ಅಂಕಣ

ಜನಕೋಟಿಯ ಬದುಕು ಬೆಳಗಿದಾತ ಮೋಕ್ಷಗುಂಡಂ ವಿಶ್ವೇಶ್ವರಯ್ಯ!

ಒಬ್ಬ ಹುಡುಗ ಇಂಜಿನಿಯರಿಂಗ್  ಅನ್ನು ಅತ್ಯುತ್ತಮ ದರ್ಜೆಯಲ್ಲಿ ಮುಂಬೈ ವಿಶ್ವವಿದ್ಯಾಲಯದಲ್ಲಿ ಮುಗಿಸಿದ. ವಿಶ್ವವಿದ್ಯಾಲಯಕ್ಕೆ ರ್‍ಯಾಂಕ್ ಪಡೆದುದರಿಂದ, ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ತಕ್ಷಣ ಕೆಲಸ ಸಿಕ್ಕಿತು. ಅವನಿಗೆ ನೀರಾವರಿ ಕಾಲುವೆಗಳ ಉಸ್ತುವಾರಿಯ ಕೆಲಸ ನಿಗದಿಪಡಿಸಿದರು. ತರುಣಇಂಜಿನಿಯರ್ ಜಾಣ್ಮೆ ಮತ್ತು ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದ.

ಒಮ್ಮೆ ಈ ಹುಡುಗನಿಗೆ ಒಂದು ಯೋಜನೆಯನ್ನು ನೀಡಿದರು. ಯೋಜನೆ ಆರಂಭಿಸಲು ಪ್ರತಿಕೂಲ ಹವಾಮಾನ ಇದ್ದುದರಿಂದ ಅ ತರುಣ ಇಂಜಿನಿಯರ್ ಎಲ್ಲವನ್ನೂ ಸರಿಯಾಗಿ ಪರೀಕ್ಷಿಸಿ ತನ್ನ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಈಗ ಕೆಲಸ ಆರಂಭ ಮಾಡುವುದು ಬೇಡ ವೆಚ್ಚ ಹೆಚ್ಚಾಗುತ್ತದೆ ಎಂದು ಯೋಚಿಸಿ ಒಂದುವರದಿಯನ್ನು ತನ್ನ ಮೇಲಿನ ಅಧಿಕಾರಿಗೆ ಕೊಟ್ಟ.  ಅದಕ್ಕೆ ಅವನ ಮೇಲಿನ ಅಧಿಕಾರಿ, ಕೆಲಸ ನಿಲ್ಲಿಸುವುದು ಬೇಡ ಎಂದು ಅಪ್ಪಣೆ ಮಾಡಿ ಆಜ್ಞೆ ಪಾಲನೆ, ಅವಿಧೇಯತೆ ಮತ್ತು ಕಾರ್ಯನಿರ್ವಹಣೆಯಲ್ಲಿ ಅದಕ್ಷ ನಡತೆಯಿಂದ ವೃತ್ತಿ ಜೀವನವನ್ನು ಈ ಇಂಜಿನಿಯರ್ ಪ್ರಾರಂಭಿಸಿದ್ದಾನೆ ಎಂದು ಪತ್ರ ಬರೆದ.

ಆಮೇಲೆ ತರುಣ ಇಂಜಿನಿಯರ್ “ ನಾನು ಕೆಲಸ ಮಾಡುವಾಗ ಯಾವುದೇ ಅಡಚಣೆಗಳು ಉಂಟಾಗದೇ ಇದ್ದಲ್ಲಿ, ಕಡಿಮೆ ವೆಚ್ಚದಲ್ಲಿ ಯೋಜನೆ ಮುಗಿಸಲು ಪ್ರಯತ್ನಿಸುತ್ತೇನೆ ” ಎಂದು ಆ ಬ್ರಿಟಿಷ್ ಅಧಿಕಾರಿಗೆ ಪತ್ರ ಬರೆದು ಎರಡು ತಿಂಗಳ ಅವಧಿಯಲ್ಲಿ ಯೋಜನೆ ಮುಗಿಸಿದ.  ಆ ತರುಣ ಇಂಜಿನಿಯರ್ ಮತ್ತಾರು ಅಲ್ಲ “ಮೋಕ್ಷಗುಂಡಂ ವಿಶ್ವೇಶ್ವರಯ್ಯ” .

ಭಾರತಖಂಡದ ಅಸಂಖ್ಯ ಭೂ ಪ್ರದೇಶಕ್ಕೆ ನೀರು ಹರಿಸಿದ ಭಗೀರಥ, ಪ್ರತಿಯೊಬ್ಬ ಪ್ರಜೆಗೆ ಮೂಲಭೂತ ಹಕ್ಕಾದ ಶಿಕ್ಷಣವನ್ನು ನೀಡಲು ಶ್ರಮಿಸಿದ ಸರಸ್ವತಿ ಪುತ್ರ, ಭರತ ಖಂಡವೇ ಆಂಗ್ಲರ ವಿರುದ್ದ ಹೋರಾಟ ಮಾಡುತ್ತಿದ್ದಾಗ ಅದೇ ಆಂಗ್ಲರನ್ನು ಉಪಯೋಗಿಸಿಕೊಂಡು ದೇಶದ ಅಭಿವೃದ್ದಿಗೆ ಶ್ರಮಿಸಿದ ಚಾಣಕ್ಯ, ಅತ್ತಕಡೆಪರಕೀಯರು, ಇತ್ತ ಕಡೆ ದೂರ ದೃಷ್ಟಿಯಿಲ್ಲದ ಸ್ವದೇಶಿಯರು, ಸಾಲದೇ ಪ್ರಾಮಾಣಿಕತೆಯಿಲ್ಲದ ಅಧಿಕಾರಿಗಳ ವರ್ಗ ಅವರೆಲ್ಲರನ್ನು ಮೀರಿ ಕಾರ್ಯಸಾಧನೆ ಮಾಡಿದ ಭೀಷ್ಮ, ಆಂಗ್ಲರು ತಮ್ಮ ಸಚಿವ ಮಂಡಳಿಯಲ್ಲಿ ನೀಡಿದ ಸಚಿವ ಸ್ಥಾನವನ್ನು ನಯವಾಗಿ ನಿರಾಕರಿಸಿ ದೇಶಪ್ರೇಮ ಮೆರೆದ ಮಹಾನ್ ದೇಶ ಭಕ್ತ, ಭರತಖಂಡಕ್ಕೆ ಅಲ್ಲದೇ ಇಡೀ ವಿಶ್ವದ ಮನುಕುಲದ ಉದ್ದಾರಕ್ಕಾಗಿ ತಮ್ಮನ್ನು ಅರ್ಪಿಸಿದ ವಿಶ್ವಮಾನವ,ಜನಕೋಟಿಯ ಬದುಕು ಬೆಳಗಿಸಿದಾತ. ಕಾಯಕ ಯೋಗಿ, ಆಧುನಿಕತೆಯ ನೇತಾರ ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಆ ದಿವ್ಯ ಚೇತನವನ್ನು ವರ್ಣಿಸಲು ಪದಗುಚ್ಛಗಳೇ ಸಾಲದು. ಸರಳತೆ, ಸೌಜನ್ಯತೆ , ಗೌರವ, ದೇಶಭಕ್ತಿ,ಸಮಚಿತ್ತ ಮನಸ್ಸು ಇವೆಲ್ಲಕ್ಕೆ ಸಮಾನಾರ್ಥಕ ಪದವೇ ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಈ ಪುಣ್ಯಾತ್ಮ ಜನಿಸಿದ್ದು ಸೆಪ್ಟೆಂಬರ್ 15 ರಂದು. ಮಹಾನ್ ವ್ಯಕ್ತಿಗೆ ಈ ಲೇಖನ ಅರ್ಪಿತ.

ಬಾಲ್ಯ ಮತ್ತು ಶಿಕ್ಷಣ:

1860 ರಲ್ಲಿ ಮೈಸೂರು ಪ್ರಾಂತ್ಯ(ಈಗ ಕರ್ನಾಟಕ) ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಸಂಸ್ಕೃತ ಪಂಡಿತರಾಗಿದ್ದ ಶ್ರೀನಿವಾಸ ಶಾಸ್ತ್ರೀ ಮತ್ತು ಶ್ರೀಮತಿ ವೆಂಕಟಲಕ್ಷ್ಮಮ್ಮ  ದಂಪತಿಗಳ ಮಗನಾಗಿ ಸೆಪ್ಟೆಂಬರ್ 15 ರಂದು ವಿಶ್ವೇಶ್ವರಯ್ಯ ನವರು ಜನಿಸಿದರು. ಚಿಕ್ಕಬಳ್ಳಾಪುರದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮವಿದ್ಯಾಭ್ಯಾಸ ಆರಂಭಿಸಿ ನಂತರದ ಪ್ರೌಢ ಶಿಕ್ಷಣವನ್ನು  ಬೆಂಗಳೂರಿನಲ್ಲಿ ಮುಗಿಸಿದರು. 1881ರಲ್ಲಿ ಬಿ.ಎ ಪದವಿಯನ್ನು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಪಡೆದರು. ಪುಣೆಯ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು 1883 ರಲ್ಲಿ ರ್‍ಯಾಂಕ್ ಪಡೆಯುವ ಮೂಲಕ ಸಾಧನೆಯಹೆಜ್ಜೆಯಿಟ್ಟರು.  ಬಾಂಬೆ ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ವೃತ್ತಿ  ಜೀವನ ಪ್ರಾರಂಭಿಸಿದರು. 1912 ರಲ್ಲಿ ಮೈಸೂರಿನ ದಿವಾನರಾದ ವಿಶ್ವೇಶ್ವರಯ್ಯನವರು ಹಿಂದಿರುಗಿ ನೋಡಲೇ ಇಲ್ಲ. ತಮ್ಮ ದೂರದೃಷ್ಟಿ,ಚಿಂತನಶೀಲತೆ, ದಕ್ಷ ಕಾರ್ಯಕ್ಷಮತೆಯಿಂದ ಸಾಕಷ್ಟು ಜನೋಪಕಾರಿಕಾರ್ಯಗಳನ್ನು ಮಾಡಿ ಭಾಗ್ಯವಿದಾತನೆನಿಸಿದರು.

ಆಡು ಮುಟ್ಟದ ಸೊಪ್ಪಿಲ್ಲ, ಸರ್. ಎಂ. ವಿ ಸೇವೆ ಸಲ್ಲಿಸದ ಕ್ಷೇತ್ರವಿಲ್ಲ ! :

ವಿಶ್ವೇಶ್ವರಯ್ಯ  ಮೈಸೂರಿನ ದಿವಾನರಾದ ನಂತರ ನೀರಾವರಿ, ಕೈಗಾರಿಕೆ, ಶಿಕ್ಷಣ, ಸಾಹಿತ್ಯ, ಆರ್ಥಿಕತೆ, ತಂತ್ರಜ್ಞಾನ, ಬ್ಯಾಂಕಿಂಗ್ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ಜನೋಪಕಾರಿ ಯೋಜನೆಗಳನ್ನು ರೂಪಿಸಿ ಮೈಸೂರು ರಾಜ್ಯದ ಪ್ರಗತಿಗೆ ಶ್ರಮಿಸಿದರು.

ನೀರಾವರಿ ಕ್ಷೇತ್ರದಲ್ಲಿ ವಿಶ್ವೇಶ್ವರಯ್ಯ ನವರ ಕೊಡುಗೆ ಅಪಾರ. ಅವರನ್ನು “ ಕರ್ನಾಟಕದ ಭಗೀರಥ ” ಎಂದು ಕರೆಯಬಹುದು. ಕಾವೇರಿ ನದಿಗೆ ಕೃಷರಾಜ ಸಾಗರ (ಕನ್ನಂಬಾಡಿ) ಅಣೆಕಟ್ಟನ್ನು ನಾಲ್ಕು ವರ್ಷದ ಅವಧಿಯಲ್ಲಿ ಮುಗಿಸಿ ಮೈಸೂರು, ಮಂಡ್ಯ, ಬೆಂಗಳೂರಿಗೆ ಜೀವಜಲ ನೀಡಿದ ವಾಸ್ತು ಶಿಲ್ಪಿಯಾದರು.  ಈಅಣೆಕಟ್ಟು ಆ ಕಾಲದಲ್ಲಿ ಏಷ್ಯಾದ ಅತ್ಯಂತ ದೊಡ್ಡ ಅಣೆಕಟ್ಟು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಸೂರತ್ ನಲ್ಲಿ ವಿಶ್ವೇಶ್ವರಯ್ಯನವರು ನಿರ್ಮಿಸಿದ ಕಾಮಗಾರಿ ಎಷ್ಟು ಅತ್ಯುತ್ತಮವಾಗಿದೆ ಎಂದರೆ ಅದು ನಿರ್ಮಿತವಾಗಿ ನೂರು ವರ್ಷದ ನಂತರ ಭೂಕಂಪ ಸಂಭವಿಸಿದರೂ ಕಾಮಗಾರಿ ಇನ್ನು ಸುಭದ್ರವಾಗಿದೆ! ಜಯಶಯಕ್ಕೆಸ್ವಯಂಚಾಲಿತ ಗೇಟ್ ಅಳವಡಿಸುವ ತಂತ್ರಜ್ಞಾನ ಕಂಡುಹಿಡಿದ ಮೊದಲ ವ್ಯಕ್ತಿ ವಿಶ್ವೇಶ್ವರಯ್ಯ.

ಕರ್ನಾಟಕದ  ಕೈಗಾರಿಕಾ ಕ್ರಾಂತಿಯ ಜನಕ ಎಂದು ಸರ್.ಎಂ.ವಿ ಅವರನ್ನು ಕರೆಯಬಹುದು. ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ,ಮೈಸೂರ್ ಸ್ಯಾಂಡಲ್ ಸೋಪ್ ಕಾರ್ಖಾನೆ, ಶ್ರೀ ಗಂಧ ಮತ್ತು ಎಣ್ಣೆ ತಯಾರಿಕಾ ಸ್ಥಾಪಿಸಿದ ಮಹಾನುಭಾವ ಸರ್. ಎಂ.ವಿ. ಈ ಕಾರ್ಖಾನೆಗಳು ಲಕ್ಷಾಂತರ ಜನರಿಗೆ ಉದ್ಯೋಗನೀಡಿತು. ಇಂದಿಗೂ ಅವರು ಲಕ್ಷಾಂತರ ಕುಟುಂಬಗಳ ಅನ್ನದಾತ. ಹಿಂದುಸ್ತಾನ್ ಏರ್ ಕ್ರಾಫ್ಟ್ ಫ್ಯಾಕ್ಟರಿ,ಮೈಸೂರು ಸಕ್ಕರೆ ಕಾರ್ಖಾನೆ ಇವೆಲ್ಲವೂ ವಿಶ್ವೇಶ್ವರಯ್ಯನವರ ಕೊಡುಗೆಯೇ.

ಹಿಂದೆ ಸ್ವಾತಂತ್ರ್ಯ ಪೂರ್ವದಲ್ಲಿ ಹೆಚ್ಚಿನ ಶಿಕ್ಷಣ ಪಡೆಯಲು ಕನ್ನಡಿಗರು ಮದ್ರಾಸಿಗೆ ಹೋಗಬೇಕಿತ್ತು ಕಾರಣ ಕರ್ನಾಟಕದಲ್ಲಿ ಯಾವುದೇ ವಿಶ್ವವಿದ್ಯಾಲಯಗಳಿರಲಿಲ್ಲ. ಇದನ್ನು  ಅರ್ಥೈಸಿಕೊಂಡ ಸರ್.ಎಂ.ವಿ ದೇಶದ ಮೊದಲ ವಿಶ್ವವಿದ್ಯಾಲಯ ಮೈಸೂರು ವಿದ್ಯಾಲಯವನ್ನು ಸ್ಥಾಪಿಸಿದರು. ಮೈಸೂರು ರಾಜ್ಯದಲ್ಲಿ ಮೊದಲಬಾರಿಗೆ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಿ ಎಲ್ಲರಿಗೂ ಶಿಕ್ಷಣ ಸಿಗುವಂತೆ ಮಾಡಿದರು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೊತ್ತುಕೊಟ್ಟ ಅವರು ವಿದ್ಯಾರ್ಥಿನಿಯರಿಗೆ ಮೊದಲ ಬಾರಿಗೆ ಹಾಸ್ಟೆಲ್ ಕಟ್ಟಿಸಿದರು.

ತಾಂತ್ರಿಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಮೈಸೂರು ಮಹಾರಾಣಿ ಕಾಲೇಜ್, ಬೆಂಗಳೂರಿನ ಗ್ರಂಥಾಲಯಗಳ  ನಿರ್ಮಾತೃ ಸರ್. ಎಂ ವಿಶ್ವೇಶ್ವರಯ್ಯನವರು. ವಿಶ್ವೇಶ್ವರಯ್ಯನವರು ಕೇವಲ ಇಂಜಿನಿಯರ್ ಆಗಿರದೆ ಶ್ರೇಷ್ಠ ಅರ್ಥಿಕತಜ್ಞ ಸಹ ಆಗಿದ್ದರು. ನಷ್ಟದಲ್ಲಿದ್ದ ಕರಾಚಿ ಮತ್ತು ಮುಂಬೈ ಪುರಸಭೆಗೆ ಸಲಹೆ ನೀಡಿ ಸಂಕಷ್ಟದಿಂದ ಪಾರು ಮಾಡಿದರು. ಭದ್ರಾವತಿಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ನಷ್ಟದಿಂದ ನಲುಗಿತ್ತು. ಇದನ್ನು ಮೇಲಕ್ಕೆತ್ತಿದವರು ಸರ್.ಎಂ.ವಿ. ದೇಶ ಅರ್ಥಿಕತೆಯ ಸುಸ್ಥಿತಿಗೆ ಮೈಸೂರು ಬ್ಯಾಂಕ್  ಮತ್ತು ಚೇಂಬರ್ ಆಫ್ ಕಾಮರ್ಸ್ ಸ್ಥಾಪಿಸಿದರು.

ಜನರನ್ನು ಉದ್ದರಿಸಲು ಅವತರಿಸಿದ ಪುಣ್ಯ ಪುರುಷ :

ವಿಶ್ವೇಶ್ವರಯ್ಯ ನವರು ಜನತೆಗೆ ಶಾಶ್ವತ ನೀರಾವರಿ ಒದಗಿಸಲು ಕನ್ನಂಬಾಡಿ ಕಟ್ಟುವ ಪ್ರಸ್ತಾಪ ಮಹಾರಾಜರ ಮುಂದೆ ಇಟ್ಟರು. ಆಗ ಸರ್.ಎಂ.ವಿ ಗೆ ಆಗದವರು ಇದೊಂದು ಹುಚ್ಚು ಯೋಜನೆಯೆಂದು ಹೇಳಿ ಮಹಾರಾಜರಿಂದ ಅನುಮತಿ ಸಿಗದ ಹಾಗೇ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆಗ ಸರ್.ಎಂ.ವಿ ರಾಜೀನಾಮೆನೀಡುವ ಪ್ರಸ್ತಾಪ ಇಟ್ಟಾಗ ಮಹಾರಾಜರು ಯೋಚಿಸಿ ಅನುಮತಿ ನೀಡಿದರು. ಆದರೆ ಮದ್ರಾಸ್ ಪ್ರಾಂತ್ಯ  ತಮಗೆ ಎಲ್ಲಿ ನೀರು ಸಿಗುವುದಿಲ್ಲವೂ ಎಂದು ಯೋಜನೆಯನ್ನು  ವಿರೋಧಿಸಿತು. ಇದಕ್ಕೆ ಕುಗ್ಗದ ಸರ್.ಎಂ.ವಿ ಪ್ರಖರ ವಾದ ಮಂಡಿಸಿ ಆಣೆಕಟ್ಟು ಕಟ್ಟಿದರು. ಅಂದು ವಿಶ್ವೇಶ್ವರಯ್ಯನವರು ಅಣೆಕಟ್ಟು ಕಟ್ಟದೆ ಇದ್ದಿದ್ದರೇಇಂದು ನೀರಿಗಾಗಿ ಬೆಂಗಳೂರು ಪರದಾಡ ಬೇಕಾಗಿತ್ತು. ಬೆಂಗಳೂರು ಸಕಲ ಸೌಲಭ್ಯ ಕೂಡಿದೆ ಹಾಗಾಗಿಯೇ ಇಂದು ಸಾಕಷ್ಟು ಉದ್ಯಮಗಳು ಐ.ಟಿ, ಬಿ.ಟಿ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ನೀರಿನ ಕೊರತೆ ಉಂಟಾಗಿದ್ದರೆ ಇದೆಲ್ಲವೂ ಸಾಧ್ಯವಾಗುತ್ತಿರಲಿಲ್ಲ. ಬೆಂಗಳೂರಿನ  ನಿರ್ಮಾತೃ ವಿಶ್ವೇಶ್ವರಯ್ಯ ಎಂದರೆ ತಪ್ಪಿಲ್ಲವೆನಿಸುತ್ತದೆ.

ಬೆಂಗಳೂರಿಗಿಂತಲೂ ಹೆಚ್ಚು ಕನ್ನಂಬಾಡಿ ಕಟ್ಟೆಗೆ ಅವಲಂಬಿತವಾದ ಜಿಲ್ಲೆ ಮಂಡ್ಯ ಜಿಲ್ಲೆ. ಮಂಡ್ಯದ ರೈತರ ಕೃಷಿಗೆ ಈ ಕನ್ನಂಬಾಡಿ ಕಟ್ಟೆಯಿಂದ ಬರುವ ನೀರೆ ಆಧಾರ. ಮಂಡ್ಯದ ರೈತರ ನಿಜ ಅನ್ನದಾತ ವಿಶ್ವೇಶ್ವರಯ್ಯನವರೇ. ಭದ್ರಾವತಿಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ, ಮೈಸೂರು ಸರ್ಕಾರಿ ಸಕ್ಕರೆ ಕಾರ್ಖಾನೆ ಇಂದು ಲಕ್ಷಾಂತರ ಜನರಿಗೆ ಅನ್ನ ನೀಡುತ್ತಿದೆ. ಅಂದಿನ  ಸರ್. ಎಂ.ವಿಯವರ  ದೂರದೃಷ್ಟಿ ಚಿಂತನೆ ಇಂದು  ಬಹಳಷ್ಟು  ಕುಟುಂಬಗಳಿಗೆ ನೆರವಾಗಿದೆ. ಜೋಗದ ಜಲ ವಿದ್ಯುತ್ ಸ್ಥಾವರದ ರೂವಾರಿ ವಿಶ್ವೇಶ್ವರಯ್ಯ . ಈ ಸ್ಥಾವರ ವಿದ್ಯುತ್ ತಯಾರಿಸಿ ಜನಕೋಟಿಗೆ ಬೆಳಕು ನೀಡುತ್ತಿದೆ.  ಸರ್. ಎಂ. ವಿ ಜನರನ್ನುಉದ್ದರಿಸಲು ಅವತರಿಸಿದ ಪುಣ್ಯಪುರುಷನೇ ಸರಿ.

ದೇಹಕ್ಕೆ ಮಾತ್ರ ಮುಪ್ಪು, ಮನಸ್ಸಿಗಲ್ಲ :

 ಒಮ್ಮೆ ಒರಿಸ್ಸಾ ರಾಜ್ಯ ಮಹಾನದಿಯ ಪ್ರವಾಹದಿಂದ ತತ್ತರಿಸಿತ್ತು. ಆಗ ಸರ್.ಎಂ.ವಿ ತಮ್ಮ 75 ನೇ ವಯಸ್ಸಿನಲ್ಲಿ ನದಿಗೆ  ಅಡ್ಡಲಾಗಿ ಜಲಾಶಯ ನಿರ್ಮಿಸಲು ನೀಲ ನಕ್ಷೆಯನ್ನು ಸಿದ್ಧಪಡಿಸಿದ್ದರು. 1953ರಲ್ಲಿ  ತಮ್ಮ 92 ರ ಹರೆಯದಲ್ಲಿ ಬಿಹಾರದ ಪಾಟ್ನಾ ನಗರದ ಗಂಗಾ ನದಿಯ ಸೇತುವೆಗೆ ನೀಲ ನಕ್ಷೆ ತಯಾರಿಸಲುಯೋಜನೆಯ ಅನುಷ್ಠಾನ ಮಾಡುವ ಸ್ಥಳಕ್ಕೆ ಸುಡು ಬಿಸಿಲನ್ನು ಲೆಕ್ಕಿಸದೆ ನಡೆದೇ ಹೋಗಿ ಯೋಜನೆ ಸಿದ್ದಪಡಿಸಿದ್ದರು. ಹೊಸಪೇಟೆಯ ತುಂಗಭದ್ರಾ ಅಣೆಕಟ್ಟೆಗೆ ಸಲಹೆ ನೀಡಿದಾಗ ಅವರಿಗೆ 86 ರ ಪ್ರಾಯ. ಅವರು ತಮ್ಮ ಆತ್ಮಚರಿತ್ರೆ ಬರೆದದ್ದು 91 ನೇ ವಸಂತದಲ್ಲಿ.

ಶಿಸ್ತು, ಪ್ರಾಮಾಣಿಕತೆ, ದೇಶಭಕ್ತಿಗೆ ಮತ್ತೊಂದು ಹೆಸರೇ ವಿಶ್ವೇಶ್ವರಯ್ಯ :

ಸರ್.ಎಂ.ವಿ ಶಿಸ್ತಿನ ಸಿಪಾಯಿಯಾಗಿದ್ದರು. ಅವರ ವೇಷಭೂಷಣಗಳಲ್ಲಿ ಅದು ಎದ್ದು ಕಾಣುತ್ತಿತ್ತು. ಸರ್.ಎಂ.ವಿ ಎಂದಿಗೂ ತಮ್ಮ ಖಾಸಗಿ ಕೆಲಸಕ್ಕೆ ಸರ್ಕಾರಿ ವಾಹನ ಉಪಯೋಗಿಸುತ್ತಿರಲಿಲ್ಲ. ಮನೆಯಲ್ಲಿ ರಾತ್ರಿ ವೇಳೆ ಸರ್ಕಾರಿ ಕೆಲಸ ಮಾಡುವಾಗ ಸರ್ಕಾರ ನೀಡಿದ ದೀಪವನ್ನು ಉಪಯೋಗಿಸುತ್ತಿದ್ದರು. ನಂತರ ತಮ್ಮಸ್ವಂತ ಕೆಲಸಕ್ಕೆ ತಮ್ಮ ದೀಪವನ್ನೇ ಬಳಸುತ್ತಿದ್ದರು.

ಸರ್.ಎಂ,ವಿ ಮಹಾನ್ ದೇಶಭಕ್ತರಾಗಿದ್ದರು. ಯೆಮೆನ್ ರಾಷ್ಟ್ರದ ನೀರಾವರಿ ವ್ಯವಸ್ಥೆ, ಈಡನ್ ನಗರದ ನೀರಿನ ವ್ಯವಸ್ಥೆ,ವಿದೇಶದಲ್ಲಿ ಬೃಹತ್ ವಾಸ್ತುಶಿಲ್ಪ ರಚನೆ ಮಾಡಿದ ನಂತರ ಸರ್.ಎಂ.ವಿ ಮುಖ್ಯವಾದ ಒಂದು ಕಲ್ಲಿನಲ್ಲಿ “ಮೇಡ್ ಇನ್ ಇಂಡಿಯಾ” ಕೆತ್ತಿಸಿ ಇಟ್ಟಿದ್ದಾರೆ. ಯಾರಾದರೂ ಭಾರತದ ಬಗ್ಗೆ ಸಣ್ಣತನ ತೋರಿಸಿ ಆಕಲ್ಲನ್ನು ಕಿತ್ತು ತೆಗೆದರೆ ಪೂರ್ತಿ ವಾಸ್ತು ಶಿಲ್ಪ ಕುಸಿದುಬೀಳುತ್ತದೆ ಅಂತಹ ಭಾರತೀಯ ತಂತ್ರಜ್ಞಾನದ ಹಸ್ತಕೌಶಲ್ಯವನ್ನು ವಿದೇಶಿಯರಿಗೆ ಅವರು ತೋರಿಸಿಕೊಟ್ಟಿದ್ದಾರೆ.

ಉಪಸಂಹಾರ:

ಸರ್.ಎಂ.ವಿ ಅವರ ಅಪಾರ ಕೊಡುಗೆಯನ್ನು ಗಣನೆಗೆ ತೆಗೆದುಕೊಂಡ ಸರ್ಕಾರ  ಅವರಿಗೆ ಭಾರತದ ಅತ್ಯುನ್ನತ ಗೌರವ ಪ್ರಶಸ್ತಿಯಾದ ಭಾರತ ರತ್ನವನ್ನು 1955 ರಲ್ಲಿ ನೀಡಿ ಗೌರವಿಸಿತು.

ದೇಶ ಕಂಡ ಈ ಮಹಾನ್ ಚೇತನ 102 ವರ್ಷ 6 ತಿಂಗಳು 8 ದಿನ ಬದುಕಿ ದೇಶ ಸೇವೆ ಮಾಡಿ ತಮ್ಮ ಶಿಸ್ತಿನ ಜೀವನವನ್ನು ಏಪ್ರಿಲ್ 12. 1962 ರಲ್ಲಿ ಅಂತ್ಯಗೊಳಿಸಿದರು. ಅಧಿಕಾರ ಇರುವುದು ಅನುಭವಿಸಲು ಅಲ್ಲ ಜನರ ಸೇವೆ ಮಾಡಲು ಎಂದು ನಂಬಿದ್ದ ಸರ್.ಎಂ.ವಿ ತಮ್ಮ ಸಂಪೂರ್ಣ ಜೀವನವನ್ನು ಜನರ ಸೇವೆಗೆಅರ್ಪಿಸಿದರು. ಅವರ ಗೌರವಾರ್ಥವಾಗಿ  ಅವರ ಜನ್ಮದಿನವನ್ನು “ ರಾಷ್ಟೀಯ ಇಂಜಿನಿಯರ್ ಗಳ ದಿವಸ ” ವೆಂದು ಆಚರಿಸುತ್ತೇವೆ.

ಇತಿಹಾಸವಿರುವುದೇ ಮರೆಯಲು ಎಂದು ಬಹುಮಂದಿ ಭಾರತೀಯರು ಭಾವಿಸಿಬಿಟ್ಟಿದ್ದಾರೆ. ಭಾರತದ ಕೀರ್ತಿ ಪಾತಕೆ ಯನ್ನು ಹಾರಿಸಿದ ಭಾಗ್ಯವಿಧಾತ ಸರ್.ಎಂ.ವಿ ಅವರನ್ನು ಮರೆತರೆ ಹೇಗೆ? ಅವರ ಜನ್ಮ ದಿನದ ಈ ಸುಸಂದರ್ಭದಲ್ಲಿ  ಅವರನ್ನು ನೆನಪು  ಮಾಡಿಕೊಂಡು ಅವರಿಗೆ ಗೌರವ ಸಲ್ಲಿಸಿ, ಅವರ ಆದರ್ಶಗಳನ್ನುಪಾಲಿಸಿದರೆ ಈ ಪವಿತ್ರ ಭಾರತದ ನೆಲದಲ್ಲಿ ಪಡೆದ ನಮ್ಮ ಜನ್ಮ ಸಾರ್ಥಕ.

Raviteja Shastri

Facebook ಕಾಮೆಂಟ್ಸ್

ಲೇಖಕರ ಕುರಿತು

Raviteja Shastri

ಗೌರಿಬಿದನೂರು ಸ್ವಂತ ಊರು. ಈಗ ಬೆಂಗಳೂರಿನಲ್ಲಿ ವಾಸ. ಅಕೌಂಟೆಂಟ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ. ಓದು ಬರವಣಗೆ, ದೇಶಸೇವೆ, ಸಮಾಜ ಸೇವೆ ನನ್ನ ಹವ್ಯಾಸಗಳು. ಉತ್ತಿಷ್ಠ ಭಾರತ ಎಂಬ ಸಂಘಟನೆಯ ಸಕ್ರಿಯ ಕಾರ್ಯಕರ್ತ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!