ನರೇಂದ್ರ ಮೋದಿ ನೇತೃತ್ವದ ಸರಕಾರ ಜೇಟ್ಲಿ ಅನುಪಸ್ಥಿತಿಯಲ್ಲಿ ಪಿಯೂಷ್ ಗೋಯೆಲ್ ಅವರು ಇಂಟರಿಮ್ ಬಜೆಟ್ ಅನ್ನು ಮಂಡಿಸಿದ್ದಾರೆ. ಏನಿದು ಇಂಟರಿಮ್ ಬಜೆಟ್? ಇದಕ್ಕೂ ಸಾಧಾರಣ ಬಜೆಟ್’ಗೂ ಏನಾದರೂ ವ್ಯತ್ಯಾಸವಿದೆಯೇ? ಎನ್ನುವುದನ್ನು ತಿಳಿದುಕೊಂಡು ನಂತರ ಇಂದಿನ ಬಜೆಟ್ ನ ಮುಖ್ಯಾಂಶಗಳತ್ತ ಗಮನಹರಿಸೋಣ.
ಇಂಟರಿಮ್ ಬಜೆಟ್ ಎಂದರೇನು?
ಇದು ಹೆಚ್ಚು ಕಡಿಮೆ ಪೂರ್ಣಪ್ರಮಾಣದ ಸಾಧಾರಣ ಬಜೆಟ್ ಇದ್ದ ಹಾಗೆ. ಇದಕ್ಕೆ ಈ ಹೆಸರಿಟ್ಟು ಕರೆಯಲು ಕಾರಣ ಕೇಂದ್ರ ಸರಕಾರದ ಬಳಿ ಪೂರ್ಣ ವಾರ್ಷಿಕ ಬಜೆಟ್ ಮಂಡಿಸಲು ಸಮಯದ ಕೊರತೆಯಿದ್ದು ಅಥವಾ ಚುನಾವಣೆ ಹತ್ತಿರದಲ್ಲಿದ್ದರೆ ಆಗ ಆಡಳಿತ ಸರಕಾರ ಉಳಿದ ಸಮಯದ ಖರ್ಚಿಗೆ ಸಂಸತ್ತಿನ ಅನುಮತಿಯನ್ನ ಕೇಳುತ್ತದೆ. ಸಾಧಾರಣವಾಗಿ ಇಂಟರಿಮ್ ಬಜೆಟ್ ಕಾಲಾವಧಿ ನಾಲ್ಕು ತಿಂಗಳು. ಬಜೆಟ್ ಮಂಡನೆ ವರ್ಷ ಪೂರ್ತಿಗೆ ಆಗಿದ್ದರೂ ಚುನಾವಣೆ ನಂತರ ಅಧಿಕಾರಕ್ಕೆ ಬರುವ ಪಕ್ಷ ಹೊಸ ಬಜೆಟ್ ಮಂಡಿಸಬಹುದು. ಇಂಟರಿಮ್ ಬಜೆಟ್’ನಲ್ಲಿ ಘೋಷಣೆಯಾದ ಯಾವುದೇ ಯೋಜನೆಯನ್ನ ಬದಲಾಯಿಸುವ ಅಥವಾ ರದ್ದುಪಡಿಸುವ ಅಥವಾ ಅದನ್ನು ಮುಂದುವರಿಸುವ ಅಧಿಕಾರ ಹೊಸ ಸರಕಾರದ ಬಳಿಯಲ್ಲಿರುತ್ತದೆ. ಹೀಗಾಗಿ ಇಂಟರಿಮ್ ಬಜೆಟ್ ಮತ್ತು ಸಾಮಾನ್ಯ ಬಜೆಟ್ ನಡುವಿನ ಮುಖ್ಯ ವ್ಯತ್ಯಾಸ ಇಂಟರಿಮ್ ಬಜೆಟ್ ನಲ್ಲಿ ಮಂಡಿಸಿದ ಎಲ್ಲಾ ಯೋಜನೆಗಳು ಹೊಸ ಸರಕಾರ ಜಾರಿಗೆ ತರುತ್ತದೆ ಎನ್ನುವ ಗ್ಯಾರಂಟಿ ಇರುವುದಿಲ್ಲ.
ಇಂದಿನ ಇಂಟರಿಮ್ ಬಜೆಟ್ ನ ಮುಖ್ಯಾಂಶಗಳು ಹೀಗಿವೆ:
೧. ಪ್ರಥಮವಾಗಿ ತೆರಿಗೆ ಪಾವತಿಸುವ ಸರಕಾರಿ ಮತ್ತು ಇತರೆ ಮಾಸಿಕ ವೇತನವನ್ನ ನಂಬಿ ಬದುಕುವ ಮಧ್ಯಮ ವರ್ಗದ ಜನರಿಗೆ ಸಿಹಿ ಸುದ್ದಿಯಿದೆ. ಇದು ಹತ್ತಿರತ್ತಿರ ೩ ಕೋಟಿ ಜನರಿಗೆ ಖುಷಿಯನ್ನ ತರಲಿದೆ. ಮುಂದಿನ ಹಣಕಾಸು ವರ್ಷದಿಂದ ಐದು ಲಕ್ಷ ರೂಪಾಯಿ ವಾರ್ಷಿಕ ಆದಾಯ ತೆರಿಗೆಯಿಂದ ವಿನಾಯತಿ ಪಡೆಯಲಿದೆ. ಇಲ್ಲಿಯವರೆಗೆ ಇದು ಎರಡೂವರೆ ಲಕ್ಷ ರೂಪಾಯಿ ಇತ್ತು. ಜೊತೆಗೆ ಒಂದೂವರೆ ಲಕ್ಷದವರೆಗಿನ ಪ್ರಾವಿಡೆಂಟ್ ಫಂಡ್ ಮತ್ತು ಇತರೆ ನಮೂದಿತ ಹೂಡಿಕೆಗಳ ಮೇಲೆ ಕೂಡ ರಿಯಾಯ್ತಿ ಸಿಗುತ್ತದೆ. ಹೀಗಾಗಿ ೬.೫ ಲಕ್ಷ ರೂಪಾಯಿವರೆಗಿನ ಆದಾಯವನ್ನ ತೆರಿಗೆ ಮುಕ್ತ ಎಂದು ಹೇಳಬಹುದು.
ಗಮನಿಸಿ: ಆದಾಯ ಐದು ಲಕ್ಷ ಅಥವಾ ಹೂಡಿಕೆಯೊಂದಿಗೆ ಆರೂವರೆ ಲಕ್ಷದ ಒಳಗಿರಬೇಕು. ಇದಕ್ಕಿಂತ ಹೆಚ್ಚಾಗಿದ್ದರೆ ಯಾವುದೇ ವಿನಾಯತಿ ಸಿಕ್ಕುವುದಿಲ್ಲ. ಅಂದರೆ ಆದಾಯ ಈ ಮಿತಿಗಿಂತ ಹೆಚ್ಚಿದ್ದರೆ ಅವರಿಗೆ ಯಾವುದೇ ತೆರಿಗೆ ವಿನಾಯತಿ ಇಲ್ಲ. ಉದಾಹರೆಣೆಗೆ ವಾರ್ಷಿಕ ಆದಾಯ ೧೦ ಲಕ್ಷವಿದ್ದವರಿಗೆ ಇದರಿಂದ ಏನೂ ಪ್ರಯೋಜನವಿಲ್ಲ. ಅವರಿಗೆ ಹಿಂದಿನಂತೆ ತೆರಿಗೆ ಲಗೂ ಆಗುತ್ತದೆ.
೨. ಇಲ್ಲಿಯವರೆಗೆ ಉಳಿತಾಯದ ಮೇಲೆ ಬರುವ ಬಡ್ಡಿ ಹತ್ತು ಸಾವಿರ ರೂಪಾಯಿ ಮೀರಿದ್ದರೆ ಅದರ ಮೇಲೆ ತೆರಿಗೆಯನ್ನ ಮೂಲದಲ್ಲಿ ಕಡಿತಗೊಳಿಸಲಾಗುತಿತ್ತು. ಇದೀಗ ಈ ಹಣದ ಮೊತ್ತವನ್ನ ೪೦ ಸಾವಿರ ರುಪಾಯಿಗೆ ಏರಿಸಲಾಗಿದೆ. ಇದರಿಂದ ಕೋಟ್ಯಂತರ ಹಿರಿಯ ನಾಗರಿಕರಿಗೆ ಸಹಾಯವಾಗುತ್ತದೆ.
೩. ಇತರೆ ಮೂಲದ ಆದಾಯದಲ್ಲಿ ಅಂದರೆ ಮನೆ ಬಾಡಿಗೆ ರೂಪದಲ್ಲಿ ಹಣ ೧ ಲಕ್ಷ ೮೦ ಸಾವಿರ ದಾಟಿದರೆ ಆಗ ತೆರಿಗೆಯನ್ನ ಮೂಲದಲ್ಲಿ ಕಡಿತಗೊಳಿಸಬೇಕಿತ್ತು. ಇದೀಗ ಆ ಮೊತ್ತವನ್ನ ಕೂಡ ೨ ಲಕ್ಷ ೪೦ ಸಾವಿರಕ್ಕೆ ಏರಿಸಲಾಗಿದೆ. ಇದರಿಂದ ಲಕ್ಷಾಂತರ ಜನರು ಟಿಡಿಎಸ್ ಎನ್ನುವ ಕಿರಿಕಿರಿಯಿಂದ ಬಚಾವಾಗುತ್ತಾರೆ.
೪.ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯ ಅಡಿಯಲ್ಲಿ ಅಸಂಘಟಿತ ಕಾರ್ಯ ಕ್ಷೇತ್ರದಲ್ಲಿ ದುಡಿಯುವ ಮತ್ತು ಹದಿನೈದು ಸಾವಿರ ರೂಪಾಯಿಗಿಂತ ಕಡಿಮೆ ಮಾಸಿಕ ವೇತನ ಹೊಂದಿರುವ ಜನರಿಗೆ ೬೦ ವರ್ಷ ದಾಟಿದ ನಂತರ ಮಾಸಿಕ ೩ ಸಾವಿರ ಪೆನ್ಷನ್ ಪಡೆಯುವ ಯೋಜನೆಯನ್ನ ಜಾರಿಗೆ ತರಲಾಗುವುದು. ಇದು ಹತ್ತು ಕೋಟಿಗೂ ಹೆಚ್ಚಿನ ಜನರಿಗೆ ಅನುಕೂಲ.
೫. ಎರಡು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ವಾರ್ಷಿಕ ೬ ಸಾವಿರ ರೂಪಾಯಿಯನ್ನ ಸಹಾಯಧನವನ್ನಾಗಿ ನೀಡಲಾಗುವುದು. ಈ ಯೋಜನೆಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಎಂದು ಹೆಸರಿಸಲಾಗಿದೆ. ಇದು ಹೆಚ್ಚು ಕಡಿಮೆ ೧೨ ಕೋಟಿ ಬಡ ರೈತರಿಗೆ ಒಂದಷ್ಟು ನೆರವು ನೀಡಲಿದೆ
೬. ಸರಕಾರಿ ಯೋಜನೆಗಳಿಗೆ ಬೇಕಾಗುವ ಸರುಕು ಮತ್ತು ಸೇವೆಯ ೨೫ ಪ್ರತಿಶತವನ್ನ ಎಂಎಸ್ಎಂಇ ಸಂಸ್ಥೆಗಳ ಮೂಲಕ ಪಡೆಯಲಾಗುವುದು ಅದರಲ್ಲೂ ೩ ಪ್ರತಿಶತ ಸೇವೆಯನ್ನ ಮಹಿಳಾ ಉದ್ಯಮಿಗಳಿಂದ ಪಡೆಯಲಾಗುವುದು.
೭. ಇಲ್ಲಿಯವರೆಗೆ ತೆರಿಗೆದಾರನ ಬಳಿ ಎರಡು ಮನೆಯಿದ್ದಾಗ ಒಂದು ಮನೆಯನ್ನ ಆತನ ಬಳಕೆಗಾಗಿ ಎಂದು ತಿಳಿದು ಕೊಳ್ಳಲಾಗುತಿತ್ತು . ಮತ್ತೊಂದು ಮನೆಯ ಬಾಡಿಗೆ ಹಣವನ್ನ ತೆರಿಗೆ ನೀಡಲು ಆದಾಯದಲ್ಲಿ ಸೇರಿಸಲಾಗುತಿತ್ತು. ಇದೀಗ ಎರಡು ಮನೆಯ ಆದಾಯವನ್ನ ತೆರಿಗೆಯಿಂದ ಮುಕ್ತಗೊಳಿಸಲಾಗಿದೆ. ಅಂದರೆ ತೆರಿಗೆದಾರನ ಬಳಿ ಎರಡಕ್ಕಿಂತ ಹೆಚ್ಚಿನ ಮನೆಯಿದ್ದಾಗ ಮಾತ್ರ ಆತ ಅದರ ಮೇಲೆ ತೆರಿಗೆ ನೀಡಬೇಕು. ಇದು ಕೊಡ ಕೋಟ್ಯಂತರ ಜನರ ತೆರಿಗೆ ಹಣವನ್ನ ಉಳಿಸುತ್ತದೆ.
೮. ಹೂಡಿಕೆ ಮೇಲೆ ಹಾಕುವ ಕ್ಯಾಪಿಟಲ್ ಗೈನ್ ತೆರಿಗೆಯನ್ನ ಕಡಿಮೆ ಮಾಡಿಕೊಳ್ಳಲು ಇದೀಗ ಒಳ್ಳೆಯ ಅವಕಾಶವನ್ನ ನೀಡಲಾಗಿದೆ. ಲಾಭದ ಹಣವನ್ನ ಇಲ್ಲಿಯವರೆಗೆ ಕೇವಲ ಒಂದು ಆಸ್ತಿ ಖರೀದಿಗೆ ಬಳಸಬೇಕಾಗಿತ್ತು. ಇದೀಗ ಇದನ್ನ ಎರಡು ಮನೆ ಅಥವಾ ಅಸ್ತಿ ಖರೀದಿಸಲು ಬಳಸಬಹುದು. ಎರಡು ಕೋಟಿ ರೂಪಾಯಿವರೆಗಿನ ಮಿತಿಯನ್ನ ತೆರಿಗೆದಾರ ಜೀವಿತಾವಧಿಯಲ್ಲಿ ಒಮ್ಮೆ ಉಪಯೋಗಿಸಬಹದು. ಇದು ಕೊಡ ಲಕ್ಷಾಂತರ ಜನರ ತೆರಿಗೆ ಹೊರೆಯನ್ನ ಕಡಿಮೆ ಮಾಡಲಿದೆ.
೯. ಗ್ರಾಚುಟಿ ಮೇಲಿನ ತೆರಿಗೆ ಹಣದ ಮೊತ್ತ ೨೦ ಲಕ್ಷದಿಂದ ೩೦ ಲಕ್ಷದ ವರೆಗೆ ಏರಿಸಲಾಗಿದೆ. ಐದು ವರ್ಷಕ್ಕಿಂತ ಹೆಚ್ಚಿನ ಅವಧಿ ಸೇವೆ ಸಲ್ಲಿಸಿದ ಕೋಟ್ಯಂತರ ಜನರಿಗೆ ಇದರಿಂದ ಉಪಯೋಗವಾಗಲಿದೆ.
೧೦. ವೇತನದ ಮೇಲೆ ಸಿಗುತ್ತಿದ್ದ ಮೆಡಿಕಲ್ ಇತ್ಯಾದಿ ತೆರಿಗೆ ಕಡಿತದ ಮೊತ್ತವನ್ನ ೪೦ ಸಾವಿರದಿಂದ ೫೦ ಸಾವಿರಕ್ಕೆ ಏರಿಸಲಾಗಿದೆ. ಇದು ಕೂಡ ಲಕ್ಷಾಂತರ ಜನರಿಗೆ ಸಹಾಯವಾಗಲಿದೆ.
೧೧. ಇನ್ಕಮ್ ಟ್ಯಾಕ್ಸ್ ರಿಟರ್ನ್ ಗಳನ್ನ ೨೪ ಗಂಟೆಗಳಲ್ಲಿ ಪರಿಷ್ಕರಣೆಗೆ ಒಳಪಡಿಸಲಾಗುತ್ತದೆ.
೧೨. ಇನ್ನೆರಡು ವರ್ಷದಲ್ಲಿ ಟ್ಯಾಕ್ಸ್ ರಿಟರ್ನ್ ಗಳ ಪರಿಶೀಲನೆಯನ್ನ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಮಾಡಲಾಗುವುದು. ಅಂದರೆ ತೆರಿಗೆದಾರ ಮತ್ತು ಅಧಿಕಾರಿಯ ನಡುವೆ ವೈಯಕ್ತಿಕ ಸಂಪರ್ಕದ ಗೋಜು ಗೊಂದಲಗಳಿರುವುದಿಲ್ಲ.
ಇದೊಂದು ಚುನಾವಣೆ ನೆನಪಿನಲ್ಲಿ ಇಟ್ಟುಕೊಂಡು ಮಂಡಿಸಿರುವ ಬಜೆಟ್ ಅನ್ನಿ, ಏನಾದರೂ ಅನ್ನಿ ಆದರೆ ಇದೊಂದು ಬಡ ಮತ್ತು ಮಧ್ಯಮ ವರ್ಗಕ್ಕೆ ಜಾಕ್’ಪಾಟ್ ಬಜೆಟ್ ಅನ್ನುವುದರಲ್ಲಿ ಸಂದೇಹವಿಲ್ಲ.
ಮೂಲ: ಕನ್ನಡಪ್ರಭ ಪ್ರಕಟಿತ ಬರಹ
Facebook ಕಾಮೆಂಟ್ಸ್