ನನ್ನ ಸಮೀಪದ ಬಂಧುಗಳು ಆಗಾಗ ಹೇಳುವುದು ‘ಊರು ನೋಡಬೇಕೋ ವಾಹನದಲ್ಲಿ ಕುಳಿತು ಡ್ರೈವ್ ಮಾಡುತ್ತ ನೋಡುತ್ತ ಹೋಗಬೇಕು. ವಿಮಾನದಲ್ಲಿ ಕುಳಿತು ನಿದ್ದೆ ತೂಗುತ್ತ ಊರಿಂದೂರಿಗೆ ಹೋಗುವುದರಲ್ಲಿ ಏನೂ ಮಜವಿಲ್ಲ.’ ಅಮೇರಿಕೆಯಲ್ಲೇ ಎಲ್ಲಾ ಮಕ್ಕಳಿದ್ದು ಆಗಾಗ ಸಮುದ್ರ ಲಂಘನ ಮಾಡಿದವರ ಅಭಿಪ್ರಾಯ. ‘ಹೌದು ನಿದ್ದೆ ತೂಗುತ್ತ ನೋಡುವುದಾದರೂ ಏನು?’ ಎಂದೆ. ನಾನೇನು ವಿಮಾನದಲ್ಲೇ ಕುಳಿತು ಊರೂರು ತಿರುಗಿದವನಲ್ಲ. ರೈಲು, ಬಸ್ಸು ಯಾವುದೂ ಇಲ್ಲದಿದ್ದರೆ ನಡಿಗೆಯಲ್ಲೇ ನೋಡ ಬೇಕಾದ ಜಾಗಗಳನ್ನು ಹತ್ತಿರದಿಂದ ನೋಡಿ ಸಂತೋಷ ಪಟ್ಟವ. ಈಗ ಮಕ್ಕಳೊಂದಿಗೆ ಅಮೇರಿಕಾದ ಪಶ್ಚಿಮ ಕರಾವಳಿಯಲ್ಲಿ ಲಾಸ್ ಏಂಜಲೀಸಿನಿಂದ ಸಾನ್ ಫ್ರಾನ್ಸಿಸ್ಕೋ ತನಕ ಸಾವಕಾಶವಾಗಿ ನಿತ್ತು, ನೋಡಿ, ಕಾರಿನಲ್ಲಿ ಮುಂದುವರಿಯುತ್ತ ಹೊಸ ಪರಿಸರವನ್ನು ಅನುಭವಿಸುವುದನ್ನು ಕಳಕೊಳ್ಳಲುಂಟೇ?
ಲಾಸ್ ಏಂಜಲೀಸಿನಿಂದ ಮನೆ ಬಿಟ್ಟು ಲಾಸ್ ವರ್ಜಿನ್ ರಸ್ತೆಗಿಳಿದು ಉತ್ತರಾಭಿಮುಖವಾಗಿ ಚಲಿಸತೊಡಗಿದಾಗ ಮೊದಲು ಸಿಕ್ಕಿದ್ದೇ ಇಕ್ಕೆಲಗಳಲ್ಲಿ ಕ್ಯಾಮ್ರಿಲಿಯೋನ್ ಗದ್ದೆಗಳು. ಮುಂದೆ ಸಾಂತಾಮಾರಿಯದ ಕಣ ವೆದಾಟಿದಾಗ ಇಕ್ಕೆಲಗಳಲ್ಲಿ ದ್ರಾಕ್ಷಿ ತೋಟ. ಊರಲ್ಲಿ ಗದ್ದೆಗಳಿಲ್ಲವೇ, ದ್ರಾಕ್ಷೀ ತೋಟಗಳಿಲ್ಲವೆ. ಇವೆ, ವ್ಯತ್ಯಾಸವಿಷ್ಟೇ. ನಮ್ಮಲ್ಲಿ ಕೆಲವು ಎಕ್ಕರೆಗಟ್ಟಲೆ ಗಳಾದರೆ ನಾನು ನೋಡುತಿದ್ದದ್ದು ಕಣ್ಣಳತೆಗೆ ಮೀರಿ ನೂರಾರು ಮೈಲುಗಟ್ಟಲೆ! ಇಷ್ಟೂ ದೂರವನ್ನು ಅಲ್ಲಿ ಇಲ್ಲಿ ನೋಡುತ್ತ ಕ್ರಮಿಸುವಾಗ ಮೂತ್ರಕೋಶ ಮುಚ್ಚಿಕೊಂಡೇ ಪ್ರಯಾಣ ಮಾಡಬೇಕೇ? ಹಾಗಿಲ್ಲದಿರುವುದೇ ವಿಶೇಷ. ದಾರಿಯುದ್ದಕ್ಕೂ ‘ರೆಸ್ಟ್ ಏರಿಯಾ’ಗಳು, ‘ವಿಸ್ತಾ ಪೋಯಿಂಟ್’ಗಳು ಪ್ರೇಕ್ಷಣೀಯ ಜಾಗಗಳು. ಎಷ್ಟೇ ಚಿಲ್ಲರೆ ಜಾಗೆಯಾಗಿದ್ದರೂ ಅಲ್ಲಿ ಏನಾದರು ಸಣ್ಣದೇ ಆದರೂ ವಿಶೇಷ ಇದ್ದರೆ ಅದನ್ನೇ ಒಂದು ವಿಸ್ತಾ ಪಾಯಿಂಟ್ ಮಾಡುತ್ತಾರೆ. ಇಲ್ಲೆಲ್ಲ ಶುಚಿಯಾದ ಶೌಚಾಲಯಗಳು. ಇನ್ನೂ ವಿಶೇಷವೆಂದರೆ ಯಾವುದೇ ಪ್ರೇಕ್ಷಣ ೀಯ ಸ್ಥಳಗಳಿಗೆ ಹೋದರೂ, ಯಾವ ಮೂಲೆಯಲ್ಲಿದ್ದರೂ ಶೌಚಾಲಯ ವೊಂದು ಇದ್ದೇ ಇದೆ. ಏನಿಲ್ಲದಿದ್ದರೂ ‘ಹನಿ ಬಕೆಟ್’ ಎಂಬ ಶೌಚ ಪೆಟ್ಟಿಗೆಯಂತೂ ಇದ್ದೇ ಇದೆ. ಇದರಿಂದಾಗಿಯೇ ಅಮೆರಿಕೆಯಲ್ಲಿ ಇದ್ದಷ್ಟು ದಿನಗಳೂ ತಂಗಾಳಿಗೆ ಮೈ ಒಡ್ಡಿ ಸುತ್ತ ಮುತ್ತದ ಪ್ರಕೃತಿ ವೈಭವವನ್ನು ನೋಡುತ್ತ ಜಲಬಾಧೆ ತೀರಿಸಿಕೊಳ್ಳುವ ಅವಕಾಶವೇ ನನಗಿಲ್ಲದಾಗಿತ್ತು! ಇದೇ ಕಾರಣಕ್ಕಿರಬೇಕು ಅಮೆರಿಕೆಯಲ್ಲಿ ಬಹಳಷ್ಟು ಸಮಯ ಇದ್ದವರು ಸ್ವದೇಶಕ್ಕೆ ಬಂದಾಗ ಇಲ್ಲಿ ಇಲ್ಲದ ಸೋಂಕು ತಗಲಿಸಿಕೊಳ್ಳುವುದು. ಹೇಳಿದ ಹಾಗೆ ದಾರಿಯಲ್ಲಿಯೇ ಒಂದು ಕೆರೆಯ ಪಕ್ಕದ ವಿಸ್ತಾ ಪಾಯಿಂಟಿನಲ್ಲೇ ಹಾರ್ಲಿ ಡೇವಿಡ್ಸನ್ ಮೋಟಾರು ಬೈಕುಗಳ ಒಂದು ತುಕಡಿ ಕಂಡುದು. ನಮ್ಮಲ್ಲಿಯಂತೆ ಅಮೆರಿಕೆಯಲ್ಲಿ ಬೈಕುಗಳನ್ನು ಕಾಣುವುದೇ ಅಪರೂಪ. ಅಂತಹದರಲ್ಲಿ ಆರೇಳು ಮಜಬೂತ ಬೈಕುಗಳು ಒಟ್ಟಿಗೇ. ಅವುಗಳನ್ನು ಸವಾರಿ ಮಾಡುವವರೂ ದೈತ್ಯರೇ. ಶಿರಸ್ತ್ರಾಣ, ತೊಗಲಿನ ಕೈಗವಸು, ದಪ್ಪದ ಬೂಟು, ಹಾರ್ಲಿ ಡೇವಿಡ್ಸನ್ ಎಂದು ಬರೆದ ಮೇಲಂಗಿ ಧರಿಸಿದ ಬೈಕುದಾರಿಗಳು ಆಕ್ರಮಣಕ್ಕೆ ಹೊರಟ ವೀರಾಧಿ ವೀರರಂತೆಯೇ ಕಾಣಿಸಿದರು!
ನನ್ನ ಅತ್ತೆಯವರು ಅನ್ನುತ್ತಿದ್ದರು ‘ಅಬ್ಬ, ಶಾಂತ ಸಾಗರದ ನೀರಿಗೆ ಕೈ ಹಾಕಲಾಗುವುದಿಲ್ಲ. ಅಷ್ಟು ಶೀತಗಟ್ಟಿರುತ್ತದೆ.’ ಕಣ ವೆ ಮೂಲಕÀ ಹೆದ್ದಾರಿಯಲ್ಲಿ ಬಂದವರು ಶಾಂತಸಾಗರದ ಅಂಚಿನಲ್ಲೇ ಸಾಗುತಿದ್ದಾಗ ಮೊದಲು ಸಿಕ್ಕಿದ್ದು ‘ಮುರ್ರೇ ಬೆ’. ಕಾರಿನಿಂದ ಕೆಳಗಿಳಿಯುತ್ತ ಎಲ್ಲರು ಬೆಚ್ಚಗಿನ ಕೋಟು ಧರಿಸಿಕೊಂಡರೂ ನಾನು ಭೈರಾಗಿಯ ಹಾಗೆ ಮಾಮೂಲು ಅಂಗಿಯಲ್ಲೇ ಎಲ್ಲರೊಂದಿಗೆ ಸಾಗರತೀರಕ್ಕೆ ಹೋದಾಗಲೇ ಅನಿಸಿದ್ದು ನನ್ನದು ಭಂಡತನವಾಯಿತೆಂದು. ಸಮುದ್ರ ತೀರದ ಉಸುಕಿನಲ್ಲಿ ಸಾಗುತಿದ್ದಾಗ ಕೊರೆಯುವ ಚಳಿ, ಮತ್ತೆ ಬರ್ಫದಂತಿದ್ದ ಸಾಗರದ ನೀರಿಗೆ ಕೈ ಹಾಕಿದಾಗ ಮೈ ಎಲ್ಲಾ ಕೊರಡಾಗುವಂತಾದ್ದು ಮರೆಯಲುಂಟೆ? ಆದರು ಆಶ್ಚರ್ಯವಾದುದು ಮೈಗಂಟಿಕೊಳ್ಳುವ ‘ಸೀಲ್ ಸ್ಕಿನ್’ ಧರಿಸಿ, ಜಾಲಪಾದ ದಂತಹ ಪಾದರಕ್ಷೆ ಸಿಕ್ಕಿಸಿ ಸ್ಥಳೀಯರು ಈಜುತಿದ್ದುದನ್ನು ಕಂಡು. ಸಮುದ್ರದಲ್ಲಿ ಇವರ ಈಜುವಿಕೆಗೆ ಹಿಂಬದಿಯ ದೃಶ್ಯ ‘ಚಾರ್ ಮಿನಾರ್’ ನಂತಹ ಸಹಜ ಕಲ್ಲಿನ ಗೋಪುರಗಳು. ಗಾಳಿ, ನೀರು ವರ್ಷಾನುಗಟ್ಟಲೆ ಒಂದೇ ಆಗಿದ್ದ ಬಂಡೆಯನ್ನು ಕೊರೆದು ಗೋಪುರಗಳನ್ನಾಗಿಸಿವೆ! ಸೂರ್ಯನ ಬೆಳಕಿಗೆ ಥಳ ಥಳ ಹೊಳೆಯುವಂತಹವು.
ಮುರ್ರೆ ಬೇ ಯಿಂದ ಉತ್ತರಕ್ಕೆ ಶಾಂತಸಾಗರಕ್ಕಂಟಿ ಚಲಿಸುವಾಗ ನನಗನಿಸಿದ್ದು ನಾನೇನು ಉತ್ತರ ಕನ್ನಡದ ಕಡಲ ಕಿನಾರೆಯಲ್ಲಿ ಇದ್ದೇನೋ ಎಂದು. ಕಾರಣ ಇಷ್ಟೆ – ಶಾಂತಸಾಗರಕ್ಕೆ ಅಂಟಿಕೊಂಡು ಸವಾರಿ ಮಾಡುವಾಗ ಕಡಿದಾದ ಬೆಟ್ಟ ಗುಡ್ಡಗಳಲ್ಲೇ ಸಾಗ ಬೇಕು. ವ್ಯತ್ಯಾಸವಿಷ್ಟೆ. ಉತ್ತರಕನ್ನಡದಲ್ಲಿ ಉತ್ತರಕ್ಕೆ ಸಾಗುವಾಗ ಬಲಬದಿಗೆ ದಟ್ಟ ಹಸುರೈಸಿರಿ ಇದ್ದರೆ ಇಲ್ಲಿ ದಾರಿಯುದ್ದಕ್ಕೂ ಹೊಂಬಣ್ಣದ ಮುಳಿ ಗುಡ್ಡ. ದಾರಿಯಲ್ಲಿ ಸಾಗುವಾಗ ಇಂತಹದೇ ಒಂದು ಗುಡ್ಡದ ಮೇಲೆ ಕಂಡುದು ‘ಹಸ್ರ್ಟ ಕೇಸಲ್’ . ಹಸ್ರ್ಟ ಎಂಬ ಒಬ್ಬ ಮಿಲಿಯಾಧಿಪತಿಯ ಅರಮನೆಯಂತಹ ಕೊತ್ತಲ, ಈಗ ರಾಷ್ಟ್ರೀಯ ಸ್ಮಾರಕ. ಮತ್ತೆ ಅಲ್ಲಲ್ಲಿ ಕೆಲವೇ ಮನೆಗಳು, ಮೇಯುತ್ತಿರುವ ದನಗಳು. ಒಟ್ಟಾರೆ ಪ್ರಕೃತಿಯೇ ನಿಧಾನವಾಗಿ ಮೈಗೊಡವಿಕೊಳ್ಳುತ್ತಿದ್ದುದು. ಹಾಗೆಯೇ ಇಲ್ಲಿ ವಾಹನಚಾಲನೆಯೂ ನಿಧಾನವಾಗಬೇಕು.
ಸಾನ್ ಸೈನಿಯಂ ದಾಟಿದಾಗ ನಮಗೆ ಸಿಗುವುದೇ ‘ಎಲಿಫೆಂಟ್ ಸೀಲ್ ಬೀಚ್’. ಹೆಸರಿಗೆ ತಕ್ಕಂತೆ ಇಲ್ಲಿಯ ಸೀಲ್ ಮೀನುಗಳು ಆನೆಯ ಗಾತ್ರದವೇ. ಕಿನಾರೆಯಲ್ಲಿ ಒಂದರ ಮೇಲೊಂದು ಬಿದ್ದಿರುತ್ತವೆ. ದಿನವಿಡೀ ಬಿಸಿಲಿಗೆ ಮೈ ಒಡ್ಡಿ ಕೆಲವೊಮ್ಮೆ ಊಳಿಡುತ್ತ ಮೈಕೆರೆಯುತ್ತ ನೀರಿಗಂಟಿಕೊಂಡೇ ಉಸುಕಿನಲ್ಲಿ ಬಿದ್ದಿರುತ್ತವೆ. ಇವುಗಳು ಉಸುಕಿನಲ್ಲಿ ತೆವಳುವಾಗ ಗೋಣ ಚೀಲದಲ್ಲಿ ತುಂಬಿಕೊಂಡು ಓಡುತ್ತಿರುವಂತೆಯೇ ಕಾಣುತ್ತವೆ. ಕೆಲ ಮೀನುಗಳ ಮೈ ಚರ್ಮ ತನ್ನಿಂದ ತಾನೇ ಪೊರೆಕೀಳುತಿದ್ದು ಎಲ್ಲವುಗಳನ್ನು ಒಟ್ಟಿಗೆ ನೋಡಿದಾಗ ಅನಿಸುವುದು ‘ಎಂತಹ ವಿಚಿತ್ರ ಜೀವ ಜಗತ್ತು’ ಎಂದು.
ಸೀಲಾನೆಯನ್ನು ವಿವರಿಸುವುದರಲ್ಲಿ ಸಮುದ್ರತೀರದಲ್ಲೇ ಮುಂದೆ ‘ಬಿಗ್ ಸರ್’ ತಲಪಿದ್ದೇ ಮರೆತೆ. ಸಮುದ್ರ ತೀರದಲ್ಲೇ ನಿರ್ಜನ ಬೆಂಗಾಡು ಪ್ರದೇಶ. ಇಲ್ಲಿ ಭೂಮಿ ಮತ್ತು ಸಮುದ್ರ ಕೂಡುವ ಜಾಗ ಒಂದು ನಮುನೆಯ ನಡುಕ ಹುಟ್ಟಿಸುವಂತಹದು. ಕಡು ನೀಲಿ ಬಣ್ಣದ ಶಾಂತ ಸಾಗರಕ್ಕೆ ತಾಗಿಯೇ ಕಡಿದಾದ ಮೈಲುಗಟ್ಟಲೆಯ ಪ್ರಪಾತ. ಅದಕ್ಕೆ ಇರಬೇಕು ಆ ಜಾಗವನ್ನು ‘ರೇಗ್ಗೆಡ್ ಪೋಯಿಂಟ್’ ಎಂದೇ ಕರೆಯುವುದು. ಅಮೇರಿಕನರಿಗೆ ಗೊತ್ತು ಇಂತಹ ಜಾಗಗಳಿಗೇ ಜನರು ಬರುತ್ತಾರೆಂದು. ಅದಕ್ಕೇ ಅಲ್ಲಿ ತಿಂಡಿ ತೀರ್ಥದ ವ್ಯವಸ್ಥೆ. ಜತೆಗೆ ಸಂಗೀತ, ಪ್ರವಾಸಿಗಳಿಂದ ‘ಕಾರಿಯೋಕಿ’ ಎಲ್ಲಾ ಮಾಡಿಸಿ ನಯವಾಗಿ ಹಣ ಕೀಳುವುದು. ಆದರೂ ನಾವು ಕರಾವಳಿಯಲ್ಲಿ ಉತ್ತರಕ್ಕೆ ಸಾಗುತಿದ್ದಂತೆ ಶೀತವೂ ಏರುತ್ತಿರುವಾಗ ಇಂತಹ ಜಾಗಗಳಲ್ಲಿ ದೊರಕಿಸುವ ‘ಸ್ಟಾರ್ ಬಕ್’ ನಂತಹ ಬಿಸಿ ಬಿಸಿ ಕಾಫಿ ಸ್ವಾಗತಾರ್ಹವಾಗಿಯೇ ಇರುತ್ತದೆ.
ಮುಂದೆ ಸಾಗಿದಂತೆ ಬೋಳುಗುಡ್ಡೆಯ ಬದಲಿಗೆ ತಕ್ಕ ಮಟ್ಟಿಗೆ ದಟ್ಟವಾದ ಪೈನ್ ಮತ್ತು ಸೈಪ್ರಸ್ ಮರಗಳ ಕಾಡೇ. ‘ಜುಲಿಯ ಫೀಫರ್ ಬನ್ರ್’ ರಾಷ್ಟೀಯ ವನ ಪ್ರದೇಶಕ್ಕೆ ಸೇರಿದ್ದು. ಇಲ್ಲೇ ನೋಡಿ ಪ್ರಕೃತಿಯ ಮಾದಕ ರಮಣ ೀಯತೆಯನ್ನು ಕಂಡುದು. ಕಾಡಿಗೆ ತಾಗಿ ಸಮುದ್ರವಿದೆ. ಒಂದು ಭಾಗದಲ್ಲಿ ಸಮುದ್ರ ಒಳಬಂದು ವೃತ್ತಾಕಾರದ ಕೆರೆಯಂತಿದೆ. ಇದಕ್ಕೆ ಕಾಡಿನ ಕಡೆಯಿಂದ ಎಳೆಯ ಝರಿ ಹನಿ ಹನಿಯಾಗಿ ಸುರಿಯುವುದು. ನೀರು ಬೀಳುವ ಕೆರೆಯಾದರೂ ಹೇಗಿದೆ! ಅಪ್ಪಟ ನೀಲಿ. ರಾಬಿನ್ ಬ್ಲ್ಲೂ ನೀಲಿ ಪುಡಿ ಕಲಸಿದಂತಹ ನೀಲಿ! ತಳದ ಉಸುಕು ಅಪ್ಪಟ ಬಿಳಿಯಾಗಿದ್ದು ನೀರು ಬೆಳಕಿನ ಆಟದ ರಂಗಸ್ಥಳವಾಗಿದೆ. ‘ಮೆಕ್ವೆ’ ಜಲಪಾತವೆಂದೇ ಈ ಕಿರು ನೀರ ಝರಿ ಇರುವ ಜಾಗ ಪ್ರಸಿದ್ಧ. ಇದರ ಬಳಿ ಓಹ್, ಆಹಾ ಎನ್ನದ ಜನಗಳೇ ಇಲ್ಲ. ಶಾಂತ ಸಾಗರಕ್ಕೆ ನೀಲಿ ಹರಳಿನ ಪದಕದಂತೆಯೇ ಈ ನೀಲಿ ಬಣ್ಣದ ಒಳಕೆರೆ.
ಸಾನ್ ಫ್ರಾನ್ಸಿಸ್ಕೊ ಗೆ ಒಂದೇ ಒಟದಲ್ಲಿ ಹೋಗಿ ತಲಪುವ ಉದ್ದೇಶ ನಮ್ಮ ದಾಗಿರಲಿಲ್ಲ. ಹಾಗಾಗಿ ಸಲಿನಾಸ್ ಎಂಬಲ್ಲಿ ಉಳಕೊಳ್ಳುವ ಯೋಜನೆ ನಮ್ಮದು. ದಾರಿಯಲ್ಲೇ ಒಂದು ಪುಟ್ಟ ಪೇಟೆ ‘ಕಾರ್ಮೆಲ್ ಬೈ ದ ಸಿ’ . ನನ್ನ ಹುಟ್ಟೂರಲ್ಲಿ ಅಂದಿಗೇ ಮುಸ್ಸಂಜೆ ಆಗುತಿದ್ದಂತೆ ಪಂಚಾಯತಿಯವರು ಒಂದು ಸೀಮೆ ಎಣ್ಣೆ ದೀಪವನ್ನು ಬೀದಿ ದೀಪವಾಗಿ ಉರಿಸುತಿದ್ದರು. ಈ ಅಮೆರಿಕಾದ ಪುಟ್ಟ ಪೇಟೆಯಲ್ಲಿ ಬೀದಿ ದೀಪವೇ ಇಲ್ಲ! ಇಲ್ಲಿಯವರು ಮುಸ್ಸಂಜೆಯೇ ಉಂಡು ತಿಂದು ಮಲಗುವವರಿರಬೇಕು.
ಸಲಿನಾಸ್ ನಲ್ಲಿ ನಮ್ಮ ವಾಸ ‘ಕೆಲಿಫೋರ್ನಿಯ ಇನ್’ ನಲ್ಲಿ. ಭಾರತೀಯ ಗುಜರಾತಿ ಪಟೇಲರದ್ದು. ನಮ್ಮ ಆಗಮನ ಇನ್ ನ ಒಡತಿಗೆ ಕುಶಿಯದ್ದೆ. ನಮ್ಮನ್ನೆಲ್ಲ ಕರೆದು ಆತಿಥ್ಯ ಮಾಡಲಿಚ್ಛಿಸಿದ್ದಳು. ಆದರೆ ಆಕೆಯೇ ಭಾರತಕ್ಕೆ ರಜಾದಲ್ಲಿ ಹೊರಟು ನಿತ್ತ ಕಾರಣ ನಾವು ನಮ್ಮ ಪಾಡಿಗಿರಬೇಕಾಯಿತು. ಸಲಿನಾಸ್ ಪುಟ್ಟ ಪೇಟೆ ಯಾದರೂ ಕಸ ಕಡ್ಡಿ ಇಲ್ಲದ್ದು. ನಮ್ಮಲ್ಲಿಯ ಉಡುಪಿ ಹೊಟೇಲುಗಳಂತೆ ‘ಟ್ರೇಡರ್ ಜೊ’ ಎಂಬ ಮಾಲ್ ಎಲ್ಲೆಲ್ಲೂ ಇರುವಂತೆ ಇಲ್ಲಿಯೂ ಇರುವುದರಿಂದ ಭಾರತೀಯ ರುಚಿಯಲ್ಲಿ ಅಮೇರಿಕಾದ ಆಹಾರ ತಿನ್ನಲು ತೊಂದರೆ ಆಗಲಿಲ್ಲ. ಜತೆಗೆ ವಸತಿಯ ಶುಚಿತ್ವ – ಒಳಗೂ ಹೊರಗೂ ನೆಮ್ಮದಿ ಯಾಗಿಸುವಂತಹದು. ಅದಕ್ಕೆ ಬಿಸಿನೀರಲ್ಲಿ ಮಿಂದು ಬೆಚ್ಚಗೆ ಹೊದ್ದು ಮಲಗಿದಾಗ ಲೈಟ್ ಆಫ್ ನಿದ್ದೆ ಆನ್!
ಅಮೇರಿಕೆಯಲ್ಲಿ ಎಲ್ಲಿಯೇ ಪಯಣಿಸುವುದಿದ್ದರೂ ವಾಹನ ನಿಲ್ಲಿಸಲು ‘ಪಾರ್ಕಿಂಗ್’ ವ್ಯವಸ್ಥೆ ಕಟ್ಟುನಿಟ್ಟು. ಎಲ್ಲೆಂದರಲ್ಲಿ ವಾಹನ ನಿಲ್ಲಿಸುವ ಹಾಗೇ ಇಲ್ಲ. ಸಲಿನಾಸ್ ನಿಂದ ಮುಂಜಾನೆ ಬೇಗ ಮತ್ತೂ ಉತ್ತರಕ್ಕೆ ಹೊರಟರೂ ನಮ್ಮ ಗಮ್ಯ ಜಾಗ ‘ಪಾಯಿಂಟ್ ಲೋಬೋಸ್’ ನಲ್ಲಿ ನಾವು ತಲಪುವುದಕ್ಕಿಂತ ಮುಂಚೆಯೇ ಜನ ಜಂಗುಳಿ, ನಮ್ಮ ಹಾಗೆ ತಿರುಗಾಡುತ್ತ ಬಂದವರು ಅನೇಕ. ಹಾಗಾಗಿ ಯಾರಾದರೊಬ್ಬರು ವಾಹನ ತೆಗೆಯುವುದನ್ನೋ, ಬೇರೆ ಜಾಗ ಹುಡುಕಿಯೋ ನಮ್ಮ ಕಾರಿಗೆ ನಿಲುಗಡೆ ದೊರಕಿದುದು. ಮತ್ತೇನೇ ನಾವು ಶಾಂತ ಸಾಗರದ ತಡಿಯ ಕೊರಕಲುಗಳನ್ನು ನೋಡಲು ಹೊರಟುದು. ಪಾಯಿಂಟ್ ಲೋಬೋಸ್ ನ ಅಷ್ಟೂ ಭಾಗದಲ್ಲಿ ಸಾಗರದ ಶಿಲ್ಪ ರಚನೆ ಬೊಂಬಾಟ್! ಕೊರಕಲುಗಳ ಯಾವ ಕೊನೆಯಲ್ಲಿ ನಿತ್ತರೂ ಸಮುದ್ರದ ಭವ್ಯ ದೃಶ್ಯ. ಜತೆಗೆ ಸೈಪ್ರಸ್ ಮರಗಳ ತೋಟ ಕರೆ ಇಡೀ. ಚೈನೀಸ್ ಪಾಯಿಂಟ್ ನಂತಹ ಜಾಗಗಳಲ್ಲಿ ಕೊರಕಲಿನೆಡೆ ಇಳಿದು ಸಾಗರ ತಲಪ ಬಹುದು. ಕೊರಕಲಗಳೆಡೆಯಲ್ಲೇ ಒಂದು ದ್ವೀಪ. ದೂರದಿಂದ ಸಾಸಿವೆ ಚೆಲ್ಲಿದ ಹಾಗೆ ಕಾಣುತ್ತದೆ. ಸಮೀಪಿಸಿದಾಗಲೇ ಗೊತ್ತಾಗುವುದು ಸಾವಿರಗಟ್ಟಲೆ ಫ್ಲೆಮಿಂಗೋ ಹಕ್ಕಿಗಳು ಅಲ್ಲಿಯೇ ಠಿಕಾಣ ಹೂಡಿದ್ದಾವೆಂದು. ಅದಕ್ಕೇ ‘ಬರ್ಡ್ಸ್ ಐಲೇಂಡ್’ ಎಂದು ನಾಮಕರಣ. ಒಂದೊಮ್ಮೆ ಎಲ್ಲವೂ ಒಟ್ಟಿಗೆ ಹಾರಿದಾಗ ದ್ವೀಪವಿಡೀ ಅವುಗಳ ಹಿಕ್ಕೆ ಇಂದ ಮುಚ್ಚಿ ಬಿಳಿಚಿಕೊಳ್ಳುತ್ತದೆ! ಇವುಗಳ ಸಹವಾಸವೇ ಬೇಡವೆಂದು ಕೊರಕಲಿನ ಬೇರೆ ಭಾಗಕ್ಕೆ ಹೋದರೆ ದಾರಿ ಇಡೀ ಪುಟ್ಟ ಪುಟ್ಟ ಹಳದಿ ಹೂಗಳು ಚೆಲ್ಲಿದ ಹಾಗೆ ಚಿಗುರಿವೆ. ಒಂದೊಂದು ಕೊರಕಲೂ ವಿಶಿಷ್ಟ ಹಾಗೇ ವಿಶಿಷ್ಟ ನಾಮಾಂಕಿತ.
ಮಾರ್ಗದರ್ಶಿಯಲ್ಲಿ ಸೂಚಿಸಿದ ವಿಶಿಷ್ಟ ಜಾಗಗಳನ್ನು ಪಾಯಿಂಟ್ ಲೋಬೋಸ್ ನಲ್ಲಿ ಎಲ್ಲವನ್ನು ಮನದಣ ಯೆ ನೋಡಿದರೂ ಸಂಜೆ ಸಾನ್ ಫ್ರಾನ್ಸಿಸ್ಕೊ ತಲಪುವಾಗ ಮಾತ್ರ ಶಾಂತ ಸಾಗರದ ತಡಿಯ ಸುಂದರ ರತ್ನಮಾಲೆಯೇ ಮನ ತುಂಬ.
Facebook ಕಾಮೆಂಟ್ಸ್