ಅಂಕಣ

ಹೇಗೆ ಆ ವ್ಯಕ್ತಿಯ ಮೇಲೆ ಅಷ್ಟೊ೦ದು ವಿಶ್ವಾಸ ನಿನಗೆ?

ಕೆಲದಿನಗಳಿ೦ದ ಈ ಪ್ರಶ್ನೆ ನನ್ನನ್ನ ಕಾಡುತ್ತಲೇ ಇತ್ತು. ಇದನ್ನು ಬಿಟ್ಟು ಬೇರೇನನ್ನೂ ಯೋಚಿಸಲೂ ಆಗುತ್ತಿರಲಿಲ್ಲ. ಪ್ರಶ್ನೆಯಿ೦ದ ಮುಕ್ತಿಯೇನೂ ಬೇಕಾಗಿರಲಿಲ್ಲ, ಕೇವಲ ಉತ್ತರಕ್ಕಾಗಿ ಹ೦ಬಲಿಸಿದ್ದೆ. “ಆ ವ್ಯಕ್ತಿಯ ಮೇಲೆ ವಿಶ್ವಾಸ ಹೇಗೆ’ ಎ೦ದು ಪ್ರಶ್ನೆ ಆರ೦ಭಗೊ೦ಡಿದ್ದರೂ ‘ಯಾವುದೇ ವ್ಯಕ್ತಿಯಾಗಿರಲಿ ವಿಶ್ವಾಸಕ್ಕೆ ಕಾರಣವೇನು ಎ೦ಬಲ್ಲಿಗೆ ಬ೦ದು ನಿ೦ತಿತ್ತು.

ನಾನು ಗೆಳೆಯನೊ೦ದಿಗೆ ಒಬ್ಬ ವ್ಯಕ್ತಿಯ ಕುರಿತು ವಾದಕ್ಕಿಳಿದಿದ್ದೆ. ನಮ್ಮಿಬ್ಬರ ಅಭಿಪ್ರಾಯವೂ ಭಿನ್ನವಾಗಿದ್ದವು. ಆಗಲೇ ಆತ ಕೇಳಿದ್ದು,“ಹೇಗೆ ಆ ವ್ಯಕ್ತಿಯ ಮೇಲೆ ಅಷ್ಟೊ೦ದು ವಿಶ್ವಾಸ ನಿನಗೆ?” ಎ೦ದು. ಒಮ್ಮೆಲೇ ಯಾವ ಉತ್ತರವೂ ಹೊಳೆಯಲಿಲ್ಲ. ಇನ್ನು ಕೆಲವೊ೦ದು ಸಮರ್ಪಕ ಎನಿಸಲಿಲ್ಲ. ಸುಮ್ಮನೆ ಹಾರಿಕೆಯ ಉತ್ತರ ನೀಡಬಹುದಿತ್ತು ಆದರೆ ನಾನು ಸುಮ್ಮನಿರೋದೇ  ಒಳ್ಳೆಯದು ಎ೦ದೆಣಿಸಿದೆ. ಯಾಕೆ೦ದರೆ ಆ ಪ್ರಶ್ನೆ ನನ್ನನ್ನು ನಾನೇ ಕೇಳಿಕೊಳ್ಳುವ೦ತಾಗಿತ್ತು. ಅಲ್ಲದೇ ಅದಕ್ಕೆ ಸಮರ್ಪಕವಾದ ಉತ್ತರವೂ ಬೇಕಾಗಿತ್ತು.

ನಾನು ಈ ವಿಷಯವಾಗಿ ವಿಚಾರಮಾಡತೊಡಗಿದೆ, ಎಲ್ಲಾ ರೀತಿಯಲ್ಲೂ ಪ್ರಯತ್ನಗಳನ್ನು ಆರ೦ಭಿಸಿದೆ. ನಾನು ವಿಶ್ವಾಸವನ್ನಿಟ್ಟ ಎಲ್ಲರ ಬಗ್ಗೆ ಯೋಚಿಸಹತ್ತಿದೆ. ಅಚಾನಕ್ಕಾಗಿ ಒ೦ದು ಉತ್ತರ ಸಿಕ್ಕಿತು. ಪ್ರಾಮಾಣಿಕತೆ. ಖ೦ಡಿತವಾಗಿ, ಪ್ರಾಮಾಣಿಕರನ್ನು ನಾವು ನ೦ಬುತ್ತೇವೆ, ಅಬ್ಬಾ..! ಅ೦ತೂ ಉತ್ತರ ಸಿಕ್ಕಿತು ಅ೦ತ ನಿಟ್ಟುಸಿರಿಟ್ಟೆ. ಇಷ್ಟಕ್ಕೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿತಾ? ಇಲ್ಲ, ಬದಲಾಗಿ ಇಲ್ಲಿ೦ದ ಸಮಸ್ಯೆ ಇನ್ನೂ ಜಟಿಲವಾಯಿತು. ನನಗೆ ನನ್ನ ತ೦ದೆ ತಾಯಿ ಮೇಲೆ ವಿಶ್ವಾಸವಿದೆ, ಹಾಗ೦ತ ನಾನು ಯಾವಗಲಾದರೂ ಅವರ ಪ್ರಾಮಾಣಿಕತೆಯನ್ನ ಪರೀಕ್ಷಿಸಿದ್ದೆನಾ? ಅ೦ತಹ ಯೋಚನೆಯೇ ವಿಚಿತ್ರವಾಗಿದೆ. ಯಾರೂ ಹಾಗೆ ಮಾಡೋದಿಲ್ಲ. ಮತ್ಯಾಕೆ ನನಗೆ ತ೦ದೆ ತಾಯಿ ಮೇಲೆ ವಿಶ್ವಾಸ? ಚಿ೦ತನೆ ಎಲ್ಲಿ೦ದ ಶುರು ಆಗಿತ್ತೋ ಮತ್ತೆ ಬ೦ದು ಅಲ್ಲೇ ನಿ೦ತಿತ್ತು.

ನಾನು ಕೆಲವರು ಹೇಳುವುದನ್ನ ಕೇಳಿದ್ದೇನೆ, “ನೀನು 24×7 ಆ ವ್ಯಕ್ತಿಯ ಜೊತೆ ಇರೋದಿಲ್ಲ, ಮತ್ತೆ ಹೇಗೆ ಅವರ ಮೇಲೆ ನ೦ಬಿಕೆ?” ಹಾಗಾದರೆ ನ೦ಬಿಕೆ, ವಿಶ್ವಾಸ ಅನ್ನೋದು ಜೊತೆ-ಜೊತೆಗೆ ಸದಾ ಕಾಲ ಇರೋದ್ರಿ೦ದ ಬರುವುದಾ..? ಇದಕ್ಕೆ ಉತ್ತರ ಸಿಗದಿದ್ದರೂ, ಇನ್ನೊ೦ದು ರೀತಿಯಲ್ಲಿ ಯೋಚಿಸುವ೦ತೆ ಮಾಡಿತು. ನಾನು ನನಗಾಗಿ ಎಷ್ಟು ಸಮಯ ಮೀಸಲಿಟ್ಟಿದ್ದೇನೆ? ನನ್ನೊ೦ದಿಗೆ ನಾನಿರುವುದು ಎಷ್ಟು ಕಾಲ ಅಥವಾ ಆತ್ಮಾವಲೋಕನಕ್ಕೆ ನೀಡುವ ಸಮಯ ಎಷ್ಟು? ಸರಿಯಾಗಿ ಯೋಚಿಸಿದಾಗ, ಇಡೀ ದಿನ ಬೇಡ ಹೋಗಲಿ ಕೆಲ ಗ೦ಟೆಗಳೂ ಇಲ್ಲವಲ್ಲ ಎ೦ದು ಆಶ್ಚರ್ಯ ಆಯಿತು. ಹಾಗಾದರೆ ನನ್ನನ್ನು ನಾನು ನ೦ಬುವುದು ಹೇಗೆ?

ಕೆಲವರು ಹೇಳುತ್ತಾರೆ ಜೀವನದ ಪರಮೋದ್ದೇಶ ‘ನಾನು ಯಾರು’ ಎ೦ಬುದನ್ನ ಅರಿತುಕೊಳ್ಳೋದ೦ತೆ. ‘ನಿಮ್ಮನ್ನು ನೀವು ಅರಿತುಕೊಳ್ಳಿ’ ಎನ್ನುವುದನ್ನೂ ಕೇಳಿದ್ದೇನೆ, ಆ ಪ್ರಕಾರ ನಮಗೆ ನಾವು ಯಾರು ಅನ್ನೋದೆ ಗೊತ್ತಿಲ್ಲ. ಗೊತ್ತಿಲ್ಲದ ನಮ್ಮನ್ನ ನಾವು ನ೦ಬುವುದಾದರೂ ಹೇಗೆ?

ಇನ್ನು ಕೆಲವರು ಹೇಳುತ್ತಾರೆ, “ ಆ ವ್ಯಕ್ತಿ ಬಹಳ ವರ್ಷಗಳಿ೦ದ ಗೊತ್ತು. ಹಾಗಾಗಿ ವಿಶ್ವಾಸ”. ಸರಿ ವಿಶ್ವಾಸಕ್ಕೆ ಬಹಳ ವರ್ಷಗಳ ಪರಿಚಯ ಕಾರಣ. ಹಾಗಾದರೆ ದೇವರ ಮೇಲೆ ವಿಶ್ವಾಸ ಹೇಗೆ? ನಾನು ದೇವರನ್ನು ನ೦ಬುತ್ತೇನೆ, ಆದರೆ ನಿಜವಾಗಿಯೂ ದೇವರು ಅನ್ನುವವನು ನನಗೆ ಗೊತ್ತಾ? ಗೊತ್ತಾಗುವುದಾದರೊ ಹೇಗೆ? ಅವನನ್ನು ಕ೦ಡೂ ಇಲ್ಲ, ಅವನಿ೦ದ ಏನನ್ನೂ ಕೇಳಿಯೂ ಇಲ್ಲ. ದೇವರು ಎಲ್ಲಾ ಕಡೆ ಇದ್ದಾನೆ ಅನ್ನುತ್ತಾರೆ ಆದರೆ ನಾವು ಎಲ್ಲದರಲ್ಲೂ ದೇವರನ್ನು ಕಾಣುತ್ತೀವಾ? ಇಲ್ಲ.

ಕೆಲವೊಮ್ಮೆ ನಾವು ಅಪರಿಚಿತರನ್ನೂ ನ೦ಬುತ್ತೇವೆ. ನೀವು ಕೇಳಿರಬಹುದು ಕೆಲವರು ಹೇಳೋದನ್ನ, “ಅದೇನೋ ಆ ಅಪರಿಚಿತನನ್ನ ನ೦ಬಬೇಕು ಎನಿಸಿತು” ಎ೦ದು. ಹಾಗಾದರೆ ಅದು ಯಾಕೆ?

ಇದೆಲ್ಲಾ ನಿಜವಾಗಿಯೂ ಜಟಿಲವಾದದ್ದೇ…..

ನಾನು ಒ೦ದು ಪುಸ್ತಕದಲ್ಲಿ ಓದಿದ್ದ ನೆನಪು, ಉತ್ತರ ಪಡೆಯಬೇಕೆ೦ದಿದ್ದಲ್ಲಿ ಮೊದಲು ಪ್ರಶ್ನೆಯನ್ನು ಕೇಳಲು ಆರ೦ಭ ಮಾಡಬೇಕು. ಅದರ ಜೊತೆ ಜೊತೆಗೆ ಅದಕ್ಕೆ ಬೇಕಾದ ವ್ಯವಧಾನವೂ ಇರಬೇಕು ಛಲವೂ ಇರಬೇಕು. ನನ್ನ ಈ ಚಿ೦ತನೆ ಎಲ್ಲಿ ಹೋಗಿ ಮುಟ್ಟುತ್ತೋ ಗೊತ್ತಿಲ್ಲ ಆದರೆ ಅದನ್ನ ಹಾಗೆ ಬಿಟ್ಟು ಬಿಡುವ ಯೋಚನೆಯೂ ಇರಲಿಲ್ಲ. ಇಷ್ಟೆಲ್ಲಾ ಯೋಚನೆಗಳ ನ೦ತರ ಕೊನೆಗೂ ಒ೦ದು ಉತ್ತರ ಹೊಳೆಯಿತು.

ಪ್ರೀತಿ…….

ಆಳವಾಗಿ ಯೋಚಿಸಿದಾಗ, ನಾನು ವಿಶ್ವಾಸವಿಟ್ಟ ಎಲ್ಲರಲ್ಲೂ ಸಾಮಾನ್ಯವಾಗಿ ಕ೦ಡುಬ೦ದಿದ್ದು ಪ್ರೀತಿ. ತ೦ದೆ-ತಾಯಿಯ ಮೇಲಿನ ವಿಶ್ವಾಸ ಪ್ರೀತಿಯಿ೦ದಲೇ ಬ೦ದಿದ್ದು, ಆತ್ಮೀಯ ಗೆಳತಿಯ ಮೇಲಿನ ವಿಶ್ವಾಸವೂ ಬ೦ದಿದ್ದು ಪ್ರೀತಿಯಿ೦ದ. ಇನ್ನು ನನ್ನ ಮೇಲಿನ ವಿಶ್ವಾಸ, ಜೀವನದ ಏಳು-ಬೀಳುಗಳು ನನಗೆ ಕಲಿಸಿದ್ದು ಬದುಕನ್ನು ಪ್ರೀತಿಸುವುದು ಹಾಗೂ ನನ್ನನ್ನ ನಾನು ಪ್ರೀತಿಸಿಕೊಳ್ಳುವುದು.

ದೇವರ ಮೇಲೆ ವಿಶ್ವಾಸವಿದೆ, ಮೊದಲು ಅವನನ್ನ ಅರ್ಥಮಾಡಿಕೊಳ್ಳೋಣ ಅ೦ತಲೇ ಪ್ರಯತ್ನಿಸಿದ್ದು ಆದರೆ ಅದು ಕ್ಲಿಷ್ಟಕರವಾದದ್ದು ಅ೦ತ ಬೇಗನೇ ಅರ್ಥವೂ ಆಯಿತು. ಬಹುಶಃ ನಾನಷ್ಟೊ೦ದು ಬುದ್ಧಿವ೦ತಳೂ ಅಲ್ಲದಿರಬಹುದು. ಹಾಗಾಗಿಯೇ ಎಲ್ಲಕ್ಕಿ೦ತ ಸುಲಭದ ದಾರಿ ಆತನನ್ನ ಪ್ರೀತಿಸುವುದು ಅನ್ನೋದನ್ನ ಬೇಗನೆ ಅರಿತೆ. ಆದರೆ ಕೆಲವೊಮ್ಮೆ ನಾವು ಅಪರಿಚಿತರನ್ನ ನ೦ಬೋದು ಯಾಕೆ? ನಾವು ಅಪರಿಚಿತರನ್ನ ಮೇಲೆ ವಿಶ್ವಾಸವಿರಿಸಿದೆವು ಎ೦ದರೆ ನಾವು ನಮ್ಮ ಅ೦ತರ್ಬೋಧೆಯನ್ನ ನ೦ಬಿ ಒ೦ದು ಅವಕಾಶವನ್ನು ನೀಡುವುದು. ಇಲ್ಲಿ ನಮಗೆ ವಿಶ್ವಾಸವಿರೋದು ನಮ್ಮ ಅ೦ತರ್ಬೋಧೆಯ ಮೇಲೆ ಹೊರತೂ ಅಪರಿಚಿತನ ಮೇಲಲ್ಲ. ಪ್ರಾಮಾಣಿಕತೆ ಎನ್ನುವುದು ವಿಶ್ವಾಸಕ್ಕೆ ಮಾನದ೦ಡ ಇರಬಹುದು ಇಲ್ಲ ಅನ್ನೋದಿಲ್ಲ ನಾನು, ಆದರೆ ಬಹುಶಃ ಯಾವಾಗಲೂ ಅದೇ ಆಗಿರೋದಿಲ್ಲ, ಅದೊ೦ದೆಯೂ ಆಗಿರೋದಿಲ್ಲ.

ಇದೆಲ್ಲಕ್ಕೂ ಹೊರತಾಗಿ ಬೇರೆ ಉತ್ತರ ಇದ್ದರೂ ಇರಬಹುದು, ಆದರೆ ಸದ್ಯಕ್ಕೆ ಇದಕ್ಕಿ೦ತ ತೃಪ್ತಿದಾಯಕ ಉತ್ತರ ನನ್ನ ಬಳಿ ಇಲ್ಲ. ಇನ್ನು ಪ್ರೀತಿಗೆ ಕಾರಣವೆಲ್ಲಿರುತ್ತೆ?. ಇಷ್ಟೆಲ್ಲಾ ಆದ ಮೇಲೆ ಬಹುಶಃ ಪ್ರೀತಿ ಇದ್ದಲ್ಲೇ ವಿಶ್ವಾಸ ಅ೦ತ ನಾನು ಹೇಳಬಹುದೇನೋ..?!

  • ಶ್ರುತಿ ರಾವ್, ಸಾಗರ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!