ನಾನು ಲತ, ಒಬ್ಬಳು ಪುಟ್ಟ ತಂಗಿ, ಅಪ್ಪ – ಅಮ್ಮ ಹೀಗೆ ಚಿಕ್ಕ ಚೊಕ್ಕ ಸಂಸಾರವಾಗಿತ್ತು ನಮ್ಮದು. ಬಡತನವೆಂಬುದು ಪಿತ್ರಾರ್ಜಿತವಾಗಿ ಬಂದ ವರದಾನವಾಗಿತ್ತು. ಇದೆಯೆಂಬುದಕ್ಕಿಂತ ಇಲ್ಲಗಳ ಸಂಖ್ಯೆಯೇ ಜಾಸ್ತಿಯಾಗಿದ್ದಿತು. ಹೊತ್ತಿನ ಊಟಕ್ಕೂ ತತ್ವಾರ. ಊಟಕ್ಕೂ ಗತಿ ಇಲ್ಲ ಎನ್ನುವಂತಹ ಸ್ಥಿತಿಗೆ ನಮ್ಮನ್ನು ನಮ್ಮಪ್ಪನೇ ತಳ್ಳಿದ್ದು. ಅಪ್ಪ ಮಹಾ ಕುಡುಕ, ಅದ್ಯಾರು ಅವನಿಗೆ ಈ ಒಳ್ಳೆ ಬುದ್ಧಿಯನ್ನು ಕಲಿಸಿದರೋ ಗೊತ್ತಿಲ್ಲ, ಮೂರು ಹೊತ್ತು ಕುಡಿದು ತೂರಾಡುತ್ತಿದ್ದ. ಹಗಲೆಲ್ಲ ಊರು ಸುತ್ತಾಡಿ ಸಂಜೆಯಾಗುತ್ತಲೇ ಹೊಟ್ಟೆ ತುಂಬಿಸಿಕೊಂಡು ಮನೆ ಸೇರುತ್ತಿದ್ದ.
ಅಪ್ಪ ತನ್ನ ಕುಡಿತದ ಖರ್ಚಿಗಾದರೂ ಕೆಲಸ ಮಾಡುತ್ತಿರಲಿಲ್ಲ. ಅದೆಲ್ಲ ಅಮ್ಮನ ಕೆಲಸವಾಗಿತ್ತು. ಯಾರ್ಯಾರದ್ದೋ ಮನೆಯಲ್ಲಿ ಮುಸುರೆ ತಿಕ್ಕಿ, ಅಲ್ಲಿ ಮಿಕ್ಕಿದ ಅನ್ನವನ್ನು ಮನೆಗೆ ತರುತ್ತಿದ್ದಳು. ಅಪ್ಪ ಕುಡಿದು ಬರುತ್ತಿದ್ದರೂ ಪರವಾಗಿರಲಿಲ್ಲ. ಆದರೆ ಹಣಕ್ಕಾಗಿ ತಾಯಿಯನ್ನು ಪೀಡಿಸುತ್ತಿದ್ದ. ಅಮ್ಮನಿಗೋ ನನ್ನ ಮತ್ತು ನನ್ನ ತಂಗಿಯ ಚಿಂತೆ. ಈ ಎರಡು ಹೆಣ್ಣು ಮಕ್ಕಳನ್ನು ದಡ ಸೇರಿಸುವ ಛಲದಲ್ಲಿ ಅಪ್ಪನಲ್ಲಿ ಸುಳ್ಳು ಹೇಳಿಕೊಂಡು ಹಣ ಉಳಿಸಲು ದಿನಾ ಹೆಣಗಾಡುತ್ತಿದ್ದಳು. ಆದರೆ ಈ ಕುಡುಕ್’ನನ್ ಮಗ ಬಿಡವನೇ? ಹಣವಿಲ್ಲದಿದ್ದರೂ ಹಣ ಕೊಡುವಂತೆ ಅಮ್ಮನಿಗೆ ಹಿಗ್ಗಾ ಮುಗ್ಗ ಹೊಡೆಯುತ್ತಿದ್ದ. ಜಡೆ ಹಿಡಿದು ಎಳೆಯುತ್ತಿದ್ದ, ಇಷ್ಟೆಲ್ಲಾ ಇರುವಾಗ ಶಾಲೆಯ ಮಾತೆಲ್ಲಿಂದ ಬಂತು? ನನಗೆ ಶಾಲೆಗೆ ಹೋಗುವ ಆಸೆಯಿದ್ದರೂ ಇದೆಲ್ಲ ನಮ್ಮಂತವರಿಗಲ್ಲಮ್ಮಾ ಎಂದು ಅಮ್ಮ ಸಮಾಧಾನಿಸುತ್ತಿದ್ದಳು. ಪುಟ್ಟ ತಂಗಿ ಅಮ್ಮ ಕೆಲಸಕ್ಕೆ ಹೋಗುವಾಗ ಅವಳ ಜೊತೆ ಹೋಗುತ್ತಿದ್ದಳು. ನಾನು ಮನೆಯಲ್ಲಿಯೇ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡಿರುತ್ತಿದ್ದೆ.
ನಾನಾಗಷ್ಟೇ ದೊಡ್ಡವಳಾಗಿ ಒಂದೋ ಎರಡೋ ವರ್ಷಗಳಾಗಿದ್ದಿರಬೇಕು. ಬಹಳ ಸುಂದರ ಅಲ್ಲದಿದ್ದರೂ ಮೈನೆರೆದು ತೆಳ್ಳಗೆ ಬೆಳ್ಳಗೆ ನಾನಿದ್ದೆ. ಆವತ್ತು, ಮನೆಯ ಕೆಲಸಗಳನ್ನೆಲ್ಲಾ ಮಾಡಿ ಸುಮ್ಮನೆ ಮಲಗಿದ್ದೆ. ಯಾರೋ ಕದ ತಟ್ಟಿದರು. ಬಾಗಿಲು ತೆರೆದು ನೋಡಿದರೆ ಅಪ್ಪ. ಇವನ್ಯಾಕೆ ಇವತ್ತು ಬೇಗ ಬಂದಿದ್ದಾನೆ ಎಂದು ಮನಸ್ಸಿನಲ್ಲೇ ಅಂದುಕೊಂಡೆ. ಎಷ್ಟೊತ್ತಿಗೆ ಬಂದರೇನು, ಬಂದಿರೋದು ಮತ್ತೆ ಕುಡಿದುಕೊಂಡು ತಾನೆ ಎನ್ನುತ್ತಾ ಒಳಬಂದೆ. ಆದರೆ ಆವತ್ತು ಮೊದಲ ಬಾರಿಗೆ ನನ್ನ ಕೈ ಹಿಡಿದ ಅಪ್ಪ, ಪ್ರೀತಿಯ ನೋಟ ಬೀರಿದ. ಬಹಳ ಖುಷಿ ಪಟ್ಟೆ. ಒಳ ಕರೆದುಕೊಂಡು ಹೋದೆ. ‘ಒಂದು ಲೋಟ ಕಾಫಿ ಮಾಡಿ ಕೊಡುವೆಯಾ’ ಎಂದ ಅಪ್ಪನ ನಡವಳಿಕೆಯಲ್ಲಿ ಏನೋ ಬದಲಾವಣೆಯಾಗಿದೆ ಅಂದುಕೊಂಡು ಕಾಫಿ ಮಾಡಿದೆ.
ನಾನೇ ನನ್ನ ಕೈಯಾರ ಅಪ್ಪನಿಗೆ ಕಾಫಿ ಕೊಟ್ಟೆ. ನನಗೆ ಆತನ ಮೇಲೆ ನಿಜವಾಗಲೂ ಪ್ರೀತಿ ಇತ್ತು. ಆದರೆ ಆತನ ಕುಡುಕ ವರ್ತನೆ ನನಗೆ ಅವನ ಮೇಲಿದ್ದ ಪ್ರೀತಿಯನ್ನು ಮರೆ ಮಾಚಿತ್ತು. ಆದಿನ ಆ ಪ್ರೀತಿ ಸ್ವಲ್ಪ ಜಾಸ್ತಿನೇ ಹೊರ ಬಂತು. ಆದರೆ ನನ್ನ ದುರಾದೃಷ್ಟ ನೋಡಿ. ಯಾವುದನ್ನು ನಾನು ಬದಲಾವಣೆ ಆಗಿದೆ ಅಂದುಕೊಂಡೆನೋ ಆ ಬದಲಾವಣೆ ಬೇರೆಯದೇ ಆಗಿತ್ತು. ನನ್ನ ಕೈಯಿಂದ ಪಡೆದ ಕಾಫಿಯನ್ನು ಬದಿಗಿಟ್ಟು ನನ್ನ ಕೈಯನ್ನೇ ಹಿಡಿದ ನನ್ನಪ್ಪ. ಏನೋ ಪ್ರೀತಿಯಿಂದ ಹೀಗಾಡುತ್ತಿದ್ದಾನೆ ಎಂದುಕೊಂಡೆ. ಅವನ ಕೈ ನನ್ನ ದೇಹವಿಡೀ ಚಲಿಸತೊಡಗಿತು. ‘ಅಲ್ಲ, ಇದು ಆ ಪ್ರೀತಿ ಅಲ್ಲ. ಇದು ಬೇರೆಯದೇ ಪ್ರೀತಿ’ ಕ್ಷಣ ಮಾತ್ರದಲ್ಲಿ ಆ ಬದಲಾವಣೆಯೇನು ಎಂದು ಅರಿತೆ. ನನ್ನ ಹೆತ್ತ ಅಪ್ಪನೇ ನನ್ನನ್ನು ಕಾಮದ ಕಣ್ಣುಗಳಿಂದ ನೋಡುತ್ತಿದ್ದ. ಭಯ, ದುಃಖ, ಆವೇಶ, ಆಕ್ರೋಶ ಎಲ್ಲವೂ ಒಮ್ಮೆಲೇ ಅನುಭವವಾಯಿತು.
‘ಅಪ್ಪ ಬೇಡ, ನಾನು ನಿನ್ನ ಮಗಳು, ಹೀಗೆಲ್ಲ ಮಾಡಬೇಡ.’ ಎಂದು ದೈನ್ಯತೆಯಿಂದ ವಿನಂತಿಸಿದೆ. ಆದರೆ ಅವನಿಗೆ ಅದೆಲ್ಲ ಎಲ್ಲಿ ಕೇಳಬೇಕು? ಕುಡಿತದ ಅಮಲು, ಕಾಮದ ಮದ ಎರಡೂ ಸೇರಿ ಮದಗಜದಂತೆ ನನ್ನ ಮೇಲೆರಗಿದ, ತಪ್ಪಿಸಿಕೊಳ್ಳಲು ನಾನು ಮಾಡಿದ ಪ್ರಯತ್ನವೆಲ್ಲ ವಿಫಲವಾಯಿತು. ಕಾಮವೆಂಬ ಎರಡು ಕ್ಷಣಗಳ ಸುಖಕ್ಕಾಗಿ ನನ್ನನ್ನೇ ಬಳಸಿಕೊಂಡ ನನ್ನಪ್ಪ. ‘ಅಮ್ಮನಿಗೆ ಹೇಳಿದರೆ ನಿನ್ನನ್ನೂ ನಿನ್ನಮ್ಮನನ್ನೂ ಕೊಂದು ಬಿಡುತ್ತೇನೆ’ ಎಂದು ಹೆದರಿಸಿ ಅಲ್ಲಿಂದ ತೆರಳಿದ.
ಅವನ ಹೆದರಿಕೆಗೆ ಮಣಿದು ಅಮ್ಮನಲ್ಲಿ ಇದನ್ನೆಲ್ಲ ಹೇಳಲಿಲ್ಲ. ಸ್ವಲ್ಪ ದಿನ ಕೊರಗಿ ಕುಬ್ಜಳಾಗಿ ಹೋದೆ ನಾನು. ಅಪ್ಪನನ್ನು ಮತ್ತು ಎಲ್ಲಾ ಪುರುಷರನ್ನು ದ್ವೇಷಿಸತೊಡಗಿದೆ. ಅಷ್ಟೇ ಅಲ್ಲ, ನನ್ನದೂ ಒಂದು ಜನುಮಾನಾ ಎಂದುಕೊಳ್ಳುತ್ತಾ ನನ್ನ ಜೀವನವನ್ನು ದ್ವೇಷಿಸಲು ಶುರುವಿಟ್ಟುಕೊಂಡೆ. ಆಗ ಮತ್ತೆ ಮನೆಗೆ ಲಗ್ಗೆಯಿಟ್ಟ ನನ್ನಪ್ಪ. ಈ ಬಾರಿಯಂತೂ ಆತನ ಮುಖದಲ್ಲೇನೂ ಬದಲಾವಣೆ ಕಾಣಲಿಲ್ಲ. ಅದೇ ಹೋದ ಬಾರಿಯಂತೆಯೇ ಕಾಮದ ಮದದಿಂದ ಲಕಲಕನೆ ಹೊಳೆಯುತ್ತಿದ್ದ ಕಣ್ಣುಗಳು. ಈ ಬಾರಿಯೂ ಪ್ರತಿಭಟಿಸಿದೆ. ಊಹೂಂ ಅದಕ್ಕೂ ಜಗ್ಗಲಿಲ್ಲ ಆತ, ತೃಷೆ ತೀರಿಸಿಕೊಂಡೇ ಬಿಟ್ಟ. ಮುಂದೆ ಇದು ಮಾಮೂಲಿ ಎಂಬಂತೆ ನಡೆಯಿತು. ಅಮ್ಮ ಮನೆಯಲ್ಲಿಲ್ಲದ ಧೈರ್ಯದಲ್ಲಿ ಇಲ್ಲ ಸಲ್ಲದ ಸಮಯದಲ್ಲಿ ಮನೆಗೆ ಬರುತ್ತಿದ್ದ ನನ್ನಪ್ಪ. ಅಮ್ಮ ಮತ್ತು ತಂಗಿಯ ಮುಖ ನೋಡಿ ವಿಷಯವನ್ನು ಅಮ್ಮನಲ್ಲಿ ಹೇಳಲು ಧೈರ್ಯ ಸಾಲಲಿಲ್ಲ. ಮೊದ ಮೊದಲೆಲ್ಲ ತೀವ್ರವಾಗಿ ಪ್ರತಿಭಟಿಸುತ್ತಿದ್ದ ನಾನು ಇದು ಮಾಮೂಲಿಯಾಗುತ್ತಿದ್ದಂತೆ ನಾನೇ ಅದಕ್ಕೆ ಒಗ್ಗಿಕೊಂಡೆ. ಅವನಿಗೆ, ಬೇಕಾದಾಗೆಲ್ಲ ಮೈಯೊಡ್ಡಿದೆ, ಮೇಷಿನಿನಂತಾಗುತ್ತಿದ್ದೆ ನಾನು.
ಅತ್ತ ಅಮ್ಮ ನನಗೆ ಮದುವೆಯ ವಯಸ್ಸಾಗುತ್ತಿದೆ ಎಂದು ಇನ್ನಷ್ಟು ದುಡಿದು ಹಣ ಹೊಂದಿಸಿಕೊಳ್ಳುತ್ತಿದ್ದಳು. ಹೊತ್ತಾರೆ ಮನೆ ಬಿಡುತ್ತಿದ್ದವಳು ಮನೆಗೆ ಬರೋವಾಗ ರಾತ್ರಿ ಹತ್ತಾಗುತ್ತಿತ್ತು. ಅದಕ್ಕೂ ಅಪ್ಪ ಅಮ್ಮನಿಗೆ ಇಲ್ಲ ಸಲ್ಲದ್ದು ಹೇಳಿ ಅವಾಚ್ಯವಾಗಿ ಬೈಯ್ಯುತ್ತಿದ್ದ. ಆದರೂ ಸಹಿಸಿಕೊಳ್ಳುತ್ತಿದ್ದಳು ಆ ಮಮತಾಮಯಿ. ತಾನಲ್ಲದಿದ್ದರೂ ನನ್ನ ಮಗಳಾದರೂ ಒಳ್ಳೇ ಮನೆ ಸೇರಿ ಸುಖವಾಗಿರಲಿ ಎನ್ನುವುದು ಆಕೆಯ ಏಕೈಕ ಆಸೆಯಾಗಿತ್ತು. ಆದರೇನು ಮಾಡುವುದು, ನಾನು ಗರ್ಭಿಣಿಯಾಗಿದ್ದೆ. ಈ ಬಾರಿಯಂತೂ ಮುಚ್ಚಿಡಲು ಸಾಧ್ಯವೇ ಇಲ್ಲ. ಅಂತಹಾ ವಿಷಯಗಳನ್ನು ಆಕೆಯ ಬಳಿಯಲ್ಲದೇ ಮತ್ಯಾರ ಬಳಿ ಹೇಳಲಿ? ಹೇಗೋ ಧೈರ್ಯ ಮಾಡಿ ಹೆದರಿ ಬಿಕ್ಕುತ್ತಾ ಎಲ್ಲವನ್ನೂ ಹೇಳಿ ಬಿಟ್ಟೆ.
ಆಕೆಗೆ ಬರಸಿಡಿಲು ಬಡಿದಂತಾಯ್ತು. ‘ಅಯ್ಯೋ, ನನ್ನ ಹಣೆ ಬರಹವೇ’ ಎಂದು ಗೋಗರೆದಳು. ಅಪ್ಪನಿಗೆ ಹಿಡಿಶಾಪ ಹಾಕಿದಳು. ಎದೆಬಡಿದುಕೊಂಡಳು. ಆದರೆ ಅದಕ್ಕಿಂತ ಭಯಂಕರ ಸಿಡಿಲೊಂದನ್ನು ಸಿಡಿಸಿ ಬಿಟ್ಟಳು ನನ್ನಮ್ಮ. ಅದೇನೆಂದರೆ ‘ನೀವಾದರೂ ಸುಖವಾಗಿರಿ ಎಂದು ಯಾರ್ಯಾರದ್ದೋ ಬಳಿ ಕೆಲಸ ಮಾಡಿದೆ. ಕೆಲಸ ಮಾಡುವಾಗ ಅದೆಷ್ಟೋ ಬಾರಿ ಧಣಿಯವರ ಕಾಮ ದಾಹಕ್ಕೆ ನಾನೂ ಬಲಿಯಾದೆ. ಆದರೆ ಸ್ವಲ್ಪ ಜಾಸ್ತಿ ಹಣ ಕೊಡುತ್ತಾರೆ, ಇದರಿಂದ ನಿನ್ನ ಮದುವೆಗೆ ಉಪಕಾರವಾಗಬಹುದೆಂದು ಎಲ್ಲವನ್ನೂ ಸಹಿಸಿದೆ. ಆದರೆ ನಿನಗೂ ಆ ಗತಿ ಬಂತೇ ಮಗಳೇ? ಅದೂ ನಿನ್ನ ಹೆತ್ತ ತಂದೆಯಿಂದ? ಅಯ್ಯೋ.. ಎಂಧಾ ಪಾಪಿ ತಾಯಿ ನಾನು.’ ಎಂದು ಮುಗಿಲು ಮುಟ್ಟುವಂತೆ ಕೂಗಿದಳು. ನನ್ನನ್ನು ಬಿಗಿದಪ್ಪಿಕೊಂಡು ಇನ್ನೂ ಜೋರಾಗಿ ಅತ್ತಳು. ಅವಳ ಸಂಕಟ ನೋಡಿ ನನಗೂ ತಡೆದುಕೊಳ್ಳಲಾಗಲಿಲ್ಲ.
‘ಇಲ್ಲ, ಈ ಎರಡು ಹೆಣ್ಣೂ ಮಕ್ಕಳನ್ನು ಕಟ್ಟಿಕೊಂಡು ಇನ್ನು ಬದುಕುವುದು ಅರ್ಥವಿಲ್ಲ. ಇನ್ನು ಬದುಕಿದರೆ ಸಣ್ಣ ಮಗಳಿಗೂ ಇದೇ ಗತಿ ಎಂದುಕೊಂಡು ಅಮ್ಮ ನಮಗಿಬ್ಬರಿಗೂ ವಿಷವಿಕ್ಕಿದಳು. ಅಲ್ಲಿಯೂ ದುರಾದೃಷ್ಟವೆಂಬುದು ನನ್ನ ಬಿಡಲಿಲ್ಲ. ಅವರಿಬ್ಬರು ಸತ್ತು ಹೋದರೆ ನಾನು ಮಾತ್ರ ಬದುಕುಳಿದೆ. ವಿಷದ ಪೆಟ್ಟಿಗೆ ನನ್ನ ಹೊಟ್ಟೆಯೊಳಗಿದ್ದ ಗರ್ಭ ಕರಗಿತು. ನನ್ನಪ್ಪನ ಕೃತ್ಯ ಬಯಲಾಗಿ ಆತನನ್ನು ಜೈಲಿಗೆ ಹಾಕಿದರು. ನಾನು ಅನಾಥಳಾದೆ… ಹೇಳಿ ನನದೆಂಥಹಾ ಹಣೆಬರಹ ಇದು??
– ಅನಷ್ಕು
bhavatharanga.rk@gmail.com