ಅಂಕಣ

ಗೊಂದಲ..

“ನನ್ನ ಮನಸ್ಸು ನೀ ಸಿಗುವ ಮೊದಲೆ ಈ ಸಂಬಂಧದಿಂದ ದೂರಾಗಿದೆ. ಆಗ ನನ್ನಲ್ಲಿ ಯಾವ ಆಸೆಗಳೂ ಇರಲಿಲ್ಲ. ಆದರೆ ನಿನಗೆ ನನ್ನ ಮದುವೆ ಆಗಲು ಮನಸ್ಸು ಒಪ್ಪುತ್ತಿಲ್ಲ. ಹಾಗೆಯೇ ಸಲುಗೆಯಿಂದ ಇರಲು ನನಗಾಗ್ತಿಲ್ಲ. ನಿನ್ನೊಂದಿಗಿನ ಪ್ರತಿಯೊಂದು ಇಡುವ ಹೆಜ್ಜೆಗಳೂ ನನಗದು ಹೊಸದು ಪವಿತ್ರವಾಗಿರಬೇಕು. ನೀನು ಬಾ. ಆದರೆ ನನ್ನ ಮನಸ್ಸು ನಿನಗಾಗಿ ಅಷ್ಟೆ. ಅರ್ಥ ಮಾಡಿಕೊ. ನನ್ನ ನಿನ್ನೊಂದಿಗಿನ ದಿನಗಳು ಅನೈತಿಕ ಸಂಬಂಧದಲ್ಲಿ ಮುಂದುವರಿಯುವದು ನನಗಿಷ್ಟವಿಲ್ಲ.”

ಕವಿತಾಳ ಒಕ್ಕಣೆಯನ್ನು ಓದಿದ ಅವನು ಒಂದರೆಗಳಿಗೆ ಸ್ತಬ್ಧನಾಗುತ್ತಾನೆ. ಪ್ರೀತಿಯ ಹೆಸರಲ್ಲಿ ತಾರಕಕ್ಕೇರಿದ ಅವನ ದೇಹದ ಬಯಕೆಗಳು ಈ ರೀತಿಯಲ್ಲಿ ತಿರಸ್ಕರಿಸಬಹುದೆಂಬ ಕಲ್ಪನೆ ಕೂಡಾ ಅವನು ಮಾಡಿರಲಿಕ್ಕಿಲ್ಲ. ಏನು ಹೇಳಬೇಕು, ಹೇಗೆ ಉತ್ತರಿಸಬೇಕೆನ್ನುವ ಗೊಂದಲ, ಕೀಳರಿಮೆ ಬಹುಶಃ ಅವನನ್ನಾವರಿಸಿರಬೇಕು. ಅವಳು ಅವನುತ್ತರಕ್ಕಾಗಿ ಕಾಯುತ್ತಿದ್ದಾಳೆ. ಅದವನಿಗೂ ಗೊತ್ತು. ಹಾಗಂತ ಕಾಯುತ್ತ ಕುಳಿತುಕೊಳ್ಳುವಷ್ಟು ವ್ಯವಧಾನ ಅವಳಿಗಿಲ್ಲ. ಕಾರಣ ಅವಳಲ್ಲಿ ಒಂದು ರೀತಿ ಸಮಾಧಾನವೊ ದುಃಖವೊ ಯಾವುದನ್ನು ನಿರ್ಧರಿಸಲಾಗದ ಮನ ತನ್ನ ದಿನ ನಿತ್ಯದ ಕಾರ್ಯದಲ್ಲಿ ಮನಸ್ಸು ತೊಡಗಿಸಿಕೊಳ್ಳುತ್ತಾಳೆ.

ಇಷ್ಟು ವರ್ಷದ ಜೀವನದಲ್ಲಿ ಅದೆಷ್ಟೋ ಆಗು ಹೋಗುಗಳ ನಡುವೆ ಎದುರಾದ ಅದೆಷ್ಟೋ ಜನಗಳ ನಡುವೆ ಬಾಳಿ ಬದುಕಿದ ಜೀವ ಅನುಭವ ಅನುಮಾನ ಹುಟ್ಟಿಸಿದೆ. ಒಂದು ರೀತಿಯ ವಿಷಾದವೂ ಮನೆ ಮಾಡಿದೆ.

ಬದುಕೆ ಹಾಗಲ್ಲವೆ. ನೀರು ಕುತ್ತಿಗೆಗೆ ಬಂದಾಗಲೇ ನೀರಿನ ಆಳ ಗೊತ್ತಾಗುವುದು!

ಹಾಗಂತ ಅದೇ ನಿಜವೂ ಅಲ್ಲ. ” ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡು” ಎಂಬ ಗಾದೆಯಂತೆ ಕಾರಣವೂ ಇರಬಹುದು. ಕೆಲವೊಮ್ಮೆ ಮಾತು ಮೌನಕ್ಕೂ ಶರಣು ಹೋಗಬೇಕಾಗಬಹುದು.

ಮನಸ್ಸು ಬಯಸಿದರೂ “ಸ್ವಲ್ಪ ಜಾಸ್ತಿ ಆಗಲಿಲ್ವಾ?” ಅದವನ ಮಾತಾದರೆ ; ನಿಜ ಮನದ ಮಾತು ಅವಳದಾಗಿತ್ತು. “ಇಲ್ಲ. ಇಬ್ಬರೂ ಪ್ರೀತಿಸುತ್ತಿದ್ದೇವೆ.. ಮದುವೆಯಾಗು ” ಪ್ರೀತಿ ತನ್ನ ಪವಿತ್ರತೆಯ ಸಾರಿತ್ತು. ಬಹುಶಃ ಅದವನಿಗೆ ನುಂಗಲಾರದ ತುತ್ತಾಗಿದ್ದಂತೂ ನಿಜ.

“ತೊಂದರೆಯಿಲ್ಲ ನಾನಿನ್ನು ಬರುವುದಿಲ್ಲ ”

ಬರೆದ ಸಾಲುಗಳು ಅವನ ಮನಸ್ಸನ್ನು ತೋರಿಸುತ್ತಿತ್ತು. ಕ್ಷಿತಿಜದ ಕೊನೆಯಲ್ಲಿ ನಿಂತು ಬೀಳುತ್ತಿರುವವಳ ಕೈ ಚಾಚಿ ತಬ್ಬಿ ಹಿಡಿವ ಮನಸ್ಸು ಅವನದು. ಆದರೂ ಹಿಂದೇಟು ಹಾಕಲು ಕಾರಣ ಅವನಲ್ಲ. ಅವನಂಥವನಲ್ಲ. ಅವನಿಗಿರುವ ಜವಾಬ್ದಾರಿ, ಅವನ ಸ್ಟೇಟಸ್, ಅವನ ವಯಸ್ಸು ಬಹುಶಃ ತಡೆ ಗೋಡೆಯಾಗಿ ಅಡ್ಡ ನಿಂತಿರಬೇಕು. ತಾನೂ ಅವನಿಗೆ ಸರಿ ಸಮಾನವಾಗಿ ಇದ್ದಿದ್ದರೆ!!??

ನಿಜ. ಅವನೊಂದಿಗೆ ಜೀವನ ಸಾಧ್ಯವಿಲ್ಲದ ಮಾತು. ನಿಜವಾದದ್ದನ್ನೆ ಹೇಳಿದ್ದಾನೆ. ನನ್ನಂತೆ ಅವನೂ ಒಳಗೊಳಗೆ ಹಿಂಸೆ ಪಡುತ್ತಿರುವುದು ಸ್ಪಷ್ಟವಾಗುತ್ತಿದೆ. ದಾಂಪತ್ಯ ಜೀವನ ಎಂಬುದು ಅವನು ಅತ್ಯಂತ ಪ್ರೀತಿಸುವ ಕನಸು. ಹೆಂಡತಿ, ಮನೆ, ಮಕ್ಕಳು ಎಂಬ ತುಂಬು ಭಾವನೆಗಳನ್ನು ಅದೆಷ್ಟೋ ಸಾರಿ ಹೇಳಿಕೊಂಡು ಹತಾಷೆ ವ್ಯಕ್ತ ಪಡಿಸಿದ್ದಾನೆ. ಆಗೆಲ್ಲ ಹೆಚ್ಚು ಮೌನಕ್ಕೆ ಶರಣಾಗಿ “I want to be alone” ಹೇಳಿ ಮರೆಯಾಗಿಬಿಡುತ್ತಿದ್ದ. ಜಪ್ಪಯ್ಯ ಅಂದರೂ ಮಾತಾಡ್ತಿರಲಿಲ್ಲ. ಇದೊಂಥರಾ ಯೋಚನೆಯ ಒಳಗೋಗಿ ಸಮಾಧಾನ ಮಾಡಿಕೊಳ್ಳುವ ಪರಿಯೊ ಅಥವಾ ಯಾರೂ ಬೇಡ ಅನ್ನುವ ತಿರಸ್ಕಾರವೊ ಇನ್ನೂ ಅರ್ಥವಾಗ ಒಗಟು.

ಅವನೊಂದಿನ ಅಂದ ಮಾತು ಅವಳ ಕಿವಿಯಲ್ಲಿನ್ನೂ ಮಾರ್ದನಿಸುತ್ತಿದೆ. ಅದವಳಿಗೆ ಚೆನ್ನಾಗಿ ಅರ್ಥವಾಗಿದೆ. ಯಾವ ದೃಷ್ಟಿ ಕೋನದಲ್ಲಿ ಅಳೆದು ತೂಗಿದರೂ ಅವನಿಗೆ ತಾನು ಸರಿ ಸಮಾನಳಲ್ಲ. ಮೇರು ಪರ್ವತದಲ್ಲಿ ನಿಂತ ಚಿನ್ನದ ಗಣಿ ಅವನು. ದಿನ ಕಳೆದಂತೆ ಇಂಚಿಂಚು ಅರ್ಥ ಆಗುವ ಅವನೊಳಗಿನ ಮಾತು ರೀತಿ ಜಗತ್ತಿನಲ್ಲಿ ಇಂಥವರೂ ಇದ್ದಾರಾ? ಕೇವಲ ಕಥೆಯಲ್ಲಿ ಓದಿದ ಮನುಷ್ಯ ತನ್ನೆದುರು ನಿಂತಿರುವನಲ್ಲ! ತನಗ್ಯಾಕೆ ಅವನ ಪಡೆಯುವ ಹಂಬಲ, ಪ್ರೀತಿ, ವಿಶ್ವಾಸ, ಕಾಳಜಿ ಇತ್ಯಾದಿ.

ಅವನ ವಯಸ್ಸು ನನ್ನನ್ನು ಬಯಸುವಂತೆ ಮಾಡಿರುವುದರಲ್ಲಿ ತಪ್ಪಿಲ್ಲ, ಆದರೆ ಬಯಸುವುದು ತಪ್ಪು. “ಬಯಸುವೆಯಾದರೆ ಮದುವೆಯಾಗು ” ಇದವಳ ವಾದ. ಅದಕ್ಕೂ ಸಿಟ್ಟು ಬೇಸರ ಮಾಡಿಕೊಳ್ಳದೆ ಮಗುವಿನಂತೆ ಮುಗ್ಧವಾಗಿ ಅವನಾಡುವ ಮಾತು ತುಟಿಯಂಚಿನಲ್ಲಿ ನಗು ನಿಲ್ಲುವಂತೆ ಮಾಡುತ್ತದೆ.

” I want to say something, I love you”

“ಉಕ್ಕಿ ಹರಿಯುವ ಪ್ರೀತಿ ಏನು ಮಾಡಲಿ?”

ಕಾಲವು ಜೀವನವನ್ನು ಆಡಿಸುತ್ತೊ ಅಥವಾ ಜೀವನವೆ ಕಾಲಕ್ಕೆ ತಕ್ಕಂತೆ ಬದಲಾಗಬೇಕೆ ಒಂದೂ ಅರಿಯದಾಗಿದೆ. ಬದಲಾವಣೆ ಗಾಳಿ ಬೀಸಿದರೂ ಬದಲಾಗದ ಸಮಾಜ, ರೀತಿ ನೀತಿ ಬಹುಶಃ ಅದೆಷ್ಟು ಪ್ರೀತಿಯ ಜೀವಗಳ ಕೊಂದು ತಿಂದಿದೆಯೊ. ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಸಮಾಜಕ್ಕೆ ಅಂಜಿ ಸೋಗಿನ ಮುಖವಾಡ ಹೊತ್ತು ಬದುಕುತ್ತಿರುವವರು ಅದೆಷ್ಟೋ. ಹೃದಯದ ಮಾತುಗಳು ದಿನಗಳೆದಂತೆ ತನ್ನ ತನ ಕಳೆದುಕೊಂಡು ಕೇಳಿಸಿಕೊಂಡ ಕಿವಿಗಳು ಸಂಶಯದ ಸುಳಿಗೆ ಸಿಲುಕಿ ಒದ್ದಾಡುವಂತ ವಾತಾವರಣ.

ಅದವಳೊಂದು ದಿನ ನೊಂದು ” ಈಗ ಎಲ್ಲವೂ ನಿಜವೆಂದು ನಂಬಿರುತ್ತೇನೆ. ಅಕಸ್ಮಾತ್ ಮುಂದೆಂದಾದರೂ ನೀ ಆಡುತ್ತಿರುವುದು ನಾಟಕವೆಂದು ಅನಿಸಿದರೆ, ಗೊತ್ತಾದರೆ ಖಂಡಿತಾ ಈ ಜಗತ್ತಿಂದ ದೂರ ಆಗ್ತೀನಿ ಕಣೋ it’s true.”

“ಜಗತ್ತಿನಿಂದ ದೂರಾಗುವ ಮಾತುಗಳನ್ನ ನಿಲ್ಲಿಸುತ್ತೀಯ”

ಇಷ್ಟೊಂದು ಕಾಳಜಿ ತೋರಿಸುವ ನೀನು ಮದುವೆ ವಿಷಯದಲ್ಲಿ ಹಿಂದೇಟು ಹಾಕುವುದು ಸಂಶಯಪಡಲೆ ಅಥವಾ ಪರಿಸ್ಥಿತಿಯ ಪರಿಣಾಮವೆ ಯಾವುದು? ನಿನ್ನೊಳಗಿನ ಕನಸಿನ ಹುಡುಗಿ ನಾನಲ್ಲವೆ ಅಲ್ಲ ಅನ್ನುವ ಗೊಂದಲ. ಇಬ್ಬರಿಗೂ ಅದೆಷ್ಟೋ ದಿನಗಳ ಒಡನಾಟವಿದ್ದರೂ ಈ ಅರ್ಥೈಸಿಕೊಳ್ಳುವ ವಿಷಯದಲ್ಲಿ ಎಲ್ಲೊ ತಪ್ಪಾಗಿದೆಯೆ? ನನ್ನ ನಂಬಿಕೆ ಸುಳ್ಳಾ? ಇಲ್ಲ ಇಲ್ಲ. ಮತ್ತೆ ಮನಸ್ಸು ಅವನತ್ತಲೆ ವಾಲುತ್ತದೆ ಯಾಕೆ? ಹೀಗಂದುಕೊಂಡಾಗಲೆ ನನಗೆ ಸಮಾಧಾನ, ಹೀಗ್ಯಾಕೆ ಪ್ರತಿಕ್ಷಣ? ಮನಸ್ಸೆಲ್ಲ ಬರಿ ಗೊಂದಲದ ಗೂಡು.

ಒಮ್ಮೊಮ್ಮೆ ಮೈ ಪರಚಿಕೊಳ್ಳುವಷ್ಟು ಸಿಟ್ಟು ಬರುತ್ತದೆ ಅವಳಿಗೆ. ಜೋರಾಗಿ ಕೂಗಬೇಕು ಅನಿಸುತ್ತದೆ. ಯಾವುದು ನಾವು ಅತ್ಯಂತ ಇಷ್ಟ ಪಡುತ್ತೇವೊ ಅದು ಸಿಗಲಾರದ್ದಕ್ಕೆ ಮನುಷ್ಯ ಈ ದಾರಿನೆ ತುಳಿಯೋದು ಅನಿಸುತ್ತದೆ. ಈ ಹಂತದಲ್ಲಿ ಹತಾಶವಾದ ಮನಸ್ಸು ಜಗತ್ತನ್ನೆ ಬಿಟ್ಟು ಹೋಗುವ ದಾರಿ ಕಂಡುಕೊಂಡವರು ಅದೆಷ್ಟೋ ಪ್ರೇಮಿಗಳು. ಇವಕ್ಕೆಲ್ಲ ಸಮಾಜದ ಕಟ್ಟು ಕಟ್ಟಳೆಗಳೇ ದೂರಾಗಿರಬೇಕಾದ ಪರಿಸ್ಥಿತಿಗೆ ಕಾರಣವಲ್ಲದೆ ಇನ್ನೇನು.

ಎಲ್ಲ ಕಾರಣಗಳು ಕಣ್ಣಿಗೆ ಕಟ್ಟಿದಂತಿದೆ. ಅಂದ ಮೇಲೆ ವಾಸ್ತವ ಒಪ್ಪಿಕೊಳ್ಳದೆ ಗತಿ ಇಲ್ಲ. ಅವನು ಸಮಾಜಕ್ಕೆ ಹೆದರುವವ. ಅವಳದೂ ಅದೇ ನಿಲುವು. ಮದ್ಯೆ ಬಂದಿಸಿದೆ ಪ್ರೀತಿ. ಕೊರಗುವ ಪಾಳಿ ಈ ಜೀವಗಳದು.

“ಬಿಡು. ಸುಮ್ಮನೆ ಹೇಳಿದೆ. ಅಂಥ ಸಮಯ ಬಂದಾಗ ತಾನೆ ನನ್ನೀ ತೀರ್ಮಾನ. ಈಗ್ಯಾಕೆ ಬಿಟ್ಟಾಕು. ನಿನ್ನ ನಿಲುವು ನಿನಗೆ ಗೊತ್ತು. ನಿನ್ನ ನಂಬಿದಿನಿ. ಅದನ್ನು ಕಾಪಾಡಿಕೊಂಡು ನನ್ನ ಉಳಿಸಿಕೊಳ್ಳೋದು ನಿನಗೇ ಬಿಟ್ಟಿದ್ದು. ಆದರೆ ನಾನಿರೋದೆ ಹೀಗೆ. ನಾನು ಯಾವತ್ತೂ ಬದಲಾಗುವವಳಲ್ಲ”

” ನಾನು ಬಿಡಲಾಗುವುದಿಲ್ಲ.. ನಿನ್ನ ಸಾಧನೆಗಳಿಂದಲೇ ನೀನು ತೃಪ್ತಿಪಟ್ಟುಕೊಳ್ಳಬೇಕು”

ಸಾವಿರ ಹರಿಕಾರರ ಕೋಲುಗಳು ಸಿಕ್ಕಷ್ಟು ಸಂಭ್ರಮ ಎದೆ ತುಂಬ. ಒಕ್ಕೊರಲ ಗಾನಕ್ಕೆ ಸುಂದರ ಲಿರಿಕ್ ಹಾಕಿ ಹಾಡಿಸುವ ಮಾಂತ್ರಿಕ ಶಕ್ತಿ ಅವನದೊಂದೊಂದು ನುಡಿಗಳಲಿ. ಕಾರಣವಿಲ್ಲದೆ ಸುಳಿವ ಸಂಶಯಗಳ ಕ್ಷಣ ಮಾತ್ರದಲಿ ಕಿತ್ತೊಗೆದು ತನ್ನಿರುವ ಛಾಪಿಸುವ ಕಲೆ ಅವಳಿಗಿಷ್ಟವಾಗುವ ಗುಣ. ಭರವಸೆಯ ಪ್ರತೀಕ. ಏನಾದರಾಗಲಿ ಪ್ರತಿ ದಿನ ಪ್ರತಿ ಕ್ಷಣ ನೆನೆಯದ ದಿನವಿಲ್ಲ. ತನ್ನುದ್ಧಾರಕ್ಕೆ ಟೊಂಕ ಕಟ್ಟಿ ನಿಂತಂತೆ ಕಾಣುತ್ತಾನೆ ಅವಳಿಗೆ.

ಸಾಮಾನ್ಯವಾಗಿ ಎಲ್ಲರಾಡುವ ಮಾತು ಇಂತಹ ಪರಿಸ್ಥತಿಯಲ್ಲಿ ; ಆಡಿದ ಮಾತುಗಳು ಬರಿ ಕಲ್ಪನೆಗಳಿಗಷ್ಟೆ ಸೀಮಿತವೆ? ಅವುಗಳು ಸತ್ಯದ ವಾಖ್ಯಗಳಲ್ಲವೆ? ಯಾಕೆ “ಮದುವೆ” ಅನ್ನುವ ಮೂರಕ್ಷರ ಬಂದಾಗ ಎಷ್ಟೋ ಪ್ರೀತಿಯ ಮಾತುಗಳು ಜವಾಬ್ದಾರಿಯಿಂದ ಕಳಚಿಕೊಳ್ಳುತ್ತವೆ?

ಆದರೂ ಅವಳಿಗೆ ಅವನ ಮೇಲಿನ ಪ್ರೀತಿ ಕಿಂಚಿತ್ತೂ ಕಡಿಮೆಯಾಗಲಿಲ್ಲ. ಕಾರಣ ಅವಳಿಗೆ ಗೊತ್ತು. ತನ್ನ ಇತಿ ಮಿತಿ, ಯೋಗ್ಯತೆ. ತನ್ನಂಥವರನ್ನು ಯಾರು ಮದುವೆಯಾಗುತ್ತಾರೆ? ಅವನ ಮಾತುಗಳು ನೂರು ಭರವಸೆ ಹುಟ್ಟು ಹಾಕಿದ್ದರೂ ಅಲ್ಲೊಂದು ಸಂಶಯ ಮನೆ ಮಾಡಿತ್ತು. ತಾನು ಸದಾ ಒಂಟಿ. ಸಿಗಲಾರದ ತುತ್ತಿಗಾಗಿ ಹಂಬಲಿಸುತ್ತಿದ್ದೇನೆ. ಸತ್ತ ಆಸೆಗಳಿಗೆ ನೀರೆರೆದು ಪೋಷಿಸುತ್ತ ಹೆಮ್ಮರವಾಗಿ ಬೆಳೆಸಿದ ಪರಿಗೆ ಹೆಮ್ಮೆ ಇದೆ. ಕಾಣದ ಶಕ್ತಿಯ ಕೊಡುಗೆ ಅವನು. ಅವನದು ತಪ್ಪು ನಡೆ ಎಂದನಿಸುತ್ತಲೂ ಇಲ್ಲ. ತಾನೇ ತನ್ನ ಸ್ಥಿತಿ ತಿಳಿದೂ ದುರಾಸೆ ಪಟ್ಟೆನೆ? ಯಾಕೆ ನನಗೀ ಆಸೆ? ಯಾಕೆ ಮತ್ತೆ ಮೋಹದ ಬಲೆಗೆ ಸಿಲುಕಿದೆ ಎಂಬ ಒದ್ದಾಟ. ನಮ್ಮ ದುರಾದೃಷ್ಟಕ್ಕೆ ಇನ್ನೊಬ್ಬರ ಹಳಿದರೇನು ಫಲ. ಹೀಗನಿಸುವ ಮನಸು ಮತ್ತೆ ಮತ್ತೆ ಅವನ ಮಾತು ಮೆಲುಕು ಹಾಕುತ್ತದೆ.

“ಇಲ್ಲ ಇಲ್ಲ ಇದು ನಿನ್ನ ನಿರ್ಧಾರ, ನಾನದನ್ನ ಗೌರವಿಸುತ್ತೇನೆ”

ಹಲವು ಬಾರಿ ನಾವು ಬೇಕಾದಷ್ಟು ಮಾತು, ಆಶ್ವಾಸನೆ ಆಡಿಬಿಡಬಹುದು. ಆದರೆ ಅದನ್ನು ಅನುಷ್ಟಾನಕ್ಕೆ ತರುವ ಹಂತದಲ್ಲಿ ಆ ಮಾತು ಉಳಿಸಿಕೊಳ್ಳಲು ಮನಸ್ಸು ಒಪ್ಪೋದೇ ಇಲ್ಲ. ಇದು ಮನುಷ್ಯನ ಸ್ವಭಾವವಾದರೂ ಅದು ಆ ಮನಸ್ಸಿಗೆ ಮಾಡಿದ ಮೋಸ, ವಂಚನೆಯ ಸಾಲಿಗೆ ಸೇರುವುದಲ್ಲವೆ? ಒಳ್ಳೆಯತನದ ಅನಾವರಣ ಇರಬಹುದು ಅವನಲ್ಲಿ. ಆದರೆ ನಂಬಿದ ಜೀವಕ್ಕೆ ಕೊಟ್ಟ ನೋವು ಅನುಭವಿಸಿದವರಿಗಷ್ಟೆ ಗೊತ್ತು. ಕಲ್ಪನೆಗೂ ವಾಸ್ತವಕೂ ಅಪಾರ ಅಂತರ ಬಹುಶಃ ಪೂರ್ಣ ಅರ್ಥ ಆಗುವುದು ಜೀವನದ ಕೊನೆಯಲ್ಲಿ.

ಇಷ್ಟು ವರ್ಷಗಳಾದರೂ ಅರ್ಥವಾಗದ ಗೊಂದಲಗಳ ನಡುವೆ ಅವನ ಮಾತುಗಳು ” ನಿನಗೆ 50 ಆದರೇನು 100 ವರ್ಷ ಅದರೇನು ನನ್ನ ಅಮ್ಮನಾಗಿ, ನಿನ್ನ ಗಂಡನಾಗಿ ನಾನು ಸದಾ ನಿನ್ನ ಪ್ರೀತಿಸುತ್ತೇನೆ. ನಿನ್ನ ಜೀವನವೆ ನಿಜವಾದ ದೇವರು. ಅನುಭವದ ಜೀವನ ನಿನ್ನದು. ಅದಕ್ಕೆ ನೀನು ಅಂದರೆ ನನಗೆ ತುಂಬಾ ಇಷ್ಟ.”

ಈಗ ತುಲನೆ ಮಾಡುವ ಹಂತ ತಲುಪಿದೆ ಅನಿಸುತ್ತದೆ ಅವಳಿಗೆ. ಸತ್ಯ ಕಹಿ ಆದರೂ ಅದು ಸತ್ಯವೆ. ಎಷ್ಟು ಯೋಚಿಸಿದರು ಸತ್ಯ ಸುಳ್ಳು ಮಾಡೋಕೂ ಸಾಧ್ಯ ಇಲ್ಲ. ಹಾಗಂತ ಅರಗಿಸಿಕೊಳ್ಳಲೂ ಸಾಧ್ಯ ಆಗುತ್ತಿಲ್ಲ. ಅವನ ನೆನಪಾದಾಗಲೆಲ್ಲ ಹಿಡಿ ಅನ್ನ ನುಂಗಲಾಗದಷ್ಟು ಸಂಕಟ. ಯಾಕೆ ದೇವರೆ ನನಗವನನ್ನು ತೋರಿಸಿದೆ? ಎಲ್ಲ ನೆನಪುಗಳ ನನ್ನಲ್ಲಿ ಉಳಿಸಿ ಇಬ್ಬರನ್ನೂ ದೂರ ಮಾಡಿದೆ? ಎಷ್ಟೋ ಸಾರಿ ಮಮ್ಮಲ ಮರುಗಿದ್ದಿದೆ.

ಗತಕಾಲದ ನೆನಪುಗಳ ಯೋಚಿಸುತ್ತ ಕುಳಿತ ಅವಳಿಗೆ ಕತ್ತಲೆ ಆವರಿಸುತ್ತಿರುವುದು ಗೊತ್ತಾಗಲಿಲ್ಲ. ಮನ, ಮನೆಯೆಲ್ಲ ನಿಶ್ಯಬ್ದ ಮೌನ. ಹೇಗೊ ಜೀವ ಕೈಯಲ್ಲಿ ಹಿಡಿದು ಬದುಕುತ್ತಿರುವ ಅವಳಿಗೆ ಜವಾಬ್ದಾರಿಗಳು ನೂರಿವೆ. ಕರ್ತವ್ಯವನ್ನು ಮರೆತು ಬಾಳುವ ಹೆಣ್ಣಲ್ಲ ಅವಳು. ದಡಬಡಿಸಿ ಎದ್ದು ಲೈಟ್ ಸ್ವಿಚ್ ಆನ್ ಮಾಡುತ್ತಾಳೆ. ಕೈ ಕಾಲು ಮುಖ ತೊಳೆದು ಬತ್ತಿ ತೀಡಿ ಎಣ್ಣೆ ಬಸಿದು ಕಡ್ಡಿ ಗೀರಿ ಹಚ್ಚಿದ ದೀಪ ತದೇಕ ಚಿತ್ತದಿಂದ ನೋಡುವಂತೆ ಮಾಡುತ್ತದೆ. ಸುತ್ತೆಲ್ಲ ಬೆಳಕ ಬೀರಿ ತನ್ನ ಕಾಲು ಬುಡ ಕತ್ತಲೆಯಲ್ಲೆ ಕಾಲ ಕಳೆವ ದೀಪಕ್ಕೂ ತನ್ನ ಜೀವನಕ್ಕೂ ಯಾವ ವ್ಯತ್ಯಾಸವನ್ನೂ ಕಾಣುವುದಿಲ್ಲ.

-ಗೀತಾ ಹೆಗಡೆ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!