ಅಂಕಣ

ದೇಶ -ಭಾಷೆ 

ಪ್ರಪಂಚ ವಿಶಾಲವಾಗಿದೆ, ವಿಸ್ತಾರವಾಗಿದೆ , ಭಿನ್ನ- ವಿಭಿನ್ನವಾಗಿದೆ , ಚಿತ್ರವಿಚಿತ್ರವಾಗಿದೆ . ದಿನದಿಂದ ದಿನಕ್ಕೆ ಒಂದು ದೇಶ ಪ್ರದೇಶದಿಂದ ಮನುಷ್ಯ ಮತ್ತೊಂದು ದೇಶಕ್ಕೆ ಹೋಗಿ ನೆಲಸುವುದು ಹೆಚ್ಚಾಗುವುದರ ಜೊತೆಗೆ ಸುಲಭವಾಗುತ್ತಿದೆ. ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಪ್ರಪಂಚ ಪುಟ್ಟ ಮನೆಯಾಗುತ್ತಿದೆ ಎನ್ನುವುದರಲ್ಲಿ ಸಂಶಯವಿಲ್ಲ .

ಒಂದು ಮಗು ಹುಟ್ಟಿದ ಘಳಿಗೆಯಿಂದ ತನ್ನ ಸುತ್ತಮುತ್ತಲಿನ ಪರಿಸರ , ಜನಗಳಿಂದ ಅನೇಕ ಚಟುವಟಿಕೆಗಳನ್ನು ,ಅಭ್ಯಾಸಗಳನ್ನು ರೂಡಿಸಿಕೊಂಡು ಹೋಗುತ್ತದೆ. ಮೊದಲಿಗೆ ತನ್ನ ಸುತ್ತಲಿನ ಜನ ಯಾವ ರೀತಿ ಶಬ್ದ ಪ್ರಯೋಗ ಮಾಡುತ್ತರೆ ಎಂದು ಅರಿತುಕೊಂಡು ಅನುಸರಿಸುತ್ತದೆ. ಹೀಗೆ ಒಂದು ಭಾಷೆ ಬೆಳವಣಿಗೆ ಹೊಂದುತ್ತದೆ. ಅನಂತರ ಆಯಾಯ ಪ್ರದೇಶಗಳಿಗೆ ಅನುಗುಣವಾಗಿ , ಬೆಳೆಯುವ ಬೆಲೆಗೆ ಅನುಗುಣವಾಗಿ ಆಹಾರ ಪದ್ಧತಿ , ಕೆಲಸ ಕಾರ್ಯಗಳು , ಬಟ್ಟೆ ಬರೆಗಳು ,ಬಿಡುವಿನ ಸಮಯದ ಚಟುವಟಿಕೆಗಳು ರೂಡಿಯಾಗುತ್ತದೆ . ಇದನ್ನೇ ಒಂದು ಸಂಸ್ಕೃತಿ ಎನ್ನುವುದು. ಸಂಸ್ಕೃತಿ ಎನ್ನುವುದು ದೇಶ ಭಾಷೆಗಳಿಗೆ ವಿಭಿನ್ನವಾಗಿರುತ್ತದೆ. ಒಂದು ಭಾಷೆ ಜನಾಂಗಗಳಲ್ಲಿ ಹುಟ್ಟಿ ಒಂದು ಬಗೆಯ ಸಂಸ್ಕೃತಿಯನ್ನು ನೋಡಿದ ನಮಗೆ ಮತ್ತೊಂದು ಬಗೆಯನ್ನು ನೋಡಿದಾಗ ಕೆಲವೊಮ್ಮೆ ವಿಚಿತ್ರವು , ವಿಶೇಷವು, ಕುತೂಹಲವೂ , ಆಶ್ಚರ್ಯವೂ ಆಗುತ್ತದೆ. ಈಗ ನನಗೆ ಉಂಟಾಗುತ್ತಿರುವ ಭಾವವು ಇದೆ ರೀತಿಯದಾಗಿದೆ. ಇಲ್ಲಿಯವರೆಗೆ ಭಾರತದ ಒಂದು ಮೂಲೆಯಲ್ಲಿ ಹುಟ್ಟಿ ಅಲ್ಲಿಯ ಆಚಾರ – ವಿಚಾರದಂತೆ ಬೆಳೆದ ನನಗೆ ಜರ್ಮನಿಯ ಸಂಸ್ಕೃತಿಯು ಕುತೂಹಲ ಮೂಡಿಸಿರುವುದರಲ್ಲಿ ಆಶ್ಚರ್ಯವಿಲ್ಲ. ನಾನು ಗಮನಿಸಿದ ಕೆಲವು ಸಂಗತಿಗಳು , ಅದಕ್ಕೆ ನನ್ನಲ್ಲಿ ಮೂಡಿದ ಭಾವಗಳನ್ನು ಈ ಲೇಖನದಲ್ಲಿ ಬರೆಯುತ್ತಿದ್ದೇನೆ.

ದೇಶಾತೀತ – ಕಾಲಾತೀತ
ನಾವು ಈ ಭೂಮಂಡಲದ ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ ಎಲ್ಲೇ ಹೋದರು ಮನುಷ್ಯ , ಪ್ರಕೃತಿಯ ಕೆಲವು ಮೂಲ ಸ್ವಭಾವಗಳು ಇದ್ದ ಹಾಗೆ ಇರುತ್ತದೆ. ಉದಾ : ಮನುಷ್ಯ ಮಗುವಾಗಿಯೇ ಹುಟ್ಟುತ್ತಾನೆ , ಮಗುವಿನ ಮುಗ್ದತೆ , ಸುಂದರ ಆಟಗಳು ಎಲ್ಲೆಲಿಯು ಹಾಗೆ ಇರುತ್ತದೆ. ಹಾಗೆ ಒಂದು ತಾಯಿ ಮಗುವಿಗೆ ತೋರಿಸುವ ಪ್ರೀತಿಯು ,ಕಾಳಜಿಯು , ಮಗುವಿನ ಕೋಮಲವಾದ ಮಂದಹಾಸವು , ಅದೇ ಮಗುವು ಯೌವನದಲ್ಲಿ ಕಾಲಿಟ್ಟಾಗ ಅವರಲ್ಲಿ ಹುಟ್ಟುವ ಮಧುರ ಭಾವಗಳು , ವೃದ್ದಾಪ್ಯದ ಸುಕ್ಕುಗೆರೆಗಳು ಇವುಗಳೆಲ್ಲ ದೇಶಾತೀತ – ಕಾಲಾತೀತವಾಗಿದೆ. ಹಾಗೆ ಪ್ರಕೃತಿಯಲ್ಲಿಯು ಗಿಡ ಮರಗಳಿವೆ , ಕೆರೆ ಕುಂಟೆಗಳಿವೆ ,ಬೆಟ್ಟ ಗುಡ್ಡಗಳಿವೆ ಇವು ಪ್ರಪಂಚದ ಎಲ್ಲೆಡೆ ಇದೆ. ಆದರೆ ಅವುಗಳ ಸ್ವಭಾವ , ರಚನೆಗಳು ಆ ಪ್ರದೇಶಗಳಿಗೆ ಅನುಗುಣವಾಗಿ ಬದಲಾವಣೆ ಹೇಗೆ ಪಡೆಯುತ್ತದೆಯೋ ಅದೇ ರೀತಿ ಮನುಷ್ಯ ಪ್ರಾಣಿಗಳಲ್ಲಿಯೂ ಪ್ರದೇಶಕ್ಕೆ ತಕ್ಕ ಮಾರ್ಪದಾಗುತ್ತದೆ. ಮನುಷ್ಯನ ಸ್ವಭಾವಗಳಾದ ಪ್ರೇಮ, ಕೌರ್ಯ, ಆಸೆ , ಅನುಕಂಪ,ಕರುಣೆ , ಕಾಮ , ಮತ್ಸರಗಳೆಲ್ಲವು ದೇಶಾತೀತ ಕಾಲಾತೀತ.

ಕೆಲಸ – ವಿರಾಮ
ಮಾನವನ ಕೆಲವು ಮೂಲ ಸ್ವಭಾವಗಳು ಎಲ್ಲೆಡೆ ಒಂದೇ ಆಗಿದ್ದರು ಪ್ರದೇಶಗಳಿಗೆ ಅನುಗುಣವಾಗಿ ಬದುಕಿನ ರೀತಿ ನೀತಿಗಳು ಬದಲಾವಣೆಯನ್ನು ಹೊಂದುತ್ತವೆ . ಈ ಬದುಕಿನ ರೀತಿ ನೀತಿಗಳೇ ಒಂದು ದೇಶದ ಸಂಸ್ಕೃತಿಯಾಗುತ್ತದೆ. ಜರ್ಮನಿಯಲ್ಲಿ ನನಗೆ ಹಿಡಿಸಿದ ಮತ್ತೊಂದು ವಿಚಾರವೆಂದರೆ ಕೆಲಸ ಮತ್ತು ವಿರಾಮಕ್ಕೆ ಕೊಡುವ ಪ್ರಮುಖ್ಯತೆ. ಒಂದು ದೇಶದ ಅಭಿವೃದ್ದಿಗೆ ಮೂಲ ಕಾರಣ ಅಲ್ಲಿಯ ಜನಗಳ ಪ್ರಾಮಾಣಿಕ ಹಾಗೂ ಶ್ರದ್ಧೆಯ ಕೆಲಸ. ಜರ್ಮನರ ಕೆಲಸದ ವೇಳೆ (ಸಾಮಾನ್ಯವಾಗಿ ) ಬೆಳಿಗ್ಗೆ ೭. ೩೦, ೮ಕ್ಕೆ ಆರಂಭವಾಗುತ್ತದೆ, ೧೨-೩೦ ರಿಂದ ೧ರವರೆಗೆ ಅವರ ಮಧ್ಯಾಹ್ನದ ಆಹಾರದ ಸಮಯ. ಸಂಜೆ ೪ ರಿಂದ ೫ರೊಳಗೆ ಕೆಲಸ ಮುಗಿಸಿ ಮನೆಗೆ ತೆರಳುತ್ತಾರೆ . ಸಂಜೆ ೬ರಿಂದ ೭, ೭. ೩೦ ರವರೆಗೆ ಅವರ ಸಂಜೆಯ ಆಹಾರದ ಸಮಯ. ಇವರು ಸಂಜೆಯ ಸಮಯವನ್ನು ವಾಯುವಿಹಾರ , ವ್ಯಾಯಾಮ , ಓಡುವುದು ,ಉದ್ಯಾನವನದಲ್ಲಿ ಕಳೆಯುವುದು , ಸೈಕಲ್ ಓಡಿಸುವುದು ಹೀಗೆ ಬೇರೆ ಬೇರೆ ರೀತಿಯಲ್ಲಿ ಕಳೆಯುತ್ತಾರೆ . ಶನಿವಾರ- ಭಾನುವಾರಗಳಲ್ಲಿ ಆ ಆ ಕಾಲಕ್ಕೆ ತಕ್ಕ ಹಾಗೆ ವಿರಾಮದಿಂದ ಕಳೆಯುತ್ತಾರೆ . ಮನುಷ್ಯ ತನ್ನ ಯಾವುದೇ ಕೆಲಸದ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು , ವಿರಾಮ ಹಾಗು ತನ್ನ ನೆಚ್ಚಿನ ಚಟುವಟಿಕೆಗಳಿಗೆ ಸಮಯ ದೊರೆತಾಗ ಮಾತ್ರ ಸಾಧ್ಯ. ಕೆಲಸ ವಿರಾಮಗಳ ಸಮಾನತೆಯ ಅರಿವು ಇವರಲ್ಲಿದೆ.

ಭಾಷೆ
ಜರ್ಮನರಲ್ಲಿ ಮತ್ತೊಂದು ಹಿಡಿಸಿದ್ದು ಅವರ ಅಪ್ರತಿಮ ಭಾಷಾ ಪ್ರೇಮ . ಇಂಗ್ಲಿಷ್ ಭಾಷೆ ವಿಶ್ವವ್ಯಾಪಿ ಆವರಿಸಿದ್ದರು , ಪ್ರಪಂಚದ ಅನೇಕ ದೇಶಗಳು ಅದರ ಪ್ರಭಾವಕ್ಕೆ ಒಳಗಾಗಿದ್ದರು ಜರ್ಮನಿ ಅದನ್ನು ಸ್ವೀಕರಿಸಿಲ್ಲ. ಇಲ್ಲಿಯ ಜನಗಳು ಇಂಗ್ಲಿಷ್ ಮಾತನಾಡಲು ಇಷ್ಟ ಪಡುವುದಿಲ್ಲ . ಹೆಚ್ಚು ಕಲಿತವರಿಗೆ ಇಂಗ್ಲಿಷ್ ಭಾಷೆ ಬರುತ್ತದೆಯೇ ವಿನಃ ಸಾಮಾನ್ಯರಿಗೆ ಬರುವುದಿಲ್ಲ . ಇಲ್ಲಿಯ ವ್ಯಾವಹಾರಿಕ , ಸರ್ಕಾರದ , ವೈಜ್ಞಾನಿಕ ಎಲ್ಲ ಬಗೆಯ ಕೆಲಸ ಗಳು ಜರ್ಮನ್ ಭಾಷೆಯಲ್ಲಿಯೇ ನಡೆಯುವುದು. ಇಲ್ಲಿಯ ಜನಗಳು ಯಾವುದೇ ಉನ್ನತ ಶಿಕ್ಷಣವನ್ನು ತಮ್ಮ ಮಾತೃಭಾಷೆಯಲ್ಲಿಯೇ ಪಡೆಯುತ್ತಾರೆ . ಮತ್ತೊಂದು ವಿಶೇಷವೆಂದರೆ ವಿದ್ಯಾಭ್ಯಾಸ ಜರ್ಮನರಿಗೆ ಉಚಿತ , ಅಥವಾ ಅತಿ ಕಡಿಮೆ ಕರ್ಚಿನಲ್ಲಿ ಆಗುತ್ತದೆ . ಎಲ್ಲೆಡೆಯೂ ರೈಲ್ವೆ ನಿಲ್ದಾಣ, ಬಸ್ಗಗಳಲ್ಲಿ , ಅಂಗಡಿ ಮುಂಗಟ್ಟುಗಳ ಪಳಕದಲ್ಲಿರುವುದು , ಭಿತ್ತಿ ಪತ್ರಗಳಲ್ಲಿ ಎಲ್ಲೆಡೆ ಜರ್ಮನ್ ಒಂದೇ ಬಳಕೆಯಾಗುತ್ತದೆ . ಹಾಗಾಗಿ ಯಾರೇ ಬೇರೆ ದೇಶದವರು ಇಲ್ಲಿ ವಾಸಿಸಬೇಕಾದರೆ ಜರ್ಮನ್ ಭಾಷೆ ಕಲಿಯುವುದು ಅತಿ ಮುಖ್ಯವಾಗುತ್ತದೆ . ಜರ್ಮನ್ ಭಾಷೆ ವಿಸ್ತಿರ್ಣದಲ್ಲಿ ಕರ್ನಾಟಕದ ಒಂದೂವರೆಪಟ್ಟಿದ್ದರು ಜರ್ಮನ್ ತನ್ನ ಭಾಷೆಯನ್ನು ವಿಶ್ವವ್ಯಾಪಿ ಮಾಡುತ್ತಿದೆ . ಆದರೆ ನಾವು ಕನ್ನಡಿಗರು ಈಗ ಕನ್ನಡ ಮಾತನಾಡಲು , ಬಳಸಲು ಏಕೆ ಹಿಂಜರಿಯುತ್ತೇವೆ? ಎಂಬ ಪ್ರಶ್ನೆ ಇಲ್ಲಿಯವರ ಮಾತೃಭಾಷಪ್ರೇಮವನ್ನು ನೋಡಿದಾಗ ಉಂಟಾಗುತ್ತದೆ .

ಒಬ್ಬ ಮನುಷ್ಯನ ಅಥವಾ ದೇಶದ ಉನ್ನತಿಯಾಗುವುದು , ಮತ್ತೊಬ್ಬರನ್ನು ಅಥವಾ ಮತ್ತೊಂದು ದೇಶವನ್ನು ಅನುಕರಣೆ ಮಾಡುವುದರಲ್ಲಲ್ಲ, ಬದಲಾಗಿ ಅರಿಯುವುದರಿಂದ . ನಮ್ಮೊಳಗಿನ ಸ್ವಾಭಿಮಾನವನ್ನು ಬಿಡದೆ ,ಬದಲಾಗಿ ಇರುವ ಅಹಂಕಾರವನ್ನು ಕಿತ್ತೊಗೆದು ಇನ್ನೊಬ್ಬರ ಒಳ್ಳೆಯತನವನ್ನು ಅರಿತು ಅಳವಡಿಸಿಕೊಳ್ಳುವುದರಿಂದ ನಾವು ಉನ್ನತಿಯತ್ತ ಸಾಗೋಣ .

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!