X
    Categories: Featuredಅಂಕಣ

ಋತುಗಳೆಲ್ಲಿ ಕಳೆದುಹೋದವು?

ಸಿಟಿಗಳಲ್ಲಿ ಸೀಜನ್ನುಗಳೇ (Season) ಇಲ್ಲಎಂಬ ವಿಚಾರವನ್ನು ಪದೇ ಪದೇ ಎತ್ತಿ ಚರ್ಚಿಸಿ ನಮಗೆಲ್ಲ ಬೇಸರ ತರಿಸುತ್ತಿದ್ದ ಸಹೋದ್ಯೋಗಿಯೊಬ್ಬನಿದ್ದ. ಉಪಮನ್ಯು ಎಂದು ಹೆಸರು. `ಅಸ್ತವ್ಯಸ್ತವಾಗಿ ಹರಡಿಕೊಂಡ ಕಸದ ರಾಶಿಗಳು ಮತ್ತು ರಾಡಿಯಾದ ನೆಲವನ್ನು ನೋಡಿ ಮಳೆಗಾಲವೆಂದು ಭಾವಿಸಬೇಕು; ಧೂಳು ಗಾಳಿಯನ್ನು ನೋಡಿ ಚಳಿಗಾಲವನ್ನು ಕಲ್ಪಿಸಿಕೊಳ್ಳಬೇಕು; ಟಾರು ರಸ್ತೆಯ ಉಗಿಯಿಂದಲೋ ಅಥವಾ ಅಸಹ್ಯವಾದ ಮೈಬೆವರ ವಾಸನೆಯಿಂದಲೋ ಬೇಸಿಗೆಯನ್ನು ಗುರುತಿಸಬೇಕುಎಂಬ ಅವನ ವಾದದಲ್ಲಿ ಉತ್ಪ್ರೇಕ್ಷೆಯೇನೂ ಇರಲಿಲ್ಲ. “ಪಾರ್ಕುಗಳಲ್ಲಿನ ಮರಗಳೆಲ್ಲ ಹೂವುಗಳಿಂದ ಕಂಗೊಳಿಸುತ್ತಿವೆಎಂಬ ಪಾರ್ಕುಗಳನ್ನೇ ನಗರಗಳೆಂಬಂತೆ ಬಿಂಬಿಸುವ ಸುದ್ದಿಗಳನ್ನು ಟಿವಿಯಲ್ಲಿ ಅಥವಾ ಪೇಪರಿನಲ್ಲಿ ನೋಡಿಬಿಟ್ಟರಂತೂ ಅವನ ಸಿಟ್ಟು ನೆತ್ತಿಗೇರುತ್ತಿತ್ತು. `ಋತುಮಾನವೆನ್ನುವುದು ಬದಲಾವಣೆಯ ಆಸ್ವಾದನೆಯನ್ನೂ ಮೀರಿಸುವಂತದ್ದು. ಬದಲಾಗುತ್ತಲೇ ಇರುವ ಪ್ರಕೃತಿಯಲ್ಲಿ ೩೬೫ ಋತುಗಳು ಕಾಣಿಸುತ್ತವೆಎಂದು ತತ್ವಶಾಸ್ತ್ರಜ್ಞನಂತೆ ಮಾತನಾಡಿ ಹುಚ್ಚನೆಂಬ ಬಿರುದನ್ನು ಕೂಡ ಪಡೆದುಕೊಂಡಿದ್ದ.

ಹಳ್ಳಿಯಲ್ಲಿ ಹುಟ್ಟಿ ಬೆಳೆದು, ಪಟ್ಟಣದಲ್ಲಿ ಕಾಲೇಜು ಓದಿ, ಮಹಾನಗರದ ಕಂಪನಿಯೊಂದರಲ್ಲಿ ಸುಲಭವಾಗಿ ಕೆಲಸ ಗಿಟ್ಟಿಸಿಕೊಂಡಿದ್ದ ಜಾಣನಿಗೆ ನಗರದಲ್ಲಿ ನೆಲೆಯೂರಲು ಯಾವ ಬಗೆಯ ಭೌದ್ದಿಕ ಕೊರತೆಗಳೂ ಇರಲಿಲ್ಲ. ಆದರೆ ನಗರಕ್ಕೆ ಬಂದ ವರ್ಷದಲ್ಲಿಯೇ ಇಲ್ಲಿನ ಗಾಳಿಯನ್ನು ಉಸಿರಾಡಲೂ ಅಸಹ್ಯ ಪಡುತ್ತಿರುವಂತೆ ಕಾಣುತ್ತಿದ್ದ. ಇಲ್ಲಿನ ನೀರೇ ಕಲುಶಿತವಾಗಿರುವಾಗ ಸ್ನಾನ ಮಾಡಿ ಶುದ್ಧಗೊಳ್ಳುವುದು ಹೇಗೆ ಎಂಬ ಪ್ರಶ್ನೆಯನ್ನು ಮುಂದಿಟ್ಟು ನಮ್ಮನ್ನೆಲ್ಲ ಕಂಗಾಲಿಗೀಡುಮಾಡುತ್ತಿದ್ದ. ಅನಿವಾರ್ಯಕ್ಕೋ, ಐಷಾರಾಮಿಗೋ ಅಥವಾ ಇನ್ನೇನನ್ನೋ ಅಪೇಕ್ಷಿಸಿ ನಗರಕ್ಕೆ ಬಂದ ನಮಗೂ ಕೂಡ ನಗರವೆನ್ನುವುದು ಬೇಸರದ ಗೂಡಾದರೂ, ನಗರವನ್ನು ದ್ವೇಷಿಸುವುದಕ್ಕಿಂತ ಪ್ರೀತಿಸುವ ಕಾರಣಗಳೇ ಹೆಚ್ಚಿದ್ದವು. ನಾವೆಲ್ಲ ಅವನ ದೂರುಗಳಿಂದ ರೋಸಿಹೋಗಿನೀನು ನಿನ್ನ ಹಳ್ಳಿಗೇ ಹೋಗಿ ಜೀವನಮಾಡು. ಊಟಹಾಕುತ್ತಿರುವ ಊರನ್ನ್ಯಾಕೆ ಹಾಗೆ ಹಳಿಯುವುದು?” ಎಂದು ಕೇಳಬೇಕೆಂದು ನಿರ್ಧರಿಸುವಷ್ಟರಲ್ಲಿ ಕಾಲ ಮೀರಿಹೋಗಿ, ನಾವು ಹೆಣೆದ ಪ್ರಶ್ನೆಗಳಿಗೆ ಅರ್ಥವೇ ಇಲ್ಲದಂತಾಗಿತ್ತು. ಸಲ ಹಬ್ಬಕ್ಕೆಂದು ಊರಿಗೆ ಹೋದವನು ತಿರುಗಿ ನಗರಕ್ಕೆ ಬರಲೇ ಇಲ್ಲ.

ಇದ್ದ ಅರ್ಧ ಎಕರೆ ತೋಟದಿಂದ ಬರುವ ಉತ್ಪನ್ನದಲ್ಲಿ ಅವರು ಮೂರು ಜನರ ಜೀವನ ಸಾಗುವುದು ಕಷ್ಟವೇ ಆಗಿತ್ತು. ಸಂಬಂಧಿಕರ ಅರ್ಥಿಕ ನೆರವಿನಿಂದಾಗಿ ಅವನ ಓದಿಗೇನೂ ತೊಂದರೆ ಆಗಿರಲಿಲ್ಲ. ತನ್ನ ಮಗ ಕೈತುಂಬ ಸಂಬಳ ತರುತ್ತಾನೆ, ನಗರದಲ್ಲಿ ಮನೆ ಕಟ್ಟಿಸುತ್ತಾನೆ, ವಿದೇಶ ಸುತ್ತುತ್ತಾನೆ ಎಂದೆಲ್ಲ ಎಲ್ಲಾ ತಂದೆತಾಯಿಗಳಂತೆ ಕನಸು ಕಟ್ಟಿದ್ದ ಅವನ ತಂದೆತಾಯಿಗಳಿಗೆ ಒಂದಿಷ್ಟು ನಿರಾಸೆಯಾಗಿತ್ತು. ಜೀವನ ನಿರ್ವಹಣೆಯ ಕಷ್ಟ ಅವರನ್ನು ಇನ್ನಷ್ಟು ಗಾಬರಿಗೊಳಿಸಿತ್ತು. ಆದರೆ ಉಪಮನ್ಯುವಿನ ಜೀವನ ರೂಪಿಸಿಕೊಳ್ಳುವ  ವಿಚಾರವನ್ನು ಅವನ ಆಸಕ್ತಿಗೇ ಬಿಟ್ಟರು.

ಗೆಳೆಯರ ನೆರವಿನಿಂದ ಹತ್ತಿರದ ರಾಜ್ಯ ಹೆದ್ದಾರಿಯ ಪಕ್ಕದಲ್ಲೊಂದು ಗೂಡಂಗಡಿಯನ್ನು ಸ್ಥಾಪಿಸಿಕೊಂಡ. ಗುಟಕಾ ಮತ್ತು ಬಿಸ್ಕತ್ತುಗಳನ್ನು ಬಿಟ್ಟು ಮತ್ಯಾವುದನ್ನೂ ಪ್ಲಾಸ್ಟಿಕ್ ಪ್ಯಾಕೆಟ್ಟುಗಳಲ್ಲಿ ಮಾರುತ್ತಿರಲಿಲ್ಲ.  ‘ಕಸವನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಆ ಪ್ಲಾಸ್ಟಿಕ್ ಅಂತೂ ಕಸಗಳ ರಾಜ- ಸಾವೇ ಇಲ್ಲದ್ದು’ ಎನ್ನುತ್ತ ಎಲ್ಲವನ್ನೂ ಕಾಗದದ ಪೊಟ್ಟಣದಲ್ಲೇ ಕಟ್ಟಿಕೊಡುತ್ತಿದ್ದ.

ಹೆದ್ದಾರಿಯೆಂದರೆ ಕೇಳಬೇಕೆ? ಮನುಷ್ಯನಿಗೆ ಬೇಕಾದ್ದು ಬೇಡದ್ದು ಎಲ್ಲವೂ ಸರಬರಾಜಾಗುವ ದಾರಿ. ಘಟ್ಟ ಇಳಿಯುವ ಕಾಡಿನ ಅವಶೇಷಗಳು, ಘಟ್ಟ ಹತ್ತುವ ಮಾದಕ ವಸ್ತುಗಳು, ಭಯಾನಕವಾಗಿರುವುದು, ಸುಂದರವಾಗಿರುವುದು ಎಲ್ಲದರ ಪರಿಚಯವೂ ಆಗತೊಡಗಿತು ಉಪಮನ್ಯುವಿಗೆ. ಮಾತುಗಾರನಿಗೆ ಅಂಗಡಿ ನಡೆಸುವುದೇನು ಕಷ್ಟವಾಗಿರಲಿಲ್ಲ. ಜೀವನ ಸುಖದಲ್ಲಿ ಸಾಗುತ್ತಿತ್ತು. ಆದರೆ, ಯಾವ್ಯಾವುದೋ ಪ್ರದೇಶಗಳ ಕಾಡು ಮತ್ತು ಮಣ್ಣು ಲಾರಿಯನ್ನು ಹತ್ತಿಕೊಂಡು ಹೋಗುವುದುಮಾನವನು ಐಷಾರಾಮಿ ಜೀವನದ ಹಟಕ್ಕೆ ಬಿದ್ದಂತೆ ಭಾಸವಾಗುತ್ತದೆ ಎಂಬ ಬೇಸರವನ್ನು ಸಿಕ್ಕಾಗಲೆಲ್ಲ ತೋಡಿಕೊಳ್ಳುತ್ತಿದ್ದ.

ಒಂದು ಹೆದ್ದಾರಿಗೆ ಇನ್ನೊಂದು ಹೆದ್ದಾರಿಯನ್ನು ಸೇರಿಸುವ ಕಚ್ಚಾರಸ್ತೆ/ಮಣ್ಣುರಸ್ತೆಗಳು ಎಲ್ಲಾ ಕಡೆಗೂ ಸಾಮಾನ್ಯವೇ. ಚೆಕ್ ಪೋಸ್ಟ್ ಗಳನ್ನು ತಪ್ಪಿಸಲೆಂದೇ ಇರುವಂತಹ ಇಂತಹ ಒಳದಾರಿಯೊಂದು ಅವನ ಅಂಗಡಿಯ ಎದುರೂ ಇತ್ತು. ಅಂತಹ ಹಾದಿಗಳು ಹಳ್ಳಿಗಳ ಆಸುಪಾಸಿನಲ್ಲೇ ಇರುವಂತವು. ಅಂತಹ ಪ್ರದೇಶಗಳನ್ನೆಲ್ಲ ಕಾಯಲು ಮಾಸ್ತಿ, ಚೌಡಿ, ಜಟಕ,ಬೀರ್ಲು ಮುಂತಾದ ದೇವರುಗಳು ಇದ್ದರೂ ಕಳ್ಳಸಾಗಣೆಯನ್ನು ತಪ್ಪಿಸುವ ಶಕ್ತಿ ಮಾತ್ರ ಇಲ್ಲದೇ ಹೋಯಿತಲ್ಲ ಎಂದು ದೇವರ ಶಕ್ತಿಯ ಮೇಲೇ ಸಂದೇಹ ಪಡುತ್ತಿದ್ದ.

ಇದೆಲ್ಲದರ ನಡುವೆ ಮನೆಯಲ್ಲಿ ಅವನಿಗೆ ಹೆಣ್ಣು ಹುಡುಕಲು ಪ್ರಾರಂಭಿಸಿದರು. ಹಳ್ಳಿಯಲ್ಲಿರುವ ಆಸ್ತಿವಂತ ಬ್ರಾಹ್ಮಣ ಗಂಡುಗಳಿಗೇ ಹೆಣ್ಣು ಕೊಡುವವರಿಲ್ಲದ ಕಾಲದಲ್ಲಿ ಅಂಗಡಿ ಹಾಕಿಕೊಂಡ ಉಪಮನ್ಯುವಿನ ಮದುವೆ ಆಗದೇ ಹೋಯಿತು. ಮೂರ್ನ್ಲಾಕು ವರ್ಷ ಪ್ರಯತ್ನಿಸಿ ಕೈಚೆಲ್ಲಿದರು. ಆದರೆ, ಸ್ವಲ್ಪ ಸಮಯದಲ್ಲಿಯೇ  ಅವನು ಯಾರೋ ಪರಿಚಯದ ಲಾರಿ ಚಾಲಕನ ಮಗಳೊಡನೆ ಗುಟ್ಟಾಗಿ ಮದುವೆಯಾದ. ಗುಟ್ಟಾಗಿ ಸಂಸಾರ ಮಾಡುವುದು ಕಷ್ಟವೆಂದು ಮನೆಗೆ ಕರೆತಂದ. ವಯಸ್ಸಾಗುತ್ತಿದ್ದ ತಂದೆತಾಯಿಗಳಿಗೆ ಸೊಸೆಯನ್ನು ಸ್ವೀಕರಿಸುವುದು ಅನಿವಾರ್ಯವಾಯಿತು. ಸಂಬಂಧಿಕರಲ್ಲಿ ಅವಳನ್ನು ಕೇರಳದ ಕಡೆಯ ಬ್ರಾಹ್ಮಣ ಹುಡುಗಿ ಎಂಬಂತೆ ಬಿಂಬಿಸಲಾಯಿತು.

ಮದುವೆಯಾದಮೇಲೆ ರಾತ್ರಿಪಾಳಿಯಲ್ಲಿ ಅಂಗಡಿಯಲ್ಲಿ ಕೂರಲು ಒಬ್ಬ ಪರಿಚಯಸ್ತನನ್ನು ಗೊತ್ತುಮಾಡಿದ. ವಾರಕ್ಕೊಮ್ಮೆ ಅವನೂ ಹೋಗುತ್ತಿದ್ದುದುಂಟು.  ಹೀಗೇ ಐದಾರು ತಿಂಗಳುಗಳು ಕಳೆದಿರಬಹುದು. ಒಂದು ದಿನ ಬೆಳಗಿನಿಂದ ಮಧ್ಯಾಹ್ನದವರೆಗೆ ಒಬ್ಬ ನರಪಿಳ್ಳೆಯೂ ಅವನ ಅಂಗಡಿಗೆ ಬರಲಿಲ್ಲ. ಸುಮ್ಮನೆ ಕೂರಲು ಬೇಜಾರಾಗಿ, ತಿರುಗಾಡಲು ಹೊರಟ. ಪ್ರದೇಶ ದಟ್ಟ ಕಾಡು ಅಲ್ಲದಿದ್ದರೂ ಅಲ್ಲಲ್ಲಿ ಕಾಣಸಿಗುತ್ತಿದ್ದ ಮರಗಳು ಕಾಣೆಯಾಗಿದ್ದವು. ರಸ್ತೆಯಲ್ಲಿ ನಿಂತು ನೋಡಿದರೆ ಕಾಡಿನಂತೆ ಕಾಣಿಸುತ್ತಿದ್ದ ಪ್ರದೇಶದ ಒಳಭಾಗ ಬಹುತೇಕ ಬಯಲಾಗಿತ್ತು. ನಂತರದ ದಿನಗಳಲ್ಲಿ ಸುತ್ತಲ ಪ್ರದೇಶಗಳಲ್ಲಿ ಪ್ಲಾಂಟೇಶನ್ ಸಸ್ಯಗಳು ತಲೆಯೆತ್ತತೊಡಗಿದವು; ಇನ್ನೊಂದಿಷ್ಟು ಪ್ರದೇಶಗಳು ವಾಣಿಜ್ಯ ಬೆಳೆಗಳ ತೋಟಗಳಾಗಿ ಬದಲಾದವು.

ಅವನ ಹೆಂಡತಿ ಯಾಕೋ ಬಹಳ ದಿನ ಅವನೊಡನೆ ನಿಲ್ಲಲಿಲ್ಲ. ತಂದೆತಾಯಿಗಳೂ ಬಹಳ ಕಾಲ ಉಳಿಯಲಿಲ್ಲ. ಅವನು ಜೀವನದ ಬೇರೆ ಬೇರೆ ಹಂತಗಳನ್ನು ದಾಟಿ ಆಗಿತ್ತು. ಪ್ರೇಮ, ಕಾಮ,  ವ್ಯಾಮೋಹ, ಹಣದ ಮೋಹ,  ಸುಖ, ದುಃಖ ಎಲ್ಲ ಹಂತಗಳನ್ನೂ ತುಸು ವೇಗವಾಗಿಯೇ ದಾಟಿ ಆಗಿತ್ತು. ಆದರೆ ಅವನ ಪರಿಸರದ ಬಗೆಗಿನ ಪ್ರೀತಿ ಮಾತ್ರ ಬದಲಾಗಿರಲಿಲ್ಲ. ಈಗೊಂದು ವರ್ಷದ ಹಿಂದೆ ಪ್ಲಾಸ್ಟಿಕ್ ಪ್ಯಾಕೆಟ್ ಗಳಲ್ಲಿ ಗುಟುಕಾ ಮಾರಟವನ್ನು ನಿಲ್ಲಿಸಿ, ತಂಬಾಕಿನ ಎಸಳುಗಳನ್ನು ಮಾರುತ್ತಿದ್ದ; ಪ್ಯಾಕೆಟ್ ಬಿಸ್ಕತ್ತುಗಳ ಬದಲು ಬಿಡಿಯಾದ ಬಿಸ್ಕತ್ತುಗಳು ಗಾಜಿನ ಡಬ್ಬಿಯಲ್ಲಿ ತುಂಬಲ್ಪಟ್ಟಿದ್ದವು.

ಈಗೊಂದು ತಿಂಗಳ ಹಿಂದೆ ಅಂಗಡಿಯ ಬಾಗಿಲನ್ನು ತೆರೆದಿಟ್ಟು ಎತ್ತಲೋ ಹೋಗಿಬಿಟ್ಟ. ಅವನು ಹೋದ ಮಾರನೆಯ ದಿನ ಅವನ ಗೆಳೆಯನಿಗೊಂದು ಪತ್ರ ಬಂತು. ‘ನಾನು ಎಲ್ಲಿಗೆ ಹೊರಟಿದ್ದೇನೆ ಎನ್ನುವುದು ನನಗೂ ಗೊತ್ತಿಲ್ಲ. ನನ್ನ ತೆರೆದ ಅಂಗಡಿಯಿಂದ ಯಾರಾದರೂ ಏನನ್ನಾದರೂ ತೆಗೆದುಕೊಳ್ಳಲಿ. ಅದನ್ನು ತಡೆಯುವ ಪ್ರಯತ್ನ ಬೇಡ. ಆದರೆ ನನ್ನ ಮನೆಯ ಕಡೆಗೆ ಜೋಪಾನಇವಿಷ್ಟೇ ಅವನು ಪತ್ರದಲ್ಲಿ ಹೇಳಿದ್ದು. ವಿಚಿತ್ರವೆನ್ನಿಸಿ, ಊರಿನವರೊಡಗೂಡಿ ಅವನ ಮನೆಯನ್ನು ಹೊಕ್ಕು ನೋಡಿದರು. ಒಂದು ಕೋಣೆಯ ತುಂಬಾ ಪ್ಲಾಸ್ಟಿಕ್ಕಿನ ಖಾಲಿ ಪ್ಯಾಕೆಟ್ಟುಗಳುನಿತ್ಯಬಳಕೆಯ ವಸ್ತುಗಳನ್ನು ಪ್ಯಾಕ್ ಮಾಡಲು ಬಳಸಿರಬಹುದಾದ ಪ್ಲಾಸ್ಟಿಕ್ ಅದು. ಅದೆಷ್ಟು ದಿನಗಳಿಂದ ಹಾಗೆ ಕೂಡಿಡುತ್ತಿದ್ದನೋ ಎಲ್ಲಿ ಎಸೆಯುವುದೆಂದು ತಿಳಿಯದೇ? ಎಲ್ಲರೂ ಅವನಿಗೆ ಮತಿಭ್ರಮಣೆಯಾಗಿತ್ತು ಎಂದು ಭಾವಿಸಿ, ಪೋಲೀಸರಿಗೊಂದು ಮಾಹಿತಿ ನೀಡಿ ಸುಮ್ಮನಾದರು.

ಈಗೊಂದೆರಡು ತಿಂಗಳ ಹಿಂದೆ ಸಿಕ್ಕಾಗ ಸಹಜ ವ್ಯಕ್ತಿಯಂತೆ ಮಾತನಾಡಿದ್ದವನು ಅವನೇ ಹೌದೇ ಎನ್ನುವುದು ತಿಳಿಯದಾಗಿದೆ. ಹತ್ತು ಕಿಲೋ ಕಿರಾಣಿ ಸಾಮಾನನ್ನು ಕೊಂಡರೆ ಒಂದು ಕಿಲೋ ಪ್ಲಾಸ್ಟಿಕ್ ಉಚಿತವಾಗಿ ಮನೆಗ ಬರುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದವನ ಮನೆಯ ಕೊಣೆಯೊಂದರ ತುಂಬಾ ಪ್ಲಾಸ್ಟಿಕ್ ಪ್ಯಾಕೆಟ್ಟುಗಳು ಇದ್ದವೆನ್ನುವುದು ನನಗಂತೂ ಅತಿಶಯವಾಗಿ ಕಾಣಿಸುತ್ತಿಲ್ಲ. ಒಂದು ಪುಟ್ಟ ಸೂಜಿ ಸಹ  ಪ್ಲಾಸ್ಟಿಕ್ ಪ್ಯಾಕಿನಲ್ಲಿ ಮಾರಾಟವಾಗುವುದು ರೇಜಿಗೆ ಹುಟ್ಟಿಸುತ್ತದೆ.

ಕಾಡು ಕಡಿಮೆಯಾಗಿ, ಪ್ಲಾಂಟೇಶನ್ ಗಳು, ವಾಣಿಜ್ಯ ಬೆಳೆಯ ತೋಟಗಳು ತಲೆಯೆತ್ತಿ ಹಳ್ಳಿಗಳಲ್ಲೂ ಋತುಗಳು ಕಾಣೆಯಾಗುತ್ತಿವೆ ಎಂದು ಕೂಡ ಅವನು ಮಾತನಾಡುತ್ತಿದ್ದ. ನಿಸರ್ಗ ದತ್ತ ಸಸ್ಯಗಳೇ ಇಲ್ಲದಿರುವಲ್ಲಿ ಋತುಮಾನವನ್ನು ಕಾಣುವುದಾದರೂ ಹೇಗೆ? ಋತುಗಳ ಚಂದವನ್ನು ನೋಡುತ್ತ ಜೀವನ ಸಾಗಿಸಬೇಕೆಂದಿದ್ದ ಉಪಮನ್ಯು ಎಲ್ಲಿಗೆ ಹೋಗಿರಬಹುದು?!

Facebook ಕಾಮೆಂಟ್ಸ್

ಶ್ರೀಕಲಾ ಹೆಗಡೆ ಕಂಬ್ಳಿಸರ: ಹುಟ್ಟಿದ್ದು, ಬೆಳೆದದ್ದು ಸಿರಸಿಯ ಪುಟ್ಟ ಹಳ್ಳಿಯೊಂದರಲ್ಲಿ. ಓದಿದ್ದು ವಾಣಿಜ್ಯಶಾಸ್ತ್ರ. ಐದು ವರ್ಷಗಳು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿದ ಅನುಭವ. ಈಗ ಗೃಹಿಣಿಯಾಗಿದ್ದು, ಬರವಣಿಗೆ ಹವ್ಯಾಸ.
Related Post