ಜಗತ್ತು ಸುತ್ತುವ ಆಸೆ, ಹಣ ಎರಡೂ ಇರದ ನನಗೆ ಅವೆರೆಡೂ ಬಯಸದೆ ಬಂದ ಭಾಗ್ಯ. ೨೦೦೦ ಮೇ ೨೪ ರಂದು ಪ್ರಥಮ ಬಾರಿಗೆ ಸ್ಪೇನ್ ನ ಬಾರ್ಸಿಲೋನಾದ ‘ಎಲ್ ಪ್ರಾತ್’ ವಿಮಾನ ನಿಲ್ದಾಣದಲ್ಲಿ ಇಳಿಯುವ ಮುಂಚೆ ದುಬೈನಲ್ಲಿ ಮೂರು ತಿಂಗಳು ವಾಸ, ಕೆಲಸ ಮಾಡಿದ್ದ ಅನುಭವ ಬಿಟ್ಟರೆ, ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆ ಕೂಡ ನೋಡಿರದ ಬದುಕು ನನ್ನದು. ಆಗಸ್ಟ್ ಪೂರ್ತಿ ತಿಂಗಳು ಸ್ಪೇನ್ ನಲ್ಲಿ ರಜಾ ಜೊತೆಗೆ ವೇತನ ಡಬಲ್! ಅಂದರೆ ಮಾಮೂಲಿ ತಿಂಗಳಲ್ಲಿ ನಿಮ್ಮ ಸಂಬಳ ಸಾವಿರವಿದ್ದರೆ, ಆಗಸ್ಟ್ ನಲ್ಲಿ ಎರಡು ಸಾವಿರ. ‘ಹೋಗಿ ಜಗವ ಸುತ್ತಿ, ಹೊಸ ಹುರುಪಿನೊಂದಿಗೆ ಮರಳಿ ಬನ್ನಿ’ ಎನ್ನುವುದು ಇಲ್ಲಿನ ಸರಕಾರದ ಅಲಿಖಿತ ನಿಯಮ. ಸ್ಪ್ಯಾನಿಶರ ಬದುಕುವ ರೀತಿಯೇ ಹಾಗೆ; ಊಟ ಬಿಟ್ಟರೂ ಜಗತ್ತು ಸುತ್ತುವುದು ಬಿಡರು. ಹೋದಲ್ಲಿ ಅವರೊಂದಿಗೆ ಒಂದಾಗುವ ಸಹಜ ಕನ್ನಡ ಮಣ್ಣಿನ ಗುಣದ ನನಗೆ ಜಗತ್ತು ಸುತ್ತುವ ಹುಚ್ಚು ಯಾವಾಗ ಹಿಡಿಯಿತು ತಿಳಿಯಲೇ ಇಲ್ಲ.
ಅಂದೋರ ಅರಸಿ ಹೊರಟಾಗ
ನಾನಿದ್ದ ಬಾರ್ಸಿಲೋನಾ ನಗರದಿಂದ ಉತ್ತರಕ್ಕೆ ೨೦೦ ಕಿಲೋಮೀಟರ್ ಸಾಗಿದರೆ ಸಿಗುವ ದೇಶವೇ ಅಂದೋರ (Andorra). ಯೂರೋಪಿನ ಆರನೇ ಸಣ್ಣ ದೇಶ ಹಾಗೂ ಜಗತ್ತಿನ ೧೬ ನೇ ಸಣ್ಣ ದೇಶ ಎನ್ನುವ ಖ್ಯಾತಿ ಈ ದೇಶದ್ದು. ಯುರೋ ಇಲ್ಲಿನ ಹಣ. ಆದರೆ ಅಂದೋರ ಯೂರೋಪಿಯನ್ ಯೂನಿಯನ್ ನಲ್ಲಿ ಸೇರಿಲ್ಲ; ಅಷ್ಟೇ ಅಲ್ಲದೆ ಶೇಂಗನ್ ಒಕ್ಕೂಟದಲ್ಲೂ ಇಲ್ಲ. ಆದರೂ ಇದು ಯುನೈಟೆಡ್ ನೇಷನ್ ನಿಂದ ಸ್ವತಂತ್ರ ದೇಶ ಎಂದು ಮಾನ್ಯತೆ ಪಡೆದಿದೆ. ಸರಿ ಸುಮಾರು ೮೫ ಸಾವಿರ ಇಲ್ಲಿನ ಜನಸಂಖ್ಯೆ. ೪೦ ಕಿಲೋಮೀಟರ್ ಆ ಬದಿಯಿಂದ ಈ ಬದಿಗೆ ಸುತ್ತಿದರೆ ದೇಶವನ್ನೇ ಸುತ್ತಿದಂತೆ! ಜಗತ್ತಿನ ೧೪ ನೇ ಹಳೆಯ ದೇಶ ಎನ್ನುವ ಖ್ಯಾತಿಗೂ ಇದು ಭಾಜನವಾಗಿದೆ. ಇಂತ ಅಂದೋರದಲ್ಲಿ ಏರ್ಪೋರ್ಟ್ ಇಲ್ಲ, ಹೌದು ಇಲ್ಲಿಗೆ ಹೋಗಬೇಕಾದರೆ ಸ್ಪೇನ್ ಮುಖಾಂತರ ಅಥವಾ ಫ್ರಾನ್ಸ್ ಮುಖಾಂತರ ರಸ್ತೆ ಮೂಲಕವೇ ಹೋಗಬೇಕು. ಮುಕ್ಕಾಲು ಪಾಲು ಪರ್ವತಗಳಿಂದ ಆವೃತ್ತವಾಗಿರುವ ಈ ದೇಶಕ್ಕೆ ಅಂದೋರ ಎನ್ನುವ ಹೆಸರು ಹೇಗೆ ಬಂದಿರಬಹದು ಎನ್ನುವುದಕ್ಕೆ ಚರಿತ್ರೆಯಲ್ಲಿ ಉತ್ತರವಿದೆ. ಸ್ಪೇನ್ ನ ಪಕ್ಕದಲ್ಲಿ ಇರುವ ಮೊರೊಕ್ಕೋ ಮುಸ್ಲಿಮರು ಐಬೇರಿಯನ್ ಪೆನಿನ್ಸುಲಾ ಆಕ್ರಮಣ ಮಾಡಿದ್ದು, ಸ್ಪೇನ್ ನಲ್ಲಿ ದರ್ಬಾರು ನಡೆಸಿದ್ದು ತಿಳಿದ ವಿಷಯವೇ ಆಗಿದೆ. ಅಲ್- ದುರ್ರಾ ಎಂದರೆ ‘ದಿ ಪರ್ಲ್’ ಕನ್ನಡಲ್ಲಿ ‘ಮುತ್ತು’ ಎನ್ನುವ ಅರ್ಥ ಕೊಡುತ್ತದೆ. ಅದು ಸ್ಪ್ಯಾನಿಷ್ ಮತ್ತು ಕತಾಲಾನಾರ ಭಾಷೆಯಲ್ಲಿ ಅಂದೋರ ಆಗಿರುವ ಸಾಧ್ಯತೆಗಳು ಹೆಚ್ಚಿವೆ. ಮೂರು ಕಡೆ ಪರ್ವತ, ನಡುವೆ ಇರುವ ಈ ಭೂಪ್ರದೇಶವನ್ನು ‘ಪರ್ಲ್’ ಎಂದು ಕರೆದಿದ್ದರಲ್ಲಿ ಅತಿಶಯೋಕ್ತಿ ಇಲ್ಲ.
ನೋಡಲೇನಿದೆ?
ಇಲ್ಲಿಗೆ ನೀವು ಭೇಟಿ ಕೊಟ್ಟಿದ್ದೆ ಆದರೆ ಒಮ್ಮೆಲೇ ಟೈಮ್ ಬ್ಯಾಕ್ ಟ್ರಾವೆಲ್ ಮಾಡಿದ ಅನುಭವ ನಿಮ್ಮದಾಗುತ್ತದೆ. ೧೩ ನೇ ಶತಮಾನದ ಕಟ್ಟಡಗಳನ್ನ ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಶಾಪಿಂಗ್ಗೆ ಅಂದೋರ ಬಹಳ ಪ್ರಸಿದ್ದಿ ಏಕೆಂದರೆ ಇಲ್ಲಿ ಟ್ಯಾಕ್ಸ್ ಇಲ್ಲ, ಹೀಗಾಗಿ ಪಕ್ಕದ ಫ್ರಾನ್ಸ್ ಮತ್ತು ಸ್ಪೇನ್ ನಿಂದ ತಿಂಗಳಿಗೊಮ್ಮೆ ಖರೀದಿಗೆಂದೇ ಬರುವ ಜನರ ಸಂಖ್ಯೆ ಬಹಳಷ್ಟಿದೆ. ಸ್ಕೀಯಿಂಗ್ ಗೆ ಇದು ಬಹಳ ಪ್ರಸಿದ್ಧಿ. ಕೇವಲ ೮೫ ಸಾವಿರ ಜನಸಂಖ್ಯೆ ಹೊಂದಿರುವ ಈ ಪುಟ್ಟ ದೇಶ ೧ ಕೋಟಿಗೂ ಮೀರಿ ವಾರ್ಷಿಕ ಪ್ರವಾಸಿಗರನ್ನು ಸೆಳೆಯುತ್ತದೆ. ಇವರಲ್ಲಿ ಬರುವ ಮುಕ್ಕಾಲು ಪಾಲು ಜನ ಸ್ಕೀಯಿಂಗ್ ಗಾಗಿ ಬಂದವರು; ಉಳಿದವರು ಶಾಪಿಂಗ್ ಹುಚ್ಚಿನವರು. ಉಳಿದಂತೆ ದೇಶದ ಪ್ರತಿ ವೃತ್ತ, ರಸ್ತೆ, ಕಟ್ಟಡಗಳನ್ನ ಕೂಡ ‘ಹಿಸ್ಟಾರಿಕ್’ ಎನ್ನುವಂತೆ ಬಿಂಬಿಸುತ್ತಾರೆ.
ಅಂದೋರ ದೇಶವನ್ನ ಒಂದು ಅಥವಾ ಹೆಚ್ಚೆಂದರೆ ಎರಡು ದಿನದಲ್ಲಿ ಓಡಾಡಿ ಮುಗಿಸಿಬಿಡಬಹುದು. ನೀವು ಸ್ಕೀಯಿಂಗ್ ಪ್ರಿಯರೋ ಅಥವಾ ಮದ್ಯ ಮತ್ತು ಶಾಪಿಂಗ್ ಇಷ್ಟಪಡವರಾಗಿದ್ದರೆ ವಾರ ಇಲ್ಲಿ ಆರಾಮಾಗಿ ಕಳೆಯಬಹುದು.
ಯಾವ ಸಮಯ ಬೆಸ್ಟ್? ಹಣವೆಷ್ಟು ಬೇಕು?
ಬೆಂಗಳೂರಿನಿಂದ ಅಂದೋರಕ್ಕೆ ಹೋಗಿ ಬರಲು ಒಬ್ಬ ವ್ಯಕ್ತಿಗೆ ಎಪ್ಪತ್ತೈದು ಸಾವಿರ ರೂಪಾಯಿ ಪ್ರಯಾಣ ವೆಚ್ಚವೇ ಆಗುತ್ತದೆ. ವಾರ ಇದ್ದು ನೋಡಿ ಬರಲು ಇನ್ನೊಂದು ಲಕ್ಷ ನಿರಾಯಾಸವಾಗಿ ಕೈಬಿಡುತ್ತೆ. ಇಲ್ಲಿನ ಕ್ಯಾಸಿನೊ ಹೊಕ್ಕರೆ ಖರ್ಚಿನ ಲೆಕ್ಕ ನನ್ನಿಂದ ಒಪ್ಪಿಸಲು ಸಾಧ್ಯವಿಲ್ಲ, ಕ್ಷಮಿಸಿ. ಅತಿ ಸಾಮಾನ್ಯ ಜೀವನ ನಡೆಸಲು ಕೂಡ ವಾರಕ್ಕೆ ಎರಡುಲಕ್ಷ ರೂಪಾಯಿ ವ್ಯಕ್ತಿಯೊಬ್ಬರಿಗೆ ತಗಲುತ್ತದೆ. ಸ್ಕೀಯಿಂಗ್ ಮಾಡುವ ಇಚ್ಛೆಯಿದ್ದವರು ಡಿಸೆಂಬರ್ ನಿಂದ ಮಾರ್ಚ್ ವರೆಗೆ ಇಲ್ಲಿಗೆ ಬರಬಹುದು. ಈ ಚಳಿ ತಡೆಯಲು ಸಾಧ್ಯವಿಲ್ಲ; ಆದರೆ ಅಂದೋರದ ಪ್ರಕೃತಿ ಸಿರಿ ನೋಡಿಯೇ ಸಿದ್ದ ಎನ್ನುವರು ಜುಲೈನಿಂದ ಸೆಪ್ಟೆಂಬರ್ ಇಲ್ಲಿಗೆ ಬರಬಹುದು. ಬೇಸಿಗೆಯಲ್ಲಿ ಮೂರೂವರೆ ಗಂಟೆ ಹಾಗೂ ಚಳಿಗಾಲದಲ್ಲಿ ನಾಲ್ಕೂವರೆ ಗಂಟೆ ಭಾರತದ ವೇಳೆಗಿಂತ ಹಿಂದೆ ಇದೆ. ಇಲ್ಲಿ ಕೂಡ ವಿನಿಮಯ ಮಾಧ್ಯಮವಾಗಿ ಯುರೋ ಕರೆನ್ಸಿಯನ್ನ ಬಳಸಲಾಗುತ್ತದೆ.
ಸಸ್ಯಾಹಾರಿಯ ಕಥೆಯೇನು?
ಬ್ರೆಡ್ಡು ಚೀಸು, ಹಣ್ಣು ಬಿಟ್ಟರೆ ಒಂದಷ್ಟು ಸಾಲಡ್ ಇವುಗಳಲ್ಲಿ ದಿನದೂಡಬೇಕು. ಸಸ್ಯಾಹಾರಿ ಎಂದರೆ ಬೇಯಿಸಿದ ಅಥವಾ ಸುಟ್ಟ ಬದನೇಕಾಯಿ, ಆಲೂಗೆಡ್ಡೆ ಜೊತೆಗೆ ದಪ್ಪ ಮೆಣಸಿನಕಾಯಿ ಕೊಟ್ಟು ಕೈ ತೊಳೆದುಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಸ್ಪೇನ್ ದೇಶದ ಪ್ರಸಿದ್ಧ ಖಾದ್ಯ ‘ಪಯಯ್ಯ’ ಸಿಗುತ್ತದೆ. ವೆಜಿಟೇಬಲ್ ಪಯಯ್ಯ ಕೂಡ ಸಿಗುತ್ತದೆ. ಆದರೆ ಇದು ಎಲ್ಲಾ ರೆಸ್ಟುರೆಂಟ್ ಗಳಲ್ಲಿ ಸಿಗುವುದಿಲ್ಲ. ಪಯಯ್ಯ ಎನ್ನುವುದು ನಮ್ಮ ಬಿರಿಯಾನಿ ಅಥವಾ ಪಲಾವ್ ನ ಕಸಿನ್ ಅಥವಾ ದೂರದ ಸಂಬಂಧಿ ಎನ್ನಲು ಅಡ್ಡಿಯಿಲ್ಲ. ಇದು ಅನ್ನದಿಂದ ತಯಾರಾದ ಖಾದ್ಯ. ಯೂರೋಪಿನಲ್ಲಿ ಸಿಗುವ ಫ್ರೆಶ್ ಚೀಸ್ ಮತ್ತು ಬ್ರೆಡ್ಡಿನಲ್ಲಿ ವಾರ ಕಳೆಯುವುದು ಕಷ್ಟದ ಕೆಲಸವೇನಲ್ಲ ಬಿಡಿ. ಹೇಗಿದ್ದರೂ ಚಿತ್ರಾನ್ನ, ಪುಳಿಯೋಗರೆ ಜೀವನ ಪೂರ್ತಿ ತಿನ್ನುವುದು ಇದ್ದೆ ಇರುತ್ತದೆ.
ಅಂದೋರದ ಅಲೆಮಾರಿಯಾಗಿ ಅಲೆದಾಡುವಾಗ ದಕ್ಕಿದ ಒಂದಷ್ಟು ಅಲ್ಲಿನ ವಿಶಿಷ್ಟತೆಗಳು:
ಅಂದೋರದಲ್ಲಿ ಅಲ್ಲಿನ ಪ್ರಜೆಗಳೇ ಅಲ್ಪಸಂಖ್ಯಾತರು. ಹೌದು ಜನಸಂಖ್ಯೆಯ ೪೩ ಭಾಗ ಸ್ಪ್ಯಾನಿಶರು, ೬ ಭಾಗ ಪೋರ್ಚುಗೀಸರು, ೧೭ ಭಾಗ ಫ್ರೆಂಚರು, ೩ ಭಾಗ ಅರಬ್ಬರು, ೩ ಭಾಗ ಇತರರು, ಮಿಕ್ಕವರು ಅಂದೋರ ನಿಜ ಪ್ರಜೆಗಳು.
ಅಂದೋರದಲ್ಲಿನ ಪ್ರತಿ ಪುರುಷ ೧೮ರಿಂದ ೬೦ರ ವಯೋಮಾನದವರೆಗೆ ತುರ್ತುಸ್ಥಿತಿ ಬಂದರೆ ಸೈನಿಕನಂತೆ ಕಾರ್ಯ ನಿರ್ವಹಿಸಬೇಕು. ಪ್ರತಿ ಮನೆಯ ಮುಖ್ಯಸ್ಥ ಗನ್ ಹೊಂದಿರಲೇಬೇಕು.
ಅಂದೋರ ದೇಶವನ್ನ ಇಬ್ಬರು ರಾಜರು ಪ್ರತಿನಿಧಿಸುತ್ತಾರೆ. ಫ್ರಾನ್ಸ್ ನ ಅಧ್ಯಕ್ಷ ಮತ್ತು ಸ್ಪೇನ್ ನ ಉರ್ಜಲ್ ನ ಆರ್ಚ್ ಬಿಷಪ್ ರನ್ನ ಅಂದೋರದ ರಾಜರೆಂದು ಪರಿಗಣಿಸಲಾಗುತ್ತದೆ. ಆದರೆ ಇವರಿಗೆ ಯಾವುದೇ ಹೆಚ್ಚಿನ ಅಧಿಕಾರ ಇರುವುದಿಲ್ಲ.
ಕತಲಾನ್ ಭಾಷೆಯನ್ನ ಅಧಿಕೃತ ಭಾಷೆಯಾಗಿ ಹೊಂದಿರುವ ಏಕೈಕ ರಾಷ್ಟ್ರ.
ಕಳೆದ ಸಾವಿರ ವರ್ಷದಿಂದ ಯಾವುದೇ ರಕ್ತಪಾತ ಇಲ್ಲಿಲ್ಲ. ಅಕಸ್ಮಾತ್ ಯುದ್ಧವಾದರೆ ಫ್ರಾನ್ಸ್ ಮತ್ತು ಸ್ಪೇನ್ ಮಿಲಿಟರಿ ಅಂದೋರಗೆ ರಕ್ಷಣೆ ನೀಡುತ್ತವೆ.
ಇಲ್ಲಿ ಕೆಲಸ ಮಾಡುವ ಶಿಕ್ಷಕ /ಶಿಕ್ಷಕಿಗೆ ಸಂಬಳ ಫ್ರಾನ್ಸ್ ಮತ್ತು ಸ್ಪೇನ್ ಸರಕಾರ ನೀಡುತ್ತದೆ.
ಗಡಿಯಲ್ಲಿ ಪ್ರಯಾಣಿಕರು ಕುಳಿತ ಬಸ್ಸಿಗೆ ಬಂದು ಪಾಸ್ಪೋರ್ಟ್ ಚೆಕ್ ಮಾಡುತ್ತಾರೆ. ಆದರೆ ಯಾವುದೇ ‘ಮುದ್ರೆ’ ಒತ್ತುವುದಿಲ್ಲ. ನಿಮಗೆ ನೆನಪಿಗೆ ಪಾಸ್ಪೋರ್ಟ್ ನಲ್ಲಿ ಸೀಲ್ ಬೇಕಿದ್ದರೆ ಬಸ್ನಿಂದ ಇಳಿದು ಹೋಗಿ ನೀವೇ ಹಾಕಿಸಿಕೊಂಡು ಬರಬೇಕು.
ಸರಾಸರಿ ೩೬ ಸಾವಿರ ಯುರೋ ವಾರ್ಷಿಕ ಆದಾಯ ಹೊಂದಿರುವ ಇಲ್ಲಿನ ಜನರಿಗೆ ಇನ್ಕಮ್ ಟ್ಯಾಕ್ಸ್ ಇಲ್ಲ.
ಅಂದೋರಗೆ ರಾಷ್ಟೀಯ ಬ್ಯಾಂಕ್ ಇಲ್ಲ. ತನ್ನದೇ ಕರೆನ್ಸಿ ಇಲ್ಲ. ಏರ್ಪೋರ್ಟ್ ಇಲ್ಲ. ಏಪ್ರಿಲ್ ೧೯೯೩ ರವರೆಗೆ ಸಂವಿಧಾನವೂ ಇರಲಿಲ್ಲ. ಆದರೂ ವಿಶ್ವ ಮಾನ್ಯತೆ ಪಡೆದ ಸ್ವತಂತ್ರ ದೇಶ.
ಅತ್ಯಂತ ಸುರಕ್ಷಿತ ದೇಶಗಳ ಪಟ್ಟಿಯಲ್ಲಿ ಬರುವ ಇಲ್ಲಿ, ಪಿಕ್ ಪಾಕೆಟ್, ಕಾರು ಕಳವು, ರಸ್ತೆಯಲ್ಲಿ ಅಸಭ್ಯ ವರ್ತನೆ ಪ್ರತಿಶತ ಸೊನ್ನೆ.
ಅಂದೋರ ದೇಶದ ರಾಜಧಾನಿ ಅಂದೋರ ದೆ ವೇಯ್ಯ (Andorra la Vella). ಜಗತ್ತಿನ ಅತಿ ಎತ್ತರದಲ್ಲಿ ಇರುವ ಯೂರೋಪಿನ ರಾಜಧಾನಿ ಎನ್ನುವ ಹೆಗ್ಗಳಿಕೆ ಪಡೆದಿದೆ; ಸಮುದ್ರ ಮಟ್ಟದಿಂದ ೧೦೨೩ ಮೀಟರ್ ಎತ್ತರದಲ್ಲಿದೆ .
ಈ ದೇಶದ ಪ್ರಥಮ ಹೈವೇ ಕಟ್ಟಿದ್ದು ೧೯೧೧ ರಲ್ಲಿ.
ಮೂರ್ತಿ ಚಿಕ್ಕಾದಾದರೂ ಕೀರ್ತಿ ದೂಡ್ಡದು ಎನ್ನುವ ವಾಕ್ಯ ಅಂದೋರಕ್ಕೆ ಹೆಚ್ಚು ಒಪ್ಪುತ್ತದೆ. ನೀವು ಸ್ಕೀಯಿಂಗ್ ಪ್ರಿಯರೋ, ಶಾಪೋಲಿಕ್ಕೋ ಅಲ್ಲದಿದ್ದರೂ ಪ್ರಕೃತಿ ಸೌಂದರ್ಯ ಸವೆಯಲು ಅಂದೊರಕ್ಕೆ ಹೋಗಲು ಅಡ್ಡಿ ಇಲ್ಲ. ಜೇಬು ಭದ್ರವಿದ್ದರೆ ಸಾಕು!
Facebook ಕಾಮೆಂಟ್ಸ್