುದ್ದೆಗಳು, ಖಾಲಿ ಬಿದ್ದಿರುವ ಸರಕಾರಿಇಲಾಖೆಗಳು, ಆಗೊಮ್ಮೆ ಈಗೊಮ್ಮೆ ಗೌರವಧನ ಕಾಣುತ್ತಿರುವ ಅತಿಥಿ ಉಪನ್ಯಾಸಕರುಗಳು, ಖಾಯಂ ಹುದ್ದೆಯ ಬೇಡಿಕೆ ಇಟ್ಟಿರುವ ನರ್ಸ್ ಗಳು ಅಯ್ಯೋ ಹೇಳುತ್ತಾ ಹೋದರೆ ಇದು ಮುಗಿಯದಕತೆಯಂತಿದೆ  ಬಿಡಿ! ಈ ನಿಟ್ಟಿನಲ್ಲಿ ನೋಡಿದರೆ  ಈ ಸರಕಾರವನ್ನು ಅದೇಗೆ ಅನ್ನ ಕೊಟ್ಟ ಸರಕಾರವೆನ್ನುವುದು ಎಂಬುದೇ ಅರ್ಥವಾಗುತ್ತಿಲ್ಲ!  ಹಾಗಾದರೆ ಕೇವಲ ರೂಪಾಯಿಗೊಂದರಂತೆ ಅಕ್ಕಿಹಂಚುವುದನ್ನೇ ಇಲ್ಲಿ ಅನ್ನ ಕೊಟ್ಟ ಅಣ್ಣ ಎನ್ನಲಾಗಿದೆಯೇ!? ಒಂದು ವೇಳೆ ಹೌದು ಎನ್ನುವುದಾದರೆ ಇನ್ನೊಂದೆಡೆಯಲ್ಲಿ ಇದೇ ಯೋಜನೆಯು ದುಡಿಯಲು ಅರ್ಹರಾದವರನ್ನೂ ಕೈಕಟ್ಟಿ ಕೂರಿಸಿ,ಸೋಮಾರಿಗಳನ್ನಾಗಿಸಿದೆಯಲ್ಲಾ ಅದಕ್ಕೇನನ್ನಬೇಕು!? ರಾಜ್ಯದ ಬಹುತೇಕ ಕಡೆಗಳಲ್ಲಿ ಬಡತನದ ರೌದ್ರ ನರ್ತನ ಇನ್ನೂಇದೇ,ಅನ್ನ ಭಾಗ್ಯದಿಂದ ಅದೆಷ್ಟೋ ಬಡವರಿಗೆ ಜೀವನ ದೊರೆತಿದೆ,ಇದರಿಂದಲೇ ಬಡತನದ ಬೇಗೆಯು ಸಾಕಷ್ಟು  ಕಡಿಮೆಯಾಗಿದೆ, ಕಡಿಮೆಯಾಗಲಿದೆ ಎಂದು ವಾದಿಸುವವರಿದ್ದಾರೆ. ಆದರೆ ವಿಚಿತ್ರವೇನೆಂದರೆ ಈ ನಮ್ಮರಾಜ್ಯ ಸರಕಾರವು ಬಡವನಿಗೆ ಪುಕ್ಸಟ್ಟೆ ಹಂಚಲುಪ್ರಾರಂಭಿಸಿದಂದಿನಿಂದ ರಾಜ್ಯದ  ಬಡವರ ಸಂಖ್ಯೆ ‘ದಾಖಲೆ’ಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ! ಅಂದರೆ ಅನ್ನ ಭಾಗ್ಯದಂತಹ ಕೊಡುಗೆಗಳು ಅದೆಷ್ಟೋ ಆರ್ಥಿಕ, ಸಾಮಾಜಿಕಅವ್ಯವಹಾರಗಳಿಗೆ ಕಾರಣೀಭೂತವಾಗಿದೆ ಎಂಬುದಕ್ಕೆ ಇದು ಸಾಕ್ಷಿ. ಅಷ್ಟೇ ಅಲ್ಲದೆ ಸಿಗುವ ಒಂದು ರೂಪಾಯಿಯ ಅಕ್ಕಿಯನ್ನು ಅದೇ ಅಂಗಡಿಗೆ ಅಧಿಕ ಬೆಲೆಗೆ ಮಾರುವ ಬಡವರು, ಹಾಗೇನೇಸರಕಾರದಿಂದ ಪಡೆಯುವ ಇದೇ ಅಕ್ಕಿಯನ್ನು ಅಧಿಕ ಬೆಲೆಗೆ ಮಾರುವ ‘ನ್ಯಾಯಬೆಲೆ ಅಂಗಡಿಗಳೂ ನಮ್ಮಲ್ಲಿ ಸಾಕಷ್ಟು ಹುಟ್ಟಿಕೊಂಡಿವೆ! ಇವೆಲ್ಲಾ ಅವ್ಯವಹಾರಗಳಿಗೆ ಕಾರಣವೇನು? ಬಡವನೆಂದುಘೋಷಿಸಿಕೊಂಡರೆ, ಸಾಕ್ಷಿಗೊಂದು  ಬಿಪಿಎಲ್ ಕಾರ್ಡ್ ಹೊಂದಿದ್ದರೆ ಸರಕಾರಿ ಸವಲತ್ತುಗಳನ್ನು ಒಂದರ ಹಿಂದೆ ಒಂದರಂತೆ ಬಾಚಿಕೊಳ್ಳುತ್ತಲೇ ಇರಬಹುದು ಎಂದರಿತಿರುವ ಜನಸಾಮಾನ್ಯನಮನೋಸ್ಥಿತಿಯಲ್ಲವೇ? ಇದರ ಪರಿಣಾಮವೇ ಇಂದು ನಮ್ಮ ರಾಜ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ ಬಿಪಿಎಲ್, ಅಂತ್ಯೋದಯ ಕಾರ್ಡ್ ಗಳ ಸಂಖ್ಯೆ ಏರಿರುವುದು! ಹಾಗಾದರೆ ದಿನ ಸರಿದಂತೆಕರ್ನಾಟಕಲ್ಲಿ ಬಡತನ ಏರುತ್ತಿದೆ ಎಂದು ನಂಬಬೇಕೇ!?

ಇರಲಿ, ಪರ ವಿರೋಧಗಳು, ನಡೆಯುತ್ತಿರುವ ಅವ್ಯವಹಾರಗಳನ್ನೆಲ್ಲಾ ಪಕ್ಕಕ್ಕಿಡೋಣ. ಆದರೆ ಈ ಪುಕ್ಸಟ್ಟೆ ಕೊಡುಗೆಗಳ ಮೂಲಕ ಹೊರ ಬರುತ್ತಿರುವ ಹೊಸ ಹೊಸ ಯೋಜನೆಗಳ ನಿಜವಾದಉದ್ದೇಶವೇನೆಂದು ಒಂದರೆ ಕ್ಷಣ ಯೋಚಿಸಿದರೆ ಅದಕ್ಕೆ ಸಿಗುವ ಉತ್ತರವೇನು? ಬಡತನ ನಿವಾರಣೆಯೇ ಅಥವಾ ಬಡವನ ವಶೀಕರಣವೇ!?ಖಂಡಿತಾ ಈ ನಿಟ್ಟಿನಲ್ಲಿ ನಾವೆಲ್ಲಾ ಬುದ್ದಿವಂತರಾಗಬೇಕಿದೆ.ಜಾಗೃತರಾಗಬೇಕಿದೆ. ಕಾಲೇಜಿನಲ್ಲಿರುವಾಗ ಉಪನ್ಯಾಸಕರೊಬ್ಬರು ಮಾತೊಂದು ಹೇಳುತ್ತಿದ್ದರು. ಅದೇನೆಂದರೆ ಸಾಲ ಎತ್ತಿ ಮನೆಯಲ್ಲಿ  ಬಿರಿಯಾನಿ ತಿನ್ನಿಸುವವರನ್ನು ಬೆಂಬಲಿಸುತ್ತಾ ಕೂತರೇಮುಂದೊಂದು ದಿನ ದಿವಾಳಿಯಾಗಬೇಕಾಗುತ್ತದೆಯೆಂದು! ಈ ಸತ್ಯ ಅರಿವಾಗಬೇಕಾದರೆ  ನಾವು ಮೊದಲು ನಮ್ಮತನವನ್ನು ಗಟ್ಟಿಯಾಗಿ ಉಳಿಸಿಕೊಳ್ಳಬೇಕು. ಒಂದು ನೋಟು, ಒಂದು ಬಾಟ್ಲಿಗೆ ನಮ್ಮ ವೋಟನ್ನು ಮಾರುವುದು ಹೇಗೆ ಅಸಹ್ಯವೋ ಹಾಗೇನೇ ಆಸೆ ಆಮಿಷಗಳಿಗೆ ನಮ್ಮತನವನ್ನು ಮಾರಿಕೊಂಡು ಅತ್ತ ವಾಲುವುದು, ಯೋಜನೆಯ  ಹಿಂದೆಇರುವ ‘ಯೋಚನೆ’ಯನ್ನು ಮರೆತು ಬಿಡುವುದುಖಂಡಿತಾ ನಮ್ಮತನಕ್ಕೆ ಶೋಭೆಯಾಗಲ್ಲ! ಮೇಲಾಗಿ ಪುಕ್ಸಟ್ಟೆ ಸಿಗುವ ಭಿಕ್ಷಾನ್ನಕ್ಕಿಂತಲೂ ದುಡಿದು ತಿನ್ನುವ ಒಂದೊತ್ತಿನ ಊಟವೇ ಮಾನವತೆಯಲ್ಲಿ ಶ್ರೇಷ್ಠವಾದುದು ಎಂಬ ಸತ್ಯ ನಮಗೆಲ್ಲಾಅರಿವಾಗಬೇಕು. ಇದು ಸಾಧ್ಯವಾದರೆ ಮಾತ್ರ ಅಲ್ಲಿ ಪ್ರಜಾಪ್ರಭುತ್ವಕ್ಕೆ ಬೆಲೆ. ಇಲ್ಲವೆಂದರೆ ಅದು ದುಡ್ಡಿದ್ದವನು ನಡೆಸುವ ಜಾತ್ರೆಯಾಗುತ್ತದೆಯಷ್ಟೇ!

  • Prasad Kumar, Marnabail

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!