X

ಮೊದಲ ಅನಿಸಿಕೆ

‘ಅಣ್ಣ. ನೀವು ಅಮೇರಿಕೆಗೆ ಬಂದಿಳಿದಾಗ ಮೊದಲು ಏನನಿಸಿತು, ಏನು ವಿಶೇಷವೆನಿಸಿತು?’ ಅಮೇರಿಕೆಯಲ್ಲಿ ನನಗೆ ಮೊದಲು ಎಸೆದ ಪ್ರಶ್ನೆ ತಂಗಿ ಅರುಣಳಿಂದ.

ಏನೂ ತಡವರಿಸದೆ ಉತ್ತರಿಸಿದ್ದೆ ‘ಅಯ್ಯೋ ಮಾರಾಯ್ತಿ, ಎಲ್ಲಿ ನೋಡಿದರೂ ಕಾರುಗಳೇ. ರಸ್ತೆಯಲ್ಲಿ, ಮನೆಮುಂದೆ, ಮನೆಯೊಳಗೆ ಎಲ್ಲಾ ಕಾರುಗಳ ರಾಜ್ಯ. ಇನ್ನೂ ಸ್ವಲ್ಪ ಆಕಡೆ ಕಣ್ಣು ಹಾಯಿಸಿದರೆ ಕಾಣುವುದು ಜನರು. ಅಯ್ಯೋ ಅನ್ನಬೇಕೋ, ಗಾಬರಿ ಪಡಬೇಕೋ ಅಂತಹ ಗಾತ್ರದವರು. ಕಾಣಲಿಕ್ಕೆ ಬರೇ ಬೊಜ್ಜು ತುಂಬಿದ ಗಂಡಸರು, ಹೆಂಗಸರು ಮಕ್ಕಳು. ಒಬ್ಬೊಬ್ಬನೂ ನನ್ನಂತಹವನ ಹತ್ತು ಪಟ್ಟು ತೂಕವಿರಬಹುದೇನೋ. ಇನ್ನು ಅವರ ಬಟ್ಟೆ ಬರೆ ಚಡ್ಡಿಯೊ, ಟೀ ಶರ್ಟ್‍ಗಳೋ, ಬನಿಯನ್ನೋ. ಪಕ್ಕದಲ್ಲಿ ಒಬ್ಬ ಹಾದು ಹೋದರೆ ಘಂ ಎಂದು ಪರಿಮಳ ಹಂಚಿಕೊಂಡೇ ಹೋಗುತ್ತಾನೆ. ಹೀಗೆಲ್ಲಾ ಯಾಕೆ? ಇವೇ ಮೂರು ಪ್ರಶ್ನೆಗಳು ಮೊದಲಿಗೇ ನನಗೆ ಮೂಡಲು ಕಾರಣ ನಾನು ಕಾರಿಗೆ ಅವಲಂಬಿಸದೆ, ನನ್ನ ಬಟ್ಟೆಬರೆಗೆ ಯಾವುದೇ ವಾಸನೆ ಇಲ್ಲದೆ, ನಾನು ಯಾವುದೇ ಮಾನದಿಂದಲೂ ಸಣಕಲನವನಾದ ಕಾರಣ ಇರಬಹುದೇನೋ.

ನನ್ನ ಮಾತು ಕೇಳಿ ಪಕಪಕನೆ ನಗಲು ಸುರುಮಾಡಿದ ಅರುಣ ‘ಅಣ್ಣ, ಸರಿಯಾಗೆ ಹೇಳಿದಿರಿ. ಆದರೆ ಇದಕ್ಕೆ ಕಾರಣ ಏನಿರಬಹುದು?’

‘ನನಗೇನು ಗೊತ್ತು? ನೀನೇ ಹೇಳಬೇಕು. ಇಪ್ಪತ್ತು, ಇಪ್ಪತ್ತೈದು ವರ್ಷಗಳಿಂದ ಇಲ್ಲಿಯೇ ಇದ್ದೀಯಲ್ಲ!’

‘ಇಲ್ಲಿಯ ಜೀವನ ಶೈಲಿಯಲ್ಲಿ ಎಲ್ಲರೂ ದುಡಿಯುವವರೇ. ಮನೆಯಲ್ಲಿ ಗಂಡ ಹೆಂಡತಿ ಇದ್ದರೆ ಇಬ್ಬರೂ ದುಡಿಯುವವರೇ. ಸಣ್ಣ ಮಕ್ಕಳಿದ್ದರೆ ಅವರನ್ನು ನ್ಯಾನಿಗಳಿಗೊಪ್ಪಿಸಿ ಕೆಲಸಕ್ಕೆ ಹೋಗುವುದು. ದುಡಿದೇನು ಮಾಡುವುದು ಎಂದು ಕೇಳಬಹುದು. ಇಲ್ಲಿ ಪ್ರತಿಯೊಂದಕ್ಕೂ ಬೆಲೆ. ಪುಕ್ಕಟೆ ಎಂದು ಯಾವುದೂ ಇಲ್ಲ. ಮಕ್ಕಳು ಮರಿಗಳಾದಾಗ ಖರ್ಚುವೆಚ್ಚ ಇನ್ನೂ ಜಾಸ್ತಿ. ಈ ಮಧ್ಯೆ ಸ್ವಂತದ ಮನೆಗೆ ಯತ್ನಿಸಿದಿರೋ ಜೀವನ ಪರಿಯಂತ ಮುಗಿಯದ ಸಾಲ ತಲೆ ಮೇಲೆ. ಆಗ ಕೆಲಸಕ್ಕೆ ಎಲ್ಲಿಯಾದರೂ ಹೋಗಲೇ ಬೇಕಾದ ಜರೂರಿ. ನಮ್ಮ ನಮ್ಮ ಕೆಲಸ ಮಾಡಲು ಭಾರತದಂತೆ ಆಳುಕಾಳುಗಳು ಇಲ್ಲಿ ಇಲ್ಲ. ದೊರೆತರೂ ದುಬಾರಿ. ಅದಕ್ಕಾಗಿ ಸಾಧ್ಯವಾದಷ್ಟು ಯಂತ್ರಗಳ ಬಳಕೆ. ಗಂಡ ಹೆಂಡತಿ ಬೇರೆ ಬೇರೆ ಕಡೆ ಕೆಲಸ ಮಾಡುವಾಗ ಬಸ್ಸು, ಕಾರು, ರೈಲುಗಳನ್ನೇ ಕಾದು ಹೋಗುವುದು ಅಸಾಧ್ಯ. ಕೊನೆಗೆ ಕಾರಿಗೇ ಶರಣು. ಮನೆಯಲ್ಲಿ ಒಲೆ, ಬಟ್ಟೆ ಒಗೆಯುವ ಯಂತ್ರ, ಪೊರಕೆ ಗಳಷ್ಟೇ ಕಾರೂ ಅವಶ್ಯವೇ. ಸೂಚಿಸ ಬಹುದು – ಪುಟ್ಟ ಪುಟ್ಟ ಕಾರುಗಳನ್ನು ಇಟ್ಟುಕೊಳ್ಳಬಹುದಲ್ಲ – ಎಂದು. ಆದರೆ ದೂರದ ಊರಿಗೆ ಹೋಗಲು, ಸಮಯ ಹೊಂದಿಸಿಕೊಳ್ಳಲು ಅತಿವೇಗದಲ್ಲಿ ಹೋಗ ಬೇಕಾದಲ್ಲಿ ಪುಟಾಣ  ಕಾರುಗಳು ಸೋಲುವವೇ. ಮತ್ತೆ ಇಲ್ಲಿ ಮನೆಬಳಗವೆಂದರೆ ಮನೆಯ ನಾಯಿಗಳೂ ಸೇರಿದವು. ವಾರಾಂತ್ಯದಲ್ಲಿ ಮನೆಯಲ್ಲಿ ಯಾರೂ ಇರುವುದಿಲ್ಲ. ಎಲ್ಲರೂ ನಿತ್ಯದ ಜಂಜಾಟದಿಂದ ಬಿಡುಗಡೆಗೆ ಹೊರಗೆಲ್ಲಿಗಾದರೂ ಹೋಗುವವರೇ. ಹೊರಗೆ ಹೋಗುವುದೆಂದರೆ ಸಣ್ಣ ರೀತಿಯಲ್ಲಿ ಮನೆ ಬದಲಾಯಿಸಿದಂತೆಯೇ. ಸಾಮಾನು ಸರಂಜಾಮು ಕಟ್ಟಿಕೊಂಡು ಮನೆ ನಾಯಿಗಳನ್ನೂ ಕೂಡಿಕೊಂಡೇ ಹೊರಡುವುದು. ಈ ವ್ಯವಸ್ಥೆಗೆ ದೈತ್ಯ ಕಾರುಗಳೇ ಬೇಕು. ಅದೊಂದು ವೈಭವದ ವಸ್ತುವೇ ಅಲ್ಲ. ಇನ್ನು ನಮ್ಮಲ್ಲಿಗೆ ಅಗತ್ಯವೇ ಎಂದಾಗ ಹೂತೋಟ ಸಜ್ಜಿಗೋ, ನಲ್ಲಿ ದುರಸ್ತಿಗೋ, ಗಾರೆಗೋ, ಬಣ್ಣಬಳಿಯಲೋ ಯಾರನ್ನಾದರೂ ನೇಮಿಸಿಕೊಂಡರೆ ಅವರು ಎಲ್ಲಿಂದಲೋ ಬರಬೇಕು ಹೋಗಬೇಕು. ಹಾಗಾಗಿ ಇಂತಹ ಕೆಲಸ ಮಾಡುವವನಿಗೂ ವಾಹನ ಅಗತ್ಯ.

ಹೋಗಲಿ ಭಾರತದಂತೆ ಇಲ್ಲಿ ಗೂಡಂಗಡಿಗಳೂ ಇಲ್ಲ. ದಿನಾವಶ್ಯಕ ಎಲ್ಲಾ ವಸ್ತುಗಳಿಗೂ ಮೈಲುಗಟ್ಟಲೆ ಸಾಗಿ ದೊಡ್ಡ ದೊಡ್ಡ ಮಾಲುಗಳಿಂದಲೇ ಕೊಳ್ಳಬೇಕು. ಮೊದಲೆಲ್ಲಾ ಊರಲ್ಲಿ ಲಾರಿಗಳಲ್ಲಿ ಮಂಗಳೂರಿನಿಂದ ಸಾಮಾನು ತರುತಿದ್ದರಲ್ಲ ಹಾಗೆ. ಒಮ್ಮೆಗೇ ವಾರದ್ದೋ, ತಿಂಗಳದ್ದೊ ಕೊಂಡು ಸಾಗಿಸಬೇಕು. ಒಟ್ಟಾರೆ ಇಲ್ಲಿಯದೊಂದು ಆವಶ್ಯಕತೆಗಳ ಸರಪಣ , ಕಾರಿಲ್ಲದೆ ದಿನಚರಿ ಇಲ್ಲ.’

ನಾನೂ ಗಮನಿಸಿದ್ದೆ. ಒಂದು ಕಣೆ ಕರ್ಬೇವು ಸೊಪ್ಪಿಗೆ ಕಾರು ಹೊರಡಿಸಿ ಮಾಲಿಗೆ ಹೋಗಿ ಹೆಕ್ಕಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಮತ್ತೆ ಮನೆಗೆ ಬಂದೇ ಮುಂದಿನ ನಡೆ ನಡೆಯುವ ಸಂದರ್ಭ. ಅಂಗಡಿಗೆ ಹೋಗುವ ನೆಪದಲ್ಲಿ ಕಾಲಾಡುತ್ತದೆ ಎಂದು ನಾವಂದುಕೊಂಡರೆ ಮಾಲಿನೊಳಗೇ ಓಡಾಡಿ ಬೇಕಿದ್ದರೆ ವ್ಯಾಯಾಮ ಮಾಡಿಕೊಳ್ಳಬೇಕಷ್ಟೆ. ದೊಡ್ಡ ವಿಷಯವಲ್ಲ ಬಿಡಿ. ಈಗ ನಮ್ಮೂರಲ್ಲಿ ಕನಿಷ್ಟ ಮೋಟಾರು ಬೈಕಿಲ್ಲದೆ ಓಡಾಡುವವರು ಎಷ್ಟು ಮಂದಿಇದ್ದಾರೆ. ಬೈಕುಗಳ ಓಡಾಟದಲ್ಲಿ ಹಳ್ಳಿರಸ್ತೆಯಲ್ಲಿ ದಾಟುವುದೂ ಕಠಿಣವಾಗಿದೆಯಲ್ಲ!

‘ನೀನೇನೋ ಸಮಜಾಯಿಸಿ ಕೊಟ್ಟೆ. ಹೋಗಲಿ, ಈ ಮಂದಿ ಈ ರೀತಿ ಅಡ್ಡಾದಿಡ್ಡಿ ಯಾಕೆ ಬೆಳೆಯುತ್ತಾರೊ? ನಾನೇ ಅನ್ನುತ್ತೇನೆ ಕೇಳು. ಭಾರತದ ಹತ್ತು ಮಂದಿ ತಿನ್ನುವುದನ್ನು ಇಲ್ಲಿಯ ಒಬ್ಬ ತಿನ್ನುತ್ತಾನೆ. ಕಾರಿನಲ್ಲೇ ಓಡಾಡುತ್ತಾನೆ. ಆನೆ ಬೆಳೆದಂತೆ ಬೆಳೆಯದೆ ಇನ್ನೇನಾಗುತ್ತದೆ’

‘ಹಾಗಲ್ಲಣ್ಣ, ನೀವು ಗಮನಿಸಿಲ್ಲ. ಹೀಗೆ ದಪ್ಪಗಿರುವವರು ಹೆಚ್ಚುಕಡಿಮೆ ಆರ್ಥಿಕವಾಗಿ ದುರ್ಬಲರೇ ಇರುತ್ತಾರೆ. ಅಗ್ಗದ ಆಹಾರ, ನಾಲಗೆಗೆ ರುಚಿಯಾಗುವಂತಹದನ್ನು ಇವರೇ ಕಬಳಿಸುವುದು. ಇಲ್ಲಿಯ ಮೆಕ್ಡೊನಾಲ್ಡ್, ಕೆ ಫ್ ಸಿ ಎಲ್ಲಾ ಮಾರುವುದೇನು? ತಿಂಗಳುಗಟ್ಟಲೆ ‘ಫ್ರೀಝರ್’ ನಲ್ಲಿ ಕೂಡಿಟ್ಟವಲ್ಲವೇ? ಅಗ್ಗದಲ್ಲಿ ಮಾರುತ್ತಾರೆ. ಸಾವಯವ ಹಣ್ಣು, ತರಕಾರಿ, ಹಾಲು ಪರವಾಗಿಲ್ಲ. ಮಿಕ್ಕವು ಧಾರಾಳವಾದರೂ, ಅಗ್ಗವಾದರೂ ದೇಹವನ್ನಷ್ಟು ಉಬ್ಬಿಸುತ್ತದಷ್ಟೆ. ಜತೆಗೆ ಹಾರ್ಮೋನು ಕೊಟ್ಟು ಕೊಬ್ಬಿಸಿದ ಪ್ರಾಣ ಗಳ ಮಾಂಸಾಹಾರ, ಧಾರಾಳ ಕೋಕ್ ಪೆಪ್ಸಿ, ಹೈ ಫ್ರುಕ್ಟೋಸ್ ಬೆರಸಿದ ತಿಂಡಿಗಳು ಕೊಬ್ಬಿಸದೆ ಏನಾಗುತ್ತದೆ. ಇವೆಲ್ಲಾ ತಪ್ಪಿಸಿದರೂ ಕೊಬ್ಬುತ್ತಾರೆ! ಬಹುಶಃ ಯಾಂತ್ರೀಕೃತ ಜೀವನವೂ ಇದಕ್ಕೆ ಪೂರಕವಾಗಿರ ಬಹುದೇನೋ’

ಹಲವು ಕಾರಣಗಳಿರಬಹುದು. ಅಂತೂ ದಪ್ಪಗೆ ಊದಿಕೊಂಡ ಮಂದಿ ಅಮೇರಿಕೆಯಲ್ಲಿ ಸಾಮಾನ್ಯ. ಹಾಗೆಂತ ತೆಳ್ಳಗಿನವರಿಲ್ಲವೇ? ತಂಗಿಯದೇ ಉದಾಹರಣೆ ಜತೆಗೆ ತೆಳ್ಳಗಿನವರಿದ್ದಾರೆ. ಪಾದಚಾರಿಗಳ ದಾರಿಯಲ್ಲಿ, ಪಾರ್ಕುಗಳಲ್ಲಿ ಕೈಗೆ ಪೆಡೋ ಮೀಟರ್ ಕಟ್ಟಿ ನಡೆಯುವವರೆಷ್ಟು ಮಂದಿ, ಓಡುವವರೆಷ್ಟು ಮಂದಿ. ನುರಿತವರಿಂದ ವ್ಯಾಯಾಮ ಕಲಿತುಕೊಳ್ಳುವವರೆಷ್ಟು ಮಂದಿ. ಕೆಲಸದ ವೇಳೆಯೂ ದಿನಾ ಎಷ್ಟು ಹೆಜ್ಜೆ ಹಾಕುತ್ತೇನೆ ಎಂದು ತಮ್ಮ ಮೊಬೈಲುಗಳಲ್ಲಿ ಲೆಕ್ಕ ಹಾಕುವವರೆಷ್ಟು ಮಂದಿ. ಕಂಪೆನಿಗಳಲ್ಲೂ ಸಾಯಂಕಾಲ ಹೊತ್ತು ನೌಕರರಿಗೆ ವೈಜ್ಞಾನಿಕ ವ್ಯಾಯಾಮ ತರಬೇತಿ, ಆಟಗಳ ತರಬೇತಿ ಎಲ್ಲಾ ನಡೆದೇ ನಡೆಯುತ್ತದೆ. ಮನೆ ಮನೆಗಳಲ್ಲೂ ‘ಟ್ರೆಡ್ ಮಿಲ್’ (ಮನೆಯಲ್ಲೇ ನಡೆಯುವ ವ್ಯಾಯಾಮಕ್ಕಾಗಿ) ವ್ಯಾಯಾಮ ಉಪಕರಣಗಳು. ಇಷ್ಟಿದ್ದರೂ ಯಾಕೆ ಊದಿಕೊಳ್ಳುತ್ತಾರೋ. ಏನೋ, ಮನೆ ಅಡುಗೆಗಿಂತ ಮಾಲುಗಳ, ಉಪಹಾರ ಗೃಹಗಳ ಊಟ ತಿಂಡಿಗಳಿಗೆ ಅಂಟಿಕೊಳ್ಳುವುದರಿಂದಲೋ? ಹೀಗಂದು ಕೊಳ್ಳುವಾಗ ನಮ್ಮ ದೇಶದಲ್ಲೂ ನಿಧಾನವಾಗಿ ಊದಿಕೊಳ್ಳುವ ಪ್ರವೃತ್ತಿ ಬೆಳೆಯುತ್ತಿದೆ ಏನೋ ಎಂದು ಅನಿಸುತ್ತಿದೆ. ಟಿವಿ ಕಂಪ್ಯೂಟರ್ ಗಳ ಮುಂದೆನೇ ಕುಳಿತು ಊಟ ತಿಂಡಿ, ವಾರಕ್ಕೊಮ್ಮೆಯಾದರೂ ಹೋಟೇಲಿಗೇ ಹೋಗಬೇಕೆನ್ನುವ ಪ್ರವೃತ್ತಿ, ಮಕ್ಕಳು ಮುಖ್ಯವಾಗಿ ನಗರ ಪ್ರದೇಶದವರು ಊದಿಕೊಳ್ಳುವ ದಾರಿಗೆ ದೂಡಲ್ಪಡುತ್ತಿದ್ದಾರೇನೊ. ಕುಪೋಷಣೆಯಿಂದ ಬಳಲುವ ನಮ್ಮಲ್ಲೂ ಈ ಬೆಳವಣ ಗೆ ಆತಂಕದ್ದಲ್ಲವೇ?

‘ಏನೋ ವಿಚಾರ ಎಲ್ಲೆಲ್ಲಿಗೋ ಮೂರನೆಯ ಪ್ರಶ್ನೆಗೆ ಏನೋ ಪರಿಹಾರ!’

‘ಪರಿಹಾರವೇನು ಬಂತು? ಇಲ್ಲಿ ಕೆರೆಕಟ್ಟೆಯಲ್ಲಿ, ನದೀ ತೀರದಲ್ಲಿ ಬಟ್ಟೆ ಯಾರು ಒಗೆಯುತ್ತಾರೆ? ಎಲ್ಲರೂ ‘ವಾಶಿಂಗ್ ಮೆಷಿನ್’ ಗೇ ಅಂಗಿ, ಚಡ್ಡಿ, ಬನಿಯನ್ ಇತ್ಯಾದಿ ಬಟ್ಟೆಗಳನ್ನು ತುರುಕುವುದು. ಸಾಬೂನು ನೀರಿನ ಜತೆಗೆ ಒಂದಿಷ್ಟು ಪರಿಮಳ ದ್ರವ್ಯ ಸುರಿಯುವುದು, ಯಂತ್ರ ಚಾಲೂ ಮಾಡುವುದು. ಒಣಗಿ ಹೊರ ಬಂದ ಬಟ್ಟೆಯನ್ನೇ ನೇರ ಧರಿಸುವುದು. ಇಸ್ತ್ರಿ ಗಿಸ್ತ್ರಿ ಎಲ್ಲ ಪುರುಸೊತ್ತು ಇದ್ದಾಗ. ಬಟ್ಟೆ ಘಮ ಘಮ ಎನ್ನದೆ ಇರುತ್ತದೆಯಾ. ಇನ್ನು ನಿತ್ಯದ ಚಟುವಟಿಕೆಗಳಿಗೆ ಅದೇ ಬಟ್ಟೆ, ಹೀಗೇ ಇರಬೇಕೆಂದೇನೂ ಇಲ್ಲ. ಪಂಚೆ ಉಟ್ಟರು ಸರಿ ಚಡ್ಡಿ ಧರಿಸಿದರೂ ಸರಿ, ಆಕ್ಷೇಪವೇನೂ ಇಲ್ಲ. ವಿಶೇಷ ಸಂದರ್ಭಗಳಿಗೆ, ಆಫೀಸು ಖಚೇರಿಗಳಿಗೆ ಹೋಗಲೇನೋ ಕ್ರಮಬದ್ದ ಬಟ್ಟೆಬರೆ. ಬಾಕಿ ಸಮಯದಲ್ಲಿ ಯಾವ ಅಕ್ರಮವು ಅಲ್ಲ. ಯಾರೂ ಕಣ್ಣು ಬಾಯಿ ಬಿಟ್ಟು ನೋಡುವುದೇ ಇಲ್ಲ. ಇನ್ನು ಚಂದವಾಗಿ ಕಂಡರೆ ನಸು ನಕ್ಕು ಚಂದವಾಗಿದೆ ಎಂದು ಅಭಿನಂದಿಸಿ ಮುಂದುವರಿಯುತ್ತಾರಷ್ಟೆ.’

ತಂಗಿಯ ವಿವರಣೆ ಎಲ್ಲಾ ಕೇಳಿದಾಗ ನನ್ನ ಅನಿಸಿಕೆಗಳು ಬರೇ ದಡ್ಡತನದ್ದು, ಆಡುಮಾತಿನಲ್ಲಿ ಬರೇ ಚಿಲ್ಲರೆಯದ್ದೆಂದು ಮನಸ್ಸಿನಲ್ಲಿ ಮುಜುಗರವಾದರೂ ತೋರಿಸಿಕೊಳ್ಳದೆ ‘ಹಾಗೊ, ಹೌದೊ’ ಎಂದು ಒಂದೊಂದೇ ಶಬ್ದದ ಸಂಭಾಷಣೆಗಿಳಿದೆ.

Facebook ಕಾಮೆಂಟ್ಸ್

A. Ramachandra Bhat: ಕೇರಳ-ಕರ್ನಾಟದ ಗಡಿಯ ಊರು ಅಡ್ಯನಡ್ಕ, ನನ್ನ ಹುಟ್ಟೂರು. ಸ್ವಾತಂತ್ರ್ಯ ಪೂರ್ವದ ವ್ಯಕ್ತಿ ನಾನು. ನನ್ನ ತಂದೆಯವರಿಂದ ತೊಡಗಿ ಅಧ್ಯಾಪನವೇ ಜೀವನೋಪಾಯವಾಗಿದ್ದ ನನ್ನ ದೊಡ್ಡ ಕುಟುಂಬದಲ್ಲಿ ಕವಲು ದಾರಿ ಹಿಡಿದು ಆ ದಾರಿ ಬಿಟ್ಟು ಜೀವ ವಿಮಾ ನಿಗಮದಂತಹ ಸಂಸ್ಥೆಯಲ್ಲಿ ದುಡಿಯುವ ದಾರಿ ಕಂಡುಕೊಂಡ ಪ್ರಥಮ ಕುಟುಂಬ ಸದಸ್ಯ. ಅಡ್ಯನಡ್ಕ, ಕಾಸರಗೋಡು, ಹಾಗು ಪುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ವಿದ್ಯಾಭ್ಯಾಸ. ಎಲ್ಲರಂತೆ ನೌಕರಿಸೇರಿ ದುಡಿದು, ಈಗ ನಿವೃತ್ತನಾಗಿರುವವ. ಜೀವನದುದ್ದಕ್ಕೂ ಹೊಸ ಜಾಗ, ಜನ, ಘಟನೆ, ಚಟುವಟಿಕೆಗಳ ಬಗ್ಗೆ ಕುತೂಹಲ, ಅನುಭವಿಸುವ ಹಾಗೂ ದಾಖಲಿಸುವ ಹಂಬಲ ಇದ್ದವ. ಹಾಗಾಗಿ ಈಗ ಬಯಸಿದ್ದನ್ನು ಬರೆದು ಹಂಚಿಕೊಳ್ಳುವ ಹವ್ಯಾಸದವ. ಜೀವ ವಿಮಾ ನಿಗಮದಿಂದ ನಿವೃತ್ತಿಯ ನಂತರ ಈ ಹವ್ಯಾಸಕ್ಕೆ ದಾರಿ ಕಂಡುಕೊಂಡಿದ್ದೇನೆ. ಈಗ ಹುಟ್ಟೂರು ಬಿಟ್ಟು ವೃತ್ತಿಯಿಂದ ನಿವೃತ್ತಿಯಾದ ಉಡುಪಿಯಲ್ಲೇ ನನ್ನ ಕನಸುಗಳನ್ನು ನೇಯುತಿದ್ದೇನೆ.
Related Post