1ಊರಿಗೆ ಬಂದ ನಾರಿ ನೀರಿಗೆ ಬಾರದಿರುತ್ತಾಳೆಯೇ? ಬರುತ್ತಾಳೆಂದು ಖಡಾಖಂಡಿತ ಹೇಳಲಾಗದು. ಹಿತ್ತಲ ಒಳಗೆ ಬಾವಿಯೋ, ಕೊಳವೋ ಇದ್ದರೆ ಇನ್ನು ಊರ ಹಂಗೇಕೆ ಎಂದು ಬಿಮ್ಮನೆ ಮನೆಯಲ್ಲೇ ಇರಬಹುದಲ್ಲ. ನೀರಿಗಲ್ಲವಾದರೂ ಬಟ್ಟೆಯ ಕೊಳೆ ತೆಗೆಯಲಾದರೂ ಊರ ಬಾವಿಕಟ್ಟೆಗೆ, ಇಲ್ಲವಾದರೆ ಕೆರೆಯ ಕರೆಗೆ, ತಪ್ಪಿದರೆ ತೊರೆಯ ತೀರಕ್ಕಾದರೂ ಹೋಗಬೇಕೆ? ನೀರೂ ಬೇಡ, ಬಟ್ಟೆ ಒಗೆಯುವುದೂ ಬೇಡ, ಬಿಸಿಬಿಸಿ ಸುದ್ದಿ ಹಂಚಿಕೊಳ್ಳಲಾದರೂ ಈ ಕೆರೆಕಟ್ಟೆಗಳ ಆಸರೆ ಬೇಕಲ್ಲಾ. ಸ್ವಂತ ಬಾವಿ ಇದ್ದವಳೂ ಈ ಅವಕಾಶ ಖಂಡಿತ ಕಳಕೊಳ್ಳಲಿಚ್ಚಿಸುವುದಿಲ್ಲ.
ಅದಕ್ಕೆ ನೋಡಿ, ನೀರು ತರುವುದು, ಬಟ್ಟೆ ಒಗೆಯುವುದು ಎಲ್ಲಾ ಸಾರ್ವಜನಿಕ ಕೆಲಸಗಳೆನ್ನುವುದು. ಇವುಗಳೆಲ್ಲ ಹೆಂಗಸರಿಗೇ ಮೀಸಲಿಟ್ಟ ಕೆಲಸಗಳೆಂದು ಮೀಸೆತಿರುವಿಕೊಂಡು(ಮೀಸೆ ಇದ್ದವರು) ತಿರುಗುವವರಿಗೆ ಈ ಸಂಪರ್ಕ ಸಂವಹನ ಏನು ಗೊತ್ತು? ಗಂಗಮ್ಮನ ಮನೆಯಲ್ಲಿ ಹಾಲನ್ನು ಖಾಲಿಮಾಡಿದ ಬೆಕ್ಕಿನ ಸುದ್ದಿ, ರಂಗಮ್ಮನ ಮನೆ ಸೇರಿ ವಠಾರದ ಎಲ್ಲಾ ಮನೆಗಳಿಗೆ ಅರ್ಧ ಗಂಟೆಯೊಳಗೆ ತಲಪಿ ಮನೆ ಮನೆಯ ಹಾಲಿನ ಪಾತ್ರೆಗಳೆಲ್ಲ ಸಿಕ್ಕಗಳಿಗೆ ಸಿಕ್ಕಿಕೊಂಡವು. ಇದೊಂದು ಸಣ್ಣ ವಿಚಾರವಷ್ಟೆ. ಯಾರಲ್ಲಿಗೆ ಯಾರೇ ಬಂದು ಹೋಗಲಿ, ಉಂಡು ಹೋಗಲಿ ಗುಟ್ಟಾಗಿ ಉಳಿಯಲು ಸಾಧ್ಯವೇಇಲ್ಲ. ಹುಟ್ಟು ಸಾವುಗಳ ಸುದ್ದಿಯಂತು ಬ್ರೇಕಿಂಗ್ ನ್ಯೂಸ್ ಗಳು. ಇನ್ನೂ ರೋಮಾಂಚಕಗಳು (ಯಾರು ಯಾರೊಂದಿಗೆ ಓಡಿಹೋದರು ಇತ್ಯಾದಿ) ಕ್ಷಣಾರ್ಧದಲ್ಲಿ ಮೂಲೆಮೂಲೆಗೆ ಪ್ರಸಾರ. ಅದಕ್ಕೇ ನೋಡಿ ಈ ಅಡ್ಡಗಳನ್ನು ಗುಟ್ಟಿನ ಸಾರ್ವಜನಿಕ ಕೇಂದ್ರಗಳೆನ್ನುವುದು.
ಎಷ್ಟೋ ಸಮಯದ ತನಕ (ನಾನು ಮುದಿಯನಾಗುವ ತನಕ) ನನ್ನ ಭಾವನೆಯಲ್ಲಿ ಈ ಬಾವಿಕಟ್ಟೆಗಳು, ತೊರೆ ತೀರಗಳು ಮಾತಿನ, ಪರಿಚಯ ಮಾಡಿಕೊಳ್ಳುವ ಅಡ್ಡಗಳು ಎಂಬ ಅಭಿಪ್ರಾಯ ಗಾಢವಾಗಿತ್ತು. ಆದರೆ ಅಂತರ್ಜಾಲ ಸರ್ವವ್ಯಾಪಿಯಾದ ಮೇಲೆ ಈ ಫೇಸ್ ಬುಕ್, ಟ್ವಿಟ್ಟರ್ ಗಳ ಅವತಾರದಿಂದ ಈ ಅಡ್ಡಗಳು ಮುರಿದುಹೋದವೇನೋ ಎಂದು ಅನಿಸುತ್ತದೆ. ಅದಕ್ಕೆ ಕಾರಣ ಇಷ್ಟೆ.
ಮೊನ್ನೆ ನನ್ನಾಕೆ ಮತ್ತು ಸೊಸೆ ಒಂದೆರಡು ವಾರಗಳ(ದಿನಗಳ ಅಲ್ಲ!) ಕೊಳೆ ಬಟ್ಟೆ ಒಗೆಯಲೆಂದು ಹೊರಟರು. ಬುಟ್ಟಿಯಲ್ಲಿ ತುಂಬದೆ ದೊಡ್ಡ ದೊಡ್ಡ ಚೀಲಗಳಲ್ಲಿ ತುಂಬಿಕೊಂಡು ಗಾಡಿಯಲ್ಲಿ ಹೇರಿಕೊಂಡರು. ನನ್ನ ಸೊಸೆಯ ಹಳ್ಳಿಯ ಗಾಡಿ ಎಂದರೆ ನಮ್ಮ ಊರಿನ ಕಾರೇ! ಸೊಸೆಯ ಹಿತ್ತಿಲಲ್ಲಿ ಬಾವಿ ಇಲ್ಲದ ಕಾರಣ ಊರ ಬಾವಿಗೇ ಹೋದದ್ದು. ಊರ ಬಾವಿಕಟ್ಟೆಗೆ ರಾಟೆಗಳು ಹಲವಾರು, ಒಗೆಯುವ ಕಲ್ಲುಗಳೂ ಹಲವಾರು. ನಾನು ರಾಟೆ, ಕಲ್ಲುಗಳೆಂದರೂ ಸೊಸೆಯ ಊರಿನವರಿಗೆ ಅವೆಲ್ಲಾ ಯಂತ್ರಗಳೇ. ನಾನು ಅಂದು ಕೊಂಡಂತೆ ಊರ ಮಹಿಳೆಯರೆಲ್ಲ ದೊಡ್ಡ ದೊಡ್ಡ ಕೊಳೆ ಬಟ್ಟೆಯ ಮೂಟೆಗಳನ್ನು ಕಾರುಗಳಲ್ಲಿ ಹೇರಿ ತಂದಿದ್ದರು. ಆದರೆ ಸೊಸೆಯದೇ ಹಳ್ಳಿಯ ವೈಶಿಷ್ಟ್ಯ. ಮಹಿಳೆಯರ ಜೊತೆಗೆ ಮಹನೀಯರೂ ತಮ್ಮ ತಮ್ಮ ಮೂಟೆ ಹೊತ್ತುಕೊಂಡೇ ಬಂದದ್ದು. ತಮ್ಮ ತಮ್ಮ ಕೊಳಕು ಬಟ್ಟೆಗಳನ್ನು ಸಾರ್ವಜನಿಕವಾಗಿ ಒಗೆಯಲು ಮುಜುಗರಪಟ್ಟಿರರೋ? ನನಗನಿಸಿತು ಮಹನೀಯರೂ ಬಟ್ಟೆ ಒಗೆಯುವ ಅಡ್ಡೆಗೆ ಬಂದರೆ ಕೆಟ್ಟ ಗಳಿಗೆಯಲ್ಲಿ ಬಾಯಿ ಮಾತ್ರವಲ್ಲ ಕೈಯೂ ಮಿಲಾಯಿಸಬಹುದೋ ಎಂದು.
ಒಗೆಯುವ ಕಲ್ಲುಗಳು ಸಾಲಾಗಿ. ಕಲ್ಲುಗಳೆಂದರೇನು ಯಂತ್ರಗಳೇ! ಮೂಟೆ ಮೂಟೆ ಬಟ್ಟೆಗಳನ್ನು ತಂದಾಗ ಒಂದೆರಡು ಕಲ್ಲುಗಳು ಸಾಕಾಗದೆ ನಾಲ್ಕೈದು ಕಲ್ಲುಗಳನ್ನು ಆಯ್ದುಕೊಳ್ಳುವುದು. ಕೊಳೆ ಬಟ್ಟೆಗಳನ್ನು ಕಲ್ಲ ಮೇಲೆ ಇಟ್ಟರೆ ಮಾತ್ರ ಏನೂ ಕೆಲಸ ಸಾಗದು. ಪ್ರತಿಯೊಂದು ಕಲ್ಲಿಗೆ ಲೆಕ್ಕದ ಕಾಣಿಕೆ ಹಾಕದಿದ್ದರೆ ಜಪ್ಪಯ್ಯ ಎನ್ನುವುದಿಲ್ಲ. ಕಲ್ಲಲ್ಲಿ ಬಟ್ಟೆ ಇಟ್ಟು ಡಬ್ಬಿಗಟ್ಟಲೆ ತಂದಿದ್ದ ಬೆಲ್ಲದ ರವೆಯಂತಹ ಸಾಬೂನು ನೀರನ್ನು ಲೋಟಗಟ್ಟಲೆ ಸುರಿದು ಕಾಣ ಕೆ ಹಾಕಿ ಮಂಗಳಾರತಿ ಮಾಡಿದರೇನೇ ಬಟ್ಟೆ ಒಗೆಯಲು ಸುರು. ಈಗ ನೋಡಿ ಬಂದವರಿಗೆ ಪುರುಸೊತ್ತು. ಮಾತಡಲಿಕ್ಕಲ್ಲ, ಲೀಟರ್ ಗಾತ್ರದ ಲೋಟಾದಲ್ಲಿ ಕಾಫಿಯೋ ಪಾನಕವನ್ನೋ ಕುಡಿಯಲು, ಹಾಗೆ ಉಸಿರು ಬಿಡಲು. ಕಲ್ಲಿನಲ್ಲಿ ಬಟ್ಟೆಯ ಉರುಳಾಟ ಸಾಲದೆಂದಾಗ ಮತ್ತೆ ಕಾಣ ಕೆ ಹಾಕಿ ನಮಸ್ಕರಿಸ ಬೇಕು. ಇದಕ್ಕೆಲ್ಲಾ ಯಾರು ನೋಟು ಕಾಣಿಕೆ ಹಾಕುತ್ತಾರೆ? ಸೊಸೆಯ ಊರಿನ ಕಟ್ಟೆಯಲ್ಲಿ ಅದಕ್ಕು ವ್ಯವಸ್ಥೆ. ಪಕ್ಕದಲ್ಲಿ ಪ್ರಸಾದದ ಡಬ್ಬಿ ಇದೆ. ನೋಟುಗಳನ್ನು ಹಾಕಿ ನಾಣ್ಯಗಳನ್ನು ಪಡೆಯಬಹುದು.
ಕೆಲವೊಮ್ಮೆ ಕಲ್ಲಿನಲ್ಲಿ ಎಷ್ಟು ಉರುಳಾಡಿದರೂ ಬಟ್ಟೆಯ ಕೊಳೆ ಹಾಗೇಗಟ್ಟಿಯಾಗಿ ಇರಬಹುದು. ಆಗ ಅರದಂತಹ ಸಾಧನದಿಂದ ಒದ್ದೆ ಉಡುಗೆಯನ್ನು ಹಿಡಿದು ತಿಕ್ಕುವುದು. ಇಷ್ಟೆಲ್ಲಾ ಪರಿಷ್ಕಾರ ಕಂಡ ಬಟ್ಟೆಗಳನ್ನು ಒಣಗಿಸಲು ಬೇರೆ ಬೇರೆ ಕಲ್ಲು ಬಂಡೆಗಳಿವೆ. ಇಲ್ಲೂ ಅಷ್ಟೆ ಕಾಣ ಕೆ ಹಾಕದೆ ಯಾವ ಕಲ್ಲನ್ನೂ ಮುಟ್ಟುವ ಹಾಗಿಲ್ಲ. ನೀವು ಎಷ್ಟು ಹೊತ್ತು ಕಲ್ಲಿನಲ್ಲಿ ಒಣ ಹಾಕುತ್ತೀರೋ ಅಷ್ಟು ದಕ್ಷಿಣೆ ಇಡಲೇ ಬೇಕು.
ಈ ಅಗಸನ ಕಟ್ಟೆಯಲ್ಲಿ ಇಷ್ಟೆಲ್ಲಾ ಬಟ್ಟೆ ಒಗೆದಾಟವಾಗುವಾಗಲೂ ಯಾರಿಗೂ ಯಾರಲ್ಲೂ ಮಾತಾಡಲು ಪುರುಸೊತ್ತೇ ಇಲ್ಲ. ಟೈಂ ಈಸ್ ಮನಿ, ದುಡ್ಡಿಲ್ಲದೆ ಕಲ್ಲೂ ಅಲುಗಾಡುವುದಿಲ್ಲ. ಅದಕ್ಕೆ ನಮ್ಮ ಮನೆಯ ಸುದ್ದಿ ನಮ್ಮಲ್ಲೇ. ಬೇರೆ ಸುದ್ದಿ ತಿಳಿಯಬೇಕೇ ಮನ ಬಿಚ್ಚಿಕೊಳ್ಳಬೇಕೋ ಅಂತರ್ಜಾಲ ನೋಡಿಕೊಳ್ಳಬೇಕಷ್ಟೆ!
Facebook ಕಾಮೆಂಟ್ಸ್