ಅಂಕಣ

ಕಯ್ಯಾರರ ಹೋರಾಟದ ಬದುಕು

`ಕಾಸರಗೋಡು’ ಎಂದಾಗ ಸಮಗ್ರ ಕನ್ನಡಿಗರಿಗೆ ನೆನಪಾಗುವ ಒಂದು ಅಕ್ಷರ `ಪೈ’; ಪೈ ಎಂದರೆ ಮಂಜೇಶ್ವರ ಗೋವಿಂದ ಪೈ ಎಂದು ಅರ್ಥ. ಅದೇ ಸಾಲಿನಲ್ಲಿ ಮತ್ತೆ ನಮಗೆ ನೆನಪಾಗುವ ಇನ್ನೊಂದು ಅಕ್ಷರ `ರೈ’. ರೈ ಎಂದರೆ ಸಂಸ್ಕೃತದಲ್ಲಿ `ಸಂಪತ್ತು’ ಎಂದರ್ಥ. ಅದು ವೇದಕಾಲದ ಅರ್ಥ. ಆ ಅರ್ಥ ಈಗ ನಮ್ಮ ಜನರಿಗೆ ಮರೆತುಹೋಗಿದೆ. ಈಗ ನಮಗೆ ನೆನಪಾಗುವ ಅರ್ಥ `ರೈ ಎಂದರೆ ಕಿಞ್ಞಣ್ಣ ರೈ’ ಎಂದು ಮಾತ್ರ.
ಒಂದನೆಯ ತರಗತಿಯ ಮಕ್ಕಳಿಂದ ತೊಡಗಿ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳ ವರೆಗೂ ಈ ಪದ ಸುಪರಿಚಿತವಾದದ್ದು. ಆದರೆ, ಶ್ರೀ ರೈಯವರು ತಮ್ಮ ಹೆಸರಿನ ಮೂಲಕ ಆ ಹಳೆಯ ಅರ್ಥವನ್ನೂ ಪ್ರತಿಬಿಂಬಿಸುತ್ತಿದ್ದಾರೆ ಎನ್ನಲೂ ಬಹುದು. ಯಾಕೆಂದರೆ, ಕಾಸರಗೋಡಿನ ಅಥವಾ ಕನ್ನಡನಾಡಿನ ಸಾಮಾಜಿಕ ಸಾಹಿತ್ಯಕ ಹಾಗೂ ಸಾಂಸ್ಕೃತಿಕರಂಗಕ್ಕೆ ರೈಯವರ ಕೊಡುಗೆ ಸಂಪದ್ಭರಿತವಾದದ್ದು.
ಬಹುಶಃ ರೈಯವರು ತಮ್ಮ ಸ್ವಂತ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ದವರಲ್ಲ. ಅವರ ಬದುಕನ್ನು ಅಧ್ಯಯನಮಾಡಿದರೆ ಈ ವಿಚಾರ ನಮಗೆ ಮನದಟ್ಟಾಗು ತ್ತದೆ. ಅವರು ಮನೆಯಲ್ಲಿರುವುದಕ್ಕಿಂತ ಹೆಚ್ಚು ಸಮಯವನ್ನು ಮನೆಯ ಹೊರಗೆ, ತಮ್ಮ ಇತರ ಸಾಮಾಜಿಕಕಾರ್ಯಗಳ ಸಲುವಾಗಿ ವ್ಯಯಿಸುತ್ತಿದ್ದಾರೆ – ಎಂದರೂ ಸಲ್ಲುವುದು.

ನಮ್ಮ ಸಮಾಜದ ಬಗೆಗೆ, ನಮ್ಮ ಪರಿಸರದ ಜನರ ಬಗೆಗೆ, ಬಡವರ ಬಗೆಗೆ, ದಲಿತರ ಬಗೆಗೆ, ಯಾವುದೋ ಒಂದು ತುಡಿತ, ಯಾವುದೋ ಒಂದು ಚಿಂತನ, ಅವರ ಅಂತರಾಳದಲ್ಲಿ ನಿತ್ಯಜಾಗೃತವಾಗಿದ್ದಂತೆ ಕಂಡುಬರುತ್ತದೆ.
ರೈಯವರ ಸಮಾಜಸೇವೆಯ ಪ್ರಧಾನಕ್ಷೇತ್ರಗಳು ಎರಡು. ಒಂದು ಕಾಸರ ಗೋಡು, ಒಂದು ಕರ್ನಾಟಕ. ಭಾಷಾವಾರು ಪ್ರಾಂತ್ಯರಚನೆಯಾಗುವ ವರೆಗೆ ರೈಯವರ ಸಮಾಜಸೇವೆಯ ವ್ಯಾಪ್ತಿ ಅಖಿಲಕರ್ನಾಟಕವನ್ನು ವ್ಯಾಪಿಸಿತ್ತು. ಭಾಷಾವಾರು ಪ್ರಾಂತ್ಯ ರಚನೆಯಾಗಿ, ಕಾಸರಗೋಡು ಕೇರಳಕ್ಕೆ ತಳ್ಳಲ್ಪಟ್ಟಾಗ, ಅವರ ಮುಖ್ಯಗಮನ ಕಾಸರಗೋಡಿಗೆ ಹೆಚ್ಚು ಒತ್ತುಕೊಟ್ಟುದನ್ನು ಕಾಣುತ್ತೇವೆ.
ಸ್ವಾತಂತ್ರ್ಯಪೂರ್ವದಲ್ಲಿ, ಎಂದರೆ ಸುಮಾರು ಕ್ರಿ.ಶ. 1940-41ರಲ್ಲಿ ದೇಶದಾದ್ಯಂತ ಸ್ವಾತಂತ್ರ್ಯ ಚಳುವಳಿ ವ್ಯಾಪಿಸಿದ್ದ ಕಾಲದಲ್ಲಿ ಶ್ರೀ ರೈಯವರೂ ಅದರಲ್ಲಿ ಭಾಗವಹಿಸಿದರು. ಅದೇ ವರ್ಷ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಉಂಟಾದ ಭೀಕರ ನೆರೆಯ ಹಾವಳಿಯಿಂದ ಸಂತ್ರಸ್ತರಾದ ಜನರಿಗೆ ಪರಿಹಾರವನ್ನೊದಗಿಸುವ ಕಾರ್ಯದಲ್ಲೂ ಶ್ರೀ ರೈಯವರು ಸ್ವಯಂಸ್ಪೂರ್ತಿಯಿಂದ ಸೇವೆ ಸಲ್ಲಿಸಿದ್ದರು. 1942ರಲ್ಲಿ ಜರಗಿದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಒಬ್ಬ ಭೂಗತ ಹೋರಾಟಗಾರರಾಗಿ ಅವರು ದುಡಿದರು.

1943ರಲ್ಲಿ ಮಂಗಳೂರು ಪರಿಸರದಲ್ಲಿ ಕಾಲರಾರೋಗವು ಹಬ್ಬಿದಾಗ, ತಮ್ಮ ಸಮವಯಸ್ಕರಾದ ಯುವಕರನ್ನೂ, ಕಾಲೇಜು ವಿದ್ಯಾರ್ಥಿಗಳನ್ನೂ, ಸಂಘಟಿಸಿ, ಆ ಕಾಲದ ಕೊಳಚೆ ಪ್ರದೇಶಗಳಾಗಿದ್ದ ಬೋಳೂರು, ಬೊಕ್ಕಪಟ್ಣ ಮುಂತಾದ ಹಳ್ಳಿಗಳಿಗೆ ಸಾಗಿ, ಕಾಲರಾ ಹರಡದಂತೆ ಮಾಡಲು, ಜನರನ್ನು ಎಚ್ಚರಿಸಿ, ಅವರಿಗೆ ಮುಂಜಾಗ್ರತೆಯ ಕ್ರಮ ವನ್ನು ಬೋಧಿಸುವಲ್ಲಿ ಹಾಗೂ ಕೊಳಚೆ ನಿರ್ಮೂಲನ ಕಾರ್ಯದಲ್ಲಿ ಕೂಡ, ಒಬ್ಬ ಚುರುಕಿನ ಸ್ವಯಂಸೇವಕನಾಗಿ ಭಾಗವಹಿಸಿದ ಯುವಕ ರೈಯವರ ಸಾಮಾಜಿಕ ಪ್ರೀತಿ ಶ್ಲಾಘನೀಯವಾದುದು.
ಹಿಂದೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾತೀಯ ಪೆಡಂಭೂತವು ನರ್ತನವಾಡುತ್ತಿದ್ದ ಕಾಲದಲ್ಲಿ, ಎಂದರೆ ಸುಮಾರು 1941ನೆಯ ಇಸವಿಯಲ್ಲಿ, ಆಗಿನ ಜನತೆಯಲ್ಲಿ ಭಾವೈಕ್ಯವನ್ನು ಸಾಧಿಸುವ ಉದ್ದೇಶದಿಂದ `ಸೌಹಾರ್ದಸಮಿತಿ’ ಎಂಬೊಂದು ಸಂಘಟನೆಯು ರೂಪು ಗೊಂಡಿತು. ಶ್ರೀ ರೈಯವರು ಅದರ ಸದಸ್ಯರಾಗಿ ದುಡಿದುದು ಮಾತ್ರವಲ್ಲ; ಸ್ವರಚಿತವಾದ ಸುಶ್ರಾವ್ಯಕವನಗಳನ್ನು ಆಕಾಶವಾಣಿಯ ಕಾರ್ಯಕ್ರಮಗಳಲ್ಲೂ ಸಾರ್ವಜನಿಕ ಸಭೆಗಳಲ್ಲೂ ಹಾಡಿ, ಜನರಲ್ಲಿ ಭಾವೈಕ್ಯವು ಮೂಡುವಂತೆ ಪ್ರಯತ್ನಿಸಿದರು. ಕಾಸರಗೋಡಿನ ಉಭಯ ಭಾಷಾಕವಿಯೆಂಬ ಬಿರುದು ಪಡೆದ ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕರಾದ ಜನಾಬ್ ಟಿ. ಉಬೈದ್ ಅವರು ಕಯ್ಯಾರರ ಈ ಗೀತಗಳನ್ನು ಮಲೆಯಾಳಕ್ಕೂ ಅನುವಾದಿಸಿದ್ದನ್ನು ಈ ಸಂದರ್ಭದಲ್ಲಿ ಜ್ಞಾಪಿಸಬಹುದು.

ಬಹುಮುಖಪ್ರತಿಭಾಶಾಲಿಗಳಾದ ಶ್ರೀ ರೈಯವರು ಒಂದು ಕಾಲದಲ್ಲಿ ಪತ್ರಿಕೋದ್ಯಮಿಯಾಗಿಯೂ ದುಡಿದ ಅನುಭವವುಳ್ಳವರು. ಅವರು ಪತ್ರಿಕೋದ್ಯಮಿಯಾಗಿ ದುಡಿದ ಕಾಲವು ದೇಶದ ದೃಷ್ಟಿಯಲ್ಲಿ ಒಂದು ಸಕಾಲವೇ ಆಗಿತ್ತು ಎಂದರೂ ತಪ್ಪಲ್ಲ. ಪಾರತಂತ್ರ್ಯದ ಕುಣಿಕೆಯಲ್ಲಿ ಸಿಕ್ಕು ಒದ್ದಾಡುತ್ತಿದ್ದ ನಮ್ಮ ಜನರಿಗೆ ಸ್ವಾತಂತ್ರ್ಯದ ಸಂದೇಶ ವನ್ನು ತಿಳಿಸಬೇಕಾಗಿದ್ದ ಕಾಲವದು. `ಯಾವ ರಾಯನ ಕಾಲ ಬಂದರೂ ರಾಗಿ ಬೀಸೋದು ತಪ್ಪಿಲ್ಲ’ ಎಂಬ ಗಾದೆಯ ಮಾತನ್ನು ವೇದವಾಕ್ಯವಾಗಿ ನಂಬಿದ್ದ ನಮ್ಮ ಜನರಿಗೆ, ಬ್ರಿಟಿಷರ ಆಳ್ವಿಕೆಯಾದರೂ ಸರಿ, ತುಂಡರಸರ ಆಳ್ವಿಕೆಯಾದರೂ ಸರಿ; ಅವರು ಆ ಬಗ್ಗೆ ಯೋಚಿಸಿದವರಲ್ಲ. ಇಂಥ ಸಂದರ್ಭದಲ್ಲಿ ನಮ್ಮ ದೇಶದ ಕರ್ತವ್ಯವನ್ನು ನಮ್ಮ ಜನರಿಗೆ ಬೋಧಿಸಲು ಪತ್ರಿಕೆಗಳು ಮಾತ್ರ ಸಹಾಯಕಾರಿಯಲ್ಲದೆ, ಬೇರಾವ ಮಾಧ್ಯಮ ಗಳೂ ಆ ಕಾಲದಲ್ಲಿ ಸುಶಕ್ತವಾಗಿ ಇರಲಿಲ್ಲ. ಶ್ರೀ ರೈಯವರು 1938ರಿಂದ 1944ರ ವರೆಗೆ ಒಬ್ಬ ಸಮರ್ಥ ಪತ್ರಿಕೋದ್ಯಮಿಯಾಗಿ ಸಮಾಜಸೇವೆ ಮಾಡಿದ್ದರು. `ಪ್ರಭಾತ’ ಮತ್ತು `ದೇಶಾಭಿಮಾನಿ’ ಎಂಬ ದೈನಿಕ ಹಾಗೂ ವಾರಪತ್ರಿಕೆಗಳಲ್ಲಿ ಅವರು ಉಪಸಂಪಾದಕರಾಗಿ ದುಡಿದುದು ಮಾತ್ರವಲ್ಲ, ತಮ್ಮ ಪ್ರೌಢವಾದ ಲೇಖನಗಳಿಂದ ಜನರಲ್ಲಿ ದೇಶಪ್ರಜ್ಞೆ ಮತ್ತು ಸಾಮಾಜಿಕಪ್ರಜ್ಞೆಗಳು ಹುಟ್ಟುವಂತೆ ಪ್ರಯತ್ನಿಸಿದ್ದರು. ಕನ್ನಡನಾಡಿನ ಇತರ ಪತ್ರಿಕೆಗಳಲ್ಲೂ ಅವರ ಲೇಖನ ಕವನಗಳು ಆ ಕಾಲದಲ್ಲಿ ಧಾರಾಳವಾಗಿ ಬೆಳಕು ಕಂಡಿದ್ದವು.

`ಐಕ್ಯವೊಂದೇ ಮಂತ್ರ – ಐಕ್ಯದಿಂದೆ ಸ್ವತಂತ್ರ
ಐಕ್ಯಗಾನದಿ ರಾಷ್ಟ್ರ ತೇಲುತಿರಲಿ’
– ಎಂದು ಹಾಡಿ ಜನರನ್ನು ಏಕಸೂತ್ರದಲ್ಲಿ ಬಂಧಿಸಲು, ದೇಶದ ಒಳಿತಿಗಾಗಿ ಒಂದಾಗಿ ಹೋರಾಡಲು ಅವರು ತಮ್ಮ ಕಾವ್ಯವಾಣಿಯನ್ನು ಬಳಸಿದರು.

1943ರಲ್ಲಿ `South Canara Journalists’ ಕಾರ್ಯದರ್ಶಿ ಯಾಗಿಯೂ, ಆ ವರ್ಷ ಮಂಗಳೂರಲ್ಲಿ ಜರಗಿದ The Fourth All Karnataka Journalists Conference ಪ್ರಧಾನಕಾರ್ಯದರ್ಶಿಯಾಗಿಯೂ ಅವರು ಆಯ್ಕೆ ಯಾದರು. ಪತ್ರಿಕೋದ್ಯಮಿಯಾಗಿ ರೈ ಎಷ್ಟು ಸಮರ್ಥರು ಎಂಬುದನ್ನು ಇದು ಸೂಚಿಸು ತ್ತದೆ.

ರೈಯವರಿಗೆ ಪ್ರಿಯವಾದ ಇನ್ನೊಂದು ಕ್ಷೇತ್ರ – ಶಿಕ್ಷಣ. ದೇಶದ ನಿರಕ್ಷರತೆಯನ್ನು ಹೋಗಲಾಡಿಸಿ, ಜನರನ್ನು ವಿದ್ಯಾವಂತರನ್ನಾಗಿ ಮಾಡಬೇಕೆಂಬ ಹಂಬಲ ಮೊದ ಲಿಂದಲೇ ಅವರಲ್ಲಿ ಬೇರೂರಿತ್ತು. ಈ ಉದ್ದೇಶದಿಂದ 1939ರಲ್ಲಿ ಬದಿಯಡ್ಕದಲ್ಲೂ 1941ರಲ್ಲಿ ಮಂಗಳೂರಿನಲ್ಲೂ, ವಯಸ್ಕರ ಶಿಕ್ಷಣಯೋಜನೆಯ ಪ್ರಕಾರ ರಾತ್ರ್ರಿಶಾಲೆಗಳನ್ನು ತೆರೆದು, ನಮ್ಮ ಸಮಾಜದ ನೂರಾರು ಅನಕ್ಷರಸ್ಥ ವಯಸ್ಕರು ಓದುಬರೆಹವನ್ನು ಕಲಿಯುವ ಹಾಗೆ ಅವರು ವ್ಯವಸ್ಥೆಮಾಡಿದ್ದರು.

ಆಗ ಗಾಂಧೀಜಿಯವರು ಬುನಾದಿ ಶಿಕ್ಷಣ ಯೋಜನೆಗೆ ಹೆಚ್ಚು ಒತ್ತುಕೊಟ್ಟಿದ್ದ ಕಾಲ.  ಗಾಂಧೀಜಿ ಶಿಕ್ಷಣಪದ್ಧತಿಯಲ್ಲಿ ಅಪಾರವಾದ ನಂಬುಗೆಯಿದ್ದ ಶ್ರೀ ರೈಗಳು ಆ ಪದ್ಧತಿಗೆ ಅನುಸಾರ ವಾಗಿ ಕನ್ನಡ ಪಠ್ಯಪುಸ್ತಕಗಳನ್ನು ರಚಿಸುವ ಪ್ರಯತ್ನ ಮಾಡಿದರು. ಒಂದನೆಯ ತರಗತಿ ಯಿಂದ ಎಂಟನೆಯ ತರಗತಿಯವರೆಗೆ ಅವರು ರಚಿಸಿದ `ನವೋದಯ ವಾಚನಮಾಲೆ’ ಗಳು ಆ ಕಾಲದ ಜನಪ್ರಿಯ ಪಠ್ಯಪುಸ್ತಕಗಳಾಗಿ ಹೆಸರುಗಳಿಸಿದ್ದುವು; ಹಾಗೆಯೇ ಮನ್ನಣೆ ಯನ್ನೂ ಪಡೆದಿದ್ದುವು. ರೈಯವರ ಪಠ್ಯಪುಸ್ತಕಗಳನ್ನು ಓದಿದ ವಿದ್ಯಾರ್ಥಿಗಳು ಇಂದಿಗೂ ಅವನ್ನು ಕೊಂಡಾಡುತ್ತಿದ್ದಾರೆ.

ಆಗ ಬದಿಯಡ್ಕದಲ್ಲಿ ಒಂದು ಪ್ರೈಮರಿ ಶಾಲೆಯಿತ್ತು. ಅದನ್ನು ಸೀನಿಯರ್ ಬೇಸಿಕ್ ಶಾಲೆಯಾಗಿ ಮೇಲ್ದರ್ಜೆಗೇರಿಸುವ ವಿಷಯದಲ್ಲೂ ಅವರು ಸಾಕಷ್ಟು ಪ್ರಯತ್ನಿಸಿ ದ್ದರು. ಅವರ ಪ್ರಯತ್ನದ ಫಲವಾಗಿ ಇಡೀ ಜಿಲ್ಲೆಯಲ್ಲೇ ಅದು ಪ್ರಥಮ ಬೇಸಿಕ್ ಶಾಲೆಯಾಗಿ ದಾಖಲೆಯನ್ನು ನಿರ್ಮಿಸಿತು.
ಸಭೆ-ಸಮ್ಮೇಳನಗಳ ಸಂಘಟಕರಾಗಿಯೂ ರೈಗಳು ಪ್ರಸಿದ್ಧರು. ಕಾಸರಗೋಡು ಮಂಗಳೂರುಗಳಲ್ಲಿ ಬೃಹತ್ ಸಮ್ಮೇಳನಗಳನ್ನು ಅವರು ಸಂಘಟಿಸಿದ್ದರು. ಅವುಗಳಲ್ಲಿ ಪ್ರಮುಖವಾದುವು – ಒಂದು : ಮಂಗಳೂರಲ್ಲಿ ಜರಗಿದ ಅಖಿಲಕರ್ನಾಟಕ ಪತ್ರಿಕೋ ದ್ಯಮಿಗಳ ಸಮ್ಮೇಳನ (1943); ಎರಡು: ಕಾಸರಗೋಡಿನಲ್ಲಿ ಜರಗಿದ ಅಖಿಲಕರ್ನಾಟಕ ಸಾಹಿತ್ಯ ಸಮ್ಮೇಳನ (1947) ಹಾಗೂ 1972, 1979 ಮತ್ತು 1981, 1990ರಲ್ಲಿ ಕಾಸರ ಗೋಡಲ್ಲಿ ಜರಗಿದ ಬೃಹತ್ ಕನ್ನಡಿಗರ ಸಮ್ಮೇಳನಗಳು. ಕೊನೆಯ ಎಲ್ಲಾ ಸಮ್ಮೇಳನ ಗಳು ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳನ್ನು ಸಮಗ್ರ ಕರ್ನಾಟಕದ ಜನರಿಗೆ ತಿಳಿಯ ಪಡಿಸುವಲ್ಲಿ ಹಾಗೂ ಕಾಸರಗೋಡು ಕರ್ನಾಟಕದ ಭಾಗ – ಎಂಬುದನ್ನು ಖಚಿತ ಪಡಿಸುವಲ್ಲಿ ಮತ್ತು ಅಲ್ಲಿಯ ಕನ್ನಡಿಗರ ತುಡಿತಗಳನ್ನೂ ಎದೆಯಾಸೆಗಳನ್ನೂ ಪರಸ್ಪರ ಅರಿತುಕೊಳ್ಳುವಲ್ಲಿ ಪ್ರಮುಖಪಾತ್ರವನ್ನು ವಹಿಸಿವೆ – ಎಂಬುದರಲ್ಲಿ ಸಂದೇಹವಿಲ್ಲ. ಆ ದಿನಗಳು ಕಾಸರಗೋಡಿನ ಕನ್ನಡಿಗರ ಮರೆಯಲಾಗದ ದಿನಗಳಾಗಿ, ವೈಭವ ಕನಸಿನ ದಿನಗಳಾಗಿ, ಇಂದಿಗೂ ಯಾವುದೋ ಆಸೆಯ ಬೆಳಕನ್ನು, ಸಿಹಿಯ ನೆನಪನ್ನು ನಮ್ಮ ಜನರಲ್ಲಿ ಹುಟ್ಟಿಸುತ್ತಿವೆ. ಆ ಸಮ್ಮೇಳನಗಳಲ್ಲಿ ಕನ್ನಡದ ಹಿರಿಯಣ್ಣನಾಗಿ, ಕಾಸರಗೋಡಿನ ಕನ್ನಡಿಗರ ಸಂಕಷ್ಟಗಳನ್ನೂ, ಮಹಿಳೆಯರ ಸಮಸ್ಯೆಗಳನ್ನೂ, ಮಕ್ಕಳ ಭವಿಷ್ಯವನ್ನೂ, ಕಲೆ ಸಂಸ್ಕೃತಿಗಳ ದುಃಸ್ಥಿತಿಯನ್ನೂ, ಕನ್ನಡತನದ ಅಳಿವು ಉಳಿವುಗಳನ್ನೂ, ಕೂಡಿದ ಬೃಹತ್ ಜನಸ್ತೋಮದ ಮುಂದೆೆ, ಗದ್ಗದಿಸುವ ಕಂಠದಿಂದ ಮಿಡಿಯುವ ಕಂಬನಿಯೊಂದಿಗೆ ನುಡಿಯುವ ರೈಯವರ ಚಿತ್ರ – ಅದು ಅವಿಸ್ಮರಣೀಯವಾದ ಒಂದು ಚಿತ್ರ, ಮರೆಯಲಾಗದ ಒಂದು ಸನ್ನಿವೇಶ.

Scan---11

ರೈಯವರಿಗೆ ನಮ್ಮ ಸಮಾಜದ ಬಗ್ಗೆ, ನಮ್ಮ ಜನರ ಒಳಿತಿನ ಬಗ್ಗೆ ಇರುವ ತುಡಿತ – ನಾನು ಆಗಲೇ ಹೇಳಿದಂತೆ – ಅವರ ಸಾಂಸಾರಿಕ ಕೌಟುಂಬಿಕ ತುಡಿತಗಳಿ ಗಿಂತ ಮಿಗಿಲಾಗಿ ಇದ್ದಂತೆ ಕಾಣುತ್ತದೆ. ನಾನು ಮತ್ತು ರೈಯವರು ಆತ್ಮೀಯವಾಗಿ ಎಷ್ಟೋ ಬಾರಿ ಮಾತಾಡಿದ್ದಿದೆ. ಅವರ ಮನೆಯಲ್ಲಿ, ಒಂದೋ ಎರಡೋ ಬಾರಿ ನಮ್ಮ ಮನೆಯಲ್ಲಿ, ಹಾಗೆಯೇ ಸಭೆ ಸಮಾರಂಭಗಳಿಗೆ ಹೋದಲ್ಲಿ ಮತ್ತು ಊರಲ್ಲಿ ಆಗೊಮ್ಮೆ ಈಗೊಮ್ಮೆ ಭೇಟಿಯಾದಾಗ ಈಯೆಲ್ಲ ಸಂದರ್ಭಗಳಲ್ಲೂ ಶ್ರೀ ರೈಯವರು ತಮ್ಮ ಸ್ವಂತ ವಿಷಯವಾಗಲಿ – ಮನೆ ಸಂಸಾರದ ವಿಷಯವಾಗಲಿ ನನ್ನಲ್ಲಿ ಮಾತಾಡಿದ್ದಿಲ್ಲ. ಅವರು ಮಾತೆತ್ತಿದರೆ ಕನ್ನಡದ ವಿಚಾರ, ಸಾಹಿತ್ಯವಿಚಾರ, ನಮ್ಮ ಸಮಾಜದ ಸಂಸ್ಕೃತಿಗಳ ವಿಚಾರ, ಹಾಗೂ ಕಾಸರಗೋಡಿನ ಕನ್ನಡಿಗರ ಭವಿಷ್ಯದ ವಿಚಾರ! ಇದು ರೈಯವರ ನಿತ್ಯಚಿಂತನದ ವಸ್ತು.

ಭಾಷಾವಾರು ಪ್ರಾಂತರಚನೆಗೆ ಮೊದಲು ರೈಯವರ ಚಿಂತನೆ ಸಮಗ್ರ ಕರ್ನಾಟಕದ ಅಥವಾ ದೇಶದ ವಿಚಾರವಾಗಿ ಹೆಚ್ಚು ವ್ಯಾಪ್ತವಾಗಿದ್ದರೆ ಕಾಸರಗೋಡು ಕೇರಳಕ್ಕೆ ಸೇರಿದ ಬಳಿಕ, ಅವರ ತ್ರಿಕರಣಗಳಲ್ಲಿಯೂ ಅದೊಂದೇ ಚಿಂತೆ ಬಹಳವಾಗಿ ವ್ಯಕ್ತವಾಗುತ್ತಿದ್ದುದನ್ನು ಕಾಣುತ್ತೇವೆ.
ಗೋವಿಂದ ಪೈ ಕಾಸರಗೋಡಿನ ದುಃಸ್ಥಿತಿಗಾಗಿ ಎಷ್ಟು ನೊಂದಿದ್ದರೋ – ಕೊರಗಿದ್ದರೋ – ಕರಗಿದ್ದರೋ ಅಷ್ಟೇ ನೋವು ಸಂಕಟಗಳನ್ನು ಶ್ರೀ ರೈಯವರೂ ಅನು ಭವಿಸುತ್ತಿದ್ದಾರೆ ಎಂಬುದು ಅವರ ಮಾತಿನಿಂದಲೂ ಕೃತಿಗಳಿಂದಲೂ ವೇದ್ಯವಾಗುತ್ತದೆ.

ಕಾಸರಗೋಡಿನಲ್ಲಿ ಜರಗಿದ ಒಂದು ಕನ್ನಡಿಗರ ಸಮ್ಮೇಳನದ ಬಹಿರಂಗ ಸಭೆಯಲ್ಲಿ – ಆ ದಿನ ಕರ್ನಾಟಕದ (ಆಗಿನ) ಮುಖ್ಯಮಂತ್ರಿ ಶ್ರೀಮಾನ್ ಆರ್. ಗುಂಡೂರಾಯರು ಸಭೆಯಲ್ಲಿ ಉಪಸ್ಥಿತರಿದ್ದರು – ಶ್ರೀ ರೈಯವರು ಪ್ರಾಸ್ತಾವಿಕ ಭಾಷಣ ಮಾಡುತ್ತಾ “ಸ್ವಾಮೀ, ನಾವು ಇಲ್ಲಿ ಎರಡು ಲಕ್ಷ ಕನ್ನಡಿಗರು ಹೇಗೆ ಬದುಕುತ್ತಿದ್ದೇವೆ ಎಂದು ನಿಮಗೆಲ್ಲ ತಿಳಿದಿರಲಾರದು. ಕೇರಳ ಸರಕಾರಕ್ಕೆ ನಾವು ಇಲ್ಲಿ ಇಷ್ಟು ಮಂದಿ ಕನ್ನಡಿಗರಿದ್ದೇವೆಂದು ಇನ್ನೂ ಗೊತ್ತಿಲ್ಲ. ಇಲ್ಲಿ ನಮ್ಮ ಭಾಷೆ ಸಂಸ್ಕೃತಿಗಳು ದಿನೇ ದಿನೇ ಅಳಿಯುತ್ತಾ ಹೋಗುತ್ತಿವೆ. ನಾವು ಅನಾಥರಾಗಿದ್ದೇವೆ. ಇಲ್ಲಿ ಹರಿಯುತ್ತಿರುವುದು ಪಯಸ್ವಿನೀನದಿಯಲ್ಲ ಸ್ವಾಮೀ, ಇದು ಕಣ್ಣೀರು – ಕಾಸರಗೋಡಿನ ಕನ್ನಡಿಗರ ನಿರಂತರವಾದ ಕಣ್ಣೀರು” – ಎಂದು ಹೇಳುತ್ತಾ, ಆ ಬೃಹತ್ಸಭೆಯ ಮುಂದೆ ದುಃಖ ಕಂಪಿತ ಸ್ವರದಿಂದ ನುಡಿದು ಕಣ್ಣೀರಿಳಿಸುವ ರೈಯವರನ್ನು ನಾವು ಕಂಡಿದ್ದೇವೆ. ರೈಯವರ ಭಾವೋದ್ವೇಗದ ಆ ಮಾತುಗಳನ್ನು ಕೇಳುತ್ತಾ ಸಭೆಯ ಅನೇಕ ಮಂದಿ ಕಣ್ಣೀರು ಒರೆಸುತ್ತಿದ್ದುದನ್ನೂ ನಾನು ಕಂಡಿದ್ದೇನೆ.

ಕಾಸರಗೋಡು ಕೇರಳಕ್ಕೆ ಸಂದ ಬಳಿಕ ಅಖಿಲಕರ್ನಾಟಕ ಮಟ್ಟದಲ್ಲಿ ಎಷ್ಟು ಸಾಹಿತ್ಯ ಸಮ್ಮೇಳನಗಳು ನಡೆದಿವೆಯೋ ಅಷ್ಟರಲ್ಲೂ ಶ್ರೀ ರೈಗಳು ಭಾಗವಹಿಸಿದ್ದಾರೆ – ಕಾಸರಗೋಡಿನ ಬಗ್ಗೆ ಮಾತಾಡಿದ್ದಾರೆ. ಕಾಸರಗೋಡಿನ ಬಗ್ಗೆ ಠರಾವುಗಳ ಮಂಡನೆ ಯಾಗುವ ಹಾಗೂ ಮಾಡಿದ್ದಾರೆ. ಈ ಕಾರ್ಯವನ್ನು ಒಂದು ವ್ರತದಂತೆ – ಒಂದು ದೀಕ್ಷೆಯಂತೆ ಅವರು ಪಾಲಿಸುತ್ತಾ ಬಂದಿದ್ದಾರೆ.

ಹಿಂದೆ ಉಡುಪಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆದಾಗ, ಒಂದು ರೋಮಾಂಚ ಕಾರೀ ಘಟನೆ ನಡೆಯಿತು. ಸಮ್ಮೇಳನದ ಮೊದಲದಿನ ಕನ್ನಡಿಗರ ಬೃಹತ್ ಮೆರವಣಿಗೆ ಸಾಗುತ್ತಿತ್ತು. ಕನ್ನಡ ಜಯಘೋಷದ ಸದ್ದು ಬಾನೆತ್ತರಕ್ಕೆ ಕೇಳುತ್ತಿತ್ತು. ಈ ಮಧ್ಯೆ, ಆಗ ತಾನೇ ಬಸ್ಸಿಳಿದು ಬಂದ ರೈಯವರು ಮೆರವಣಿಗೆಯ ಸಾಲಿನೊಂದಿಗೆ ಸೇರಲು ಬಂದರು. ಅವರನ್ನು ಕಂಡದ್ದೇ ತಡ, ಜನಸ್ತೋಮವು ಬೇರೆಲ್ಲವನ್ನೂ ಮರೆತು, ಏಕಕಂಠ ದಿಂದ `ಕಾಸರಗೋಡು ಕನ್ನಡ ನಾಡು’ ಎಂದು ಭಾವೋದ್ವೇಗದಿಂದ ಘೋಷಿಸಿತು. ಉಡುಪಿಯ ಜನರಿಗೆ ಕಾಸರಗೋಡಿನ ಕನ್ನಡಿಗರ ಬಗ್ಗೆ ಇದ್ದ ಈ ಸಹಾನುಭೂತಿಯನ್ನು _ ಈ ಪ್ರೀತಿಯನ್ನು ನಮ್ಮ ಜನ ಈಗಲೂ ಸ್ಮರಿಸಿಕೊಳ್ಳುತ್ತಿದ್ದಾರೆ.

ಕಾಸರಗೋಡು ಸಮಸ್ಯೆಯನ್ನು ಒಬ್ಬ ಕವಿಯಾಗಿ ರೈಗಳು ಹೇಗೆ ಕಂಡಿದ್ದಾರೆ ಎಂಬುದು ಅವರ `ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ’ ಎಂಬ ಖ್ಯಾತಕವನದಿಂದ ವೇದ್ಯವಾಗುತ್ತದೆ. ಬೆಂಕಿ ಬಿದ್ದಾಗ ಪರಿಹಾರಕಾರ್ಯಕ್ಕೆ ತತ್ಕ್ಷಣ ತೊಡಗಬೇಕು. ಅಲ್ಲಿ ಯಾವುದೇ ಆಲೋಚನೆಗೆ ಎಡೆಯಿಲ್ಲ. ಹಾಗೆಯೇ ಕಾಸರಗೋಡು ಸಮಸ್ಯೆ ಒಂದು `ಬೆಂಕಿ’ಯಂತೆ ಇಲ್ಲಿನ ಜನರನ್ನು ಕಾಡುತ್ತಿದೆ – ಸುಡುತ್ತಿದೆ. `ಓ ಕನ್ನಡಿಗರೆ, ನಮ್ಮನ್ನು ಈ ಬೆಂಕಿಯಿಂದ ಪಾರುಮಾಡಲು ಬೇಗ ಬನ್ನಿ’ ಎಂದು ಕರೆಯುವ ಕವಿಹೃದಯದಲ್ಲಿ ತ್ವರೆಯ ಭಾವವಿದೆ; ಅವಸರದ ಕಳಕಳಿಯಿದೆ. ತಾವು ಬದುಕಿ ಇರುವಾಗಲೇ ಕಾಸರ ಗೋಡು ಕರ್ನಾಟಕಕ್ಕೆ ಸೇರಬೇಕು – ಆ ಶುಭದಿನವನ್ನು ತಾವೊಮ್ಮೆ ಕಣ್ಣಾರೆ ಕಾಣಬೇಕು ಎಂಬ ಹಂಬಲ ರೈಯವರ ಅಂತರಾಳದಲ್ಲಿ ಹುದುಗಿ ಇದ್ದಂತೆ, ಈ ಕವನ ವನ್ನೋದುವಾಗ ಭಾಸವಾಗುತ್ತದೆ. ಈ ಕನ್ನಡದ ಪ್ರೀತಿ, ಈ ಹುಟ್ಟುನೆಲದ ಪ್ರೀತಿ, ಕನ್ನಡಿಗರ ಅವ್ಯಾಜ ಪ್ರೀತಿ – ಇವೇ ರೈಯವರ ಹೃದಯಸಂಪತ್ತು.

ರೈಯವರ ಒಂದೊಂದು ಸಮಾಜಸೇವಾಕಾರ್ಯವೂ ಒಂದೊಂದು ದಾಖಲೆ! ಅವರು ಬದಿಯಡ್ಕ ಪಂಚಾಯತು ಅಧ್ಯಕ್ಷರಾಗಿದ್ದಾಗ, ಎರಡು ಹೊಸ ವಿದ್ಯಾಸಂಸ್ಥೆ ಗಳನ್ನು ತೆರೆದರು. ಒಂದು ಉದಯಗಿರಿ ಲೋವರ್ ಪ್ರೈಮರಿ ಶಾಲೆ, ಇನ್ನೊಂದು ವಿದ್ಯಾಗಿರಿ ಅಪ್ಪರ್ ಪ್ರೈಮರಿ ಶಾಲೆ. ವಿದ್ಯಾಗಿರಿ ಅಪ್ಪರ್ ಪ್ರೈಮರಿ ಶಾಲೆಯ ಅವರ ಪ್ರೀತಿಯ ಗುರುಗಳಾದ ಶ್ರೀ ಪಂಜಿರ್ಕೆ ಅನಂತ ಭಟ್ಟರ ಸ್ಮಾರಕವಾಗಿ ಸ್ಥಾಪಿಸಿದ್ದು. ಒಬ್ಬ ಶಿಷ್ಯ ತನ್ನ ಗುರುವಿಗೆ ಸಲ್ಲಿಸಬಹುದಾದ ಇದಕ್ಕಿಂತ ದೊಡ್ಡ ಕಾಣಿಕೆೆ – ಇದಕ್ಕಿಂತ ದೊಡ್ಡ ಚಿರಸ್ಮರಣೆ ಬೇರೆ ಇರಲಾರದು. ಒಂದು ಪಂಚಾಯತು ಸಂಸ್ಥೆಯು ಎರಡು ಶಾಲೆಗಳನ್ನು ತೆರೆದ ದಾಖಲೆ ಬಹುಶಃ ಕಾಸರಗೋಡಿನ ಚರಿತ್ರೆಯಲ್ಲೇ ಬೇರೆ ಇರಲಾರದು.

ಅವರು ಗ್ರಾಮ ಪಂಚಾಯತು ಅಧ್ಯಕ್ಷರಾಗಿ 15 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಅವರ ಪಂಚಾಯತು ಒಂದು ಮಾದರಿ ಪಂಚಾಯತು ಎಂದು ರಾಜ್ಯ ಸರಕಾರದಿಂದ ಮನ್ನಣೆ ಪಡೆಯಿತು. ರೈಯವರ ಅವಿಶ್ರಾಂತ ದುಡಿಮೆ, ಹಮ್ಮಿಕೊಂಡ ವಿವಿಧ ಯೋಜನೆಗಳು, ನಿಸ್ವಾರ್ಥಸೇವೆ, ತ್ಯಾಗ ಮತ್ತು ಕಾರ್ಯತತ್ಪರತೆ – ಇವು ಇಲ್ಲದೇ ಹೋಗುತ್ತಿದ್ದರೆ, ಅವರ ಪಂಚಾಯತಿಗೆ ಆ ಗೌರವ ಖಂಡಿತ ಸಿಗುತ್ತಿರಲಿಲ್ಲ. ಅವರ ಆಡಳಿತೆಯ ಕಾಲದಲ್ಲಿ ಪಂಚಾಯತು ವತಿಯಿಂದ ನೀರಾವರಿ, ವಿದ್ಯುಚ್ಛಕ್ತಿ, ಆರೋಗ್ಯಸೇವೆಗಳಲ್ಲದೆ, ಅನ್ನದಾನ, ವಿದ್ಯಾದಾನ, ಸಾಹಿತ್ಯಸೇವೆ, ವರ್ಧಂತ್ಯುತ್ಸವಗಳು, ಕವಿಗೋಷ್ಠಿಗಳು ಮುಂತಾದ ಅಪೂರ್ವಕಾರ್ಯಕ್ರಮಗಳು – ಎಂದರೆ, ಬೇರೆ ಯಾವ ಪಂಚಾಯತೂ ನಡೆಸಿರದಂತಹ ಕಾರ್ಯಕ್ರಮಗಳು ಜರಗಿವೆಯೆಂಬುದು ಅವರ ಕಾರ್ಯದಕ್ಷತೆಯನ್ನು ಸೂಚಿಸುತ್ತದೆ.

ರೈಯವರ ಸಮಾಜಸೇವೆ ಬಹುಮುಖವಾದದ್ದು. ಅವರ ಕಾರ್ಯಕ್ಷೇತ್ರ ತುಂಬ ವಿಶಾಲವಾದದ್ದು. ಕವಿಯಾಗಿ, ಲೇಖಕನಾಗಿ, ಪತ್ರಿಕೋದ್ಯಮಿಯಾಗಿ, ಸ್ವಾತಂತ್ರ್ಯಹೋರಾಟ ಗಾರನಾಗಿ, ರಾಷ್ಟ್ರಪ್ರಶಸ್ತಿವಿಜೇತ ಶಿಕ್ಷಕನಾಗಿ, ಬ್ಲಾಕು ಡೆವೆಲಪ್ಮೆಂಟ್ ಕಮಿಟಿಯ ಚೆಯರ್ಮೇನಾಗಿ, `ಪ್ರೇಮಕೂಟ’ವೆಂಬ ಸಾಹಿತ್ಯಕ-ಸಾಂಸ್ಕೃತಿಕ ಸಂಸ್ಥೆಯ ನೇತಾರನಾಗಿ, (ಸ್ಥಳೀಯ) ಮಾಧ್ಯಮಿಕಶಾಲಾ ಶಿಕ್ಷಕಸಂಘಟನೆಯ ಅಧ್ಯಕ್ಷನಾಗಿ, ಉತ್ತರ ಕೇರಳದ ಪ್ರೌಢ ಶಾಲಾ ಶಿಕ್ಷಕಸಂಘದ ಉಪಾಧ್ಯಾಕ್ಷನಾಗಿ, ಕೇರಳ ಸ್ಟೇಟ್ ಸಿಲೆಬಸ್ ಕಮಿಟಿ, ಕೊರಗ ಸಮಾಜ ಅಭಿವೃದ್ಧಿ ಕಮಿಟಿ, ಅಸ್ಪೃಶ್ಯತಾ ನಿವಾರಣಾ ಸಮಿತಿ, ಭಾಷಾ ಅಲ್ಪ ಸಂಖ್ಯಾತರ ಸಮಿತಿ, ಗೋವಿಂದ ಪೈ ಮೆಮೊರಿಯಲ್ ಕಮಿಟಿ, ಕಾಸರಗೋಡು ಕರ್ನಾಟಕ ಪ್ರಾಂತೀ ಕರಣ ಸಮಿತಿ, ಹರಿಜನಸೇವಕ ಸಂಘ, ಮೈಸೂರು ಸರಕಾರದ ತುಳುನಿಘಂಟು ಯೋಜನೆಯ ಸಲಹೆಗಾರ ಸಮಿತಿ, ಕರ್ನಾಟಕ ಸರಕಾರದ ಸಾಹಿತ್ಯ ಅಕಾಡೆಮಿ, ಪ್ರಥಮ ವಿಶ್ವ ಕನ್ನಡ ಸಮ್ಮೇಳನದ ಪುಸ್ತಕ ಆಯ್ಕೆ ಸಮಿತಿ – ಮುಂತಾದ ವಿವಿಧ ಸಂಘಸಂಸ್ಥೆಗಳ ಸದಸ್ಯನಾಗಿ, ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಅವರು ಅವಿಶ್ರಾಂತವಾಗಿ ದುಡಿದಿದ್ದಾರೆ – ದುಡಿಯುತ್ತಿದ್ದಾರೆ.
ರೈಯವರ ವ್ಯಕ್ತಿತ್ವದಲ್ಲಿ ನಾನು ಕಾಣುವುದು ಅವರ ಪ್ರೀತಿಯನ್ನು-ಅಪಾರವಾದ ಪ್ರೀತಿಯನ್ನು!

ಅವರು ಕೆಲವೊಮ್ಮೆ ಹೇಳುವುದಿದೆ – “ನೋಡಿ, ಈ ಪ್ರಾಯದಲ್ಲಿ ನಾನು ಎಲ್ಲವನ್ನೂ ಬಿಟ್ಟು ಆರಾಮವಾಗಿ ಮನೆಯಲ್ಲಿ ಕುಳಿತು ವಿಶ್ರಾಂತಿಜೀವನ ನಡೆಸಬಹುದು. ನನಗೆ ಯಾಕೆ ಇದೆಲ್ಲ? ಎಂದು ಯಾರಾದರೂ ಕೇಳಬಹುದು. ಆದರೆ ನಾವು ಈ ಕೆಲಸ ಮಾಡದಿದ್ದರೆ, ನಾವು ನಮ್ಮ ಹಿರಿಯರಿಂದ ಪಡಕೊಂಡ ಋಣದಿಂದ ಮುಕ್ತರಾಗುವುದು ಹೇಗೆ? ನಮ್ಮಲ್ಲಿ ದೊಡ್ಡ ಋಣವುಂಟು ಸ್ವಾಮೀ, ಸಾಹಿತ್ಯಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಅನೇಕ ರೀತಿಯ ಋಣಗಳನ್ನು ನಮ್ಮ ಹಿರಿಯರು ನಮ್ಮಲ್ಲಿ ಬಿಟ್ಟು ಹೋಗಿದ್ದಾರೆ. ನಮ್ಮ ಮೇಲೆ ಹೊರಿಸಿ ಹೋಗಿದ್ದಾರೆ. ನಾವು ಅದನ್ನು ಕೈ ಬಿಟ್ಟರೆ, ಮುಂದಿನ ಜನಾಂಗಕ್ಕೆ ಅವು ಸಿಕ್ಕುವುದಿಲ್ಲ. ಅವನ್ನು ನಾಶಮಾಡಿದ ಮಹಾದ್ರೋಹ ನಮಗೆ ಬರುತ್ತದೆ. ಅದಕ್ಕೋಸ್ಕರ ನಾವು ದುಡಿಯಬೇಕು. ಅದಕ್ಕಾಗಿ ನನಗೆ ಕೂಡದಿದ್ದರೂ ನಾನು ದುಡಿಯುತ್ತಿದ್ದೇನೆ”. ಹೀಗೆನ್ನುವ ರೈಯವರನ್ನು ಕಂಡಾಗ, ಅವರಿಂದ ನಮ್ಮ ಜನಾಂಗ – ನಮ್ಮ ಯುವಸಮಾಜ ಎಷ್ಟೋ ಕಲಿಯುವುದಕ್ಕಿದೆ ಎಂದು ನನಗೆ ಅನಿಸಿದೆ.

ಇಂಥ ಕನ್ನಡ ಹೋರಾಟಗಾರನಿಗೆ ಹೆಸರಿನಿಂದ ಕಿಞ್ಞ(ಸಣ್ಣ) – ಅಣ್ಣನಾಗಿ ದುಡಿಮೆಯಿಂದ ಹಿರಿಯಣ್ಣನಾಗಿರುವ ಈ ಕವಿಗೆ – ಸಮಾಜಸೇವಕನಿಗೆ ಶತವತ್ಸರಗಳ ದೀರ್ಘಾಯುಸ್ಸನ್ನು – ಪೂರ್ಣಾಯುಷ್ಯವನ್ನು – ಶ್ರೀದೇವರು ಕೊಡಲಿ ಎಂದು ಪ್ರಾರ್ಥಿಸುತ್ತೇನೆ.

(ಡಾ. ವೆಂಕಟರಾಜ ಪುಣಿಂಚತ್ತಾಯರ ಅಭಿಲಾಷೆಯಂತೆ ಕೈಯ್ಯಾರರು ಶತ ವರುಷ ಪೂರೈಸಿ ಇಂದು ಇಹಲೋಕ ತ್ಯಜಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುವ Readoo ಬಳಗ)

-ದಿ. ಡಾ. ವೆಂಕಟರಾಜ ಪುಣಿಂಚತ್ತಾಯ
ಖ್ಯಾತ ತುಳು ಸಂಶೋಧಕರು
ಲೇಖನ ಮೂಲ- www.tulusamshodaka.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!