ಅಂಕಣ

ನಗುನಗುತ್ತಾ ಗಲ್ಲುಗಂಬವನ್ನೇರಿದ ವೀರ ಹುತಾತ್ಮನ ನೆನಪಿಗೆ…..

ಅಂದು ಮಾರ್ಚ್ 23 1931. ಭಾರತವೆಂಬ ಸಮೃದ್ದ ದೇಶವನ್ನು ಆಂಗ್ಲರ ಕಪಿಮುಷ್ಟಿಯಿಂದ ಮುಕ್ತಿಗೊಳಿಸಬೇಕೆಂದು ಪಣತೊಟಿದ್ದ ಮೂರು ನವಉತ್ಸಾಹಿ ತರುಣರು ತಮ್ಮ ಪ್ರಾಣವನ್ನು ತಾಯಿ ಭಾರತಿಗೆ ಅರ್ಪಿಸಲು ಸಿದ್ದರಾಗಿದ್ದರು. ಮಹದಾನಂದ ಮತ್ತು ಉತ್ಸಾಹ ಆ ಮೂರು ಯುವಕರ ಮೊಗದಲ್ಲಿ ವ್ಯಕ್ತವಾಗುತ್ತಿತ್ತು. ಈ ತರುಣರನ್ನು ಗಲ್ಲಿಗೇರಿಸಲು 5 ಜನ ಪೋಲಿಸ್ ಅಧಿಕಾರಿಗಳು ಸಿದ್ದರಾಗಿದ್ದರು. ಇವರ ಹರ್ಷವನ್ನು ಗಮನಿಸಿದ ಒಬ್ಬ ಪೋಲಿಸ್ ಅಧಿಕಾರಿ ಯುವಕರನ್ನು ಪ್ರಶ್ನಿಸಿದ.

ಅಧಿಕಾರಿ:  “ ಈ ನಿಮ್ಮ ಸಂತೋಷಕ್ಕೆ ಕಾರಣವೇನು?” ಎಂದ.

ಯುವಕ:  “ ನಾವು ಮೂರು ಜನ ಗಲ್ಲಿಗೇರುವ ಸಂದರ್ಭದಲ್ಲಿ ನೀವೆಲ್ಲ ಇದ್ದಿರಲ್ಲ ಇದು ನಿಮ್ಮ ಭಾಗ್ಯವಲ್ಲವೇ?”.

ಅಧಿಕಾರಿ: “ ಕ್ಷಣ ಮಾತ್ರದಲ್ಲಿ ಹೆಣವಾಗುವ ನೀನು ನಮ್ಮ ಅದೃಷ್ಟವನ್ನೇಕೆ ಹೊಗಳುತ್ತಿಯ?”

ಯುವಕ:  “ ನಾಡ ಮುಕ್ತಿಗಾಗಿ ಈ ದೇಶದ ಯುವಕರು ನಗುನಗುತ್ತಾ ಗಲ್ಲಿಗೇರುವುದನ್ನು ನೋಡುವ ಭಾಗ್ಯ 35   ಕೋಟಿ ಜನರಲ್ಲಿ  5 ಮಂದಿಗೆ ಮಾತ್ರ ಸಿಕ್ಕಿದೆ ಇದು ನಿಮ್ಮ ಅದೃಷ್ಟವಲ್ಲವೇ” ಎಂದು ಸಾವಿನಲ್ಲೂ ಮತ್ತೊಬ್ಬರ   ಭಾಗ್ಯವನ್ನು ಹೊಗಳಿದ ಆ ಯುವಕ.

ಹೀಗೆ ಉತ್ತರಿಸಿದ ಯುವಕನೇ ಭಗತ್ ಸಿಂಗ್. ಮತ್ತು ಆತನ ಜೊತೆ ಗಲ್ಲಿಗೇರಿದ ಮತ್ತಿಬ್ಬರು ರಾಜಗುರು ಮತ್ತು ಸುಖದೇವ್. ತಮ್ಮ ಸಾವಿನಲ್ಲೂ ದೇಶದ ಸ್ವಾಭಿಮಾನವನ್ನು ಎತ್ತಿಹಿಡಿದ ಮಹಾನ್ ಪುರುಷ ಭಗತ್ ಸಿಂಗ್.

ಸ್ವಾಮಿ ವಿವೇಕಾನಂದರು ಮೂವತ್ತೊಂಬತ್ತನೆಯ ವಯಸ್ಸಿನಲ್ಲಿ ತಮ್ಮ ಕೆಲಸ ಮಾಡಿ ಮುಗಿಸಿದರು. ಏಸು ಕ್ರಿಸ್ತನು ಮೂವತ್ಮೂರು ವರ್ಷಗಳ ವಯಸ್ಸಿನಲ್ಲಿ,ಮಹಾಪುರುಷ ಶಂಕರಾಚಾರ್ಯರು ಮೂವತ್ತೆರಡು ವರ್ಷಗಳ ವಯಸ್ಸಿನಲ್ಲಿ ತಮ್ಮ ಕೆಲಸಗಳನ್ನು ಮಾಡಿ ಮುಗಿಸಿದರು. ಆದರೆ ಇವನೋ ಹಳೆಯ ದಾಖಲೆಗಳೆಲ್ಲವನ್ನೂ ಮುರಿದ.ಇಪ್ಪತ್ಮೊರನೆ ವಯಸ್ಸಿನಲ್ಲಿಯೇ ಅವನು ತನ್ನ ಲೀಲಾವಿನೋದದ ರಂಗಭೂಮಿಯ ಪರದೆಯನ್ನು ಎತ್ತಿದ್ದೂ ಆಯಿತು, ಇಳಿಸಿದ್ದೂ ಆಯಿತು.ಜೀವನ   ನಾಟಕವನ್ನೇ           ಮುಗಿಸಿಬಿಟ್ಟ.ಅವನೇ ಭಗತ್ ಸಿಂಗ್, ಹುತಾತ್ಮ ರ ಹುತಾತ್ಮ ಭಗತ್ ಸಿಂಗ್ !  ಖಂಡಿತ ನಿಜ ಮೇಲಿನ ಸಾಲುಗಳಂತೆ ಭಗತ್ ಸಿಂಗ್ ಸಾವಿನಲ್ಲಿ ದಾಖಲೆ ಬರೆದವರು. ತನ್ನ 23 ವರ್ಷಗಳ ಜೀವಿತಾವಧಿಯಲ್ಲಿ, ಕ್ರಾಂತಿಯ ಜ್ವಾಲೆಯನ್ನು ಶರವೇಗದಂತೆ ಪಸರಿಸಿದ ಭಗತ್ ಸಿಂಗ್, ಅದೇ ವೇಗದಲ್ಲಿ ತಾಯಿ ಭಾರತಿಗೆ  ತಮ್ಮ ಪ್ರಾಣವನ್ನು ಅರ್ಪಿಸಿದರು. ತನ್ನ ಕಿಶೋರಾವಸ್ಥೆಯಲ್ಲಿ ಹೊಲದಲ್ಲಿ ಬಂದೂಕು ಬೆಳೆಯುತ್ತೇನೆಂದ ಗಳಿಗೆಯಿಂದ ಹಿಡಿದು, ಸ್ಯಾಂಡರ್ಸ್ ವಧೆ, ಅಸೆಂಬ್ಲಿಯಲ್ಲಿ ಬಾಂಬ್ ಸ್ಪೋಟ ಮಾಡಿದ ಘಟನೆಗಳನ್ನು  ಒಳಗೊಂಡು,   ಕೊನೆಗೆ ತಾನೂ ಸಾಯುವವರೆಗೂ ಭಗತ್ ಸಿಂಗ್ ಮಾಡಿದ್ದು ಮಾಡಿದ್ದು ಒಂದೇ ಜಪ. ಅದು ಸ್ವಾತಂತ್ರ್ಯ ಲಕ್ಷ್ಮಿಯ ಜಪ.

ಭಾರತಕ್ಕೆ ಸ್ವಾತಂತ್ರ್ಯ ಕೊಡಿಸಬೇಕೆಂಬ ತುಡಿತ, ಭಗತ್ ಸಿಂಗ್’ರ ಪ್ರತಿ ನಡೆಯಲ್ಲೂ ವ್ಯಕ್ತವಾಗುತ್ತಿತ್ತು. ಸ್ವಾತಂತ್ರ್ಯ ಭಾರತ ಹೇಗಿರಬೇಕೆಂಬ ಕನಸನ್ನು ಅವರು ಕಂಡಿದ್ದರು. ಭಾರತವನ್ನು ಸ್ವಾತಂತ್ರ್ಯಗೊಳಿಸಬೇಕೆಂದು ಪಣತೊಟ್ಟಿದ್ದ ಭಗತ್ ಸಿಂಗ್, ಕ್ರಾಂತಿಯ ವಿಚಾರಗಳನ್ನು ಅರಿಯುವ ಸಲುವಾಗಿ ಯುರೋಪ್, ರಷ್ಯನ್ ಕ್ರಾಂತಿಕಾರಿಗಳ ಇತಿಹಾಸವನ್ನು ಅಭ್ಯಸಿಸಿದ್ದರು. ಚಿಕ್ಕಪ್ಪ ಅಜಿತ್ ಸಿಂಗ್ ರ ಸಾಹಸಗಳಿಂದ ಪ್ರಭಾವಿತರಾಗಿದ್ದ ಭಗತ್, ಆರ್ಯ ಸಮಾಜದ ಸಿದ್ದಾಂತಗಳಿಂದ  ಪ್ರೆರಿತರಾಗಿದ್ದರು. ರಾಣಾ ಪ್ರತಾಪ್ ಸಿಂಹ, ಗುರುಗೋವಿಂದ್ ಸಿಂಗ್, ಶಿವಾಜಿ ಭಗತ್ ಸಿಂಗ್’ರಿಗೆ ಆದರ್ಶರಾಗಿದ್ದರು.

ಗಾಂಧೀಜಿಯವರ ಅಸಹಕಾರ ಚಳುವಳಿಯಿಂದ ತನ್ನ ಸ್ವಾತಂತ್ರ್ಯ ಜೀವನ ಆರಂಭಿಸಿದ ಭಗತ್ ಸಿಂಗ್’ರನ್ನು ಜಲಿಯನ್ ವಾಲಾಭಾಗ್ ಹತ್ಯಾಕಂಡದ ಬೀಕರ ಘಟನೆ ಕ್ರಾಂತಿ ಮಾರ್ಗಕ್ಕೆ ಕರೆದುಕೊಂಡು ಹೋಯಿತು. ನೌ ಜವಾನ್ ಭಾರತ್ ಸಭಾದ ಸದಸ್ಯರಾಗಿ ಕ್ರಾಂತಿಯ ಕಿಚ್ಚನ್ನು ಲಾಹೋರದಲ್ಲಿ  ಹರಡಿದರು. ಮುಂದೆ ಅಮರ ಕ್ರಾಂತಿಕಾರಿ ಚಂದ್ರ ಶೇಖರ ಅಜಾದ್’ರ ಸಂಪರ್ಕಕ್ಕೆ ಬಂದ ಭಗತ್ ಸಿಂಗ್, ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್(HSRA) ನ ಸದಸ್ಯರಾದರು. ಲಾಲ್ ಲಜಪತ ರಾಯರ ಸಾವಿನ ಸೇಡನ್ನು ತೀರಿಸಿಕೊಳ್ಳುವ ಸಲುವಾಗಿ ಸ್ಯಾಂಡರ್ಸ್ ಎಂಬ ಪೋಲಿಸ್ ಅಧಿಕಾರಿಯ ವಧೆಯಾಯಿತು. ಈ ವಧೆಯ ರೂವಾರಿ ಭಗತ್ ಸಿಂಗ್ ಮತ್ತು ಆತನ ಕ್ರಾಂತಿ ಸಂಸ್ಥೆ ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್. ತನ್ನ ಕ್ರಾಂತಿಯ ತತ್ವಗಳನ್ನು ಇಡೀ ದೇಶಕ್ಕೆ ಸಾರಿ, ಯುವಕರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹತ್ತಿಸುವ ಸಲುವಾಗಿ, ಭಗತ್ ಸಿಂಗ್ ಮತ್ತು ಬುಟುಕೇಶ್ವರ ದತ್ತ್ ಅಸೆಂಬ್ಲಿ ಯಲ್ಲಿ ಬಾಂಬ್ ಸ್ಪೋಟಿಸಿ, ತಾವೇ ಪೋಲಿಸರಿಗೆ ಶರಣಾದರು. ಮಲಗಿದ್ದ ಭಾರತೀಯರನ್ನು ಎಬ್ಬಿಸುವುದು ಅದರ ಉದ್ದೇಶವಾಗಿತ್ತು. ಆದರೆ ಬ್ರಿಟಿಷರ ಕುತಂತ್ರಕ್ಕೆ ಬಲಿಯಾದ ಭಗತ್ ಸಿಂಗ್ ಸ್ನೇಹಿತ  ರಾಜ್ ಗೋಪಾಲ್, ಕ್ರಾಂತಿಕಾರಿಗಳ ವಿರುದ್ದ ಸಾಕ್ಷಿ ಹೇಳಿ ದೇಶ ದ್ರೋಹ ಬಗೆದ. ಕೋರ್ಟ್ ಭಗತ್ ಸಿಂಗ್, ರಾಜಗುರು, ಸುಖದೇವರಿಗೆ ಗಲ್ಲು ಶಿಕ್ಷೆ ವಿಧಿಸಿತು. ಈ ತೀರ್ಪು  ದೇಶಾದ್ಯಂತ ಸಂಚಲನವನ್ನೇ  ಮೂಡಿಸಿತು. ಸಾವಿರಾರು ಜನ ಭಗತ್ ಸಿಂಗ್ ರ ಗಲ್ಲು ಶಿಕ್ಷೆ ಯನ್ನು ತಪ್ಪಿಸಲು ಹೋರಾಡಿದರು. ಆದರೆ ಯಾವುದು ಫಲಿಸಲಿಲ್ಲ. ಮಾರ್ಚ್ 23 1931 ರಂದು ಭಗತ್ ಸಿಂಗ್, ರಾಜಗುರು, ಸುಖದೇವ್ ಹುತಾತ್ಮರಾದರು.

ಭಾರತ ಸ್ವಾತಂತ್ರ್ಯಗಳಿಸಬೇಕೆಂದರೆ ನಮ್ಮಂತ ಯುವಕರ ಬಲಿದಾನ ಅಗತ್ಯವೆಂದು ಭಗತ್ ಸಿಂಗ್ ಬಲವಾಗಿ ನಂಬಿದ್ದರು. ಕ್ಷಮಾದಾನ ಅರ್ಜಿ ಸಲ್ಲಿಸಲು ತಂದೆ ಕಿಶನ್ ಸಿಂಗ್ ಪ್ರಯತ್ನಿಸಿದಾಗ ಭಗತ್ ಸಿಂಗ್ ವಿರೋಧಿಸಿದ್ದರು. ಬಾಲ್ಯದಲ್ಲಿ ತಾತ ಅರ್ಜನ ಸಿಂಹರಿಗೆ ತನ್ನ ಜೀವನವನ್ನು ದೇಶದ ಸ್ವಾತಂತ್ರ್ಯ  ಮುಡಿಪಾಗಿಡುತ್ತೇನೆ ಎಂದು ಮಾತು ಕೊಟ್ಟಿದ್ದ ಭಗತ್ ಸಿಂಗ್,  ಅದರಂತೆ ತಮ್ಮ ಪ್ರಾಣವನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಅರ್ಪಿಸಿದರು. ಅಂದು ತಾವು ತಮ್ಮ ಪ್ರಾಣವನ್ನು ಅರ್ಪಿಸುವಾಗ, ಮುಂದಿನ ಪೀಳಿಗೆಗೆ ನನ್ನ ಬಲಿದಾನ ಆದರ್ಶವಾಗಲಿ ಎಂದು ಭಗತ್ ಸಿಂಗ್ ಇಚ್ಚಿಸಿದ್ದರು. ಆದರೆ ಇಂದು ನಮ್ಮ ಯುವಜನತೆ ಭಗತ್ ಸಿಂಗ್’ರನ್ನೇ ಮರೆತುಬಿಟ್ಟಿದೆ. ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಆರು ಕೋಟಿ ಹುತಾತ್ಮರು ನೀಡಿದ ಭಿಕ್ಷೆ. ಭಿಕ್ಷೆ ಕೊಟ್ಟ ಮಹಾತ್ಮರ ಸ್ಮರಣೆ ನಮ್ಮ ಕರ್ತವ್ಯ.

ಭಗತ್ ಸಿಂಗ್, ರಾಜಗುರು, ಸುಖದೇವ್, ಚಂದ್ರಶೇಖರ್ ಅಜಾದ್, ವೀರ ಸಾವರ್ಕರ್, ಸುಭಾಷ್ ಚಂದ್ರ ಬೋಸ್, ಮದನಲಾಲ್ ಧಿಂಗ್ರಾ ರಂತ ಕ್ರಾಂತಿಪುರುಷರು ನಮಗೆ ಆದರ್ಶವಾಗಲಿ.

ಇಂದು ಸೆಪ್ಟೆಂಬರ್ 28 ಭಗತ್ ಸಿಂಗ್ ಜನಿಸಿದ ದಿನ ಆ ವೀರ ಹುತಾತ್ಮನ ಸ್ಮರಣೆಯನ್ನು ಮಾಡೋಣ.. ಅವರ ಬಲಿದಾನವನ್ನು ಸಾರ್ಥಕಗೊಳಿಸೋಣ…

ಇಂಕ್ವಿಲಾಬ್ ಜಿಂದಾಬಾದ್.

Facebook ಕಾಮೆಂಟ್ಸ್

ಲೇಖಕರ ಕುರಿತು

Raviteja Shastri

ಗೌರಿಬಿದನೂರು ಸ್ವಂತ ಊರು. ಈಗ ಬೆಂಗಳೂರಿನಲ್ಲಿ ವಾಸ. ಅಕೌಂಟೆಂಟ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ. ಓದು ಬರವಣಗೆ, ದೇಶಸೇವೆ, ಸಮಾಜ ಸೇವೆ ನನ್ನ ಹವ್ಯಾಸಗಳು. ಉತ್ತಿಷ್ಠ ಭಾರತ ಎಂಬ ಸಂಘಟನೆಯ ಸಕ್ರಿಯ ಕಾರ್ಯಕರ್ತ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!