ಅಂಕಣ

ಬದುಕೆಂಬ ಮಾಯೆ!!!

ಬದುಕು; ಒಂದು ಮಾಯೆ. ‘ಮಾಯೆ’ ಎನ್ನಲು ಕಾರಣವಿದೆ. ಅದೇನೆಂದರೆ, ಈ ಬದುಕು ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣುತ್ತದೆ. ಹುಟ್ಟುತ್ತಲೇ ತಂದೆ-ತಾಯಿಯರನ್ನು ಕಳೆದುಕೊಂಡು ಅನಾಥವಾಗಿ,ಏಕಾಂಗಿಯಾಗಿ ಬೆಳೆದ ಒಂದು ಮಗುವಿಗೆ ಬದುಕು ಕ್ರೂರಿಯಾಗಿ ಕಂಡರೆ, ತಾಯಿಯ ಎದೆಹಾಲಿನ ಸವಿ ಸವಿದು, ತಂದೆಯ ಭುಜಗಳ ಮೇಲೆ ಸವಾರಿ ಮಾಡುತ್ತಾ, ಅಣ್ಣನ ಕಾಳಜಿಯಲ್ಲಿ, ಅಕ್ಕನ ಪ್ರೀತಿಯ ಅಪ್ಪುಗೆಯಲ್ಲಿ,ತಂಗಿಯ ಜೊತೆಗಿನ ಹುಸಿ ಕೋಪ ಜಗಳಗಳ ನಡುವೆಯೂ ಒಬ್ಬರನ್ನೊಬ್ಬರು ಬಿಟ್ಟಿರಲಾರದೆ ತೊಳಲಾಡುವ ಮುಗ್ದ ಒಲವಿನ ಜೊತೆ ಬೆಳೆದ ಮಗುವಿಗೆ ಬದುಕು ಒಂದು ಪ್ರೀತಿಯ ಪರಿಮಳ ಬೀರುವ ಸುಂದರಹೂದೋಟದಂತೆ ಕಾಣಬಹುದು.

ಇದೇ ಭಾವಗಳು ಕಾಲಕ್ರಮೇಣ ಅದಲು-ಬದಲು ಕೂಡ ಆಗಬಹುದು. ಅಂದರೆ ಆ ಅನಾಥ ಮಗು ಬೆಳೆದು ಪ್ರಾಯಪ್ರಬುದ್ಡನಾದಾಗ ಅವನ ಪ್ರತಿಯೊಂದು ಭಾವಗಳಿಗೆ ಸ್ಪಂದಿಸುವ ಒಬ್ಬ ಬಾಳಸಂಗಾತಿಜೊತೆಯಾದರೆ, ಅವನೇ ಕ್ರೂರಿ ಎಂದಿದ್ದ ಬದುಕು ಅವನಿಗೆ ಪ್ರೀತಿ ಅಮೃತವನ್ನಿತ್ತ  ಪಾಲ್ಗಡಲೆನಿಸಬಹುದು. ಅಂತೆಯೇ ಎಲ್ಲರ ಪ್ರೀತಿಯ ನೆರಳಲ್ಲಿ ಬೆಳೆದ ಮಗುವಿಗೆ ಆ ಪ್ರೀತಿ ವೃಕ್ಷದ ಯಾವುದೋ ಒಂದು ಕೊಂಬೆಯಅಗಲಿಕೆಯು ಈ ಬದುಕು ಕ್ರೂರ ಎಂದೆನಿಸುವ ಭಾವ ಬರಿಸಬಹುದು. ಅಂದಮೇಲೆ ಬದುಕು ಮಾಯೆಯಲ್ಲದೆ ಇನ್ನೇನು…??? ಅಲ್ಲವೇ…???

ಹೀಗೆ ಸಮಯದ ಜೊತೆ ತನ್ನ ವ್ಯಾಖ್ಯಾನವನ್ನು, ಹಾಗೂ ತನ್ನ ಬಗೆಗಿನ ಅಭಿಪ್ರಾಯಗಳನ್ನು ಬದಲಾಯಿಸಿಕೊಳ್ಳುತ್ತಾ ಸಾಗುವ ‘ಬದುಕು’ ಎಂಬ ಮಾಯೆ ಆರಂಭವಾಗುವುದು ‘ಹುಟ್ಟು’ ಎಂಬ ಸಿಹಿ ಘಳಿಗೆಯಿಂದ.ಒಂಭತ್ತು ತಿಂಗಳುಗಳ ಕಾಲ ತನ್ನ ಮಗುವಿನ ಬಗ್ಗೆ ನಾನಾ ಕನಸುಗಳನ್ನು ಕಾಣುತ್ತಾ ತನ್ನ ಬೆಚ್ಚನೆ ಗರ್ಭದಲ್ಲಿ ಕಾಳಜಿಯಿಂದ ಕಾಪಾಡಿಕೊಂಡ ಒಬ್ಬ ಹೆಣ್ಣು, ತನ್ನ ಕನಸಿನ ಭೌತಿಕ ರೂಪವನ್ನು ಕಣ್ಣಾರೆ ಕಾಣುವ; ಸ್ಪರ್ಷಿಸಿರೋಮಾಂಚನಗೊಳ್ಳುವ ಸಿಹಿ ಘಳಿಗೆಯದು. ಅಂತೆಯೇ ಒಂಭತ್ತು ತಿಂಗಳುಗಳ ಕಾಲ ತಾಯಿ ಗರ್ಭದಲ್ಲಿ ಅಡಗಿದ್ದ ಮಗು ಹೊರಬಂದು ತನ್ನ ತಾಯಿಯ ಕಂಗಳಲ್ಲಿ ತನ್ನ ಪ್ರತಿಬಿಂಬ ಕಂಡು ತನ್ನನ್ನು ತಾನೇ ಹಿಡಿಯಲೋಎಂಬಂತೆ ಆ ತಾಯಿಯ ಕಂಗಳೆಡೆ ತನ್ನ ಪುಟ್ಟ ಕೈಗಳನ್ನು ಚಾಚುವ ಸಿಹಿ ಘಳಿಗೆಯದು. ಆದರೆ ಕೆಲವು ಜೀವಗಳಿಗೆ ಆ ತಾಯಿ ಕಂಗಳೇ ಕಾಣದಾಗುತ್ತವೆ. ಬದಲಾಗಿ ತನ್ನವರನ್ನು ತನ್ನಿಂದ ದೂರ ಮಾಡಿದ ಈ ಬದುಕು ಆಪುಟ್ಟ ಕೂಸಿನ ಕಣ್ತುಂಬಿಕೊಳ್ಳುತ್ತದೆ. ಹೊಸ ಹೊಸ ಸವಿ ಕನಸುಗಳು ಅರಳಬೇಕಿದ್ದ ಪುಟ್ಟ ಹೃದಯದಲ್ಲಿ ಬದುಕಿನ ಕ್ರೂರತೆಯ ಕೆಟ್ಟ ಕನಸು ಮನೆಮಾಡುತ್ತದೆ. ನಿಜವಾದ ಬದುಕು ಆರಂಭವಾಗುವುದು ಇಲ್ಲಿಂದ.

ಕೆಟ್ಟ ಕನಸುಗಳ ಜೊತೆ ಜೀವನದ ಪಯಣ ಆರಂಭಿಸಿದ ಜೀವಗಳ ಬದುಕು, ಅವರು ಆ ಕೆಟ್ಟ ಕನಸುಗಳನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಕೆಲವರು ಅದನ್ನು ಮರೆತು ತಮ್ಮಮುಂದಿನ ಜೀವನವನ್ನು ಸಿಹಿಗನಸಾಗಿ ಪರಿವರ್ತಿಸುವತ್ತ ತೊಡಗಿದರೆ, ಇನ್ನು ಕೆಲವರು ತಮಗೆ ದ್ರೋಹ ಬಗೆದ(ಅವರ ಅಭಿಪ್ರಾಯದಲ್ಲಿ) ಬದುಕಿನ ಜೊತೆಗೆ ಪ್ರತೀಕಾರಕ್ಕೆ ಸಜ್ಜಾಗುತ್ತಾರೆ. ಅವರು ಬದುಕು ಮತ್ತು ತಾವುಬೇರೆ ಬೇರೆ ಎಂಬ ಭ್ರಮೆಯಲ್ಲಿರುತ್ತಾರೆ. ಆದರೆ ಅದು ಅವರದೇ ಬದುಕು, ಅದರ ಜೊತೆ ಜಿದ್ದಿಗೆ ನಿಂತರೆ ಹಾಳಾಗುವುದು ಅವರದೇ ಕನಸುಗಳು ಅಂತ ತಿಳಿಯುವುದೇ ಇಲ್ಲ. ತಿಳಿದರೂ ತಿಳಿಯುವ ಹೊತ್ತಿಗೆ ಅವರದೇಬದುಕು ಅವರ ಕೈಯಿಂದಲೇ ಸರಿಪಡಿಸಲಾಗದಷ್ಟು ಹಾಳಾಗಿರುತ್ತದೆ. ಇನ್ನು ಸಿಹಿಗನಸುಗಳ ಮೂಟೆ ಹೊತ್ತು ಬಂದವರೆಲ್ಲ ಒಳ್ಳೆ ದಾರಿಯಲ್ಲಿ ಸಾಗಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳುತ್ತಾರೆಂದಲ್ಲ, ಅಲ್ಲೂ ಕೆಲವರು’ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂಬ ಸಾಲಿನ ಅನುಯಾಯಿಗಳಂತೆ ಹುಚ್ಚು ಆಸೆಗಳ ಬೆನ್ನೇರಿ ಎಲ್ಲವನ್ನು ಕಳೆದುಕೊಂಡು ತಮ್ಮ ಕಂಗಳಲ್ಲಿನ ಸವಿಗನಸುಗಳು ಕಣ್ಣೀರಾಗಿ ಹರಿದು ಹೋಗುವುದುಕಾಣುತ್ತಿದ್ದರೂ ಅವನ್ನು ಉಳಿಸಿಕೊಳ್ಳಲಾರದ ಅಸಹಾಯಕ ಸ್ಥಿತಿಗೆ ತಲುಪಿರುತ್ತಾರೆ. ಇದೇ ಕಾರಣಕ್ಕೆ ನಾನು ಈ ಬದುಕನ್ನು ಮಾಯೆ ಎಂದಿರುವುದು. ನಮಗೆ ಗೊತ್ತಿದ್ದೂ ಗೊತ್ತಿದ್ದೂ ತಪ್ಪುಗಳನ್ನು ಮಾಡುತ್ತೇವೆ. ಯಾಕೆಹೀಗೆ??? ಇದು ನನ್ನನ್ನೇ ನಾನು ಹಲವಾರು ಬಾರಿ ಕೇಳಿಕೊಂಡ ಪ್ರಶ್ನೆ. ಇನ್ನೂ ಉತ್ತರದ ಹುದುಕಾಟದಲ್ಲಿದ್ದೇನೆ.

ಗೆಳೆಯರೆ, ಈ ಬದುಕು ತುಂಬಾ ಮೌಲ್ಯಯುತವಾದದ್ದು. ಎರಡನೇ ಬಾರಿ ಉತ್ತರಿಸಲಾಗದ ಪ್ರಶ್ನೆಪತ್ರಿಕೆ ಅದು. ಇನ್ನು ಯಾರಾದರೂ ಜನ್ಮಾಂತರಗಳ ಬಗ್ಗೆ ನಂಬಿಕೆ ಇಡುವವರ ದೃಷ್ಟಿಕೋನದಲ್ಲಿನೋಡುವುದಾದರೆ ನಮಗೆ ಇನ್ನೊಂದು ಜನ್ಮ ಇದ್ದರೂ ಮನುಷ್ಯ ಜನ್ಮ ಎಂಬ ಖಾತರಿ ಇಲ್ಲ. ಒಂದು ವೇಳೆ ಮನುಷ್ಯನೇ ಆಗಿ ಹುಟ್ಟಿದರೂ ಮತ್ತೆ ನಾನು ನಾನಾಗಿರಲು  ಸಾಧ್ಯವಿಲ್ಲ. ಆದ್ದರಿಂದ ಈ ಬದುಕಿನ ಪ್ರತಿ ಕ್ಷಣವನ್ನೂಆಸ್ವಾದಿಸಿ. ಖಂಡಿತವಾಗಿಯೂ ಎಲ್ಲ ಕ್ಷಣಗಳು ಸುಖ ನೀಡುವುದಿಲ್ಲ. ಆದರೆ ನೋವಿನ ಕ್ಷಣಗಳು  ಯಾವುದಕ್ಕೂ ಅಂತ್ಯ ಅಲ್ಲ. ಅವು ಹೂದೋಟದಲ್ಲಿ ಸುತ್ತಾಡುವಾಗ ಚುಚ್ಚಿಕೊಳ್ಳುವ ಮುಳ್ಳಿದ್ದಂತೆ. ಮುಳ್ಳು ಚುಚ್ಚಿತೆಂದುಹೂದೋಟದ ಸುತ್ತಾಟವನ್ನು ನಿಲ್ಲಿಸಲಾದೀತೇ? ಅಥವಾ ಹೂಗಿಡಗಳನ್ನು ಕಡಿಯಲಾದೀತೆ? ಎರಡೂ ಆಗದು. ಹಾಗೆ ಮಾಡಿದರೆ ಅದು ಹುಚ್ಚುತನದ ಪರಮಾವಧಿಯಾಗುತ್ತದೆ. ಅಂತೆಯೇ ಬದುಕಿನ ಅಲ್ಪ ನೋವಿನಕ್ಷಣಗಳಿಗೋಸ್ಕರ ಅದರಲ್ಲಿನ ನೂರಾರು ಸಂತೋಷದ ಕ್ಷಣಗಳನ್ನು ಕಳೆದುಕೊಳ್ಳುವುದು ಅವಿವೇಕಿತನವಲ್ಲವೇ?

ಒಂದು ರೀತಿ ಆಲೋಚಿಸಿದಾಗ ನಮಗೆ ‘ಸಂತೋಷ’ ದ ಅರ್ಥ ಇನ್ನೂ ಆಗಿಲ್ಲ. ನಾವು ಸಂತೋಷವನ್ನು ಹುಡುಕುತ್ತೇವೆ. ಅಲ್ಲೇ ನಾವು ಎಡವುವುದು. ನಮ್ಮ ದೈನಂದಿನ ಬದುಕಿನಲ್ಲಿ ನಾವು ಎಷ್ಟೋ ವಿಷಯಗಳಿಗೆನಗುತ್ತೇವೆ. ಆ ನಗು ಕೂಡ ಸಂತೋಷದ, ಸುಖದ ಬದುಕಿನ ಒಂದು ಭಾಗ ಎಂದು ನಮಗನಿಸುವುದೇ ಇಲ್ಲ.  ನಾವಿನ್ನೆಲ್ಲೊ ಇನ್ಯಾವುದೋ ರೀತಿ ಸುಖದ ಬದುಕಿನ ಬೇಟೆಯಲ್ಲಿ ಮಗ್ನರಾಗಿರುತ್ತೇವೆ. ಅದೇನನ್ನ ನಾವುಹುಡುಕುತ್ತಿದ್ದೇವೆ ಅಂದರೆ ನಮಗೇ ಉತ್ತರ ತಿಳಿಯದಂತ ಸ್ಥಿತಿ ನಮ್ಮದು. ಚಿಕ್ಕ-ಪುಟ್ಟ ಸಂತೋಷದ ಕ್ಷಣಗಳಲ್ಲಿ ನಮ್ಮ ಮೊಗದಲ್ಲಿ ಮೂಡುವ ನಗುವನ್ನ ನಾವು ಎಂದು ಮನಸ್ಪೂರ್ತಿಯಾಗಿ ಆಸ್ವಾದಿಸುತ್ತೇವೋ ಅಂದುನಮ್ಮ ಈ ಸುಖದ ಬದುಕಿನ ಬೇಟೆಯನ್ನು ನಾವೇ ಕೊನೆಗೊಳಿಸಿಕೊಳ್ಳುತ್ತೇವೆ.

ಬದುಕಿನ ಸುಖ-ಸಂತೋಷ ಇರುವುದು ಹಣದ ಬೇಟೆಯಲ್ಲಲ್ಲ, ದ್ವೇಷದ ಉರಿಯಲ್ಲಲ್ಲ, ಸ್ವಾರ್ಥದ ಸುಳಿಯಲ್ಲಲ್ಲ, ಅನೈತಿಕತೆಯ ಅಟ್ಟಹಾಸದಲ್ಲಲ್ಲ. ಬದಲಾಗಿ ಅದಿರುವುದು ತಾಯಿಯ ಮಮತೆಯ ಮಡಿಲಲ್ಲಿ,ತಂದೆಯ ಕನಸುಗಳ ಸಾಕಾರದಲ್ಲಿ, ಅಣ್ಣನ ಇರುವಿಕೆಯ ಧೈರ್ಯದಲ್ಲಿ, ತಮ್ಮನ ಭವಿಶ್ಯದ ಜವಾಬ್ದಾರಿಯಲ್ಲಿ, ಅಕ್ಕನ ಕಾಳಜಿಯ ಅಪ್ಪುಗೆಯಲ್ಲಿ, ತಂಗಿಯ ಹುಸಿ ಮುನಿಸ ಮುಗ್ಡತೆಯಲ್ಲಿ, ಸ್ನೇಹಿತರ ಸಂಗಡದಹುಡುಗಾಟದಲ್ಲಿ, ಜೀವದ ಗೆಳತಿಯೊಂದಿಗಿನ ಪಿಸುಮಾತುಗಳಲ್ಲಿ. ಆದರೆ ನಾನು ಮೊದಲೇ ಹೇಳಿದಂತೆ ಬದುಕು ಮಾಯೆ, ಮರೂಭೂಮಿಯ ಮರೀಚಿಕೆಯಂತೆ ಇಲ್ಲದಿರುವ ಸಂತೋಷವನ್ನು ಇರುವುದೆಂಬಂತೆಬಿಂಬಿಸುತ್ತದೆ. ಆ ಮಾಯೆಗೆ ಮರುಳಾದ ನಾವು ಇರುವ ಸಿಹಿಗನಸುಗಳನ್ನು ಸಾಕಾರಗೊಳಿಸುವುದನ್ನು ಬಿಟ್ಟು, ಸಿಗದ ಮರೀಚಿಕೆಯ ಬೆನ್ನೇರುತ್ತೇವೆ. ಕೊನೆಗೆ ಒಂದು ದಿನ ಓಡಿ ಸುಸ್ತಾಗಿ ಹಿಂದಿರುಗಲು ಮನಸ್ಸುಬಯಸಿದಾಗ ಹಿಂದಿರುಗಲಾರದಷ್ಟು ಮುಂದೆ ಬಂದಿರುತ್ತೇವೆ.

ಆದ್ದರಿಂದ ಬದುಕು ಎಂಬ ಮಾಯೆಯನ್ನು ಮೀರಿ ನಿಲ್ಲೋಣ, ಕಹಿ ನೆನಪುಗಳನ್ನು ಮರೆತು, ಸಿಹಿಗನಸುಗಳ ಸಾಕಾರದೆಡೆಗೆ ಪಯಣ ಬೆಳೆಸೋಣ. ಪ್ರತಿ ಕ್ಷಣವನ್ನು ಆಸ್ವಾದಿಸೋಣ, ಬದುಕು ಕ್ರೂರ ಎನಿಸಿದರೂ,ಅದು ‘ನಮ್ಮ ಬದುಕು’ ಎಂಬುದನ್ನು ಮರೆಯದೆ, ಅದರ ಕ್ರೂರತೆಯನ್ನು ಮೆಟ್ಟಿ ಪ್ರೀತಿಯ, ಸ್ನೇಹದ, ನಗುವಿನ ಸಿಂಚನ ಮಾಡೋಣ.

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!