ಕವಿತೆ

ಹರೆಯದ ನೆರೆ ಮತ್ತು ಕಾಲದ ಜೊತೆಗೆ : ಎರಡು ಕವನಗಳು

ಹರೆಯದ ನೆರೆ

ಹರೆಯದ ನೆರೆ ಬಂದಿದೆ ಆಸೆಯ ಹೊರೆ ಹೆಚ್ಚಿದೆ

ಚಿಗುರು ಮೀಸೆ ಮೇಲೆ ಕಯ್ಯಿ ತೀಡಿ ತೀಡಿ ತಿರುವಿದೆ

ಜಗದ ಬಗೆಯ ಸುಖವನೆಲ್ಲ ತನ್ನದೆಂದೆ ತಿಳಿಯುತ

ಬೀಗಿ ಬೀಗಿ ನಡೆಯುತಿರುವ ಎಲ್ಲ ಗಮನ ಸೆಳೆಯುತ

 

ಕೆಂಪು ಅಂಗಿ ಹಸಿರು ಲುಂಗಿ ಕ್ಷಣ ಕ್ಷಣಕು ವಿವಿಧ ಭಂಗಿ

ಮೇಲೆ ಕೋಟು ತೊಟ್ಟು ಎಂದುಕೊಂಡ ತಾನೆ ಕೆಂಪು ಪರಂಗಿ

ಪೈಸೆ ಕೆಲಸ ಮಾಡಲೊಲ್ಲ ಗೆಳೆಯ-ಗುಂಪು ಬಿಡಲು ಒಲ್ಲ

ಅವ್ವ ಬೈದರಂತು ತಾನೆ ಏರಿಸಿರುವ ತನ್ನ ಸೊಲ್ಲ

 

ತರಹೇವಾರಿ ಮೆಟ್ಟು ಬೂಟು ಕೆದರಿಕೊಂಡು ತಲೆಯ ಜುಟ್ಟು

ಹಟವ ಬಿಡನು ಏನೇ ಆಗಲಿ ಹಿಡಿದದ್ದೇ ಪಟ್ಟು

ಹೊಸದು ಸಿನಿಮ ನೋಡಿ ಬಂದ ಇವನಿಗುಂಟು ಎಲ್ಲ ಶೋಕಿ

ಹರೆಯದ ನೆರೆ ಬಂದಿದೆ ಇವನ ಕೊಚ್ಚಿ ತೊಯ್ದಿದೆ

 

 

ಕಾಲದ ಜೊತೆಗೆ…

ಕಾಲವೊಂದಿತ್ತು ;

ಭೂಮಿ ಆಗಿರಲಿಲ್ಲ ಯಾರಪ್ಪನ ಸ್ವತ್ತೂ

ಆಣೆ ಭಾಷೆಯಿತ್ತರೆ ನ್ಯಾಯ ಮುಗಿಯುತಿತ್ತು

ಮೋಸ ನಡೆಯದಂತೆ ಧರ್ಮ ಕಾವಲಿದ್ದಿತು

ಕಾಲ ಉರುಳಿತು ;

ನೊಗ-ನೇಗಿಲು ಹಿಡಿದು ಉಳುವವರ

ಮೇಲೆ ಹರಿಹಾಯ್ದಿತ್ತು

ಖಡ್ಗ ಕೋವಿ ಹಿಡಿದು ಆಳುವವರ ದಂಡು

ಕಟ್ಟಿಗೆ-ಕೋಲು ಹಿಡಿದು ಬದಿದಾಡಿದವರ

ಮೆಟ್ಟಿ ನಿಂತವು ಖಡ್ಗ ಕೋವಿಗಳು

ಲಗ್ಗೆಯಿಟ್ಟವು ವಸಾಹತುಶಾಹಿಗಳ ಹಿಂಡು

ಕಾಲ ಬದಲಾಗಿದೆ ;

ಖಡ್ಗ ಝಳಪಿಸುತ್ತಿಲ್ಲ

ಕೋವಿ ಗಡರುತ್ತಿಲ್ಲ

ವಸಾಹತುಶಾಹಿಗಳ ಆಡಳಿತವಿಲ್ಲ

ಆದರೂ ಮರಳಿ ಬಂದಿಲ್ಲ ಸರಿದ ಆ ದಿನಗಳು

ಕಾರಣ ಕಾಲ ಬದಲಾಗಿರಬಹುದು

ಜಾಗತೀಕರಣದ ಹೊಳೆ ಕೊಚ್ಚಿರಬಹುದು

ಮನದ ಹೂರಣ ಹಳಸಿರಬಹುದು

ಅಥವಾ..

ಅಂತಃಕರಣ ಸತ್ತು ಎದೆಯೊಳಗೆ ಹೂಳು ತುಂಬಿರಬಹುದು…

 

Nandeesh Kumar M S
Mandya

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!