ಅಂಕಣ

ಕಳೆದೋದ ಗೆಜ್ಜೆಯ ದನಿ

ಬರೆದು ಬರಿದಾಗುವ ಹಂಬಲ ಅವಳಿಗೆ. ಆದರೂ ಬರಡಾಗಿ ಬಿಡುವೆನೇನೋ ಎಂಬ ಭಯ ಕೂಡ. ಭಾವಯಾನದ ಪಯಣದಲಿ ಜೊತೆಯಾದ ಜೀವ ದೂರವಾಗಿತ್ತು. ಅರಿವಿಲ್ಲದೆ ಬೆರೆತೆ ಸ್ನೇಹ ಪ್ರೀತಿಯ ಕನವರಿಕೆಯ ಕೈ ಹಿಡಿದಿತ್ತು. ಅದೇ ಆರಂಭ ಅವಳು ಅವನೆದುರು ಸೋಲಲಾರಂಬಿಸಿದ್ದು. ಸಂಭ್ರಮದ ಬದುಕಿನಲ್ಲಿ ಅವನ ಪಾಲಿರಲೆಂದು ಅವಳ ನಿರೀಕ್ಷೆ. ಅವನಿಗೆ..? ಪ್ರೀತಿಯ ಪರಾಕಾಷ್ಠೆಯ ಅರಿವಾಗಲೇ ಇಲ್ಲ.ಕಣ್ಣೊಳಗಿನ ಕನಸು ಕಾಣಲೇ ಇಲ್ಲ. ತನ್ನ ಮನಸ್ಸಲ್ಲೇ ನೆಲೆಯಾದ ಮನಸ್ಸಿಗೆ ಅವ ಮನಸು ಮಾಡಲೇ ಇಲ್ಲ. ಪ್ರೀತಿ ಸತ್ಯವಾದರೆ ಬಿಟ್ಟು ನಿಲ್ಲೆಂಬುದು ಅವನ ಹಟ. ಅವಳೋ ಸತ್ಯದ ಪ್ರೀತಿಗೆ ಜೊತೆಯಾಗೆಂದು ಬೇಡಿ ಸೋತದ್ದಾಗಿತ್ತು. ಅವ ಎಲ್ಲ ಪರಿಧಿಗಳ ಮೀರಿ ನಿಂತಿದ್ದ; ಬರಡಾಗಿ ಬಿಟ್ಟಿದ್ದ ಸಂಪೂರ್ಣವಾಗಿ. ದೂರದ ಪ್ರೀತಿಯೆದುರು ಸೋತು ನಿಲ್ಲುವ ನೆಪದಲ್ಲಿ ಕೈಗೆಟುಕುವ ಪ್ರೀತಿಯನ್ನು ಕಾಲಕೆಳಗೆಳೆದು ನಿಂತಿದ್ದ. ಅವನ ಮುಖವೀಗಲೂ ನೆನಪಾಗುತ್ತಿಲ್ಲ ಅವಳಿಗೆ, ನಗುತ್ತಿದ್ದನೋ, ವಿಷಾದದ ಛಾಯೆಯೋ, ಸೋಲಿನ ನೆರಳೋ ನೆನಪಾಗದೆ ನರಳುತ್ತಿದ್ದಳು.

ಅವನ ಕವನಗಳಲ್ಲಿ ತನ್ನನ್ನೇ ಕಂಡುಕೊಂಡ ಭ್ರಮೆಯಲ್ಲಿ ಪ್ರೀತಿಯೆಡೆಗೆ ಸಾಗಿತ್ತು ದುರ್ಬಲ ಮನಸ್ಸು. ಕೈಗೆಟುಕಿತು ಖಾಲಿ ಕಾಗದವೊಂದು. ಅದೇಕೋ ಗೀಚಲು ಕುಳಿತವಳಿಗೆ ಎಲ್ಲ ಶೂನ್ಯವಾಗಿತ್ತು. ಸ್ವಚ್ಛ ಶೂನ್ಯ. ಹೊಸ ಅಧ್ಯಾಯದ ಶುರುವಿನಂತೆ ಲೇಖನಿ ಓಡತೊಡಗಿತ್ತು. ಮನದಾಳದ ಮಾತು ಅಲ್ಲೇ ಉಳಿಯಿತು. ಹಳೆಯ ನೆನಪು ಹೊರ ಬಂದದ್ದು.

ಅಂದೊಮ್ಮೆ ಕದ ತಟ್ಟಿ ನಿಂತಿದ್ದೆ ಮನದ ಬಾಗಿಲಲ್ಲಿ ನಕ್ಕು. .
ಕಿಡಕಿ ತೆರೆದು ಮುಖ ನೋಡಿ ಮುಚ್ಚಿಬಿಡಬಹುದಿತ್ತು ಬಾಗಿಲನು ನಾ. .
ಮನಸೇಕೋ ಸೋತು ನಿಂತಿತು ನಿನ್ನ ಮುಗ್ಧ ಕರೆಯೆದುರು,
ನಿನ್ನ ಕಂಗಳ ಹೊಳಪಿನೆದುರು. .
ನನ್ನ ಕೈ ಸಾಗಿತು ಬಾಗಿಲ ಬಿರಡದೆಡೆಗೆ. .
ಕದ್ದು ನಿಂತು ಪ್ರೀತಿಸಿಕೊಂಡೆ. .
ಹೇಳದೆ ಕೇಳದೆ ಕನಸುಗಳ ಪೇರಿಸಿಕೊಂಡೆ. .
ನನಗರಿವಿಲ್ಲದೆ ನಿನ್ನೊಳಗೆ ಸೇರಿಕೊಂಡೆ. .
ನೆನಪಾಗುತ್ತಿದೆ ಚಂದದ ಗೆಜ್ಜೆಯ ನಾದ, ಬಣ್ಣದ ನವಿಲುಗರಿ. .
ಅವೇ ಪುಟ್ಟ ಕಿಡಕಿ, ಸೂಸುವ ಸೋನೆ ಹನಿ. .
ನಿನ್ನೆದೆಯ ಬಡಿತ, ಅರ್ಥವಿರದ ಪದಗಳ ಭಾವಯಾನದ ತುಡಿತ. . . . .

ಅಷ್ಟರಲ್ಲೇ ಬಿಟ್ಟೊಡಿದ ಹುಡುಗ ನೆನಪಾದ. ಮುಗಿದ ಕವನದ ಸಾಲುಗಳ ಮಧ್ಯ ಕಣ್ ಹನಿಯೊಂದು ಶಾಶ್ವತ ಸ್ಥಾನ ಪಡೆದಿತ್ತು. ವಿರಹವೆಂದರೆ ಹೀಗೆಯೇ.ಎಲ್ಲ ಖುಷಿಯಲ್ಲಿ ನೆನಪಾಗಿ ಅಳಿಸುತ್ತವೆ. ನೋವಲ್ಲಿ ನೆನಪಾಗಿ ನಗಿಸಲೂಬಹುದು. ಹೊಸ ಪದಗಳಿಗೆ ಹುಡುಕಾಟವೇ ಇಲ್ಲ. ಹಳೆಯ ನೋವಿಗೆ ಹಳೆಯ ಪದಗಳದೇ ಸಾಂಗತ್ಯ. ಅವೇ ನಿರಂತರ ಮೌನ, ನೀರವತೆಯ ರಾತ್ರಿ, ನಕ್ಷತ್ರಗಳ ಹಾದಿ, ದಿವ್ಯ ಬೆಳದಿಂಗಳು, ದೂರದ ದಿಗಂತ, ವಿರಹ ಗಾನ, ಮೌನ ರೋದನ, ನಿರ್ಲಿಪ್ತ ಮನಸ್ಸು, ಅಂತ್ಯವಿರದ ನೋವು, ತೀರದ ದಾಹ, ಹುಚ್ಚು ಹೊಯ್ದಾಟ, ಕಡಲ ಕಿನಾರೆ. .

ಅವ ಹೆಜ್ಜೆ ಮೂಡಿಸಿ ಮುಂದೆ ಸಾಗಿದ್ದ. ಇಬ್ಬರ ದಾರಿ ಬೇರಾಗಿತ್ತು. ನಿಚ್ಚಳ ಹೆಜ್ಜೆಗಳು ಅವನ ಗುರಿಯೆಡೆಗೆ, ಅವನೊಬ್ಬನ ನಲಿವಿನ ಹಿಮಾಲಯದೆಡೆಗೆ.
ಅವಳೂ ಹಾದಿ ಹಿಡಿದಿದ್ದಳು. ಅವನ ನಲಿವಿಗಾಗಿ ಒಂಟಿತನವೆಂಬ ಹಿಮಾಲಯದ ತುತ್ತತುದಿಯೆಡೆಗೆ, ಏಕಾಂಗಿಯಾಗಿ……… ಹೆಜ್ಜೆ ಮೂಡಿಸಲು ತ್ರಾಣ ಉಳಿದಿರಲಿಲ್ಲ…………

– Pallavi Hegade

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!