ಅಂಕಣ

ಧ್ವನಿ ಲೋಕದ  ನಭೋಮಂಡಲದಲ್ಲೊಂದು ಧ್ರುವತಾರೆ – ಶಮ್ಮಿ ನಾರಂಗ್

ಉತ್ತರ ಕರ್ನಾಟದ ಹಳ್ಳಿಗಳ ಆಡು ನುಡಿಯಂತೆ “ನಿದ್ದಿ, ಬುದ್ಧಿ,ಲದ್ದಿ” ನೆಟ್ಟಗಿದ್ದರೆ ಅದು ಮನುಷ್ಯ ಆರೋಗ್ಯವಾಗಿದ್ದಾನೆಂದರ್ಥ. ನನ್ನ ಪ್ರಕಾರ ಮನುಷ್ಯನ ಬುದ್ಧಿ ಚುರುಕಾಗಿರಬೇಕಾದರೆ  “ನಿದ್ದಿ, ಬುದ್ಧಿ,ಲದ್ದಿ”-ಯೊಂದಿಗೆ ಸುದ್ದಿಯು ಅತ್ಯವಶ್ಯ,  ದೈಹಿಕ ಮತ್ತು ಮಾನಸಿಕ ಆರೋಗ್ಯದ ಜೊತೆಗೆ ಜಗತ್ತಿನ ಆಗು ಹೋಗುಗಳ ಕುರಿತಾದ ನಿಖರ ಮಾಹಿತಿ ತಿಳಿದುಕೊಳ್ಳುವುದೂ ಅಷ್ಟೇ ಅವಶ್ಯ ಮತ್ತು ಅನಿವಾರ್ಯ.  

ಇಂದಿನ ಸುದ್ದಿ ಚಾನಲ್’ಗಳನ್ನು ನೋಡುವಾಗ ನನ್ನ ಉತ್ಕಂಠತೆ ನನ್ನನ್ನು 3 ದಶಕಗಳ ಹಿಂದೆ ಕರೆದೊಯ್ಯುತ್ತದೆ. ನಾಯಿ ಕೊಡೆಗಳಂತೆ ಹಬ್ಬಿರುವ ದೃಶ್ಯ ಮಾಧ್ಯಮದ ಸುದ್ದಿ ಚಾನಲ್’ಗಳ ಅಬ್ಬರವಿಲ್ಲದ ಎಂಬತ್ತರ ದಶಕದಲ್ಲಿ ರೇಡಿಯೋ ಜೀವನದ ಅವಿಭಾಜ್ಯ ಅಂಗವಾಗಿತ್ತು. ಬಹುತೇಕ ಜನರಿಗೆ ಬಲದೇವಾನಂದ ಸಾಗರರ ಸಂಸ್ಕೃತ ವಾರ್ತೆಯೇ ಸುಪ್ರಭಾತವಾಗಿತ್ತು. ಬೆಳಗಿನ ಜಾವ ಕಚೇರಿಗೆ ಹೋಗುವ ಮನೆಯೊಡೆಯನಿಗೂ,ಶಾಲೆಗೆ ಹೋಗುವ ಮಕ್ಕಳಿಗೂ ರಂಗರಾವ್ ಮತ್ತು ಉಪೇಂದ್ರರಾವ್’ರ ಕಂಚಿನ ಕಂಠದಲ್ಲಿ  ವಾರ್ತೆಗಳನ್ನು  ಕೇಳುವದು ನಿತ್ಯದ ಪರಿಪಾಠವಾಗಿತ್ತು. ಬಸಪ್ಪ ಮಾದರರ ವಿಶಿಷ್ಟ ಶೈಲಿಯ ಪ್ರದೇಶ ಸಮಾಚಾರಕ್ಕಾಗಿ ಕಾತುರದಿಂದ ಕಾಯುವ ಸಮಯವೊಂದಿತ್ತು. ಅಪವಾದವೋ ಎಂಬಂತೆ, ಇಂದಿನ ದೃಶ್ಯ ಮಾಧ್ಯಮಗಳಲ್ಲಿ ಸ್ಪಷ್ಟ ಕನ್ನಡದ ಉಚ್ಚಾರವೂ ಗೊತ್ತಿಲ್ಲದ, ಬರೀ ಮೋಹಕ ಜಗತ್ತಿನ ಥಳುಕು-ಬಳುಕಿನ ಸುದ್ದಿ ವಾಚಕರೇ ಕಿರುತೆರೆಯ ಮೇಲೆ ರಾರಾಜಿಸುತ್ತಿದ್ದಾರೆ. ವಾರ್ತಾಲೋಕದ ಅಗ್ರಗಣ್ಯರಾದ ರಂಗರಾವ್, ಉಪೇಂದ್ರರಾವ್ ಹಾಗೂ ಬಸಪ್ಪ ಮಾದರರ ಅನುಪಸ್ಥಿತಿಯಿಂದ ನಿರ್ಮಿತವಾದ  ನಿರ್ವಾತವನ್ನು ಇಂದಿಗೂ ತುಂಬಲಾಗುತ್ತಿಲ್ಲ.

ನಂತರದ ದಿನಗಳಲ್ಲಿ ಅಂದರೆ ೮೦ರ ದಶಕದ ಮಧ್ಯಭಾಗದಲ್ಲಿ ದೂರದರ್ಶನದ ಸಚಿತ್ರ ಸಾಕ್ಷಾತ್ಕಾರ ಕೇಳುಗರನ್ನು ನೋಡುಗರನ್ನಾಗಿಸಲು ಪ್ರಾರ೦ಭಿಸಿ ಆಕಾಶವಾಣಿಯ ಸುಶ್ರಾವ್ಯ ಶಬ್ದ ಜನರ ಕಿವಿ ತಲುಪುವದು ಕಾಲಕ್ರಮೇಣವಾಗಿ  ಕ್ಷೀಣಿಸಿತ್ತು. ದೂರದರ್ಶನದಲ್ಲಿ ಬಿತ್ತರಗೊಳ್ಳುತ್ತಿದ್ದ ಹಿಂದಿ ಮತ್ತು ಇಂಗ್ಲಿಷ್ ವಾರ್ತೆಗಳ  ಕೆಲ ಸುದ್ದಿ ವಾಚಕರು ತಮ್ಮ ಸೌಮ್ಯತೆ, ಧ್ವನಿಯಲ್ಲಿಯ ಸಮನ್ವಯತೆ, ಸರಳತೆ,ಶುದ್ಧ ಉಚ್ಚಾರ, ವ್ಯಕ್ತಿಗತ ಭಾವಮುಕ್ತ ಸಮಾಚಾರ ಓದಿ, ಜನಮಾನಸದಲ್ಲಿ  ತಮ್ಮದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದರು.ಎಲ್ಲರಿಗಿಂತ ಮುಂದೆ ಹಾಗೂ ಎಲ್ಲರಿಗಿಂತ ಮುಂಚೆ, ಹುಸಿ-ಬಿಸಿ ಬ್ರೇಕಿಂಗ್  ನ್ಯೂಸ್ ಬಿತ್ತರಿಸುವ ಧಾವಂತದಲ್ಲಿ, ನೈಜತೆ-ನೈತಿಕತೆಯನ್ನು ಬದಿಗೊತ್ತಿ  ಕೋಲಾಹಲ ಸೃಷ್ಟಿಸಿ, ಭ್ರಾಂತಿಗೊಳಿಸುವ, ಹೃಸ್ವ-ದೀರ್ಘಗಳ ಮತ್ತು ವ್ಯಾಕರಣದ ಗಂಧ-ಗಾಳಿಯರಿಯದ, ಭಾಷೆಯ ಪರಿಭಾಷೆಯೇ ಗೊತ್ತಿಲ್ಲದೆ (ವಿಶೇಷವಾಗಿ ಕನ್ನಡದ) ಇಂದಿನ ಯುಗದ ಕೃತ್ರಿಮ ಯಾಂತ್ರೀಕೃತ ನಿರೂಪಕ-ಸುದ್ದಿ ವಾಚಕರಿಗೂ ಹಾಗೂ ದೂರದರ್ಶನದ ಏಕಚಕ್ರಾಧಿಪತ್ಯವಿದ್ದ ಅಂದಿನ ಯುಗದ ಸುದ್ದಿವಾಚಕರಿಗೂ ಅಜಗಜಾಂತರ ವ್ಯತ್ಯಾಸ.  ಕೆನ್ನೆಯ ಮೇಲೆ ಗುಳಿ (ಡಿ೦ಪಲ್) ಮೂಡುವ ಸದಾ ಗುಲಾಬಿ ಹೂವು ಮುಡಿಯುತ್ತಿದ್ದ ಸಲ್ಮಾ ಸುಲ್ತಾನ್,ನಗು ಮುಖದ ಶೋಭನಾ ಜಗದೀಶ್, ಸರಳತೆಗೆ ಹೆಸರಾದ ಸರಲಾ ಮಹೇಶ್ವರಿ, ಮಂಜರಿ ಜೋಷಿ, ಕುರುಚಲು ಗಡ್ಡದ ಸುನೀತ್ ಟಂಡನ್, ಮೀನುತಲ್ವಾರ್  ಆಗಿನ ಕಾಲದಲ್ಲೂ ಮಾಡರ್ನ್ ಎನಿಸುವ  ವಿಶಿಷ್ಟ ಕೇಶ ವಿನ್ಯಾಸದ ಗೀತಾಂಜಲಿ ಅಯ್ಯರ್,ರಿನಿ ಖನ್ನಾ  ಪ್ರತಿಯೊಬ್ಬರದೂ ಒಂದೊಂದು ವಿಶೇಷತೆ. ೭೦ ವರುಷದ ವೃದ್ಧರಿಂದ ೧೩ವರುಷದ ಮಕ್ಕಳು ಒಟ್ಟಿಗೆ ಕುಳಿತುಕೊಂಡು ನೋಡಬಹುದಾದ ಸಮಾಚಾರ ದೂರದರ್ಶನದ ಸಾ೦ಸ್ಕೃತಿಕ ಕಾಳಜಿಗೆ ಹಿಡಿದ  ಕನ್ನಡಿಯಾಗಿತ್ತು. ಮನೆಯ ಹಿರಿಯರು ಮಕ್ಕಳಿಗೆ ಭಾಷೆ ಹಾಗೂ ಉಚ್ಚಾರದ ಕುರಿತು ಮಾರ್ಗದರ್ಶನ  ಮಾಡುವಾಗ ದೂರದರ್ಶನದ ಸುದ್ದಿ ವಾಚಕರ ನಿದರ್ಶನ ನೀಡುತ್ತಿದ್ದರು.

ದೂರದರ್ಶನದ ಪರ್ವಕಾಲದಲ್ಲಿ ವಿಭಿನ್ನ ಕ್ಷೇತ್ರದಿಂದ ಕಿರುತೆರೆಗೆ ಬಂದು ಅಪ್ರತಿಮ ಛಾಪು ಮೂಡಿಸಿದ ಮಹನೀಯರೊಬ್ಬರ ಯಶೋಗಾಥೆಯ ಸ್ವಾರಸ್ಯಕರ ಘಟನಾವಳಿಗಳು ನನ್ನ ಕಿವಿಗೆ ಬಿದ್ದಾಗ, ಇಂತಹ ಸಾಧಕರ ಸಾಧನೆಯ ಕಥೆಯನ್ನು ಹಂಚಿಕೊಳ್ಳಬೇಕೆನಿಸಿ ಈ ಲೇಖನವನ್ನು ಬರೆಯಲು ಪ್ರೇರಿತನಾದೆ.

ಸೇನಾಧಿಕಾರಿಯೊಬ್ಬರ ಮಗನಾಗಿ ಜನಿಸಿದ  20ರ ಹರೆಯದ ಯುವಕನೋರ್ವ ದೇಶದ ರಾಜಧಾನಿಯಾದ ದಿಲ್ಲಿಯ ಪ್ರತಿಷ್ಠಿತ ಕಾಲೇಜೋಂದರಲ್ಲಿ ಇಂಜಿನೀಯರಿಂಗ್ ಓದುತ್ತಿದ್ದ. ನೋಡಲು ಸ್ಪುರದ್ರೂಪಿ,ದೈವದತ್ತವಾಗಿ ಬಂದ ವಿಶೇಷ ಕಂಠದಿಂದ ಕಾಲೇಜಿನ ಸಾ೦ಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಿಂಚುತಿದ್ದ. ಒಮ್ಮೆ ಆ ಕಾಲೇಜಿನ ಆಡಿಟೋರಿಯಮ್-ನಲ್ಲಿ(ಶ್ರೋತ್ರಮಂದಿರ) ಧ್ವನಿವರ್ಧಕಗಳ  ವ್ಯವಸ್ಥೆಯನ್ನು ಮಾಡಲು ಬಂದ  ಅಮೆರಿಕನ್ ತಂತ್ರಜ್ಞ, ಅಲ್ಲಿ ಓಡಾಡುತ್ತಿದ್ದ 60 ವಿದ್ಯಾರ್ಥಿಗಳಲ್ಲಿ  ಧ್ವನಿವರ್ಧಕದಲ್ಲಿ (ಮೈಕ್ರೋಫೋನ್) ಮಾತನಾಡಲು ಈ ಹುಡುಗನ್ನನ್ನೇ ಕೇಳಿಕೊಂಡ. ನಮ್ಮ ಕಥಾ ನಾಯಕ ಹಿಂದಿ ಅರಿಯದ ಈ ಬಿಳಿ ಚರ್ಮದವನೊಂದಿಗೆ ಮೋಜಿಗೋಸ್ಕರ “ಭಾಯಿ ಗೋರೆ ತು ಅಪನಾ ದೇಶ ಮೇ ಆಕೆ ಕಾಮ್ ಕರ್ ರಹಾ ಹೈ…. ಅಚ್ಛಾ ಲಗಾ….” ಎಂದು ಮನತೋಚಿದಂತೆ ಏನೇನೋ ಮಾತನಾಡಿದ. ಅದರೆ ಆ ಅಮೆರಿಕನ್-ಗೆ ಮಾತಿನ ಅರ್ಥ ತಿಳಿಯದಿರಲೆಂದು  ಮಾತಿನ ಧಾಟಿ ಮತ್ತು ಧ್ವನಿಯ ಏರಿಳಿತ-ಸಮನ್ವಯತೆಯನ್ನು ಅತ್ಯಂತ ಗಂಭೀರವಾಗಿಟ್ಟಿದ್ದ. ಇದನ್ನು ಆಲಿಸಿದ ಆ ತಂತ್ರಜ್ಞ, ಇಂಗ್ಲೀಷ್-ನಲ್ಲಿ “ನೀನು ನಿನ್ನ ಧ್ವನಿಯನ್ನು ಎಂದಾದರೂ ಮೈಕ್ರೋಫೋನ್”ನಲ್ಲಿ ಕೇಳಿದ್ದೀಯಾ? ಇಲ್ಲಿ ಏನು ಮಾಡುತ್ತಿರುವೆ?ನೀನು ನಿನ್ನ ಸಮಯ ಮತ್ತು ಜೀವನವನ್ನು ವ್ಯರ್ಥ ಮಾಡುತ್ತಿರುವೆ!”  ವಿ.ವೋ.ಎ.ದ ವಿಸಿಟಿಂಗ್ ಕಾರ್ಡೊ೦ದನ್ನು ಕೈಗಿತ್ತು “ನಾಳೆ ನಮ್ಮ ಕಚೇರಿಗೆ ಬಾ.” ಎಂದ. ಆಗಿನ ಕಾಲದಲ್ಲಿ ಬಿ.ಬಿ.ಸಿ. ಬಗ್ಗೆ ಗೊತ್ತಿತ್ತು ಆದರೆ ವಿ.ವೋ.ಎ. ಅಂದರೆ ವಾಯ್ಸ್ ಆಫ್ ಅಮೆರಿಕಾ ಕುರಿತಾಗಿ ಅಷ್ಟಾಗಿ ಮಾಹಿತಿ ಇರಲಿಲ್ಲ. ವಾಯ್ಸ್ ಆಫ್ ಅಮೆರಿಕಾ ಕೂಡ ಹಿಂದಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿತ್ತು ಮತ್ತು ಅದಕ್ಕಾಗಿ ಪ್ರತಿಭಾವಂತ ಕಂಠಗಳ ಶೋಧದಲ್ಲಿತ್ತು.

ಈ ಹುಡುಗ ಮರುದಿನ ಬಸ್ ಏರಿ ದಿಲ್ಲಿಯ ಕರ್ಜನ್ ರಸ್ತೆಯಲ್ಲಿರುವ ವಿ.ಓ.ಎ.ದ ಕಚೇರಿ ತಲುಪಿ ದೊಡ್ಡ ಟೇಪ್-ರೆಕಾರ್ಡರ್,  ಸೌಂಡ್ ಮಿಕ್ಸರ್’ಗಳಿತ್ಯಾದಿ ಆಧುನಿಕ ಉಪಕರಣಗಳನ್ನು ನೋಡಿದ್ದು ಜೀವನದಲ್ಲಿ ಅದೇ ಮೊದಲಿಗೆ. ಅಲ್ಲಿ ಹಿಂದಿ ವಿಭಾಗದ ಮುಖ್ಯಸ್ತರಾದ ಶಾಸ್ತ್ರೀಜಿಯ ದೇಖರೇಖಿಯಲ್ಲಿ ಹಿಂದಿಯ ಲೇಖವೊಂದನ್ನು ಓದಿಸಲಾಯಿತು. ವಿ.ವೋ.ಎ.-ದ ಅಧಿಕಾರಿಗಳು ಶಾಸ್ತ್ರೀಜಿಯ ಅಭಿಪ್ರಾಯ ಕೇಳಿ ಅವರಿಂದ ಓಕೆ ಆದ ಮೇಲೆ ಅಸಲಿ ಆಡಿಶನ್’ನ ತಯಾರಿ ಶುರುವಾಯಿತು. ಕೇವಲ  ೮ನೇ ತರಗತಿಯವರೆಗೆ ಹಿಂದಿ ಓದಿದ್ದರೂ ಭಾಷೆಯ ಮೇಲೆ ಹಿಡಿತ ಮತ್ತು ಗಾಢವಾದ ಜ್ಞಾನ ಹೊಂದಿದ್ದ, ತನ್ನ ಗಂಭೀರ ಕಂಠ ಮತ್ತು ಅಧ್ಬುತ ಧ್ವನಿಯಿಂದ ಒಂದೇ ಟೇಕ್’ನಲ್ಲಿ ಓಕೆ ಆಗಿ, ವಿ.ವೋ.ಎ.ದ ಅಧಿಕಾರಿಯೊರ್ವ ಆತನ ಕೈಗೆ ಚೀಟಿಯೊಂದನ್ನು ಇತ್ತು ಕಚೇರಿಯ ಕೌಂಟರ್-ನಲ್ಲಿ ೧೦೦ರೂಪಾಯಿ ಸ್ವೀಕರಿಸುವಂತೆ ಹೇಳಿದರು. ೧೯೭೮ರಲ್ಲಿ ೧೦೦ರೂಪಾಯಿ ಅಂದರೆ ಊಹಿಸಲು ಅಸಾಧ್ಯ!! ಹುಡುಗನ ಆನಂದಕ್ಕೆ ಪಾರವೇ ಇರಲಿಲ್ಲ. ಮತ್ತೆ ವಿ.ವೋ.ಎ.-ದ ಅಧಿಕಾರಿಗಳು ಒಂದು ಘಂಟೆ ಕಾಯಲು ಹೇಳಿದರು. ಆ ಯುವಕ ಕಾಯುವುದೇನು, ಅವರು ಎಲ್ಲೆಂದರಲ್ಲಿ ಮಲಗಲೂ ಸಿದ್ಧವಾಗಿದ್ದ! ಮತ್ತೊಂದು ಪುಟ ಓದಿಸಿ ಮತ್ತೆ ೧೦೦ರೂಪಾಯಿ ಇತ್ತರು. ಹೀಗೆ ದೊರೆತ ಇನ್ನೂರು ರೂಪಾಯಿಗಳನ್ನು ಭದ್ರವಾಗಿ ಒಳ ಅ೦ಗಿಯ ಚೋರ್ ಪಾಕೆಟ್-ಗೆ ಇಳಿಸಿ  ಪುನಃ ಬಸ್ ಏರಿ ಹಾಸ್ಟೇಲ್ ಸೇರಿದ್ದ. ಸೇನಾಧಿಕಾರಿಯಾದ ತಂದೆಯ ಸಂಬಳ ೧೮೦೦ರೂಪಾಯಿ ಆಗಿದ್ದ ಆ ಕಾಲದಲ್ಲಿ ಈ ಹುಡುಗ ವಿ.ಓ.ಎ. ನಲ್ಲಿ ಸುಮಾರು ೩ ತಿಂಗಳು ದುಡಿದು ಕೂಡಿಟ್ಟ ದುಡ್ಡು ೪೮೦೦ರೂಪಾಯಿ!! ಇದನ್ನೆಲ್ಲ ಸೇನಾಧಿಕಾರಿಯಾದ ತಂದೆಗೆ ತಿಳಿಸಲು ತುಂಬಾ ಸಂಕೋಚ, ಇಂಜಿನೀಯರಿಂಗ್’ನ ಅಭ್ಯಾಸದ ಕಡೆ ಲಕ್ಷ್ಯ ಕೊಡದೆ ಇಂತಹ ಕೆಲಸಕ್ಕೆ ಇಳಿದಿದ್ದಕ್ಕೆ ತಂದೆಯವರಿಂದ ಮಂಗಳಾರತಿ ಮಾಡಿಸಿಕೊಳ್ಳಬೇಕಾದಿತೆಂಬ ದುಗುಡ. ಧೈರ್ಯ ಮಾಡಿ ತಂದೆಯವರಿಗೆ ತಿಳಿಸಿದ, ತಂದೆಯವರು ಮಗನ ಮೇಲೆ ರೇಗದೆ  ಇದ್ಯಾವುದು ದೊಡ್ಡ ವಿಷಯವಲ್ಲವೆಂಬಂತೆ ಬಂದ ದುಡ್ಡನ್ನು ಬ್ಯಾಂಕ್-ನಲ್ಲಿ ಜಮಾ ಮಾಡಲು ಹೇಳಿದಾಗ ನಿರಾಳವಾಗಿದ್ದ.                      

ಈ ಮೂರು ತಿ೦ಗಳಲ್ಲಿ ರೇಡಿಯೋದಲ್ಲಿ ಜಾಹೀರಾತು ಮಾಡುವರೊಡನೆ ಈತನ ನಂಟು ಬೆಳೆದಿತ್ತು, ಮೂರು ತಿಂಗಳುಗಳ ತರುವಾಯ ಅಮೇರಿಕದ ಹೊಸ ಅಧ್ಯಕ್ಷರು ಬಂದು ವಿ.ಓ.ಎ.ದ ಹಿಂದಿ ಪ್ರಸಾರವನ್ನು ನಿಲ್ಲಿಸಿಬಿಡುತ್ತಾರೆ. ಆಗ ಅಲ್ಲಿಯ ಮಿತ್ರರು ಮುಂದಿನ ದಾರಿ ಬಗ್ಗೆ ಕೇಳಿದಾಗ, ಇಂಜಿನಿಯರಿಂಗ್ ಮುಗಿಸುವದೇ ಮೊದಲ ಗುರಿ ಎಂದಿದ್ದ. ಆಗ ಅವರು  “ವಿವಿಧ ಭಾರತಿ ಹಾಗೂ ರೇಡಿಯೋ ಸಿಲೋನ್-ಗಾಗಿ ರೇಡಿಯೋ ಜಾಹೀರಾತು ಮಾಡುತ್ತೇವೆ ನಮಗೆ ಪುರುಷ ಧ್ವನಿಯೊಂದರೆ ಅವಶ್ಯಕತೆ ಇದೆ,ನೀವು ಬರ್ತೀರಾ?” ಎಂದಿದ್ದರು. ಆಗಿನ್ನೂ ಟಿ.ವಿ.ಯಲ್ಲಿಯೂ ಜಾಹೀರಾತುಗಳು ಪ್ರಾರಂಭವಾಗಿರದ ಕಾಲ, ಆಗಾಗ ಕಾಲೇಜಿನಲ್ಲಿ ಭಾಗವಹಿಸಿದ ಸಂಗೀತ ಕಚೇರಿಗಳಿಂದ, ಸುಮಾರಾಗಿದ್ದ ಸಂಗೀತದ ಅರಿವು ಮತ್ತು ಡ್ರಮ್ ಬಾರಿಸುವ ಕೌಶಲ್ಯದ  ಕುರಿತು ಅವರಿಗೆ ತಿಳಿಸಿದ್ದ. ಮುಂದೆ ಕೆಲ ದಿನಗಳ ತರುವಾಯ ರೇಡಿಯೋದಲ್ಲಿ  ೩೦ಸೆಕಂಡನ ಜಿಂಗಲ್-ನ ಧ್ವನಿಮುದ್ರಣಕ್ಕೆ ಪುರುಷ ಧ್ವನಿಯೊಂದರ ಅವಶ್ಯಕತೆ ಇತ್ತು, ನಮ್ಮ ನಾಯಕನಿಗೆ ಮತ್ತೆ ಬುಲಾವ್ ಬಂತು. ವಿಧಿ ಲಿಖಿತ ಎಂದರೆ ಹೇಗಿರುತ್ತೆ ನೋಡಿ, ಅಂದು ಜಿಂಗಲ್-ನ ಸಂಗೀತ ಸಂಯೋಜಿಸಬೇಕಾದ ನಿರ್ದೇಶಕ ಬರಲಿಲ್ಲ. ನಮ್ಮ ಹೀರೊಗೆ ಬಯಸದೆ ಸಂಗೀತ ಸ೦ಯೋಜನೆಯ ಭಾಗ್ಯವೂ ಒದಗಿ ಬಂತು! ಫರ್ಟಿಲೈಸರ್ ಕಾರ್ಪೊರೇಷನ್ ಆಫ್ ಇಂಡಿಯಾದ ಗೊಬ್ಬರವೊಂದರ ಜಾಹಿರಾತಿನ  ಜಿಂಗಲ್- ಓಕೆ ಆಗಿತ್ತು. ಅದಕ್ಕೆ ದೊರೆತ ಹಣ ೧೫೦ರೂಪಾಯಿ! ಮುಂದೆ ತಂದೆಯವರ ಆಜ್ಞೆಯ ಮೇರೆಗೆ ಓದಿನ ಕಡೆ ಮನಸಿತ್ತು ಇಂಜಿನೀಯರಿಂಗ್ ಮುಗಿಸಿದ. ಆದರೆ ಭಾವಾ೦ತರಂಗದಲ್ಲಿ ಹತ್ತಿದ ಕಿಡಿ-ಮತ್ತು (ಪ್ಯಾಶನ್) ಕೇಳಬೇಕಲ್ಲ? ಹಾಗಾಗಿ ಅವಕಾಶ  ಸಿಕ್ಕಾಗಲೆಲ್ಲ ಸ್ಟುಡಿಯೋಗೆ ಹೋಗಿ ಬರುವ ಪರಿಪಾಠ ಬಿಟ್ಟಿರಲಿಲ್ಲ.   

ಇಂಜಿನೀಯರಿಂಗ್ ಮುಗಿಸಿದ ಮೇಲೆ ಎಸ್ಕೋರ್ಟ್ಸ್ ಕಂಪನಿಯಲ್ಲಿ ಕೆಲಸವೂ ದೊರೆಯಿತು.ಅರ್ಹತೆ ಮತ್ತು ಪ್ರವೃತ್ತಿಯ ಆಧಾರದ ಮೇಲೆ ವಿಭಿನ್ನವಾದರೂ ಆಗಿನ ಸಮಯಕ್ಕೆ ಭಾರತದ ಮಟ್ಟಿಗೆ ಅಪರಿಚಿತ ಮತ್ತು ನಾವೀನ್ಯತೆವುಳ್ಳ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದಲ್ಲಿ, ಎಸ್ಕೋರ್ಟ್ಸ್-ನ ಹೊಚ್ಚ ಹೊಸ ಬೈಕೊಂದರ ಸ್ಟಂಟ್ ರೈಡಿಂಗ್–ನ ತರಬೇತಿ ನೀಡಲಾಯಿತು. ೭೦ರ ದಶಕದ ಬ್ಲಾಕಬಸ್ಟರ್ ಹಿಂದಿ ಚಿತ್ರ ‘ಬಾಬಿ’ಯಲ್ಲಿ ರಿಷಿ ಕಪೂರ್ ಓಡಿಸಿದ ಬೈಕ್ ಯುವಜನತೆಯ ಗೀಳು ಹಿಡಿಸಿತ್ತು. ಎಸ್ಕೋರ್ಟ್ಸ್-ನ ಈ ಬೈಕನ್ನು ಹೆ೦ಗಳೆಯರಲ್ಲೂ ಜನಪ್ರಿಯಗೊಳಿಸಿ  ಬೈಕ್-ನ ಸೇಲ್ಸ್ ವೃದ್ಧಿಸುವಂತೆ ಮಾಡಲು ‘ಬಾಬಿ’ಯಲ್ಲಿ ರಿಷಿ ಕಪೂರ್-ರ ಡ್ಯೂಪ್ ಆಗಿದ್ದ ಸ್ಟಂಟ್-ಮನ್-ರಿಂದ ವಿವಿಧ  ಮಾದರಿಯ ತರಬೇತಿ ಪಡೆದು ಅಪಾಯಭರಿತ ಸ್ಟಂಟ್ –ಶೋ ಮಾಡಲಾರಂಭಿಸಿದ. ಹೀಗೆ ಸ್ಟಂಟ್-ನ ಅಭ್ಯಾಸದಲ್ಲಿ ನಿರತರಾಗಿದ್ದಾಗ ಆದ ಅವಘಡವೊಂದರಲ್ಲಿ ಮುಖಕ್ಕೆಲ್ಲಾ ಗಾಯವಾಗಿ,ತಂದೆಯವರಿಂದ ಮತ್ತೆ ಬುದ್ಧಿವಾದ ಹೇಳಿಸಿಕೊಳ್ಳುವ ಪ್ರಸಂಗ ಬಂತು. ತಂದೆಯವರು ಈ ಸಾರಿ ಕಟ್ಟಪ್ಪಣೆ ಹೊರಡಿಸಿದರು”ನಿನ್ನ ಮನಸ್ಸಿನಲ್ಲೇನಿದೆ?ಒಮ್ಮೆ ವೊಯಿಸಿಂಗ್ ಮತ್ತೊಮ್ಮೆ ಸ್ಟಂಟ್!!!! ಇನ್ನಾದರು ನಿನ್ನ ಗುರಿ ಅರಿತುಕೊಂಡು ಒಳ್ಳೆಯ ಉದ್ಯೋಗ ಸೇರು” ಎಂದು ನಿಯತಕಾಲಿಕವೊಂದರಲ್ಲಿ ಭಾರತದ ಅಗ್ರಮಾನ್ಯ ಸಂಸ್ಥೆಯಾದ ಎಲ್.ಐಂಡ್.ಟಿ.ಯಲ್ಲಿಯ ಉದ್ಯೋಗವಕಾಶದ ಕುರಿತು ತಿಳಿಸಿದರು. ಎಲ್.ಎನ್.ಟಿ. ಸಂದರ್ಶನದಲ್ಲಿ ಆತನ ಮಾತುಗಾರಿಕೆಯಿಂದ ಪ್ರಭಾವಿತರಾಗಿ ಎಲ್. ಐಂಡ್.ಟಿ.ಯ ಸಾಕ್ಷಚಿತ್ರ  (ಡಾಕ್ಯುಮೆಂಟರಿ) ಮತ್ತು ತರಬೇತಿ ವಿಭಾಗದಲ್ಲಿ ತರಬೇತುದಾರನಾಗಿ ನೇಮಕಾತಿಗೊಳಿಸಿ, ಐ.ಐ.ಟಿ.ದೆಹಲಿಯಲ್ಲಿ ಲೋಹತಂತ್ರಜ್ಞಾನದ (ಮೆಟ್ಲರ್ಜಿ) ವಿಶೇಷ ಅಧ್ಯಯನಕ್ಕೆ ಕಳಿಸಲಾಯಿತು. ಲಾರ್ಸನ್ ಐಂಡ್ ಟೂಬ್ರೋದ ಕೆಲಸದಲ್ಲಿ  ಪ್ರತಿಷ್ಠೆ,ಗೌರವ,ಸನ್ಮಾನ ದೊರೆತು ಸಂತೃಪ್ತ ಜೀವನದ ಸಕಲ ಲಕ್ಷಣಗಳು ಗೋಚರಿಸುತ್ತಿದ್ದವು. ಅಲ್ಲಿ ತರಬೇತಿ ವಿಭಾಗದಲ್ಲಿ ತರಬೇತಿ ನೀಡುತ್ತಿರುವಾಗ, ಸಾಕ್ಷಚಿತ್ರ (ಡಾಕ್ಯುಮೆಂಟರಿ) ಮಾಡುವ ನಿರ್ದೇಶಕರೋರ್ವರ ಭೇಟಿಯಾಯಿತು. ನಮ್ಮ ಹುಡುಗನ ಮಾತುಗಾರಿಕೆ, ಧ್ವನಿಯಲ್ಲಿನ ಗಾಂಭೀರ್ಯ ನೋಡಿ ಚಕಿತರಾಗಿ “ನೀನು ಇಲ್ಲಿ ನಿನ್ನ ಸಮಯವನ್ನು ವ್ಯರ್ಥ ಮಾಡುತ್ತಿದ್ದಿ,ನಿನ್ನ ಪ್ರತಿಭೆಗೆ ಅನ್ಯಾಯ ಮಾಡುತ್ತಿರುವೆ ನಮ್ಮ ಸಾಕ್ಷಚಿತ್ರಗಳಿಗೆ ವೀಕ್ಷಕ ವಿವರಣೆ ನೀಡು.” ಎಂದಾಗ, ಮನಸ್ಸಿನ ಯಾವುದೋ ಮೂಲೆಯಲ್ಲಿ ಹುದುಗಿ ತುಸು ತಣ್ಣಗಾಗಿದ್ದ ಮೈಕ್ರೋಫೋನ್–ನ ಹುಚ್ಚು ಮತ್ತೆ ಮತ್ತಾಗಿ ಏರಲು ಪ್ರಾರಂಭಿಸಿತ್ತು! ಆತನ ಹಿರಿಯ ಅಧಿಕಾರಿಗೆ ತನ್ನ ಮನದ ಮಿಡಿತವನ್ನು ತಿಳಿಸಿದಾಗ,ಅವರೂ “ನಿನ್ನ ಮನದಿಚ್ಛೆಯಂತೆ ಮುಂದುವರಿ,ಎರಡು ವರ್ಷಗಳ ತರುವಾಯ ಮತ್ತೆ ನಿನಗೆ ಎಲ್.ಎನ್.ಟಿ.ಗೆ ಮರಳ ಬೇಕಿನಿಸಿದರೆ ನಮ್ಮ  ಬಾಗಿಲು ನಿನಗಾಗಿ ತೆರೆದಿರುತ್ತದೆ.” ಎಂದರು. ತದನಂತರ ಮನೆಗೆ ಬಂದು ತಂದೆಯರಿಗೂ ವಿಷಯತಿಳಿಸಿದಾಗ, ಸೇನಾಧಿಕಾರಿಯಾಗಿದ್ದ ತಂದೆ ಇಲ್ಲ ಅನ್ನಲಿಲ್ಲ,”ಆತ್ಮಸಾಕ್ಷಿಯಂತೆ ಮುಂದುವರೆ” ಎಂದು ಹರಸಿ ಶುಭಕೋರಿದರು..

ಬಾಳ ಕುದುರೆಯ ಕಡಿವಾಣ ಕಳಚಿ ಹಕ್ಕಿ ಮರಳಿ ಗೂಡಿನತ್ತ ಪಯಣ ಬೆಳೆಸಿತ್ತು!! ಮತ್ತೆ ಮೈಕ್ರೋಫೋನ್ – ಸ್ಟುಡಿಯೋ – ರೇಡಿಯೋದೊಂದಿಗೆ ಒಡನಾಟ ಶುರುವಾಗಿತ್ತು. ಆ ಸಮಯದಲ್ಲಿ ‘ಟೆಕ್ಸ್ಲಾ ಟಿ.ವಿ. ಕುರ್ಬಾನಿ’ ಎಂಬ ಜನಪ್ರಿಯ ಟಿ.ವಿ.ಕಾರ್ಯಕ್ರಮದಲ್ಲಿ ಪಂಜಾಬಿ ಭಾಷೆಯಲ್ಲಿ ಗುರು ಗ್ರಂಥಸಾಹಿಬ್-ದ ಕುರಿತು ಧಾರ್ಮಿಕ ವಿವರಣೆಯನ್ನು ನೀಡುವ “ಆತ್ಮಾದಿ ಸುಖ”  ಕಾರ್ಯಕ್ರಮಕ್ಕೆ ಧ್ವನಿ ನೀಡುವ ಹೊಣೆಗಾರಿಕೆ ಬಂತು. ಟಿ.ವಿ.ಯಲ್ಲಿ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮಕ್ಕೆ ಚೈತನ್ಯ ತುಂಬಿ  ಧಾರ್ಮಿಕ ಶೃದ್ಧೆಯಿಂದ ನಡೆಸಿಕೊಟ್ಟ ರೀತಿ ಸಿಖ್ ಸಮುದಾಯದ ಜನರ ಮನ ಗೆದ್ದು ಮನೆಮಾತಾಗಿತ್ತು. ಸಿಖ್ ಧರ್ಮದ ಅಗಾಧ ಪಾಂಡಿತ್ಯ ಪಡೆದ ಪ್ರಕಾಂಡ ಪಂಡಿತ, ಮಹಾಜ್ಞಾನಿ ವೃದ್ಧನೋರ್ವ ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಿರಬಹುದೆಂದು ನಂಬಿ,ಸ್ಟುಡಿಯೋಗೇ ಭೇಟಿಯಿತ್ತವರಿಗೆ ಹರಿದ ಜೀನ್ಸ್ ಮತ್ತು ಟೀ ಶರ್ಟ್ ನಲ್ಲಿದ್ದ ಯುವಕನನ್ನು ಕಂಡು ಅಚ್ಚರಿಯಾಗಿತ್ತು!!! ೧೯೮೨ರಲ್ಲಿ ಇಂದಿನಂತೆ ಸ್ವತಂತ್ರ (ಫ್ರೀಲಾನ್ಸ್) ಛಾಯಾಗ್ರಾಹಕರಿರದ ಕಾಲವದು,ಈ ಕಾರ್ಯಕ್ರಮದ ದೃಶ್ಯಗಳ ಮುದ್ರಣಕ್ಕಾಗಿ ದಿಲ್ಲಿ ದೂರದರ್ಶನದಿಂದ ಛಾಯಾಗ್ರಾಹಕರು ಬರುತ್ತಿದ್ದರು. ಹೀಗೆ ಬಂದ ಕ್ಯಾಮೆರಾಮನ್ ನಮ್ಮ ಹುಡುಗನ ಕುರಿತು ”ದೂರದರ್ಶನದ ಸುದ್ದಿ ವಾಚಕರ ಹುದ್ದೆಗೆ ಪ್ರಕಟಣೆ ಬಂದಿದೆ ನೀನ್ಯಾಕೆ ಪ್ರಯತ್ನಿಸಬಾರದು?” ಅಂದಾಗ ನಮ್ಮ  ಹುಡುಗ “ಅಲ್ಲಿ ಎಷ್ಟು ಚೆಲುವಾದ-ಆಕರ್ಷಕ ಹುಡುಗಿಯರು ಇರ್ತಾರೆ… ಗೊತ್ತಾ? ನನಗೆ ಅವಕಾಶ ದೊರೆಯುವದು ತುಂಬಾ ಕಷ್ಟ ಎ೦ದ.” ಕೊನೆಗೆ ಆ ಛಾಯಾಗ್ರಾಹಕನೇ ಸಂಬಧಿಸಿದ ಅರ್ಜಿ ಮತ್ತು ಅವಶ್ಯಕವಾದ ೨೦ರೂಪಾಯಿಯ ಪೋಸ್ಟಲ್-ಆರ್ಡರ್ ತಂದು ಒತ್ತಾಯಪೂರ್ವಕವಾಗಿ ಅರ್ಜಿ ಹಾಕಿಸಿದ. ದೂರದರ್ಶನದ ವಾರ್ತಾ ವಾಚಕರ ಹುದ್ದೆಗೆ ಬಂದ ೧೦ ಸಾವಿರ ಅರ್ಜಿಗಳಲ್ಲಿ ಕೇವಲ ೩೦೦ಅಭ್ಯರ್ಥಿಗಳಿಗೆ ಮಾತ್ರ (ವಾಯ್ಸ್-ಟೆಸ್ಟ್) ಧ್ವನಿ ಪರೀಕ್ಷೆಗೆ ಬುಲಾವ್ ಬಂದಿತ್ತು, ಕೊನೆಗೆ ಮೂರು ಹಂತದ ವಿಭಿನ್ನ ಪರೀಕ್ಷೆಗಳ ನಂತರ  ಆಯ್ಕೆಯ ಸುಯೋಗ ಅರಸಿ ಬಂದದ್ದು ನಮ್ಮ ಕಥಾನಾಯಕನನ್ನು ಮಾತ್ರ!

ಭಾರತದ ಟೆಲೆವಿಷನ್-ಜಗತ್ತಿನಲ್ಲಿ  ಕಲರ್ ಟಿ.ವಿ.ಯ ಆಗಮನ,ಏಶೀಯಾಡ್-ಕ್ರೀಡಾಕೂಟದ  ವಿಜೃಂಭಣೆಯ ಪರ್ವ ಕಾಲದಲ್ಲಿ, ದೂರದರ್ಶನದ ಸುದ್ದಿ ವಾಚಕರಾಗಿ ಆಯ್ಕೆಯಾಗಿ ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ದೂರದರ್ಶನದ ಸಮಾಚಾರಕ್ಕೆ ಹೊಸ ಭಾಷ್ಯ ಬರೆದು ನೋಡುಗರ ಮನಸೂರೆಗೊಂಡ ವ್ಯಕ್ತಿಯೇ ನಮ್ಮ ಕಥಾನಾಯಕ ದಪ್ಪ ಮೀಸೆಯ ಶಮ್ಮಿ ನಾರಂಗ್. ಶಮ್ಮಿ ನಾರಂಗ್-ರ ಮನೋಜ್ಞ ಶೈಲಿ, ಅನನ್ಯ ಭಾಷಾ ಜ್ಞಾನ, ಶುದ್ಧ ಉಚ್ಚಾರ ಮತ್ತು ಶಾಲೀನತೆಯಿಂದ ದೂರದರ್ಶನ ಸಮಾಚಾರದ ಹಿರಿಮೆ-ಗರಿಮೆ ಹೆಚ್ಚಿ  ಜನಪ್ರೀಯತೆಯ ಉತ್ತುಂಗಕ್ಕೇರಿತ್ತು. ಮಾಜಿ ಪ್ರಧಾನಿಗಳಾದ ಶ್ರೀಮತಿ ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿಯವರ ಕುರಿತ ಸಕಲ ಸಾಧನೆ/ನಿರೂಪಣೆ/ವರದಿಗಳಗೆ ಧ್ವನಿ  ಶಮ್ಮಿ ನಾರಂಗ್ ಅವರದ್ದೇ  ಆಗಬೇಕೆಂದು ಖುದ್ದು ಅಂದಿನ ಪ್ರಧಾನಿಗಳು ಬಯಸುತ್ತಿದ್ದರಂತೆ!!!     

ಸಮಾಚಾರ ಮುಗಿದ ಮೇಲೆ ಜೇಬಿಗೆ ಪೆನ್ ಇಳಿಸುವ ಇವರ ವೈಖರಿ ಜನರಿಗೆ ಮೆಚ್ಚುಗೆಯಾಗಿತ್ತು. ಶಮ್ಮಿ ನಾರಂಗ್-ರಿಗೆ ಜನತೆಯ, ಅದರಲ್ಲೂ ವಿಶೇಷವಾಗಿ ಮಹಿಳೆಯರ ಮೆಚ್ಚುಗೆಯ ಪತ್ರಗಳು ಬರುತ್ತಿದ್ದವು. ಒಂದು ಸ್ವಾರಸ್ಯಕರ ಪ್ರಸಂಗವೆಂದರೆ ಶಮ್ಮಿ ನಾರಂಗ್ ಹೇಳುವಂತೆ ಒಮ್ಮೆ ಬಂದ ಅನಾಮಧೇಯ ಪ್ರೇಮಪತ್ರವೊಂದರಲ್ಲಿ ತನ್ನ ಪ್ರೀತಿಗಾಗಿ ಅಂದು ಸಮಾಚಾರ ಮುಗಿದ ನಂತರ  ಪೆನ್ ಜೇಬಿಗೆ ಇಳಿಸದಂತೆ ನಿವೇದಿಸಿದ್ದಳಂತೆ. ಅದಕ್ಕೆ ಶಮ್ಮಿ ನಾರಂಗ್ ಹುಡುಗಿಯ ಮನನೋಯಿಸಬಾರದೆಂದು ಅಂದು ಸಮಾಚಾರ ಮುಗಿದ ಕೂಡಲೇ ಪೆನ್’ನ್ನು ಎತ್ತಿಕೊಂಡು ಜೇಬಿನವರೆಗೆ ಒಯ್ದು ಮತ್ತೆ ಕೆಳಗಿರಿಸಿದ್ದರಂತೆ!!

ದೂರದರ್ಶನದಲ್ಲಿ 20 ವರ್ಷ ಸೇವೆ ಸಲ್ಲಿಸಿ, ನಂತರ ಒಬ್ಬ ವೊಯಿಸ್ –ವೋವರ್ (ಅಶರೀರವಾಣಿಯ) ಕಲಾಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂದಿಗೂ ದಿಲ್ಲಿ ಮೆಟ್ರೋ,ಬೆಂಗಳೂರು ಮೆಟ್ರೋದ ಡೂಜ್ ಮತ್ತು ಡೊಂಟ್ –ಗಳ ಉದ್ಘೋಷಣೆಯ ಹಿಂದಿ ಅವತರಿಣಿಕೆಯಲ್ಲಿ ನಾವು ಆಲಿಸುವ ಸಾನುನಯ ಧ್ವನಿ ಶಮ್ಮಿ ನಾರಂಗ್’ರದು. ಅಷ್ಟೇ ಏಕೆ ಜಯಪುರ್,ಜೋಧಪೂರ್-ಗಳ ಐತಿಹ್ಯ ತಿಳಿಸುವ ಹಿಂದಿ ಧ್ವನಿಮುದ್ರಿಕೆಗಳಲ್ಲಿಯ ಸುಶ್ರಾವ್ಯ ಕಂಠವೂ ಇವರದೇ. ದೆಹಲಿಯ ಪ್ರಥಮ ಡಿಜಿಟಲ್ ಸ್ಟುಡಿಯೋ  ಪಿನ್-ಡ್ರಾಪ್  ಸ್ಥಾಪಿಸಿದ ಹೆಗ್ಗಳಿಕೆ ಶಮ್ಮಿ ನಾರಂಗ್-ರದು. ತಾವು ಪಡೆದದ್ದನ್ನು ಮರಳಿ ಸಮಾಜಕ್ಕೆ ಹಿಂದಿರುಗಿಸಲು ಅನೇಕ ಕಲಾವಿದರಿಗೆ ಹಾಗೂ ವಿದ್ಯಾರ್ಥಿಗಳಿಗೆ ಧ್ವನಿಯ ಆರೋಹಣ ಅವರೋಹಣ (ವೊಯಿಸ್ ಮೊಡುಲೇಷನ್) ಕುರಿತು ತರಬೇತಿ ನೀಡುತ್ತಿದ್ದಾರೆ. ಶಮ್ಮಿಯ  ವೊಯಿಸ್ –ವೋವರ್  ಗ್ರಾಹಕರಲ್ಲಿ ಅನೇಕ ವಿಮಾನಯಾನ ಸಂಸ್ಥೆಗಳು,ಖಾಸಗಿ ಕಾರ್ಪೊರೇಟ್ ಕಂಪನಿಗಳು ಶಾಮೀಲಿವೆ. ದಿವಂಗತ ಜಸ್ಪಾಲ್ ಭಟ್ಟಿಯವರ ಮ್ಯಾಡಾರ್ಟ್ಸ್ ಸಂಸ್ಥೆ ಮತ್ತು ಇನ್ನೂ ಅನೇಕ ಮಾಧ್ಯಮ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರಾಗಿ  ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ದಿನ ಮೂರು ನಿಮಿಷ “ಓಂ”ಕಾರದ ಪಠಣ, ನಿಯಮಿತವಾದ  ಯೋಗ ಮತ್ತು ಧ್ಯಾನದಿಂದ ಏಕಾಗ್ರತೆ ಹೆಚ್ಚಿ  ಕಂಠದ ಮಾಧುರ್ಯ ವೃದ್ಧಿಸುತ್ತದೆ ಎನ್ನುತ್ತಾರೆ ಶಮ್ಮಿ ನಾರಂಗ್.

ಇಂಜಿನೀಯರಿಂಗ್ ವಿದ್ಯಾರ್ಥಿಯಾಗಿ ಆರಂಭವಾಗಿ,  ಧ್ವನಿ ಸಾಮ್ರಾಜ್ಯದ ಧ್ರುವತಾರೆಯಾಗಿ, ಧ್ವನಿ ಲೋಕದ ಅನಭಿಷಿಕ್ತ ದೊರೆಯಾಗುವರೆಗಿನ  ಶಮ್ಮಿ ನಾರಂಗ್-ರ ಈ ರೋಚಕ ಯಾನ, ತಮ್ಮಲ್ಲಿಯ ಸಹಜ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಹೇಗೆ ಹೊರಗೆಡುಹಿ ತಮ್ಮ ದೈವಕ್ಕೆ ತಾವೇ ಹೇಗೆ  ಅಧಿಪತಿ ಆಗಬಹುದೆಂಬುದಕ್ಕೆ ಯುವಪೀಳಿಗೆಗೆ ದೃಷ್ಟಾಂತವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

Facebook ಕಾಮೆಂಟ್ಸ್

ಲೇಖಕರ ಕುರಿತು

Srinivas N Panchmukhi

ಮೂಲತಃ ಬಾಗಲಕೋಟೆಯವರಾದ ಶ್ರೀನಿವಾಸ ಪಂಚಮುಖಿ, ಕೈಗಾದಲ್ಲಿ  ತಾಂತ್ರಿಕ ಅಧಿಕಾರಿಯಾಗಿ   ಸೇವೆ ಸಲ್ಲಿಸುತ್ತಿದ್ದಾರೆ.  ಕ್ವಿಜ್ಜಿಂಗ್, ಪಕ್ಷಿ ವೀಕ್ಷಣೆ, ರಾಜಕೀಯ ವಿಶ್ಲೇಷಣೆ ಮತ್ತು  ಬರವಣಿಗೆ ಇವರ ಹವ್ಯಾಸಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!