Featured ಅಂಕಣ

ತಡರಾತ್ರಿ ಐ.ಎ.ಎಸ್ ಅಧಿಕಾರಿಯೊಬ್ಬರಿಗೆ ಮೋದಿ ಕರೆ ಮಾಡಿದಾಗ…

ಚರ್ಚೆಯ ವಿಷಯಗಳಿದ್ದಾಗ ನಾನು ಸುಮ್ಮನೆ ಕೂರುವವನಲ್ಲ. ಇನ್ನು ಸಾಮಾನ್ಯವಾಗಿ ಎಲ್ಲ ಚರ್ಚೆಗಳು ಕೊನೆಗೊಳ್ಳುವುದು ರಾಜಕೀಯದಲ್ಲಿಯೇ ಆಗಿರುತ್ತದೆ. ಇಷ್ಟು ವರ್ಷಗಳವರೆಗೆ ಎಲ್ಲ ಚರ್ಚೆಗಳಲ್ಲಿ, ಮಾತುಕತೆಗಳಲ್ಲಿ ನಾನು ಕೇಳುತ್ತಾ ಬಂದಿದ್ದು, “ಇದು ಭಾರತ. ಈ ದೇಶ ಎಂದಿಗೂ ಬದಲಾಗೋದಿಲ್ಲ. ಇಲ್ಲಿಯ ರಾಜಕಾರಣಿಗಳು ಭ್ರಷ್ಟರು, ಅಧಿಕಾರಿಗಳು ಭ್ರಷ್ಟರು, ಒಟ್ಟಾರೆ ವ್ಯವಸ್ಥೆಯೇ ಭ್ರಷ್ಟವಾಗಿದೆ. ನೀವು ಯಾರನ್ನು ಆರಿಸಿದರೂ, ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಭಾರತ ಬದಲಾಗುವುದಿಲ್ಲ” ನಾನೂ ಕೂಡ ಬಹಳ ಸಮಯದವರೆಗೆ ಇಂತಹದೇ ಅಭಿಪ್ರಾಯವನ್ನು ಹೊಂದಿದ್ದೆ. ಆದರೆ ಕ್ರಮೇಣವಾಗಿ ನನ್ನ ಅಭಿಪ್ರಾಯ ಬದಲಾಗತೊಡಗಿತು. ಕಳೆದು ೨-೩ ವರ್ಷಗಳಲ್ಲಿ ‘ಅತ್ಯಂತ ಪ್ರಮುಖ’ ಎಂಬ ವಿಷಯಗಳಲ್ಲಿ, ಸರ್ಕಾರ ನಡೆದುಕೊಂಡ ರೀತಿ, ನಿರ್ಧಾರ ತೆಗೆದುಕೊಂಡ ಪರಿಯಲ್ಲಿ ಒಂದು ಬದಲಾವಣೆಯನ್ನ ಕಂಡೆ. ಹೌದು, ಭಾರತ ಸರ್ಕಾರ ಇಲ್ಲಿಯೂ ಬದಲಾವಣೆ ತರಬಹುದು ಎಂಬ ಭರವಸೆಯನ್ನ ಮೂಡಿಸಿದೆ. ಅದಾಗಲೇ ನನಗೆ ‘ಭಕ್ತ’ ಎಂಬ ಹಣೆಪಟ್ಟಿ ಕೊಡಲು ಯೋಚಿಸುತ್ತಿದ್ದೀರಾ? ಒಂದು ನಿಮಿಷ ತಾಳಿ.. ಅದಕ್ಕೂ ಮುನ್ನ ಈ ಘಟನೆಯ ಬಗ್ಗೆ ಓದಿ ನಂತರ ನೀವೇ ನಿರ್ಧರಿಸಿ ನನಗೆ ‘ಭಕ್ತ’ ಎನ್ನಬೇಕೋ ಅಥವಾ ಈ ದೇಶದಲ್ಲೊಂದು ಬದಲಾವಣೆ ಬರುತ್ತಿದೆ ಎಂದು ಒಪ್ಪಿಕೊಳ್ಳಬೇಕೋ ಎಂದು.

    ಕೋರ (Quora) ವೆಬ್’ಸೈಟಲ್ಲಿ ಒಂದು ಬರಹವನ್ನು ನೋಡಿದೆ. ಅದನ್ನ Zoojoo.be’ಯಲ್ಲಿ  ಪ್ರಾಡಕ್ಟ್ ಮ್ಯಾನೇಜರ್ ಆಗಿರುವ ಪುಷ್ಪಕ್ ಚಕ್ರವರ್ತಿ ಎಂಬವರು ಬರೆದಿದ್ದರು. ಘಟನೆ ಹೀಗಿದೆ. ಉತ್ತರ ತ್ರಿಪುರಾಗೆ ನೇಮಿಸಲ್ಪಟ್ಟ ಐ.ಎ.ಎಸ್ ಅಧಿಕಾರಿಯೊಬ್ಬರಿಗೆ ೨೧ ಜುಲೈ ೨೦೧೬ರ ರಾತ್ರಿ ೧೦ಗಂಟೆಗೆ ಫೋನ್’ಕರೆಯೊಂದು ಬರುತ್ತದೆ. ಆ ಕಡೆಯಿಂದ ದನಿಯೊಂದು ಅಷ್ಟು ತಡರಾತ್ರಿ ಕರೆ ಮಾಡಿದ್ದಕ್ಕೆ ಕ್ಷಮೆ ಕೇಳುವುದರೊಂದಿಗೆ ಮಾತನ್ನು ಆರಂಭಿಸಿ, ನಿಮಗೆ ಬಿಡುವಿದೆಯೇ ಎಂದು ಕೇಳಿಕೊಂಡು  ಪ್ರಧಾನಿ ನರೇಂದ್ರ ಮೋದಿಯವರು ನಿಮ್ಮೊಡನೆ ಮಾತಾಡ ಬಯಸುತ್ತಿದ್ದಾರೆ ಎಂಬ ವಿಷಯ ಪ್ರಸ್ತಾಪಿಸಲಾಗುತ್ತದೆ. ಆ ಅಧಿಕಾರಿಗೆ ಒಂದು ಕ್ಷಣ ಆಶ್ಚರ್ಯವಾಗಿ, ಯೋಚನಾ ಶಕ್ತಿಯೇ ನಿಂತಂತಾಗಿತ್ತು.  ತಮ್ಮೆಲ್ಲಾ ಶಕ್ತಿ ಒಗ್ಗೂಡಿಸಿ ‘ಸರಿ’ ಎಂದು ಹೇಳಿದ್ದರು.

       ಆ ಅಧಿಕಾರಿಯವರ ಅಂಗೈ ಬೆವರಹತ್ತಿತ್ತು, ಕಾಲುಗಳು ನಡುಗುತ್ತಿದ್ದವು, ಸ್ಪಷ್ಟವಾಗಿ ಯೋಚಿಸುವ ಪ್ರಯತ್ನ ಮಾಡುತ್ತಿದ್ದರು. ಕೆಲ ಬೀಪ್’ಗಳ ನಂತರ ಕರೆಯನ್ನ ವರ್ಗಾಯಿಸಲಾಗಿ, ಆ ಕಡೆಯಲ್ಲಿ ಸ್ವತಃ ನರೇಂದ್ರ ಮೋದಿಯವರಿದ್ದರು. ತಡರಾತ್ರಿ ಕರೆ ಮಾಡಿದ್ದಕ್ಕೆ ಕ್ಷಮೆ ಕೋರಿ ಮಾತು ಆರಂಭಿಸಿದ ಮೋದಿಯವರು, ಆಗ ತಾನೆ ಸಾರಿಗೆ ಮಂತ್ರಿ ನಿತಿನ್ ಗಡ್ಕರಿಯವರೊಂದಿಗೆ ಮಾತುಕತೆ ಮುಗಿಸಿದ್ದರ ಬಗ್ಗೆ ತಿಳಿಸಿ, ತ್ರಿಪುರಾವನ್ನು ದೇಶದ ಇತರ ಭಾಗಕ್ಕೆ ಸೇರಿಸುವ ರಾಷ್ಟ್ರೀಯ ಹೆದ್ದಾರಿ ೨೦೮-ಎ ಅನ್ನು ರಿಪೇರಿ ಮಾಡಲು ಸಹಾಯ ಬೇಕೆಂದು ಆ ಅಧಿಕಾರಿಯನ್ನು ಕೇಳಿದ್ದರು. ಆ ಅಧಿಕಾರಿಗೆ ಏನು ಹೇಳಬೇಕೆಂದೇ ತೋಚಲಿಲ್ಲ, ಏನು ಹೇಳಿದರೆಂದು ನೆನಪು ಕೂಡ ಇಲ್ಲ. ಅವರಿಗೆ ನೆನಪಿದ್ದದ್ದು ‘ಭಾರತ ಸರ್ಕಾರ, ಅಸ್ಸಾಂ ಹಾಗೂ ತ್ರಿಪುರಾ ಸರ್ಕಾರಗಳೊಂದಿಗೆ ಅದಾಗಲೇ ಮಾತಕತೆ ನಡೆಸಿದ್ದು, ಇವರಿಗೆ ಮೇಲ್ವಿಚಾರಣೆ ಮಾಡಲು ಬೇಕಾಗುವ ಎಲ್ಲಾ ಸೌಕರ್ಯವನ್ನು ನೀಡಲಾಗುವುದು’ ಎಂಬ ಮೋದಿಯ ಮಾತುಗಳಷ್ಟೇ..!!

  ಆ ರಾತ್ರಿ ಆ ಅಧಿಕಾರಿಗೆ ನಿದ್ರೆ ಕೂಡ ಬರಲಿಲ್ಲ. ಮೋದಿಯವರ ಮಾತುಗಳೇ ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು. ತಾನು ಮೋದಿಯವರೊಂದಿಗೆ ಮಾತನಾಡಿದೆ ಎಂಬುದನ್ನು ಇನ್ನೂ ನಂಬಲಾಗುತ್ತಿರಲಿಲ್ಲ. ಪದೇ ಪದೇ ಅದೇ ಯೋಚನೆಗಳು ಬರುತ್ತಿದ್ದವು..

   ಮರುದಿನ ಆ ಅಧಿಕಾರಿ ತಮ್ಮ ಆಫೀಸ್ ತಲುಪುವಷ್ಟರಲ್ಲಿ ಭಾರತ ಸರ್ಕಾರ, ತ್ರಿಪುರಾ ಸರ್ಕಾರ, ಅಸ್ಸಾಂ ಸರ್ಕಾರಗಳ ಸಂಪರ್ಕ ದೊರಕಿತು. ಹೆದ್ದಾರಿಯ ೧೫ ಕಿ.ಮೀ.ಗಳನ್ನು ರಿಪೇರಿ ಮಾಡಲು ಹಣ ಮಂಜೂರಾಗಲ್ಪಟ್ಟಿತ್ತು. ತನ್ನ ಸ್ಟಾಫ್’ನ್ನು ಕರೆದುಕೊಂಡು ಹೋಗುವಷ್ಟರಲ್ಲಿ ಅಸ್ಸಾಂ ಸರ್ಕಾರದಿಂದ ಒದಗಿಸಲ್ಪಟ್ಟ ೬ ಜೆ.ಸಿ.ಬಿ’ಗಳು ಅದಾಗಲೇ ಸ್ಥಳದಲ್ಲಿದ್ದವು. ಸ್ಥಳೀಯ ಕೆಲಸಗಾರರು ಬಂದರು, ಅಸ್ಸಾಂ ಹಾಗೂ ತ್ರಿಪುರಾದ ಪಿ.ಡಬ್ಲ್ಯೂ.ಡಿ ಅಧಿಕಾರಿಗಳು ಕೂಡ ಬಂದು ಹೋದರು. ನಾಲ್ಕು ದಿನಗಳಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ಟ್ರಕ್’ಗಳಲ್ಲಿ ಸರಕುಗಳನ್ನು ತಂದು ಒದಗಿಸಲಾಯಿತು. ನಾಲ್ಕನೇ ದಿನವೇ ಎಲ್ಲ ಸೌಕರ್ಯಗಳೊಂದಿಗೆ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿಯ ಮಾರ್ಗವನ್ನು ತೆರೆಯಲಾಯಿತು,  ನಂತರ ಆ ಅಧಿಕಾರಿಯನ್ನ ಸಾರಿಗೆ ಮಂತ್ರಿ ಗಡ್ಕರಿಯವರು ಸಂಪರ್ಕಿಸಿ ನಾಲ್ಕೇ ದಿನಗಳಲ್ಲಿ ಕೆಲಸ ಪೂರೈಸಿದ್ದಕ್ಕೆ ಅಭಿನಂದಿಸಿ, ಧನ್ಯವಾದ ತಿಳಿಸಿ, ದೆಹಲಿಗೆ ಬಂದಾಗ ಪ್ರಧಾನಮಂತ್ರಿ ಕಛೇರಿಗೆ ಭೇಟಿ ನೀಡಲು ತಿಳಿಸಿದರು.

   ದೇಶದೆಲ್ಲೆಡೆ ಇಂತಹ ಸಾಕಷ್ಟು ಘಟನೆಗಳು ನಡೆಯುತ್ತಿವೆ. ಇದು ಅದರಲ್ಲಿ ಸಣ್ಣದೊಂದು ಅಷ್ಟೇ. ದೇಶದ ಪ್ರಗತಿಯ ಬಗ್ಗೆ ಸರ್ಕಾರಕ್ಕೆ ಇರುವ ಕಾಳಜಿ, ಅದಕ್ಕಾಗಿ ಸರ್ಕಾರ ಒದಗಿಸುತ್ತಿರುವ ಸಹಕಾರಕ್ಕೆ ಇದೊಂದು ಸಣ್ಣ ಉದಾಹರಣೆಯಷ್ಟೇ. ಇಂತಹ ಘಟನೆಗಳು ನಮ್ಮ ಅಭಿಪ್ರಾಯವನ್ನು ಬದಲಾಯಿಸುವುದಷ್ಟೇ ಅಲ್ಲ, ದೇಶದ ಪ್ರಗತಿಗಾಗಿ, ಇಲ್ಲೊಂದು ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ನಾವೂ ಕೂಡ ಕಾರ್ಯಪ್ರವೃತ್ತರಾಗುವಂತೆ ಪ್ರೇರೇಪಿಸುತ್ತದೆ. ದೇಶ ಒಳಿತಿನೆಡೆ ಸಾಗುತ್ತಿದೆ. ದೇಶ ಬದಲಾಗುತ್ತಿದೆ, ನಿಮ್ಮ ಯೋಚನೆ ಯಾವಾಗ ಬದಲಾಗುತ್ತದೆ?

ಮೂಲ ಲೇಖನ: ಆಶಿಶ್ ಸಾರಡ್ಕ

ಅನುವಾದ: ಶ್ರುತಿ ರಾವ್

Facebook ಕಾಮೆಂಟ್ಸ್

ಲೇಖಕರ ಕುರಿತು

Readoo Staff

Tailored news content, just for you.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!