X

ಮಾವಿನ ಹಣ್ಣಿನ ಸೀಸನ್

ಮಾವಿನ ಹಣ್ಣೆಂದರೆ ಕಣ್ಣಿಗೆ ಬರುವ ಚಿತ್ರ ಮಾಂಸಲವಾದ, ವಿಶಿಷ್ಟ ಪರಿಮಳ ಬೀರುವ, ಚಾಕಿನಲ್ಲಿ ಹಚ್ಚಿದರೆ ರಸ ಸುರಿಸುವ ಒಳಗೆ ಕೇಸರಿ ಬಣ್ಣವೋ, ಹಳದಿ ಬಣ್ಣವೋ ಇದ್ದು ನೋಡಿದಾಗಲೇ ಬಾಯಿಯಲ್ಲಿ ನೀರೊಡೆಯುವಂತೆ ಮಾಡುವಂತಹದ್ದು. ವರ್ಣನೆ ಒಪ್ಪುವಂತಹದ್ದೆ, ಆದರೆ ನನ್ನ ಮಗನೇ ಒಪ್ಪುವುದಿಲ್ಲ. ಅವನ ಪ್ರಕಾರ ಈ ಯಾವ ವಿಶೇಷವೂ ಇಲ್ಲದೆ ಅಜ್ಜನ ಗಡ್ಡದ ಹಾಗೆ ಬೆಳ್ಳಗೆ ನಾರು ನಾರಾಗಿದ್ದು ಬಾಯಿಗಿಟ್ಟರೆ ಹಲ್ಲೆಲ್ಲಾ ಕಿತ್ತು ಬರುವಷ್ಟು ಹುಳಿಯಾಗಿರುವುದೇ ಮಾವಿನ ಹಣ್ಣು.
ವಿಶೇಷವೆಂದರೆ, ಅಮೇರಿಕೆಗೆ ಹೋದ ಮಗನಿಗೆ ಅಲ್ಲಿ ಭಾರತದ ಹಣ್ಣು ರುಚಿನೋಡಲು ಸಿಕ್ಕಿದ್ದೇ ಇಲ್ಲ. ದೊರೆತದ್ದೆಲ್ಲ ಮೆಕ್ಸಿಕೋ ಕಡೆಯಿಂದ ಬಂದ ಹಣ್ಣುಗಳೊ, ದಕ್ಷಿಣ ಅಮೇರಿಕಾದವೋ ಆಗಿದ್ದು ಅವುಗಳ ರುಚಿ ಹೇಳಿಕೊಳ್ಳುವಂತಹದೇನಲ್ಲ. ಆದರೂ ಅವನಿರುವ ಕ್ಯಾಲಿಫೋರ್ನಿಯಾ ರಾಜ್ಯಕ್ಕೆ ಅಷ್ಟಾದರೂ ಬರುತ್ತದಲ್ಲಾ ಎಂಬ ಹೆಗ್ಗಳಿಕೆ ಅವನಿಗೆ. ನನ್ನ, ನನ್ನಾಕೆಯ ಅಲ್ಲಿಯ ವಾಸದ ಸಮಯ ಬೇಸಿಗೆ. ಅಮೇರಿಕೆಯ ಮಾವಿನ ಕಾಲ! ನಮಗೆ ಅಲ್ಲಿಯ ಹಣ್ಣಿನ ರುಚಿ ನೋಡುವ ಸದವಕಾಶ!

ನಾವು ಅಮೆರಿಕೆಗೆ ತಲಪುವುದಕ್ಕಿಂತ ಮುಂಚೆಯೇ ಮಗನು ಬಹಳ ಸಂಶೋಧನೆ ಮಾಡಿ ಒಂದು ರಟ್ಟಿನ ಪೆಟ್ಟಿಗೆ ತುಂಬಾ ಹಣ್ಣು ತುಂಬಿ ತಯಾರಾಗಿದ್ದನು, ಹೊಸ ರುಚಿ ತೋರಿಸೋಣವೆಂದು. ನೋಡಲೇನೋ ಗಿಣ ಮೂತಿನದ್ದಂತೆ (ತೊತಾಪುರಿ) ಇದ್ದರೂ ಆ ಗಾತ್ರದ್ದಲ್ಲ. ರುಚಿ ಹೇಗೋ. ಅವನ ಆಯ್ಕೆಗೆ ಅಲ್ಲಿಯ ಮಟ್ಟಿಗೆ ಒಳ್ಳೆ ಶಹಬಾಸ್ ಗಿರಿ ನಿರೀಕ್ಷಿಸುತ್ತಿದ್ದ! ಒಂದು ಹಣ್ಣನ್ನು ಚಕ ಚಕನೆ ಕತ್ತರಿಸಿಕೊಟ್ಟನು. ಇನ್ನೂ ಚನ್ನಾಗಿ ಮಾಗದ ಕಾರಣವೋ ಏನೋ ರುಚಿಯೂ ತೋತಾಪುರಿಯದ್ದೆ! ‘ರುಚಿಯೇನು ಅಂತಹ ವಿಶೇಷವಿಲ್ಲವಲ್ಲ’. ‘ಅಂದರೆ!’ ‘ರುಚಿಯೂ ಹೆಚ್ಚು ಕಡಿಮೆ ತೋತಾಪುರಿಯದ್ದೆ’ ಅಂದೆ. ರಟ್ಟಿನ ಪೆಟ್ಟಿಗೆಯಲ್ಲಿ ಆಯ್ದ ಹಣ್ಣುಗಳೂ, ಮಗನೂ ಒಟ್ಟಾಗಿ ಬೆಪ್ಪಾಗಿ ನನ್ನನ್ನು ದಿಟ್ಟಿಸುವ ಹಾಗೆ ಕಂಡಿತು. ಎರಡು ದಿನ ತಡೆದು ಏನೋ ಮಾತಾಡುತ್ತ ಗಮನಿಸದೆ ತಟ್ಟೆಯಲ್ಲಿ ಕತ್ತರಿಸಿ ಹಾಕಿದ್ದನ್ನು ಕೈಗೆಸಿಕ್ಕಿದ್ದನ್ನು ಬಾಯಿಗೆ ಹಾಕಿದವನಿಗೆ ‘ಅರೆ ಇವತ್ತಿನ ಹಣ್ಣು ಬಹಳ ಚನ್ನಾಗಿದೆ.’ ಎಂದಾಗ ಗೆದ್ದ ನಿಲುವು ಮಗನದ್ದೇ. ‘ಮೊದಲು ಸರಿಯಾಗಿ ಮಾಗದೆ ಕೆಲಸ ಕೆಡ್ತು. ಈಗ ಸರಿಹೋಯ್ತು ನೋಡಿ. ಕೊರೆಯದ ಅಂಗಡಿಗಳಿಗೆ ಇನ್ನು ಆಗಾಗ ಭೇಟಿಕೊಡೋಣ, ವಿವಿಧ ಹಣ್ಣು ಕೊಳ್ಳೋಣ’ ಎಂದು ಗೆದ್ದ ಸಂತೋಷದಲ್ಲಿ ಮಗನೆಂದ. ಲಾಸ್ ಏಂಜಲೀಸಿನ ಎಲ್ಲಾ ಮಾಲುಗಳಲ್ಲಿ ಮಾವಿನ ಹಣ್ಣು ದೊರೆಯುತ್ತವೆ. ಕೆಲವೊಮ್ಮೆ ಎಲ್ಲಾ ಮಾಲುಗಳಲ್ಲಿ ದೊರೆಯುವ ಮಾವಿನ ಜಾತಿ ಒಂದೇ ಆದರೂ ದರ ಮಾತ್ರ ತುಂಬಾ ಹೆಚ್ಚು ಕಡಿಮೆ. ಸಾಮಾನ್ಯವಾಗಿ ಬಿಳಿಯರ ಮಾಲುಗಳಲ್ಲಿ ಎಲ್ಲವೂ ನೋಟಕ್ಕಾದರೂ ಅಚ್ಚುಕಟ್ಟಾಗಿರುವುದಕ್ಕೆ ಹಣ್ಣುಗಳೆಲ್ಲ ತುಟ್ಟಿ ಎಂದಾದರೆ ಮೇಕ್ಸಿಕೊ ಮೂಲದವರ ಮಾಲುಗಳಲ್ಲಿ ಅವೇ ಹಣ್ಣುಗಳು ಅಗ್ಗ. ‘ಬುಧವಾರದ ಮಾರಾಟ’ ಎಂದಿರುವ ಮೆಕ್ಸಿಕೋ ಮೂಲದವರ ಮಾಲುಗಳಲ್ಲಿ ಮಾವಿನ ಹಣ್ಣನ್ನು ರಾಶಿ ಹಾಕುತ್ತಿರುವ ಹಾಗೆ ಪಳಗಿದ ಮಹಿಳಾ ಗಿರಾಕಿಗಳು ಬುಟ್ಟಿ ಬುಟ್ಟಿ ಹಣ್ಣು ಹೆಕ್ಕಿ ಕೊಳ್ಳುತ್ತಾರೆ. ಅಕ್ಕ ಪಕ್ಕದಲ್ಲಿ ಇತರರಿಗೆ ಮೂತಿ ತೂರಲೂ ಅವಕಾಶಕೊಡುವುದಿಲ್ಲ. ಹಾಗೇ ಮನಸ್ಸಿಗೆ ತೋರಿದುದು , ಆ ಸಾಧಾರಣ ಮಟ್ಟದ ಮಾವಿನ ಹಣ ್ಣನ ಜಾಗದಲ್ಲಿ ಭಾರತದ ಮುಂಡಪ್ಪ, ಮಲ್ಲಿಕ, ಕಾಳೆಪ್ಪಾಡಿ ಇದ್ದಿದ್ದರೆ ಈ ಮಹಿಳೆಯರು ಹಣ ್ಣನ ರಾಶಿಯ ಮೇಲೇ ಮಲಗಿ ಬಿಡುತ್ತಿದ್ದರೋ ಏನೋ ಎಂದು.
ಅಮೆರಿಕನರ ಮನೆಯಲ್ಲಿ ಕಿತ್ತಳೆ, ಪ್ಲಮ್, ಮೆಲೊನುಗಳಿರುವ ಪ್ರಾಧಾನ್ಯತೆ ಮಾವಿನ ಹಣ ್ಣಗಿಲ್ಲವೆಂದೇ ಹೇಳಬೇಕು. ಆದರೂ ಪಾನಕ ಇತ್ಯಾದಿ ತಯಾರಿಸಲು ಮಾವಿನ ಹಣ್ಣಿನ ‘ಪಲ್ಪ್’ ಡಬ್ಬಗಳಲ್ಲಿ ಸರಿಯಾಗಿ ಶೇಖರಿಸಿದ್ದು ಸಿಗುತ್ತದೆ. ಭಾರತ ಪಾಕಿಸ್ಥಾನದಿಂದ ಆಮದಾದುವನ್ನೇ ನಾವು ಅಲ್ಲಿ ದುಬಾರಿ ಬೆಲೆ ಕೊಟ್ಟು ಕೊಂಡು ಕೊಳ್ಳಬೇಕಷ್ಟೆ. ಏನಿದ್ದರೂ ತಾಜಾ ಹಣ ್ಣನ ರುಚಿಯೇ ರುಚಿ.

ಮಾಲುಗಳಲ್ಲಿ ಹಣ್ಣು ಆಯ್ದುಕೊಳ್ಳಲು ಬಿಡುತ್ತಾರೆ. ಆದರೆ ಕೊರೆಯ, ಚೀನೀ ಮೂಲದವರ ಮಾಲುಗಳಲ್ಲಿ ರಟ್ಟಿನ ಪೆಟ್ಟಿಗೆಯಲ್ಲಿಟ್ಟ ಹಣ್ಣನ್ನು ಒಮ್ಮೆ ನೋಡಿ ಇನ್ನೊಮ್ಮೆ ದಿಟ್ಟಿಸಿನೋಡಿದರೆ ಕಾವಲುಗಾರ ಹತ್ತಿರಬಂದು ‘ಬೇಕಾದರೆ ಕೊಳ್ಳಿ, ಹೆಚ್ಚು ಪರೀಕ್ಷೆಗೊಳಪಡಿಸಿ ಹಣ್ಣನ್ನು ಹಾಳು ಮಾಡಬೇಡಿ’ ಎಂದು ಎಚ್ಚರಿಸುವನು. ನಮ್ಮಲ್ಲಿಯ ಕರಾವಳಿಯ ತರಕಾರಿ ಅಂಗಡಿಗಳಲ್ಲಿ ಆಯ್ದುಕೊಳ್ಳಲು ತಕರಾರು ಮಾಡುವುದಿಲ್ಲವೆ, ಹಾಗೆ.

ಅಮೆರಿಕೆಯಲ್ಲಿ ಇದ್ದಷ್ಟು ದಿನವೂ ಹತ್ತಿರದ, ದೂರದ ಎಲ್ಲಾ ಮಾಲುಗಳನ್ನು ಜಾಲಾಡಿ ಸಿಗುವ ಎಲ್ಲಾ ವಿಧದ ಮಾವಿನ ಹಣ್ಣನ್ನು ಮಗ ಸಂಪಾದಿಸದೆ ಬಿಡಲಿಲ್ಲ. ಅದಕ್ಕೆ ರಾತ್ರಿ ಊಟದ ಬಳಿಕ ಮಾವಿನ ಹಣ್ಣು ತಿನ್ನುವಾಗ ಗೊರಟಿಗೆ ಭಾರೀ ಬೇಡಿಕೆ. ಹಣ್ಣಿನ ಕೊನೆ ಹನಿ ರುಚಿಯನ್ನು ಸವಿದು ಗೊರಟನ್ನು ನಕ್ಕಿ, ಸವಿದೇ ಆನಂದಿಸಲು. ನಮ್ಮ ಮಾವಿನ ಹಣ್ಣಿನ ಕಾಲ ಗೋಲದ ಮತ್ತೊಂದು ಬದಿಗೆ ಹೋದರೂ ತಪ್ಪಲಿಲ್ಲ! ಅಮೆರಿಕೆಯ ಕ್ಯಾಲಿಫೋರ್ನಿಯ ರಾಜ್ಯದಲ್ಲಿ ನಾವಿದ್ದಾಗ ಭಾರತದ್ದೇ ಪರಿಸರ – ಹೋಮ್ ಎವೇ ಫ್ರಂ ಹೋಮ್ !

Facebook ಕಾಮೆಂಟ್ಸ್

A. Ramachandra Bhat: ಕೇರಳ-ಕರ್ನಾಟದ ಗಡಿಯ ಊರು ಅಡ್ಯನಡ್ಕ, ನನ್ನ ಹುಟ್ಟೂರು. ಸ್ವಾತಂತ್ರ್ಯ ಪೂರ್ವದ ವ್ಯಕ್ತಿ ನಾನು. ನನ್ನ ತಂದೆಯವರಿಂದ ತೊಡಗಿ ಅಧ್ಯಾಪನವೇ ಜೀವನೋಪಾಯವಾಗಿದ್ದ ನನ್ನ ದೊಡ್ಡ ಕುಟುಂಬದಲ್ಲಿ ಕವಲು ದಾರಿ ಹಿಡಿದು ಆ ದಾರಿ ಬಿಟ್ಟು ಜೀವ ವಿಮಾ ನಿಗಮದಂತಹ ಸಂಸ್ಥೆಯಲ್ಲಿ ದುಡಿಯುವ ದಾರಿ ಕಂಡುಕೊಂಡ ಪ್ರಥಮ ಕುಟುಂಬ ಸದಸ್ಯ. ಅಡ್ಯನಡ್ಕ, ಕಾಸರಗೋಡು, ಹಾಗು ಪುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ವಿದ್ಯಾಭ್ಯಾಸ. ಎಲ್ಲರಂತೆ ನೌಕರಿಸೇರಿ ದುಡಿದು, ಈಗ ನಿವೃತ್ತನಾಗಿರುವವ. ಜೀವನದುದ್ದಕ್ಕೂ ಹೊಸ ಜಾಗ, ಜನ, ಘಟನೆ, ಚಟುವಟಿಕೆಗಳ ಬಗ್ಗೆ ಕುತೂಹಲ, ಅನುಭವಿಸುವ ಹಾಗೂ ದಾಖಲಿಸುವ ಹಂಬಲ ಇದ್ದವ. ಹಾಗಾಗಿ ಈಗ ಬಯಸಿದ್ದನ್ನು ಬರೆದು ಹಂಚಿಕೊಳ್ಳುವ ಹವ್ಯಾಸದವ. ಜೀವ ವಿಮಾ ನಿಗಮದಿಂದ ನಿವೃತ್ತಿಯ ನಂತರ ಈ ಹವ್ಯಾಸಕ್ಕೆ ದಾರಿ ಕಂಡುಕೊಂಡಿದ್ದೇನೆ. ಈಗ ಹುಟ್ಟೂರು ಬಿಟ್ಟು ವೃತ್ತಿಯಿಂದ ನಿವೃತ್ತಿಯಾದ ಉಡುಪಿಯಲ್ಲೇ ನನ್ನ ಕನಸುಗಳನ್ನು ನೇಯುತಿದ್ದೇನೆ.
Related Post