X

ಮಾರ್ಟಿನ್ ಮಾರುಕಟ್ಟೆ.

‘ನೋಡೀ. . . ., ಕೊತ್ತಂಬರಿ, ಎಣ್ಣೆ ಎಲ್ಲಾ ಖಾಲಿಯಾಗಿದೆ. ತರಕಾರಿ ಏನಾದರೂ ಬೇಕೇ ಬೇಕು. ಇನ್ನು ಏನಾದ್ರು ಸಿಹಿ ಮಾಡ್ಬೇಕಿದ್ರೆ ಸಕ್ಕರೆಯೂ ಅಷ್ಟು ಬೇಕು. . . . .’
‘ಅಲ್ಲ ಮಾರಾಯ್ತಿ, ನಾನೇನೂ ಉಡುಪಿ ಪೇಟೆಗೆ ಹೋಗ್ತಿಲ್ಲ. ಮಗನಜೊತೆ ಹೊರಗೆ ಹೋಗ್ತೀದ್ದೀನಿ. ಅಷ್ಟಕ್ಕೂ ಇದೇನು ಉಡುಪಿ ಪೇಟೆ ಎಂದುಕೊಂಡೆಯ?. ಬೇಕಾದ್ದನ್ನೆಲ್ಲ ಮಕ್ಕಳಲ್ಲೇ ಕೇಳು. . . .’

ಮಾತು ಹೀಗೇ ಸಾಗುತ್ತಿದ್ದಾಗ ಸೊಸೆ ನಗುತ್ತಾ ಅಂದಳು’ ಅತ್ತೆ, ನಾವು ವಾಲ್ ಮಾರ್ಟ್ ಮತ್ತು ಕೋಸ್ಟಕೋಗೆ ಹೋಗೋಣ. ಬೇಕಾದೆಲ್ಲ ಸಾಮಾನುಗಳು ಅಲ್ಲಿ ಸಿಗುತ್ತವೆ.’
‘ಏನು ನಮ್ಮೂರ ಬಿಗ್ ಬಜ್ಹಾರಿನಂತಿದೆಯೊ?’

‘ಅಪ್ಪ, ಅಮ್ಮ ಬನ್ನಿ . ಹೇಗಿದೆಯಂತ ನೀವೇ ನೋಡುವಿರಂತೆ.’ ಎಂದ ನನ್ನ ಮಗ ಕಾರಿನ ಬಾಗಿಲು ತೆಗೆದು ನಮ್ಮಿಬ್ಬರನ್ನು ಒಳಗೆ ಬಿಟ್ಟ. ಸೊಸೆ ಕೈ ಬೀಸಿಕೊಂಡು ಬಂದು ‘ಚೀಲಗೀಲ ಏನೂ ಬೇಡ ಅತ್ತೆ, ಎಲ್ಲಾ ಅಲ್ಲೇ ಸಿಗುತ್ತದೆ.’ ಎಂದು ಕಾರಿನೊಳಗೆ ಅವಳೂತುರುಕಿದಳು. ಕಾರು ಹಿಂದೆ ಸರಿಯುತ್ತಿದ್ದಂತೆ ಸೊಸೆ ಕಾರಿನಲ್ಲಿದ್ದ ‘ರಿಮೋಟ್’ ಒತ್ತಿದಳು. ಮನೆಯ ಗೇಟು ಸರಿಯಿತು. ರಸ್ತೆಗೆ ಬಂದಿಳಿದ ಕಾರು ‘ವ್ರೂಂ. ..’ ಎಂದು ಮುಂದೆ ನೆಗೆಯಿತು. ಆಗಲೇ ನನ್ನ ಗಮನಕ್ಕೆ ಬಂದುದು ಆ ಕಾರಿಗೆ ‘ಗಿಯರೇ’ ಇಲ್ಲ ಎಂದು. ಸ್ವಯಂಚಾಲಿತ ಗಿಯರ್ ಹೊಂದಿದ್ದು ಯಾವುದೆ ಕಸರತ್ತಿಲ್ಲದೆ ಹಿಂದೆ ಮುಂದೆ ಚಲಿಸಬಲ್ಲುದು. ಮಗನೆಂದ ‘ಇಲ್ಲಿ ಹೆಚ್ಚಿನ ಎಲ್ಲಾ ವಾಹನಗಳು ಅಟೊ ಗಿಯರಿನವು’ ಎಂದು.

ಲಾಸ್ ಏಂಜಲೀಸ್ ನಲ್ಲಿ ಕಾರು ಓಡಾಡುವುದನ್ನು ಗಮನಿಸಿದೆ. ಎಲ್ಲಾ ವಾಹನಗಳು ರಸ್ತೆಯ ಬಲ ಭಾಗದಲ್ಲೇ ಚಲಿಸುತ್ತವೆ. ಕಾರಿನಲ್ಲಿ ಕೂತ ನನಗೆ ಒಳಗೇ ಭಯ. ನಮ್ಮೂರ ಎಕ್ಸಪ್ರೆಸ್ ಬಸ್ಸುಗಳ ಚಿತ್ರ ಮನಸ್ಸಿನಲ್ಲೇ ಬಂದು ತಪ್ಪಾಗಿ ಬಲ ಬದಿಗೆ ಚಲಿಸಿ ಯಾವುದಾದರೂ ದೈತ್ಯ ವಾಹನಕ್ಕೆ ಮುಖಾ ಮುಖಿ ಹೊಡಕೊಂಡರೆ, ದೈವವಶಾತ್ ತಪ್ಪಿಸಿಕೊಂಡಮೇಲೆ ಎದುರಿನ ಚಾಲಕನಿಂದ ಯದ್ವಾ ತದ್ವ ಬೈಗುಳ ಉಗುಳ ಸುರಿಸಿಕೊಂಡರೆ ಇತ್ಯಾದಿ. ಇಲ್ಲಿಯ ವಾಹನಗಳ ಓಡಾಟಕ್ಕೆ ಮನಸ್ಸು ಇನ್ನೂ ಹೊಂದಿಕೊಳ್ಳಬೇಕಷ್ಟೆ! (ನನ್ನಾಕೆಗೆ ಇಲ್ಲಿಯ ಗ್ಯಾಸ್ ಒಲೆಗಳ ತಿರುಗಣೆಗಳನ್ನು ತಿರುಗಿಸುವ ದಿಕ್ಕು ಇನ್ನೂ ದಿಕ್ಕು ಕೆಡಿಸುವಂತಹದು!) ಇಷ್ಟೆಲ್ಲಾ ಯೋಚನೆಗಳು ಸಾಗುತ್ತಿರುವಾಗಲೇ ರಸ್ತೆಯ ತಿರುವಿನಲ್ಲಿ ಒಬ್ಬ ಯಾವುದೋ ಕಂಪೆನಿಯ ಫಲಕ ಹಿಡಿದು ಕುಣ ಸುತ್ತಿದ್ದನು. ಸೊಸೆಯಂದಳು’ ಇದೂ ಒಂದು ರೀತಿಯ ಜಾಹೀರಾತು, ಗಂಟೆಗೆ ಹತ್ತೋ ಹನ್ನೊಂದೋ ಡಾಲರಿಗೆ ದುಡಿಯುತ್ತಾನೆ.’ ಗಮನಿಸಲೀ ಗಮನಿಸದಿರಲೀ, ಮನುಷ್ಯರೇ ಇಲ್ಲದ ರಸ್ತೆಯಲ್ಲಿ ಅವನ ಏಕಾಂಗೀ ಪ್ರದರ್ಶನ ಗಮನ ಸೆಳೆಯುವಂತಹದೇ!
ಮುಂದುವರಿದ ಮಗನ ಕಾರು ನಾವು ನಾಲ್ಕು ಮಂದಿಯನ್ನು ಹೇರಿಕೊಂಡು ವಿಶಾಲವಾದ ವಠಾರಕ್ಕೆ ಬಂತು. ಎಲ್ಲಿ ನೋಡಿದರೂ ಕಾರುಗಳು. ನಮ್ಮೂರ ಕಲ್ಯಾಣ ಮಂಟಪದ ಸುತ್ತ ಸೇರುವ ಕಾರುಗಳಿಂತ ಎಷ್ಟೋ ಪಟ್ಟು ಜಾಸ್ತಿ! ನಮ್ಮ ಕಾರನ್ನು ನಿಲ್ಲಿಸುವುದೆಲ್ಲಿ? ವಠಾರಕ್ಕೆ ಎರಡು ಸುತ್ತು ಬಂದು ಮತ್ತೊಂದು ಕಡೆ ಮಗ ಕಾರು ನಿಲ್ಲಿಸಿದ. ನಿಲ್ಲಿಸಿದನೆಂದರೆ ಅಡ್ಡಾದಿಡ್ಡಿ ನಿಲ್ಲಿಸಿದನೆಂದಲ್ಲ. ನಿಗದಿತ ಜಾಗದಲ್ಲಿ ನಿಲ್ಲಿಸಿದ. ಕಾರಿನಿಂದ ಹೊರ ಬಂದಾಗ ಗಮನಿಸಿದ್ದು ಬೃಹದಾಕಾರದ ವಿಶಾಲವಾದ ಕಟ್ಟಡ. ಒಂದು ನಮುನೆಯ ಭಾರೀ ಕಲ್ಯಾಣ ಮಂಟಪವೆ. ಇದೇ ವಾಲ್ ಮಾರ್ಟ್. ಹೊರಗಿನಿಂದಲೇ ಇಷ್ಟು ದೈತ್ಯ, ಇನ್ನು ಒಳಗಿನಿಂದ?

ತೋಟಗಾರಿಕೆ ವಿಭಾಗವೇ ಒಂದು, ಮಿಕ್ಕೆಲ್ಲಾ ಬೇರೆ. ತೋಟಗಾರಿಕೆ ವಿಭಾಗದೊಳಗೆ ನುಗ್ಗಿದಾಗ ಅದೊಂದು ದೊಡ್ಡ ಹೂವಿನ ತೋಟಕ್ಕೆ ಬಂದಂತೆ. ಎಲ್ಲಾ ವಿಧದ ಹೂ, ತರಕಾರಿಗಳ ಗಿಡಗಳು ಅಚ್ಚುಕಟ್ಟಾಗಿ ಚಟ್ಟಿಗಳಲ್ಲಿ ಬೆಲೆಪಟ್ಟಿಯೊಂದಿಗೆ ಹವಾ ನಿಯಂತ್ರಿತ ಕೊಠಡಿಯಲ್ಲಿ ನಮ್ಮನ್ನು ಎದುರುಗೊಳ್ಳುತ್ತವೆ. ಇನ್ನೇನು ಜತೆಗೆ ತೋಟಗಾರಿಕೆಗೆ ಬೇಕಾದ ಎಲ್ಲ ಬೀಜಗಳು, ಉಪಕರಣಗಳು, ಕ್ರಿಮಿನಾಶಕಗಳು, ಗೊಬ್ಬರಗಳು ಎಲ್ಲಾ ಒಂದೇ ಮಾಡಿನಡಿ. ಪ್ರತಿಯೊಂದರ ಮೇಲೂ ‘ಅತ್ಯಂತ ಕನಿಷ್ಠÀ್ಟ ಬೆಲೆ’ ಎಂದು ಹಣೆ ಬರಹ. ನನ್ನಾಕೆಗೆ ಹೂಗಿಡ, ಬೀಜಗಳನ್ನು ಕಂಡಾಗ ಮನಸ್ಸು ಅರಳಿತು. ಆದರೆ ದರದ ಪಟ್ಟಿ ನೋಡಿ ಮನಸ್ಸಿನಲ್ಲಿ ಡಾಲರಿನಿಂದ ರೂಪಾಯಿಗೆ ಬದಲಾಯಿಸಿ ನೋಡಿದಾಗ ಮುಂದುವರಿದ ಕೈಯನ್ನು ಹಿಂದೆ ತಂದುಕೊಂಡಳು! ‘ಏನಿದು ಕನಿಷ್ಟ ಬೆಲೆ, ಸಾವಿರ ಗಟ್ಟಲೆಯಲ್ಲಿ!’ ಎಂದು ಗೊಣಗಿದಳು. ‘ಅವರದ್ದು ಅವರಲ್ಲಿ ಕನಿಷ್ಠ ಬೆಲೆ. ಬೇರೆಯವರಿಗೆ ಹೋಲಿಸಿದ್ದೇಕೆ?’ ಎಂದೆ.
ಮಾರ್ಟಿನ ಮುಖ್ಯವಿಭಾಗಕ್ಕೆ ಬಂದರೆ ಕಾಣುವುದು ಒಂದೇಮಾಡಿನಡಿ ಎಲ್ಲಾ ಸಾಮಾಗ್ರಿಗಳು. ನಮ್ಮ ಚರ್ಮ ತೆಳ್ಳಗಿದ್ದು ಈ ಸಾಮಾಗ್ರಿಗಳಿಗೆ ಒದಗಿಸಿದ ಹವಾನಿಯಂತ್ರಣದ ಸೌಲಭ್ಯವನ್ನು ನಾವೂ ಕಡ್ಡಾಯವಾಗಿ ಅನುಭವಿಸಬೇಕಾಯಿತು. ಏನೋ ಮುನ್ನೆಚ್ಚರಿಕೆಯಿಂದ ನಾನೂ ನನ್ನಾಕೆಯೂ ಬೆಚ್ಚಗಿನ ಉಡುಪಿನಲ್ಲೇ ಇದ್ದೆವು. ಪ್ರಾಯಶಃ ಇಲ್ಲಿನ ಎಲ್ಲಾ ಅಂಗಡಿಗಳಲ್ಲೂ ಇದೇ ಸ್ಥಿತಿ ಇರಬೇಕು. ಹೋಗಲಿ ಒಳಗಿನ ಸ್ಥಿತಿ ನೋಡಿದರೆ ಯಾವುದುಂಟು ಯಾವುದಿಲ್ಲ. ಸೂಜಿ, ಕೊತ್ತಂಬರಿ ಸೊಪ್ಪಿನಿಂದ ಹಿಡಿದು ಎಲ್ಲಾ. ಎಲ್ಲವೂ ಕನಿಷ್ಠ ಬೆಲೆಯಲ್ಲಿ! ನಮ್ಮೂರಿನ ಬಿಗ್ ಬಜಾಃರುಗಳು ಹತ್ತಾರು ಇಲ್ಲಿಯ ಮಾಡಿನಡಿ ಇರಬಹುದು. ನನಗೆ ಅಶ್ಚರ್ಯಕ್ಕಿಂತಲೂ ಗಾಬರಿಯೇ. ಇಂತಹ ಒಂದೊಂದು ಮಾರ್ಟುಗಳು ಊರಿಗೆ ಬಂದರೆ ನಮ್ಮಲ್ಲಿಯ ಲಕ್ಷಗಟ್ಟಲೆ ರಾಮಪ್ಪ, ತಿಮ್ಮಪ್ಪರ ವ್ಯಾಪಾರ ಹೇಗೆ ಬಾಳೀತು? ಇವೆಲ್ಲ ಕೆಲವು ಸಾವಿರ ಮಂದಿಗೆ ಕೆಲಸ ಒದಗಿಸಿಯಾವು. ಆದರೆ ಮಿಕ್ಕ ಲಕ್ಷಗಟ್ಟಲೆ ಮಂದಿಗೆ? ಇಂತಹ ಮಾರ್ಟುಗಳು ಎಲ್ಲ ವಹಿವಾಟು ಮಾಡುವಾಗ, ‘ಏನ್ಸಾರ್, ನಿಮ್ಮನ್ನು ಕೆಲವು ದಿವಸಗಳಿಂದ ಕಾಣಲಿಕ್ಕೇ ಇಲ್ಲ, ‘ಅಣ್ಣ, ಇದು ಒಳ್ಳೆ ಹಣ್ಣಾಗಿದೆ ನೋಡಿ’, ‘ಒಂದುವರೆ ರುಪಾಯಿಗೆ ಕೊಡುತ್ತೀರೋ ಹೇಗೆ’ ಇತ್ಯಾದಿ ಆತ್ಮೀಯ ವಹಿವಾಟಿನ ಮಾತುಗಳೇ ಬಂದಾಗಿಬಿಡಬಹುದಲ್ಲಾ. ಬಂದವರೆಲ್ಲ ತಮಗೆ ಬೇಕಾದುದನ್ನು ಬಾಚಿಕೊಂಡು ನಿತ್ಯವೂ ಕಾಣುವ ‘ಕನಿಷ್ಠ ಬೆಲೆ’ ಕೊಟ್ಟು, ಮಾತುಕತೆ ಏನೂ ಇಲ್ಲದೆ, ಸದಾ ಪ್ಲಾಸ್ಟಿಕ್ ನಗು ನೋಡುತ್ತ ಗೂಡು ಸೇರುವ ಯಾಂತ್ರಿಕತೆ ನೆನಸಿಕೊಂಡಾಗ ‘ಇದೇ ವೈಭವವೋ?’ ಎಂದು ಅನಿಸಿತು. ನನ್ನ ಭಯವನ್ನು ಸೊಸೆಯಲ್ಲಿ ಅಂದೂ ಬಿಟ್ಟೆ. ‘ಇಲ್ಲಿ ಕೆಲಸ ಮಾಡುವ ಕೈಗಳು ಕಡಿಮೆ ಇರಬಹುದು. ಆದರೆ ನನ್ನ ಹುಟ್ಟೂರಲ್ಲಿ ಇರುವ ಸಾವಿರಾರು ಕೈಗಳಿಗೆ ಕೆಲಸ ತಪ್ಪಿ ಹೋದರೆ ಅವರು ಹೇಗೆ ಬಾಳಬೇಕು? ನಮ್ಮಲ್ಲಿಯ ಕೃಷಿಕ ಇಂತಹವರ ಸಾಲದ ಹೊರೆಯಲ್ಲಿ ಜೀವನವಿಡೀ ಹೇಗಿರಬೇಕು? ಗಿರಾಕಿಗಾದರೂ ಅಗ್ಗದಲ್ಲಿ ಸಿಗುತ್ತದೆಯೇ?’ ಅವಳೂ ಪೆಚ್ಚಾದಳು.

ನಮ್ಮ ಪಟಲಾಮು ವಾಲ್ ಮಾರ್ಟಿನಿಂದ ಕೋಸ್ಟ್ಕೊ ಎಂಬ ಮಳಿಗೆಗೆ ಬಂತು. ಇದೂ ವಾಲ್ ಮಾರ್ಟಿನ ಗೋತ್ರದ ಮಳಿಗೆಯೇ. ಆದರೆ ಮೊದಲೇ ನೊಂದಾಯಿಸಿ ಕೊಂಡ ಸದಸ್ಯ ಗಿರಾಕಿಗಳಿಗೆ ಮಾತ್ರ. ಒಳಗೆ ಜನ ಸಮೂಹ, ಹೊರಗೆ ಕಾರುಗಳ ಮೇಳ ಕಂಡಾಗ ಅನಿಸಿದ್ದು ‘ನೊಂದಾಯಿಸಿ ಕೊಂಡವರು ಎಷ್ಟು ಸಾವಿರ ಮಂದಿ?’ ಎಂದು. ಇಲ್ಲಿ ಎಲ್ಲೂ ಕನಿಷ್ಟ ಬೆಲೆ ಎಂದು ನಮೂದಿಸದಿದ್ದರೂ ಅವರದ್ದೇ ಕನಿಷ್ಠ ಬೆಲೆ. ಆದರೆ ವಾಲ್ ಮಾರ್ಟಿ ಗಿಂತ ಅಗ್ಗ! ಅಂದರೆ ನಮ್ಮಲ್ಲಿ ರಾಮನ ಅಂಗಡಿಯ ಬದನೆಕಾಯಿಗೂ ಚೋಮನ ಅಂಗಡಿಯ ಬದನೆಕಾಯಿಗೂ ದರದಲ್ಲಿ ವ್ಯತ್ಯಾಸ ಇರುವ ಹಾಗೆ ಈ ದೈತ್ಯ ಮಳಿಗೆಗಳ ಪೈಪೋಟಿ! ಆದರೆ ಗಿರಾಕಿಗಳ ಮೇಲಿನ ಪ್ರೀತಿಯಿಂದ ಫಾಯದೆ ತೋರಿಸುವಂತಹದ್ದಲ್ಲ. ಇಲ್ಲಿಯ ಆಹಾರ ಮಳಿಗೆಗಳದ್ದೇ ವೈಶಿಷ್ಟ್ಯ. ಬಂದವರು ಹೇಗೂ ಖರೀದಿಸಿಯೇ ಸಿದ್ದ ಎಂದು ಗೊತ್ತಿದ್ದ ಮಳಿಗೆಯವರು, ಸಣ್ಣಮಕ್ಕಳ ಜತೆ ತಂದೆ ತಾಯಿ ಕಡ್ಡಾಯ ಇರಬೇಕು ಎಂದು ಸೂಚಿಸಿದ್ದಾರಾದರೂ ನಮ್ಮ ಹಾಗೆ ಸಂಸಾರ ವಂದಿಗರಾಗಿ ಪಟಲಾಮನ್ನು ನಿರೀಕ್ಷಸಿರಲಿಕ್ಕಿಲ್ಲ. ಅದಕ್ಕೇ ತಿಂಡಿ ತೀರ್ಥ ವಿಭಾಗದಲ್ಲಿ ಪ್ರತಿಯೊಂದು ಕಡೆ ‘ಸೇಂಪಲ್’ ಕೊಡುವುದು. ಐಸ್ ಕ್ರೀಮ್, ಚಾಕಲೆಟ್, ಮೊಸರು, ರೊಟ್ಟಿ ಇತ್ಯಾದಿಗಳನ್ನು ಕಪ್ಪು ದಿರಸು ಧರಿಸಿದ ಧಡಿಯರು ಕೊಡುತ್ತಿದ್ದರು. ಇವರನ್ನು ಧಡಿಯರೆಂದಾಗ ಅಲ್ಲಿದ್ದ ಮಿಕ್ಕವರು ಸಣ್ಣಗೆ ತೆಳ್ಳಗೆ ಇದ್ದರೆನ್ನುಕೊಳ್ಳಬೇಡಿ. ಈ ಸೇಂಪಲ್ ತಿಂದೇ ಕೆಲವು ಸಲ ಹೊಟ್ಟೆ ತುಂಬುತ್ತದಂತೆ- ನನ್ನ ಸೊಸೆ ಅಂದಳು. ಆದರೆ ಎಲ್ಲೂ ಮದ್ಯದ ಸೇಂಪಲ್ ಕೊಡುವುದು ಕಂಡು ಬರಲಿಲ್ಲ. ಒಂದು ವೇಳೆ ಇದ್ದಿದ್ದರೆ ಮದ್ಯ ಪ್ರಿಯರು ಸೇಂಪಲ್ ಸೇವಿಸುತ್ತಾ ಅಲ್ಲಿಯೇ ಕುಳಿತಿರುತಿದ್ದರೋ ಏನೋ!

ಈ ಮಳಿಗೆಗಳಲ್ಲಿ ಕಂಡ ಮತ್ತೊಂದು ವಿಶೇಷ ಸಾವಯವ ವಿಭಾಗದ ಹಾಲು, ತರಕಾರಿ, ಹಣ್ಣು ಎಂದೆಲ್ಲ. ಇವುಗಳ ಬೆಲೆ ಜಾಸ್ತಿ. ಅಂದರೆ ಮಿಕ್ಕವೆಲ್ಲ ಬಯೊಟೆಕ್ ವಿಧಾನದಿಂದ ಸಾರಾಸಗಟು ಬೆಳಸಿದ್ದು. ಈರೀತಿ ಸಾರಾಸಗಟು ಬೆಳೆದುದು, ಕೃತಕ ಆದರೆ ನಾಲಿಗೆಗೆ ರುಚಿಸುವ ಅಗ್ಗದ ಹೈ ಫ್ರುಕ್ಟೋಸ್ ಸಕ್ಕರೆಯ ಉಪಯೋಗ, ಮದ್ಯ ಮಾಂಸ ಎಲ್ಲ ಸೇರಿ ಅಮೇರಿಕನ್ನರನ್ನು ಧಡೂತಿಗಳಾಗಿ ಮಾಡುತ್ತಿದೆಯೋ ಏನೋ. ಮನೆಗೆ ಬರುತ್ತ ದಾರಿಯಲ್ಲಿ ಲಾಸ್ ಏಂಜಲೀಸ್ ನಗರ ಮಧ್ಯದಲ್ಲೇ ತೈಲ ಬಾವಿಗಳಿಂದ ತೈಲವೆತ್ತುವ ದೈತ್ಯ ಪಂಪುಗಳನ್ನು ಕಂಡಾಗ ಅನಿಸಿತು ‘ಪ್ರತಿಯೊಬ್ಬನಿಗೂ ಒಂದೊಂದು ಕಾರು, ಕ್ಯಾಲರಿ ಕರಗದ ಆಹಾರ ಸೇವನೆ ಧಡೂತಿಗಳನ್ನಾಗಿ ಮಾಡದೆ ಇನ್ನೇನು ಸಾಧ್ಯ ‘ ಎಂದು.
ಬಹುಶಃ ನಾನು ನೋಡಿದುದು ಇಲ್ಲಿಯ ಒಂದು ವೈಖರಿ ಮಾತ್ರ.

Facebook ಕಾಮೆಂಟ್ಸ್

A. Ramachandra Bhat: ಕೇರಳ-ಕರ್ನಾಟದ ಗಡಿಯ ಊರು ಅಡ್ಯನಡ್ಕ, ನನ್ನ ಹುಟ್ಟೂರು. ಸ್ವಾತಂತ್ರ್ಯ ಪೂರ್ವದ ವ್ಯಕ್ತಿ ನಾನು. ನನ್ನ ತಂದೆಯವರಿಂದ ತೊಡಗಿ ಅಧ್ಯಾಪನವೇ ಜೀವನೋಪಾಯವಾಗಿದ್ದ ನನ್ನ ದೊಡ್ಡ ಕುಟುಂಬದಲ್ಲಿ ಕವಲು ದಾರಿ ಹಿಡಿದು ಆ ದಾರಿ ಬಿಟ್ಟು ಜೀವ ವಿಮಾ ನಿಗಮದಂತಹ ಸಂಸ್ಥೆಯಲ್ಲಿ ದುಡಿಯುವ ದಾರಿ ಕಂಡುಕೊಂಡ ಪ್ರಥಮ ಕುಟುಂಬ ಸದಸ್ಯ. ಅಡ್ಯನಡ್ಕ, ಕಾಸರಗೋಡು, ಹಾಗು ಪುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ವಿದ್ಯಾಭ್ಯಾಸ. ಎಲ್ಲರಂತೆ ನೌಕರಿಸೇರಿ ದುಡಿದು, ಈಗ ನಿವೃತ್ತನಾಗಿರುವವ. ಜೀವನದುದ್ದಕ್ಕೂ ಹೊಸ ಜಾಗ, ಜನ, ಘಟನೆ, ಚಟುವಟಿಕೆಗಳ ಬಗ್ಗೆ ಕುತೂಹಲ, ಅನುಭವಿಸುವ ಹಾಗೂ ದಾಖಲಿಸುವ ಹಂಬಲ ಇದ್ದವ. ಹಾಗಾಗಿ ಈಗ ಬಯಸಿದ್ದನ್ನು ಬರೆದು ಹಂಚಿಕೊಳ್ಳುವ ಹವ್ಯಾಸದವ. ಜೀವ ವಿಮಾ ನಿಗಮದಿಂದ ನಿವೃತ್ತಿಯ ನಂತರ ಈ ಹವ್ಯಾಸಕ್ಕೆ ದಾರಿ ಕಂಡುಕೊಂಡಿದ್ದೇನೆ. ಈಗ ಹುಟ್ಟೂರು ಬಿಟ್ಟು ವೃತ್ತಿಯಿಂದ ನಿವೃತ್ತಿಯಾದ ಉಡುಪಿಯಲ್ಲೇ ನನ್ನ ಕನಸುಗಳನ್ನು ನೇಯುತಿದ್ದೇನೆ.
Related Post