ಇದು ಸೆಪ್ಟೆಂಬರ್ ೧೮೯೩ರ ಮಾತು……
ವಿಶ್ವ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಸಲುವಾಗಿ ವಿವೇಕಾನಂದರು ಅಮೇರಿಕ್ಕಾಕ್ಕೆ ತೆರಳಿದ್ದರು. ಹೇಗೆ ಎಲ್ಲಾ ದೇಶಗಳಲ್ಲೂ,ಕಾಲದಲ್ಲೂ ಕೆಟ್ಟ ಬುದ್ಧಿಯುಳ್ಳವರು,ಒಳ್ಳೆಯ ಬುದ್ಧಿಯುಳ್ಳವರು ಇರುತ್ತಾರೋ ಹಾಗೆಯೇ ಅಮೇರಿಕಾದಲ್ಲೂ ಕೂಡ. ಅಮೇರಿಕ ಎಂಬ ದೇಶಕ್ಕೆ ಅವರು ಹೊಸಬರು. ಕೆಲವು ದುಷ್ಟಬುದ್ದಿಯುಳ್ಳ ಜನ ಅವರನ್ನ,ಅವರ ವೇಷಭೂಷಣವನ್ನ ನೋಡಿ ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ. ಒಬ್ಬನಂತೂ ಕೆಟ್ಟ ಮಾತುಗಳಿಂದ ನಿಂದಿಸಿದ. ಹೀಗೆ ಹಲುವು ಸಂಕಷ್ಟಗಳನ್ನ ಎದುರಿಸುತ್ತಾರೆ. ಆದರೆ ಸ್ವಾಮೀಜಿ ಅದ್ಯಾವುದಕ್ಕೂ ಹೆದರುವುದಿಲ್ಲ. ಸ್ವಾಮೀಜಿಯವರು ಷಿಕಾಗೋಗೆ ಬಂದಿಳಿದಾಗ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ನೋಂದಣಿ ಪತ್ರದ ಅಗತ್ಯವಿದೆ ಎಂಬುದರ ಅರಿವಿರಲಿಲ್ಲ. ಅದಲ್ಲದೆ ನೋಂದಣಿಗೆ ನಿಗದಿಯಾಗಿದ್ದ ಅವಧಿಯು ಅದಾಗಲೆ ಮುಗಿದು ಹೋಗಿತ್ತು. ಹೀಗಾಗಿ ಧಾರ್ಮಿಕ ಸಂಸತ್ತಿನಲ್ಲಿ ಮಾತನಾಡುವ ಅವಕಾಶ ಅವರಿಗೆ ಸಿಗುವ ಸಾಧ್ಯತೆ ತೀರ ವಿರಳವಾಗಿತ್ತು.
ಹೀಗೆ ಕೆಲ ದಿನಗಳ ಕಾಲ ಷಿಕಾಗೋದಲ್ಲಿದ್ದು ಬೋಸ್ಟನ್ ಗೆ ಪ್ರಯಾಣ ಬೆಳೆಸಿದ್ದರು. ಬೋಸ್ಟನ್ನಿಗೆ ಪ್ರಯಾಣ ಬೆಳೆಸಲು ಕಾರಣವಾಗಿದ್ದ ಮಹಿಳೆ ಕೇಟ್. ಈ ಹಿಂದೆ ಸ್ವಾಮೀಜಿಯವರು ವ್ಯಾಂಕೋವರನಿಂದ ಷಿಕಾಗೋಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಕೇಟ್ ಸ್ಯಾನ್ ಬರ್ನ್ ಪರಿಚಯವಾಗಿತ್ತು. ಸ್ವಾಮೀಜಿಯವರ ಚಹರೆ ಮತ್ತು ನಡುವಳಿಕೆಯಿಂದ ಪ್ರಭಾವಿತರಾಗಿದ್ದ ಕೇಟ್ ತಮ್ಮ ಗುರುತು ಪತ್ರವನ್ನು ನೀಡಿ, ಮೆಟ್ಕಾಫನಲ್ಲಿರುವ ತಮ್ಮ ಮನೆಗೆ ಬಂದು ಆತಿಥ್ಯ ಸ್ವೀಕಾರ ಮಾಡಬೇಕೆಂದು ಆಹ್ವಾನಿಸಿದ್ದರು. ಈ ಕೇಟ್ ಎಂಬ ಮಹಿಳೆಯಿಂದ ಪರಿಚಯವಾಗಿದ್ದು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ರೈಟ್. ಆಗ ಧರ್ಮ ಸಮ್ಮೇಳನಕ್ಕೆ ಆಹ್ವಾನಿಸುವ ಸಲುವಾಗಿ ತಮ್ಮ ಪರಿಚಯ ಮಾಡಿಕೊಳ್ಳುವಂತೆ ರೈಟ್ ಅವರು ಸ್ವಾಮೀಜಿಯನ್ನು ಕೇಳುತ್ತಾರೆ. ಕೆಲಹೊತ್ತು ಮುಂದುವರಿದ ಪರಿಚಯ, ಮಾತುಕತೆಯಿಂದ ಪ್ರಭಾವಿತಗೊಂಡ ರೈಟ್ “ಸ್ವಾಮಿ,ನಿಮ್ಮ ಬಳಿ ನಿಮ್ಮ ಪರಿಚಯ ಕೇಳುವುದೆಂದರೆ ಪ್ರಕಾಶಿಸುವ ತನ್ನ ಹಕ್ಕಿನ ಬಗ್ಗೆ ಸೂರ್ಯನ ಬಳಿಯೇ ವಿವರ ಕೇಳಿದಂತೆ” ಎಂದರಂತೆ. ಮೊದಲೇ ಹೇಳಿದ ಹಾಗೆ ಒಳ್ಳೆಯ ಜನರೂ ಸಹ ಇರುತ್ತಾರೆ.
ಧಾರ್ಮಿಕ ಸಂಸತ್ತು ಕೊಲಂಬಸ್ ಅಮೇರಿಕಾವನ್ನು ಕಂಡು ಹಿಡಿದು ೪೦೦ ವರ್ಷದ ವಾರ್ಷಿಕೋತ್ಸವಕ್ಕೆ ಏರ್ಪಾಟಾಗಿರುತ್ತದೆ. ವಿವಿಧ ಧರ್ಮಗಳಲ್ಲಿನ ಧ್ಯೇಯ ಮತ್ತು ಬೋಧನೆಯಲ್ಲಿ ಸಮಾನವಾದ ಮತ್ತು ಮುಖ್ಯವಾದ ಸತ್ಯವನ್ನ ತಿಳಿಸುವುದು ಧಾರ್ಮಿಕ ಸಂಸತ್ತಿನ ಗುರಿಯಲ್ಲೊಂದು. ಮತ್ತು ಜಗತ್ತಿನ ಎಲ್ಲಾ ರಾಷ್ಟ್ರಗಳ ಮಧ್ಯೆ ಸ್ನೇಹ ಸಂಬಂಧವನ್ನ ಕಲ್ಪಿಸುವುದು. ಇದರ ಮೊದಲ ಗೋಷ್ಠಿ ಸೋಮವಾರ ೧೧ ನೆಯ ಸೆಪ್ಟೆಂಬರ್ ೧೮೯೩ರಲ್ಲಿ ,ಆರ್ಟ್ ಇನ್ಸ್ಟಿಟ್ಯೂಟ್’ನ ಪ್ರಾಂಗಣದಲ್ಲಿ ಪ್ರಾರಂಭವಾಯಿತು. ೪೦೦೦ ಸಾವಿರ ಜನ ಸೇರಿದ್ದರು ಆ ದಿನ ಆ ದೊಡ್ಡ ಗ್ಯಾಲರಿಯಲ್ಲಿ. ಬೌದ್ಧ ಧರ್ಮೀಯರು, ಕ್ರೈಸ್ತ ಮತೀಯರು,ಹಿಂದೂ ಧರ್ಮದವರು ,ಜೈನರು,ಜುಡಾಯಿಗಳು ,ಮಹಮದೀಯನ್ನರು, ಜೊರಾಸ್ಟ್ರಿಯನ್ನರು- ಹೀಗೆ ಎಲ್ಲಾ ಧರ್ಮವನ್ನ ಪ್ರತಿನಿಧಿಸುವರಿಂದ ತುಂಬಿಹೋಗಿತ್ತು ಸಮ್ಮೇಳನ. ಅದರಲ್ಲಿ ಒಬ್ಬರು ಸ್ವಾಮಿ ವಿವೇಕಾನಂದರು, ಪ್ರಾರ್ಥನೆಯಲ್ಲಿ ಮುಳುಗಿದ್ದಾರೆ.
ಉದ್ಘಾಟನೆಯಾಯಿತು ಸಂಸತ್ತು ಪ್ರಾರ್ಥನೆಯ ಮೂಲಕ, ತದನಂತರ ಅಧ್ಯಕ್ಷರಾದ ರೆವೆರೆಂಡ್ ಜೆ.ಎಚ್.ಬರೋಸ್ ರವರು ಅಲ್ಲಿ ನೆರೆದಿದ್ದ ಭಾಷಣಕಾರರನ್ನ ಪರಿಚಯಿಸುತ್ತಿದ್ದರು. ಅವರು ಯಾರ ಪರಿಚಯ ಮಾಡುತ್ತಾರೋ ಆ ಭಾಷಣಕಾರರು ನಂತರ ಬಂದು ತಮ್ಮ ಭಾಷಣವನ್ನ ಮಾಡುತ್ತಿದ್ದರು. ಹೀಗೆ ಒಬ್ಬೋಬ್ಬರಾಗಿಯೇ ತಾವೂ ತಯಾರು ಮಾಡಿ ಬರೆದು ತಂದ ಭಾಷಣವನ್ನ ಓದುತ್ತಿದ್ದರು. ಸ್ವಾಮೀಜಿಯ ಬಳಿ ಅಂತಹ ಯಾವುದೇ ತಯಾರಿಕಾ ಬರಹವಿರಲಿಲ್ಲ.ಮತ್ತೂ ಯಾವತ್ತೂ ಅಷ್ಟೊಂದು ಜನ ಸಭಿಕರೆದುರು ಮಾತನಾಡಿದವರಲ್ಲ. ಹಾಗಾಗಿ ಬೆಳಗ್ಗೆಯಿಂದಲೇ ತಮ್ಮ ಗೋಷ್ಠಿಯನ್ನ ತಳ್ಳುತ್ತಲೇ ಬಂದಿದ್ದರು. ಮಧ್ಯಾಹ್ನದ ವೇಳೆಗೆ ಅದನ್ನ ಮುಂದೂಡಲಾಗಲಿಲ್ಲ. ಸ್ವಾಮೀಜಿ ಎದ್ದು ನಿಂತರು. ಬೆಂಕಿಯಂತೆ ಪ್ರಜ್ವಲಿಸುತ್ತಿತ್ತು ಅವರ ಮುಖ. ಮನಸ್ಸಿನಲ್ಲೇ ಜ್ಞಾನದೇವಿ ಸರಸ್ವತಿಯನ್ನ ಆರಾಧಿಸಿ, ಮಾತನಾಡಲು ಪ್ರಾರಂಭಿಸಿದರು.
ಸ್ವಲ್ಪವೂ ತಡಮಾಡದೆ ಆ ಸಿಂಹ ಘರ್ಜನೆಯ ಧ್ವನಿಯಲ್ಲಿ “ಅಮೇರಿಕಾದ ನನ್ನ ಸಹೋದರಿಯರೆ” ಎನ್ನುತ್ತಲೇ ಚಪ್ಪಾಳೆ ಮೊಳಗಿತು ಎಲ್ಲರೂ ಹುಚ್ಚರಾದಂತೆ ಭಾಸವಾಗಿತ್ತು. ಇದನ್ನ ಕಂಡ ಸ್ವಾಮೀಜಿ ದಿಗ್ಭ್ರಾಂತರಾದರು. ಅದರ ಮಧ್ಯದಲ್ಲಿ ಮಾತು ಮುಂದುವರೆಸಲು ಪ್ರಯತ್ನಿಸಿದರಾದರೂ, ಆ ಶಕ್ತಿಯುತವಾದ ಸಭಿಕರು ಬಿಡಲಿಲ್ಲ. ಉಳಿದವರೆಲ್ಲಾ ಸಾಂಪ್ರದಾಯಿಕವಾಗಿ ಮಾತನಾಡಿದರೆ ಸ್ವಾಮೀಜಿ ಮಾತ್ರ ಜನಗಳ ಮಧ್ಯೆ ತಮ್ಮ ಬಾಂಧವ್ಯವನ್ನ ಬೆಸೆದು ಅವರ ಹೃದಯದಂತರಾಳವನ್ನ ಹೊಕ್ಕರು.
ಮಾತನ್ನು ಮುಂದುವರೆಸುತ್ತಾ “ನಮಗೆ ನೀವು ನೀಡಿರುವ ಆತ್ಮೀಯವಾದ ಸ್ವಾಗತಕ್ಕೆ ವಂದನೆಗಳನ್ನು ಸಲ್ಲಿಸಲು ಪ್ರಯತ್ನಿಸುತ್ತಿರುವ ಈ ಸಮಯದಲ್ಲಿ ನನ್ನ ಹೃದಯ ಅವರ್ಣನೀಯ ಆನಂದದಿಂದ ತುಂಬಿ ತುಳುಕುತ್ತಿದೆ. ಪ್ರಪಂಚದ ಅತ್ಯಂತ ಪ್ರಾಚೀನವಾದ ಸಂನ್ಯಾಸಿಗಳ ಸಂಘದ ಪರವಾಗಿ ನಿಮಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ವಿವಿಧ ಧರ್ಮಗಳ ಮಾತೆಯ ಪರವಾಗಿ ನಿಮಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಹಿಂದೂ ಜನಾಂಗಕ್ಕೆ ಸೇರಿದ ಎಲ್ಲ ವರ್ಗಗಳ, ಎಲ್ಲ ಪಂಥಗಳ ಕೋಟ್ಯಾನುಕೋಟಿ ಜನರ ಪರವಾಗಿ ನಿಮಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಇದೇ ವೇದಿಕೆಯ ಮೇಲೆ ನಿಂತು ಕೆಲವು ಭಾಷಣಕಾರರು, ಪೂರ್ವ ದೇಶಗಳಿಂದ ಬಂದಿರುವ ಪ್ರತಿನಿಧಿಗಳನ್ನು ಕುರಿತು ಹೀಗೆ ಹೇಳಿದ್ದಾರೆ: “ಬಹಳ ದೂರದಿಂದ ಬಂದಿರುವ ಇವರು ಧಾರ್ಮಿಕ ಸಹನೆಯ ಭಾವನೆಯನ್ನು ವಿವಿಧ ದೇಶಗಳಿಗೆ ಒಯ್ಯುವ ಗೌರವಕ್ಕೆ ಪಾತ್ರರಾಗುವರು.” ಹಾಗೆ ಹೇಳಿದ ಭಾಷಣಕಾರರಿಗೂ ನಾನು ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಧಾರ್ಮಿಕ ಸಹನೆಯನ್ನೂ, ಎಲ್ಲ ಧರ್ಮಗಳೂ ಸ್ವೀಕಾರಯೋಗ್ಯ ಎಂಬುದನ್ನೂ ಜಗತ್ತಿಗೆ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು. ಪರಧರ್ಮಸಹಿಷ್ಣುತೆಯಲ್ಲಿ ನಮಗೆ ನಂಬಿಕೆಯುಂಟು; ಅಷ್ಟೇ ಅಲ್ಲ, ಎಲ್ಲ ಧರ್ಮಗಳೂ ಸತ್ಯ ಎಂಬುದನ್ನು ನಾವು ಒಪ್ಪುತ್ತೇವೆ. ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ, ಎಲ್ಲ ಧರ್ಮಗಳಲ್ಲಿ ಯಾರು ಯಾರು ಹಿಂಸೆಗೆ ಒಳಗಾದರೋ ಅವರಿಗೆಲ್ಲ ಆಶ್ರಯವನ್ನು ನೀಡಿದ ದೇಶಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು. ಯಾವ ವರ್ಷ ರೋಮನ್ನರ ದೌರ್ಜನ್ಯದಿಂದ ಯಹೂದ್ಯರ ಪವಿತ್ರ ದೇವಾಲಯ ಒಡೆದು ಪುಡಿಪುಡಿಯಾಯಿತೋ ಅದೇ ವರ್ಷ ಅಳಿದುಳಿದ ಶುದ್ಧ ಯಹೂದಿಗಳು ಆಶ್ರಯವನ್ನು ಬಯಸಿ ದಕ್ಷಿಣ ಭಾರತಕ್ಕೆ ಬಂದರು. ಅವರಿಗೆ ಆಶ್ರಯ ನೀಡಿದ ದೇಶದವನು ನಾನು ಎಂಬ ಹೆಮ್ಮೆ ನನ್ನದು. ಝೊರತೂಷ್ಟ್ರ ರಾಷ್ಟ್ರದ ನಿರಾಶ್ರಿತರಿಗೆ ಆಶ್ರಯ ನೀಡಿ ಇಂದಿಗೂ ಅವರನ್ನು ಪೋಷಿಸುತ್ತಿರುವ ಧರ್ಮಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು. ಸೋದರರೆ, ಚಿಕ್ಕಂದಿನಿಂದ ನಾನು ಪಠಿಸುತ್ತಿದ್ದ, ಇಂದಿಗೂ ಕೋಟ್ಯಂತರ ಜನರು ಪಠಿಸುತ್ತಿರುವ ಶ್ಲೋಕವೊಂದರ ಕೆಲವು ಪಂಕ್ತಿಗಳನ್ನು ನಿಮ್ಮಮುಂದೆ ಹೇಳುತ್ತೇನೆ:“ಬೇರೆ ಬೇರೆ ಕಡೆಗಳಲ್ಲಿ ಹುಟ್ಟಿದ ನದಿಗಳು ಕೊನೆಗೆ ಸಾಗರದಲ್ಲಿ ಸಂಗಮಗೊಳ್ಳುವಂತೆ, ಹೇ ಭಗವನ್, ಮಾನವರು ತಮ್ಮ ತಮ್ಮ ಸಂಸ್ಕಾರಗಳಿಗೆ ತಕ್ಕಂತೆ, ನೇರವಾಗಿಯೋ ವಕ್ರವಾಗಿಯೋ ಇರುವ ಪಥಗಳನ್ನು ಅನುಸರಿಸುತ್ತಾರೆ. ಅವೆಲ್ಲವೂ ನಿನ್ನೆಡೆಗೆ ಕರೆದೊಯ್ಯುತ್ತವೆ.ಅತ್ಯಂತ ಮಹತ್ವಪೂರ್ಣವಾದ ಸಭೆಗಳಲ್ಲಿ ಒಂದು ಇಂದು ನೆರೆದಿರುವ ಈ ಸಭೆ. ‘ಯಾರೇ ಆಗಲಿ, ಯಾವುದೇ ರೂಪದಲ್ಲೇ ಆಗಲಿ ನನ್ನ ಬಳಿಗೆ ಬಂದರೆ ನಾನು ಅವರನ್ನು ಸ್ವೀಕರಿಸುತ್ತೇನೆ; ಅಂತಿಮವಾಗಿ ನನ್ನ ಬಳಿಗೆ ಬರುವ ವಿವಿಧ ಪಥಗಳಲ್ಲಿ ಸಾಗಿ ಬಂದು ನನ್ನನ್ನೇ ಸೇರಲು ಎಲ್ಲ ಜನರೂ ಪ್ರಯತ್ನಿಸುತ್ತಿದ್ದಾರೆ’ ಎಂಬ ಗೀತೆಯ ಅದ್ಭುತ ತತ್ತ್ವದ ಸತ್ಯವನ್ನು ಜಗತ್ತಿಗೆ ಸಾರುವುದಕ್ಕೆ ಈ ಸಭೆಯೊಂದೇ ಸಾಕು. ಸಂಕುಚಿತ ಪಂಥ ಭಾವನೆ, ಸ್ವಮತಾಭಿಮಾನ, ಅದರ ಭೀಕರ ಸಂತಾನವಾದ ಮತಾಂಧತೆ ಇವು ಈ ಸುಂದರ ಪೃಥ್ವಿಯನ್ನು ಬಹುಕಾಲದಿಂದ ಬಾಧಿಸುತ್ತಿವೆ.ಇವು ಈ ಭೂಮಿಯನ್ನು ಹಿಂಸೆಯಿಂದ ತುಂಬಿವೆ, ಅದನ್ನು ಮತ್ತೆ ಮತ್ತೆ ನರರಕ್ತದಿಂದ ತೋಯಿಸಿವೆ, ನಾಗರಿಕತೆಯನ್ನು ನಾಶಗೊಳಿಸಿವೆ, ರಾಷ್ಟ್ರ ರಾಷ್ಟ್ರಗಳನ್ನೇ ನಿರಾಶೆಯ ಕೂಪಕ್ಕೆ ತಳ್ಳಿವೆ. ಇಂಥ ಭಯಂಕರ(ಧರ್ಮಾಂಧತೆಯ) ರಾಕ್ಷಸರು ಇಲ್ಲದೆಯೇ ಇದ್ದಿದ್ದರೆ ಮಾನವಸಮಾಜ ಈಗಿರುವುದಕ್ಕಿಂತಲೂ ಎಷ್ಟೋ ಪಾಲು ಮುಂದುವರಿದಿರುತ್ತಿತ್ತು. ಆದರೆ ಅವರ ಕಾಲ ಮುಗಿದಿದೆ. ಇಂದು ಬೆಳಗ್ಗೆ ಈ ಸಭೆಯ ಶುಭಾರಂಭವನ್ನು ಸೂಚಿಸಲು ಮೊಳಗಿದ ಘಂಟಾನಾದ ಎಲ್ಲ ಮತಾಂಧತೆಯ, ಖಡ್ಗ ಇಲ್ಲವೇ ಲೇಖನಿಯಿಂದ ಸಾಧಿಸಿದ ಮತೀಯ ಹಿಂಸೆಗಳ, ಒಂದೇ ಗುರಿಯೆಡೆಗೆ ಸಾಗುತ್ತಿದ್ದರೂ ಪಥಿಕರಲ್ಲಿ ತಲೆದೋರುತ್ತಿರುವ ಅನುದಾರವಾದ ಎಲ್ಲ ಮನಸ್ತಾಪಗಳ ಅಂತ್ಯಕ್ರಿಯೆಯನ್ನು ಸೂಚಿಸುವ ಘಂಟಾನಾದವೂ ಆಗಲಿ ಎಂಬುದೇ ನನ್ನ ಆಶಯ.”
ಹೀಗೆ ಹಿಂದೂ ಧರ್ಮದ ಬಗ್ಗೆ ನಿರರ್ಗಳವಾಗಿ ಮಾತನಾಡಿದ ಸ್ವಾಮೀಜಿ ಹಿಂದೂ ಧರ್ಮವನ್ನ ಪುನಃ ಸೃಷ್ಟಿಸಿದ ಬಗೆಗೆ ಸೋದರಿ ನಿವೇದಿತಾ ಹೀಗೆ ಹೇಳುತ್ತಾರೆ “ಪ್ರಾರಂಭದಲ್ಲಿ ಹಿಂದುಗಳ ಧಾರ್ಮಿಕ ಭಾವನೆಗಳನ್ನ ಕುರಿತು ಹೇಳ ಹೊರಟರು. ಆದರೆ ಅವರು ತಮ್ಮ ಉಪನ್ಯಾಸ ಮುಗಿಸಿದಾಗ ಹಿಂದೂ ಧರ್ಮ ಪುನಸೃಷ್ಟಿಗೊಂಡಿತು” ಎಂದು.
ಸಿಂಹ ಘರ್ಜನೆಯನ್ನು ಕೇಳಿದ ಜನ ಭಾರತವನ್ನ ಬೆರಗಾಗಿ ನೋಡಿ ಕೈಮುಗಿದ ದಿನವದು. ಧಾರ್ಮಿಕ ಸಂಸತ್ತಿನಲ್ಲಿ ಭಾರತದ ದಿಗ್ವಿಜಯ ಮೊಳಗಿತು.ಸ್ವಾಮೀಜಿ ತಮ್ಮ ಆತ್ಮಾಭಿಲಾಷೆಯನ್ನ ಜಗತ್ತಿಗೆ ತಿಳಿಸಿದರು. ಇಡೀ ಧಾರ್ಮಿಕ ಸಂಸತ್ತು ಅಂದು ವಿವೇಕಾನಂದಮಯವಾಯಿತು.
ಚಿಕಾಗೋ ವಿವೇಕಾನಂದಮಯವಾಗಿ ಇಂದು ೧೨೨ ವರ್ಷಗಳೇ ಕಳೆದಿದೆ, ಅಂದು ವಿವೇಕಾನಂದರ ಮಾತುಗಳು ಭಾರತೀಯರ ಬಗ್ಗೆ ಭಾರತದ ಬಗ್ಗೆ ಎಚ್ಚೆತ್ತದ್ದೇನೋ ನಿಜ ಆದರೆ ನಾವಿಂದು ನಮ್ಮ ನಾಡು ನುಡಿ ಸಂಸ್ಕೃತಿಯನ್ನು ನಮ್ಮಲ್ಲಿ ಎಚ್ಚರಿಸಕೊಳ್ಳದಿದ್ದರೆ ಹಿಂದಿನ ದಿನಗಳು ಮರುಕಳಿಸೀತು.
“ಭುವನಮಂಡಲೆ ನವಯುಗಮುದಯತು ಸದಾ ವಿವೇಕಾನಂದಮಯಂ, ಸುವಿವೇಕಮಯಂ , ಸ್ವಾನಂದಮಯಂ”.
-Suparna Bhat