X

ಬನಿಯನ್ ಕಳಚಿದೆ

ಒಂದಾಣೆ ಮಾಲೆಯ ಒಂದು ಕತೆ. ಒಮ್ಮೆ ಸೂರ್ಯನಿಗೂ ಗಾಳಿಗೂ ಜಿದ್ದು ಬಿತ್ತು; ತಮ್ಮಲ್ಲಿ ಯಾರು ಶ್ರೇಷ್ಠರೆಂದು. ಹೇಗೆ ನಿರ್ಣಯಿಸುವುದು? ಕೆಳಗೊಬ್ಬ ಪಂಚೆ ತೊಟ್ಟು, ಶಲ್ಯಹೊದೆದು, ಮುಂಡಾಸು ಬಿಗಿದು ಕೈಯಲ್ಲೊಂದು ಬೀಸುದೊಣ್ಣೆ  ಹಿಡಕೊಂಡು, ಚರ್ರಚರ್ರ ಶಬ್ದ ಮಾಡುವ ಚಪ್ಪಲಿ ಮೆಟ್ಟಿಕೊಂಡು ನಡೆಯುತ್ತಿದ್ದ. ಸೂರ್ಯ ಗಾಳಿಯವರೊಳಗೆ ನಿಶ್ಚಯವಾಯಿತು – ಆ ವ್ಯಕ್ತಿಯ ಮೈಯಿಂದಯಾರು ಬಟ್ಟೆ ಕಿತ್ತು ಹಾಕುತ್ತಾರೋ ಅವರೇ ಶ್ರೇಷ್ಠರೆಂದು ಒಪ್ಪಿಕೊಳ್ಳಬೇಕೆಂದು . ಹಾಗೆಯೇ ಮೊದಲನೆಯ ಸರದಿ ಗಾಳಿಯದ್ದು. ಭರದಿಂದ ಬೀಸತೊಡಗಿದ. ಕೆಳಗಿನ ವ್ಯಕ್ತಿ ತನ್ನ ಶಲ್ಯ ಪಂಚೆಯನ್ನೆಲ್ಲ ಬಿಗಿ ಮಾಡಿಕೊಂಡ. ಗಾಳಿ ಮತ್ತೂ ಜೋರಾಗಿ ಬೀಸತೊಡಗಿದಾಗ ಮುಂಡಾಸನ್ನು ಕಿವಿಮುಚ್ಚುವಂತೆ ಗಟ್ಟಿಯಾಗಿ ಸುತ್ತಿಕೊಂಡು ಶಲ್ಯವನ್ನು ಪಂಚೆಯ ಸುತ್ತ ಗಟ್ಟಿಯಾಗಿ ಬಿಗಿದು ಕೊಂಡ. ಅಲ್ಲೋಲ ಕಲ್ಲೋಲವಾಗುವಂತೆ ಗಾಳಿ ಬೀಸಿದಾಗ ನಡೆಯುವ ವ್ಯಕ್ತಿ ನಿತ್ತಲ್ಲೇ ಕುಳಿತುಕೊಂಡು ತನ್ನ ಬಟ್ಟೆ ಬರೆಯನ್ನು ಗಟ್ಟಿಯಾಗಿ ಹಿಡಕೊಂಡ. ಗಾಳಿಯ ಪ್ರತಾಪ ನಡೆಯಲಿಲ್ಲ. ಎಲ್ಲವೂ ಶಾಂತವಾಯಿತು. ಈಗ ಸೂರ್ಯನ ಸರದಿ. ಸೂರ್ಯ ಕಾವು ಏರಿಸುತ್ತಲೇ ಹೋದ. ನಡೆಯುತ್ತಿದ್ದ ವ್ಯಕ್ತಿ ಹೊದೆದು ಕೊಂಡ ಬಟ್ಟೆಯನ್ನೆಲ್ಲ ಬಿಚ್ಚಿ ಕೈಯಲ್ಲಿ ಹಿಡಕೊಂಡು ಸೆಕೆ ತಡೆಯಲಾಗದೆ ಲಂಗೋಟಿಯಲ್ಲೇ ಮರದ ನೆರಳಲ್ಲಿ ನಿಂತನು.

ಯಾರೇ ಗೆಲ್ಲಲಿ, ಸೋಲಲಿ ಆ ವ್ಯಕ್ತಿ ಬೆವರಿ ಬೆತ್ತಲಾದುದು ಸತ್ಯ. ಇದೇ ಪರಿಸ್ಥಿತಿ ಅಮೆರಿಕೆಗೆ ಬಂದ ನನಗೂ ಆದುದು. ಯಾರ ಸ್ಪರ್ಧೆಯ ಕಾರಣವೊ? ಸೂರ್ಯ ಹಿಮರಾಜರ ಕಾಳಗವೋ! ಲಾಸ್ ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ಇಳಿಯುವಾಗಲೇ ಬೆಚ್ಚಗೆ ಉಣ್ಣೆಯ ಅಂಗಿ ಧರಿಸಿಕೊಂಡಿದ್ದೆ. ಇಳಿದ ಮೇಲೆ ಕಳಚಿ ಆರಾಮವಾಗಿರೋಣ ಎಂಬ ನನ್ನ ಲೆಕ್ಕಾಚಾರ ತಪ್ಪಿದ್ದೇ. ವಿಮಾನದಿಂದಿಳಿದು ಮಕ್ಕಳ ಕಾರು ಸೇರುವ ತನಕ ಬೆಚ್ಚಗಿನ ಅಂಗಿಹಾಕಿಕೊಂಡ ಮೇಲೂ ಬೀಸುತ್ತಾ ಕೊರೆಯುವ ಚಳಿ ಗಾಳಿಗೆ ಮತ್ತೂ ಬಿಗಿಯಾಗಿ ಉಣ್ಣೆಯ ಅಂಗಿಯನ್ನು ಹೊದೆದುಕೊಂಡು, ಕೈಗಳನ್ನು ಜೇಬಿಗಿಳಿಸಿಕೊಂಡು, ಮುರುಟಿಕೊಂಡು ನಿಂತಲ್ಲೇ ನಡುಗಿದುದು.  ನಾನೂ ನನ್ನಾಕೆಯೂ ಧಡೂತಿಯವರಲ್ಲದ ಕಾರಣ ಶೀತ ನಮ್ಮನ್ನು ಚಿರುಟಿಸಿಯೇ ಬಿಡುತ್ತದೆ. ನನ್ನಾಕೆಯಂತೂ ಕಿವಿ-ತಲೆಯನ್ನೂ ಮುಚ್ಚಿಕೊಂಡಿದ್ದಳು.

ಕಾರಿನ ಒಳಸೇರಿದಾಗಲೇ ಮೈ ಬೆಚ್ಚಗಾದುದು. ಮಗನ ಮನೆ ತಲಪಿದ ಮೇಲೂ ಅಷ್ಟೆ. ಕ್ರಮ ಪ್ರಕಾರ ಕೈಕಾಲು ತೊಳೆಯೋಣವೆಂದು ಬಲಬದಿಯ ನಳ್ಳಿ ತಿರುಗಿಸಿ ನೀರಿಗೆ ಕೈಕಾಲು ಒಡ್ಡಿದರೆ ಕೊರಡು ಕಟ್ಟಿದಂತಾಗುತ್ತದೆ. ಎಡ ನಲ್ಲಿಯನ್ನು ತಿರುಗಿಸಿಕೊಂಡು ಬಿಸಿನೀರಿಗೆ ಒಡ್ಡಿದ ಕೈಕಾಲು ತೆಗೆಯಲೇ ಮನಸ್ಸು ಬರುವುದಿಲ್ಲ. (ಆದರೆ ಬರೇ ಎಡ ನಲ್ಲಿ ತಿರುಗಿಸಿಕೊಂಡರೆ ಚರ್ಮ ಬೆಂದುಹೋಗಬಹುದು!. ಇಲ್ಲಿಯ ಮನೆಗಳಲ್ಲಿ ಇಪ್ಪತ್ತ ನಾಲ್ಕು ಗಂಟೆಯೂ ಬಿಸಿನೀರು ತಣ್ಣೀರಿನ ಸೌಕರ್ಯ). ಮನೆಗೆ ಬಂದು ಬಿಸಿಬಿಸಿ ತಿಂಡಿ ತಿಂದು ಚಹಾ ಕಾಫಿ ಕುಡಿದಾಗ ನಾನೂ ನನ್ನಾಕೆಯೂ ಚಳಿ ಎದುರು ಸ್ವಲ್ಪ ಚೇತರಿಸಿದುದು. ಆದರೂ ಮೈಮೇಲಿನ ಬಟ್ಟೆ ಬಿಚ್ಚಲೇ ಸೋಮಾರಿತನ.

ಮನೆಯೊಳಗೆ ತೆಪ್ಪಗಿದ್ದರೆ ಬೆಚ್ಚಗಿರಲು ಸಾಧ್ಯವಿಲ್ಲ. ಕೋಣೆ ಕೋಣೆಗಳನ್ನು ಬೆಚ್ಚಗಿಡಲು ಅಗ್ಗಿಷ್ಟಿಕೆಗಳು. ನನಗಿದು ಹೊಸ ಅನುಭವ. ಮಡಿಕೇರಿಯಲ್ಲೇನೋ ಇದೇ ರೀತಿ ಮಾಡುತ್ತಾರಂತೆ. ಚಾವಡಿಯಲ್ಲೊಂದು ದೊಡ್ಡ ಅಗ್ಗಿಷ್ಟಿಕೆ ಇದ್ದರೆ ಕೋಣೆಗಳಲ್ಲಿ ಸಣ್ಣವು. ಎಲ್ಲವು ನೈಸರ್ಗಿಕ ಅನಿಲದಿಂದ ಚಾಲಿತ. ಮನೆಯ ಒಳಗೆ ಹೀಗೆ ಹೇಗಾದರೂ ಬೆಚ್ಚಗಿದ್ದರೆ ಹೊರಗೆ? ಪ್ರಯಾಣ ಸುವವರ ಕಾರಿನಲ್ಲೂ ಬೆಚ್ಚಗಿಡುವ ವ್ಯವಸ್ಥೆ. ನನ್ನಂತೆ ನಡೆಯಲು ಇಚ್ಛಿಸುವವರು ಉಣ್ಣೆ ಉಡುಗೆ ಧರಿಸಿ ಹೊರಗೆ ಕಾಲಿಡ ಬೇಕಷ್ಟೆ. ಹೀಗಿದ್ದೂ ಅನ್ನುತ್ತಾರೆ – ’ನೀವು ಬಂದಿಳಿದಾಗ ಎಷ್ಟೋ ವಾಸಿ, ಅದಕ್ಕಿಂತ ಮುಂಚೆ ತುಂಬಾ ಚಳಿ’ ಎಂದು. ಏನೋ, ನಾನು ದಪ್ಪ ಅಂಗಿ ಬನಿಯನ್ ತಪ್ಪಿಸಲಿಲ್ಲ. ವಾಕಿಂಗ್ ಹೋಗುವಾಗಲೂ ಅಷ್ಟೇ. ಇಡೀ ಬೀದಿಯಲ್ಲಿ ನಾನು ಒಬ್ಬನೇ ಉಣ್ಣೆ ಅಂಗಿ ಹಾಕಿಕೊಂಡವನಾದರೂ, ಮಿಕ್ಕವರು ಮಿನಿ, ಬಿಕಿನಿ, ಚಡ್ಡಿ ಬನಿಯನುಗಳಲ್ಲಿದ್ದರೂ ಚಳಿ ನನ್ನನ್ನು ಬಿಡದೆ ನಡೆದೆ. ಸೂರ್ಯ ನನ್ನ ಮುಖ ಮಾತ್ರ ಕಂಡಿರಬಹುದಷ್ಟೆ.

ಲಾಸ್ ಏಂಜಲೀಸ್ ನಿಂದ ವುಡ್ ಲ್ಯಾಂಡ್ ಹಿಲ್ಸ್ ಗೆ ಬಂದಾಗ ಪರಿಸ್ಥಿತಿ ಸುಧಾರಿಸುವ ಲಕ್ಷಣ ಕಂಡಿತು. ಇಲ್ಲಿಯವರ ಮಟ್ಟಿಗೆ ಚಳಿಗಾಲ ಕಳೆದು ವಸಂತ ಕಾಲ ಬಂತೆಂದು ಕುಶಿ. ಇಲ್ಲಿಯ ಮಾಲುಗಳಲ್ಲೂ ವಿವಿಧ ಹೂ ಹಣ್ಣು ತುಂಬಿ ತುಳುಕಲು ಸುರು. ಸಾಲು ಮರಗಳ ಹಸಿರು ಮುಚ್ಚಿ ಹೋಗುವಂತೆ ಕೇವಲ ಬಿಳಿ, ನೇರಳೆ ಬಣ್ಣದ ಹೂಗಳನ್ನು ಹೊರ ಸುರುಮಾಡಿದವು. ನಾನು ದಪ್ಪ ಅಂಗಿಯಿಂದ ಬನಿಯನ್ ಗೆ ಬಂದೆ. ಸ್ಥಳೀಯರಿಗೆ ಬನಿಯನ್ನೇ ಹೊರೆ ಆಗುವ ಹಾಗೆ ತೋರುತಿತ್ತು. ಮನೆಯ ಮುಂದಿನ ಕೊಳದ ಪಕ್ಕದಲ್ಲಿ ಬೆಂಚಿನ ಮೇಲೆ ಮೈಯೊಡ್ಡಿ ಬೋರಲು ಬೀಳತೊಡಗಿದರು.

ಏನೋ, ಸೂರ್ಯ ಪ್ರತಾಪ ಸುರುವಾಯಿತೋ? ಇಷ್ಟು ದಿನ ಚಳಿ ಚಳಿ ಎನ್ನುತ್ತಿದ್ದವ ಪರವಾಗಿಲ್ಲ ಬೆಚ್ಚಗಿದೆ ಎನ್ನುವ ಮಟ್ಟಕ್ಕೆ ಬಂದಿದ್ದೆ. ಇವತ್ತು ಮಾತ್ರ ಬೆಚ್ಚಗಲ್ಲ ಉಷ್ಣ ಜಾಸ್ತಿಯೇ ಅನಿಸುವಂತಾಗಿದೆ. ಹೊರಗಡೆ ನೋಡಿದರೆ ಬಿಸಿಲ ಝಳ ಜೋರಾಗಿಯೇ ಇದೆ. ಹೊತ್ತು ಕಳೆದಂತೆ ಮೈ ಉರಿಯಲೇ ಸುರು ಆಯಿತು. ಬನಿಯನ್ನು ತೆಗೆದೆ! ಅಮೆರಿಕೆಗೆ ಬಂದು ಮೊದಲ ಬಾರಿಗೆ ಬೆತ್ತಲಾದುದು. ಊರಲ್ಲಿಯಂತೆ ಸ್ನಾನ ಮಾಡಿ ಬಂದರೂ ಮೈ ಉರಿ ಕಡಿಮೆಯಿಲ್ಲ. ಮನೆಯೊಳಗೇನೋ ಹವಾ ನಿಯಂತ್ರಣ, ಫ್ಯಾನ್ ಎಲ್ಲ ಒಟ್ಟಿಗೆ ಕೆಲಸ ಮಾಡಿದರೂ ಉಷ್ಣ ನಿಯಂತ್ರಣಕ್ಕೆ ಬರುವ ಹಾಗಿರಲಿಲ್ಲ. ರಾಯಚೂರಿನ ದಿನಗಳ ನೆನಪಾಯಿತು. ಉಷ್ಣಮಾಪಕ ನೋಡಿದರೆ ಮನೆಯೊಳಗೆ ೮೮ ಡಿಗ್ರಿ ಹೊರಗೆ ೧೦೮ ಡಿಗ್ರಿ ಫಾರನ್ನೀಟ್.  ಅಂತರ್ಜಾಲದಲ್ಲಿ ಗೂಗಲ್ ವಾರ್ತೆ ನೋಡುತ್ತಿದ್ದವನಿಗೆ ಕಂಡುದು ಸಾವಿನ ಕಣಿವೆಯಲ್ಲಿ (ಮನೆಯಿಂದ ೧೦೦ ಮೈಲು ದೂರ)೧೩೪ ಡಿಗ್ರಿ ಫಾರನ್ನೀಟ್ – ಶತಮಾನದ ಅತ್ಯುಷ್ಣ. ಮತ್ತೆ ಹಲವು ಕಡೆ ೧೧೦ ಡಿಗ್ರಿಗಳಿಗಿಂತ ಜಾಸ್ತಿ, ವಿಮಾನ ಸಂಚಾರ ಸ್ಥಗಿತ. ಅರಿಝೋನ ರಾಜ್ಯದ ಯೆರ್ನೆಲ್ ಹಳ್ಳಿಯಲ್ಲಿ ಬಿಸಿಲಿನ ಝಳಕ್ಕೆ ಮುಳಿ ಗುಡ್ಡಕ್ಕೆ ಬೆಂಕಿ ಬಿದ್ದು ಮೈಲುಗಟ್ಟಲೆ ಕಾಡು, ಮೈದಾನ ಸುಟ್ಟು ಕರಕಲು.

ಮನೆ ಎದುರಿನ ಕೊಳ ದಿನವಿಡೀ ಮಂದಿ ಮಕ್ಕಳಿಂದ ತುಂಬಿ ತುಳುಕಾಡುತಿತ್ತು. ಅಲ್ಲ, ಪ್ರಕೃತಿಯ ಬದಲಾವಣೆ ಊರಿಂದೂರಿಗೆ ಎಷ್ಟು ಭಿನ್ನ, ವಿಶಿಷ್ಟ!

Facebook ಕಾಮೆಂಟ್ಸ್

A. Ramachandra Bhat: ಕೇರಳ-ಕರ್ನಾಟದ ಗಡಿಯ ಊರು ಅಡ್ಯನಡ್ಕ, ನನ್ನ ಹುಟ್ಟೂರು. ಸ್ವಾತಂತ್ರ್ಯ ಪೂರ್ವದ ವ್ಯಕ್ತಿ ನಾನು. ನನ್ನ ತಂದೆಯವರಿಂದ ತೊಡಗಿ ಅಧ್ಯಾಪನವೇ ಜೀವನೋಪಾಯವಾಗಿದ್ದ ನನ್ನ ದೊಡ್ಡ ಕುಟುಂಬದಲ್ಲಿ ಕವಲು ದಾರಿ ಹಿಡಿದು ಆ ದಾರಿ ಬಿಟ್ಟು ಜೀವ ವಿಮಾ ನಿಗಮದಂತಹ ಸಂಸ್ಥೆಯಲ್ಲಿ ದುಡಿಯುವ ದಾರಿ ಕಂಡುಕೊಂಡ ಪ್ರಥಮ ಕುಟುಂಬ ಸದಸ್ಯ. ಅಡ್ಯನಡ್ಕ, ಕಾಸರಗೋಡು, ಹಾಗು ಪುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ವಿದ್ಯಾಭ್ಯಾಸ. ಎಲ್ಲರಂತೆ ನೌಕರಿಸೇರಿ ದುಡಿದು, ಈಗ ನಿವೃತ್ತನಾಗಿರುವವ. ಜೀವನದುದ್ದಕ್ಕೂ ಹೊಸ ಜಾಗ, ಜನ, ಘಟನೆ, ಚಟುವಟಿಕೆಗಳ ಬಗ್ಗೆ ಕುತೂಹಲ, ಅನುಭವಿಸುವ ಹಾಗೂ ದಾಖಲಿಸುವ ಹಂಬಲ ಇದ್ದವ. ಹಾಗಾಗಿ ಈಗ ಬಯಸಿದ್ದನ್ನು ಬರೆದು ಹಂಚಿಕೊಳ್ಳುವ ಹವ್ಯಾಸದವ. ಜೀವ ವಿಮಾ ನಿಗಮದಿಂದ ನಿವೃತ್ತಿಯ ನಂತರ ಈ ಹವ್ಯಾಸಕ್ಕೆ ದಾರಿ ಕಂಡುಕೊಂಡಿದ್ದೇನೆ. ಈಗ ಹುಟ್ಟೂರು ಬಿಟ್ಟು ವೃತ್ತಿಯಿಂದ ನಿವೃತ್ತಿಯಾದ ಉಡುಪಿಯಲ್ಲೇ ನನ್ನ ಕನಸುಗಳನ್ನು ನೇಯುತಿದ್ದೇನೆ.
Related Post