ಅಂಕಣ

ಬಂದರು ಬಂದರೆ ಜನಜೀವನಕ್ಕೇನು ಆಸರೆ…?

     “ಹರಿಯುವಲಿ ನೆಲೆಯಾದೆ, ನಿಂತಲ್ಲಿ ಹೊನ್ನಾದೆ, ನಿಲ್ಲದೇ ಸಾಗಿದರೆ ಸಾಗರಕೆ ಅಮೃತವಾದೆ” ಎಂಬ ಕವಿ ವಾಣಿಯು ಉತ್ತರಕನ್ನಡ ಜಿಲ್ಲೆಯ ಶಿರಸಿಯ ಶಂಕರಹೊಂಡ ಎಂಬಲ್ಲಿ ಜನಿಸಿ, ಪಶ್ಚಿಮ ಘಟ್ಟದ ಮೇಲಿಂದ ಹರಿದು ಬಂದು ಅಘನಾಶಿನಿ ಗ್ರಾಮದಲ್ಲಿ ಅರಬ್ಬೀ ಸಮುದ್ರವನ್ನು ಸೇರುವ ‘ಅಘನಾಶಿನಿ’ ನದಿಗೆ ಸಲ್ಲುತ್ತದೆ. “ಅಘ” ಎಂದರೆ ಪಾಪ. ಪಾಪವನ್ನ ನಾಶ ಮಾಡುವ ಸಾಮರ್ಥ್ಯವಿರುವ ಈ ಅಘನಾಶಿನಿ ನದಿಯನ್ನ ಭೂಲೋಕದ ಸ್ವರ್ಗ ಎಂದರೂ ತಪ್ಪಾಗಲಾರದು. ಸಮೃದ್ಧ ಕಾಂಡ್ಲಾವನ ಅದರ ನಡುವೆಯೇ ಯಾವ ಪಕ್ಷಿಧಾಮಕ್ಕೂ ಕಡಿಮೆಯಿಲ್ಲ ಎಂಬಂತೆ ತೋರುವ ಪಕ್ಷಿಗಳ ಹಿಂಡು ಸುತ್ತಲೂ ಹಚ್ಚ ಹಸುರಿನಿಂದ ಕಂಗೊಳಿಸುವ ಹೊಲ ಗದ್ದೆಗಳು ದಿನಕರನ ಬರುವಿಕೆಯನ್ನೂ ಕಾಯದೆ ಕೆಲಸಗಳಲ್ಲಿ ತೊಡಗಿರುವ ಕೃಷಿಕರು, ನದಿಯ ಅಲೆಗಳ ನಡುವೆ ಕುಣಿದಾಡುವ ಸೂರ್ಯ ರಶ್ಮಿ, ಆ ಸೂರ್ಯ ರಶ್ಮಿಗೆ ಸೆಡ್ಡು ಹೊಡೆಯುವಂತೆ ಒಂದರಹಿಂದೊಂದರಂತೆ ಸಾಗುವ ಪುಟ್ಟ ಪುಟ್ಟ ದೋಣಿಗಳು, ಅಲೆಗಳನ್ನೆಲ್ಲಾ ಧಿಕ್ಕರಿಸಿ ಮೀನುಗಾರಿಕೆಯಲ್ಲಿ ತೊಡಗಿರುವ ಮೀನುಗಾರರು, ಅವರ ಬರುವಿಕೆಗಾಗಿ ಬುಟ್ಟಿ ಹಿಡಿದು ಕಾದು ಕುಳಿತ ಮೀನುಗಾರ ಮಹಿಳೆಯರು ಹೀಗೆ ಇನ್ನೂ ಸಾಕಷ್ಟು ಸುಂದರ ದೃಶ್ಯಗಳು ಕಾಣ ಸಿಗುವುದು ಈ ಅಘನಾಶಿನಿ ನದಿ ತಟದಲ್ಲಿ ಈ ಅಘನಾಶಿನಿ ಅಳಿವೆ ಪ್ರದೇಶವು ಲಕ್ಷಾಂತರ ಜನರಿಗೆ ಜೀವ-ಜೀವನವನ್ನೇ ನೀಡಿರುವುದರೊಂದಿಗೆ ಜೀವವೈವಿಧ್ಯದ ಗಣಿಯಾಗಿದೆ. ಈ ನದಿ ಇಲ್ಲಿಯವರೆಗೂ ಆಣೆಕಟ್ಟು, ಉಷ್ಣ ವಿದ್ಯುತ್ ಸ್ಥಾವರ, ದೊಡ್ಡ ದೊಡ್ಡ ಉದ್ಯಮಗಳಂತಹ ಪಾಪವನ್ನು ಸ್ಪರ್ಶಿಸದೇ ಪವಿತ್ರಳಾಗಿ ಸುಮಾರು 150ಟಿ.ಎಮ್.ಸಿ ಅಡಿಗಳಷ್ಟು ನೀರನ್ನು ಸಮುದ್ರಕ್ಕೆ ಸಾಗಿಸುವ ಪುಣ್ಯ ನದಿಯಾಗಿದೆ.

ಅಘನಾಶಿನಿ ಅಳಿವೆ ಪ್ರದೇಶ ಎಂಬುದೊಂದು ಸಂಪತ್ತಿನ ಆಗರ.  ಬಳಚು, ಮೀನುಗಾರಿಕೆ, ಕೃಷಿ, ಉಪ್ಪು ತಯಾರಿಕೆ, ಗಜನಿ ಭೂಮಿ, ಜಲ ಕೃಷಿ, ತೋಟಗಾರಿಕೆ, ಮರಳು/ಚಿಪ್ಪು ಗಣಿಗಾರಿಕೆ, ಪ್ರವಾಸೋಧ್ಯಮ, ಜಲಸಾರಿಗೆ,  ಹೀಗೆ ಅಸಂಖ್ಯ ಉದ್ಯೋಗಗಳನ್ನು ಈ ನದಿ ನೀಡಿದೆ, ನೀಡುತ್ತಾ ಬಂದಿದೆ. ಸುಮಾರು 98,000ಕ್ಕೂ ಅಧಿಕ ಜನರು ಈ ನದಿಯನ್ನೇ ನಂಬಿ ಬದುಕುತ್ತಿದ್ದಾರೆ. ಅಘನಾಶಿನಿ ನದಿ ಸಮುದ್ರ ಸೇರುವ ಸ್ಥಳ ತದಡಿಯಲ್ಲಿ ಬಂದರು ಅಭಿವೃದ್ಧಿಗೊಳಿಸಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು 1970ರಲ್ಲಿ ಸುಮಾರು 560ಹೆಕ್ಟರ್(1416 ಎಕರೆ) ಭೂಮಿಯನ್ನ ಸ್ವಾಧೀನಪಡಿಸಿಕೊಂಡಿದೆ. ರಾಜ್ಯ ಸರ್ಕಾರವೇ ಸ್ವತಃ ಮುತುವರ್ಜಿ ವಹಿಸಿ ಈ ಬಂದರಿನ ಅಭಿವೃದ್ಧಿಗಾಗಿ ಖಾಸಗಿ ಕಂಪನಿಯವರಿಗೆ ನೀಡಿದ್ದಾರೆ. ಈ ಬಂದರನ್ನ ನಿರ್ಮಿಸುತ್ತಿರುವವರು ಯಾರು? ಯಾಕಾಗಿ ನಿರ್ಮಿಸುತ್ತಿದ್ದಾರೆ? ಯೋಜನಾ ವಿನ್ಯಾಸ ಹಾಗೂ ವಿಸ್ತಾರ ನಿಖರವಾಗಿ ಗೊತ್ತಿಲ್ಲ…! ನಮ್ಮ ಊರಿನಲ್ಲಿ ಬಂದರು ನಿರ್ಮಾಣವಾಗುತ್ತದೆ, ನಮಗೆಲ್ಲಾ ಉದ್ಯೋಗ ದೊರೆಯುತ್ತದೆ ಎಂಬ ಒಂದೇ ಒಂದು ಕನಸನ್ನ ಹೊತ್ತು ಅದರಿಂದಾಗುವ ಪರಿಣಾಮವನ್ನ ಲೆಕ್ಕಿಸದೇ ಎಷ್ಟೋ ಜನರು ಬಂದರು ಬೇಕೇ ಬೇಕು ಎಂದು ಹಟ ತೊಟ್ಟಿದ್ದಾರೆ. ಇನ್ನೂ ಕೆಲವರು ಪರಿಸರ, ಜನ ಜೀವನ, ಆರೋಗ್ಯದ ದೃಷ್ಟಿಯಿಂದ ವಿರೋಧಿಸುತ್ತಿದ್ದಾರೆ. ಈಗಾಗಲೇ ಬಂದರು ನಿರ್ಮಾಣಕ್ಕೆ ಹಸಿರು ನಿಶಾನೆ ದೊರೆತಿದೆ ಈ ನದಿಯನ್ನೇ ನಂಬಿರುವ ಜನ ಜೀವನಕ್ಕೇನು ಆಸರೆ ಎಂಬುದು ಪ್ರಶ್ನಾತೀತವಾಗಿದೆ.

ರಾಷ್ಟ್ರೀಯ ಪರಿಸರಾತ್ಮಕ ವಾಸ್ತುಶಿಲ್ಪ ಸಂಶೋಧನಾ ಸಂಸ್ಥೆ, ನಾಗಪುರ ಇವರು ತದಡಿ ಬಂದರಿಗೆ ಸಂಬಂಧಿಸಿದಂತೆ ಸುಮಾರು 553 ಪುಟಗಳ ಪರಿಸರಾತ್ಮಕ ಪರಿಣಾಮಕಾರಿ ನಿರ್ಧರಿಸುವಿಕೆ ಅಧ್ಯಯನ ವರದಿ(ಇ.ಆಯ್.ಎ) ನೀಡಿದ್ದಾರೆ. ಈ ವರದಿಯನ್ನೊಮ್ಮೆ ಓದಿದಾಗ ದಂಗಾಗುವುದು ಖಚಿತ. ಇಷ್ಟು ದೊಡ್ಡ ಬಂದರು ನಮ್ಮೂರಿಗೆ ಬರುತ್ತಿದೆ ಎಂಬ ಕಲ್ಪನೆ ಹಲವರಿಗೆ ಇದ್ದಂತಿಲ್ಲ. ವರದಿಯ ಪ್ರಕಾರ ಪ್ರಸ್ತಾಪಿಸಲಾದ ಬಂದರು 62.34ಮಿಲಿಯನ್ ಮೆಟ್ರಿಕ್ ಟನ್ ಸರಕು ಸಾಗಾಟ ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಈ ಬಂದರು ಮಂಗಳೂರು ಬಂದರಿನ ಎರಡು ಪಟ್ಟು ದೊಡ್ಡದಾಗಿರುತ್ತದೆ ಮತ್ತು ಕಾರವಾರ ಬಂದರಿನ 10ಪಟ್ಟು ಮಿಗಿಲಾಗಿರುತ್ತದೆ.

ಈ ವರದಿಯ ಕೆಲ ಅಂಶಗಳನ್ನ ತಿಳಿಸದಿದ್ದರೆ ಈ ಲೇಖನ ಪರಿಪೂರ್ಣತೆ ಹೊಂದಲ್ಲ. ಈ ವರದಿಯ ಕೆಲ ಅಂಶಗಳು ಹೀಗಿದೆ, ಹಡಗು ಸಂಚಾರ ಮತ್ತು ಹೊರಸೂಸುವಿಕೆಗಳು ಮೀನುಗಾರಿಕೆ ಸಂಪನ್ಮೂಲಗಳು, ಜಲವಾಸಿಗಳು ಮತ್ತು ಕರಾವಳಿ ಆವಾಸಸ್ಥಾನಕ್ಕೆ ನೇರವಾಗಿ ಹಾನಿಯುಂಟು ಮಾಡಬಹುದು. ತಳಭಾಗದ ಜಲವಾಸಿಗಳು ಮತ್ತು ಆವಾಸಸ್ಥಾನಕ್ಕೂ ಸಹ ಪರೋಕ್ಷವಾಗಿ ಹಾನಿಯುಂಟು ಮಾಡಬಹುದು. ಈ ತ್ಯಾಜ್ಯಗಳ ಫಲಿತವಾಗಿ ಜಲಮಾಲಿನ್ಯ ಮತ್ತು ತಳಭಾಗದ ಮಲಿನತೆಯು ಜಲವಾಸಿಗಳ ಮತ್ತು ಮೀನುಗಾರಿಕೆ ಸಂಪನ್ಮೂಲಗಳ ಅಪಾಯಕ್ಕೆ ಕಾರಣವಾಗುತ್ತದೆ, ಯೋಜನಾ ಪ್ರದೇಶದ ಒಳಗೆ ಮತ್ತು ಹೊರಗೆ ಮೀನುಗಾರಿಕೆ ಮತ್ತು ಸಂಬಂಧಿತ ಚಟುವಟಿಕೆಗಳು ಸ್ಥಳೀಯರ ಜೀವನ ಶೈಲಿಯ ಮೇಲೆ ಖಚಿತವಾಗಿ ಪ್ರಭಾವ ಬೀರುತ್ತವೆ, ಬಂದರಿನ ನಿರ್ಮಾಣ ಮತ್ತು ಕಾರ್ಯಾಚರಣೆ ಹಂತದಲ್ಲಿ ಮೀನುಗಳ ಜೀವಿತ ಮತ್ತು ಮೀನುಗಾರಿಕೆಯ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುವುದನ್ನು ನಿರೀಕ್ಷಿಸಲಾಗಿದೆ. ಈ ಪರಿಣಾಮಗಳನ್ನು ನಿಕಟವಾಗಿ ಗಮನಿಸಲಾಗುತ್ತಿದ್ದು ಬಾಧೆಗೊಳಗಾದ ಮೀನುಗಾರರಿಗೆ ಸೂಕ್ತ ಪರಿಹಾರವನ್ನು ಒದಗಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ.  ಏನು ಪರಿಹಾರ? ಹೇಗೆ? ಎಂಬ ಬಗ್ಗೆ ಎಲ್ಲಿಯೂ ಸ್ಪಷ್ಟವಾಗಿ ನೀಡಿಲ್ಲ.

ಸಾಣೆಕಟ್ಟಾ ಪ್ರದೇಶದ ಸುಮಾರು 350 ಕುಟುಂಬಗಳ(ಸಮುದ್ರದ ಹಿನ್ನೀರು ಬಳಸಿ) ಉಪ್ಪು ತಯಾರಿಕಾ ಕಾರ್ಮಿಕರು  ಜೀವನೋಪಾಯಕ್ಕೆ ಸಂಬಂಧಿಸಿದಂತೆ ಅಧಿಕ ಬಾಧೆಗೆ ಒಳಗಾಗುವರೆಂದು ನಿರೀಕ್ಷಿಸಲಾಗಿದೆ. ಬಂದರು ಅಭಿವೃದ್ಧಿ ಚಟುವಟಿಕೆಗಳಿಂದ ಉಪ್ಪು ತಯಾರಿಕ ಚಟುವಟಿಕೆಗಳು ಸಹ ಬಾಧಿತವಾಗುತ್ತವೆ. ಇದರಿಂದ ಉಪ್ಪು ತಯಾರಿಕೆ ಪ್ರಮಾಣ ಕಡಿತಗೊಳ್ಳಬಹುದಾಗಿರುತ್ತದೆ. ತೈಲ ಸೋರಿಕೆ ಉಂಟಾದಲ್ಲಿ ನೀರಿನ ಲವಣತ್ವವು ಬದಲಾಗುತ್ತದೆ. ಮತ್ತು ಉಪ್ಪಿನ ತಯಾರಿಕೆಗೆ ಬಾಧಕವಾಗುತ್ತದೆ. ಈ ಪ್ರದೇಶಕ್ಕೆ ಸಮುದ್ರದ ನೀರನ್ನು ಹರಿಸುವ ಮೂಲಕ ಉಪ್ಪಿನ ಉತ್ಪಾದನೆಗೆ  ಇಂಬು ನೀಡಲು ಯೋಜಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ಒಂದು ವೇಳೆ ಅವರೇನಾದರೂ ಸಮುದ್ರದ ನೀರನ್ನು ಹರಿಸಿ ಕೊಟ್ಟರೆ ತೈಲ ಮಿಶ್ರಿತ ಸಮುದ್ರದ ನೀರಿನಲ್ಲಿರುವ (ಟಾಕ್ಸಿಕ್) ವಿಷಕಾರಿ ರಾಸಾಯನಿಕದಿಂದ ಉಪ್ಪು ತಯಾರಿಕೆಗೆ ಹಾನಿ ಅಗುತ್ತದೆ. ಜನ ಸಾಮಾನ್ಯರು ಈ ಉಪ್ಪನ್ನು ಬಳಸಿದರೆ ರೋಗ ರುಜಿನಗಳು ಹರಡುವ ಸಾಧ್ಯತೆ ಇದೆ, ಗಂಗಾವಳಿ ನದಿ ಕಣಿವೆಯಿಂದ ಸಮೀಪದ ಜಲಮೂಲವನ್ನು ಗುರುತಿಸಲಾಗಿದ್ದು ಅದು ತದಡಿ ಬಂದರಿನಿಂದ 8ಕಿ.ಮೀ ಅಂತರದಲ್ಲಿದೆ. ಪ್ರತಿ ದಿನದ ಒಟ್ಟೂ ಬಳಕೆ 1.5ಲಕ್ಷ ಲೀಟರ್‍ಗಳು. ಆದರೆ ಗಂಗಾವಳಿಯಿಂದ ನೀರು ತರುವ ಯೋಜನೆ ಹಾಗೂ ಅದರ ಪರಿಣಾಮದ ಬಗ್ಗೆ ವಿವರವಾದ ಮಾಹಿತಿ ಇಲ್ಲ. ಈ ಒಂದು ಯೋಜನೆಯಿಂದ ಜಿಲ್ಲೆಯ ಎರಡೆರಡು ನದಿಯನ್ನ ಬಲಿಕೊಡಬೇಕಾಗುತ್ತೆ.

ಬ್ಯಾಥಿಮೆಟ್ರೀಕ್ ಸರ್ವೆ ಫಲಿತಾಂಶಗಳು ಮತ್ತು ಸಮುದ್ರಯಾನದ ವಿಸ್ತೀರ್ಣದ ಪ್ರಕಾರ ಒಟ್ಟೂ ಹೂಳೆತ್ತುವ ಪ್ರಮಾಣ ಅಂದಾಜು 50ಮಿಲಿಯನ್ ಎಂ3 ಆಗಿರಬೇಕು. ಅದರಲ್ಲಿ 27ಮಿಲಿಯನ್ ಎಂ3 ಹೊರಗಿನ ಸಮುದ್ರಯಾನಕ್ಕೆ ಅನುರೂಪವಾಗಿರುತ್ತದೆ. ಮತ್ತು ಒಳಗಿನ ಸಮುದ್ರಯಾನ ಮತ್ತು ತಿರುವು ವೃತ್ತಗಳಿಗೆ 23ಮಿಲಿಯನ್ ಎಂ3. ಬರೀ ಸಮುದ್ರದಲ್ಲಿ ತೆಗೆದ ಹೂಳನ್ನ ಸಾಗಿಸಲು ದಿನಕ್ಕೆ  6ಲಕ್ಷ 66ಸಾವಿರ ಲಾರಿಗಳು ಓಡಾಟ ನಡೆಸಬೇಕಾಗುತ್ತದೆ. ಅದನ್ನೆಲ್ಲಾ ಎಲ್ಲಿ ಸ್ಟೋರೇಜ್ ಮಾಡುತ್ತಾರೆಂಬ ಬಗ್ಗೆ ಎಲ್ಲಿಯೂ ಮಾಹಿತಿ ಇಲ್ಲ. ಯೋಜನಾಪ್ರದೇಶದ 5ಕಿ.ಮೀ ರೇಡಿಯಲ್ ಪ್ರದೇಶದೊಳಗೆ 217ಹೆಕ್ಟರ್ ಮ್ಯಾಂಗ್ರೋವ್ ನೆಡುತೋಪು ಅಸ್ತಿತ್ವದಲ್ಲಿದೆ. ಯೋಜನಾ ಪ್ರದೇಶದಲ್ಲಿ ಹಾಲಿ ಇರುವ ಮ್ಯಾಂಗ್ರೋವ್‍ಗಳಿಗೆ ಪ್ರಭಾವ ಬೀರಲಿದೆ. ಇದನ್ನು ಮರು ಅರಣ್ಯೀಕರಣದಿಂದ ಸರಿದೂಗಿಸುವ  ಅಗತ್ಯ ಇದೆ ಎಂದು ಉಲ್ಲೇಖಿಸಿದ್ದಾರೆ. ಮರು ಅರಣ್ಯೀಕರಣವನ್ನ ಎಲ್ಲಿ ಮಾಡುತ್ತಾರೆ? ಎಂಬ ಬಗ್ಗೆ ಎಲ್ಲಿಯೂ ಮಾಹಿತಿ ಇಲ್ಲ.

ಉದ್ಯೋಗದ ಬಗ್ಗೆ ಒಂದು ಸಣ್ಣ ಉಲ್ಲೇಖ ಇದೆ. ನಿರ್ಮಾಣ ಹಂತದಲ್ಲಿ ಹೆಚ್ಚಾಗಿ ತಾತ್ಕಾಲಿಕ ಆಧಾರದಲ್ಲಿ ಕುಶಲ ಮತ್ತು ಅರೆಕುಶಲ ಕಾರ್ಮಿಕರಿಗೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ  ಎಂದು ತಿಳಿಸಿದ್ದಾರೆ. ಇದ್ಯಾವುದೂ ಪರ್ಮನೆಂಟ್ ಜಾಬ್ ಅಲ್ಲ. ಮಣ್ಣು ಹೊರೋದು, ಕಲ್ಲು ಹೊರೋದು, ಕಲ್ಲು ಕಟ್ಟೋದು ಅಷ್ಟೆ. ಬರೀ ಉದ್ಯೋಗದ ಕನಸು ಹೊತ್ತು ನಮ್ಮ ಸುಂದರ ಪರಿಸರವನ್ನು ಯಾಕೆ ನಾವು ನಾಶಪಡಿಸಿಕೊಳ್ಳಬೇಕು? ನಮ್ಮ ಜನ ಜೀವನವನ್ನ ಯಾಕೆ ಬಲಿ ಕೊಡಬೇಕು?  ಈ ಬಂದರಿನಿಂದಾಗುವ ಉಪಯೋಗಗಳಿಗಿಂತ ನಷ್ಟದ ಪ್ರಮಾಣವೇ ಹೆಚ್ಚು.

1987ರಲ್ಲಿ ಹಡಗು ಒಡೆಯುವ ಉಧ್ಯಮ ಬರಬೇಕಿತ್ತು, ತಡೆಗಟ್ಟಿದೆವು, 1996ರಲ್ಲಿ ಶಕ್ತಿ ಸ್ಥಾವರ ಬರಬೇಕಿತ್ತು ಅದನ್ನೂ ಸಹ ಒಗ್ಗಟ್ಟಿನಿಂದ ತಡೆದೆವು,  2000ದಲ್ಲಿ ಇದೇ ಬಂದರು ವಿಸ್ತರಣೆ ಯೋಜನೆ ಬರಬೇಕಿತ್ತು ಹಾಗೋ ಹೀಗೋ ಹಿಂದೆ ಸರಿಯಿತು, 2006ರಲ್ಲಿ ಶಾಖೋತ್ಪನ್ನ ಮಹಾ ವಿದ್ಯುತ್ ಸ್ಥಾವರ ಬರಬೇಕಿತ್ತು, ಒಮ್ಮತದ ಉಗ್ರ ಹೋರಾಟಗಳ ನಂತರವೇ ಅದು ದೂರದ ತೂತುಕ್ಕಡಿಗೆ ಓಡಿ ಹೋಯಿತು. ಈಗ ಈ ಮಹಾ ವಿನಾಶಕಾರಿ ಬಂದರು ನಿರ್ಮಾಣಕ್ಕೆ ಹಸಿರು ನಿಶಾನೆ ದೊರೆತಿದೆ. ಈಗೆಲ್ಲಿ ಹೋಯಿತು ನಮ್ಮ ಒಗ್ಗಟ್ಟು?? ಯಾಕೆ ಯಾರೂ ಈ ಕುರಿತು ಚಿಂತಿಸುತ್ತಿಲ್ಲ ಧ್ವನಿ ಎತ್ತುತ್ತಿಲ್ಲ? ಈ ಬಂದರು ಬಂದರೆ ನಮ್ಮ ಜನ ಜೀವನಕ್ಕೇನು ಆಸರೆ…???

ವಿನೋದ ಪಟಗಾರ

ಪರಿಸರ ಕಾನೂನು ಸಂಯೋಜಕರು

ನಮತಿ-ಸೆಂಟರ್ ಫಾರ್ ಫಾಲಿಸಿ ರೀಸರ್ಚ್

vinodpatgar@namati.org

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!