ಅಂಕಣ

ಪ್ರಶಸ್ತಿ ವಾಪಾಸ್ಸು ಮಾಡುವುದು ಸಾಹಿತಿಗಳಿಗೆ ಔಚಿತ್ಯವೇ?

“ನನಗೆ ಎರಡನೇ ತರಗತಿಯಲ್ಲಿದ್ದಾಗ ಮಕ್ಕಳ ದಿನಾಚರಣೆ ಪ್ರಯುಕ್ತ ನಡೆಸಿದ ಸ್ಪರ್ಧೆಯಲ್ಲಿ ಬಂದ ಬಹುಮಾನವನ್ನು ನಾನು ಹಿಂದಿರುಗಿಸುತ್ತೇನೆ.” “ನನ್ನ ಎಸ್ ಎಸ್ ಎಲ್ ಸಿ ಅಂಕಪಟ್ಟಿಯನ್ನು ನಾನು ಹಿಂದಿರುಗಿಸಬೇಕೆಂದಿದ್ದೇನೆ.” “ಹ್ವಾಯ್ ನನಗೂ ಒಂದು ಪ್ರಶಸ್ತಿ ಕೊಡಿ ಮಾರಾಯ್ರೆ ನಾನೂ ಅದನ್ನ ವಾಪಸ್ ಕೊಟ್ಟು ದೊಡ್ಡ್ ಮನುಷ್ಯ ಆಗ್ತೇನೆ”. “ವಾಪಾಸ್ ಕೊಡೋಣ ಅಂದ್ರೆ ನನ್ನತ್ರ ಯಾವ್ ಪ್ರಶಸ್ತಿನೂ ಇಲ್ಲ ಮಾರಯ್ರೆ……”-ಇದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶಗಳು ಅರ್ಥಾತ್ ಕುಹಕಗಳು. ಹೌದು ಕೆಲ ದಿನಗಳಿಂದನಮ್ಮ ದೇಶದ ಘನತೆವೆತ್ತತಂತಹ ವಿವಿಧ ಸಾಹಿತಿಗಳು ತಮಗೆ ಬಂದಂತಹ ಸಾಹಿತ್ಯ ಪ್ರಶಸ್ತಿಗಳನ್ನು ಹಿಂತಿರುಗಿಸುವುದರ ಬಗ್ಗೆ ಸಾಮಾಜಿಕ ವಲಯದಿಂದ ಬಂದಂತಹ ಪ್ರತಿಕ್ರಿಯೆ.ಇದೊಂದು ವಿಚಿತ್ರ ರೀತಿಯ ಪ್ರತಿಭಟನೆಯಂತೆ. ಅದೂ ಕೇಂದ್ರ ಸರ್ಕಾರದ ವಿರುದ್ಧ ಅಂದರೆ ನರೇಂದ್ರ ಮೋದಿಯವರ ವಿರುದ್ಧ ಸಾಹಿತಿಗಳು ಸಾರಿರುವ ಯುದ್ಧ.

ಸರಿ ಹಾಗಾದರೆ, ಯುದ್ಧ ಎಂದಮೇಲೆ ಅದಕ್ಕೊಂದು ಕಾರಣ ಬೇಕಲ್ಲವೇ? ಹೇಗೆ ಭಾರತ-ಪಾಕಿಸ್ಥಾನ ಯುದ್ಧಕ್ಕೆ ಕಾಶ್ಮೀರ ಕಾರಣವೋ ಅಂತೆಯೆ ಇದಕ್ಕೂ ಒಂದು ಇರಬೇಕಲ್ಲಾ…. ಇದೆ, ಖಂಡಿತವಾಗಿಯೂ ಬಲವಾದ ಕಾರಣವೇ ಇದೆ. ಅದೇಂದೆರೆ ಕರ್ನಾಟಕದ ಖ್ಯಾತ ಸಾಹಿತಿ ಡಾ.ಎಮ್ ಎಮ್ ಕಲ್ಬುರ್ಗಿಯವರ ಹತ್ಯೆ ಹಾಗೂ ಉತ್ತರ ಪ್ರದೇಶದ ದಾದ್ರಿಯಲ್ಲಿ ನಡೆದ ಕೋಮು(?)ಗಲಭೆ. ಕಲ್ಬುರ್ಗಿಯವರ ಸಾವಿಗೆ ಸಂತಾಪ ಸೂಚಿಸಿ ಪ್ರಶಸ್ತಿ ವಾಪಾಸ್ಸು ಮಾಡುವುದಾದರೆ ಸರಿ ಅಂಬೋಣ.ಆದರೆ ಅದನ್ನು ಮೋದಿಯವರನ್ನು ವಿರೋಧಿಸುವುದಕ್ಕೆ ವಾಪಸ್ಸು ಮಾಡುತ್ತಿದ್ದಾರಲ್ಲಾ ಇದಕ್ಕೇನು ಹೇಳಬೇಕು? ದಾದ್ರಿಯಲ್ಲಿ ಮುಸಲ್ಮಾನರ ಹತ್ಯೆಯಾಯಿತು ಎಂಬ ಕಾರಣಕ್ಕೆ ಪ್ರಶಸ್ತಿ ಹಿಂತಿರುಗಿಸಿದರೆ ಒಪ್ಪೋಣ ಅದನ್ನು ಬಿಟ್ಟು ಇದೂ ಕೂಡ ಮೋದಿ ವಿರೋಧಿಸುವುದಕ್ಕಾಗಿ ಎಂದರೆ ಅರ್ಥವಿದೆಯೇ?

ಗೋದ್ರಾ ಹತ್ಯೆಗೆ ಅಂದಿನ ಗುಜರಾತ್ ಮುಖ್ಯಮಂತ್ರಿ ಮೋದಿ ಕಾರಣ ಎಂದರು. ಆದರೆ ಇಂದು ದಾದ್ರಿ ಗಲಭೆಗೆ ಕೇಂದ್ರ ಸರ್ಕಾರದ ಮೋದಿ ಕಾರಣ ಎನ್ನುತ್ತಿದ್ದಾರೆಯೇ ಹೊರತು ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕಾರಣ ಎಂದು ಯಾವೊಬ್ಬನೂ ಹೇಳುತ್ತಿಲ್ಲ.ಕಲ್ಬುರ್ಗಿ ಹತ್ಯೆಗೆ ಸಿದ್ದರಾಮಯ್ಯನವರ ಸರ್ಕಾರದ ವೈಫಲ್ಯತೆ ಕಾರಣ ಎಂದು ಯಾರಾದರೂ ಹೇಳುತ್ತಿದ್ದಾರೆಯೆ? ಇಲ್ಲ ಅದಕ್ಕೂ ಪ್ರಧಾನಿ ನರೇಂದ್ರ ಮೋದಿಯೇ ಕಾರಣವಂತೆ. ಎಲ್ಲಿಯ ನರೇಂದ್ರ ಮೋದಿ ಎಲ್ಲಿಯ ಕರ್ನಾಟಕ? ಯಾರು ಹುಟ್ಟಿದರೂ ಯಾರೂ ಸತ್ತರೂ ಮೋದಿಯೇ ಕಾರಣ. ಇದು ಇಂದಿನ ನಮ್ಮ ಬುದ್ಧಿ ಇಲ್ಲದ ಲದ್ಧಿಜೀವಿಗಳು ನೀಡುವ ಹೇಳಿಕೆಗಳು.ಈ ಹೇಳಿಕೆಯಲ್ಲಿ ಹುರುಳಿದೆಯೇ?ಒಂದು ವೇಳೆ ಮೋದಿ ಪ್ರಧಾನಿಯಾಗಿರುವ ಕಾರಣ, ದೇಶದಲ್ಲಿ ಏನೆ ಅಹಿತಕರ ಘಟನೆ ನಡೆದರೂ ಅದಕ್ಕೆ ಪ್ರಧಾನಿಯೇ ನೇರ ಹೊಣೆ ಎನ್ನುವುದಾದರೆ ಭೋಪಾಲ್ ದುರಂತಕ್ಕೆ ಅಂದಿನ ಕಾಂಗ್ರೆಸ್ ನಾಯಕರು ಕಾರಣವೇ? ಪಾಕಿಸ್ಥಾನ ಹಾಗೂ ಚೀನಾ ಯುದ್ಧಕ್ಕೂ ಅಂದಿನ ಪ್ರಧಾನಿಗಳೇ ಕಾರಣವೇ? ಕುಂಭಕೋಣಂ ಶಾಲಾ ಗ್ಯಾಸ್ ದುರಂತಕ್ಕೆ ಮನಮೋಹನ್ ಸಿಂಗ್ ಕಾರಣರೇ? ಭೀಕರ ಸುನಾಮಿಗೂ ಸಿಂಗ್ ರೇ ಕಾರಣರೇ? ಮುಂಬೈ ದಾಳಿಗೂ ಪ್ರಧಾನಿಯೇ ಕಾರಣರೋ?ಹೇಳಿ ಬುದ್ಧಿಜೀವಿಗಳೇ ಉತ್ತರಿಸಿ…

ದಾದ್ರಿ ಗಲಭೆಯಲ್ಲಿ ಮುಸಲ್ಮಾನರ ಹತ್ಯೆಯಾಯಿತು ನಿಜ ನಮಗೂ ಅದರ ಬಗ್ಗೆ ಸಂತಾಪವಿದೆ.ಆದರೆ ಆ ಘಟನೆಯ ಬಗ್ಗೆ ಬಾಯಿಗೆ ಬಂದಂತೆ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುತ್ತಿರುವಿರಲ್ಲಾ ಆದರೆ 2500 ಸಿಖ್ಖರನ್ನು ಬರ್ಬರವಾಗಿ ಹತ್ಯೆಮಾಡಿದಾಗ ಎಲ್ಲಿ ಹೋಗಿತ್ತು ನಿಮ್ಮ ಈಗಿನ ರೋಷ ಆವೇಶಗಳು?ಬಾಯಲ್ಲೇನು ಕಡುಬು ತುರುಕಿಕೊಂಡು ಕೂತಿದ್ದಿರೋ? ಏಕೆ ಮುಸಲ್ಮಾನರು ಮಾತ್ರ ಮನುಷ್ಯರೇ ಸಿಖ್ಖರೇನು ಅಲ್ಲವೇ? ಅಥವಾ ಕಲ್ಬುರ್ಗಿಯವರ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ಭಾಷಣ ಮುಂತಾದವುಗಳನ್ನು ಮಾಡುವ ನಿಮಗೆ ಸಾಲು ಸಾಲಿನಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಕಾಣುತ್ತಿಲ್ಲವೇ? ಅನ್ನದಾತನಿಗಾಗಿ ನಿಮ್ಮ ಮನ ಮಿಡಿಯುವುದಿಲ್ಲವೇ? ಅಥವಾ ನಿಮ್ಮನ್ನು ಆಡಿಸುತ್ತಿರುವ ನಿಮ್ಮ ರಾಜಕೀಯ ನಾಯಕರು ಇದರ ಬಗ್ಗೆ ಏನು ಹೇಳಿಲ್ಲವೇ?

ಎಲ್ಲವನ್ನೂ ಗಮನಿಸಿದರೆ ಗೊತ್ತಾಗುವುದಿಷ್ಟೇ, ಇದರ ಹಿಂದಿರುವುದು ಕೇವಲ ರಾಜಕೀಯ ಅಜೆಂಡಾ.ಹೌದು ರಾಜಕೀಯ ಪ್ರೇರಿತರಾಗಿ ಬುದ್ಧಿಜೀವಿಗಳು ಎನಿಸಿಕೊಂಡವರು ಮಾಡುತ್ತಿರುವ ಹೀನ ಕೆಲಸ.ಒಬ್ಬ ವ್ಯಕ್ತಿ ಅಥವಾ ಒಂದು ಸಮಾಜವನ್ನು ತುಳಿಯಲು ರಾಜಕೀಯವಾಗಿ ಸಾಹಿತಿಗಳನ್ನು ಬಳಸಿಕೊಳ್ಳುತ್ತಿರುವುದು ನಿಜಕ್ಕೂ ದುರದೃಷ್ಟಕರ. ರಾಜಕೀಯವೇನೋ ನೀಚಮಟ್ಟಕ್ಕೆ ಇಳಿಯುತ್ತದೆ ಆದರೆ ನಮ್ಮ ಸೋ ಕಾಲ್ಡ್ ಸಾಹಿತಿಗಳಿಗಾದರೂ ಬುದ್ಧಿಬೇಡವೇ? ಮೊದಲೇ ಪ್ರಶಸ್ತಿ ಗಿಟ್ಟಿಸಿಕೊಂಡಿರುವುದು ರಾಜಕೀಯ ನಾಯಕರುಗಳಿಗೆ ಬಕೆಟ್ ಹಾಕಿ ,ಅಂದ ಮೇಲೆ ಅವರು ಹೇಳಿದ್ದಾದರೂ ಮಾಡಬೇಕಾಗಿರುವು ಎಷ್ಟೆಂದರೂ ನ್ಯಾಯವೇ ಬಿಡಿ. ರಾಮ-ಸೀತೆಗೆ , ದೇವರಿಗೆಲ್ಲಾ ಬಾಯಿಗೆ ಬಂದಂತೆ ಬೈದು ಪಡೆದ ಪ್ರಶಸ್ತಿ, ಮರಳಿಸುವಾಗ ಪಾಪ ಅದೆಷ್ಟು ಬೇಸರಿಸಿಕೊಂಡಿದ್ದಾರೋ ಆ ಭಗವಾನನೇ ಬಲ್ಲ.

ಒಂದನ್ನು ಮರೆಯಬೇಡಿ ಸಾಹಿತಿಗಳೆ, ನಿಮಗೆ ಪ್ರಶಸ್ತಿ ಬಂದಿರುವುದು ನಿಮ್ಮ ಸಾಹಿತ್ಯ ಕ್ಷೇತ್ರದ ಗಣನೀಯವಾದಂತಹ ಸಾಧನೆಗೆ. ಅಂದರೆ ನೀವು ಸಾಹಿತ್ಯ ಸಾಧಕರು ಎಂದರ್ಥ. ಜನ ಸಾಮಾನ್ಯರಿಗಿಂತ ತಿಳುವಳಿಕೆಯಲ್ಲಿ ಕೊಂಚ ಭಿನ್ನವಾದವರು,ಪ್ರಬುದ್ಧರಾದವರು ಎನ್ನಬಹುದು.ಸಮಾಜ ನಿಮಗೊಂದು ಗೌರವ ಸ್ಥಾನವನ್ನು ಕೊಟ್ಟಿದೆ. ಅದನ್ನು ಸ್ವತಃ ನೀವುಗಳೇ ಹಾಳುಮಾಡುಕೊಳ್ಳುತ್ತಿದ್ದೀರಿ.ಜನರಿಗೆ ಉಪದೇಶ ಮಾಡುವ ಸಾಮರ್ಥ್ಯ ಇರುವ ನೀವು ಜನರಿಂದ ಉಪದೇಶಿಸಿಕೊಳ್ಳುವ ಪರಿಸ್ಥಿತಿಗೆ ನಿಮ್ಮನ್ನು ತಂದುಕೊಂಡಿದ್ದೀರಿ.ಸಾಹಿತ್ಯಕ್ಕೆ ಜಾತಿ-ಮತಗಳಿಲ್ಲ. ಅಂದ ಮೇಲೆ ನೀವುಗಳ್ಯಾಕೆ ಜಾತಿ ಮತಗಳ ಮೇಲೆ, ಜನಸಾಮಾನ್ಯರ ನಂಬಿಕೆಯ ಮೇಲೆ ಚೆಲ್ಲಾಟವಾಡುತ್ತೀರಿ? ಸರ್ಕಾರ ಕೊಟ್ಟಿರುವ ಪ್ರಶಸ್ತಿಯನ್ನು ಹಿಂತಿರುಗಿಸುತ್ತಿದ್ದೀರಲ್ಲಾ ಅಂತೆಯೆ ಸರ್ಕಾರ ಕೊಟ್ಟಿರುವ ಸವಲತ್ತುಗಳನ್ನೂ ಹಿಂತಿರುಗಿಸುವಿರೋ? ಇದು ನಿಮ್ಮ ಗೌರವಕ್ಕೆ ಇದು ಸರಿಬರುತ್ತದೋ? ನಿಮ್ಮಂತಹ ಕೆಲ ಅವಿವೇಕಿಗಳು ಮಾಡುವ ಇಂತಹ ಕೆಲಸದಿಂದ ಎಲ್ಲಾ ಸಾಹಿತಿಗಳನ್ನೂ ಸಮಾಜ ಒಂದೇ ದೃಷ್ಟಿಯಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಇನ್ನಾದರೂ ದಯವಿಟ್ಟು ಸಾಹಿತಿಗಳ ಸೋಗನ್ನು ಹಾಕಿರುವ ನೀವುಗಳು ನಿಜವಾದ ಸಾಹಿತ್ಯಕ್ಕೆ ಬೆಲೆಕೊಡುವ ಸಾಹಿತಿಗಳಾಗಿ ಸಾಹಿತ್ಯಾಭಿವೃದ್ಧಿಯಲ್ಲಿ ತೊಡಗಿಕೊಳ್ಳಿ ಎಂದು ಆಶಿಸುತ್ತೇನೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!