ಪ್ರಚಲಿತ

ಚರ್ಚು ಮಸೀದಿಗಳಿಗಿಲ್ಲದ ಮುಜರಾಯಿ ದೇವಸ್ಥಾನಗಳಿಗೇಕೆ?

ಇತ್ತೀಚಿಗಷ್ಟೇ ನಾನು ನನ್ನ ಸ್ನೇಹಿತರ ಜೊತೆಗೂಡಿ ತುಮುಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದೆ. ಅದು ನನ್ನ ಮೊದಲ ಬಾರಿಯ ಭೇಟಿಯಾಗಿತ್ತು. ಸಿದ್ದಗಂಗಾ ಮಠದ ಸಾಮಾಜಿಕ ಕಾರ್ಯಗಳು ನಿಜಕ್ಕೂ ಶ್ಲಾಘನೀಯ. ಶ್ರೀ ಮಠದಲ್ಲಿ ಪ್ರತಿನಿತ್ಯ ಮೂವತ್ತು ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನ ದಾಸೋಹದ ವ್ಯವಸ್ಥೆ ಇದೆ. ಒಂಬತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಠದಲ್ಲಿ ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ಯಾವ ಸರ್ಕಾರಗಳು ಮಾಡದ ಕೆಲಸವನ್ನು ಕಾಯಕ ಯೋಗಿ ಶಿವಕುಮಾರ ಸ್ವಾಮಿಗಳ ನೇತೃತ್ವದ ಮಠ ಮಾಡುತ್ತಿದೆ.  ಸಾವಿರಾರು ಮನೆಗಳನ್ನು ಬೆಳಗಿಸುತ್ತಿರುವ ಇಂತಹ ಮಠವನ್ನು ಸರ್ಕಾರದ ಸುಪರ್ದಿಗೆ ವಹಿಸಿದರೆ ಇದೇ ಸೇವೆಯನ್ನು ಶ್ರೀ ಮಠದಿಂದ ನಿರೀಕ್ಷಿಸಲು ಸಾಧ್ಯವೇ?

ಇನ್ನೊಂದು ಉದಾಹರಣೆ, ನಾನು ಪ್ರತಿ ವರ್ಷ ಭಾರತದ ಮೋಕ್ಷದಾಯಕ ನಗರಗಲ್ಲಿ ಒಂದಾದ ಕಂಚಿ ನಗರಕ್ಕೆ ಭೇಟಿ ನೀಡುತ್ತೇನೆ. ಕಂಚಿಯಲ್ಲಿ ಕಾಮಕೋಟಿ ಮಠದ ಆಡಳಿತದಲ್ಲಿರುವ  ಕಂಚಿ ಕಾಮಾಕ್ಷಿ ದೇವಸ್ಥಾನ  ಕಂಚಿಯ ಪ್ರಮುಖ ದೇವಸ್ಥಾನ. ಇದು ಪವಿತ್ರ ಕ್ಷೇತ್ರವಾಗಿದ್ದು ಇಲ್ಲಿ  ಅಚ್ಚುಕಟ್ಟಾದ ಎಲ್ಲಾ ವ್ಯವಸ್ಥೆಗಳಿವೆ.ಭಕ್ತಿಯ ಶ್ರೇಷ್ಠ ತಾಣ ಕಾಮಾಕ್ಷಿ ದೇವಸ್ಥಾನ.  ವರದರಾಜ ಪೆರುಮಾಳ್ ಮತ್ತು ಏಕಾಂಭರನಾಥ ದೇವಸ್ಥಾನಗಳು ಕಂಚಿಯಲ್ಲಿದೆ. ಆದರೆ ಕಾಮಾಕ್ಷಿ ದೇವಸ್ಥಾನದಲ್ಲಿರುವ ವ್ಯವಸ್ಥೆಗಳು ತಮಿಳುನಾಡು ಸರ್ಕಾರದ ಮುಜರಾಯಿ ಇಲಾಖೆಯ ಸುಪರ್ದಿಗೆ ಬರುವ ಈ ದೇವಸ್ಥಾನಗಳಲ್ಲಿ ಕಾಣಸಿಗುವುದಿಲ್ಲ.

ಈಗ ನಮ್ಮ ಕರ್ನಾಟಕ ಸರ್ಕಾರ ಧರ್ಮಸ್ಥಳ ದೇವಸ್ಥಾನವನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ವಹಿಸಲು ಹೊರಟಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಅದಕ್ಕಾಗಿ ಇಷ್ಟೆಲ್ಲಾ ಪೀಠಿಕೆ ನೀಡಬೇಕಾಯಿತು. ಇದೇ ಸಿದ್ದರಾಮಯ್ಯ ನೇತೃತ್ವದ ಸರಕಾರ 2013 ರಲ್ಲಿ ಉಡುಪಿ ಮಠವನ್ನು ಮುಜರಾಯಿ ಇಲಾಖೆಗೆ ಸೇರಿಸಲು ಹೊರಟಿತ್ತು. ಆದರೆ ಆ ಪ್ರಯತ್ನ ಯಶಸ್ವಿಯಾಗಲಿಲ್ಲ. ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನ ಸಾರ್ವಜನಿಕ ದೇವಾಲಯವಾಗಿದ್ದು ಜನರಿಂದ ದೇಣಿಗೆ ಪಡೆದುಕೊಳ್ಳುತ್ತಿರುವ, ಅಗಾಧ ಆದಾಯವಿರುವ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಯ ನಿಯಂತ್ರಣಕ್ಕೆ ತಂದು  ಆದಾಯ ಒಂದು ಕುಟುಂಬಕ್ಕೆ ಸೇರದೇ ಹಿಂದೂ ದೇವಸ್ಥಾನ ಮತ್ತು ಸಾರ್ವಜನಿಕ ಉದ್ದೇಶಗಳಿಗೆ ಪರಿಪೂರ್ಣವಾಗಿ ಉಪಯೋಗವಾಗುವುದು ಸಾಮಾಜಿಕ ನ್ಯಾಯ. ಹಾಗಾಗಿ ಶ್ರೀ ಕ್ಷೇತ್ರವನ್ನು ಮುಜರಾಯಿಗೆ ವಹಿಸಬೇಕು ಎಂಬುದು ಸರ್ಕಾರದ ವಾದ. ಇಲ್ಲಿ ಗಮನಿಸಬೇಕಾದ ಅಂಶಗಳು ದೇವಾಲಯದ ಆದಾಯದ ಸದುದ್ದೇಶ ಮತ್ತು ಸಾಮಾಜಿಕ ನ್ಯಾಯ.

ಆದಾಯದ ಸದುದ್ದೇಶವನ್ನು ತೆಗೆದುಕೊಂಡರೆ  ಶ್ರೀ ಕ್ಷೇತ್ರದಲ್ಲಿ ಧರ್ಮಸ್ಥಳ ಹೆಸರಿಗೆ ತಕ್ಕಂತೆ ಧರ್ಮಸ್ಥಳವಾಗಿದೆ.  ಅನ್ನದಾನ ವಿದ್ಯಾದಾನ ಮತ್ತು ಮುಂತಾದ ಸಾಮಾಜಿಕ ಕಾರ್ಯಗಳಿಗೆ ದೇವಳದ  ಆದಾಯವನ್ನು ಶ್ರೀ ಕ್ಷೇತ್ರ ಉಪಯೋಗಿಸುತ್ತಿದೆ.ಬರುವ ಭಕ್ತಾದಿಗಳಿಗೆ ಶ್ರೀ ಕ್ಷೇತ್ರದಲ್ಲಿ ಸಕಲ ವ್ಯವಸ್ಥೆಗಳಿವೆ. ಒಂದೇ ದಿನ ಲಕ್ಷಾಂತರ ಜನರಿಗೇ ಅನ್ನ ಸಂತರ್ಪಣೆ ಮಾಡಲಾಗುತ್ತಿದೆ.   ಧರ್ಮಸ್ಥಳ ಕ್ಷೇತ್ರದ ಗ್ರಾಮಭಿವೃದ್ದಿ ಯೋಜನೆ ಅದೆಷ್ಟೋ ಮನೆಗಳಿಗೆ ಬೆಳಕಾಗಿದೆ. ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ. ಶ್ರೀ ಕ್ಷೇತ್ರ ದೇವಳದಿಂದ ಬಂದ ಆದಾಯವನ್ನು ಸಮರ್ಪಕವಾಗಿ ಸಾರ್ವಜನಿಕ ಉದ್ದೇಶಗಳಿಗೆ ಪರಿಪೂರ್ಣವಾಗಿ ಬಳಸುತ್ತಿದೆ.ಸರ್ಕಾರ ಮಾಡದ ಕೆಲಸಗಳನ್ನು ಧರ್ಮಸ್ಥಳ ಮಾಡುತ್ತಿದೆ.  ಹೀಗಿದ್ದಾಗ ಶ್ರೀ ಕ್ಷೇತ್ರವನ್ನು ಮುಜರಾಯಿ ಇಲಾಖೆಗೆ ವಹಿಸುವ ಅವಶ್ಯಕತೆಯಾದರೂ ಏನಿದೆ?

ಇನ್ನು ಸಾಮಾಜಿಕ ನ್ಯಾಯಕ್ಕೆ ಬಂದರೆ, ನಮ್ಮ ಸರ್ಕಾರಗಳು ಬೊಕ್ಕಸದಿಂದ ಮುಸಲ್ಮಾನರ ಹಜ್ ಯಾತ್ರೆಗಳಿಗೆ ಸಹಾಯಧನವನ್ನು ನೀಡುತ್ತಿದೆ. ಹಿಂದೂ ದೇವಸ್ಥಾನಗಳಿಂದ ಬಂದ ಆದಾಯವನ್ನು ಹಿಂದೂ ದೇವಸ್ಥಾನಗಳ ಅಭಿವೃದ್ದಿ ಬಳಸದೆ ಹಜ್ ಯಾತ್ರಿಗಳಿಗೆ ನೀಡುವುದು ಯಾವ ಸಾಮಾಜಿಕ ನ್ಯಾಯ?

ದೇವಸ್ಥಾನಗಳ ಅಭಿವೃದ್ದಿ ಮತ್ತು ನಿರ್ವಹಣೆಗಾಗಿ ಧಾರ್ಮಿಕ ದತ್ತಿ ಇಲಾಖೆಯನ್ನು ಸ್ಥಾಪಿಸಲಾಗಿದೆ. ಆದರೆ ಇಲಾಖೆ ನಿರ್ವಹಿಸುತ್ತಿರುವ ದೇವಸ್ಥಾನಗಳಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ. ಸುಪ್ರಸಿದ್ದ ನಂಜನಗೂಡು ದೇವಸ್ಥಾನದಲ್ಲಿ ಯಾವುದೇ ಉತ್ತಮ ವ್ಯವಸ್ಥೆಗಳಿಲ್ಲ ಎಂದು ಮೊನ್ನೆ ಹಿರಿಯರೊಬ್ಬರು ತಮ್ಮ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದರು. ಮೂರು ವರ್ಷದ ಹಿಂದೆ ಬೆಂಗಳೂರಿನ ಪುರಾತನ ದೇವಸ್ಥಾನವಾದ ಬನಶಂಕರಿ ದೇವಸ್ಥಾನದಲ್ಲಿ ಕಳ್ಳತನವಾಗಿತ್ತು. ಮುಜರಾಯಿ ಇಲಾಖೆ ದೇವಸ್ಥಾನಗಳ ಅರ್ಚಕರಿಗೆ ಸರಿಯಾದ ಸಂಬಳದ ವ್ಯವಸ್ಥೆ ಇರಲಿಲ್ಲ. ಬಿಜೆಪಿ ಸರ್ಕಾರ ಅರ್ಚಕರ ಸಂಬಳವನ್ನು ಹೆಚ್ಚಿಸಿತ್ತು. ಮುಜರಾಯಿ ಇಲಾಖೆ ಮಂತ್ರಿಯಾದರೆ ಅಧಿಕಾರ ಹೋಗುತ್ತದೆ ಎಂಬ ಮೌಡ್ಯ ನಮ್ಮ ರಾಜಕಾರಣಿಗಳಿಗೆ. ಹೀಗಿದ್ದಾಗ ಮುಜರಾಯಿಯಿಂದ ದೇವಸ್ಥಾನಗಳ ಅಭಿವೃದ್ದಿ ಸಾಧ್ಯವೇ? ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಅತ್ಯಂತ ವ್ಯವಸ್ಥೆಯಿಂದ ನಿರ್ವಹಿಸುತ್ತಿರುವ ದೇವಸ್ಥಾನಗಳ ಸಂಖ್ಯೆ ಬಹಳ ಕಡಿಮೆ. ಹೆಸರಿಗಷ್ಟೇ ಧಾರ್ಮಿಕ ದತ್ತಿ ಇಲಾಖೆ ಎಂಬಂತಾಗಿದೆ.

ನಮ್ಮ ದೇಶದಲ್ಲಿ ಸಾಕಷ್ಟು ಚರ್ಚು ಮಸೀದಿಗಳಿವೆ. ಚರ್ಚುಗಳಿಗೆ ವಿದೇಶಗಳಿಂದ ಅಪಾರ ದೇಣಿಗೆ ಬರುತ್ತಿವೆ. ಮಸೀದಿಗಳಲ್ಲೂ  ಹಣದ ಹೊಳೆಯೇ ಹರಿಯುತ್ತದೆ. ಹಿಂದೂ ಧರ್ಮದ ದೇವಸ್ಥಾನದ ಆದಾಯದ ಕುರಿತು ಯೋಚಿಸುವ ನಮ್ಮ ಸರ್ಕಾರಗಳು ಚರ್ಚು ಮತ್ತು ಮಸೀದಿಗಳನ್ನು ನಿಯಂತ್ರಿಸಲು ಮುಂದಾಗುವುದೇ ಇಲ್ಲ. ದೇವಸ್ಥಾನಗಳಂತೆ ಚರ್ಚು ಮಸೀದಿಗಳು ಸಹ ಧಾರ್ಮಿಕ ಶ್ರದ್ದಾ ಕೇಂದ್ರಗಳಲ್ಲವೇ? ಅಲ್ಲಿನ ಅದಾಯಗಳು ಸಾರ್ವಜನಿಕ ಕಾರ್ಯಗಳಿಗೆ ಉಪಯೋಗವಾಗಬೇಕಲ್ಲವೇ? ಇಂದು ಚರ್ಚುಗಳು ಕ್ರೈಸ್ತ ಧರ್ಮವನ್ನು ವಿಸ್ತರಿಸಲು ಕೆಲಸ ಮಾಡುತ್ತಿವೆ. ಕೆಲವು ಮದರಸಾಗಳು ಉಗ್ರರಿಗೆ ನೆರವು ನೀಡುತ್ತಿವೆ. ಆದರೆ ಧರ್ಮಸ್ಥಳ, ಸಿದ್ದಗಂಗಾ, ಕಂಚಿ ಕಾಮಕೋಟಿ ಮುಂತಾದ ಕ್ಷೇತ್ರಗಳು ಜಾತಿ, ಧರ್ಮ ಭೇಧವಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಚರ್ಚು ಮಸೀದಿಗಳಿಗಿಲ್ಲದ ಮುಜರಾಯಿ ಇಲಾಖೆ ದೇವಸ್ಥಾನಗಳಿಗೇಕೆ?

ಮುಜರಾಯಿ ಇಲಾಖೆಯ 1997 ರ ಕಾಯ್ದೆ ಅಸಂವಿಧಾನಿಕ ಎಂದು ಕರ್ನಾಟಕ ಹೈ ಕೋರ್ಟ್ ಸಹಸ್ರಲಿಂಗೇಶ್ವರ ದೇವಸ್ಥಾನ ಪ್ರಕರಣದಲ್ಲಿ ತೀರ್ಪು ನೀಡಿದೆ. ದೇವಸ್ಥಾನವನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳುವುದು ಸಂವಿಧಾನ ವಿರೋಧಿ ನಡೆ. ಈ ರೀತಿ ನಡೆದುಕೊಂಡರೆ ನಮ್ಮ ಸಂವಿಧಾನದ ವಿಧಿ 14, 25, 26 ಮತ್ತು 27 ಉಲ್ಲಂಘನೆ ಮಾಡಿದಂತಾಗುತ್ತದೆ. ದೇವಸ್ಥಾನಗಳ ಆದಾಯದ ಮೇಲೆ ಕಣ್ಣಿಟ್ಟಿರುವ ನಮ್ಮ ಸರಕಾರಗಳು ದೇವಸ್ಥಾನಗಳನ್ನು ನಿಯಂತ್ರಿಸಲು ಹೊರಟಿವೆ.  ಸರ್ಕಾರ ಮತ್ತು ನಮ್ಮ ರಾಜಕಾರಣಿಗಳಿಗೆ ದೇವಸ್ಥಾನಗಳ ಅಭಿವೃದ್ದಿಗಿಂತ ಆದಾಯವೇ ಮುಖ್ಯವಾಗಿದೆ. ನಮ್ಮ ದೇವಸ್ಥಾನಗಳು ಸಾವಿರಾರು ವರ್ಷಗಳಿಂದ ಶ್ರದ್ದಾ ಕೇಂದ್ರಗಳಾಗಿ ಕಾರ್ಯನಿರ್ವಹಣೆ ಮಾಡುತ್ತಿವೆ. ದೇವಸ್ಥಾನಗಳನ್ನು ಸರ್ಕಾರ ವಶಕ್ಕೆ ತೆಗೆದುಕೊಳ್ಳುವ ಯಾವ ಅವಶ್ಯಕತೆಯೂ ಇಲ್ಲ. ದೇವಸ್ಥಾನಗಳ ಕುರಿತು ಯೋಚಿಸುವ ಬದಲು ನಮ್ಮ ಸರ್ಕಾರ ಅಭಿವೃದ್ದಿಯತ್ತ ಗಮನಹರಿಸುವುದು ಹೆಚ್ಚು  ಸೂಕ್ತ.

Facebook ಕಾಮೆಂಟ್ಸ್

ಲೇಖಕರ ಕುರಿತು

Raviteja Shastri

ಗೌರಿಬಿದನೂರು ಸ್ವಂತ ಊರು. ಈಗ ಬೆಂಗಳೂರಿನಲ್ಲಿ ವಾಸ. ಅಕೌಂಟೆಂಟ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ. ಓದು ಬರವಣಗೆ, ದೇಶಸೇವೆ, ಸಮಾಜ ಸೇವೆ ನನ್ನ ಹವ್ಯಾಸಗಳು. ಉತ್ತಿಷ್ಠ ಭಾರತ ಎಂಬ ಸಂಘಟನೆಯ ಸಕ್ರಿಯ ಕಾರ್ಯಕರ್ತ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!