ಹೌದು ಎಪ್ಪತ್ತು ವರ್ಷಗಳ ಕಾಲ ನೆಹರೂ ಎಂಬ ಮೂರ್ಖನ ನಿರ್ಧಾರದಿಂದ, ಮೂರು ಪರಿವಾರಗಳ ಖಜಾನೆಯಾಗಿ, ಪ್ರತ್ಯೇಕತಾವಾದಿಗಳ ಸ್ವರ್ಗವಾಗಿ, ಭಯೋತ್ಪಾದಕರ ಅಡ್ಡೆಯಾಗಿ, ಹಿಂದೂಗಳಿಗೆ ನರಕವಾಗಿ ನಲುಗಿದ್ದ ಕಶ್ಯಪನ ಭೂಮಿ ಇಂದು ಸ್ವತಂತ್ರಗೊಂಡು ತಾಯಿ ಭಾರತಿಯ ತೆಕ್ಕೆಗೆ ಸೇರಿದೆ. ಈ ಘನ ಕಾರ್ಯದ ಹಿಂದೆ ಶ್ಯಾಮ್ ಪ್ರಸಾದ್ಮು ಖರ್ಜಿಯಂತಹಾ ರಾಷ್ಟ್ರಭಕ್ತರ ಬಲಿದಾನದ ಪಾಲಿದೆ. ಅಸಂಖ್ಯ ಯೋಧರ ರಕ್ತದ ಕಲೆಯಿದೆ. ತಮ್ಮ ಮಗನನ್ನು ಕಳೆದುಕೊಂಡ ಯೋಧ ಕುಟುಂಬದ ಕಣ್ಣೀರಿನ ಹನಿಯಿದೆ. ತಮ್ಮದೇ ನೆಲದಿಂದ ಒದ್ದೋಡಿಸಲ್ಪಟ್ಟ, ತಮ್ಮ ನೆರೆಕರೆಯ ಮತಾಂಧರಿಂದಲೇ ಅತ್ಯಾಚಾರಕ್ಕೊಳಗಾದ, ಕೊಲೆಯಾದ, ದೇಶದ ಸರ್ಕಾರಗಳಿಂದ ವಿಶ್ವಾಸ ದ್ರೋಹಕ್ಕೊಳಗಾದ ಕಾಶ್ಮೀರ ಪಂಡಿತರ ಅಸಹಾಯಕತೆಯ ನಿಟ್ಟುಸಿರು ಇದೆ. ದಶಕಗಳ ಕಾಲ ಕಾದು ಕುಳಿತ, ನಡೆಯುತ್ತಿದ್ದ ಅನ್ಯಾಯವನ್ನು ಜಗತ್ತಿನೆಲ್ಲೆಡೆ ಸಾರಿ ಹೇಳಿ ಪ್ರತಿಭಟಿಸಿದ ಅಸಂಖ್ಯ ಸಂಘ, ಸಂಸ್ಥೆ ಮತ್ತು ವ್ಯಕ್ತಿಗಳ ಪರಿಶ್ರಮವಿದೆ. ಇವೆಲ್ಲದರ ಪ್ರತಿಯೊಂದು ಅಂಶವನ್ನು ಹೊತ್ತು ಹುಟ್ಟಿದ ದೇಶಭಕ್ತ ಕೇಂದ್ರ ಸರಕಾರದ ರಾಷ್ಟ್ರೀಯತೆಯ ಪರವಾದ ನಿಲುವು, ನೀತಿ, ಕಾರ್ಯಗಳಿವೆ.
1947ರ ಭಾರತ ಸ್ವಾತಂತ್ರೃ ಕಾಯಿದೆಯಂತೆ ಭಾರತ ಅಥವಾ ಪಾಕಿಸ್ತಾನಕ್ಕೆ ಸೇರಬಹುದಾದ ಆಯ್ಕೆಯಲ್ಲಿ ಭಾರತವನ್ನೇ ನಂಬಿ ಕಾಶ್ಮೀರದ ರಾಜ ಹರಿಸಿಂಗ್ ಜಮ್ಮು-ಕಾಶ್ಮೀರವನ್ನು ಭಾರತದಲ್ಲಿ ವಿಲೀನಗೊಳಿಸುವ ಒಪ್ಪಂದಕ್ಕೆ 1947ರ ಅಕ್ಟೋಬರ್ 26ರಂದು ಸಹಿಹಾಕಿದರು. ಅಕ್ಟೋಬರ್ 27ರಂದು ಗವರ್ನರ್ಜ ನರಲ್ ಮೌಂಟ್‍ಬ್ಯಾಟನ್ನನ ಷರಾವು ಅದಕ್ಕೆ ಬಿದ್ದಿತ್ತು. ನೆಹರೂ ತನ್ನ ಮಿತ್ರ ಶೇಖ್ಅಬ್ದುಲ್ಲಾನಿಗೆ ಸಹಾಯ ಮಾಡುವ ದೃಷ್ಟಿಯಿಂದ ಒತ್ತಡ ಹೇರಿದಾಗ, ಶೇಖ್ ಅಬ್ದುಲ್ಲಾನ ಆಶಯದಂತೆ ಕಾಶ್ಮೀರ ವ್ಯವಹಾರಗಳಿಗೆ ಸಂಬಂಧಿಸಿ ಕೇಂದ್ರ ಸಚಿವರಾಗಿದ್ದ ಗೋಪಾಲಸ್ವಾಮಿ ಅಯ್ಯಂಗಾರ್ ಸಂವಿಧಾನ ರಚನಾ ಸಮಿತಿ ಮುಂದೆ 306-ಎ ವಿಧಿಯನ್ನು ಮಂಡಿಸುತ್ತಾರೆ. ಅಂಬೇಡ್ಕರ್ ನೇತೃತ್ವದ ಸಂವಿಧಾನ ರಚನಾ ಸಮಿತಿ ಇದನ್ನು ಒಪ್ಪುವುದಿಲ್ಲ. ಆಗ ನೆಹರೂ ಅಂಬೇಡ್ಕರ್‍ನ್ನು ಕಂಡು ಮನವೊಲಿಸುವಂತೆ ಅಬ್ದುಲ್ಲಾನಿಗೆ ಸೂಚಿಸುತ್ತಾರೆ. ಹಾಗೆ ಬಂದ ಅಬ್ದುಲ್ಲಾನಿಗೆ “ಕಾಶ್ಮೀರಿಗಳಿಗೆ ಭಾರತದ ಪ್ರಜೆಗಳಿಗಿರುವಂತೆ ಸಮಾನ ಹಕ್ಕುಗಳನ್ನು ಬಯಸುವ ನೀವು, ಭಾರತೀಯರಿಗೆ ಕಾಶ್ಮೀರದಲ್ಲಿ ಯಾವುದೇ ಹಕ್ಕುಗಳಿರಬಾರದು ಎನ್ನುತ್ತೀರಿ.
ಕಾಶ್ಮೀರದ ರಕ್ಷಣೆಗೆ, ಅಭಿವೃದ್ಧಿಗೆ ಭಾರತ ಬೇಕು. ಆದರೆ ಅಲ್ಲಿ ಉಳಿದ ಭಾರತೀಯರಿಗೆ
ಹಕ್ಕಿಲ್ಲ ಎಂದರೇನರ್ಥ? ಈ ದೇಶದ ಕಾನೂನು ಮಂತ್ರಿಯಾಗಿ ನಾನು ನನ್ನ ದೇಶೀಯರ
ಹಿತಾಸಕ್ತಿಯನ್ನು, ದೇಶದ ಸಾರ್ವಭೌಮತ್ವವನ್ನು ಎಂದಿಗೂ ಕಡೆಗಣಿಸುವುದಿಲ್ಲ” ಎಂದು
ಖಂಡತುಂಡವಾಗಿ ನಿರಾಕರಿಸುತ್ತಾರೆ ಅಂಬೇಡ್ಕರ್. ಆದರೆ ನೆಹರೂ ತನ್ನ ಮಿತ್ರನಿಗೋಸ್ಕರ
370ನೇ ವಿಧಿ ತಾತ್ಕಾಲಿಕ ಎಂದು ಸೇರಿಸುವಂತೆ ಪಟೇಲರನ್ನು ಒಪ್ಪಿಸಿ ಸಂವಿಧಾನ ಶಿಲ್ಪಿಯ
ಬಾಯಿ ಮುಚ್ಚಿಸಿದ್ದರು. ಮುಂದೆ ವಿಧಿ 35ಎ ಯನ್ನು ಹಿಂಬಾಗಿಲ ಮೂಲಕ ಸೇರಿಸಿ ಮತ್ತಷ್ಟು
ಗಬ್ಬೆಬ್ಬಿಸಲಾಯಿತು!
ಹೇಗಿತ್ತು ಆರ್ಟಿಕಲ್ 370 ಹಾಗೂ 35ಎ?
ಈ ವಿಧಿಯ ಪ್ರಕಾರ ಜಮ್ಮು-ಕಾಶ್ಮೀರ ರಾಜ್ಯದ ಹೊರಗಿನವರಾರೂ ಅಲ್ಲಿ ಭೂಮಿ ಖರೀದಿಸುವಂತಿರಲಿಲ್ಲ. ಭಾರತದ ಉಳಿದ ಭಾಗದವರು ಅಲ್ಲಿ ಹೋಗಿ ನೆಲೆಸಿದರೆ ಅಲ್ಲವರಿಗೆ ಮತದಾನದ ಹಕ್ಕು ಇರಲಿಲ್ಲ. ಸರ್ಕಾರಿ ನೌಕರಿಯ ಹಕ್ಕೂ ಇರಲಿಲ್ಲ. ವ್ಯಾಪಾರ
ಮಾಡುವಂತಿರಲಿಲ್ಲ. ಶಾಶ್ವತವಾಗಿ ನೆಲೆಸುವಂತಿರಲಿಲ್ಲ. ಹೊರಗಿನವರಾರೂ ಅಲ್ಲಿ ಆಸ್ತಿ ಖರೀದಿ ಮಾಡುವಂತಿರಲಿಲ್ಲ. ರಾಜ್ಯದ ಹೊರಗಿನವರನ್ನು ವಿವಾಹವಾಗುವ ಮಹಿಳೆಗೂ ಈ ವಿಧಿಯ ಪ್ರಕಾರ ಸಿಗುತ್ತಿದ್ದ ಹಕ್ಕು, ಸೌಲಭ್ಯಗಳೆಲ್ಲಾ ತಪ್ಪಿ ಹೋಗುತ್ತಿದ್ದವು. ಆದರೆ ಆಕೆ ಪಾಕಿಸ್ತಾನದವನೊಬ್ಬನನ್ನು ಮದುವೆಯಾದರೆ ಆಕೆಯ ಹಕ್ಕುಗಳೆಲ್ಲಾ ಹಾಗೆಯೇ ಉಳಿಯುತ್ತಿದ್ದವು. ಮಾತ್ರವಲ್ಲಾ ಆ ಪಾಕಿಸ್ತಾನಿಗೂ ಜಮ್ಮುಕಾಶ್ಮೀರದ ನಾಗರಿಕತ್ವ ತನ್ಮೂಲಕ ಭಾರತದ ನಾಗರಿಕತ್ವವೂ ಸಿಗುತ್ತಿತ್ತು. ಅಂದರೆ ಇದು ಭಯೋತ್ಪಾದಕರಿಗೆ ಭಾರತಕ್ಕೆ ಬರಲು ಇದ್ದ ರಹದಾರಿಯಾಗಿತ್ತು. ಹಾಗೆಯೇ ಜಮ್ಮು-ಕಾಶ್ಮೀರದ ಪುರುಷ ಹೊರ ರಾಜ್ಯದ ಸ್ತ್ರೀಯನ್ನು ವಿವಾಹವಾದರೆ ಆತನ ಹಕ್ಕು ಅಬಾಧಿತ. ಜೊತೆಗೆ ಆತನ ಪತ್ನಿಗೂ ಈ ಎಲ್ಲಾ ಹಕ್ಕುಗಳು ಪ್ರಾಪ್ತವಾಗುತ್ತಿತ್ತು. ಷರಿಯಾ ಕಾನೂನಿನ ಕುಣಿಕೆ ಮಹಿಳೆಯರ ಮೇಲಿರುತ್ತಿತ್ತು. ಈ ಅಸಮಾನತೆಯ ಬಗ್ಗೆ ಯಾವುದೇ ಮಹಿಳಾ ಸಂಘಟನೆಗಳು ಹೋರಾಡಿದ್ದು ಕಾಣೆ. ಇಲ್ಲಿನವರು ಭಾರತ ಸರಕಾರಕ್ಕೆ ತೆರಿಗೆ ಕಟ್ಟಬೇಕಾಗಿರಲಿಲ್ಲ. ಆದರೆ ಉಳಿದ ರಾಜ್ಯಗಳಿಗಿಂತ ಹೆಚ್ಚಿನ ಹಣ ಇಲ್ಲಿಗೆ ಹೋಗುತ್ತಿತ್ತು!
ಈ 370ನೇ ವಿಧಿಯ ಲಾಭ ಪಡೆದು ಜಮ್ಮುಕಾಶ್ಮೀರ ರಾಜ್ಯ ತನ್ನದೇ ಆದ ಸಂವಿಧಾನವನ್ನು 1957ರಲ್ಲಿ ಅಳವಡಿಸಿಕೊಂಡಿತು. ಒಂದು ದೇಶದಲ್ಲಿ ಎರಡು ಸಂವಿಧಾನ! ಈಗ 370ನೇ ವಿಧಿಯ ರದ್ದತಿಯನ್ನು ವಿರೋಧಿಸುತ್ತಿರುವ ಜಾತ್ಯಾತೀತರು ಹಾಗೂ ಸಮಾಜವಾದಿಗಳೆಂದು ಕರೆಯಿಸಿಕೊಳ್ಳುತ್ತಿರುವವರೂ ಗಮನಿಸಬೇಕಾದ ವಿಷಯವೇನೆಂದರೆ ಅವೆರಡೂ ಪದಗಳಿಗೆ ಜಮ್ಮು ಕಾಶ್ಮೀರ ಸಂವಿಧಾನದಲ್ಲಿ ಜಾಗವೇ ಇರಲಿಲ್ಲ! ಕೇಂದ್ರ ಸರಕಾರ ಇತ್ತೀಚೆಗೆ ಆರ್.ಟಿ.ಐ ಕಾಯ್ದೆಗೆ ತಿದ್ದುಪಡಿ ತಂದಾಗ ಇದೇ 370ನೇ ವಿಧಿಯ ಪರವಾಗಿರುವವರು ವಿರೋಧಿಸಿದ್ದರು. ಆದರೆ 370ನೇ ವಿಧಿಯ ಕಾರಣ ಜಮ್ಮು ಕಾಶ್ಮೀರ ರಾಜ್ಯದಲ್ಲಿ ಆರ್.ಟಿ.ಐಗೆ ಯಾವುದೇ ಕಿಮ್ಮತ್ತಿರಲಿಲ್ಲ. ಕೌಟುಂಬಿಕ ದೌರ್ಜನ್ಯ ಪರಿಹಾರ, ವನ್ಯಜೀವಿ ಸಂರಕ್ಷಣೆ,ಸಿಎಜಿ, ಭ್ರಷ್ಟಾಚಾರ ನಿಯಂತ್ರಣಗಳಂತಹಾ ಕಾಯ್ದೆಗಳ ಸಹಿತ ಯಾವುದೇ ಕಾಯ್ದೆ ಅನ್ವಯವಾಗುತ್ತಿರಲಿಲ್ಲ. ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐಗೆ ಇಲ್ಲಿ ಅಧಿಕಾರವಿರಲಿಲ್ಲ. ಸಿಬಿಐ ತನಿಖೆ ನಡೆಸಬೇಕಾದರೆ ರಾಜ್ಯ ಸರಕಾರದ ಅನುಮತಿಪಡೆಯಬೇ ಕಿತ್ತು! ಸರ್ವೋಚ್ಚ ನ್ಯಾಯಾಲಯ ಕೇವಲ ಮನವಿ ಮಾಡಬಹುದಿತ್ತು! ವಿಧಾನ ಸಭೆ ಅವಧಿ ಇಲ್ಲಿ 6 ವರ್ಷ. ಪಂಚಾಯತ್ಗಳಿಗೆ ಅಧಿಕಾರವಿಲ್ಲ. ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸಬೇಕಾದರೂ ಅನುಮತಿ ಪಡೆದುಕೊಳ್ಳಬೇಕಿತ್ತು. ಬಳಿಕವೂ ಜಮ್ಮು ಕಾಶ್ಮೀರದ ಧ್ವಜದ ಜೊತೆಗೆಯೇ ಹಾರಿಸಬೇಕಿತ್ತು. ರಾಷ್ಟ್ರಧ್ವಜವನ್ನು ಸುಡುವ, ಹರಿಯುವ ಮುಂತಾದ ರಾಷ್ತ್ರೀಯ ಸಂಕೇತಗಳಿಗೆ ಮಾಡುವ ಅವಮಾನ ಇಲ್ಲಿ ಅಪರಾಧವಾಗಿರಲಿಲ್ಲ. ರಕ್ಷಣೆ, ವಿದೇಶಾಂಗ ವ್ಯವಹಾರ, ಸಂವಹನ-ಸಂಪರ್ಕ ಕ್ಷೇತ್ರ ಬಿಟ್ಟು ಯಾವುದೇ ಕಾಯಿದೆ-ಕಾನೂನುಗಳನ್ನು ಜಮ್ಮು ಕಾಶ್ಮೀರದಲ್ಲಿ ಮಾಡಲು ಕೇಂದ್ರ ಸರಕಾರ ಅಲ್ಲಿನ ರಾಜ್ಯ ಸರಕಾರದ ಅನುಮತಿ ಪಡೆಯಬೇಕಿತ್ತು.
ರಾಷ್ಟ್ರಾದ್ಯಂತ ಮಂಡಲ ಆಯೋಗದ ಬಗ್ಗೆ ಬೊಬ್ಬೆ ಕೇಳಿ ಬರುತ್ತದೆ. ಆದರೆ ಕಾಶ್ಮೀರದಲ್ಲಿ ಮಂಡಲ ಆಯೋಗದ ವರದಿ ಜಾರಿಗೇ ಬರಲಿಲ್ಲ. 1991ರವರೆಗೆ ಹಿಂದುಳಿದ ವರ್ಗಕ್ಕೆ ಯಾವುದೇ ಮೀಸಲಾತಿಯೇ ಸಿಗುತ್ತಿರಲಿಲ್ಲ. 91ರ ಬಳಿಕವೂ ರಾಜಕೀಯ ಮೀಸಲಾತಿ ಸಿಗಲಿಲ್ಲ. ಅಸಲಿಗೆ ಅಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆ ಎಷ್ಟಿದೆಯೆಂಬ ಅಂಕಿ ಅಂಶಗಳೇ ಇಲ್ಲ. 1956ರಲ್ಲಿ ಪಂಜಾಬಿಬಿಂದ ಕರೆತಂದ ವಾಲ್ಮೀಕಿ ಜನಾಂಗಕ್ಕೆ ಯಾವುದೇ ನಾಗರಿಕ ಹಕ್ಕುಗಳು ಸಿಕ್ಕಿಲ್ಲ. 1947ರಲ್ಲಿ ಅಪಾರ ಪ್ರಮಾಣದ ಹಿಂದೂಗಳು, ಸಿಕ್ಖರು ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದರು. ಆಗ ಬಂದವರಲ್ಲಿ ಕೆಲವರು ಕಾಶ್ಮೀರದಲ್ಲಿ ನೆಲೆ ನಿಂತರು. ಆದರೆ ಅವರಿಗೆ ಯಾವ ನಾಗರಿಕ ಹಕ್ಕುಗಳೂ ಸಿಗಲಿಲ್ಲ. ಆದರೆ ವಿಭಜನೆ ಸಂದರ್ಭದಲ್ಲಿ ಕಾಶ್ಮೀರದಿಂದ ಪಾಕಿಸ್ತಾನಕ್ಕೆ ವಲಸೆ ಹೋದವರು ಬೇಕಾದರೆ ಮರಳಿಬರಬಹುದು, ತಮ್ಮ ಭೂಮಿಯನ್ನು ಮರಳಿ ಪಡೆಯಬಹುದು, ಪರಿಹಾರವನ್ನೂ ಪಡೆದುಕೊಳ್ಳಬಹುದು!
1951ರಲ್ಲಿ ಜಮ್ಮು-ಕಾಶ್ಮೀರದಲ್ಲಿ ವಿಧಾನಸಭಾ ಕ್ಷೇತ್ರ ವಿಂಗಡಣೆ ನಡೆಯಿತು. ಕ್ಷೇತ್ರ ಮರುವಿಂಗಡಣೆ ಸಂದರ್ಭದಲ್ಲಿ ಜನಸಂಖ್ಯೆಯನ್ನು ಮಾತ್ರವಲ್ಲ,ಅಲ್ಲಿನ ಭೌಗೋಳಿಕ ಸನ್ನಿವೇಶವನ್ನೂ ಪರಿಗಣಿಸಬೇಕು ಅಂತ 1957ರ ಪ್ರಜಾಪ್ರಾತಿನಿಧ್ಯ ಕಾಯಿದೆ ಮತ್ತು ಜಮ್ಮು-ಕಾಶ್ಮೀರ ಸಂವಿಧಾನದ 50ನೇ ವಿಧಿ ಇವೆರಡರಲ್ಲೂ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಕ್ಷೇತ್ರ ಮರುವಿಂಗಡಣಾ ಆಯೋಗಗಳು ಸಂವಿಧಾನ ಮತ್ತು ಪ್ರಜಾಪ್ರಾತಿನಿಧ್ಯ ಕಾಯಿದೆಯ ಆಶಯವನ್ನು ಎಂದೂ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. 2001ರಲ್ಲಿ ನಡೆಸಿದ ಜನಗಣತಿ ಪ್ರಕಾರ, ಜಮ್ಮುವಿನ 26 ಸಾವಿರ ಚದರ ಕಿ.ಮೀ. ಪ್ರದೇಶದಲ್ಲಿ 30,59,986 ಮತದಾರರಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಜಮ್ಮುವಿನ ಮೂರನೇ ಎರಡರಷ್ಟು ಪ್ರದೇಶ ದುರ್ಗಮ ಗುಡ್ಡಗಾಡು, ಪರ್ವತ ಪ್ರದೇಶಗಳಿಂದ ಕೂಡಿದೆ. ಅಲ್ಲಿ ಸುವ್ಯವಸ್ಥಿತವಾದ ರಸ್ತೆ ಸಂಪರ್ಕವೂ ಇಲ್ಲ. ಆದರೆ ಈ ಪ್ರದೇಶಕ್ಕೆ 37 ವಿಧಾನಸಭಾ ಕ್ಷೇತ್ರಗಳನ್ನು ಮತ್ತು ಎರಡು ಲೋಕಸಭಾ ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ಕೇವಲ 15,953 ಚ.ಕಿ.ಮೀ. ವಿಸ್ತಾರವಾದ ಪ್ರದೇಶ ಮತ್ತು 29 ಲಕ್ಷ ಮತದಾರರನ್ನಷ್ಟೇ ಹೊಂದಿರುವ ಕಾಶ್ಮೀರ ಕಣಿವೆಗೆ 46 ವಿಧಾನಸಭಾ ಕ್ಷೇತ್ರಗಳು ಮತ್ತು 3 ಲೋಕಸಭಾ ಕ್ಷೇತ್ರಗಳನ್ನು ನೀಡಲಾಗಿದೆ! ಯಾಕೆ ಹೀಗೆ? ಕಾರಣ ಜಮ್ಮುವಿನಲ್ಲಿ ಹಿಂದೂಗಳ ಸಂಖ್ಯೆ ಜಾಸ್ತಿ ಇದೆ!
1992ರಲ್ಲಿ ಕ್ಷೇತ್ರ ಮರುವಿಂಗಡಣಾ ಆಯೋಗ 1957ರ ಪ್ರಜಾಪ್ರಾತಿನಿಧ್ಯ ಕಾಯಿದೆ ಅನುಸಾರ ಜಮ್ಮು-ಕಾಶ್ಮೀರದಲ್ಲಿ ಕ್ಷೇತ್ರ ಮರುವಿಂಗಡಣೆ ಪ್ರಯತ್ನ ನಡೆದಿತ್ತು. ಇನ್ನೇನು ಮುಖ್ಯಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಅದಕ್ಕೆ ಒಪ್ಪಿಗೆ ಮುದ್ರೆ ಒತ್ತಬೇಕು ಅನ್ನುವಷ್ಟರಲ್ಲಿ ಆಯೋಗದ ಅಧ್ಯಕ್ಷ ಜಸ್ಟೀಸ್ ಕೆ.ಕೆ. ಗುಪ್ತಾ ಆಯೋಜನೆಯನ್ನು ತಿರಸ್ಕರಿಸಿಬಿಟ್ಟರು! ಕೇವಲ ರಾಜಕೀಯ ಮಾತ್ರವಲ್ಲ ಅಭಿವೃದ್ಧಿಯೂ ಜಮ್ಮು ಪಾಲಿಗೆ ಮರೀಚಿಕೆಯೇ! ಪ್ರವಾಸೋದ್ಯಮ ಬಜೆಟ್‍ನಲ್ಲಿ ಶೇ.90ರಷ್ಟನ್ನು ಕಾಶ್ಮೀರಕ್ಕೆ ಕೊಡಲಾಗಿದೆ.. ವ್ಯಾಪಾರ ಮತ್ತು ಪ್ರವಾಸೋದ್ಯಮದಿಂದ ಬರುವ ಬಹುತೇಕ ಆದಾಯ ಜಮ್ಮುವಿನಿಂದಲೇ ಆಗಿದ್ದರೂ ಅಲ್ಲಿಗೆ ಅನುದಾನವಿಲ್ಲ! ಮಾತ್ರವಲ್ಲ, ಕಾಶ್ಮೀರ ಕಣಿವೆಗೆ ಉಚಿತ ವಿದ್ಯುತ್, ಜಮ್ಮು ಪ್ರಾಂತ್ಯದಲ್ಲಿ ದುಬಾರಿ ವಿದ್ಯುತ್ ಶುಲ್ಕ, ಇವೆಲ್ಲವೂ 370ನೇ ವಿಧಿಯ ಅಪಸವ್ಯಗಳು! ಹೀಗೆ ದೇಶಕ್ಕೇ ಒಂದು ಕಾನೂನಿದ್ದರೆ ಜಮ್ಮು-ಕಾಶ್ಮೀರಕ್ಕೇ ಪ್ರತ್ಯೇಕ ಕಾನೂನು, ಪ್ರತ್ಯೇಕ ಧ್ವಜ, ಪ್ರತ್ಯೇಕ ಸಂವಿಧಾನವಿತ್ತು.
ದೇಶದ 1% ಜನಸಂಖ್ಯೆ ಇರುವ ಜಮ್ಮು ಕಾಶ್ಮೀರಕ್ಕೆ ಕೇಂದ್ರದ ಅನುದಾನದ ಪಾಲು 10%! ದೇಶದ 13% ಜನಸಂಖ್ಯೆಯುಳ್ಳ ಉತ್ತರ ಪ್ರದೇಶ ಪಡೆಯುವ ಪಾಲು 8.2%. 2000-2016ರ ಅವಧಿಯಲ್ಲಿ ಜಮ್ಮು ಕಾಶ್ಮೀರದ ಪ್ರತಿಯೊಬ್ಬ ವ್ಯಕ್ತಿ ತಲಾ 91,300 ರೂ. ಪಡೆದರೆ ಉತ್ತರಪ್ರದೇಶದ ವ್ಯಕ್ತಿಗೆ ಸಿಕ್ಕಿದ್ದು ಬರೇ 4300 ರೂ. ಈ ಅವಧಿಯಲ್ಲಿ ಜಮ್ಮು ಕಾಶ್ಮೀರ ಗಿಟ್ಟಿಸಿದ್ದು ಬರೋಬ್ಬರಿ 1.14 ಲಕ್ಷ ಕೋಟಿ ರೂ.! ಇವೆಲ್ಲವೂ ವಿಧಿ 370ರ ಫಲಶ್ರುತಿಗಳೇ. ಈ ಅವ್ಧಿಗೆ ಮುನ್ನವೂ ಇಷ್ಟೇ ಅಥವಾ ಇದಕ್ಕಿಂತಲೂ ಹೆಚ್ಚು ಪ್ರಮಾಣದ ಅನುದಾನವನ್ನು ಜಮ್ಮು ಕಾಶ್ಮೀರ ಪಡೆದುಕೊಂಡು ಬಂದಿತ್ತು. ಆದರೆ ಆ ಹಣದ ಹಂಚಿಕೆ, ವಿನಿಯೋಗ, ಉಳಿತಾಯದಲ್ಲಿ ಯಾವುದೇ ಪಾರದರ್ಶಕತೆಯಿರಲಿಲ್ಲ ಎಂದು 2016ರ ಕೇಂದ್ರ ಸಿಎಜಿ ವರದಿ ಹೇಳಿದೆ. ಇಷ್ಟು ಅನುದಾನವಿದ್ದರೂ ಕಾಶ್ಮೀರ ಯಾಕೆ ಅಭಿವೃದ್ಧಿಯಾಗಲಿಲ್ಲ? ಕಾರಣ ಇವೆಲ್ಲವೂ ಮೂರು ಕುಟುಂಬಗಳ ಖಜಾನೆ ಸೇರಿತ್ತು!
ಈಗ ಕೇಂದ್ರ ಸರಕಾರ ಆರ್ಟಿಕಲ್ 370ಯನ್ನು ಕಿತ್ತೊಗೆದಿದೆ. ದೇಶದ ಇತರ ರಾಜ್ಯಗಳಿಗೂ ಅನ್ವಯವಾಗುವ ಕಾನೂನು, ಸಂವಿಧಾನ ಈಗ ಜಮ್ಮು-ಕಾಶ್ಮೀರಕ್ಕೂ ಅನ್ವಯವಾಗುತ್ತದೆ. ಇನ್ನು ಮುಂದೆ ಜಮ್ಮು-ಕಾಶ್ಮೀರ ಶಾಸನ ಸಭೆ ಸಹಿತ ಕೇಂದ್ರಾಡಳಿತ ಪ್ರದೇಶವಾಗಲಿದೆ. ಲಢಕ್ ಶಾಸನ ಸಭೆ ರಹಿತ ಕೇಂದ್ರಾಡಳಿತ ಪ್ರದೇಶವಾಗಿರಲಿದೆ. ಆರ್ಟಿಕಲ್ 370 ಗೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರದ ಹೈಕೋರ್ಟ್ 2015ರ ಅಕ್ಟೋಬರ್ ರಂದು ನೀಡಿದ್ದ ಆದೇಶದ ಪ್ರಕಾರ ಅನುಚ್ಛೇದ 3 ರ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ನಿರ್ಧರಿಸುವ ಹಕ್ಕು ಸಾಂವಿಧಾನಿಕ ಶಾಸನ ಸಭೆಗೆ ಇದೆ. ವಿಧಾನಸಭೆ ವಿಸರ್ಜನೆಯಾಗಿರುವ ಜಮ್ಮು ಕಾಶ್ಮೀರದಲ್ಲಿ ಈಗ ರಾಜ್ಯಪಾಲರ ಆಳ್ವಿಕೆ. ಹಾಗಾಗಿ ಕಾಶ್ಮೀರದ ರಾಜ್ಯಪಾಲರ ಸಹಿಯೊಂದು ಸಾಕು. ಯಾವ ರಾಷ್ಟ್ರಪತಿಗಳ ಹುದ್ದೆಯ ಮೂಲಕ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿತ್ತೋ ಈಗ ಅದೇ ರಾಷ್ಟ್ರಪತಿಗಳ ಅಂಕಿತದ ಮೂಲಕ ವಿಧಿ 370ರ ವಿಧಿಬರೆಹವನ್ನು ಬದಲಾಯಿಸಿ ಅಂತಿಮ ಸಂಸ್ಕಾರ ಮಾಡಲಾಗಿದೆ. ಈಗ ಜಮ್ಮು ಕಾಶ್ಮೀರ ನಿಜಾರ್ಥದಲ್ಲಿ ಸ್ವತಂತ್ರಗೊಂಡು ತಾಯಿ ಭಾರತಿಯ ತೆಕ್ಕೆಗೆ ಮರಳಿದೆ. ಸಿಕ್ಕಿದ ಅಪಾರ ಸಂಪತ್ತನ್ನು ತಿಂದುಂಡು ದುಂಡಾಗಿ ಬೆಳೆದು, ತರುಣರನ್ನು ಕಲ್ಲೆಸೆಯಲು ಕಳುಹುತ್ತಿದ್ದ, ಕಾಶ್ಮೀರಿ ಪಂಡಿತರ, ಸೈನಿಕರ ಕೊಲೆಗೆ ಕಾರಣರಾದ ಜಮ್ಮು ಕಾಶ್ಮೀರವನ್ನು ನರಕಕ್ಕೆ
ತಳ್ಳಿದ ಮೂರು ಪರಿವಾರಗಳಿಗೆ ಇನ್ನು ಕಾದಿದೆ ಹಬ್ಬ! ಜಮ್ಮು ಕಾಶ್ಮೀರದ ಕ್ಷೇತ್ರ ಮರುವಿಂಗಡನೆಗೂ ಕಾಲ ಕೂಡಿ ಬಂದಿದೆ. ಕೇಸರಿಯ ಘಮಲಿನೊಂದಿಗೆ ಶಾರದೆಯ ಗುಣಗಾನ ಕೇಳುವ ದಿನಗಳು ಹತ್ತಿರವಾಗಿವೆ.
Facebook ಕಾಮೆಂಟ್ಸ್