Disc web spiders (Oecobiidae)/ ಚಕ್ರ ಜೇಡ.
ಕಳೆದ ಸಂಚಿಕೆಯಲ್ಲಿ ಕಂಡ ಎರಡುಬಾಲದ ಜೇಡವು ಆ ಮಣ್ಣಿನ ಮನೆಯ ಒಡೆಯರು ಗಮನಿಸಿರಲಿಲ್ಲ. ಆದರೆ ಈಗ ನಾನು ಪರಿಚಯಿಸುವ ಜೇಡ ನನ್ನ ಅರಿವಿಗೆ ಬಂದದ್ದೂ ಇತ್ತೀಚೆಗೆ.. ವರ್ಷದ ಹಿಂದಿನವರೆಗೂ ಹೀಗೊಂದು ಜೇಡವಿದೆಯೆಂದೂ ಗೊತ್ತಿರಲಿಲ್ಲ! ಹಾಗೆಂದು ಇದು ಅಪರೂಪದ ಜೇಡವಂತೂ ಅಲ್ಲ. ನಮ್ಮ ಮನೆಯ ಗೋಡೆಯಲ್ಲಿ ಎರಡುಬಾಲದ ಜೇಡಗಳಿಗಿಂತಲೂ ಇವು ಹೆಚ್ಚಿನ ಸಂಖ್ಯೆಯಲ್ಲಿವೆ. ಇದು Oecobiidae ಕುಟುಂಬಕ್ಕೆ ಸೇರಿದ ಜೇಡ. ಎರಡು ಬಾಲದ ಜೇಡವು ತಮ್ಮ ಮೊಟ್ಟೆಯನ್ನು ಸುರಕ್ಷಿತವಾಗಿಡಲು ಗೋಡೆಯಲ್ಲಿ ಬಲೆಯಿಂದ ಸುರಕ್ಷಾಕವಚವನ್ನು ಮಾಡುತ್ತದೆ, ಆದರೆ ವಾಸಿಸಲು ಬಲೆಯ ಅವಲಂಬನೆಯಿಲ್ಲ. ಈ Oecobiidae ಕುಟುಂಬದ ಜೇಡ ತಮ್ಮ ವಾಸಕ್ಕೆ ಗೋಡೆಯ ಮೇಲೊಂದು ಬಲೆಯಿಂದ ಮನೆ ಮಾಡುತ್ತದೆ. ಆದರೂ ಈ ಜೇಡ ನನ್ನ ಗಮನ ಸೆಳೆಯಲಿಲ್ಲ!
ವರ್ಷದ ಹಿಂದೆ ನಮ್ಮ ಮನೆಯ ಗೋಡೆಯಲ್ಲಿದ್ದ ಇಂಡೋ ಜಿಶ್ಟಿಕಸ್ (indo xysticus) ಎಂಬ ಏಡಿಜೇಡ ನನ್ನ ಗಮನ ಸೆಳೆದಿತ್ತು. ಈ ಏಡಿ ಜೇಡವೂ ವರ್ಣತಾದ್ರೂಪಿಯೇ. ಅದರೂ ಅದು ಗೊಡೆಯ ಮೇಲೆ ಚಲಿಸುತ್ತಿದ್ದ ಕಾರಣ ನನಗದರ ಇರುವಿಕೆ ತಿಳಿದಿತ್ತು. ಈ ಏಡಿಜೇಡನನ್ನು ಕೂಡಾ ನಾನು ಅಂದು ಪ್ರಥಮ ಬಾರಿಗೆ ಕಂಡದ್ದು. ಪುಳಕಿತನಾಗಿದ್ದೆ, ಓಡಿ ಹೋಗಿ ನನ್ನ ಕ್ಯಾಮೆರಾವನ್ನು ತಂದು ಅದರ ಛಾಯಾಚಿತ್ರ ತೆಗೆಯುವಲ್ಲಿ ಮಗ್ನನಾಗಿದ್ದೆ. ಆ ಏಡಿ ಜೇಡನ ಸುತ್ತ,ಸತ್ತ ಇರುವಿಗೆಗಳು ಬಲೆಯಲ್ಲಿ ಅಂಟಿದ್ದವು! ಅರೆ ಈ ಏಡಿ ಜೇಡ ಇಷ್ಟೊಂದು ಇರುವೆಗಳನು ಕಬಳಿಸಿದೆಯೇ? ಇರಲಾರದು, ಇದು ಚಲನೆಯಲ್ಲಿದ್ದ ಜೇಡ.ನಾನು ಕ್ಯಾಮೆರಾ ತರುವ ಮೊದಲಿದ್ದ ಜಾಗವೇ ಬೇರೆ, ಈಗಿರುವ ಜಾಗವೇ ಬೇರೆ. ಹಾಗದರೆ ಈ ಇರುವೆಗಳ ಸಾವಿಗೆ ಕಾರಣವೇನು? ತೆಗೆದ ಫೋಟೋಗಳನ್ನು ಹಿಗ್ಗಿಸಿ ನೋಡಿದೆ . ಅರೆ ಆಶ್ಚರ್ಯ! ಆ ಇರುವೆಗಳ ಪಕ್ಕದಲ್ಲೇ ಹತ್ತಿಯ ಮುದ್ದೆ. ಈ ಹತ್ತಿಯು ಜೇಡನ ಮನೆ ಎಂದು ನನ್ನ ಜೇಡಾಸಕ್ತ ಮನಕ್ಕೆ ಪಕ್ಕನೆ ಹೊಳೆಯಿತು. ಚ್ಯವನ ಮುನಿಯನ್ನು ಕೆಣಕಿದಂತೆ, ಆ ಹತ್ತಿಯ/ಬಲೆಯ ಮುದ್ದೆಯನ್ನು ಸಣ್ಣ ಹಿಡಿಸುಡಿ ಕಡ್ಡಿಯಿಂದ ಕೆಣಕಿದೆ. ಅದೊರೊಳಗಿಂದ ಊರ್ಣನಾಭಿಯೊಂದು ರಪಕ್ಕನೆ ಹೊರ ಬಂತು. ನನ್ನ ಜಾಗರೂಕತೆಯ ಕಾರಣವೋ, ಜೇಡ ಪ್ರೀತಿಯ ಫಲವೋ ಏನೋ, ಆ ಜೇಡನ ಕಣ್ಣಿಗೆ ಕುತ್ತಲಿಲ್ಲ. ಅದು ನನಗೆ ಶಪಿಸಲಿಲ್ಲ!
ಆ ಜೇಡ ಹೊರಬಂದಷ್ಟೇ ವೇಗದಲ್ಲಿ ನನ್ನ ಕ್ಯಾಮೆರಾ ಪರದೆಗಳೂ ರಪರಪನೆ ಅದರ ಚಲನವನ್ನು ಚಿತ್ರಿಸಿತ್ತು. ಎರಡು ಜೇಡಗಳು ಒಂದೇ ಚೌಕಟ್ಟಿನಲ್ಲಿ ಸೆರೆಯಾಗಿತ್ತು. ನನಗಂತೂ ಎರಡೆರಡು ಪ್ರಥಮಗಳ ದರ್ಶನವಾಗಿತ್ತು.
ಹೊರಬಂದ ಜೇಡದ ಪರಿಚಯ ನನಗಂತೂ ಇರಲಿಲ್ಲ. ಸರಿಯಾಗಿ ನೋಡೋಣವೆಂದರೆ ಒಂದೆಡೆ ಕೂರುತ್ತಿರಲಿಲ್ಲ. ಆದಿನದವರೆಗಿನ ಜೇಡಗಳ ಅನುಭವದಲ್ಲಿ ಅಷ್ಟು ವೇಗವಾಗಿ ಓಡಬಲ್ಲ ಇನ್ನೊಂದು ಜೇಡವನ್ನು ನೋಡಿರಲಿಲ್ಲ. ಅದು ಒಂದು ಓಟದಲ್ಲಿ ಎರಡರಿಂದ ಮೂರು ಅಡಿ ಓಡುತ್ತಿತ್ತು. ಮಿಂಚಿನ ಓಟ. ಎಲ್ಲಿ ಹೋಯಿತೆಂದೇ ತಿಳಿಯುತ್ತಿರಲಿಲ್ಲ. ನನ್ನ ಕಣ್ಣನ್ನು ಇನ್ನಷ್ಟು ಸೂಕ್ಷ್ಮ ಮಾಡಿ ನೋಡಿದೆ. ಹಾಂ ಕಂಡಿತು. ಈ ಜೇಡೆ, ಅಡಿಗಡಿಗೆ ಒಂದು ಹತ್ತಿಯ ಮುದ್ದೆ ಮಾಡುತ್ತದೆ. ಒಂದೊಕ್ಕೊಂದಕ್ಕೆ ಏನೋ ಸಂಪರ್ಕವಿದೆ. ಅಲ್ಲಿಂದ ಮತ್ತೆ ಓಡಿಸಿದೆ, ಇನ್ನೊಂದು ಬಲೆಯ ಉಂಡೆಯತ್ತ ಸಾಗಿತು. ಸತತ ಮೂರು ಮನೆಗಳನ್ನು ಬದಲಿಸಿದ ನಂತರ ಅದು ದಿಕ್ಕಾಪಾಲಾಗಿ ಓಡಿತು. ಬಹುಶಃ ಅದರ ಪರಿಧಿಯಿಂದ ಹೊರಬಂದಿತ್ತು. ದಿಕ್ಕೇ ತೋಚದಾಗಿತ್ತು. ಮತ್ತೆ ಅದಕ್ಕೆ ಕಾಟ ಕೊಟ್ಟು ಅದರ ಪರಿಧಿಯಲ್ಲಿದ್ದ ಒಂದು ಮನೆಯ ಹತ್ತಿರ ಸೇರಿಸಿದೆ. ಮೊದಲು ಶಾಪ ಕೊಡದ ಆ ಜೇಡ ಈಗ ಶಾಪಕೊಟ್ಟಿತೋ, ಅಥವಾ ಕುತೂಹಲಕ್ಕೆಂದು ಉಪದ್ರಕೊಟ್ಟ ಎಂದು ಸುಮ್ಮನೆ ಬಿಟ್ಟಿತೋ ಗೊತ್ತಿಲ್ಲ.
ಈ ಜೇಡನ ಮನೆಯೇ ವಿಶೇಷ. ಪ್ರತಿ ಮನೆಯ ಹೊರಗೆ ಇರುವೆಗಳ ಅಸ್ತಿಪಂಜರಗಳು. ಈ ಇರುವೆಗಳ ಹೊರಕವಚವು ಈ ಜೇಡ ಕಳೆದವಾರವಿಡೀ ತಿಂದ ಆಹಾರದ ಸಂಗ್ರಹ! ಜೇಡಗಳು ನಮ್ಮ ನಿಮ್ಮಂತೆ ಆಹಾರವನ್ನು ಜಗಿದು ತಿನ್ನುವುದಿಲ್ಲ. ತಾವು ಹಿಡಿದ ಆಹಾರಕ್ಕೆ, ತಮ್ಮ ಹೊಟ್ಟೆಯಿಂದ ಕಿಣ್ವ ರಸವನ್ನು ಸುರಿಸಿ, ಆ ಆಹಾರವನ್ನು ದೇಹದ ಹೊರಗಡೆಯೇ ಜೀರ್ಣಮಾಡಿ ಅವನ್ನು ಹೀರುತ್ತದೆ. ಕೀಟಗಳಿಗೆ/ಇರುವೆಗಳಿಗೆ ದೇಹದ ಹೊರಕವಚವೇ ಅಸ್ತಿಪಂಜರವಾದ್ದರಿಂದ , ಒಳಗಿನ ದೇಹಾಂಗಗಳು ಮಾತ್ರ ಕರಗುತ್ತದೆ. ಜೇಡವು ಹೀರಿ ಕುಡಿದ ಬಳಿಕ ಕೀಟಗಳ ಹೊರಕವಚವು ಹಾಗೇ ಉಳಿಯುತ್ತದೆ. ಅಂಥಾ ಹೊರಕವಚಗಳನ್ನು ಈ ಜೇಡವು ತನ್ನ ಮನೆಯ ಅಲಂಕಾರದ ವಸ್ತುವಾಗಿ ಬಳಸುತ್ತದೆ!
ಈ ಜೇಡನ ಉದ್ದೇಶವೇನೋ ಗೊತ್ತಿಲ್ಲ. ಇದರ ಅಧ್ಯಯನದ ಮಾಹಿತಿಯೂ ನನ್ನಲ್ಲಿಲ್ಲ. ಸಾಮಾನ್ಯ ಜನರ ದೃಷ್ಟಿಯಲ್ಲಿ ನೋಡುವುದಾದರೆ, ತಿಂದ ಕೊಳಕನ್ನೇ ಈ ಜೇಡವು ಹೊರಗೆಸೆಯದೆ ಅಲ್ಲೇ ಉಳಿಸಿತ್ತು. ಕೀಟ ಪ್ರಪಂಚದಲ್ಲಿ ಅಸಾಸಿನ್ ಬಗ್ ಎಂಬ ಒಂದು ಕೀಟ, ತಾನು ತಿಂದ ಎಲ್ಲಾ ಇರುವೆಗಳ ಹೊರಕವಚವನ್ನು ಅಂಟಿಸಿದ್ದನ್ನು ಕಂಡಿದ್ದ ನನಗೆ, ಈ ಪರಿ ಜೇಡವೊಂದು ತನ್ನ ತ್ಯಾಜ್ಯವನ್ನು ಹೀಗೆ ಬಳಸುವುದನ್ನು ಕಂಡದ್ದಿಲ್ಲ. ಇಷ್ಟೆಲ್ಲಾ ಗಲೀಜಿನ ಮನೆಯಿದ್ದರೂ,ಇಷ್ಟು ವರ್ಷ ನಮ್ಮನೆಯ ಗೋಡೆಯಲ್ಲಿ ನನಗೇ ಕಂಡಿಲ್ಲವಲ್ಲ ಎಂದು ಆಶ್ಚರ್ಯ ಪಟ್ಟೆ.
ಬಿಳಿಯ ಗೋಡೆಯಲ್ಲಿ, ಅಷ್ಟೇ ಬಿಳಿಯ , ತೆಳ್ಳಗಿನ ಬಲೆಯ/ಹತ್ತಿಯ ಉಂಡೆಯನ್ನು ಮತ್ತು ಅಲ್ಲಿ ವಾಸವಿರುವ ಶ್ವೇತ ವರ್ಣದ ಜೇಡವನ್ನು ಗುರುತಿಸುವುದು ಅಷ್ಟು ಸುಲಭದ ಮಾತಲ್ಲ. ಒಮ್ಮೆ ಹೀಗೊಂದು ವಿಷಯವಿದೆ ಎಂದು ತಿಳಿದಮೇಲೆ ಅದು ಬಲು ಸರಾಗ. ಈಗ ಎಲ್ಲಾ ಗೋಡೆಗಳಲ್ಲೂ, ಎಲ್ಲರ ಗೋಡೆಗಳಲ್ಲೂ ಈ ಜೇಡನ ಅಸ್ತಿತ್ತ್ವ ನನ್ನ ಗಮನಕ್ಕೆ ಬರುತ್ತದೆ. ಯಾವ ವಿಷವಾದರೂ ಹಾಗೇ ಅಲ್ಲವೇ? ಒಮ್ಮೆ ನಮ್ಮ ಹಿಡಿತಕ್ಕೆ ಬಂದ ನಂತರ ಅದು ಸರಾಗ.
ಈ ಜೇಡವು ನಮ್ಮ ಗೋಡೆಯಲ್ಲಿ ಸಾಲಾಗಿ ಓಡಾಡುವ ಶಿಸ್ತಿನ ಸಿಪಾಯಿಯಾದ ಇರುವೆಗಳಿಗೆ ದೊಡ್ಡ ಶತ್ರು. ಇರುವೆಗಳನ್ನು ತಮ್ಮ ಬಲೆಯಲ್ಲಿ ಬಂದಿ ಮಾಡಿ ಅವನ್ನು ತಿನ್ನುತ್ತವೆ. ವರ್ಷದ ಹಿಂದೆ ಈ ಜೇಡನನ್ನು ಗುರುತಿಸುವಲ್ಲಿ ಸಫಲನಾದ ನನಗೆ ಈ ಜೇಡ ಇಷ್ಟೊಂದು ಪ್ರಮಾಣದಲ್ಲಿ ಇರುವೆಗಳನ್ನು ಹೇಗೆ ಮತ್ತು ಯಾವಾಗ ಹಿಡಿಯುತ್ತದೆ ಎಂದು ಇಲ್ಲಿಯವರೆಗೂ ಗೊತ್ತಾಗಿಲ್ಲ.
ಈ ಜೇಡನನ್ನು ಕಣ್ಣು ತುಂಬಾ ನೋಡುವುದೇ ಕಷ್ಟ. ಕಣ್ಣು ಮಿಟುಕಿಸುವಷ್ಟರಲ್ಲಿ ಮಾಯ. ಸಾಲದ್ದಕ್ಕೆ ವರ್ಣತಾದ್ರೂಪ್ಯತೆ. ಇರುವೆಗಳ ಅಸ್ತಿಪಂಜರದ ನಡುವೆ ಖಂಡಿತಾ ಇದು ಇರುತ್ತದೆ ಎನ್ನುವುದಷ್ಟೇ ಇದನ್ನು ಪತ್ತೆ ಹಚ್ಚಲು ಇರುವ ಏಕೈಕ ಸುಳಿವು. ೨-೩ ಎಂ ಎಂ ಗಾತ್ರದ ಸಣ್ಣ ಜೇಡಕ್ಕೆ , ಗಾತ್ರ ಪ್ರಮಾಣಕ್ಕೆ ಸರಿಯಾದ ಎಂದು ಸಮ ಉದ್ದದ, ದಪ್ಪದ ಕಾಲುಗಳು. ಊಳಿದೆಲ್ಲಾ ಜೇಡಗಳಲ್ಲಿ ಎದುರಿನ ಕಾಲುಗಳು ಮುಂದಕ್ಕೂ, ಹಿಂಬದಿಯ ಕಾಲುಗಳು ಹಿಂದಕ್ಕೂ, ಅಥವಾ ಎಲ್ಲಾ ಕಾಲುಗಳು ಮುಂದಕ್ಕೆ ಚಾಚಿರುತ್ತವೆ. ಆದರೆ ಈ ಇಕೋಬಿಡೇ (Oecobiidae) ಕುಟುಂಬದ ಜೇಡಗಳ ಮುಂದಿನ ನಾಲ್ಕು ಕಾಲುಗಳು ಮುಂಬದಿಗೆ ಚಾಚಿ, ಕಾಲಿನ ಕೊನೆಯ ಎರಡು ಗಂಟುಗಳು ಹಿಂಬದಿಗೆ ವಾಲುತ್ತವೆ. ಹಾಗಾಗಿ ಎಲ್ಲಾ ಕಾಲುಗಳು ಹಿಂಬದಿಗೆ ಚಾಚಿದಂತೆ ಕಾಣುತ್ತದೆ. ಈ ಜೇಡವು ಚಲಿಸುವಾಗ ಯಾವುದೋ ಒಂದು ಪುಟಾಣಿ ಚಕ್ರ ಉರುಳಿದಂತೆ ಕಾಣುತ್ತದೆ. ಹಾಗಾಗಿ ಇದನ್ನು Disc web spiders ಎಂದು ಕರೆಯುತ್ತರೆ. ನಾವಿದನ್ನು ಇನ್ನು ಮುಂದೆ ನಮ್ಮ ಕನ್ನಡದಲ್ಲಿ ಚಕ್ರ ಜೇಡವೆಂದು ಕರೆಯೋಣ.
ನಮ್ಮ ಮನೆಯಲ್ಲಿ ವಾಸವಿರುವುದು ಈ ಕುಟುಂಬದ ಇಕೋಬಿಸ್ (Oecobius) ಗಣದ ಜೇಡ. ಪ್ರಪಂಚದಾದ್ಯಂತ ನೂರು ಪ್ರಭೇದಗಳನ್ನು ಒಳಗೊಂಡ ಈ ಕುಟುಂಬವು, ಭಾರತದಲ್ಲಿ ಇದುವರೆಗೆ ಆರು ಪ್ರಭೇದಗಳನ್ನು ಪತ್ತೆ ಹಚ್ಚಿದ್ದಾರೆ. ಅವುಗಳಲ್ಲಿ Uroctea ಎಂಬ ಗಣದ ಮೂರು ಪ್ರಭೇದಗಳು ಸೇರಿದೆ.
ಜೇಡಲೋಕದಲ್ಲಿ ಪೃಷ್ಠವನ್ನು ಬರಿಗಣ್ಣಲ್ಲಿ ಕಾಣುವುದು ಬಲು ಅಪರೂಪ. ಈ ಕುಟುಂಬ ಜೇಡಗಳ ಪೃಷ್ಠವು ತುಸು ದೊಡ್ಡದಿದ್ದು ಅದರ ಸುತ್ತಲು ಉದ್ದನೆಯ ಕೂದಲಿರುತ್ತದೆ. ಇದು ಈ ಕುಟುಂಬದ ಗುಣವೈಶಿಷ್ಟ್ಯದಲ್ಲಿ ಒಂದು.
ಪುಟ್ಟ ಜೇಡದ ತಲೆಯು ದುಂಡಗಿರುವುದರಿಂದ ಇದನ್ನು Dwarf Round- Headed spider (ದುಂಡು ಜೇಡ) ಎಂದೂ , Tiny House dweller ಎಂದೂ ವಿದೇಶೀಯರು ಕರೆಯುತ್ತಾರೆ.
ಇದರ ಪುಟ್ಟ ದುಂಡು ತಲೆಯ ನಡುವೆ ಎಂಟು ಕಣ್ಣುಗಳು ಒಂದೇ ಕಡೆ ರಾಶಿ ಹಾಕಿದಂತೆ ಇರುತ್ತದೆ.
ಈ ಜೇಡ ಹೇಗೆ ಬೇಟೆಯಾಡುತ್ತದೇ ಎಂದು ಗೊತ್ತಿಲ್ಲದ ನನಗೆ, ಇದರ ಮಿಲನ, ಸಂತಾನೋತ್ಪತ್ತಿಯ ಬಗೆಗೆ ತಿಳಿದಿರುವುದು ದೂರದ ಮಾತು. ಈ ಜೇಡ ನಿಮ್ಮ ಮನೆಯ ಗೋಡೆಯಲ್ಲೂ ಕಂಡಿತಾ ಇದೆ. ಅದನ್ನು ಕಂಡುಹಿಡಿಯುವ ಸುಲಭದ ಸೂತ್ರವನ್ನೂ ನಾನು ನಿಮಗೆ ತಿಳಿಸಿದ್ದೇನೆ. ನಾನು ಗಮನಿಸಲು ಬಿಟ್ಟ ಸ್ಥಳವನ್ನು ತುಂಬಿಸುವ ಕೆಲಸ ಇನ್ನು ನಿಮ್ಮದು. ನಿಮಗೆ ತಿಳಿದದ್ದನ್ನು ನನಗೆ ತಿಳಿಸಲು ಮರೆಯದಿರಿ.
ಮುಂದಿನ ವಾರ- ಮತ್ತಷ್ಟು ಗೋಡೆಯ ಜೇಡಗಳು.
Facebook ಕಾಮೆಂಟ್ಸ್