Featured ಅಂಕಣ

ನೂರಾ ಐದರ ವಯಸ್ಸು, ಹದಿನಾರರ ಮನಸ್ಸು

ಈ ವಿಷಯ ಒಂದು ತರಹ ವಿಶೇಷವಾಗಿದೆ. ಬಹಳಷ್ಟು ಜನ ನಲವತ್ತು ಆಯಿತು ಅಂದರೆ ತಾವು ಮುದುಕರಾದೆವು, ಇನ್ನು ಏನೂ ಮಾಡಲಾಗುವುದಿಲ್ಲ ಅಂದುಕೊಳ್ಳುತ್ತಾರೆ. ಇತ್ತೀಚಿಗೆ ‘ನಲವತ್ತಕ್ಕೆ ನಿವೃತ್ತಿ’ ಎನ್ನುವುದು ಒಂದು ಕ್ರೇಜಿ ಶಬ್ಧ ಆಗಿಬಿಟ್ಟಿದೆ. ಆದರೆ ಇಲ್ಲಿ ಬರುವ ವ್ಯಕ್ತಿಗೆ ವರ್ಷ ಎನ್ನುವುದು ಬರೀ ಸಂಖ್ಯೆ ಮಾತ್ರ. ರಾಬರ್ಟ್ ಮರ್ಚಂಡ್‌ ಅವರಿಗೆ ನೂರಾ ಐದು ವರ್ಷ. ಈ ವಯಸ್ಸಿನಲ್ಲಿ ಜನ ಉಸಿರಾಡುವುದಕ್ಕೂ ಕಷ್ಟ ಪಡುವಾಗ ಅವರು ನಡೆಯುತ್ತಾರೆ, ಓಡುತ್ತಾರೆ, ತಮ್ಮ ಕೆಲಸ ತಾವೇ ಮಾಡಿಕೊಳ್ಳುತ್ತಾರೆ. ಇದೆಲ್ಲಾ ಓಕೆ ಸರ್, ಮತ್ತೇನು ವಿಶೇಷ? ವಿಶೇಷ ಏನು ಅಂದರೆ, ಜಗತ್ತೇ ಒಮ್ಮೆ ಗಾಬರಿಯಾಗಬೇಕು ಅಂತಹದ್ದು. ಅವರು ತಮ್ಮ ನೂರಾ ಐದನೇ ವಯಸ್ಸಿನಲ್ಲಿ ಒಂದು ತಾಸಿಗೆ ಹದಿನಾಲ್ಕು ಮೈಲಿಗಳ ದೂರ ಸೈಕ್ಲಿಂಗ್ ಮಾಡಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಮೈಲುಗಳು ಅರ್ಥ ಆಗಿಲ್ಲ ಅಂದರೆ ಮತ್ತೊಮ್ಮೆ ಕೇಳಿ, ಒಂದು ತಾಸಿನೊಳಗೆ ಇಪ್ಪತ್ತೆರಡು ಕಿಮೀ ದೂರ ಕ್ರಮಿಸಿ ಹೊಸ ದಾಖಲೆ ಮಾಡಿದ್ದಾರೆ ಈ ನೂರಾ ಐದು ವರ್ಷದ ಮುದಿ ತರುಣ! ಹೇಗೆ ಸಾಧ್ಯ ಅಂತ ಮಾತ್ರ ಕೇಳಬೇಡಿ, ಆದರೆ ವಿಷಯ ಮಾತ್ರ ನಿಜ. ಕ್ರಿಕೆಟ್’ನಲ್ಲಿ ಬ್ರಾಡ್’ಮೆನ್ ದಾಖಲೆಯನ್ನು ಅವರೇ ಬಂದು ಮುರಿಯಬೇಕು, ಹಾಗಿದೆ ಇದು, ಇನ್ನು ಸಾವಿರ ವರ್ಷ ಕಳೆದರೂ ಯಾರೂ ಈ ದಾಖಲೆಯನ್ನು ಮುರಿಯಲಾರರು. ಅವರ ಜೋಷ್ ನೋಡಿ, ಮುಂದಿನ ವರ್ಷ ಮತ್ತೆ ಭಾಗಿಯಾಗಿ ತನ್ನ ರೆಕಾರ್ಡ್ ತಾನೇ ಮುರಿಯುತ್ತಾರಂತೆ! ನೂರು ವರ್ಷದ ಮೇಲ್ಪಟ್ಟವರ ಸ್ಪರ್ಧೆಯಲ್ಲಿ ಮೂರು ವರ್ಷದ ಹಿಂದೆ, ಅಂದರೆ ನೂರಾ ಎರಡನೇ ವಯಸ್ಸಿನಲ್ಲಿ, ಇಪ್ಪತ್ತಾರು ಕಿಮೀ ಕ್ರಮಿಸಿ ತಾವೇ ದಾಖಲೆ ಮಾಡಿದ್ದರು. ತನಗೆ “ಯಾರಾದರೂ ಇನ್ನೂ ಹತ್ತು ನಿಮಿಷ ಇದೆ ಅಂತ ಹೇಳಿದ್ದರೆ ಮತ್ತೂ ವೇಗವಾಗಿ ಓಡಿಸುತ್ತಿದ್ದೆ. ತೊಂಬತ್ತೆರಡು ಸುತ್ತು ಹೋಗಿ ಬಂದರೂ ಸುಸ್ತಾಗಲಿಲ್ಲ, ಕಾಲು ನೋಯಲಿಲ್ಲ, ಏನಾದರೂ ಆಗಬೇಕಲ್ಲ ಅದಕ್ಕೆ ಕೈ ಸ್ವಲ್ಪ ನೋಯುತ್ತಿತ್ತು ಅಷ್ಟೇ” ಅನ್ನುತ್ತಾರೆ. ಇಂದು ಮೂವತ್ತು ವರ್ಷ ಆಯ್ತು ಅಂದರೆ ಕೈ, ಕಾಲು ನೋವು ಶುರುವಾಗುತ್ತದೆ …ಈ ಶತಾಯುಷಿಯನ್ನು ನೋಡಿ‌ ಬದುಕಿನಲ್ಲಿ ಹೊಸ ಪ್ರೇರಣೆ ಪಡೆದುಕೊಳ್ಳಬೇಕು.

ಮೊನ್ನೆ ತಾನೆ ಒಂದು ವಿಡಿಯೋ ನೋಡಿದ್ದೆ. ದೊಡ್ಡ ಆನೆಯ ಕಾಲನ್ನು ಸಣ್ಣ ಬಳ್ಳಿಯೊಂದಕ್ಕೆ ಕಟ್ಟಿಟ್ಟರೂ ಕೂಡ ಅದು ಬಿಡಿಸಿಕೊಂಡು ಹೋಗುವುದಿಲ್ಲವಂತೆ. ಅದನ್ನು ನೋಡಿದ ದಾರಿಹೋಕ ಅದಕ್ಕೆ ಏನು ಕಾರಣ ಅಂತ ಅದರ ಮಾಲೀಕನನ್ನು ಕೇಳಿದನಂತೆ. ಮಾಲೀಕ, ” ಆನೆ ಮರಿ ಇರುವಾಗಲೇ ಕಾಲು ಕಟ್ಟಿ ಬಿಡುತ್ತೇವೆ. ಅದು ಪ್ರಯತ್ನ ಪಡುತ್ತದೆ ಆದರೆ ಆಗದಿರಲು ಈ ಬಂಧನದಿಂದ ತಪ್ಪಿಸಿಕೊಂಡು ಹೋಗಲು ಆಗುವುದೇ ಇಲ್ಲ ಅಂತ ಮನಸಲ್ಲಿ ಬಿದ್ದ ಬೀಜ ಬಿದ್ದು ಅದು ಮರವಾಗಿ ಬೆಳೆಯುತ್ತದೆ. ನಂತರ ದೊಡ್ಡವನಾದ ಮೇಲೂ ಅದು ಎಂದೂ ಬಿಡಿಸಕೊಳ್ಳಲು ಪ್ರಯತ್ನ ಮಾಡುವುದೇ ಇಲ್ಲ” ಅನ್ನುತ್ತಾನೆ. ಇಲ್ಲಿ ಯಾಕೆ ಆ ಉದಾಹರಣೆ ತಂದೆ ಅಂದರೆ ಇವರಿಗೂ ಆಗಿದ್ದು ಹೀಗೆಯೆ. ಚಿಕ್ಕಂದಿನಲ್ಲಿ ಸೈಕ್ಲಿಂಗ್ ಅಂದರೆ ಇವರಿಗೆ ತುಂಬಾ ಇಷ್ಟ. ಆದರೆ, ನೂರು ವರ್ಷದ ಹಿಂದೆ ಕೋಚ್, “ನೀನು ಕುಬ್ಜ (4tf. 11 inch) ಸೈಕ್ಲಿಂಗ್ ಮಾಡುವುದು ಬೇಡ, ನಿನ್ನ ಹತ್ತಿರ ಗೆಲ್ಲಲು ಸಾಧ್ಯವಿಲ್ಲ” ಅಂದಿದ್ದರಂತೆ. ಅದು ಇವರ ಮನಸ್ಸಿನಲ್ಲೇ ಉಳಿದಿತ್ತು. ಹೀಗಾಗಿ ಎಂದೂ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲೇ ಇಲ್ಲ. ಇಪ್ಪತ್ತೆರಡನೇ ವಯಸ್ಸಿಗೆ ನಿಲ್ಲಿಸಿದ್ದನ್ನ ಮತ್ತೆ ಶುರು ಮಾಡಲು 88 ವರ್ಷ ಬೇಕಾಯಿತು. ಅವರು ಸೈಕ್ಲಿಂಗ್ ತರಬೇತಿ ಶುರು ಮಾಡಿದ್ದೇ ನೂರು ವರ್ಷದ ಹುಟ್ಟಿದ ಹಬ್ಬ ಆಚರಿಸಿದ ಮೇಲೆ. “ಚಾಂಪಿಯನ್‌ ಆಗಬೇಕು ಅಂತ ಅಲ್ಲ, ನೂರಾ ಐದು ವರ್ಷದ ಮುದುಕ ಕೂಡಾ ಸೈಕಲ್ ಓಡಿಸಬಹುದು ಅಂತ ತೋರಿಸಲಿಕ್ಕೆ ನಾನು ಬಂದಿದ್ದು” ಅಂತಾರೆ. ಎಂತಹ ಸರಳತೆ ನೋಡಿ! ಸಾಧಕರಿಂದ ನಾವು ಕಲಿಯಬೇಕಾದದ್ದು ಬೆಟ್ಟದಷ್ಟಿದೆ.

ನೂರು ವರ್ಷಗಳ ಕಾಲ ಇರಬೇಕು ಅಂತ ಅಲ್ಲ, ಆದರೆ ಇದ್ದಷ್ಟು ದಿನವಾದರೂ ಆರೋಗ್ಯವಾಗಿ ಇರಬೇಕು ಎನ್ನುತ್ತಾರೆ ರಾಬರ್ಟ್. ಅವರ ಧೀರ್ಘಾವಿಷ್ಯದ ರಹಸ್ಯ ಏನು ಅಂದರೆ, ದಿನವೂ ವ್ಯಾಯಾಮ ಮಾಡುತ್ತಾರಂತೆ, ಅಲ್ಪ ಆಹಾರ ಸೇವನೆ, ಮಾಂಸಾಹಾರ ಇಲ್ಲ, ಹಣ್ಣು ಹಾಗೂ ತರಕಾರಿ ಸೇವನೆ. ಇದರ ಜೊತೆಗೆ ದಿನವೂ ರಾತ್ರಿ ಒಂಬತ್ತಕ್ಕೆ ಮಲಗಿ, ಬೆಳಿಗ್ಗೆ ಆರು ಘಂಟೆಗೆ ಎದ್ದು ಬಿಡುತ್ತಾರಂತೆ. 1911 ರಲ್ಲಿ ಹುಟ್ಟಿ ಎರಡು ಮಹಾಯುದ್ಧಗಳನ್ನು ಕಂಡ ರಾಬರ್ಟ್ ಬದುಕಿನಲ್ಲಿ ಹಲವಾರು ದೇಶ ಸುತ್ತಿ, ಜೀವದಲ್ಲಿ ಯಾವ ಅವಕಾಶ ಸಿಕ್ಕಿತೋ ಆ ಕೆಲಸ ಮಾಡುತ್ತಾ ಬಂದಿದ್ದಾರೆ. 1930 ಮಹಾಯುದ್ಧದ ಸಮಯದಲ್ಲಿ ಆಗ್ನಿಶಾಮಕ ದಳದ ಸಿಬ್ಬಂದಿ ಆಗಿದ್ದರು, ಆ ಸಮಯದಲ್ಲಿ ಜೈಲಿಗೂ ಹೋಗಬೇಕಾಯಿತು. ನಂತರ ವೆನ್ಯುಜೆಲಾ, ಅಮೇಲೆ ಕೆನಡಾ, ನಂತರ ಮತ್ತೆ 1967 ರಲ್ಲಿ ಮರಳಿ ಹುಟ್ಟಿದ ದೇಶ ಫ್ರಾನ್ಸ್ ದೇಶಕ್ಕೆ ಬಂದರಂತೆ. ನಂತರ ಫ್ರಾನ್ಸ್ ನಲ್ಲೇ ವಾಸವಾಗಿದ್ದಾರೆ. ತಿಂಗಳಿಗೆ ಸಿಗುವ ಪಿಂಚಣಿ $950 ಇವರ ಜೀವನಾಧಾರ.

ನೂರಾ ಐದನೇ ವಯಸ್ಸಿನಲ್ಲಿ ಅವರು ಬರೆದದ್ದು ಒಂದು ದಾಖಲೆ ರೂಪದಲ್ಲಿ ಇರಬಹುದು, ಆದರೆ ಇದು ಬರೀ ದಾಖಲೆಯಲ್ಲ. ನಾವು ಸರಿಯಾಗಿ ಯಾವ ರೀತಿಯಲ್ಲಿ ಬದುಕಬೇಕು ಎಂಬುದನ್ನು ತೋರಿಸುತ್ತದೆ. ವಯಸ್ಸು ಎನ್ನುವುದು ಕೇವಲ ಸಂಖ್ಯೆ ಅಷ್ಟೇ, ಸಾಧನೆ ಮಾಡುವವರಿಗೆ ಅದು ಸಂಬಂದವಿಲ್ಲ. ದಿನವೂ ಅಚ್ಚುಕಟ್ಟಾಗಿ ಶಿಸ್ತಿನಿಂದ ನಿಯಮದಿಂದ ಇದ್ದರೆ ನೂರು ವಯಸ್ಸು ಆರೋಗ್ಯಕರವಾಗಿ ಬದುಕಬಹುದು ಎಂದು ಈ ರೆಕಾರ್ಡ್ ಮತ್ತೆ ಮತ್ತೆ ಹೇಳುತ್ತಿರುತ್ತದೆ. ಪ್ರತಿಯೊಬ್ಬರೂ ಬದುಕಿನಲ್ಲಿ ‘ವಿದ್ ಪ್ರಿನ್ಸಿಪಲ್’ ಬದುಕಬೇಕು ಎನ್ನುತ್ತಾರಲ್ಲ ಅದಕ್ಕೆ ರಾಬರ್ಟ್ ಒಂದು ಒಳ್ಳೆಯ ಉದಾಹರಣೆ. ರಾಬರ್ಟ್ ಅವರಿಗೆ ಯಾವಾಗ ಪ್ರಾಣಿಗಳನ್ನು ಎಷ್ಟು ಕ್ರೂರವಾಗಿ ಸಾಯಿಸಿ ಮಾಂಸ ತೆಗೆಯುತ್ತಾರೆ ಅಂತ ಗೊತ್ತಾಯಿತೋ ಅಂದಿನಿಂದ ಸಂಪೂರ್ಣವಾಗಿ ಮಾಂಸಹಾರ ಬಿಟ್ಟು ಬಿಟ್ಟರಂತೆ‌. ರಾಬರ್ಟ್ ಅವರು, “ನಾನು ಮುಂದಿನ ವರ್ಷ ಹೊಸ ಸ್ಪರ್ಧಾಳುವಿಗಾಗಿ ಕಾಯುತ್ತಿದ್ದೇನೆ” ಎನ್ನುವಾಗ ನಾವು ಬದುಕಿನ ಇನ್ನೊಂದು ಮುಖ್ಯವಾದ ವಿಷಯವನ್ನು ಇಲ್ಲಿ ಕಲಿಯುತ್ತೇವೆ. ಅದೇನು ಅಂದರೆ “ಬದುಕಿನಲ್ಲಿ ಸೋಲಬಾರದು, ಸೋತರೂ ಬದುಕು ಒಂದು ಆಟ ಅಂತ ಪರಿಗಣಿಸಿ ಆನಂದಿಸಬೇಕು”. ಇದೆಲ್ಲದರ ಜೊತೆ, ರಾಬರ್ಟ್ ತಮ್ಮ ಈ ಸಾಧನೆಯಿಂದ ನಮಗೆಲ್ಲ ಏನೋ ಒಂದು ಮೆಸೇಜ್ ಕೊಡುತ್ತಿದ್ದಾರೆ ಅನಿಸುತ್ತದೆ. ಯಾವುದೇ ಸಾಧನೆ ಮಾಡಲಿಕ್ಕೆ ವಯಸ್ಸು ಎನ್ನುವುದಿಲ್ಲ. ಅರವತ್ತರಲ್ಲಿ ನೀವು ಮತ್ತೆ ಕಾಲೇಜಿಗೆ ಹೋಗಬಹುದು, ಎಪ್ಪತ್ತರಲ್ಲಿ ರೊಮ್ಯಾಂಟಿಕ್ ಕವನ ಬರೆಯಬಹುದು, ತೊಂಬತ್ತರಲ್ಲಿ ಮನಸ್ಸು ಮಾಡಿದರೆ ಮೌಂಟ ಎವರೆಸ್ಟ್‌ ಹತ್ತಬಹುದು. ಮನಸ್ಸಿಗೆ, ಮನಸ್ಸು ಮಾಡಿದ ಛಲಕ್ಕೆ ವಯಸ್ಸಾಗುವುದಿಲ್ಲ, ಇದೇ ನೂರಾ ಐದು ವರ್ಷದ ರಾಬರ್ಟ್ ಕೊಡುವ ಮೆಸೇಜ್.

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Joshi

ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!