‘ಬಿ ಕ್ಯಾಪಿಟಲ್’ (ಮಹಾನಗರದ ಕಥನಗಳು)

‘ಬಿ ಕ್ಯಾಪಿಟಲ್’ (ಮಹಾನಗರದ ಕಥನಗಳು)

ಲೇಖಕರು: ಜೋಗಿ, (ಗಿರೀಶ್ ರಾವ್ ಹತ್ವಾರ್)

ಪ್ರಥಮಮುದ್ರಣ: ೨೦೧೭, ಪುಟಗಳು: ೧೫೨, ಬೆಲೆ: ರೂ.೧೩೦-೦೦

ಪ್ರಕಾಶಕರು: ಅಂಕಿತ ಪುಸ್ತಕ, ೫೩, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್,

ಬಸವನಗುಡಿ, ಬೆಂಗಳೂರು-೦೦೪

‘ಬಿ ಕ್ಯಾಪಿಟಲ್’, ಜೋಗಿಯವರ ಬೆಂಗಳೂರು ಮಾಲಿಕೆಯ ಎರಡನೆಯ ಕುಸುಮ. ಇಪ್ಪತ್ನಾಲ್ಕು ಕಥನಗಳಿರುವ ಈ ಸಂಕಲನದ ಆರಂಭದಲ್ಲಿಯೇ ಜೋಗಿ ತಮ್ಮ ಗುರುಗಳು(ವೈಎನ್ಕೆ?)ಹೇಳಿದ್ದ ಮಾತುಗಳನ್ನು ನೆನೆಯುತ್ತಾರೆ: “ಬೆಂಗಳೂರು ಇಂದ್ರಪ್ರಸ್ಥದಲ್ಲಿ ಮಯನಿರ್ಮಿಸಿದ ಪಾಂಡವರ ಅರಮನೆಯ ಹಾಗಿದೆ. ನೀರು ಅಂತ ಬಟ್ಟೆ ಎತ್ತಿಕೊಂಡು ಕಾಲಿಟ್ಟರೆ, ಅಲ್ಲಿ ನೀರಿರುವುದಿಲ್ಲ. ನೀರಿಲ್ಲ ಅಂತ ಮುಂದೆ ಸಾಗಿದರೆ ಕೊಳದೊಳಗೆ ಬಿದ್ದಿರುತ್ತೇವೆ. ಬಾಗಿಲು ಎಂದು ನುಗ್ಗಿದರೆ ಗೋಡೆಗೆ ತಲೆ ಚಚ್ಚಿಕೊಳ್ಳುತ್ತೇವೆ. ಬಾಗಿಲಿಲ್ಲ ಅಂತ ಅಂದುಕೊಂಡ ಕಡೆ ಬಾಗಿಲಿರುತ್ತದೆ. ನಾವು ದುರ‍್ಯೋಧನನಂತೆ ಎಡವುತ್ತಾ ಬೀಳುತ್ತಾ ಹೋಗುವುದು ಮೇಲೆ ನಿಂತು ನೋಡುವವರಿಗೆ ತಮಾಶೆಯಾಗಿ ಕಾಣುತ್ತದೆ. ದ್ರೌಪದಿ ನಗುತ್ತಲೇ ಇರುತ್ತಾಳೆ. ನಾವು ಕನಲುತ್ತಿರುತ್ತೇವೆ.” ಇದು ಬೆಂಗಳೂರು ಮಹಾನಗರದ ಬಹಳ ಮನೋಜ್ಞವಾದ ಒಂದು ಚಿತ್ರಣ. ಇಂಗ್ಲೆಂಡಿನಲ್ಲಿ ಯಂತ್ರಗಳ ಯುಗ ಕಾಲಿಟ್ಟಾಗ ಉದ್ಯೋಗದ ನಿಮಿತ್ತ ಇಂಗ್ಲೆಂಡಿನ ಹಳ್ಳಿಗಳಿಂದ ಲಂಡನ್ ಮಹಾನಗರಕ್ಕೆ ನುಗ್ಗಿ ಬರುತ್ತಿದ್ದ ಜನರ ಅನುಭವವೂ ಬಹುಶಃ ಇದೇ ಆಗಿತ್ತು.  ಅದು ಎಲ್ಲ ಮಹಾನಗರಗಳಲ್ಲಿ ಪುನರಪಿ ಸಂಭವಿಸುವ ಚರಿತ್ರೆ.

‘ಬೆಂಗಳೂರು’ ಕಾದಂಬರಿಯಲ್ಲಿ ನರಸಿಂಹ ಭಿಡೆ ಬೆಂಗಳೂರನ್ನು ಪ್ರತಿನಿಧಿಸುತ್ತಾನೆಯಾದರೆ, ಇಲ್ಲಿ ಸ್ವತಃ ಲೇಖಕರೇ ತಮ್ಮ ಅನುಭವಗಳನ್ನು ನಿರೂಪಿಸುತ್ತಾರೆ. ಆದರೆ ಇವು ವಿಭಿನ್ನವಾದ ಅನುಭವಗಳ ಕಥನ. ಬೆಂಗಳೂರಿನಲ್ಲಿ ಬದುಕುವ ಆಶೆಯಿಂದ ದೂರದ ಊರುಗಳಿಂದ ಬಂದವರು ಈ ಅನುಭವಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆನ್ನುವ ಒತ್ತಾಯ ಇಲ್ಲಿಲ್ಲ. ಬೆಂಗಳೂರು ನಮ್ಮ ಕೆಲವಾದರೂ ಕನಸುಗಳನ್ನು ಈಡೇರಿಸುವುದು ನಿಜ. ಆದರೆ ಬೆಂಗಳೂರಿನಲ್ಲಿ ಹಗಲೆಲ್ಲ ದುಡಿದು ರಾತ್ರೆ ನಿದ್ದೆಗೆಂದು ದಿಂಬಿಗೆ ತಲೆಯಿಟ್ಟು ಮಲಗಿದಾಗ ನಮ್ಮ ಕನಸುಗಳಲ್ಲಿ ಕಾಣುವುದು ಮಾತ್ರ ನಮ್ಮ ಊರೇ. ಜೋಗಿ ಈ ಅನುಭವವನ್ನು ಆಫ್ರಿಕಾದಿಂದ ಇಂಗ್ಲೆಂಡಿಗೆ ವಲಸೆ ಬಂದ ಆಲ್ಬರ್ಟ್ ವಾಜ್ದಾನ ಉಲ್ಲೇಖ ಮಾಡುತ್ತ ದೃಢೀಕರಿಸುತ್ತಾರೆ. ಈ ಕಥನಗಳು ಬೆಂಗಳೂರಿನ ಹಲವು ಸೀಳು ಮುಖಗಳನ್ನು ಪರಿಚಯಿಸುತ್ತವೆ. ಅವುಗಳ ದೃಷ್ಟಾರ ಸ್ವತಃ ಲೇಖಕರು. ಇಡೀ ಸಂಕಲನವನ್ನು ಓದಿ ಇಡುವಾಗ ಬೆಂಗಳೂರಿನ ಶ್ರೀಮುಖದ ದರ್ಶನವಾಗದಿರುವ ವಿಷಾದವೂ ನಮ್ಮನ್ನು ಕಾಡುತ್ತದೆ.

ಕಥನದ ಉದ್ದಕ್ಕೂ ಹತ್ತಾರು ಜನರನ್ನು ಜೋಗಿ ಪರಿಚಯಿಸುತ್ತಾರೆ. ಅವರಲ್ಲಿ ಕೆಲವರು ಫಿಕ್ಟಿಶಸ್ ಅಂದರೆ ಕಲ್ಪಿತ ವ್ಯಕ್ತಿಗಳೂ ಆಗಿರಬಹುದು. ಅದರೆ ನಮ್ಮೆಲ್ಲರಿಗೂ ಗೊತ್ತಿರುವ ವೈಎನ್‌ಕೆ, ರವಿ ಬೆಳಗೆರೆ, ವಿದ್ಯಾಭೂಷಣರು, ಬಿ.ಸಿ.ಪಾಟೀಲ್, ಉದಯ ಮರಕಿಣಿ ಇಂಥ ವ್ಯಕ್ತಿಗಳ ಜೊತೆಗೆ ಫಿಕ್ಟಿಶಸ್ ಪಾತ್ರಗಳು ಕೂಡ ನಿಜವಾಗಿಬಿಡುತ್ತಾರೆ. ಅಂಬರೀಶ ವರ್ಮ, ಕೃಷ್ಣಪ್ಪ, ಮುನಿಸ್ವಾಮಿಯಂಥವರು ಕೂಡ ನಿಜವಾಗಿಬಿಡುವುದು ಇಂಥ ಕಥನಗಳಲ್ಲಿ ಅಸಹಜವೆನಿಸುವುದಿಲ್ಲ. ಹಳೆಯ ಚಪ್ಪಲಿಯಿಂದಾದ ಹೊಸ ಗೆಳೆತನ, ಅವೆನ್ಯೂ ರಸ್ತೆಯಲ್ಲಿ ನಡೆಯುತ್ತಿದ್ದ ಹವಾಲಾ ಧಂಧೆ, ಪರರ ಮನೆಯ ಪರಸಂಗ, ರಾತ್ರಿ ಆಟೊ ಓಡಿಸುತ್ತಿದ್ದ ಆ ದಿನಗಳು, ಉದ್ಯೋಗಪರ್ವದಲ್ಲಿ ಸಿಕ್ಕ ಜೋರಾಪುರ ಎನ್ನುವ ಸಜ್ಜನ ಹಿರಿಯರು, ಅದ್ಭುತವಾಗಿ ಇಂಗ್ಲಿಷ್ ಮಾತಾಡುತ್ತಿದ್ದ ಹಾಲಿವುಡ್ ನಟನಂತಿದ್ದ ರಾಜಠೀವಿಯ ಭಾಸ್ಕರ್, ಬೆಂಗಳೂರನ್ನು ಬೈಸಿಕಲ್‌ನಲ್ಲಿ ಸುತ್ತುತ್ತಿದ್ದು, ಆಡ್ ಮ್ಯಾನ್ ಔಟ್ ಆಗಿ ಬೆಂಗಳೂರಿಗೆ ಅಂಟಿಕೊಂಡಿದ್ದ ದಕ್ಷಿಣ ಕನ್ನಡದ ಜೆಫ್ರಿ, ಲಂಚ ಕೊಡುವ ಸಜ್ಜನರು, ಚಂದಾಪುರದಲ್ಲಿ ಕಟ್ಟಿಕೊಂಡ ಕಾರ್ ತೊಳೆಯುವ ಉದ್ಯೋಗ, ಮಸಾಲೆ ದೋಸೆ, ಮಲ್ಲಿಗೆ ಹೂವು, ಕಥೆಯಾದವಳು, ನಾಯಿ ಮತ್ತು ಪಾಪಪ್ರಜ್ಞೆ, ಬಾರುಗಳ ಬೆಂಗಳೂರು, ಅಡ್ಡಾಡಿದ ಹಳೆಯ ಅಡ್ಡಗಳು, ಇಂತಹ ಹತ್ತಾರು ಅನುಭವ ಕಥನಗಳು ಇಲ್ಲಿದ್ದು ಇವುಗಳ ಮೂಲಕ ನಾವು ಬೆಂಗಳೂರನ್ನು ನೆರಳು ಬೆಳಕಿನ ವಿನ್ಯಾಸದಲ್ಲಿ ಕಾಣುತ್ತೇವೆ. ಇದು ಅಲ್ಲಿಗೆ ಉದ್ಯೋಗವರಸಿ ಹೋದ ಬಹಳಷ್ಟು ಜನರ ಅನುಭವಗಳ ಮೆಲುಕು. ಇಷ್ಟಾಗಿಯೂ ಬೆಂಗಳೂರು ಅದ್ಭುತವಾದ ನಗರ. “ಸುದ್ದಿ ಕೊಡದೆ ಇಲ್ಲಿ ಮಳೆ ಬರುತ್ತದೆ. ಮಾರನೆಯ ಬೆಳಗ್ಗೆ ನಿಮ್ಮ ಮನೆ ಮುಂದೆ ಮೇ ಫ್ಲವರ್ ಹೂ ಬಿಟ್ಟಿರುತ್ತದೆ. ಪಕ್ಕದ ಮನೆಗೆ ಸುಂದರಿಯೊಬ್ಬಳು ಬಂದಿರುತ್ತಾಳೆ. ಎದುರು ಮನೆ ಹುಡುಗಿ ವಿಂಬಲ್ಡನ್ ಗೆಲ್ಲುತ್ತಾಳೆ.  ಹಿಂದಿನ ಬೀದಿಯಲ್ಲಿ ನಿಶ್ಶಬ್ದವಾಗಿ ಕೊಲೆಯೊಂದು ನಡೆದುಹೋಗುತ್ತದೆ”( ಪುಟ-೧೫೧).

ನಾನು ಮೆಚ್ಚುವ ಕನ್ನಡದ ಕೆಲವೇ ಕೆಲವು ಬರಹಗಾರರಲ್ಲಿ ಜೋಗಿ ಒಬ್ಬರು. ಇವರ ಕಥನಕೌಶಲ್ಯ, ಜೀವನೋತ್ಸಾಹ, ಹಳ್ಳಿ ಮತ್ತು ನಗರಗಳಲ್ಲಿಯ ಬದುಕನ್ನು ತಾಳೆ ನೋಡುತ್ತ ಬರೆಯುವ ಒಳನೋಟ ಇಷ್ಟವಾಗುತ್ತದೆ. ಈ ಸಂಕಲನದ ಇಪ್ಪತ್ಮೂರು ಕಥನಗಳು ಒಂದು ಮಾದರಿಯ ಬರಹಗಳು. ಅಂದರೆ, ಪ್ರಬಂಧದ ಶೈಲಿಯ ಲವಲವಿಕೆಯ ನಿರೂಪಣೆ ಇವುಗಳ ಪ್ರಧಾನ ಚೆಹರೆ. ಒಂದು ಕಥನ ಮಾತ್ರ-‘ಮಗಳಿಗೊಂದು ಗೊಂಬೆ’-ಪ್ರತ್ಯೇಕವಾಗಿ ನಿಲ್ಲಬೇಕಾದದ್ದು. ಇದು ಶೋಭಾಯಮಾನವಾಗಿ ಕಾಣುವುದು ಬರೀ ಕಥನವಾಗಿರದೆ ಕಥೆಯಾಗಿದೆ ಎನ್ನುವ ಕಾರಣಕ್ಕೆ. ಓದುಗನಾಗಿ ನನ್ನ ಮೊದಲನೆಯ ಆಯ್ಕೆ ಕತೆಗಳು. ಕತೆಯ ಭಾವಪ್ರವಾಹಕ್ಕೆ ನಮ್ಮನ್ನು ತೊಳೆದು ದಡ ಸೇರಿಸುವ, ಯೋಚನೆಗೆ ತೊಡಗಿಸಿ ಹೊಸ ಹೆಜ್ಜೆ ಇಡಿಸುವ ಗುಣವಿರುತ್ತದೆ. ಅಂತಹ ಅಪರೂಪದ ಕತೆ ಈ ‘ಮಗಳಿಗೊಂದು ಗೊಂಬೆ’. ಜೋಗಿ ಇದನ್ನು ಕಥೆ ಎಂದು ಬರೆದಿರಲಿಕ್ಕಿಲ್ಲ. ಇದೊಂದು ನೈಜ ಘಟನೆಯ ಹೃದಯಂಗಮವಾದ ನಿರೂಪಣೆಯೇ ಆಗಿರಬಹುದು. ಕಲ್ಪನೆಯೇ ಆದರೂ ಸರಿ, ಆಸ್ವಾದ್ಯವಾದದ್ದು. ಜಾಹೀರಾತು ಏಜೆನ್ಸಿಯೊಂದರಲ್ಲಿ ಉದ್ಯೋಗಿಯಾಗಿದ್ದ ಭಾಸ್ಕರ್ ಎನ್ನುವವವನ ದುರಂತದ ಕಥೆ, ಇದು. ಆತ “ನೋಡುವುದಕ್ಕೆ ಹಾಲಿವುಡ್ ನಟನಂತಿದ್ದ,” “ಅದ್ಭುತವಾಗಿ ಇಂಗ್ಲಿಷ್ ಮಾತಾಡುತ್ತಿದ್ದ”. ಕಚೇರಿಯಲ್ಲಿ ಯಾರನ್ನೂ ಗೋಳು ಹುಯ್ದುಕೊಳ್ಳದ ಭಾಸ್ಕರನ ಕಂಠ ಅದ್ಭುತವಾದ್ದು, ಜಾಹೀರಾತಿಗೆ ಕಂಠದಾನ ಅವನದೇ ಆಗಿರುತ್ತಿತ್ತು. ಕೆಲಸದಲ್ಲಿ ಅಚ್ಚುಕಟ್ಟಾಗಿದ್ದ. ಆತ ಲೇಖಕರಿಗೆ ಹತ್ತಿರವಾದಾಗ ಆತನ ಕುರಿತು ಇನ್ನೂ ಅನೇಕ ಸೋಜಿಗದ ಸಂಗತಿಗಳು ತೆರೆದುಕೊಂಡು ಕಥನದ ಆಯಾಮ ಬದಲಾಗುತ್ತದೆ. ಭಾಸ್ಕರನ ಅದ್ಭುತವಾದ ಕಂಠ ಆತನ ಹೆಂಡತಿಯ ದ್ವೇಷಕ್ಕೆ ಕಾರಣವಾಗಿತ್ತು. ಆತ ಕುಡಿಯುತ್ತಿದ್ದ. ಆದರೆ ಎಂದೂ ತೂಕ ತಪ್ಪಿ ನಡೆದುಕೊಂಡವನಲ್ಲ. ಪುಟ್ಟ ಮಗಳೆಂದರೆ ಅವನಿಗೆ ಬಹಳ ಪ್ರೀತಿ. ಭಾಸ್ಕರನನ್ನು ಹಣಿಯುವುದಕ್ಕಾಗಿ ಆಕೆ ಮಗಳನ್ನು ಎತ್ತಿಕೊಂಡು ತವರಿಗೆ ಹೋಗುತ್ತಾಳೆ. ಭಾಸ್ಕರ ಅಲ್ಲಿಗೆ ಹೋದರೆ ಬಾಗಿಲು ತೆರೆಯುವುದಿಲ್ಲ, ಎಷ್ಟು ಕೇಳಿಕೊಂಡರೂ ಕೂಡ ಮಗಳ ಮುಖವನ್ನೂ ಕಾಣಿಸುವುದಿಲ್ಲ. ಮಗಳಿಗೆ ಪ್ರೀತಿಯೆಂದು ಭಾಸ್ಕರ ಗೊಂಬೆಗಳನ್ನು ತಂದು ತಂದು ಮನೆಯಲ್ಲಿ ನೀಟಾಗಿ ಜೋಡಿಸಿಡುತ್ತಿದ್ದ. ದುಃಖವನ್ನು ಮರೆಯಲು ಕುಡಿತ ಹೆಚ್ಚು ಮಾಡಿದ. ಕೊನೆಗೊಂದು ದಿನ ಕುಡಿತ ಹೆಚ್ಚಾಗಿಯೋ ಮಗಳ ನೆನಪಿನಲ್ಲೋ ತೀರಿಕೊಂಡ. ಆತ ಸತ್ತಾಗ ಮನೆಯೊಳಗೆ ಆತ ಕೊಂಡು ತಂದು ರಾಶಿ ಹಾಕಿದ ಗೊಂಬೆಗಳು ಎರಡು ಸಾವಿರಕ್ಕೂ ಮಿಕ್ಕಿದ್ದವು ಎಂದು ಜೋಗಿ ನೆನಪಿಸಿಕೊಳ್ಳುತ್ತಾರೆ.

‘ಬಿ ಕ್ಯಾಪಿಟಲ್’ ಓದಲು ಇನ್ನೂ ದೊಡ್ಡ ಕಾರಣ ಏನು ಬೇಕು!

Facebook ಕಾಮೆಂಟ್ಸ್

R D Hegade Aalmane: ರಘುಪತಿ ದೇವರು ಹೆಗಡೆ ( ಆರ್ ಡಿ ಹೆಗಡೆ ) ಹಿರಿಯ ಲೇಖಕರು ಹಾಗೂ ವಿಮರ್ಶಕರು. ವಯಸ್ಸು 68. ಸದ್ಯ ಶಿರಸಿ ತಾಲೂಕಿನ ಆಲ್ಮನೆಯಲ್ಲಿ ವಾಸ. ಸಂಸ್ಕೃತ ಹಾಗೂ ಆಂಗ್ಲ ಭಾಷಾ ಸಾಹಿತ್ಯ ದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಶಾಸನ ಶಾಸ್ತ್ರದಲ್ಲಿ ಡಿಪ್ಲೊಮಾವನ್ನೂ ಪಡೆದಿದ್ದಾರೆ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿರುವ ಇವರು ಈಗ ಕೃಷಿಯಲ್ಲಿ ನಿರತರಾಗಿದ್ದಾರೆ. ಇವರ ಸಾಹಿತ್ಯ ಕೃಷಿಯ ವ್ಯಾಪ್ತಿ ದೊಡ್ಡದು.ಭಾರತೀಯ ತತ್ವಶಾಸ್ತ್ರದ ಮೇಲೆ ಹಲವು ಕೃತಿಗಳನ್ನು ಹೊರತಂದಿದ್ದಾರೆ. ವೈಚಾರಿಕ ಲೇಖನಗಳ ಸಂಕಲನ, ಕಥಾಸಂಕಲನಗಳು, ಕಿರುಕಾದಂಬರಿ ಕೂಡ ಪ್ರಕಟವಾಗಿದೆ. ಉಪನಿಷತ್ತುಗಳ ಅರ್ಥಲೋಕ, ವ್ಯಕ್ತಿ ಚಿತ್ರಣ ಕುರಿತಾದ ಎರಡು ಕೃತಿಗಳು,ಅಂಕಣ ಬರಹಗಳ ಎರಡು ಕೃತಿಗಳು,ವಿಮರ್ಶೆಯ ಕುರಿತಾದ ಒಂದು ಕೃತಿ, ಭಗವದ್ಗೀತೆ ಇವರ ಕೆಲವು ಕೃತಿಗಳು. ಆಂಗ್ಲಭಾಷೆಯಲ್ಲಿಯೂ ಕೂಡ ಭಾರತೀಯ ತತ್ವಶಾಸ್ತ್ರದ ಕುರಿತಾದ ಕೃತಿಯನ್ನು ರಚಿಸಿದ್ದಾರೆ. ಇವರ ಲೇಖನಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಸ್ತೂರಿ ಮಾಸಪತ್ರಿಕೆಯು ತನ್ನಲ್ಲಿ ಪ್ರಕಟಿಸಿದ ಸಾರ್ವಕಾಲಿಕ 20 ಶ್ರೇಷ್ಠ ಲೇಖನಗಳನ್ನು ಮರುಪ್ರಕಟಿಸಿದಾಗ ಇವರ ಲೇಖನವೂ ಇದ್ದದ್ದು ಇವರ ಹೆಗ್ಗಳಿಕೆ. ನೂರಾರು ಲೇಖಕರ ಪುಸ್ತಕಗಳಿಗೆ ಮುನ್ನುಡಿಯನ್ನೂ, ವಿಮರ್ಶೆಯನ್ನೂ ಬರೆದಿರುತ್ತಾರೆ. ಸದ್ಯ ಶಿರಸಿಯ ದಿನಪತ್ರಿಕೆ “ಲೋಕಧ್ವನಿ” ಯಲ್ಲಿ ಪ್ರತಿವಾರ “ಈ ಹೊತ್ತಿಗೆ” ಅಂಕಣವನ್ನು ಬರೆಯುತ್ತಿದ್ದು ಸಾಕಷ್ಟು ಜನಪ್ರಿಯವಾಗಿದೆ. ಇವರ ಇತ್ತೀಚಿನ ಕೃತಿ “ಜೆನ್ ಮಹಾಯಾನ” ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದ್ದು ಈಗಾಗಲೇ 2 ಮರುಮುದ್ರಣಗಳನ್ನು ಕಂಡಿದೆ.
Related Post
whatsapp
line