ಅವರಿಬ್ಬರ ಪರಿಚಯವಾಗಿದ್ದೇ ಒಂದು ಆಕಸ್ಮಿಕ. ಫ್ರೆಂಡ್ ಅನುಷಾಳ ಮದುವೆಗೆಂದು ಮೈಸೂರಿಗೆ ಬಂದಿದ್ದ ಕಾರ್ತಿಕ್. ಸೋ ಇವನು ಹುಡುಗಿಯ ಕಡೆಯವನು. ಮತ್ತವಳು ಹುಡುಗನ ಅತ್ತೆ ಮಗಳು. ಸೋ ಅವಳು ಹುಡುಗನ ಕಡೆ. ಆಕ್ಚ್ವಲ್ಲಿ ರೂಪಾಳದ್ದು ಟಿಪಿಕಲ್ ಅಯ್ಯಂಗಾರ್ ಫ್ಯಾಮಿಲಿ. ಈ ಮದುವೆ ಹಿಂದಿನ ದಿನ ಜೋರಾಗಿ ಡಿಜೆ ಹಾಕೋದು, ಕುಣಿಯೋದು ಇಂತದ್ದಕ್ಕೆಲ್ಲಾ ಅವಕಾಶವೇ ಇಲ್ಲ ಅಲ್ಲಿ. ಆದರೀಗ ಎಲ್ಲರೂ ಹೈಲೀ ಎಜುಕೇಟೆಡ್ಡೇ. ಹೊಸತನಗಳಿಗೆ ಒಗ್ಗಿಕೊಂಡಿದ್ದಾರೆ. ಹಾಗೆ ಆ ಮದುವೆಯ ಹಿಂದಿನ ದಿನವೂ ಡಿಜೆ ಜೋರಾಗಿಯೇ ಹಾಕಲಾಗಿತ್ತು. ಹುಡುಗನ ಕಡೆಯವರು ಹುಡುಗಿ ಕಡೆಯವರು ಎಲ್ಲರು ಒಟ್ಟಿಗೆ ಸೇರಿ ಟಪಾಂಗುಚಿ ಸ್ಟೆಪ್ ಹಾಕಿದ್ದರು.
ಕಾರ್ತಿಕ್ ರೂಪಾ ಒಂದೇ ಟ್ರ್ಯಾಕಿಗೆ ಬಂದಿದ್ದೇ ಅಲ್ಲಿ ನೋಡಿ. ಮೊದಲನೆಯದಾಗೆ ರೂಪಾಳ ಮೈಮಾಟಕ್ಕೆ ಕಾರ್ತಿಕ್ ಫ಼್ಲ್ಯಾಟ್ ಆಗಿದ್ದ. ನೋಡಲು ಅಷ್ಟೇನೂ ಹ್ಯಾಂಡ್’ಸಮ್ ಅಲ್ಲದಿದ್ದರೂ ಕಾರ್ತಿಕ್’ನ ಕುರುಚಲು ಗಡ್ಡ, ವಾರೆ ನೋಟಕ್ಕೆ ಇವಳೂ ಸೋತಿದ್ದಳು. ಅದೊಂದು ಪರ್ಫ಼ೆಕ್ಟ್ ಲವ್ ಅಟ್ ಫಸ್ಟ್ ಸೈಟ್. ಆ ರಾತ್ರಿ ಮೂರು ಗಂಟೆಯವರೆಗೆ ಕುಣಿದು ಮಲಗಿದ್ದರು ಎಲ್ಲರೂ.
ಮದುವೆಯ ದಿನ ಕೇಳಬೇಕೆ? ಮಿರ ಮಿರ ಮಿಂಚುವ ಸಾರಿ, ಡೀಪಾದ ಬ್ಲೌಸು ಮತ್ತು ಸೊಂಟಕ್ಕಿಂತ ತುಂಬಾನೇ ಕೆಳಗೆ ಸಾರಿ ಉಟ್ಟಿದ್ದರಿಂದ ಒಮ್ಮೆಗೆ ಎಂಥಾ ಹುಡುಗರೂ ಅವಳ ಮೈಮಾಟಕ್ಕೆ ಆಕರ್ಷಿತರಾಗುತ್ತಿದ್ದರು. ಎಲ್ಲರೂ ಮದುವೆಯ ಗೌಜಿಯಲ್ಲಿ ಬುಸಿಯಿದ್ದರೆ ಕಾರ್ತಿಕ್’ನ ಗಮನವಂತೂ ಇವಳ ಮೇಲೇಯೇ. ಅವಳ ಗಮನವೂ ಇವನ ಮೇಲೇನೇ ಇತ್ತು. ಆದರೂ ಎಲ್ಲಾ ಹುಡುಗಿಯರು ಮಾಡುವಂತೆ ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ. ಅಂತೂ ಮದುವೆಯ ಊಟ, ಸಂಭ್ರಮಕ್ಕೆಲ್ಲಾ ತೆರೆ ಬಿತ್ತು. ಹೊರಡುವಾಗ ಇಬ್ಬರೂ ಧೈರ್ಯ ಮಾಡಿ ನಂಬರ್ ವಿನಿಮಯ ಮಾಡಿಕೊಂಡಿದ್ದರು.
ಮತ್ತೆ ಗೊತ್ತಲ್ಲ… ಪ್ರೀತಿ ಪ್ರೇಮ ಪ್ರಣಯ.. ಇವಳ ಮನೆ ಬೆಂಗಳೂರು. ಕಾರ್ತಿಕ್ ಆಗಷ್ಟೇ ಕೆಲಸಕ್ಕೆಂದು ಬೆಂಗಳೂರಿಗೆ ಬಂದವನು. ಒಂದೇ ಊರಿನಲ್ಲಿದ್ದ ಕಾರಣ ಇವರ ಪ್ರಣಯ ವೀಕೆಂಡುಗಳಲ್ಲಿ ಸಾಂಗವಾಗಿ ನೆರವೇರುತ್ತಿತ್ತು. ಮಂತ್ರಿ ಮಾಲ್, ಓರಿಯನ್ ಮಾಲ್ ಸುತ್ತುವುದು, ಪಿವಿಆರ್’ನಲ್ಲಿ ಹೊಸ ಹಿಂದಿ ಸಿನೆಮಾ ನೋಡುವುದು, ಪಾಪ್ ಕಾರ್ನ್ ತಿನ್ನುವುದೆಲ್ಲ ಎಗ್ಗಿಲ್ಲದೆ ನಡೆಯುತ್ತಿದ್ದವು. ಮದುವೆಯಾದರೆ ಇವನನ್ನೇ/ಇವಳನ್ನೇ ಎಂದು ಕೆಲವೇ ದಿನಗಳಲ್ಲಿ ನಿರ್ಧಾರ ಮಾಡುವಷ್ಟರ ಮಟ್ಟಿಗೆ ಡೀಪಾಗಿತ್ತು ಇವರ ಲವ್ವು. ಲವ್ವು ಅದೆಷ್ಟು ಡೀಪಾಗಿದ್ದರೂ ಅಲ್ಲೆಲ್ಲೂ ಅಶ್ಲೀಲತೆಯ ಸೋಗಿರಲಿಲ್ಲ. ಪ್ರೀತಿಯ ನಶೆಯಲ್ಲಿ ಎಚ್ಚರ ತಪ್ಪಬಾರದೆಂಬ ಜ್ಞಾನ ಇತ್ತು ಅವರಿಬ್ಬರಿಗೂ. ಅಲ್ಲದೆ ಅಪ್ಪ ಅಮ್ಮನದೇನೂ ಭಯವಿರಲಿಲ್ಲ. ಒಂದೇ ಕಾಸ್ಟ್, ಹೇಗಾದರೂ ಕನ್ವೆನ್ಸ್ ಮಾಡಬಹುದೆಂಬ ಧೈರ್ಯ ಇಬ್ಬರಿಗೂ ಇತ್ತು. ಬೆಳಗ್ಗೆ ಎಂಟು ಗಂಟೆಗೆ ‘ಗುಡ್ ಮಾರ್ನಿಂಗ್ ಡಾರ್ಲಿಂಗ್’ನಿಂದ ಶುರುವಾಗುತ್ತಿದ್ದ ದಿನ, ಮಧ್ಯರಾತ್ರಿ ಎರಡು ಗಂಟೆಗೆಲ್ಲಾ ‘ಗುಡ್ ನೈಟ್ ಸ್ವೀಟ್ ಹಾರ್ಟ್, ಲವ್ ಯೂ, ಉಮ್ಮಾ…” ಎನ್ನುವಲ್ಲಿಗೆ ಕೊನೆಯಾಗುತ್ತಿತ್ತು.
ಒಂದಿನ ಏನಾಯ್ತೆಂದರೆ ಇಪ್ಪತ್ನಾಲ್ಕು ಘಂಟೆ ಮೆಸ್ಸೇಜ್ ಮಾಡುತ್ತಿದ್ದ ರೂಪಾ ಆದಿನ ಬೆಳಗ್ಗೆ ಇವನದೆಷ್ಟು ಮೆಸ್ಸೇಜ್ ಮಾಡಿದರೂ ಒಂದೂ ರಿಪ್ಲೈ ಮಾಡಲಿಲ್ಲ. ವಾಟ್ಸಾಪ್ ಲಾಸ್ಟ್ ಸೀನ್ ನಿನ್ನೆ ರಾತ್ರಿಯದ್ದೇ ತೋರಿಸುತ್ತಿತ್ತು. ಒಟ್ಟಿನಲ್ಲಿ ಅವಳ ಯಾವ ಸುಳಿವೂ ಇಲ್ಲ. ಕಾರ್ತಿಕ್ ಅವಳ ಜೊತೆಗೆ ಒಮ್ಮೆಯೂ ಮಿಸ್ ಬಿಹೇವ್ ಮಾಡಿದವನಲ್ಲ, ಅವಳಿಗೆ ಬೇಸರವುಂಟುಮಾಡಿದವನಲ್ಲ. ಆದರೂ ನನ್ನ ಮೇಲೇನಾದರೂ ಕೋಪ ಬಂದಿರಬಹುದೇ ಇವಳಿಗೆ? ನಿನ್ನೆ ರಾತ್ರಿ ಅಷ್ಟು ಚಂದದಲ್ಲಿ ಗುಡ್ ನೈಟ್ ಹೇಳಿದವಳಿಗೇನಾಯ್ತಪ್ಪ ಸಡನ್ನಾಗಿ’ ಅಂತಂದುಕೊಂಡ ಕಾರ್ತಿಕ ಕಾಲ್ ಮಾಡಿದ. ಅದಕ್ಕೂ ನೋ ರೆಸ್ಪಾನ್ಸ್. ಒಂದು ಕ್ಷಣವೂ ಅವಳನ್ನು ಬಿಟ್ಟಿರಲಾರದ ಕಾರ್ತಿಕ್’ಗೆ ಏನು ಮಾಡುವುದೆಂದು ತೋಚಲಿಲ್ಲ. ಗ್ರಹಚಾರಕ್ಕೆ ಅವಳ ಸ್ನೇಹಿತರ ಪರಿಚಯವೂ ಇಲ್ಲ. ಮನೆ ಮಲ್ಲೇಶ್ವರದ ಸಂಪಿಗೆ ರಸ್ತೆ ಪಕ್ಕದಲ್ಲೇ ಇರೋದು ಅನ್ನೋದು ಬಿಟ್ಟರೆ ಬೇರೆ ಅಡ್ರೆಸ್ಸೂ ಇವನ ಬಳಿಯಿಲ್ಲ.
ಬೇರೆ ದಾರಿ ತೋಚದೆ ಸಂಪಿಗೆ ರಸ್ತೆಯತ್ತ ಹೊರಟೇ ಬಿಟ್ಟ. ಆದರೆ ಅಡ್ರೆಸ್ಸಿಲ್ಲದೆ ಹುಡುಕುವುದು ಹೇಗೆ? ಅವಳನ್ನು ಪ್ರೀತಿಸುವ ಭರದಲ್ಲಿ ಅವಳಪ್ಪನ ಹೆಸರನ್ನೂ ಕೇಳಿರಲಿಲ್ಲ ಮೂರ್ಖ. ಏನಾದರೂ ಮಾಡಿ ಹುಡುಕಲೇಬೇಕೆಂದುಕೊಂಡ ಕಾರ್ತಿಕ ಸೆಲ್ಸ್ ಮ್ಯಾನ್ ಆದ. ಸಂಪಿಗೆ ರಸ್ತೆಯಲ್ಲಿರುವ ಮನೆಗಳನ್ನೆಲ್ಲ ಎಡತಾಕಿದ. ಎರಡು ದಿನ ಏನೂ ಫಲ ಸಿಗಲಿಲ್ಲ. ಮೂರನೇ ಮಾತ್ರ ಅವನಿಗೆ ಬೇಕಾಗಿದ್ದ ಮನೆ ಸಿಕ್ಕಿತು. ಬೀಗ ಹಾಕಿದ್ದ ಮನೆ ಅವಳದ್ದೇ ಅಂತ ಕಾರ್ತಿಕ್’ಗೆ ಗೊತ್ತಾಗಿದ್ದು ಹೇಗೆ ಅಂತಿರಾ? ಮನೆಯ ಹೊರಗಡೆ ನಿಲ್ಲಿಸಿದ್ದ ಪೆಪ್ಟ್ ಮತ್ತು ಚಪ್ಪಲಿಗಳು ಅವಳದೇ ಆಗಿತ್ತು.
ಪಕ್ಕದ ಮನೆಯವರನ್ನು ವಿಚಾರಿಸಿದಾಗ “ಅವಳಿಗೆ ಹುಷಾರಿಲ್ಲವಂತೆ, ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದಾರಂತೆ” ಎಂಬ ಉತ್ತರ ಬಂತು. “ಮನೆಯಲ್ಲಿ ನಮ್ಮ ವಿಷಯ ಗೊತ್ತಾಗಿ ಅವಳ ಮೊಬೈಲು ಕಿತ್ತುಕೊಂಡು, ಅವಳನ್ನು ಮನೆಯಲ್ಲಿ ಕೂಡಾಕಿರಬೇಕು” ಎಂದು ಏನೇನೋ ಅಸಾಂಪ್ಷನ್ ಮಾಡಿಕೊಂಡಿದ್ದ ಕಾರ್ತಿಕ್’ಗೆ ಈ ವಿಷಯ ಕೇಳಿ ಶಾಕ್ ಆಗಿಬಿಡ್ತು. ಗಾಬರಿಯಿಂದ ಆಸ್ಪತ್ರೆಯತ್ತ ನಡೆದ.
ಅವಳ ಫ್ರೆಂಡ್ ನಾನು ಎಂದು ಪರಿಚಯಿಸಿಕೊಂಡು ವಾರ್ಡ್’ನೊಳಗೆ ನುಗ್ಗಿದ. ನಿಶ್ಚಲವಾಗಿ ಮಲಗಿದ್ದ ರೂಪ ಮತ್ತವಳ ತಂದೆ ತಾಯಿ ಬಿಟ್ಟರೆ ಬೇರಾರೂ ಇರಲಿಲ್ಲ. ಇಷ್ಟು ದಿನ ತನ್ನ ಜೊತೆಗೆ ಚಟುವಟಿಕೆಯಿಂದ ಓಡಾಡಿಕೊಂಡಿದ್ದ ಅವಳ ಸ್ಥಿತಿಯನ್ನು ನೋಡಿ ಕಾರ್ತಿಕ್ ದುಃಖದ ಕಟ್ಟೆಯೊಡೆಯಿತಾದರೂ ಅವಳಪ್ಪಮ್ಮನಿಗೆ ಡೌಟು ಬರಬಾರದೆಂದು ನಿಯಂತ್ರಿಸಿಕೊಂಡ.
ಏನಾಯಿತು ಎಂಬ ಕಾರ್ತಿಕ್ ಪ್ರಶ್ನೆಗೆ ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ ಅವಳ ಅಪ್ಪ ಅಮ್ಮ. ಎರಡು ಕ್ಷಣಗಳ ಮೌನದ ಬಳಿಕ ಬ್ಲಡ್ ಕ್ಯಾನ್ಸರ್ ಎಂಬ ಉತ್ತರ. ಡಬಲ್ ಶಾಕ್ ಬಡಿದ ಸ್ಥಿತಿ ಇವನದ್ದು. ವಾಸ್ತವದಲ್ಲಿ ಕ್ಯಾನ್ಸರ್ ಇದೆಯೆಂದು ಇವರಿಬ್ಬರ ಪರಿಚಯಕ್ಕೂ ಹಿಂದೆಯೇ ತಿಳಿದಿತ್ತು ರೂಪಾಳಿಗೆ. ಆದರೆ ಅನಾರೋಗ್ಯ ಇರುವವರಿಗೂ ಮನಸ್ಸೆಂಬುದಿರುತ್ತದಲ್ಲ? ಕಾರ್ತಿಕ್’ನ ಮುಗ್ದ ಮನಸ್ಸಿಗೆ ಸೋತವಳಿಗೆ ಸತ್ಯ ಹೇಳಿದರೆ ಎಲ್ಲಿ ಇವನನ್ನು ಕಳೆದುಕೊಳ್ಳುವೆನೋ ಎಂಬ ಭಯ. ಬೇಗ ಸಾಯುವುದಂತೂ ನಿಜ, ಸಾಯುವವರೆಗೂ ಇವನ ಜೊತೆಗೆಯೇ ಇರಬೇಕೆಂಬ, ಇವನ ತುಂಟಾಟಗಳೊಂದಿಗೆ ಜೀವಿಸಬೇಕೆಂಬ ಅಭಿಲಾಷೆ ಇವಳದ್ದು. ಕೆಲವೊಮ್ಮೆ ಹಾಗೆ, ನಾವು ಅತಿಯಾಗಿ ಪ್ರೀತಿಸುವ, ಎಲ್ಲವನ್ನೂ ಹೇಳಿಕೊಳ್ಳುವ ವ್ಯಕ್ತಿಗಳಲ್ಲಿ ನಮಗೆ ಸಂಬಂಧಿಸಿದ ಅತಿ ಮುಖ್ಯವಾದ ವಿಷಯಗಳನ್ನು ಮುಚ್ಚಿಡುತ್ತೇವೆ. ಸತ್ಯ ಹೇಳಿದರೆ ಏನಾಗುವುದೋ , ಎಲ್ಲಿ ಅವರನ್ನು ಕಳೆದುಕೊಂಡು ಬಿಡುತ್ತೇವೋ ಎನ್ನುವ ಭಯ. ವಾಸ್ತವದಲ್ಲಿ ಸತ್ಯ ಹೇಳಿದರೂ ಏನಾಗುವುದಿಲ್ಲ, ಅವರೇನೂ ಅಂದುಕೊಳ್ಳುವುದಿಲ್ಲ ಎನ್ನುವ ಸತ್ಯ ನಮಗೆ ಅರಿವಾಗಿರುವುದಿಲ್ಲ ಅಷ್ಟೇ.
ಒಂದು ವಾರದ ಚಿಕಿತ್ಸೆಯ ಬಳಿಕ ಡಾಕ್ಟರ್ ಹೇಳಿದರು. ‘ಇನ್ನು ನಮ್ಮ ಕೈಯ್ಯಲ್ಲಿಲ್ಲ, ಮನೆಗೆ ಕರೆದುಕೊಂಡು ಹೋಗಿ’. ಮನೆಗೆ ಕರೆದುಕೊಂಡು ಬಂದಾಗಲಂತೂ ಆಕೆಯ ಸ್ಥಿತಿ ದಯನೀಯವಾಗಿತ್ತು. ರಕ್ತ ಕಾರಿ ಅಸ್ಥಿಪಂಜರದಂತಿದ್ದ ದೇಹದಲ್ಲಿ ಜೀವವೊಂದು ಬಿಟ್ಟರೆ ಬೇರೇನೂ ಇರಲಿಲ್ಲ. ಅಮ್ಮನಿಗೆ ವಯಸ್ಸಾಗಿದ್ದರಿಂದ ಎಲ್ಲಾ ಕೆಲಸಗಳನ್ನು ಮಾಡಲಾಗುತ್ತಿರಲಿಲ್ಲ, ಅಪ್ಪನಿಗೆ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆ. ರೂಪಾ ಇರುವಷ್ಟು ದಿನ ನೋಡಿಕೊಳ್ಳಬೇಕಲ್ಲಾ? ಏನು ಮಾಡುವುದು? ಎಂಬ ಪ್ರಶ್ನೆ ಉದ್ಭವಿಸಿದಾಗ “ನಾನು ನಿಮ್ಮ ಜೊತೆಗಿದ್ದು, ರೂಪಾಳನ್ನು ನೋಡಿಕೊಳ್ಳುತ್ತೇನೆ” ಎಂದು ತಕ್ಷಣ ಉತ್ತರಿಸಿದ ಕಾರ್ತಿಕ್. ಅದಕ್ಕೂ ಮೊದಲು ತನ್ನ ಮತ್ತು ರೂಪಾಳ ಪ್ರೀತಿ ವಿಷಯವನ್ನು ಬಹಿರಂಗಪಡಿಸಿದ್ದ ಕಾರ್ತಿಕ್. ಪ್ರೀತಿಯಿಂದ ಸಾಕಿದ ಮಗಳು ತಮಗೆ ತಿಳಿಯದಂತೆ ಇಷ್ಟೆಲ್ಲಾ ಮಾಡಿದ್ದಾಳೆ ಎಂದು ಬೇಸರಿಸಿಕೊಳಳ್ಳದೆ ಒಳ್ಳೆಯ ಹುಡುಗನನ್ನೇ ಪ್ರೀತಿಸಿದ್ದಾಳೆ ಎಂದು ಸಮಾಧಾನ ಪಟ್ಟುಕೊಂಡರು ರೂಪಾ ತಂದೆ ತಾಯಿ. ಮರು ಮಾತಿಲ್ಲದೆ ರೂಪಾ ಆರೈಕೆ ಮಾಡಲು ಅನುಮತಿ ನೀಡಿದರು.
ಅಲ್ಲಿಗೆ ಶುರುವಾಗಿತ್ತು ಅವರಿಬ್ಬರ ಹೊಸ ಜೀವನ. ಕಾರ್ತಿಕ್’ಗೆ ಮನದಲ್ಲಿ ತಡೆಯಲಾರದಷ್ಟು ನೋವಿದ್ದರೂ ಅದನ್ನು ತೋರ್ಪಡಿಸದೆ ಆಕೆಯ ಆರೈಕೆ ಶುರುಹಚ್ಚಿಕೊಂಡ. ಆ ನೋವಿನ ಹತ್ತು ಪಟ್ಟು ನೋವನ್ನು ರೂಪಾ ಅನುಭವಿಸುತ್ತಿದ್ದಳು. ನಿತ್ಯವೂ ಕಾರ್ತಿಕ್’ನ ಕಣ್ಣುಗಳನ್ನು ತದೇಕ ಚಿತ್ತದಿಂದ ನೋಡುವುದು ಬಿಟ್ಟರೆ ಬೇರೇನು ಚಲನೆಯಿರಲಿಲ್ಲ ಅವಳಲ್ಲಿ. ಕಾರ್ತಿಕ್ ಮಾತ್ರ ಎದೆಗುಂದಲಿಲ್ಲ. ಕ್ಯಾನ್ಸರ್ ಗೆದ್ದವರ ಸ್ಪೂರ್ತಿದಾಯಕ ಕಥೆಗಳನ್ನು ಸ್ವತಃ ತಾನೇ ಓದಿ, ರೂಪಾಳಿಗೂ ಓದಿ ಹೇಳಿ ಅವಳಲ್ಲಿ ಧೈರ್ಯ ತುಂಬುತ್ತಿದ್ದ. ಅವಳನ್ನು ಆಗಲೂ ಅದೆಷ್ಟು ಪ್ರೀತಿಸುತ್ತಿದ್ದ ಎಂದರೆ ಅವಳ ಜೊತೆಗೆ ಇದ್ದುಕೊಂಡೇ, ಅವಳ ರಿಪ್ಲೈ ಬರುವುದಿಲ್ಲ ಎಂಬುದು ಗೊತ್ತಿದ್ದುಕೊಂಡೇ ಅವಳ ನಂಬರಿಗೆ ದಿನವೂ ರಾತ್ರಿ ‘ಗುಡ್ ನೈಟ್ ಸ್ವೀಟ್ ಹಾರ್ಟ್, ಲವ್ ಯೂ’ ಎಂದು ಮೆಸ್ಸೇಜ್ ಮಾಡುತ್ತಿದ್ದ. ಸ್ನಾನ ಮಾಡಿಸುವುದು, ಟಾಯ್ಲೆಟ್’ಗೆ ಕರೆದುಕೊಂಡು ಹೋಗುವುದು, ಅವಳ ಬಟ್ಟೆ ಒಗೆಯುವುದು, ಊಟ ಮಾಡಿ ಔಷಧ ನೀಡುವುದು ಇತ್ಯಾದಿ ಅವಳ ನಿತ್ಯದ ಎಲ್ಲಾ ಕೆಲಸಗಳನ್ನು ಇವನೇ ಮಾಡುತ್ತಿದ್ದ. ಒಂಥರಾ ನೋದಾವಣೆಯಾಗದ ಮದುವೆಯಾದಂತಾಗಿತ್ತು ಅವರಿಬ್ಬರ ಜೀವನ. ಇದೆಲ್ಲದರ ಪರಿಣಾಮವಾಗಿ ‘ಇನ್ನು ನಮ್ಮ ಕೈಯ್ಯಲ್ಲಿಲ್ಲ’ ಎಂದು ಡಾಕ್ಟರ್ ಕೈಚೆಲ್ಲಿದ್ದ ರೂಪಾ ಮತ್ತೆ ಮೂರು ತಿಂಗಳು ಬದುಕಿದ್ದಳು. ಸ್ವಲ್ಪ ಸ್ವಲ್ಪವೇ ಮಾತನಾಡುತ್ತಾ ಕಡೆಗೆ ನಿಧಾನವಾಗಿ ನಡೆಯಲೂ ಶುರುಮಾಡಿದ್ದಳು. ಕಾರ್ತಿಕ್ ತುಂಬಾನೇ ಖುಷಿ ಪಟ್ಟ.
ಖುಷಿ ಮಾತ್ರ ತುಂಬಾ ದಿನ ಉಳಿಯಲಿಲ್ಲ. ಎಷ್ಟಾದರೂ ಕ್ಯಾನ್ಸರ್ ತಾನೇ, ಯಾವಾಗೇನಾಗುತ್ತದೋ ದೇವನೊಬ್ಬನಿಗೇ ಗೊತ್ತು. ಮತ್ತೆ ರಕ್ತ ಕಾರಲು ಶುರು ಮಾಡಿದ್ದಳು ರೂಪ. ಆಸ್ಪತ್ರೆಗೆ ದಾಖಲಿಸಲಾಯಿತು. ಅರ್ಜೆಂಟಾಗಿ ಆಪರೇಶನ್ ಆಗಬೇಕೆಂದಾಯಿತು. ಅಷ್ಟು ಮಾತ್ರವಾ? ಬಾಟಲಿಗಟ್ಟಲೆ ರಕ್ತ ಬೇಕು ಎಂದು ಡಾಕ್ಟರ್ ಹೇಳಿದಾಗ ತಾನೇ ರಕ್ತ ನೀಡುತ್ತೇನೆ ಬೆಡ್ಡಿನಲ್ಲಿ ಮಲಗಿದ ಕಾರ್ತಿಕ್.
ಒಂದು ಬೆಡ್’ನಲ್ಲಿ ರೂಪಾ ಮತ್ತೊಂದರಲ್ಲಿ ಕಾರ್ತಿಕ್.. ರಕ್ತದಾನದ ಬಾಟಲನ್ನು ಒತ್ತುತ್ತಾ ರೂಪಾಳನ್ನೇ ಎವೆಯೆಕ್ಕದೆ ನೋಡುತ್ತಿದ್ದ. ವಿಧಿ ಈ ಭಾರಿ ತಿರುಗಿ ಬಿದ್ದಿತ್ತು. ರೂಪಾಳ ಆಪರೇಶನ್ ಸಕ್ಸಸ್ಸ್ ಆಗಲಿಲ್ಲ. ಬೇಡ ಬೇಡವೆಂದರೂ, ಡಾಕ್ಟರ್’ನ ಎಚ್ಚರಿಕೆಯ ನಡುವೆಯೂ ಹಠದಲ್ಲಿ ರಕ್ತ ನೀಡಿದ ಕಣ್ಣು ಮಂಜಾಗಲು ಶುರುವಾಯ್ತು. ಲೆಕ್ಕಕ್ಕಿಂತ ಹೆಚ್ಚಿನ ರಕ್ತ ನೀಡಿದ್ದರಿಂದ ಬಿಪಿ ಜಾಸ್ತಿಯಾಯ್ತು. ಎಲ್ಲವೂ ನಾಟಕೀಯವೋ ಎಂಬಂತೆ ಅವನೂ ಅಸುನೀಗಿದ.
ಇದನ್ನಲ್ಲವೆ ಹೇಳುವುದು, ಪ್ರೀತಿ ಮಧುರ ತ್ಯಾಗ ಅಮರ ಎಂದು?
-
Anashku