ಹಳೆಮೈಸೂರು ಪ್ರಾಂತದಲ್ಲಿ ನವರಾತ್ರಿಗೆ ಬೊಂಬೆ ಕೂಡಿಸುವುದೇ ಒಂದು ಉತ್ಸವ. ಬೊಂಬೆಗಳಿಗೂ ಮಾನವನಿಗೂ ಹಿಂದಿನಿಂದಲೂ ಆಪ್ಯಾಯಮಾನ ಸಂಬಂಧವಿದೆ. ನಮ್ಮ ಸಂಸ್ಕೃತಿ, ಸಂಪ್ರದಾಯ ಮಾತ್ರವಲ್ಲದೆ ಬೊಂಬೆಗಳು, ಚಿತ್ರಕಲೆಗಳು ಮನುಷ್ಯನ ಒಳಗಿರುವ ಕಲಾತ್ಮಕ ಗುಣವನ್ನು ಗುರುತಿಸಲು ಮಾಧ್ಯಮವಾಗಿವೆ; ಉದ್ಯೋಗ ಸೃಷ್ಟಿಯ ಪ್ರಮುಖ ಅಂಗವೂ ಆಗಿವೆ. ಆಧುನಿಕೀಕರಣದ ಓಟದಲ್ಲಿ ಕರಕುಶಲ ವಸ್ತುಗಳಿಗೆ ತ್ಸಾಹಿಸುವವರಿಲ್ಲ, ಕೈಯಲ್ಲಿ ತಯಾರಾದ ಬೊಂಬೆಗಳನ್ನು ಕೇಳುವವರಿಲ್ಲ ಎಂದು ಎಲ್ಲರೂ ಹೇಳುತ್ತಿದ್ದರೆ, ಮೈಸೂರಿನ ಜಿ. ರಾಮ್‍ಸಿಂಗ್ ಇದಕ್ಕೆ ಅಪವಾದವಾಗಿ ನಿಲ್ಲುತ್ತಾರೆ. ಕಳೆದ ಐವತ್ತು ವರ್ಷಗಳಿಂದ ಅವರು ಕಲಾವಿದರಿಗೆ, ಶಿಲ್ಪಕುಶಲಿಗಳಿಗೆ, ಚಿತ್ರಕಲಾವಿದರಿಗೆ ಅಪಾರವಾದ ಪೆÇ್ರೀತ್ಸಾಹ ನೀಡುತ್ತ ಬಂದಿದ್ದಾರೆ. ‘ರಾಮ್‍ಸನ್ಸ್ ಕಲಾ ಪ್ರತಿಷ್ಠಾನ’ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿ ಮುನ್ನಡೆಸುತ್ತಿರುವ ರಾಮ್‍ಸಿಂಗ್, ಈ ದೇಶದ ವೈವಿಧ್ಯಮಯ ಬೊಂಬೆ ಸಂಪ್ರದಾಯಗಳನ್ನು ಪರಿಚಯಿಸುವ ದೃಷ್ಟಿಯಿಂದ 2005ರ ದಸರಾದ ಸಂದರ್ಭದಲ್ಲಿ ‘ಬೊಂಬೆ ಮನೆ’ಯನ್ನು ಕೂಡ ಸೃಷ್ಟಿಸಿದ್ದಾರೆ. ಭಾರತದ ಭವ್ಯ ಕಲಾಪರಂಪರೆಯ ಕೊಂಡಿಯಾಗಿ, ಇದನ್ನು ಮುಂದಿನ ಪೀಳಿಗೆಗೆ ದಾಟಿಸುವಲ್ಲಿ ಮಹತ್ತ್ವದ ಪಾತ್ರವನ್ನು ರಾಮ್‍ಸಿಂಗ್ ನಿರ್ವಹಿಸುತ್ತಿದ್ದಾರೆ.
ಮೈಸೂರಿನಲ್ಲಿ ಸುಮನಾ ಮುಳ್ಳುಂಜ ಅವರು ರಾಮ್‍ಸಿಂಗ್, ಆರ್.ಜಿ. ಸಿಂಗ್ ಮತ್ತು ರಘು ಧರ್ಮೇಂದ್ರ ಅವರೊಡನೆ ನಡೆಸಿದ ಮಾತುಕತೆಯ ಪೂರ್ಣಪಾಠ ಇಲ್ಲಿದೆ.
ಪ್ರಶ್ನೆ: ಬೊಂಬೆಗಳ ಉದ್ದಿಮೆ ಮಾಡಬೇಕು, ಇದಕ್ಕೆ ಒಂದು ವಿಶಾಲವಾದ ದೃಷ್ಟಿಕೋನವನ್ನು ಕೊಡಬೇಕು ಎನ್ನುವ ಆಲೋಚನೆ ನಿಮಗೆ ಹೇಗೆ ಬಂತು? ಇದಕ್ಕೆ ಪ್ರೇರಣೆ ಏನು?
ಉತ್ತರ: ಪದವಿ ಅಧ್ಯಯನದ ಬಳಿಕ, ಉದ್ಯೋಗ ಮಾಡುವುದು ಅನಿವಾರ್ಯ. ಸಣ್ಣಕೈಗಾರಿಕೆಯನ್ನು ಮಾಡುವ ಯೋಚನೆ ಮಾಡಿದೆ. ಮೆಷಿನರಿ ಖರೀದಿಸಿ, ‘ಬ್ರಿಲಿಯಂಟ್ ಇಂಡಸ್ಟ್ರಿ’ ಎನ್ನುವ ಹೆಸರಿನಲ್ಲಿ ನಜರ್‍ಬಾದ್‍ನಲ್ಲಿ ಉದ್ದಿಮೆ ಆರಂಭಿಸಿದೆ. ಆಗ ಏನು ಮಾಡಬೇಕು ಎನ್ನುವ ಅರಿವು ಸರಿಯಾಗಿ ಇರಲಿಲ್ಲ. ಮ್ಯಾನುಫಾಕ್ಚರಿಂಗ್ ಮಾಡಬೇಕು, ಹೊಟ್ಟೆಪಾಡು ನಡೆಯಬೇಕು, ಕೆಲಸಗಾರರು ಬೇಕು ಎನ್ನುವುದಷ್ಟೇ ತಲೆಯಲ್ಲಿತ್ತು. ಬಳಿಕ ರೋಟರಿ ಸಂಸ್ಥೆಗೆ ಸೇರಿದ ಸಮಯದಲ್ಲಿ, ಪ್ರಪಂಚ ಸುತ್ತಲು ಆರಂಭಿಸಿದೆ. ಆಗ ಬೊಂಬೆಗಳನ್ನು ಸಂಗ್ರಹಿಸಲು ಶುರುಮಾಡಿದೆ. ಬೊಂಬೆಮನೆಯ ಆರಂಭ ಅಲ್ಲಿಂದ ಶುರುವಾಯಿತು. ಹಲವು ರೀತಿಯ ಕರಕುಶಲವಸ್ತುಗಳು ಇದ್ದರೂ, ಸ್ಥಳೀಯರು ಬೊಂಬೆಗಳ ಮನೆ ಎಂದು ಕರೆಯಲಾರಂಭಿಸಿದರು; ಹೀಗೆ ‘ಬೊಂಬೆಮನೆ’ ಹುಟ್ಟಿಕೊಂಡಿತು.
ನನ್ನ 60ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ, ನನ್ನ ಸೋದರ ಸಂಬಂಧಿ ಎಂ.ಬಿ. ಸಿಂಗ್ ‘ಹೀಗೆ ಮಾಡುತ್ತಾ ಹೋದರೆ ಆಗುವುದಿಲ್ಲ. ಇದಕ್ಕೊಂದು ಸರಿಯಾದ ರೂಪರೇಖೆ ಕೊಡಬೇಕು’ ಎಂದರು. ಅದಕ್ಕಾಗಿ ಒಂದು ಅಸೋಸಿಯೇಷನ್ ಮಾಡಬೇಕು ಎಂದರು. ‘ರಾಮ್‍ಸನ್ಸ್ ಕಲಾ ಪ್ರತಿಷ್ಠಾನ’ ಎನ್ನುವ ಹೆಸರನ್ನೂ ಸೂಚಿಸಿದರು. ರಾಮ್‍ಸನ್ಸ್ – ನಾನು ಮತ್ತು ಮಕ್ಕಳು, ಕಲಾ ಎಂದರೆ ನನ್ನ ಪತ್ನಿ, ಹೀಗೆ ಒಂದು ಟ್ರಸ್ಟ್ ಆರಂಭವಾಯಿತು. ನಾವು ಮನೆಯವರು ಕೆಲವರಲ್ಲದೆ, ಮಾರ್ಗದರ್ಶಕರಾಗಿ ವಿಮಲಾ ರಂಗಾಚಾರ್, ನಲ್ಲಿಯಪ್ಪನ್ ಮುಂತಾದವರು ಇದ್ದರು. 11 ವರ್ಷಗಳ ಹಿಂದೆ, ಕೆಳಗಡೆ ಸೆಲ್ಲರ್‍ನಲ್ಲಿ ಕೆಲಸಗಳು ನಡೆಯುತ್ತಿದ್ದವು. ವ್ಯವಹಾರಕ್ಕೆ ಬಹಳ ಅಡೆತಡೆಗಳು ಉಂಟಾಗುತ್ತಿದ್ದವು. ಅದಕ್ಕಾಗಿ ಇದನ್ನು ನಜರ್‍ಬಾದ್‍ಗೆ ವರ್ಗಾಯಿಸಿದೆವು. ಬೊಂಬೆಮನೆ ಈಗ ಅಲ್ಲಿ ನಡೆಯುತ್ತಿದೆ.
ಪ್ರಶ್ನೆ: ಬೊಂಬೆಗಳು ನಮ್ಮ ಪರಂಪರೆಯ ಕೊಂಡಿಯಾಗಿ ನಿಂತಿವೆ. ಆಧುನಿಕತೆಯಲ್ಲಿ ಕಳೆದುಹೋಗುತ್ತಿರುವ ಪಾರಂಪರಿಕ ಕೌಶಲಗಳ ಪ್ರಸ್ತುತ ಕಾಲಘಟ್ಟದಲ್ಲಿ, ಪರಂಪರೆಯ ಜೊತೆಜೊತೆಗೆ ಬೊಂಬೆಗಳ ನಿರ್ಮಾಣಕೌಶಲವನ್ನು ಮುಂದಿನ ಜನಾಂಗಕ್ಕೆ ದಾಟಿಸುವ ಪ್ರಯತ್ನವನ್ನು ಯಾವ ರೀತಿಯಾಗಿ ಮಾಡುತ್ತಿದ್ದೀರಿ?
ಉತ್ತರ: ವೈಯಕ್ತಿಕವಾಗಿ, ನನಗೆ ಇದು ಬಹಳ ಸಂತೋಷದ ಕಾರ್ಯ. ನಮ್ಮ ಪರಂಪರೆ, ಸಂಸ್ಕೃತಿಯನ್ನು ಬೊಂಬೆಗಳ ಮೂಲಕ ಮುಂದಿನ ಜನಾಂಗಕ್ಕೆ ತಿಳಿಹೇಳುತ್ತಿರುವ ಕಾರ್ಯ ಸಂತೃಪ್ತಿಯನ್ನೂ ಆನಂದವನ್ನೂ ಕೊಡುತ್ತದೆ. ಬೊಂಬೆಮನೆಯಿಂದಾಗಿ ಹಲವಾರು ಜನರಿಗೆ ಕೆಲಸ ಸಿಗುತ್ತಿದೆ. ಸುಮಾರು 2000 ಕುಟುಂಬಗಳಿಗೆ ಮೂರುಹೊತ್ತಿನ ಊಟ ಸಿಗುತ್ತಿದೆ. ಹಲವು ಕಲಾವಿದರನ್ನು ಗುರುತಿಸಿ, ಅಲ್ಲಲ್ಲಿಯೇ ಅವರಿಗೆ ವ್ಯವಸ್ಥೆಗಳನ್ನು ಮಾಡಿಕೊಟ್ಟು, ಅವರಿಂದ ಉತ್ತಮವಾದ ಕಲೆಯು ಮುನ್ನೆಲೆಗೆ ಬರುವಂತೆ ಪ್ರಯತ್ನ ಮಾಡುತ್ತಿದ್ದೇವೆ. ಅತ್ಯಂತ ನಿಷ್ಠಾವಂತ ಕಲಾವಿದರು ನಮ್ಮ ಜೊತೆಗಿದ್ದಾರೆ. ರಘು ಧರ್ಮೇಂದ್ರ ಮತ್ತು ನನ್ನ ಮಗ ಆರ್.ಜಿ. ಸಿಂಗ್ ಈ ಯೋಜನೆಯಲ್ಲಿ ಬಹಳ ಆಸಕ್ತಿಯನ್ನು ವಹಿಸಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಪ್ರಶ್ನೆ: ಆರಂಭದಿಂದ ಇಲ್ಲಿಯ ತನಕ ಬೆಳವಣಿಗೆಯ ಹಾದಿಯಲ್ಲಿ ನಿಮಗೆ ಎದುರಾದಂತಹ ಸಮಸ್ಯೆಗಳು ಯಾವ ರೀತಿಯವು?
ಉತ್ತರ: ಸಮಸ್ಯೆಗಳು ಇದ್ದೇ ಇರುತ್ತವೆ. ಬೆಳೆಯುತ್ತಿದ್ದಂತೆ ಸಮಸ್ಯೆಗಳು ಸಾಮಾನ್ಯ. ಬ್ರಿಲಿಯೆಂಟ್ ಇಂಡಸ್ಟ್ರಿಯನ್ನು ನಾವು ಮುಚ್ಚಿದ ಸಮಯದಲ್ಲಿ, ಕಲಾವಿದರಿಗೆ ಸಮಸ್ಯೆ ಆಗಬಾರದು ಎನ್ನುವ ಉದ್ದೇಶದಿಂದ ಅವರವರು ಕೆಲಸ ಮಾಡುತ್ತಿದ್ದ ಯಂತ್ರಗಳನ್ನು ಅವರವರಿಗೇ ತೆಗೆದುಕೊಂಡು ಹೋಗಲು ಹೇಳಿದೆವು. ‘ನೀವು ತಯಾರು ಮಾಡುವ ಉತ್ಪನ್ನಗಳನ್ನು ನಮಗೆ ತಂದುಕೊಡಿ; ಅದಕ್ಕೆ ಮಾರುಕಟ್ಟೆ ಒದಗಿಸುತ್ತೇವೆ’ ಎನ್ನುವ ಭರವಸೆ ನೀಡಿದ್ದೆವು. ಆಗ 40-45 ಜನ ನಮ್ಮ ಜೊತೆ ಕೆಲಸ ಮಾಡುತ್ತಿದ್ದರು. ಈಗಲೂ ಅವರು ತಮ್ಮ ಉತ್ಪನ್ನಗಳನ್ನು ನಮಗೆ ತಂದುಕೊಡುತ್ತಿದ್ದಾರೆ. ಹೀಗೆ ಸಮಸ್ಯೆಗಳು ಎದುರಾದಾಗ ಸಮರ್ಪಕ ಮಾರ್ಗವನ್ನು ಕಂಡುಕೊಳ್ಳುವ ಪ್ರಯತ್ನಗಳು ಸಾಗುತ್ತಲೇ ಇವೆ. ಇದು ಒಂದು ರೀತಿಯಲ್ಲಿ ನಿರಂತರ ಪ್ರಕ್ರಿಯೆ.
ಪ್ರಶ್ನೆ: ದೇಸೀ ಸೊಗಡನ್ನು ಹೊಂದಿರುವ ಈ ಉದ್ದಿಮೆಗೆ ಜಾಗತೀಕರಣದ ಪ್ರಭಾವ ಎಷ್ಟರ ಮಟ್ಟಿಗೆ ತಟ್ಟಿದೆ? ಅದನ್ನು ಹೇಗೆ ಮೀರಿ ನಿಂತಿದ್ದೀರಿ?
ಉತ್ತರ: ಚೀನೀ ಆಟಿಕೆಗಳು ಮುಖ್ಯವಾಗಿ ಹೊಡೆತವನ್ನು ನೀಡುತ್ತಿವೆ. ಕೈಯಲ್ಲಿ ಮಾಡುವ ಆಟಿಕೆ ತಯಾರಿಕೆಯು ಅಧಿಕಸಮಯವನ್ನು ಬೇಡುತ್ತದೆ, ಯಂತ್ರೋಪಕರಣಗಳ ಬಳಕೆಯಿಂದ ಅರ್ಧಗಂಟೆಯಲ್ಲಿ 20-25 ಆಟಿಕೆಗಳು ತಯಾರಾಗಿರುತ್ತವೆ. ಇದರಿಂದ ಕೈಯಲ್ಲಿ ತಯಾರಿಸಿದ ಆಟಿಕೆಗಳ ಬೆಲೆ ಸಹಜವಾಗಿ ದುಬಾರಿಯಾಗುತ್ತದೆ. ತನ್ಮೂಲಕ ಮಾರಾಟವೂ ಕಷ್ಟವಾಗುತ್ತದೆ. ಒಂದು ಆನೆಯನ್ನು ಮಾಡಲು ನಮ್ಮ ಕಲಾವಿದ ಎರಡು ದಿನ ತೆಗೆದುಕೊಳ್ಳುತ್ತಾನೆ; ಅದೇ ಚೀನಾದ ಆಟಿಕೆ ಕ್ಷಣಮಾತ್ರ ಎನ್ನುವಷ್ಟರಲ್ಲಿ ತಯಾರಾಗಿರುತ್ತದೆ, ತತ್ಫಲವಾಗಿ ಕಡಮೆ ಬೆಲೆಗೆ ಸಿಗುತ್ತದೆ. ಈ ವಿಚಾರದಲ್ಲಿ ಸ್ಪರ್ಧೆಯನ್ನು ನಿಭಾಯಿಸುವುದು ಸ್ವಲ್ಪ ಕಷ್ಟವೇ ಆಗಿದೆ. ಆದರೆ ಎದುರಿಸುವ ಛಲವನ್ನು ನಾವು ಬಿಟ್ಟಿಲ್ಲ; ಹಾಗೆಯೇ ಕಲೆಯು ನಿತ್ಯನಿರಂತರ. ಆದ್ದರಿಂದ ಕಲೆಗೆ ಪ್ರೋತ್ಸಾಹ ನಿಲ್ಲಿಸಿಲ್ಲ, ನಿಲ್ಲುವುದಿಲ್ಲ.
ಪ್ರಶ್ನೆ: ಇಂತಹದ್ದೇ ಉದ್ದಿಮೆಯು ಭಾರತದ ಬೇರೆಡೆಗಳಲ್ಲಿ ಇವೆಯೇ? ಅವರ ಜೊತೆಗಿನ ನಿಮ್ಮ ಸಂಬಂಧಗಳು ಹೇಗಿವೆ? ನಿಮ್ಮಲ್ಲಿನ ವಿಭಿನ್ನತೆ ಏನು?
ಉತ್ತರ: ಇವೆ. ಮೊದಲು ನಾನು ಭಾರತದ ಎಲ್ಲೆಡೆ ಹೋಗಿ ಬೊಂಬೆಗಳನ್ನು ಸಂಗ್ರಹಿಸಿಕೊಂಡು ಬರುತ್ತಿದ್ದೆ. ವಿದೇಶೀಯರನ್ನೇ ಗಮನದಲ್ಲಿಟ್ಟುಕೊಂಡು ಸಂಗ್ರಹ ಮಾಡುತ್ತಿದ್ದೆ. ಈಗ ಸ್ಥಳೀಯರಿಗೂ ಬೊಂಬೆಗಳು, ಕರಕುಶಲ ವಸ್ತುಗಳು ಸಿಗುವಂತೆ ವ್ಯವಸ್ಥೆ ಮಾಡಿದ್ದೇವೆ. ನಮ್ಮ ವಿಶೇಷತೆ ಎಂದರೆ, ಸುಮಾರು 17 ರಾಜ್ಯಗಳ ಕರಕುಶಲ ವಸ್ತುಗಳು, ಬೊಂಬೆಗಳನ್ನು ಆಯಾ ಪ್ರದೇಶಗಳಿಂದ, ಅಲ್ಲಿನ ಕಲಾವಿದರಿಂದ ಮಾಡಿಸಿ ತೆಗೆದುಕೊಂಡು ಬರುತ್ತೇವೆ. ನೈಜತೆಯನ್ನು ಕಳೆದುಕೊಳ್ಳದಂತೆ ಕಾಪಿಟ್ಟು ಮುಂದಿನ ಪೀಳಿಗೆಗೆ ದೇಸೀ ಸೊಗಡನ್ನು ದಾಟಿಸುವ ಪ್ರಯತ್ನವೇ ನಮ್ಮ ವಿಭಿನ್ನತೆ ಎನ್ನಬಹುದು.
ಪ್ರಶ್ನೆ: ನಮ್ಮ ಪಾರಂಪರಿಕ ಕಲೆಯನ್ನು ದೊಡ್ಡಮಟ್ಟದಲ್ಲಿ ಬಿಂಬಿಸುವ ನಿಮ್ಮ ಪ್ರಯತ್ನಕ್ಕೆ ಜನರ ಪ್ರತಿಕ್ರಿಯೆ, ಪ್ರೋತ್ಸಾಹ ಯಾವ ರೀತಿ ಇದೆ?
ಉತ್ತರ: ಚೆನ್ನಾಗಿದೆ. ಕರಕುಶಲ ವಸ್ತುಗಳಿಗೆ, ಬೊಂಬೆಗಳಿಗೆ ಸಾಂಪ್ರದಾಯಿಕ ಮಹತ್ತ್ವವಿದೆ. ಇನ್ನು ವಿದೇಶೀಯರಿಗೆ ನಮ್ಮ ಕಲೆಯ ಮೇಲೆ ವಿಶೇಷವಾದ ಆಸಕ್ತಿ ಇದೆ. ಸಾಧಾರಣವಾಗಿ ಡಿಸೆಂಬರ್‍ನಿಂದ ಮಾರ್ಚ್ ತನಕ ವಿದೇಶೀಯರು ಇಲ್ಲಿಗೆ ಬಂದು, ಹಲವು ವಿಧದ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು, ಬೊಂಬೆಗಳನ್ನು ಕೊಂಡುಕೊಳ್ಳುತ್ತಾರೆ. ನಮ್ಮ ಕಲಾವೈವಿಧ್ಯವನ್ನು ಕಂಡು ಅವರು ಬೆರಗಾಗುತ್ತಾರೆ.
ಪ್ರಶ್ನೆ: ದೇಶೀಯ ಆಟಗಳನ್ನು ನಿಮ್ಮ ಆರ್ಟ್ ಗ್ಯಾಲರಿಯಲ್ಲಿ ಅಳವಡಿಸಿಕೊಂಡಿದ್ದೀರಿ ಹಾಗೂ ಹಲವು ಹೊಸ ಆಟಗಳ ಡಿಸೈನ್ ಕೂಡಾ ಮಾಡುತ್ತಿದ್ದೀರಿ. ಇದನ್ನು ಕುರಿತು ಸ್ವಲ್ಪ ವಿವರಿಸುವಿರಾ?
ಉತ್ತರ: ಇದು ನಮ್ಮ ರಘು ಧರ್ಮೇಂದ್ರ ಮತ್ತು ನನ್ನ ಮಗ ಆರ್.ಜಿ. ಸಿಂಗ್ ಅವರ ಕನಸಿನ ಪ್ರಾಜೆಕ್ಟ್. ಅವರ ಪರಿಕಲ್ಪನೆಯಲ್ಲಿ ಮೂಡಿಬರುತ್ತಿರುವ ಈ ದೇಶೀಯ ಆಟಗಳನ್ನು ಕುರಿತು ಅವರೇ ಉತ್ತರ ನೀಡಲು ಸಮರ್ಥರು.
ಆರ್.ಜಿ. ಸಿಂಗ್ ಉತ್ತರ: ನನ್ನಲ್ಲಿ ಇದ್ದ ಒಂದೇ ಒಂದು ಪ್ರಶ್ನೆ ಎಂದರೆ, ನಮ್ಮ ಹಿರಿಯರು ಸಮಯವನ್ನು ಯಾವ ರೀತಿಯಾಗಿ ಕಳೆಯುತ್ತಿದ್ದರು, ಮನೋರಂಜನೆಗೆ ಏನು ಮಾಡುತ್ತಿದ್ದರು ಎನ್ನುವುದಾಗಿತ್ತು. ಕೃಷಿ ಮತ್ತು ಇತರ ಕೆಲಸಕಾರ್ಯಗಳು ಎಷ್ಟೇ ಮಾಡಿದರೂ ಮನುಷ್ಯನಿಗೆ ಆರಾಮಾಗಿ ಕಳೆಯಲು ಒಂದಿಷ್ಟು ಸಮಯ ಮಿಕ್ಕಿರುತ್ತದೆ. ಆ ಸಮಯದಲ್ಲಿ ಇವರ ಚಟುವಟಿಕೆಗಳು ಏನಿದ್ದಿರಬಹುದು ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತ ಹೊರಟಾಗ ಸಿಕ್ಕಿದ್ದೇ ಈ ಹಾಸು ಆಟಗಳು (ಬೋರ್ಡ್ ಗೇಮ್ಸ್). ಇದು 25 ವರ್ಷಗಳ ಹಿಂದೆ ಬಂದ ಆಲೋಚನೆ. ನೂರು ವರ್ಷಗಳಿಗಿಂತ ಪುರಾತನವಾದ ಯಾವುದೇ ದೇವಸ್ಥಾನಕ್ಕೆ ಹೋದಾಗ ಅಲ್ಲಿನ ನೆಲ, ಜಗುಲಿಗಳನ್ನು ಗಮನಿಸಿ. ಕಲ್ಲುಚಪ್ಪಡಿಯನ್ನು ಸಣ್ಣಗೆ ಕೊರೆದು ರಚಿಸಲಾದ ಅಳಿಗುಳಿಮಣೆಯಾಟದ ಗುಳಿಗಳು, ಹುಲಿಕಟ್ಟಿನಾಟ, ಸಾಲುಮನೆಯಾಟ ಮುಂತಾದ ಆಟಗಳ ನಕ್ಷೆಯನ್ನು ಕಾಣಬಹುದು. ದೇವಸ್ಥಾನಗಳಲ್ಲಿ ಮಾತ್ರವಲ್ಲದೆ, ನದೀಘಟ್ಟಗಳಲ್ಲಿ, ಹೆದ್ದಾರಿಗಳ ಪಕ್ಕದ ಕಟ್ಟೆಗಳಲ್ಲಿ, ಹಳೆಯ ಕಲ್ಲುಮಂಟಪಗಳು, ಬೆಟ್ಟದ ಮೆಟ್ಟಿಲುಗಳು, ಹಳೆಯ ಮನೆಗಳ ಜಗುಲಿಗಳಲ್ಲೂ ಆಟಗಳು ಹೇರಳವಾಗಿದ್ದವು ಎನ್ನುವುದಕ್ಕೆ ಸಾಕ್ಷಿಗಳು ದೊರೆಯುತ್ತವೆ. ಇಂತಹ ಹಲವು ಕಡೆಗಳಿಗೆ ಹೋಗಿ, ಸಂಶೋಧನೆ ನಡೆಸಿ ಆಟಗಳನ್ನು ಜೀವಂತವಾಗಿಡುವ ಪ್ರಯತ್ನ ನಮ್ಮದು. ಆಟದ ಹಾಸುಗಳು, ನಡೆಸುವ ಕಾಯಿಗಳು, ಜೊತೆಗೆ ಪ್ರತಿಷ್ಠಾನ ನೀಡುವ ಹೊಸ ಆಕರ್ಷಕ ವಿನ್ಯಾಸಗಳನ್ನು ಆಧರಿಸಿ ರಚಿಸುವವರು ಹಸ್ತಶಿಲ್ಪಿಗಳು. ಇದರಲ್ಲಿ ಪೂರ್ಣಾವಧಿಯಲ್ಲಿ ತೊಡಗಿಸಿಕೊಂಡ ಕುಟುಂಬಗಳು ಸುಮಾರು 100ಕ್ಕೂ ಹೆಚ್ಚಿವೆ. ‘ಕ್ರೀಡಾಕೌಶಲ್ಯ’ ಎನ್ನುವ ಹೆಸರಿನಲ್ಲಿ ಇದನ್ನು ಮುಂದುವರಿಸಿಕೊಂಡು ಬಂದಿದ್ದೇವೆ. ಇದರ ಕುರಿತಾಗಿ ಹಲವು ಕಡೆಗಳಲ್ಲಿ ಸೆಮಿನಾರ್‍ಗಳು ನಡೆಯುತ್ತವೆ. ವಿದೇಶಗಳಲ್ಲೂ ನಡೆಯುತ್ತಿರುತ್ತವೆ. ಆದರೆ ಎಲ್ಲಿಗೂ ನಮ್ಮ ಆಟಿಕೆಗಳನ್ನು ನಾನು ತೆಗೆದುಕೊಂಡು ಹೋಗುವುದಿಲ್ಲ. ಕಲೆಯನ್ನು, ನಮ್ಮ ಹಿಂದಿನ ಜನರ ಕೌಶಲವನ್ನು ವ್ಯಾವಹಾರಿಕ ಪ್ರಪಂಚದ ಜೊತೆಗೆ ಸೇರಿಸುವುದು, ಅಲ್ಲಿ ಜಾಹೀರಾತು ನೀಡುವುದು ನನಗೆ ಇಷ್ಟವಿಲ್ಲ. ನಮ್ಮ ಸಂಸ್ಥೆಯಲ್ಲಿ ಈ ಎಲ್ಲ ಆಟಗಳನ್ನು ಆಡುವ ಹಾಸುಗಳು ಲಭ್ಯವಿವೆ; ಆಸಕ್ತಿಯಿದ್ದರೆ ಬಂದು ಕೊಂಡುಕೊಳ್ಳಬಹುದೇ ಹೊರತು, ಸೆಮಿನಾರ್‍ಗಳಲ್ಲಿ ನಾವು ನಮ್ಮ ವ್ಯಾವಹಾರಿಕ ಪ್ರಪಂಚಕ್ಕೆ ಆದ್ಯತೆ ನೀಡುತ್ತಿಲ್ಲ. ಕಲೆ, ಸಂಪ್ರದಾಯಗಳು ಎಂದಿದ್ದರೂ ಶ್ರೇಷ್ಠವಾದವು, ಬೆಲೆ ಕಟ್ಟಲಾಗದವು.
ಪ್ರಶ್ನೆ: ಕಲಾವಿದರ, ಶಿಲ್ಪಕುಶಲಿಗಳ ಗುರುತಿಸುವಿಕೆ, ಅವರಿಗೆ ಪ್ರೋತ್ಸಾಹ ನೀಡುವ ಪ್ರಕ್ರಿಯೆ ಹೇಗಿರುತ್ತದೆ? ತನ್ಮೂಲಕ ಉದ್ಯೋಗಸೃಷ್ಟಿಗೆ ಹೇಗೆ ಹಾದಿ ಮಾಡಿಕೊಡುತ್ತಿದ್ದೀರಿ?
ಉತ್ತರ: ನಮ್ಮಲ್ಲಿ ಕಲಾಮಾಧ್ಯಮವು ನಿರಂತರವಾಗಿ ಎರಡು ಸಾವಿರ ಕುಟುಂಬಗಳಿಗೆ, ಅಂದರೆ, ಸುಮಾರು ಐದುಸಾವಿರ ಜನರಿಗೆ ಜೀವನದ ದಾರಿಯಾಗಿದೆ. ನಮ್ಮ ಟ್ರಸ್ಟ್‍ನಿಂದ ಅವರಿಗೆ ಪ್ರಾಯೋಜಕತ್ವವನ್ನು ನೀಡುತ್ತೇವೆ. ಇದು ಒಂದು ಲಕ್ಷ ರೂ.ಗಳಿಂದ ಆರಂಭವಾಗಿತ್ತು; ಕಳೆದ ವರ್ಷ 10 ಲಕ್ಷ ರೂ.ಗಳ ಪ್ರಾಯೋಜಕತ್ವವನ್ನು ನೀಡಿದ್ದೇವೆ. ಅತ್ಯಂತ ಸಮರ್ಪಿತ ಕಲಾವಿದರು ನಮ್ಮ ಈ ಪಯಣದಲ್ಲಿ ಜೊತೆಯಾಗಿದ್ದಾರೆ. ಕಲಾವಿದರನ್ನು ಗುರುತಿಸಲು ‘ಶಿಲ್ಪಶ್ರೀ ಅವಾರ್ಡ್’ ಎಂದು ಶುರುಮಾಡಿದಾಗ, ರಾಷ್ಟ್ರೀಯ ಮಟ್ಟದಲ್ಲಿ ಹತ್ತು ಸಾವಿರ ರೂಪಾಯಿಗಳ ಮೊತ್ತವನ್ನು ನೀಡಲಾಗುತ್ತಿತ್ತು. ನಾವು ಇಪ್ಪತ್ತೈದು ಸಾವಿರ ರೂ. ಕೊಡಲು ಆರಂಭಿಸಿದೆವು. ನಮ್ಮ ಈ ನಡೆ ಸರ್ಕಾರದ ಕೆಂಗಣ್ಣಿಗೆ ಗುರಿಯಾಯಿತು. ನಮ್ಮ ಉದ್ದಿಮೆಯಲ್ಲಿ ಬಂದ ಹಣದಲ್ಲೇ ಇದನ್ನು ನೀಡುತ್ತಿದ್ದೆವು. ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎನ್ನುವುದೇ ಇದರ ಹಿಂದಿನ ಉದ್ದೇಶವಾಗಿತ್ತು. ನಮ್ಮಲ್ಲಿ ಶ್ರೀಗಂಧದಿಂದ ಕೆತ್ತಿದ ಗಣಪತಿಯ ಮೂರ್ತಿ ಇದೆ. ನೀವು ನೋಡಿರಬಹುದು. ಅದನ್ನು ಕೆತ್ತಿದವನು ಪೆÇೀಲಿಯೋ ಪೀಡಿತ ಕಲಾವಿದ. ಆತನಿಗೆ ‘ಶಿಲ್ಪಶ್ರೀ ಅವಾರ್ಡ್’ನಲ್ಲಿ ಬಹುಮಾನ ಬಂದಿತ್ತು. ಆ ಸಲ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದೆವು. ಆಗ ನಾವು ಹೇಳಿದ್ದಿಷ್ಟು – “ವಸ್ತುಪ್ರದರ್ಶನ 15 ದಿನಗಳ ಕಾಲ ಮಾಡುತ್ತೇವೆ. ಪ್ರದರ್ಶನದಲ್ಲಿ ನೀವು ಮಾರಾಟ ಮಾಡುವುದರಿಂದ ಸಿಗುವ ಹಣವನ್ನು ಪೂರ್ತಿಯಾಗಿ ನೀವೇ ತೆಗೆದುಕೊಳ್ಳಬಹುದು. ಒಂದೇ ಒಂದು ಪೈಸೆಯನ್ನೂ ನಾವು ತೆಗೆದುಕೊಳ್ಳುವುದಿಲ್ಲ.” ಅಲ್ಲಿಗೆ ಈ ಗಣಪತಿ ಮೂರ್ತಿಯನ್ನು ತೆಗೆದುಕೊಂಡು ಬಂದಾಗ, ‘ನೀನು ಇದನ್ನು ಪ್ರದರ್ಶನದಲ್ಲಿ ಇಡು. ನೀನು ಈ ಮೂರ್ತಿಗೆ ಎಷ್ಟು ಬೆಲೆ ಇಟ್ಟಿದ್ದೀಯ?’ ಎಂದು ಕೇಳಿದೆ. ಒಂದು ಲಕ್ಷ ರೂ. ಎಂದ. ‘ನೀನು ಪ್ರದರ್ಶನದಲ್ಲಿ ಇಡು, ವ್ಯಾಪಾರ ಆಗದೇ ಇದ್ದರೆ ನಾವು ತೆಗೆದುಕೊಳ್ಳುತ್ತೇವೆ’ ಎಂದೆ. ಹೀಗೆ ಕಲಾವಿದರಿಗೆ ಪ್ರೋತ್ಸಾಹ ನೀಡುವುದು ನಮಗೆ ಎಂದಿಗೂ ನೆಮ್ಮದಿ, ಸಂತೋಷ ಕೊಡುವ ವಿಚಾರವಾಗಿದೆ.
ನಮ್ಮಲ್ಲಿ ನಿತ್ಯ ಕೆಲಸ ಮಾಡುತ್ತಿರುವವರಿಗೆ ಕಾನೂನಿನ ಚೌಕಟ್ಟಿನ ಒಳಗೆ ಯಾವೆಲ್ಲ ಸೌಲಭ್ಯಗಳನ್ನು ಕೊಡಬಹುದೋ ಅವನ್ನೆಲ್ಲ ಕೊಡುವ ವ್ಯವಸ್ಥೆ ಮಾಡಿದ್ದೇವೆ. ಪಿ.ಎಫ್., ಇನ್ಶುರೆನ್ಸ್ ಮುಂತಾದ ವ್ಯವಸ್ಥೆ ಮಾಡಿದ್ದೇವೆ. ಕೆಲಸಗಾರರಿಗೆ ಸಂತೋಷವಿದೆ, ನಮಗೆ ತೃಪ್ತಿ ಇದೆ.
ಕಲಾವಿದರಿಗೆ ಬೇಕಾಗುವ ಕಚ್ಚಾವಸ್ತುಗಳನ್ನು ನೀಡುವ ವ್ಯವಸ್ಥೆಯನ್ನೂ ಮಾಡುತ್ತೇವೆ. ಮಾರುಕಟ್ಟೆ ಒದಗಿಸುತ್ತೇವೆ. ಚೆನ್ನಾಗಿ ಮಾಡಿದರೆ ನಮ್ಮಲ್ಲಿ ಬೆಲೆ ಸಿಗುತ್ತದೆ ಎನ್ನುವ ಭರವಸೆಯನ್ನು ಕಲಾವಿದರು ಬೆಳೆಸಿಕೊಂಡಿದ್ದಾರೆ. ಅವರ ನಂಬಿಕೆಯನ್ನು ನಾವು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಇನ್ನು ಮಹಿಳೆಯರಿಗೆ ಹಲವು ವಿಶೇಷ ಆಸಕ್ತಿಗಳು ಇರುತ್ತವೆ: ಕಸೂತಿ, ಚಿತ್ರಕಲೆ ಮುಂತಾದವು. ಹಲವರಿಗೆ ಮದುವೆ ಆದ ಮೇಲೆ ಅವಕಾಶ ಕಡಮೆಯಾಗುತ್ತದೆ ಅಥವಾ ಯಾವ ಮಾರ್ಗದಲ್ಲಿ ಸಾಗಬೇಕು ಎನ್ನುವ ಗೊಂದಲವಿರುತ್ತದೆ. ಅಂತಹವರಿಗೆ ಮಾರ್ಗದರ್ಶನ ಮಾಡುತ್ತೇವೆ; ವೇದಿಕೆ ಸೃಷ್ಟಿಸುವ ಪ್ರಯತ್ನ ಮಾಡುತ್ತೇವೆ. ಏಕವ್ಯಕ್ತಿ ಪ್ರದರ್ಶನಕ್ಕೂ ನಮ್ಮಲ್ಲಿ ವ್ಯವಸ್ಥೆ ಮಾಡುತ್ತಿದ್ದೇವೆ. ಏನು ಸಂಪಾದನೆ ಮಾಡಿದ್ದೇವೆಯೋ, ಮಾಡುತ್ತಿದ್ದೇವೆಯೋ ಎಲ್ಲವೂ ಇಲ್ಲಿಯೇ ಇದೆ. ಆಗಲೇ ಹೇಳಿದಂತೆ ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎನ್ನುವುದನ್ನು ಪಾಲಿಸುತ್ತಿದ್ದೇವೆ. ಈ 50 ವರ್ಷಗಳ ಪಯಣ ಸಾರ್ಥಕವಾಗಿದೆ ಎನ್ನುವ ನಂಬಿಕೆ ನಮ್ಮದು. ಸಂತೋಷ ಎಂದರೆ ಇಷ್ಟೊಂದು ಜನರಿಗೆ ಕೆಲಸ ಸಿಗುತ್ತಿದೆ ಎನ್ನುವುದೇ ಆಗಿದೆ.
ಪ್ರಶ್ನೆ: ಕರಕುಶಲ ಉದ್ದಿಮೆಯನ್ನು ‘ರಾಮ್‍ಸನ್ಸ್ ಕಲಾ ಪ್ರತಿಷ್ಠಾನ’ ಎನ್ನುವ ಹೆಸರಿನಲ್ಲಿ ಅನನ್ಯ ಆರ್ಟ್ ಗ್ಯಾಲರಿಯನ್ನಾಗಿ ನಿರ್ಮಿಸುವ ಹಾದಿಯಲ್ಲಿ ನಿಮಗೆ ಎಂ.ಬಿ. ಸಿಂಗ್ ಅವರ ಪ್ರೋತ್ಸಾಹ, ಕೊಡುಗೆ ಹೇಗಿತ್ತು?
ಉತ್ತರ: ಎಲ್ಲವೂ ಅವರ ಯೋಚನೆಯ ಫಲವಾಗಿದೆ. ನಾನು ಮೂಲತಃ ವ್ಯಾವಹಾರಿಕ ಮನುಷ್ಯ. ಆದರೆ ಸಮಾಜಕ್ಕೆ ಯಾವ ರೀತಿಯಾಗಿ ಸೇವೆ ಸಲ್ಲಿಸಬೇಕು, ಕಲೆಯನ್ನು ಹೇಗೆ ಉಳಿಸಿ ಬೆಳೆಸಬೇಕು ಎನ್ನುವ ಕಲ್ಪನೆಯನ್ನು ಕಟ್ಟಿಕೊಟ್ಟವರು ಎಂ.ಬಿ. ಸಿಂಗ್ ಅವರು. ನಮ್ಮ ಪ್ರತಿಷ್ಠಾನದ ಹೆಸರು ಕೂಡ ಅವರದ್ದೇ ಕಲ್ಪನೆ. ಪ್ರತಿಷ್ಠಾನದಲ್ಲಿ ಎಂತಹ ವ್ಯಕ್ತಿಗಳು ಇರಬೇಕು, ಯಾರನ್ನೆಲ್ಲ ಸಂಪರ್ಕಿಸಬೇಕು ಎಲ್ಲವೂ ಅವರ ಮಾರ್ಗದರ್ಶನದಲ್ಲಿ ನಡೆಯಿತು. ನಾವು ಜೊತೆಯಾಗಿ ಹುಟ್ಟಿಬೆಳೆದವರು. ನನ್ನ ಮಾರ್ಗದರ್ಶಕರಾಗಿ ನಿಂತವರು ಅವರು.
ಮೂಲ: ‘ಉತ್ಥಾನ’ ಮಾಸಪತ್ರಿಕೆ
ಚಿತ್ರ: ಶ್ರೀ ಕೇಶವ ಭಟ್ ಕಾಕುಂಜೆ, ಸಂಪಾದಕರು ಉತ್ಥಾನ ಮಾಸಪತ್ರಿಕೆ
Facebook ಕಾಮೆಂಟ್ಸ್