ಅಂಕಣ

ಮದುವೆಯ ಈ ಬಂಧ – ಜನ್ಮ ಜನ್ಮದ ಅನುಬಂಧ

ಸಂಜಯ ಹಿಂದಿ ನಿಯತಕಾಲಿಕವೊ೦ದರ ವರದಿಗಾರ ಹಾಗೂ ಲೇಖಕ. ತನ್ನ ಲೇಖನವೊಂದರಲ್ಲಿ ‘ಪತಿ ಹಾಗೂ ಬೀವಿ’ ಎಂಬೆರಡು ಪದಗಳ ಪ್ರಯೋಗವನ್ನು ನೋಡಿ ಸಂಪಾದಕ ಜೋಶಿಯವರು ಕರೆಸಿ ವಿಚಾರಿಸ್ತಾರೆ. ಶೋಹರನ ಬೀವಿ ಇರ್ತಾಳೆ ಅಥವಾ ಮಿಯಾನ ಬೀವಿ ಇರ್ತಾಳೆ, ಆದರೆ ಪತಿಗೆ ಇರೋದು ಪತ್ನಿ, ಬೀವಿಯಲ್ಲ ಅಂತ ಸಮಜಾಯಿಸ್ತಾರೆ. ಭಾಷಾ ಪ್ರಯೋಗದಲ್ಲಾದ ಪ್ರಮಾದವನ್ನು ಒಪ್ಪಿಕೊಂಡು ತನ್ನ ತಪ್ಪನ್ನು ಸಂಜಯ ತಿದ್ದಿಕೊಳ್ಳುತ್ತಾನೆ. ಭಾಷೆ ಮತ್ತು ಸಂಸ್ಕೃತಿಗೆ ಅವಿನಾಭಾವ ಸಂಬಂಧ, ಒಂದಕ್ಕೊಂದು ಅನುರೂಪವಾಗಿದ್ದು ಪ್ರತಿಬಿಂಬಕವಾಗಿವೆ.  

ಸಂಜಯ ಸ್ನೇಹಿತೆಯಾದ ನಿಧಿಗೆ ಫೋನ್ ಮಾಡಿ ಅವಳ ಪತಿ ಮತ್ತು ತನ್ನ ಆಪ್ತಮಿತ್ರ  ನಿಖಿಲನ ಕುರಿತು ವಿಚಾರಿಸಿದಾಗ, ನಿಧಿ ಅವರಿಬ್ಬರ ನಡುವೆ ಇರುವ ಮನಸ್ತಾಪದ ಕುರಿತು ಪ್ರಸ್ತಾಪಿಸಿ ನಿಖಿಲ ಮನೆಗೆ ಬಾರದಿರುವದನ್ನು  ತಿಳಿಸುತ್ತಾಳೆ. ‘ಗಂಡ – ಹೆಂಡಿರ ಜಗಳ ಉಂಡು ಮಲಗುವ ತನಕ’ ಎಂಬ ಗಾದೆ ಯಾರಿಗೆ ತಾನೇ ಗೊತ್ತಿಲ್ಲ! ಆದರೆ ಇಂದಿನ ಯಾಂತ್ರಿಕ ಯುಗದಲ್ಲಿ ಪತಿ ಪತ್ನಿಯ ಸಂಬಂಧ ವಿಶ್ವಾಸದ ತಳಹದಿಯಯ ಮೇಲೆ ನಿಂತಿದೆ. ಅದರಲ್ಲೂ ದುಡಿಯುವ ಜೋಡಿಗಿರುವ ಸಮಯದ ಅಭಾವ,ಸಮನ್ವಯದ ಕೊರತೆ,ಬೇಡದಿರುವ ಅಹಂ(ಇಗೋ), ಕ್ಷುಲ್ಲಕ ಕಾರಣಕ್ಕಾಗಿ ಸುಂದರ ಸಂಸಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಪ್ರೀತಿಸಿ ಹರಸಾಹಸ ಮಾಡಿ ಮನೆಯವರನ್ನು ಒಪ್ಪಿಸಿ ನಿಖಿಲನನ್ನು ವರಿಸಿದ್ದಳು ನಿಧಿ, ಅಂತಹ ಯಾವ ಕಾರಣಕ್ಕಾಗಿ ಪರಸ್ಪರರ ಮುಖ ನೋಡದಷ್ಟು ದೂರ ಹೋದರು??… ಸಂಜಯ ವಿಚಾರ ಮಗ್ನನಾದ. ಸಂಜಯ ನಿಖಿಲಗೆ ಫೋನ್ ಮಾಡಿ ಮನೆಗೆ ಅವ್ಹಾನಿಸಿ ತಾನು ಮನೆಗೆ ಬರುತ್ತಿರುವ ವಿಷಯ ತಿಳಿಸುವಂತೆ ನಿಧಿಯನ್ನು  ಕೇಳಿಕೊಳ್ಳುತ್ತಾನೆ. ನಿಧಿ ಸಂಕೋಚಿಸಿದಾಗ, ತಾನೇ ಖುದ್ದಾಗಿ ನಿಧಿ-ನಿಖಿಲರ ಮನೆಗೆ ಬಂದು, ನಿಖಿಲಗೆ ಫೋನ್ ಮಾಡಿ ಒತ್ತಾಯಪೂರಕವಾಗಿ ನಿಖಿಲನನ್ನು ಕರೆಸಿಕೊಳ್ಳುತ್ತಾನೆ.

ನಿಖಿಲ-ನಿಧಿಯರ ವೈವಾಹಿಕ ಜೀವನದಲ್ಲಿ ಬಿರುಕು ತಂದು ಪರಸ್ಪರರನ್ನು ದೂರಮಾಡಿದ ಕಾರಣವನ್ನು ಸಂಜಯ ತಿಳಿಯ ಬಯಸುತ್ತಾನೆ. ಮನದಾಳದ ಅನುಪಮ ಪ್ರೀತಿ, ಹೃದಯಾಂತರಾಳದಲ್ಲಿ ಅಂಕುರಿಸಿದ ಪ್ರೇಮ ಬಾಡಿ, ಹಾಲಿನಂಥ ಸಂಸಾರ ಒಡೆಯುವ ಅಂಚಿಗೆ ಬರಲು ಕಾರಣವಾದ ಹುಳಿ ಏನಿರಬಹುದು? ಆಗ ನಿಧಿ “ನಮ್ಮಿಬ್ಬರಿಗೂ ಯಾಕೋ ಹೊಂದಾಣಿಕೆಯಾಗುತ್ತಿಲ್ಲ,ನಿಖಿಲ ಕಾರಣವಿಲ್ಲದೇ ನನ್ನ ಮೇಲೆ ರೇಗಾಡುತ್ತಾನೆ, ನಾನು ಧರಿಸುವ ಉಡುಗೆ-ತೊಡುಗೆಗಳ ಕುರಿತು ನಿರ್ಧರಿಸುವ ಸ್ವಾತಂತ್ರ್ಯವೂ ನನಗಿಲ್ಲವಾ! ನಾನೇನು ಅರ್ಧಾಂಗಿಣಿಯೋ ಅಥವಾ ಮನೆ ಆಳೋ?” ಎಂದು ತನ್ನ ಗೋಳನ್ನು ಹೇಳಿಕೊಳ್ಳುತ್ತಾಳೆ. ಆಗ ನಿಖಿಲ “ನೋಡು ಸಂಜಯ, ಸಂಜೆ  ಮನೆಗೆ ಬಂದ ತಕ್ಷಣ ಸಮಯಕ್ಕೆ ಸರಿಯಾಗಿ ಒಂದು ಕಪ್ ಚಹಾ ಬಯಸೋದು ತಪ್ಪಾ?ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅತ್ಯಾಚಾರದ ಪ್ರಕರಣಗಳನ್ನೇ ನೋಡು,ಹೆಣ್ಣು ಧರಿಸುವ ತುಂಡುಡುಗೆಗಳು ಅನೇಕ ಪ್ರಕರಣಗಳಲ್ಲಿ ಉತ್ತೇಜಕವಾಗಿ ಕೆಲಸ ಮಾಡುತ್ತವೆ ಎನ್ನುವದರಲ್ಲಿ ಏನಾದರೂ ಅನುಮಾನವಾ? ಭಾರತೀಯ ನಾರಿಯ ಸೌಂದರ್ಯ ವೃದ್ಧಿಸುವದೇ ಪರಂಪರಾಗತ ಉಡುಗೆಗಳಿಂದ. ಆದರೂ ಮರ್ಯಾದೆಯ ಮತ್ತು ನಮ್ರತೆಯ ಚೌಕಟ್ಟಿನ್ನಲ್ಲಿನ ಉಡುಗೆ-ತೊಡುಗೆಗಳ ತುಸು ಆಧುನಿಕತೆಯನ್ನು ಯಾರೂ ಜರಿಯರು”. ಇಬ್ಬರೂ ಒಟ್ಟಿಗೆ “ಈ ಪುರಾಣ ಈಗ್ಯಾಕೆ? ನಮಗೆ ತಲಾಕ್ ಬೇಕು” ಎಂದು ಪುನುರಚ್ಚಿರುಸುತ್ತಾರೆ.

ಆಗ ಸಂಜಯ “ನೀವು ತಲಾಕ್ ತೆಗೆದುಕೊಳ್ಳಲು ನಿಕಾಹ್ ಆಗಿಲ್ಲ!! ಡೈವೋರ್ಸ ತೆಗೆದುಕೊಳ್ಳಲು ಮ್ಯಾರೆಜ್ ಆಗಿಲ್ಲ!! ‘ಮಾಂಗಲ್ಯ೦ ತಂತುನಾನೇನ ಮಮಜೀವನ ಹೇತುನ…’.ಅಂತ ನೂರು ವರುಷಗಳ ಕಾಲ ನೆಮ್ಮದಿಯ ಬದುಕು ನಡೆಸಲು ಅಗ್ನಿ ಸಾಕ್ಷಿಯಾಗಿ ನೀವು ಆಗಿರೋದು, ಹಿಂದೂ ರೀತಿ ರಿವಾಜಿನ ಜನುಮ ಜನುಮದ ಅನುಬಂಧವುಳ್ಳ ವಿವಾಹ!!!! ಇದರಲ್ಲಿ ಸಾವಿರ ಜನ್ಮ ಬಂದರೂ ಬೇರೆಯಾಗುವ ಅವಕಾಶವಿಲ್ಲ. ನಿಮಗೆ
ಬೇರೆಯಾಗಲೇಬೇಕೆಂದಿದ್ದರೆ, ಮೊದಲು ನಿಕಾಹ್ ಆಗಿ ನಂತರ ನಾನೇ ನಿಮಗೆ ತಲಾಕ್ ಕೊಡಿಸಲು ಸಹಕರಿಸುತ್ತೇನೆ.”  ಸಂಜಯನ ಮಾತುಗಳಿಂದ ವಾತಾವರಣ ಕೊಂಚ ತಿಳಿಯಾಗಿತ್ತು, ನಿಧಿ-ನಿಖಿಲರ ಮುಖದ ಗಂಟು ಕರಗಹತ್ತಿತ್ತು. ಮದುವೆಯ ಮುಂಚೆ ಕಾಲೇಜಿನಲ್ಲಿ ಲವ್-ಬರ್ಡ್ಸ್ ಆಗಿ, ಕ್ಲಾಸ್ಗೆ ಚಕ್ಕರ್ ಹೊಡದು ಸಿನೆಮಾ ನೋಡಿದ್ದು,ಒಂದೇ ಐಸ್-ಕ್ರೀಮನ್ನು ಇಬ್ಬರು ಸವಿದದ್ದು, ಮದುವೆಗೆ ಎರಡೂ ಕಡೆಯ ಮನೆಯರ ವಿರೋಧವನ್ನು ಸಮರ್ಥವಾಗಿ ಎದುರಿಸಿ, ಮನೆಯವರ ಮನ ಗೆದ್ದು, ಮೌಂಟ್-ಅಬುವಿನ ತಣ್ಣನೆಯ ವಾತಾವರಣದಲ್ಲಿನ ಮಧುಚಂದ್ರದ ಪಿಸುಮಾತಿನ ಬೆಚ್ಚನೆಯ ದಿನಗಳು, ಈ ಜಗತ್ತಿನಲ್ಲಿ ಬಯಸಿದ ಜೀವನಸಾಥಿಯನ್ನು ಪಡೆದ ನಮ್ಮಷ್ಟು ಭಾಗ್ಯವಂತರು ಇನ್ನೊಬ್ಬರಿಲ್ಲ ಎಂದು ಸ್ವರ್ಗದ ಬಾಗಿಲು ತಟ್ಟಿ ಸಂಭ್ರಮಿಸಿದ ದಿನಗಳ ಚಿತ್ರಣ ಕ್ಷಣಾರ್ಧದಲ್ಲಿ ಕಣ್ಣು ಮುಂದೆ ಕಟ್ಟಿದಂತಾಗಿ ಇಬ್ಬರ ಗಂಟಲು ಒಣಗಿತ್ತು.            

ಸಂಜಯ ನಿಧಿಗೆ ಮದುವೆಯ ಅಲ್ಬಮ್ ತರಲು ಹೇಳುತ್ತಾನೆ. ನಿಧಿ ತನ್ನ ವಿವಾಹದ ಮಧುರ ಕ್ಷಣಗಳ ಸ್ಮೃತಿಚಿನ್ಹದಂತಿದ್ದ ಬಂಗಾರದ ಫ್ರೇಮಿನ ಅಲ್ಬಮ್-ನ್ನು ತ೦ದು ಸಂಜಯನ ಕೈಗಿತ್ತಳು. ಸಂಜಯ ಒಂದೊಂದೇ ಫೋಟೋಗಳನ್ನು ನೋಡುತ್ತಾ ನಿಧಿ-ನಿಖಿಲರ ಮದುವೆಯ ಪುಟಗಳನ್ನು ತಿರುವಿಹಾಕುತ್ತಾ ಸವಿ ನೆನಪುಗಳನ್ನು ತಾಜಾಗೊಳಿಸಿ,ಅಲ್ಬಮ್-ನಿಂದ ಫೋಟೋವೊಂದನ್ನು ಹೊರತೆಗೆದು ಇಬ್ಬರ ಗಮನವನ್ನು ಸೆಳೆಯುವ ಪ್ರಯತ್ನ ಮಾಡುತ್ತಾನೆ. ಇಬ್ಬರೂ ಕೌತುಕದಿಂದ “ಏನಿದರ ವಿಶೇಷ???” ಎನ್ನುತ್ತಾರೆ. ಸಂಜಯ ಅಲ್ಬಮ್-ನಿಂದ ಹೊರತೆಗೆದದ್ದು ವರನ ಪಾದಪೂಜೆಯ ಫೋಟೋ. “ಹಿಂದೂ ವಿಧಿ ವಿಧಾನಗಳಲ್ಲಿ ಹಿರಿಯರು ಅ೦ದ್ರೆ ವಧುವಿನ ತಂದೆ ತಾಯಿಗಳು ವಯಸ್ಸಿನಲ್ಲಿ ಚಿಕ್ಕವನಾದರೂ ವರನ ಪಾದಪೂಜೆ ಮಾಡುತ್ತಾರೆ. ಶಾಸ್ತ್ರಗಳ ಪ್ರಕಾರ ಮದುವೆಯ ಸಂದರ್ಭದಲ್ಲಿ ವಧು-ವರರು ಲಕ್ಷ್ಮಿದೇವಿ ಮತ್ತು ಭಗವಾನ್ ವಿಷ್ಣುವಿನ ಪ್ರತಿರೂಪವಿದ್ದಂತೆ. ಇದೇ ಕಾರಣಕ್ಕಾಗಿ ವಯಸ್ಸಿನಲ್ಲಿ ಕಿರಿಯನಿದ್ದರೂ ಹಿರಿಯರಾದ ಅತ್ತೆ ಮಾವ ವರನ ಪಾದಪೂಜೆ ಮಾಡುತ್ತಾರೆ. ಭಗವಾನ್ ವಿಷ್ಣು-ಲಕ್ಷ್ಮೀದೇವಿ ಸಾವಿರ ವರುಷಗಳಾದರು ಬೇರೆಯಾಗುತ್ತರಾ? ಇಂತಹ ಶ್ರೇಷ್ಠ  ಧರ್ಮ ನಮ್ಮದು, ಕಾನೂನು ಅನೇಕ ಕಾರಣಗಳಿಗೆ ವಿಚ್ಛೇಧನಕ್ಕೆ ಅವಕಾಶ ನೀಡಿದರೂ ನಮ್ಮ ಧರ್ಮ ನಮಗೆ ಎಂತಹ ಕಠಿಣ ಪರಿಸ್ಥಿತಿ –ಸಂದರ್ಭದಲ್ಲಿಯೂ ಸಂಯಮ ಕಳೆದುಕೊಳ್ಳದೇ ಒಂದಾಗಿ ಬಾಳಲು ಕಲಿಸುತ್ತದೆ”. ಎಂದು ಸಂಜಯ ಮಾತು ಮುಗಿಸಿದ.

ನಿಧಿ ಚಹಾ ಮಾಡಿ ತರುತ್ತೇನೆ೦ದು ಆಡುಗೆ ಮನೆಯತ್ತ ನಡೆದಳು. ನಿಖಿಲ-ನಿಧಿಯರ ಕಣ್ಣುಗಳ ತೇವ
ಮರೆಮಾಚಲು ಅಸಾಧ್ಯವಾಗಿತ್ತು, ಕಣ್ಣುಗಳು ತುಂಬಿ ಬಂದಿದ್ದವು.ಅವರಿಬ್ಬರ ಮನಸ್ಸು ಹಗುರವಾಗಿ, ಮಧುರ ಪ್ರೇಮದ ಭಾವ-ವೀಣೆ ಮಿಡಿದು ಮತ್ತೆ ಅನುರಾಗ ಅರಳಿತ್ತು. ನಿಧಿ ಚಹಾ ಮಾಡಿ ಟಿಪಾಯಿಯ ಮೇಲೆ ತಂದಿಟ್ಟಳು, ಸಂಜಯ ತನ್ನ ಕಪ್ಪಿನಲ್ಲಿ ಚಹಾ ಸುರಿದುಕೊಂಡು,ನಿಖಿಲನ ಕಪ್ಪಿಗೂ ಸುರಿದು ಒಂದು ಚಮ್ಮಚ ಸಕ್ಕರೆಯನ್ನು ನಿಖಿಲನ ಕಪ್ಪಿಗೆ ಹಾಕಲು ಹೋದಾಗ, ನಿಧಿ ”ಅಣ್ಣಾ ಅವರಿಗೆ ಸಕ್ಕರೆ ಹಾಕಬೇಡ….ಡೈಬೀಟಿಸ್……”. ಹೀಗೆ ಬೇರೆಯಾಗಲು ನಿರ್ಧರಿಸಿದ್ದ ನಿಧಿ-ನಿಖಿಲಗೆ ಪರಸ್ಪರ  ಮೇಲಿದ್ದ ಸಿಟ್ಟು ದೂರವಾಗಿ ಒಲವಿನ ಜೋಡಿಯಲ್ಲಿ ಮತ್ತೆ ಪ್ರೇಮಾ೦ಕುರವಾಗಿತ್ತು.

ಸಂಜಯ ಇಬ್ಬರ ಕುರಿತು “ತಲಾಕ್ ಭಾರತೀಯ ಶಬ್ದವೇ ಅಲ್ಲ, ಹಿಂದಿಯಲ್ಲಂತೂ ಈ ಶಬ್ದಕ್ಕೆ ಪರ್ಯಾಯ ಪದವೇ ಇಲ್ಲ. ಆಧುನಿಕ ಯುಗದ ಜಾಗತೀಕರಣದ ಜೀವನ ಶೈಲಿಯ ಪರಿಣಾಮಸ್ವರೂಪವಾದ ಲಿವ್-ಇನ್ ಸಂಬಂಧಗಳು,ಒನ್-ನೈಟ್  ಸ್ಟ್ಯಾಂಡ್-ಗಳು ಇತ್ತೀಚಿನ ದಿನಗಳಲ್ಲಿ ಸತಿ-ಪತಿಯರ ವೈವಾಹಿಕ ಜೀವನದ ಮೇಲೂ ದುಷ್ಪರಿಣಾಮಗಳನ್ನು ಬೀರುತ್ತಿರುವದು ವಿಷಾದನೀಯ. ಮದುವೆಯ ಜೋಡಿಗಳು ಬ್ರಹ್ಮನ ಸೃಷ್ಟಿ ಎನ್ನುವದು ಪ್ರತೀತಿ, ಸಹಗಮನ ಪದ್ಧತಿಯಷ್ಟೇ ಅನಿಷ್ಟವಾದ ತ್ರಿವಳಿ ತಲಾಕ್ ವಿರುದ್ಧ  ಸಮಾಜದ  ಮಹಿಳೆಯರಲ್ಲಿ ಜಾಗೃತಿ ಮೂಡುತ್ತಿದೆ. ಆದರೂ ನೀವು ಬೇರೆಯಾಗಲೇಬೇಕೆಂದರೆ, ಮೊದಲು ನಿಕಾಹ್ ಆಗಿ ಆಮೇಲೆ ನಾನೇ ಮುಂದೆ ನಿಂತು ನಿಮ್ಮಿಬ್ಬರಿಗೆ ತಲಾಕ್ ಕೊಡಸ್ತೆನೆ” ಎಂದಾಗ, ಇಬ್ಬರ ಬಾಯಿಯಿಂದ ಮಾತುಗಳೇ ಹೊರಡಲಿಲ್ಲ. ತಮ್ಮ ಬಾಂಧವ್ಯಕ್ಕೆ ಅಡ್ಡಿಯಾಗಿದ್ದ ಅಪನಂಬಿಕೆಯ  ಮುಳ್ಳುಗಳನ್ನು ಸಂಸಾರವೆಂಬ ಗುಲಾಬಿಯಿಂದ ಕಿತ್ತೆಸೆದು, ಮಕರಂದವನ್ನು ಮರಳಿಸಿದ್ದಕ್ಕೆ, ಮೌನದಿಂದಲೇ ಸಂಜಯಗೆ ಧನ್ಯವಾದಗಳನ್ನು ಅರ್ಪಿಸಿದರು.             

Facebook ಕಾಮೆಂಟ್ಸ್

ಲೇಖಕರ ಕುರಿತು

Srinivas N Panchmukhi

ಮೂಲತಃ ಬಾಗಲಕೋಟೆಯವರಾದ ಶ್ರೀನಿವಾಸ ಪಂಚಮುಖಿ, ಕೈಗಾದಲ್ಲಿ  ತಾಂತ್ರಿಕ ಅಧಿಕಾರಿಯಾಗಿ   ಸೇವೆ ಸಲ್ಲಿಸುತ್ತಿದ್ದಾರೆ.  ಕ್ವಿಜ್ಜಿಂಗ್, ಪಕ್ಷಿ ವೀಕ್ಷಣೆ, ರಾಜಕೀಯ ವಿಶ್ಲೇಷಣೆ ಮತ್ತು  ಬರವಣಿಗೆ ಇವರ ಹವ್ಯಾಸಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!